ಪುಸ್ತಕ ಪರಿಚಯ
ಬವಣೆಯಿಂದ ಬದುಕಿಗೆ ಕರೆದೊಯ್ಯುವ ಬಾಳಿನೆಡೆಗೆ
ನಿಮ್ಮಬದುಕೆಲ್ಲ ಬವಣೆಗಳಿಂದ ಕೂಡಿದೆಯೇ? ಬದುಕಿನುದ್ದಕ್ಕೂ ಸೋಲುಗಳನ್ನು ಕಂಡು ಬಸವಳಿದಿದ್ದೀರಾ?
ಆತ್ಮವಿಶ್ವಾಸದ ಕೊರತೆಯಿಂದ ಏನನ್ನೂ ಸಾಧಿಸಲಾಗದೆ ಕೊರಗುವಂತಾಗಿದೆಯೇ?
ಬನ್ನಿ ಈ ಕವಿತೆಗಳನ್ನು ಓದುವ ಮಾತ್ರದಿಂದಲೇ ನಿಮ್ಮಬವಣೆಯಿಂದ ಹೊರಬರಬಹುದು. ನಿಮ್ಮ ಬವಣೆಗಳನ್ನು ಮೀರಿ ಮತ್ತೊಮ್ಮೆ ಸುಂದರ
” ಬಾಳಿನೆಡೆಗೆ ” ಹೆಜ್ಜೆ ಹಾಕಬಹುದು….
ಅಂತಹ ಮೂವತ್ತು ಕವಿತೆಗಳುಳ್ಳ ಕವನ ಸಂಕಲನ ನಿಮ್ಮ ಬದುಕನ್ನು ಮೌಢ್ಯತೆಯಿಂದ ದೂರ ಮಾಡಬಹುದು… ಬದುಕಿನ ತಾತ್ಸಾರತೆಯಿಂದ ಉತ್ಸುಕತೆ ಎಡೆಗೆ ಸಾಗಿಸುವ ಸಾಲುಗಳುಳ್ಳ ಕವಿತಾ ಸಂಕಲನ….
ಅನೇಕ ಉದಾತ್ತ ಚಿಂತನೆಗಳನ್ನು ಹೊತ್ತು ನಿರಂತರ ಸಾಹಿತ್ಯ ಸೇವೆಗೈಯುತ್ತಿರುವ ಖಡಕ್ ಮಾತಿನ ಕವಿಗಳು… ಡಾ ಶಶಿಕಾಂತ ಕಾಡ್ಲೂರ್ ಅವರು. ಅವರ ಎರಡನೇ ಕವನ ಸಂಕಲನ “ಬಾಳಿನೆಡೆಗೆ”
ಪ್ರೀತಿ ಪ್ರೇಮದಿಂದ್ಹಿಡಿದು ಬಾಳ ಪಯಣದಲ್ಲಿ ಗಟ್ಟಿಯಾದ ಹೆಜ್ಜೆಗಳನ್ನಿಡಲು ಬೇಕಾದ ಮಾರ್ಗಸೂಚಿ.
ಕಳೆದ ವರ್ಷ ಕಾಡ್ಲೂರ್ ಸರ್ ಅವರು ತಮ್ಮ ಪ್ರಥಮ ಸಂಕಲನ “ಉರಿಯುಂಡ ಒಡಲು” ದಲ್ಲಿ ಜನರು ಅನುಭವಿಸುವ ಬದುಕಿನ ನೋವುಗಳನ್ನು ಕವಿತೆಗಳಲ್ಲಿ ಕಟ್ಟಿ ಕೊಟ್ಟಿದ್ದರೆ…. ತಮ್ಮ ಎರಡನೇ ಕವನ ಸಂಕಲನದಲ್ಲಿ ಅನೇಕ ಆದರ್ಶಯುತ ಕವಿತೆಗಳನ್ನು ಬದುಕಿನ ಮೌಢ್ಯತೆಗಳಿಂದ ಹೊರಬರಲು ಸಹಾಯವಾಗುವ ಕವಿತೆಗಳನ್ನು ಅತ್ಯಂತ ಸೊಗಸಾಗಿ ಅಚ್ಚುಕಟ್ಟಾಗಿ ಮಾರ್ಮಿಕವಾಗಿ ಮತ್ತು ನೇರವಾಗಿ ಮತಿಗೆ ಮುಟ್ಟುವಂತೆ ಓದುಗರಿಗೆ ನೀಡಿದ್ದಾರೆ. ಅಲ್ಲದೇ ಬಸವತತ್ವದನುಯಾಯಿಯಾದ ಶ್ರೀಯುತರು ವಚನ ಸಾಹಿತ್ಯ, ಶರಣರ ಕುರಿತಾಗಿ ವಿಶೇಷ ಅಧ್ಯಯನ ಮಾಡಿದ್ದು, ಈ ಕವನ ಸಂಕಲನದಲ್ಲಿ ನಮ್ಮ ನಾಡಿನ ಹೆಸರಾಂತ ಶರಣರಾದ ವೀರ ಗೊಲ್ಲಾಳ, ಮಾತೆ ಮಹಾದೇವಿ, ಜೋಳಿಗೆಯಸಂತರೆಂದೇ ಖ್ಯಾತಿ ಪಡೆದ ತುಂಗ ಮಹಾಂತ, ಲಿಂಗರೂಪಿ ಸಿದ್ಧಲಿಂಗ ಇವರ ಕುರಿತಾಗಿಯೂ ಭಕ್ತಿ ಪೂರ್ಣವಾದ ಕವಿತೆಗಳನ್ನು ರಚಿಸಿ ವಚನ ಸಾಹಿತ್ಯದ ಕುರಿತಾದ ತಮ್ಮ ಅಭಿಮಾನವನ್ನು ತೋರಿದ್ದಾರೆ.
ಅಲ್ಲದೆ ನಮ್ಮ ಸಂಸ್ಕೃತಿ ಯಲ್ಲಿ ನಾವು ಆಚರಿಸುವ ಹಬ್ಬಗಳ ಕುರಿತಾಗಿಯೂ ವಿಡಂಬನಾತ್ಮಕವಾಗಿ ಕಾವ್ಯ ರಚಿಸಿ, ಅದರಲ್ಲಿರುವ ಮೌಢ್ಯತೆಯನ್ನು ತೊರೆದು ಸಹಜತೆಯತ್ತ ನಮ್ಮ ಜನ ಸಾಗಬೇಕೇಂಬುದಾಗಿ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾರೆ.
ಕವಿ ಶಶಿಕಾಂತ ಕಾಡ್ಲೂರ್ ಅವರು ಸಂಕಲನದ ಪ್ರಥಮ ಕವಿತೆಯಲ್ಲೇ ಕಾಯಕನಿಷ್ಠೆಯನ್ನು ತೋರುತ್ತಾರೆ. ಬಸವಣ್ಣನವರ ತತ್ವಗಳ ಪಟ್ಟಾ ಅನುಯಾಯಿ ಎಂಬುದು ಈ ಕವನದಲ್ಲಿ ಸ್ಪಷ್ಟವಾಗುತ್ತದೆ.
“ಶ್ರಮಯೇವ ಜಯತೆ” ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮೆಲ್ಲರ ಬಳಗವನ್ನು ಕಾಯಕಕ್ಕೆ ಕರೆಯುತ್ತಾರೆ. ಕೇವಲ ಕಾಲ್ಪನಿಕ ಕವಿತೆ ಇದಾಗಿರದೆ ಅವರು, ಬುದ್ದಿನ್ನಿಯಲ್ಲಿ ಕೈಗೊಂಡ ಕಾರ್ಯದನುಭವದ ಕುರಿತಾದ ಕವಿತೆಯಾಗಿದೆ.
“ಸೇವೆಯ ಮಾಡೋಣ ಬನ್ನಿ” ಎಂದು ತಮ್ಮವರನ್ನೆಲ್ಲ ಕರೆದು ಬದುಕಿನಲ್ಲಿ ಸೇವಪರತೆ ಮುಖ್ಯ, ಶ್ರಮಿಕರಾಗುವುದು ಅವಶ್ಯಕ, ಕಾಯಕದಿಂದಲೇ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು “ನಾವು” ಕವಿತೆಯಲ್ಲಿ ಅರ್ಥಗರ್ಭಿತವಾಗಿ ತಿಳಿಸುತ್ತಾರೆ.
ಹುಡುಗೀ ನೀ ಏನೇ ಆಗು, ಎಲ್ಲದಕ್ಕೂ ಮೂಲ ನಾನೇ ಆಗುತ್ತೇನೆ.
ನೀ ಹೂವಾದರೆ ನಾ ದಾರ
ನೀ ದೀಪವಾದರೆ ನಾ ಬತ್ತಿ
ರೂಪವತಿ ಆದರೆ ಪ್ರತಿಬಿಂಬಿಸುವ ಕನ್ನಡಿ
ಒಟ್ಟಿನಲ್ಲಿ ಲೋಕದ ಕಣ್ಣಿಗೆ ನೀ ಏನೇ ಆದರೂ ನಿನ್ನ ಬೆನ್ನೆಲುಬಾಗಿ ನಿಂತು, ನಿನ್ನನ್ನು ಗುರುತಿಸುವ ಮತ್ತು ನಿನ್ನನ್ನು ಬೆಳೆಸುವ ಅದಮ್ಯ ಶಕ್ತಿಯಾಗಿ, ಆರಾಧಿಸುವ ವ್ಯಕ್ತಿಯಾಗಿ ಇರುತ್ತೇನೆ.. ಎಂದು ಹೆಣ್ಣು ನಮ್ಮೆಲ್ಲರ ಕಣ್ಣು ಎಂಬುದನ್ನು ಓದಗರಿಗೆ ತಿಳಿಸಿಕೊಡುತ್ತಾರೆ.
ಮನುಷ್ಯನೇ ಹಾಗೆ, ಎಷ್ಟು ಅಧ್ಯಯನ ಮಾಡಿದರೂ ಅಷ್ಟೆ, ಎಂತಹ ಪ್ರವಚನಗಳನ್ನು ಕೇಳಿದರೂ ಅಷ್ಟೆ, ಪ್ರಸೂತಿ ವೈರಾಗ್ಯದಂತೆ ಆ ಕ್ಷಣಕ್ಕೆ ಮಾತ್ರ ಧ್ಯಾನಸ್ತನಾದಂತೆ ಕಂಡು ಮತ್ತೆ ತನ್ನ ಕುರಿಬುದ್ಧಿಗೆ ಶರಣಾಗುತ್ತಾನೆ… ನಮ್ಮ ಕುರಿ ಬುದ್ಧಿ ದೂರಮಾಡಿ ಸಲಹೋ,
“ಬಸವಯ್ಯನ ಕಲ್ಯಾಣದಿ ವೈರಾಗ್ಯದ ಹಸುರಿದೆ”
ಅಲ್ಲಿಗೆ ನಮ್ಮನ್ನು ಕರೆದೊಯ್ಯೋ, ಕುರಿಗಳ ಸಲಹೋ ನಮ್ಮಯ್ಯ ಎಂದು ತಮ್ಮ ಅವ್ಯಕ್ತ ಭಾವವನ್ನು ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ.
ತಂದೆ ತಾಯಿಯ ತ್ಯಾಗವೇ ಮಕ್ಕಳ ಏಳಿಗೆ ಎಂಬ ಮಾತಿದೆ, ಅಂತೆಯೇ ಕವಿಗಳು,
ತಾಯ ಸೆರಗು ಯಾವಾಗಲೂ ಒದ್ದೆ,
ತಿಳಿಯುತಿಲ್ಲ ಅವಳ ಬವಣೆ ….
ಅಪ್ಪನ ಧೋತರ ಮೈ ಎರಡು
ಅನುಗಾಲವೂ ಒದ್ದೆ ಕಾರಣ
ದುಡಿವನು ನೆಲ ಮುಗಿಲುಗಳ ಮಧ್ಯೆ
…. ಎಂದು ತಂದೆ ತಾಯಿ ಮಕ್ಕಳಿಗಾಗಿ ತಮ್ಮ ನೆತ್ತರು ಹರಿಯುವಂತೆ ದುಡಿಯುತ್ತಾರೆ, ತಮ್ಮ ಬದುಕನ್ನೇ ಮಕ್ಕಳಿಗಾಗಿ ಮೀಸಲಿಡುತ್ತಾರೆ, ಅಂತೆಯೇ ಮಕ್ಕಳೂ ಮುಂದೆ, ತಮ್ಮ ತಂದೆ ತಾಯಿಗಾಗಿ ತಮ್ಮ ತುಸು ಸಮಯವನ್ನು ಮೀಸಲಿಟ್ಟರೆ ಸಾಕೆಂದು ಭಾವನಾತ್ಮಕವಾದ ಪದಗಳನ್ನು “ಅಕ್ಷರಕ್ಕೆ ನಿಲುಕದವರು” ಕವಿತೆಯಲ್ಲಿ ಪೋಣಿಸಿದ್ದಾರೆ…..
ಹಾಗೆ “ಅವ್ವ” ಕವಿತೆಯಲ್ಲೂ ಅವ್ವಳ ಕುರಿತಾಗಿ
ಬಣ್ಣದ ಬೆಳಕಿಗೆ ಮರುಳಾಗದೇ
ಬಾಳ ಬಗೆಯ ಬೆಳಗಿದವಳು
ತಾನು ನಂಜುಂಡು
ನಮಗೆ ಸಂಜಿವಿನಿಯಾದವಳು
ಕರುಳ ಕುಡಿಗಳೆಲ್ಲ
ಮರವಾಗಿ ಬೆಳೆದರೂ
ಅದರ ಹಣ್ಣು ತಿನ್ನುವ
ಅದೃಷ್ಟ ಕಾಣದವಳು
…. ಎಂದು ಅವ್ವಳ ತ್ಯಾಗವನ್ನು, ಅವಳ ಋಣವನ್ನು ನಾವೆಂದಿಗೂ ತೀರಿಸಲಾಗದು ಎಂದು ಮನಃಪೂರ್ವಕವಾಗಿ ಹೇಳುತ್ತಾರೆ.
ಮನುಷ್ಯನಿಗೆ ಬಯಕೆಗಳು ಸಹಜ. ಅವುಗಳನ್ನು ಈಡೇರಿಸಿಕೊಳ್ಳಲು ಹವಣಿಸುತ್ತಾ… ತನ್ನತನವನ್ನು ಬಲಿಕೊಟ್ಟುಬಿಡುತ್ತಾನೆ. ಕಲ್ಪನಾ ಲೋಕದಲ್ಲಿ ಆಸೆಗಳ ಬೆನ್ಹತ್ತಿ ಕಳೆಯುತ್ತಿರುವ ಸಮಯದ ಬಗ್ಗೆ ಆಲೋಚಿಸದೆ ಇದ್ದುಬಿಡುತ್ತಾನೆ. ಈ ಕಾರಣಕ್ಕೆ ಕವಿಗಳು
ಕನಸುಗಳ ಹೆಣೆಯುತ್ತ
ತೆರಣಿಯ ಹುಳು ನಾನಾಗಲಾರೆ,
ಸದ್ದಿಲ್ಲದೇ ಕಾಲ
ಸರಿಯುವುದನ್ನು ತಿಳಿಯದೇ
ಭ್ರಮೆಯ ಕೆಸರಲ್ಲಿ ಸಿಕ್ಕು ಚಡಪಡಿಸುವ
ಪಶುವಾಗಲಾರೆ
….. ಎಂದು ಅರಿವಿನ ಮತ್ತು ಸಮಯದ ಮಹತ್ವ ತಿಳಿಸಿ; ಬಯಕೆಯನ್ನೀಡೇರಿಸಿಕೊಳ್ಳಲು ನಾ ಸಾಗುವ ದಾರಿಯುದ್ದಕ್ಕೂ ಹೂಬಳ್ಳಿ ಹಚ್ಚುತ್ತೇನೆ…..
ಸುಳ್ಳು ಬಯಕೆಗಳನ್ನು ಹೂತು ನಡೆಯುತ್ತೇನೆ….. ಎಂಬುದಾಗಿ ಸ್ಪಷ್ಟಪಡಿಸುತ್ತಾರೆ…..
ಮಾಡುವ ದುಷ್ಟ ಕೆಲಸಗಳನ್ನೆಲ್ಲ ಮಾಡಿ, ನಿಮ್ಮ ತನು ಮನಗಳನ್ನು ನಂಜಾಗಿಸಿಕೊಂಡು ನನ್ನ ಪ್ರಸಾದವೇ ನಂಜಾಯಿತೆಂದು ದೂಷಿಸುತ್ತೀರಿ…
ಅಭಿಷೇಕದ ನೆಪದಲ್ಲಿ ನನ್ನನ್ನು ಸ್ವಚ್ಛಗೊಳಿಸುವುದು, ಜಲಕ್ಕೇ ಜಲಾಭಿಷೇಕ ಮಾಡಿದಂತೆ. ಮೊದಲು ನಿಮ್ಮ ಕೊಳೆಯನ್ನು ತೊಳೆದುಕೊಳ್ಳಿ. ನಿಮ್ಮ ಕಮಟು ವಾಸನೆ ಮುಚ್ಚಲು ನನ್ನ ಮುಂದೆ ದಶಾಂಗ, ಧೂಪ ಹಾಕುತ್ತೀರಿ…
ನಿಮ್ಮ ಮನಸನ್ನೇ ಕತ್ತಲಲ್ಲಿರಿಸಿಕೊಂಡು ನನ್ನ ಮುಂದೆ ದೀಪ ಹಚ್ಚುತ್ತೀರಿ
…. ಎಂದು ಮಾರ್ಮಿಕವಾಗಿ
“ಮಾರಮ್ಮನ ಹೇಳಿಕೆ”ಯ ಮೂಲಕ ನಾವ್ಹೇಗೆ ಬದುಕಬೇಕೆಂದು ಓದುಗರಿಗೆ ತಿಳಿಸಿಕೊಡುತ್ತಾರೆ….
ಬಾನು, ಭೂಮಿ, ಗಾಳಿಗಳು ಎಂದೂ ನಮ್ಮಂತೆ ಕಾಯುವುದಿಲ್ಲ, ನಮ್ಮಂತೆ ಜಡವಾಗಿ ನಿಲ್ಲುವುದಿಲ್ಲ. ಮತ್ತು ಪರರಿಗೆ ಕೇಡನ್ನು ಬಯಸುವುದರ ಬದಲಾಗಿ, ಅವುಗಳು ಮನುಜ ಕುಲಕೆ ‘ಸದಾ ಸುಖವಾಗಿ ಬಾಳಿ’ ಎಂದು ಹರಸುತ್ತವೆ….
ಅಂತೆಯೇ ಭದ್ರವಾಗಿ ಬೇರೂರಿ ನಿಂತ ಆಲದ ಸ್ವರೂಪಿ ಮಾನವ ತನ್ನೆಲ್ಲ ಬಳಗವನ್ನು ಕರೆಯುತ್ತಾನೆ….
“ಬನ್ನಿ ಸಂಗಾತಿಗಳೇ”.. ಎಲ್ಲರೂ ಹೃದಯದರಮನೆಯಲ್ಲಿ ಕೂಡೋಣ… ಬಾಳಿನ ಅಕ್ಕರತೆಯನ್ನು ಬರೆಯೋಣ ಎಂದು… ಪ್ರೇಮವೇ ಮುಖ್ಯ, ಎಲ್ಲರೊಳಗೊಂದಾಗಿ ಬದುಕುವುದೇ ಮುಖ್ಯವೆಂಬುದನ್ನು ಉತ್ತಮ ನಿದರ್ಶನದೊಂದಿಗೆ ಕವಿಗಳು ನಾಜೂಕಾಗಿ ತಿಳಿಸುತ್ತಾರೆ.
ಬದುಕಿನುದ್ದಕ್ಕೂ ಬವಣೆಯಲ್ಲಿ ಬೆಂದವರು, ತಮ್ಮ ಬಾಳಿಗೆ ಚೈತ್ರ ಬರುವುದು ಯಾವಾಗ?
ವಸಂತ ಮೂಡುವುದು ಯಾವಾಗ? ಎಂಬ ಚಡಪಡಿಕೆಯಿಂದಲೇ ಬದುಕು ಕಳೆಯುತ್ತೇವೆ. ಬದುಕಿನಲ್ಲಿ ಆಸರೆ ಕಟ್ಟಿಕೊಳ್ಳಲು ತಡಕಾಡುವ ನಾವು, ಪ್ರೀತಿಗೆ ಬಣ್ಣ ಹಚ್ಚಿ ಆನಂದಿಸುವದರ ಹೊರತಾಗಿ, ದೇವನಿಗೆ ಮನೆ ಕಟ್ಟುವ ಇರಾದೆ ತೋರಿ… ಗಿಳಿಕೋಗಿಲೆಗಳನ್ನು ದಿಗ್ಬಂಧಿಸುತ್ತೇವೆ….
ಹೀಗಿರುವಾಗ
ಹಿತವರು ಯಾರು ನಮಗೆ?
ಅನ್ನ ನೀಡುವವರಾರು ನಮಗೆ?
ಎಂಬ ಉತ್ತರ ದೊರಕದ ಪ್ರಶ್ನೆಯ ಬೆನ್ಹತ್ತುತ್ತೇವೆ.
ಕಣ್ಣಿಲ್ಲದವನನ್ನು ಕುಂಟ ಹೊತ್ತುಕೊಂಡು ನಡೆದರೆ ಹೇಗೆ? ಎಲ್ಲಿಗೆ ಮುಟ್ಟುತ್ತಾನೋ? ಎಂದು ಕಾದು ನೋಡಬೇಕೆಂದು… ಕವಿ ಪ್ರಶ್ನೆ ಹಾಕಿ ಉತ್ತರವನ್ನು ಓದುಗನ ವಿಚಾರಧಾರೆಗೆಬಿಡುತ್ತಾರೆ….
‘ಉಗ್ರ ಪ್ರತಾಪಿ’ ಮತ್ತು ‘ಕಾಶ್ಮೀರ’ ಎರಡೂ ಕವಿತೆಗಳು ಮಾನವತೆಯ ಸ್ಫೋಟ ಮೇಲಿಂದ ಮೇಲೆ ಆಗುತ್ತಿರುವ ಕಾಶ್ಮೀರದ ಒಡಲಿನ ಕುರಿತಾಗಿವೆ. ಕಾಶ್ಮೀರ ಯಾವ ಸೋಂಕಿಗೂ ಹೆದರದೆ ಅಮೃತದ ಮಳೆಯನ್ನು ಕುಡಿದು ಸೂರ್ಯನ ಬೆಳಕನ್ನೂ ಮೀರಿ ನಳನಳಿಸುತ್ತಿತ್ತು…
ಕಾಶ್ಮೀರ, ಪ್ರೇಮ ಕಾಶ್ಮೀರವೂ ಹೌದು, ದಾರ್ಶನಿಕರ ಮೆಚ್ಚಿನ ಧ್ಯಾನ ತಾಣವೂ ಹೌದು. ಆದರೀಗ ಜೀವ ನಿರೋಧಕ ನಾಟದಂತ ರೋಗಿಯಾಗಿದೆ; ಎಂದು ಕಾಶ್ಮೀರದ ಅತ್ಯಂತ ಹೀನ ಸ್ಥಿತಿಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಜಗವ ಪೊರೆಯುವ ಹೆಣ್ಣು ಗುರುವಾಗಬೇಕೆಂಬ
ಬಸವಣ್ಣನವರ ಮಹದಾಸೆಯಂತೆ, ಧರೆಗೆ ಬಸವ ಬೀಜ ರತ್ನವಾಗಿ, “ಮಾತೆ ಮಹಾದೇವಿ” ಅವತರಿಸಿದಳು.
ವಚನ ಸಾಹಿತ್ಯವನ್ನು, ಬಸವ ತತ್ವವನ್ನು ಮೆರೆಸಲು ಧರೆಗವತರಿಸಿದ
“ಬಸವ ಬಳಗದ ಧಾತ್ರಿ”…..
ಧರ್ಮ ದಂಡ ಹಿಡಿದು ವಚನದ ಗಂಧ ಪಸರಿಸುವ ಬಸವ ಛಾಯೆ …. ಶರಣು ಶರಣೆಂಬೆ ತಾಯೆ…. ಎಂದು ಮಾತೆ ಮಹಾದೇವಿಯವರು ಬಸವ ತತ್ವಕೆ ಒಂದು ಶಕ್ತಿ, ವಚನ ಸಾಹಿತ್ಯದ ರತ್ನ, ಎಂದು ಹಾಡಿ ಹೊಗಳಿದ್ದಾರೆ….
ಬಾಳಿನ ಎಲ್ಲ ಜೊಳ್ಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು, ನಿತ್ಯ ಕಾಣಲಿ ಜಗದ ಏಳಿಗೆ ಎಂಬ ಮಂತ್ರದ ಫಲದಿಂದ ಸವದಿಯ ಮಹಾಂತರು ಎಂದೂ
ಸವೆಯದ ಹಾದಿಯಲ್ಲಿ ನಡೆದರು…..
ಆರು ಮೂರನು
ಸುಟ್ಟು ಅಳಿದು
ಆರು ಸ್ಥಲಕೆ ಸಂದರು
ಕಾವಿ ಹೊದ್ದರು, ಮತ್ತು
ನಿರುತ ವಚನದ ವ್ಯಸನಿಯು, ಪರಮ ಯೋಗಿಯು
“ಜೋಳಿಗೆಯ ಸಂತ” ಎಂದು
….. ಮಹಾ ಮಹಿಮರಾದ ಮಹಾಂತರ ಕುರಿತಾಗಿ ಉತ್ಕೃಷ್ಟವಾದ ಕವಿತೆಯನ್ನು ರಚಿಸಿದ ಕವಿಗಳ ಕಾವ್ಯಶಕ್ತಿಗೆ ಓದುಗ ತಲೆದೂಗುವಂತಾಗುತ್ತದೆ.
ಮತ್ತೊಂದು ಕವಿತೆ “ತುಂಗ ಮಹಾಂತ” ದಲ್ಲಿ ಬಸವನ ಪೀಳಿಗೆಯನ್ನು ಬೆಳೆಸಿಕೊಂಡು ಬಂದ ಮಹಾಂತರು ಮೈ – ಮನಗಳ ಕೊಳೆಯನ್ನೂ ತನ್ನ ಜೋಳಿಗೆಗೆ ಕೇಳಿ, ಬಾಳಿಗೆ ಬೆಳಕನ್ನು ನೀಡುವ…. ಎಂದು ಮಹಾಂತರ ಕುರಿತಾದ ತಮ್ಮ ಅದಮ್ಯ ಭಕ್ತಿಯನ್ನು ಕವಿತೆಯ ಮೂಲಕ ಅರ್ಪಿಸಿದ್ದಾರೆ.
ಪ್ರಕೃತಿಯನ್ನು ಪೋಷಿಸಬೇಕಾದ ನಾವು ಜಾಗತೀಕರಣ, ನಗರೀಕರಣದತ್ತ ಮುಖ ಮಾಡಿ ನಾಶ ಮಾಡುತ್ತಿದ್ದೇವೆ ಎಂಬುದನ್ನು ಕವಿಗಳು ವಿಡಂಬನಾತ್ಮಕವಾಗಿ ಮತ್ತು ವ್ಯಂಗ್ಯವಾಗಿ
” ಹರೆಯ ಚಿಮ್ಮುವ ಸೂರ್ಯ” ಕವಿತೆಯಲ್ಲಿ ತಿಳಿಸುತ್ತಾರೆ. ಎಲ್ಲರಿಗೂ ಅವಶ್ಯಕವಾದುದನ್ನು ಈಡೇರಿಸುವ ಗೋಜಿಗೆ ಹೋಗದ ರಾಜ್ಯದ ಸಾರಥಿಗಳು ವೃಥಾ ನೆಲದ ತುಂಬೆಲ್ಲಾ ಗುಡಿಗಳನ್ನು ಕಟ್ಟಿ… ಪ್ರಾರ್ಥನೆಗೆ ನಿಂತಿದ್ದಾರೆ, ಎಂದು ಕವಿ ಆಳುವವರ ಕುರಿತಾದ ತಮ್ಮ ಖೇದವನ್ನು ವ್ಯಕ್ತಪಡಿಸುತ್ತಾರೆ.
ಜೀವಂತವಾಗಿ ಮರ, ಪ್ರಾಣಿ, ಪಕ್ಷಿಗಳನ್ನು ನೋಡಬೇಕಾದ ಮಕ್ಕಳಿಗೆ ಕೇವಲ ಚಿತ್ರದಲ್ಲಿ ತೋರಿಸುವ ಸ್ಥಿತಿಗೆ ಪರಿಸರವನ್ನು ನೂಕುತ್ತಿದ್ದೇವೆ. ಅಂತರ್ಜಲವಿಲ್ಲ, ಹಿಂಡಲು ಹಸು ಎಮ್ಮೆಗಳಿಲ್ಲವಾದರೂ ನಾವು ಪ್ರಯೋಗಶೀಲರಾಗಿ ಅಂತರಿಕ್ಷಕ್ಕೆ ಹಾರ ಹೊರಟಿದ್ದೇವೆ… ಸೂರ್ಯನ ಶಾಖವನ್ನು ಕಡಿಮೆಗೊಳಿಸಲು ಪ್ರಯತ್ನಿಸದ ನಾವು ಅವನ ಹರೆಯವನ್ನು ಹೆಚ್ಚಿಸಿ ಸುಡುತಾಪಕ್ಕೆ ಬಲಿಯಾಗ ಹೊರಟಿದ್ದೇವೆ ಎಂದು ವಿಡಂಬಿಸುತ್ತಾರೆ. ಮುಂದುವರೆದು ಎಷ್ಟು ಹರೆಯ ಉಕ್ಕಿದೆ ಎಂಬುದಕ್ಕೆ ಸೂರ್ಯ ನಮ್ಮ ಹವಾ ನಿಯಂತ್ರಿತ ಕೋಣೆಯ ಬಾಗಿಲು ತಟ್ಟುತ್ತಿದ್ದಾನೆ ಇನ್ನು ನಮಗೆ ಉಳಿಗಾಲವಿಲ್ಲ ಎಂಬ ನೋವನ್ನು ಮಾರ್ಮಿಕವಾಗಿ ವ್ಯಕ್ತಪಡಿಸುತ್ತಾರೆ….
ನನ್ನವಳೆಂದರೆ ಹಾಗೆ,
ಅವಳು ಅಂಗಳಕೆ ಚೆಲ್ಲಿದ ಬೆಳದಿಂಗಳಿಗೆ ಹೆದರಿ; ಚಂದ್ರ ಅಮವಾಸ್ಯೆ ನೆಪವೊಡ್ಡಿ ಮರೆಯಾದ…
ನನ್ನ ಚೆಂದುಳ್ಳಿ ಚೆಲುವೆ ತನ್ನ ಸುಂದರ ಬೆರಳಿಂದ ಬಿಡಿಸಿದ ಚಿತ್ತಾರದ ರಂಗವಲ್ಲಿ ನೋಡಲೆಂದೇ ನೇಸರ ಹಗಲಿಡೀ ನಿಂತ…
… ಎಂದು ತಮ್ಮ ಮಧುರವಾದ ಭಾವವನ್ನು ಓದುಗನ ಕಾವ್ಯಾನುಭವಕ್ಕೆ ಇಳಿಸಿಬಿಡುತ್ತಾರೆ…
ಹಾಗೆ,
ಚೆಲುವೆಯ ನಗುವನ್ನು ಮಲ್ಲಿಗೆಯ ಕಂಪಿಗೆ ಹೋಲಿಸಿ, ನನ್ನವಳ ನಗುವಿನ ರಾಯಭಾರಿಯೇ ನಾನೆಂದು ಮಲ್ಲಿಗೆ ಸಾರುತ್ತದೆ. ಚಿಗುರು ಹಾಡುವ ಹಾಡಿಗೆ ಕೋಗಿಲೆ ದನಿಯಾಯಿತು ಸಂಗಾತಿ ಹಕ್ಕಿಗಳೆಲ್ಲ ಮಂತ್ರ ಉಲಿಯುತ್ತವೆ, ಒಲವು ಚೆಲುವುಗಳ ಸಮ್ಮೇಳನದಿ ನಮ್ಮ ಬಾಳು ನಲಿದಾಡುತಿದೆ, ಎಂದು ಪ್ರೇಮದ ಉತ್ತುಂಗವನ್ನು ಅಪ್ಯಾಯಮಾನವಾಗಿ ವರ್ಣಿಸಿದ್ದಾರೆ…
ನಿಮ್ಮ ದುರಹಂಕಾರ, ಅಧಿಕಾರ ದಾಹದಿಂದ ಯುದ್ಧಗೈದು ಭೂಮಿಯನ್ನೇ ರಕ್ತಮಯ ಮಾಡಿ, ಅದರ ಕುರಿತಾದ ಕಥೆಗೆ ನನ್ನನ್ನೇಕೆ ಪಾತ್ರವಾಗಿಸುತ್ತೀರಿ…. ಆದರೂ ಸರಿ ನೀವಿಟ್ಟ ಆಯುಧಗಳನ್ನು ಹಂಚುತ್ತೇನೆ… ಕತ್ತರಿಸಿ ಬಿಡಿ ನಿಮ್ಮ ಹಮ್ಮು ಬಿಮ್ಮುಗಳ, ರಕ್ತ ಮಾಂಸಗಳಿಲ್ಲದ ದುಷ್ಟ ಶಕ್ತಿಯನೆಲ್ಲ.
ನಾನೊಂದು ಮರ ಮಾತ್ರ.. ಮಳೆ ನೀರು ಕುಡಿದು ನೆರಳಾಗುತ್ತೇನೆ, ನೀವು ಹರಿಸಿದ ನೆತ್ತರ ಕುಡಿದರೆ ನನಗೆಲ್ಲಿ ಉಳಿಗಾಲ? ನಿಮ್ಮ ಒಡಹುಟ್ಟಿದವರ ಕಾದಾಟದ ಪುರಾಣದಲಿ ನನಗೇಕೆ ಪಾಲು? ಬಿಟ್ಟು ಬಿಡಿ… ಕತ್ತಲೆಯ ಹರಿದು ಬನ್ನಿ, ಅರಿವಿನೆಡೆಗೆ ಸಾಗಿ ಬನ್ನಿ, ಜಗವು ಅಂಗಾರವಾಗುವ ಮುನ್ನ ಬಂಗಾರ ಹಿಡಿಯಲು ಬನ್ನಿ ಎಂದು
“ಬನ್ನಿ ಮರದ ಉವಾಚ”ದಲ್ಲಿ ತಾವೇ ಮರವಾಗಿ ಸದ್ಗುಣದ ಪಾಠವನ್ನು ತಮ್ಮ ಉಚ್ಛ ಶಬ್ದ ಭಂಡಾರದಲ್ಲಿನ ಸ್ವಚ್ಛ ಪದಗಳಿಂದ ಶಾಂತಿಯೇ ಜೀವನ.. ಒಲುಮೆಯೇ ಬದುಕಿಗೆ ಬಂಗಾರವೆಂದಿದ್ದಾರೆ.
ಯಾವಗಲೋ ಒಡೆಯುವ ಹಣತೆ
ವ್ಯರ್ಥವಾಗುವ ಎಣ್ಣೆ
ಹೊತ್ತಿ ಕರಕಾಗುವ ಬತ್ತಿ
ಹಣತೆಯ ಹಂಗಿನಲ್ಲಿ ಉರಿದು
ಗಾಳಿಗೆ ಬಲಿಯಾಗುವ ದೀಪ…. ಇದು
“ನಮ್ಮ ದೀಪಾವಳಿ”, ಎಷ್ಟೊಂದು ಅನರ್ಥ?.
ನಾವು ಹಚ್ಚುವ ಮಿಣುಕು ಹುಳದಂತ ದೀಪ ದಾರಿಗೆ ಎಂದಾದರೂ ಬೆಳಕಾಗುವುದೇ?
ಹಚ್ಚಿ… ಹಚ್ಚುವುದಾದರೆ ಹಚ್ಚಿ ನಿಮ್ಮಲ್ಲಿರುವ ಮೌಢ್ಯತೆ ಸುಡಲು ಅರಿವಿನ ದೀಪ ಹಚ್ಚಿ, ಭಾವದ ಬತ್ತಿ ಹೊಸೆದು, ಕರುಣೆಯ ತೈಲ ಎರೆದು ಎದೆಯ ಹಣತೆ ಹಚ್ಚಿ… ಎಂದು ನಮ್ಮಲ್ಲಿರುವ ಕಲಿತನವನ್ನು ಹಬ್ಬದಲ್ಲಿ ಬಲಿಕೊಡಬೇಕೆಂದು ಆ ಮೂಲಕ ದೀಪಾವಳಿಯ ದೀಪ ನಮ್ಮ ಬಾಳಿಗೆ ಬೆಳಕಾಗಬೇಕೆಂದು ಕವಿಗಳು ಆಶಿಸುತ್ತಾರೆ.
ಗ್ರಾಹಕರ ತುಷ್ಟಿಗುಣ ನನಗೆ ಚೆನ್ನಾಗಿ ಗೊತ್ತು ಅದಕ್ಕೆ ನಾನೊಂದು ವೆಬ್ ಸೈಟ್ ತೆಗೆದಿದ್ದೇನೆ..
ಬನ್ನಿ ತಪ್ಪದೇ ಭೇಟಿ ಕೊಡಿ, ಪದವಿ, ಪ್ರಶಸ್ತಿ, ಬಿರುದನ್ನು ಪಡೆದುಕೊಳ್ಳುವವರಿಗಿಂತ ಮಾರಿಕೊಳ್ಳುವವರೇ ಹೆಚ್ಚು, ತೂರಿಕೊಳ್ಳುವವರೇ ಹೆಚ್ಚು, ಕೊಳ್ಳೆ ಹೊಡಿಯುವವರೇ ಹೇಚ್ಚು ಇಂತಹ ಕೊಳ್ಳುಬಾಕರನ್ನು ನಿರಾಸೆಗೊಳಿಸಬಾರದೆಂದೇ ವೆಬ್ ಸೈಟ್ ತೆಗೆದಿದ್ದೇನೆ ತಪ್ಪದೇ ಒಮ್ಮೆ ಭೇಟಿ ಕೊಡಿ… ಎಂದು ಹಾಸ್ಯಾತ್ಮಕವಾಗಿ ಮತ್ತು ಪ್ರಸ್ತುತ ದಿನ ಮಾನದಲ್ಲಿ ಪ್ರಶಸ್ತಿ, ಬಿರುದುಗಳಿಗೆ ಜೋತು ಬೀಳುವ ಜನರ ಕೆಟ್ಟ ಮನೋವಾಂಛೆಯ ಕುರಿತಾಗಿ ಆಶ್ಚರ್ಯ ಮತ್ತು ಬೇಸರವನ್ನು ವಿಮರ್ಶಾತ್ಮಕವಾಗಿ “ಜಾಹಿರಾತು” ಕವಿತೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ…
ನಡೆ ಚೆನ್ನ ನುಡಿ ಚೆನ್ನ
ಕಣ್ಣು ಬಾಯಿ ಬಿಟ್ಟರೂ
ಚೆಲ್ಲುತ್ತಿತ್ತು ಕಕ್ಕುಲಾತಿಯ ಬಣ್ಣ
ಸಾವಿರಾರು ಕಾಲದ ಸುಡುವ
ಬಾಳಬನ್ನಕೆ
ಬಾಳಿನುದ್ದಕೂ ಕೊಡುತಲೇ ಬಂದರು ಗುನ್ನ…
ವ್ಹಾ ಎಂತಹ ಪದಗಳ ಸಾಲು..
“ಬಯಲಾದರು ಚೆನ್ನಣ್ಣ” ಕವಿತೆಯಲ್ಲಿನ ಚೆನ್ನಣ್ಣನವರ ಕುರಿತಾದ ಪ್ರತಿ ಸಾಲುಗಳೂ ಎದೆಗೆ ನಾಟುತ್ತವೆ. ಚೆನ್ನಣ್ಣನವರು ಬದುಕಿ ಬಾಳಿದ ರೀತಿ ನೀತಿಯನ್ನು ವಿಶೇಷವಾಗಿ ಮತ್ತು ವೈಶಿಷ್ಠ್ಯಪೂರ್ಣವಾಗಿ ಬರೆದು ಚೆನ್ನಣ್ಣನವರಿಗೆ ಗೌರವವನ್ನು ಸಲ್ಲಿಸಿದ್ದಾರೆ.
ನೊಂದವರೆಲ್ಲರೂ ತನ್ನೂರಿನವರೆಂದು ಅವರ ನಿರಾಳ ಬಾಳಿಗಾಗಿ ಅರಿವಿನಕ್ಕರದ ಓಲೆಯ ಮನೆಮನೆಗೆ ಮುಟ್ಟಿಸಿದ ವಾಲೀಕಾರ ಎಂದು ಹೆಸರಿಗೆ ತಕ್ಕಂತೆ ಜೀವಿಸಿದವರೆಂದು ಕವಿ ಅರ್ಥೈಸುತ್ತಾರೆ…
ಅವರು ಬಯಲಾದಾಗಲೂ ದಿಟ್ಟತನದ ಸಂಕೇತದ ಬೆಂಕಿಯ ಬಟ್ಟೆಯಲ್ಲೇ ಇದ್ದರು ಎಂಬುದನ್ನು ಸ್ವಾರಸ್ಯಕರವಾಗಿ ಕವಿತೆಯನ್ನು ಬರೆದಿದ್ದಾರೆ…
ಡಾ ಶಶಿಕಾಂತ ಕಾಡ್ಲೂರ್ ಅವರ “ಬಾಳಿನೆಡೆಗೆ” ಕವನ ಸಂಕಲನದ ಒಟ್ಟು ಈ ಮೂವತ್ತು ವಿಶಿಷ್ಟ ದೃಷ್ಟಿಕೋನದ ಕವಿತೆಗಳು, ಪ್ರತಿಯೊಬ್ಬ ಸಾಹಿತ್ಯದ ಓದುಗನ ಎದೆಯಲ್ಲಿ ವಿಭಿನ್ನ ಆಲೋಚನೆಯನ್ನು ಹುಟ್ಟಿಸುತ್ತವೆ….
ಹುಟ್ಟಿನಿಂದ ಎದುರುಗೊಂಡ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ಗೆದ್ದು; ದಾಟಿ ಮತ್ತೊಮ್ಮೆ ಉತ್ತಮ “ಬಾಳಿನೆಡೆಗೆ…” ಸಾಗಲು ಪ್ರೇರೇಪಿಸುವಂತಹ ಕವಿತೆಗಳ ಗುಚ್ಛ ವೈಶಿಷ್ಟ್ಯ ಪೂರ್ಣವೂ ಹೌದು.
ಕವಿವರ್ಯರ ಅಗಾಧ ಶಬ್ದ ಸಂಪನ್ಮೂಲಕ್ಕೆ ಒಂದು ನಿದರ್ಶನ ಈ ಕವನ ಸಂಕಲನ. ಕವಿಗಳ ಭಾವ ಪೂರ್ಣತೆ, ಒಂದು ವಸ್ತುವನ್ನು ಕಾವ್ಯದ ಚೌಕಟ್ಟಿನೊಳಗೆ ವೈಭವೀಕರಿಸುವ ಮನೋಜ್ಞ ಶೈಲಿ ಕವನ ಸಂಕಲನ ಓದಿ ಮುಗಿಸಿದ ನಂತರದ ಪ್ರತೀ ದಿನಗಳಲ್ಲೂ ನಮ್ಮ ಮಸ್ತಿಷ್ಕದಲ್ಲಿ ಪುನರಾವಲೋಕಿಸುತ್ತಲೇ ಇರುತ್ತವೆ. ಬಸವಣ್ಣನವರ ಅನುಯಾಯಿಗಳಾದ ಡಾ ಶ್ರೀ ಶಶಿಕಾಂತ ಕಾಡ್ಲೂರ್ ಅವರಿಂದ ಮತ್ತಷ್ಟು ಕವಿತೆಗಳು, ಸಂಕಲನಗಳು ಹೊರಬಂದು ಕಾವ್ಯಾಸಕ್ತರ ಹಸಿವನ್ನು ಇಂಗಿಸಲಿ, ಓದುಗರ ಮನವನ್ನು ರಂಜಿಸಲಿ ಎಂದು ಆಶಿಸುತ್ತೇನೆ….. ಮತ್ತು ಈ ಸಂಕಲನವು ಇದೇ ದಿನ ಬಿಡುಗಡೆಗೊಳ್ಳುತ್ತಿದ್ದು ಕಾರ್ಯಕ್ರರಮವು ಯಶಸ್ವಿಯಾಗಲಿ, ನಾಡಿನಾದ್ಯಂತ ಈ ಹೊತ್ತಿಗೆಯು ತಲುಪಲಿ ಎಂಬ ಆಶಯದೊಂದಿಗೆ……..
….ಕೆ.ವರದೇಂದ್ರ, ಶಿಕ್ಷಕರು, ಮಸ್ಕಿ