ಶರಣರ ವಚನಗಳಲ್ಲಿ ಜಾತಿ ವ್ಯವಸ್ಥೆ ಖಂಡನೆ

ಶರಣರ ವಚನಗಳಲ್ಲಿ ಜಾತಿ ವ್ಯವಸ್ಥೆ ಖಂಡನೆ

ಬಸವಮಾರ್ಗವು ಹೊಸ ಉದಯಕೆ ನಾಂದಿ ಹಾಡಿದೆ. ಬಸವ ನಾಡ ಕಟ್ಟಿ ಹೊಸ ಬದುಕ ಬದುಕಲು, ಹಳೆಯದೆಲ್ಲವ ಕಳೆದು, ಕೊಳೆಯ ಹಸನ ಮಾಡಲು ಬಸವ ಧರ್ಮ ಒಂದಲ್ಲದೇ ಮತ್ತೊಂದಿಲ್ಲ. ಕೇವಲ ಭಕ್ತಿಯ ಮೂಲಕ ಮುಕ್ತಿ ಮಾರ್ಗ ತೋರಿದ ರಾಜ ಮಾರ್ಗ ನಮ್ಮ ಬಸವ ಧರ್ಮ.

ಮೊದಲು ವಚನ ಎಂದರೇನು ಅಂತಾ ನೋಡೊಣಾ. ವಚನ ಎನ್ನುವದು ಸಂಸ್ಕೃತ ಪದ. ವಚನ ಎನ್ನುವ ಪದ “ವಚ್” ಎನ್ನುವ ಧಾತುವಿನಿಂದ ನಿಷ್ಪನ್ನವಾದದ್ದು. “ವಚ್” ಅಂದರೆ “ನಾಲಗೆ” ಎಂದರ್ಥ. ವಚನ ಅಂದರೆ ನಾಲಗೆಯಿಂದ ನುಡಿದದ್ದು ಅಂದರೆ “ಮಾತು” ಎಂಬ ಅರ್ಥವನ್ನು ಕೊಡುತ್ತದೆ. ಬಸವಾದಿ ಶರಣರು ರಚಿಸಿದ ಸರಳ ಸುಂದರ ತಮ್ಮ ಅಂತರಂಗದ ಅನುಭವದ ಅಭಿವ್ಯಕ್ತಿಯೆ ವಚನ.

ಮನದ ಮೈಲಿಗೆಯನ್ನು ಕಳೆದು, ಅನಾದಿ ಕಾಲದಿಂದ ಬಂದ ಅಜ್ಞಾನದ ಹೊರೆಯನ್ನು ಇಳಿಸಿ, ಜ್ಞಾನದ ಅರಿವನ್ನು ಅರುಹಲು ಮೂಡಿಬಂದ, ನಡೆದು ತೋರಿದ ಮೃದು ನುಡಿಗಳೆ ವಚನ ಸಾಹಿತ್ಯ”.

ಇಂತಹ ಬಸವಾದಿ ಶರಣರ ವಚನಗಳಲ್ಲಿ ಹೇಳದೆ ಇರುವ ವಿಷಯವೇ ಇಲ್ಲ. ಅಂತಹ ವಿಷಯಗಳಲ್ಲಿ “ಜಾತಿವ್ಯವಸ್ಥೆಯು” ಒಂದು.
ಜಾತಿ ವ್ಯವಸ್ಥೆ ಅನಾದಿ ಕಾಲದಿಂದಲು ಬಂದಂತಹ ವ್ಯವಸ್ಥೆಯೇನು ಅಲ್ಲ. ನಾಗರಿಕತೆಯ ಕಾಲದಲ್ಲಿ ನಾಗರಿಕತೆ ಬೆಳೆದಂತೆ ಅನಕೂಲಕ್ಕೆ ತಕ್ಕಂತೆ ಕೆಲವೊಂದು ವೃತ್ತಿಗಳು ಹುಟ್ಟಿಕೊಂಡವು. ಆ ವೃತ್ತಿಗಳೆ ವಂಶಪಾರ್ಯಂಪರ್ಯವಾಗಿ ಬೆಳೆದುಬಂದವು. ಆ ವೃತ್ತಿಗಳ ಆಧಾರದ ಮೇಲೆ ಮೇಲು ಕೀಳು ಎಂಬ ಬೇದ ಭಾವ ಬೆಳೆದು ಬಂತು. ಆ ವೃತ್ತಿಗಳೆ ಮುಂದೆ ಕುಲಕಸುಬುಗಳಾದವು.ಆಯಾ ವೃತ್ತಿಯಲ್ಲಿ ಹುಟ್ಟಿದವರು ಆ ಕುಲದವರಾದರು. ಹೀಗೆ ಆಯಾ ಕುಲಕಸುಬುಗಳ ಆಧಾರದ ಮೇಲೆಯೆ ಅವರನ್ನು ಗುರುತಿಸುವಂತಾಯಿತು.

ಮುಂದೆ ವೇದಗಳ ಕಾಲದಲ್ಲಿ ಮೇಲು ಕೀಳೆಂಬ ಬೇಧ ಭಾವ ಬಲವಾಗಿ ಬೆಳೆಯಿತು. 4 ವರ್ಗಗಳು ಬೆಳೆದು ಬಂದವು. ಬ್ರಾಹ್ಮಣ ಕ್ಷತ್ರಿಯರು ಮಾತ್ರ ಮೇಲು, ವೈಶ್ಯ ಮಧ್ಯಮ ವರ್ಗ, ಶುದ್ರರು ಅತ್ಯಂತ ಕೆಳ ಸ್ತರದವರಾದರು. ಈ ಒಂದು ಪದ್ದತಿ ತುಂಬಾ ಅವೈಜ್ಞಾನಿಕ ಮತ್ತು ಅಮಾನವೀಯತೆಯಿಂದ ಕೂಡಿತ್ತು. ಶೂದ್ರರನ್ನು ಅತ್ಯಂತ ಕನಿಷ್ಟ ರೀತಿಯಲ್ಲಿ ನೋಡುತ್ತಿದ್ದರು. ಮತ್ತು ನಡೆಸಿಕೊಳ್ಳುತ್ತಿದ್ದರು.

ಆದರೆ 12 ಶತಮಾನ ಇತಿಹಾಸದಲ್ಲಿಯೆ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಬಸವಾದಿ ಶರಣರು ಭಕ್ತಿ ಚಳುವಳಿಗೆ ತಮ್ಮದೆ ಆದ ಅದ್ಭುತ ಕೊಡುಗೆಯನ್ನು ನೀಡಿದರು. ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಆರ್ಥಿಕ ಸಮಾನತೆ, ರಾಜಕೀಯ ಸಮಾನತೆ ಹೀಗೆ ಸಮಾಜದಲ್ಲಿಯ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಿದರು.

ಬಸವಣ್ಣನವರು ಯಾಕೆ ಇಷ್ಟು ಶ್ರೇಷ್ಠಸ್ಥಾನದಲ್ಲಿ ನಿಲ್ಲುತ್ತಾರೆ, ಎಂದರೆ ಅವರ ವಚನಗಳು, ಅವರ ವಿಚಾರಗಳು ಸರ್ವಕಾಲಕ್ಕೂ, ಸರ್ವ ಸಮಾಜಕ್ಕೂ, ಸರ್ವ ಜನಾಂಗಕ್ಕೂ, ಸಲ್ಲತಕ್ಕಂತಹ ವಿಚಾರಧಾರೆಗಳು. ಆದ್ದರಿಂದಲೆ ಬಸವಣ್ಣನವರನ್ನು ಜಗಜ್ಯೋತಿ, ವಿಶ್ವಮಾನವ, ಮಹಾತ್ಮ ಎಂದೆಲ್ಲ ಕರೆಯುವದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯಸ್ಸಿನಲ್ಲಿಯೆ ಉನ್ನತ ವಿಚಾರಧಾರೆಗಳನ್ನು ಹೊಂದಿದ್ದರು. ಸಮಾನತೆಗಾಗಿ ಮನೆಯಿಂದಲೇ ಹೊರಾಟ ಪ್ರಾರಂಭಿಸಿದರು. ಯಾರು ಮೆಲಲ್ಲ, ಯಾರು ಕಿಳಲ್ಲ ಎಂಬ ಅಭಿಪ್ರಾಯ ಅವರದ್ದಾಗಿತ್ತು.

ಯಾರು ಕೀಳುಕುಲದವರು ಎಂಬ ಬಗ್ಗೆ ತಮ್ಮ ವಚನದಲ್ಲಿ ಬಸವಣ್ಣನವರು ಹೀಗೆ ಹೇಳುತ್ತಾರೆ.

ಕೋಲುವವನೆ ಮಾದಿಗ ಹೊಲಸು ತಿಂಬುವವನೆ ಹೊಲೆಯ
ಕುಲವೆನೊ ಆವಂದಿರ ಕುಲವೆನೊ
ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು.

ಶರಣರು ಜೀವವಿರುವ ಪ್ರತಿಯೋಂದು ಆತ್ಮಕ್ಕೂ ಲೇಸನ್ನೆ ಬಯಸಿದವರು. “ದಯವಿಲ್ಲದಾ ಧರ್ಮ ಅದಾವುದಯ್ಯಾ” ಎಂದು ಪ್ರಶ್ನೆ ಮಾಡಿದರು.

ಆವ ಕುಲವಾದಡೆನು ಶಿವಲಿಂಗವಿದ್ದವನೆ ಕುಲಜನು.
ಕುಲವನರಸುವರೆ ಶರಣರಲ್ಲಿ ಜಾತಿಸಂಕರನಾದ ಬಳಿಕ”,

“ಕಿರಿದರೊಳ್ ಹಿರದರ್ಥಮಂ” ಎಂಬಂತೆ ಸಣ್ಣ ಸಣ್ಣ ವಚನಗಳು ಕೂಡ ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗಿವೆ. ಲಿಂಗವಿದ್ದವರಲ್ಲಿ ಕುಲವನರಸದೇ, ಅವರಲ್ಲಿಯೇ ಸಂಗಯ್ಯನನ್ನು ಕಂಡವರು ಬಸವಣ್ಣನವರು. ಶಿವಾಚಾರಿಗಳು ನಮ್ಮ ಬಸವಾದಿ ಶರಣರು.

ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ
ಇದು ಕಾರಣ ನಮ್ಮ ಕೂಡಲ ಸಂಗಮ ದೇವಾ
ಲಿಂಗಸ್ಥಲವನರಿದವನೆ ಕುಲಜನು. ||

“ಲಿಂಗಮಧ್ಯಂ ಜಗತ್ ಸರ್ವಂ” ಎನ್ನುವಂತೆ ಲಿಂಗದ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಲು ಜೊತೆಗೆ ಪರವಸ್ತುವನ್ನು ಅರಿತಾಗ ಮಾತ್ರ ನಾವು ಉತ್ತಮ ಕುಲಜರು. ವೃತ್ತಿಯ ಆಧಾರದ ಮೇಲೆ ಮೇಲು ಕೀಳು ಇಲ್ಲ ಎಂದು ಸಾಧಿಸಿ ತೋರಿಸಿದವರು ನಮ್ಮ ಶರಣರು.

ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ
ಜಾತಿ ವಿಜಾತಿ ಎನಬೇಡಾ
ದೇವನೋಲಿದಾತನೆ ಜಾತ ಸರ್ವಜ್ಞ.

ದೇವರನ್ನು ಒಲಿಸಿಕೊಳ್ಳುವ ಮಾನವೀಯ ಗುಣಗಳು ಇದ್ದಾಗ ಮಾತ್ರ ಅವನು ಉತ್ತಮ ಕುಲಜನಾಗುತ್ತಾನೆ ಎಂದು ಸರ್ವಜ್ಞ ನುಡಿಯುತ್ತಾನೆ.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ನಿಮ್ಮ ಪುರಾತನರಾಣೆ | ತಲೆದಂಡ ತಲೆದಂಡ
ಕೂಡಲಸಂಗಮ ದೇವಾ ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ

ಮಹಾಮನೆಗೆ ಬಂದ ಭಕ್ತರನ್ನು ಕಾಯಕ ಯಾವುದೆಂದು ಕೇಳಲಾರೆ. ಏಕೆಂದರೆ ಕಾಯಕದ ಮೂಲಕ ಅವರ ಕುಲ ಅಂದರೆ ಅವರ ವೃತ್ತಿ ತಿಳಿಯುತ್ತಿತ್ತು. ಅದಕ್ಕಾಗಿ ಮೇಲು ಕೀಳೆಂಬ ಭಾವನೆ ಬರದಿರಲಿ ಎಂಬ ಉದ್ಧೇಶದಿಂದ ಬಂದ ಭಕ್ತರಲ್ಲಿ ಸಂಗಯ್ಯನನ್ನು ಕಂಡವರು ಶರಣರು. ಅದನ್ನು ಪ್ರಮಾಣೀಕರಿಸಿ ಹೇಳುತ್ತಾರೆ.

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತೆಂಬರು
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು
ಎಂತಯ್ಯಾ ಅವರ ಭಕ್ತರೆಂಬೆ
ಎಂತಯ್ಯಾ ಅವರ ಯುಕ್ತರೆಂಬೆ
ಕೂಡಲಸಂಗಮದೇವಾ ಕೇಳಯ್ಯಾ
ಹೊಲತಿ ಶುದ್ಧ ನೀರ ಮಿಂದಂತಾಯಿತ್ತು” !

ಉಣ್ಣುವಲ್ಲಿ, ಉಡುವಲ್ಲಿ ನಡೆಯುತ್ತದೆ ಎಂದು ನಡೆಸಿ, ಹೆಣ್ಣು ಗಂಡು ಕೊಡುಕೊಳ್ಳುವಲ್ಲಿ ಕುಲವನ್ನು ಅರಸುತ್ತೆವೆ. ಇವರನ್ನು ಹೇಗೆ ಭಕ್ತರೆಂಬೆ ಎಂದು ಶರಣರು ಪ್ರಶ್ನಿಸುತ್ತಾರೆ.
ಇಲ್ಲಿ ಹೊಲತಿ ಎಂಬ ಬೆಡಗಿನ ಶಬ್ದ ಕಲುಷಿತ ಮನಸ್ಸಿನ ಸಂಕೇತ. ಅಶುದ್ಧ ತನುವಿನ ಸಂಕೇತ. ಅಕ್ರಮ ಧನದ ಸಂಕೇತ. ಒಟ್ಟಾರೆ ಹೊಲತಿ ಅಶುದ್ಧದ ಸಂಕೇತ. ಮಿಂದಂತೆ ಶುದ್ಧೀಕರಣದ ಸಂಕೇತ. ಇದರಲ್ಲಿ ಎರಡು ಮುಖಗಳಿವೆ. ಒಂದು ಬಹಿರಂಗ ಶುಚಿ ಮತ್ತು ಶುದ್ಧಿಗಾಗಿ ಜಳಕ ಹಾಗೂ ಸ್ವಚ್ಛ ಮಾಡುವುದು. ಇನ್ನೊಂದು ಶುದ್ಧಿಗಾಗಿ ಬಳಸುವ ನೀರು ಸಹ ಕಲುಷಿತವಾಗುವದು.

ಬಹಿರಂಗ ಶುದ್ಧಿ ಮಾಡಿಕೊಂಡರೆ ಸಾಲದು. ಅಂತರಂಗವನ್ನೂ ಸಹ ಶುದ್ಧಿ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅಂತರಂಗ & ಬಹಿರಂಗ ಶುದ್ಧಿಯಾದಾಗ ಮಾತ್ರ ಬಳಸುವ ನೀರು ಅಥವಾ ಜಂಗಮ ಸಮಾಜ ಶುದ್ಧಿಯಾಗಲು ಸಾಧ್ಯ.

ನಿಜವಾಗಿಯೂ ನಮ್ಮ ಶರಣರು ಅನುಪಮ ಚರಿತರು. ಶರಣರಿಗೆ ಸರಿಸಮಾನರು ಮತ್ತೊಬ್ಬರಿಲ್ಲ.

“ಆಚಾರವರಿಯಿರಿ ವಿಚಾರವರಿಯಿರಿ
ಜಂಗಮಸ್ಥಲ ಲಿಂಗಕಾಣಿರಯ್ಯಾ.
ಜಾತಿಭೇದವಿಲ್ಲ, ಸೂತಕವಿಲ್ಲ,
ಅಜಾತಂಗೆ ಕುಲವಿಲ್ಲ!
ನುಡಿದಂತೆ ನಡೆಯದಿದ್ದಡೆ
ಕೂಡಲ-ಸಂಗಯ್ಯ ಮೆಚ್ಚ ಕಾಣಿರಯ್ಯಾ”!

ಆಚಾರ ವಿಚಾರ ಅಂದರೆ ನಡೆ ನುಡಿಗಳು. ಜಂಗಮ ಸ್ಥಲ ಅಂದರೆ ಸಮಾಜ ಮತ್ತು ಪಂಚತತ್ವ ಪಂಚಭೂತಗಳು. ಲಿಂಗ ಸಂಸ್ಕಾರ ಸಂಸ್ಕೃತಿ ಪರಂಪರೆಯ ಸಂಕೇತ. ಈ ಎಲ್ಲವಕ್ಕೂ ಯಾವ ವಿಧವಾದ ಬಂಧನವಿಲ್ಲಾ. ಜಾತಿ ಸೂತಕಕ್ಕೆಲ್ಲಾ ಒಳಪಡಲಾರದ ಚೈತನ್ಯಗಳು. ಎಲ್ಲವೂ ಮುಕ್ತ ಮುಕ್ತ ಮುಕ್ತ.

ಅಜಾತ ಬಹಳಷ್ಟು ಕಡೆ ವಿವಿಧ ರೀತಿಗಳಲ್ಲಿ ವಿವಿಧ ಸಂದರ್ಭಕ್ಕೆ ಅನುಗುಣವಾಗಿ ವಿವಿಧ ಅರ್ಥ ಬರುವ ಹಾಗೆ ಪ್ರಯೋಗಿಸುವ ಬೆಡಗಿನ ಶಬ್ದ. ಅದಕ್ಕೆ ಬಸವಣ್ಣನವು ನುಡಿದಂತೆ ನಡೆಯದಿದ್ದಡೆ ಅಂದರೆ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲಿ ತಪ್ಪಿ ನಡೆದರೆ ಸಂಗಯ್ಯ ಮೆಚ್ಚುವುದಿಲ್ಲ ಅಂತ ಹೇಳತಾರೆ.

ಜಾತಿವಿಡಿದು ಸೂತಕವನರಸುವರೆ

ಜ್ಯೋತಿವಿಡಿದು ಕತ್ತಲೆಯನರಸುವರೆ

ಇದೇಕೊ ಮರುಳು ಮಾನವಾ
ಜಾತಿಯಲ್ಲಿ ಅಧಿಕನೆಂಬ
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು
“ಭಕ್ತ ಶಿಖಾಮಣಿ” ಎಂದುದು ವಚನ.
ನಮ್ಮ ಕೂಡಲ ಸಂಗನ ಶರಣರ ಪಾದಪರುಷವ ನಂಬು.
ಕೆಡಬೇಡ ಮಾನವಾ.

ಈ ವಚನವು ಕೆಳಸ್ಥರದವರಲ್ಲಿ ಆತ್ಮ ವಿಶ್ವಾಸವನ್ನು, ಮನೋ ಧೈರ್ಯವನ್ನು ಬೆಳೆಸಿದ ವಚನ ಎಂದರೆ ತಪ್ಪಾಗಲಾರದು. ಸೂತಕಗಳನ್ನು ಅಲ್ಲಗಳೆದವರು ನಮ್ಮ ಶರಣರು. ಬ್ರಾಹ್ಮಣ ಶ್ರೇಷ್ಠ ಎಂಬುದನ್ನು ಅಲ್ಲಗಳೆದು, ಭಕ್ತನೇ ಶ್ರೇಷ್ಠ ಎಂದು ಸಾರಿದ ವಚನವಿದು.

ಲಿಂಗದಲ್ಲಿ ಕಠಿಣವಾರ್ತೆ, ಜಂಗಮದಲ್ಲಿ ಜಾತಿವಾರ್ತೆ
ಪ್ರಸಾದದಲ್ಲಿ ಅಪವಿತ್ರ ವಾರ್ತೆಯ ಕೇಳಲಾಗದು ಶಿವ ಶಿವ
ಕೂಡಲ ಚೆನ್ನಸಂಗಮ ದೇವಾ ಅಘೋರನರಕದಲ್ಲಿಕ್ಕುವಾ.

ಲಿಂಗ ಇದು ಸಂಸ್ಕೃತಿ ಪರಂಪರೆ ಜ್ಞಾನದ ಸಂಕೇತ. ಇವುಗಳಲ್ಲಿ ಕಠಿಣತೆ ಇದ್ದರೆ ಲಿಂಗ ಧರ್ಮವನ್ನು ಪಾಲಿಸುವದು ಕಷ್ಟ. ಜಂಗಮ ತತ್ವ ಸಮಾಜದ ಸಮಷ್ಟಿಯ ಸಂಕೇತ. ಇಲ್ಲಿ ಜಾತಿಯನ್ನು ಅರಸಲಾಗದು ಎಂದು ಹೇಳುತ್ತಾರೆ.

ಹೀಗೆ ಹೇಳುತ್ತ ಸಾಗಿದರೆ ಮುಗಿಯದಷ್ಟು ವಚನಗಳು ಜಾತಿವ್ಯವಸ್ಥೆಯ ಕುರಿತು ನಮಗೆ ಸಿಗುತ್ತವೆ. ಈ ವಚನಗಳು ನಮ್ಮನ್ನು ವಿಶಾಲ ಮನೋಭಾವದ ಕಡೆಗೆ ಕೊಂಡೊಯ್ಯುತ್ತವೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ನಮಗಿರುವ ಒಂದು ಅದ್ಭುತ ಮಾರ್ಗವೆಂದರೆ ಅದು ಬಸವ ಮಾರ್ಗ. “ಇವನಾರವ, ಇವನಾರವ, ಇವನಾರವ ಎಂದೆನ್ನದೆ ಇವ ನಮ್ಮವನೆಂದೆನ್ನುವ ಭಾವ ಬೆಳೆಸಿಕೊಂಡು ಜಾತಿ ಪಂಥಗಳನ್ನು ತೊರೆದು, ವ್ಯಷ್ಠಿಯಿಂದ ಸಮಷ್ಠಿಯ ಕಡೆಗೆ ಸಾಗೋಣ. ಶರಣರು ಬಯಸಿದ ಕಲ್ಯಾಣ ಸಮಾಜವನ್ನು ನಿರ್ಮಿಸೋಣ.

ಸವಿತಾ. ಮಾಟೂರ. ಇಲಕಲ್ಲ.

—————————————————————————-ಇಂದಿನ ಸಂಚಿಕೆಯ ಪ್ರಾಯೋಜಕರು

ಬಸವ ಮಂದಾರ ಮೆಡಿಕಲ್, ಜನರಲ್ ಸ್ಟೋರ್, ಮಸ್ಕಿ

Don`t copy text!