ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ ?
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ ? –
*ನಾಗಲಾಂಬಿಕೆ*
ಸ ವ ಸ೦ ೫ -೭೯೫ ಆವೃತ್ತಿ -೨-ಪುಟ -೨೫೪ .
ಇದು ಬಸವಣ್ಣನವರ ಅಕ್ಕನಾದ ನಾಗಲಾಂಬಿಕೆಯ ವಚನವಾಗಿದ್ದು. ಬಸವಣ್ಣನ ಆಗಮನವು ಮರ್ತ್ಯಲೋಕದಲ್ಲಿ ಭಕ್ತಿಯ ಬೆಳಕು ದಿಕ್ಕು ದೆಶೆಯಲ್ಲಿ ಶಿವ ಬೆಳಕು ಪಸರಿಸಿತು .ಆ ಬಸವನ ಬೆಳಗು ಭೂಮಿ ಸ್ವರ್ಗ ಮತ್ತು ಪಾತಾಳದಲ್ಲೂ ಬೆಳಗಿ ನಿಂತಿತು .ಅಂತಹ ಮಹಾ ಘನದ ವಿಚಾರ ಅನುಭವ ಈ ಮೂರೂ ಲೋಕದಲ್ಲಿ ಯಾರು ಬಲ್ಲವರು ?ಎಂದು ಅಕ್ಕ ನಾಗಮ್ಮ ಪ್ರಶ್ನೆ ಮಾಡಿದ್ದಾಳೆ. ಜನಪದಿಗರು ಹೇಳಿದಂತೆ :” ಎಲ್ಲ ಬಲ್ಲವ ನಮ್ಮ ಕಲ್ಯಾಣ ಬಸವಯ್ಯ ತಂದು ಚೆಲ್ಲಿದನು ಹೊಸ ಬೆಳಕ ” ಎಂದು ಹಾಡಿ ಹೊಗಳಿದ್ದಾರೆ.
ಶಶಿಧರ ಅಂದರೆ ಶಿವನು ಬಸವಣ್ಣನಿಗೆ ಹೇಳಿ ಕಳುಹಿಸದ ಕಾರ್ಯವ ಮುಗಿಸಿ ,ನಿಮ್ಮ ಕಾರ್ಯ ಮುಕ್ತರಾಗಿ ಹೊರಟು ಹೋದಿರಿ ಎಂದು ಅಭಿಮತ ವ್ಯಕ್ತ ಪಡಿಸುತ್ತಲೇ ,ಬಹುಷ್ಯ ಅಕ್ಕ ನಾಗಮ್ಮನಿಗೆ ಬಸವಣ್ಣನವರು ಐಕ್ಯ ಅನಿರೀಕ್ಷಿತ ಮತ್ತು ಆತಂಕವಾಗಿದ್ದು ಬಸವಣ್ಣನವರ ಸ್ಥೂಲ ಶರೀರಕ್ಕಿಂತ ,ಅವರ ಜಂಗಮ ಪ್ರಜ್ಞೆ, ಬಸವನೆಟ್ಟ ಭಕ್ತಿಯ ಪಂಥ ಅವರೊಡನೆ ಹೋಯಿತಲ್ಲಾ ಎಂದು ನಾಗಮ್ಮ ಚಿಂತಿಸುತ್ತಾಳೆ, ಬಸವಣ್ಣಾ ನಿಮ್ಮ ನಿರ್ಗಮನದಿಂದಾ ಅಸಂಖ್ಯಾತ ಮಹಾಗಣಂಗಳು ಕಲ್ಯಾಣದಿಂದ ದೂರವಾದರು. ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ. ಬಸವಣ್ಣನಿಲ್ಲದೆ ಮಹಾಮನೆ ಹಾಳಾಗಿದೆ ಮತ್ತು ಅರಿವಿನ ಗೂಡು ನಿಶಬ್ಧ ವಾಯಿತು ಎಂದು ವ್ಯಥೆ ಪಡುತ್ತಾಳೆ .ಬಸವಣ್ಣ ನಿನಗಾಗಿ ಮನೆ ಬಿಟ್ಟು ಬಂದವಳು ನಾನು ನನ್ನ ಬಿಟ್ಟು ಹೋದೆಯಲ್ಲ ಪಂಚಾಚಾರದ ಮಹಾಪರುಷ ಮೂರ್ತಿ ಬಸವಣ್ಣ ,ಬಸವಣ್ಣ ಪ್ರಿಯ ಚೆನ್ನಸಂಗಯ್ಯಗೆ ಪ್ರಾಣಲಿಂಗವಾಗಿ ಹೋದೆಯೆಲ್ಲ ಸಂಗನ ಬಸವಣ್ಣ . ಅಣ್ಣ ಬಸವಣ್ಣನ ನಿರ್ಗಮನ ಕಲ್ಯಾಣ ರಾಜ್ಯಕ್ಕೆ ತುಂಬಲಾರದ ನಷ್ಟ ,ಇದು ನಿಜಕ್ಕೂ ಸತ್ಯ ಬಸವ ನಿರ್ಗಮಿಸಿದ್ದಾರೆ ಅವರೊಂದಿಗೆ ಭಕ್ತಿ ಅರಿವು ಅನುಭಾವ ಆಚಾರ ಹೋಯಿತು ಎಂದು ಅಕ್ಕ ಅಭಿಮತ ಪಡುತ್ತಾಳೆ.ಆದರೆ ವರಕವಿ ಬೇಂದ್ರೆ ಆರು ಹೇಳುವರು ಬಸವ ಬಯಲಾದನೆಂದು ?ಕೇಳುತ್ತಾರೆ. ಆತನ ತತ್ವ ಇಂದಿಗೂ ವಿಶ್ವ ಮಾನ್ಯವಾಗಿವೆ.
*ಡಾ ಶಶಿಕಾಂತ .ಪಟ್ಟಣ -ಪೂನಾ*