*ಶಿವ—- ಶಿವರಾತ್ರಿ— ಶರಣ*
*ಶಿವ* —- ಶಿವನ ಆರಾಧನೆ ಇಡೀ ಭಾರತಾದ್ಯಂತ ಮಾಡಲ್ಪಡುತ್ತದೆ. ಆದರೆ ಶಿವ ಎಂಬುದು ನಿರಾಕಾರ ರೂಪವಾಗಿದೆ ಎಲ್ಲಿ ಸತ್ಯ ವಿದೆಯೋ ಅಲ್ಲಿ ಶಿವನಿದ್ದಾನೆ ಎಲ್ಲಿ ಶಿವನಿದ್ದಾನೆ ಯೋ ಅಲ್ಲಿ ಸುಂದರ ಅಂದರೆ ಸುಖ ಸಂತೋಷವಿದೆ. *ದೇವರನ್ನು ಮನುಷ್ಯ ಹುಟ್ಟಿಸಿದ್ದಾನೆಯೋ? ಮನುಷ್ಯನನ್ನುದೇವರು ಹುಟ್ಟಿಸಿದ್ದಾನೆಯೋ?* ಎಂಬುದು ಪ್ರಗತಿಪರ ವಚನ ಚಿಂತಕರ ಜಿಜ್ಞಾಸೆ ಆಗಿದೆ.
ಅಸುರರ ಮಾಲೆಗಳಿಲ್ಲ ತ್ರಿಶೂಲ ಡಮರುಗವಿಲ್ಲ, ಬ್ರಹ್ಮಕಪಾಲವಿಲ್ಲ,ಭಸ್ಮಭೂಷಣನಲ್ಲ, ವೃಷಭವಾಹನನನಲ್ಲ, ಋಷಿಯರುಗಳೊಡನಿದ್ದಾತನಲ್ಲ, ಎಸಗುವ ಸಂಸಾರದ ಕುರುಹಿಲ್ಲದಾತಂಗೆ ಹೆಸರಾವುದಿಲ್ಲೆಂದನಂಬಿಗರ ಅಂಬಿಗರ ಚೌಡಯ್ಯ.
ಕಟ್ಟಿದ ಲಿಂಗವ ಕಿರಿದು ಮಾಡಿ ಬೆಟ್ಟದಲ್ಲಿರುವ ಲಿಂಗವೇ ಹಿರಿದು ಮಾಡುವ ಪರಿಯ ನೋಡಾ ಇಂತಪ್ಪ ಲೊಟ್ಟೆಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
ಕಂಥೆ ತೊಟ್ಟವ ಗುರುವಲ್ಲ, ಖಾವಿಹೊತ್ತವ ಜಂಗಮವಲ್ಲ, ಶೀಲಾ ಕಟ್ಟಿದವ ಶಿವ ಭಕ್ತನಲ್ಲ, ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ, ಎಂಬವನ ಬಾಯಮೇಲೆ ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ
ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕಥೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು. ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ
ನಿಜ ಶರಣ ಅಂಬಿಗರ ಚೌಡಯ್ಯನವರು ಸ್ಥಾವರಲಿಂಗವನ್ನು ಕಟುವಾಗಿ ಟೀಕಿಸಿದ್ದಾರೆ.ಸನಾತನವಾದಿಗಳ ಡೊಳ್ಳು ಪುರಾಣಗಳನ್ನು ಖಂಡಿಸಿದ್ದಾರೆ. ಕಲ್ಲು, ಮಣ್ಣು, ಮರಗಳಲ್ಲಿ ದೇವರಿಲ್ಲ ಎಂಬುದು ಅವರ ದಿಟ್ಟ ನಿರ್ಧಾರವಾಗಿದೆ.
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ ಗುಹೇಶ್ವರ
ನಾ ದೇವನಲ್ಲದೆ ನೀ ದೇವನೆ?ನೀ ದೇವನಾದರೆ ಎನ್ನನೇಕೆ ಸಲಹೆ? ಆರೈದು ಒಂದು ಕುಡಿತೆ ಉದಕವನೆರೆವೆ. ಹಸಿದಾಗ ಒಂದು ತುತ್ತು ಓಗರವನಿಕ್ಕುವೆ ನಾ ದೇವಾ ಕಾಣಾ ಗುಹೇಶ್ವರ*
ಈ ಮೇಲಿನ ವಚನಗಳು ದೇವರ ಅಸ್ತಿತ್ವವನ್ನು ಪ್ರಶ್ನಿಸಿ ದೇವರು ನಿರಾಳ, ನಿರಾಕಾರ, ನಿರ್ಗುಣ, ಅಪ್ರತಿಮ, ಅಪ್ರಮಾಣ ಎಂದು ಹೇಳಿದ್ದಾರೆ.
*ಶಿವರಾತ್ರಿ* —– ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ
ತಾಯಿ ಮುಕ್ತಾಯಕ್ಕನ ವಚನವಿದು.
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ ! ಬೇಡ
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ.
ಚೆನ್ನಬಸವಣ್ಣನವರು ದಿನ ಮುಹೂರ್ತಗಳನ್ನು ಖಂಡಿಸಿದ್ದಾರೆ
ಶಿವಯೋಗಿ ಸಿದ್ಧರಾಮೇಶ್ವರರ ವಚನ
“ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ *ಶಿವರಾತ್ರಿಯ* ಮಾಡು
ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ.”
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.
ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ.
ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ.
ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ !
ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ,ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು.
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆಒಸಗೆ ವೈಭವಂಗಳು ತಾನೆ ಕಾಣಿರೊ.
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು;
ಕಾಳಿದಾಸಂಗೆ ಕಣ್ಣನಿತ್ತನೆಂಬರು;
ಮಯೂರಂಗೆ ಮಯ್ಯನಿತ್ತನೆಂಬರು;
ಬಾಣಂಗೆ ಕಯ್ಯನಿತ್ತನೆಂಬುರು;
ಸಿರಿಯಾಳಂಗೆ ಮಗನನಿತ್ತನೆಂಬರು;
ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು;
ದಾಸಂಗೆ ತವನಿಧಿಯನಿತ್ತನೆಂಬರು.
ಆರಾರ ಮುಖದಲ್ಲಿ ಇದೇ ವಾರ್ತೆ ಕೇಳಲಾಗದೀ ಶಬ್ದವನು.
ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಅದು ನಿಲದ ವಾರ್ತೆ.
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆಒಸಗೆ ವೈಭವಂಗಳು ತಾನೆ ಕಾಣಿರೊ.
ಶಿವನ ನೆನೆದರೆ ಪಾಪ ಹೋಗುವದು ಎನ್ನುವವರಿಗೆ ಚೌಡಯ್ಯನವರ ಉತ್ತರ
ಕೇಳಿದೇನೆಲೆ ಮಾನವ, ಪಂಚಮಹಾಪಾತಕ ದೋಷಾದಿಗಳನ್ನು ಮಾಡಿ ಬಾಯಿಲೆ `ಶಿವ ಶಿವ ಎಂದು ಶಿವನ ನೆನೆದರೆ ಭವ ಹರಿಯಿತೆಂಬ ವಿಚಾರಗೇಡಿಗಳ ಮಾತು ಕೇಳಲಾಗದು. ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೇ ? ರಂಭೆಯ ನೆನೆದರೆ ಕಾಮದ ಕಳವಳ ಹೋಗುವುದೇ ? ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ ? ಮಾಡಿದಂತಹ ದೋಷವು ಹೋಗಲಾರದು. ಇಂತಪ್ಪ ದುರಾಚಾರಿಗಳ ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
ಶರಣ—- ಹುಸಿಯುಳ್ಳಾತ ಭಕ್ತನಲ್ಲ ಭಾಧೆಯುಳ್ಳಾತ ಜಂಗಮನಲ್ಲ. ಆಶೆಯುಳ್ಳಾತ ಶರಣನಲ್ಲ.ಇಂತಪ್ಪ ಆಶೆ,ಹುಸಿ,ಭಾಧೆಯ ನಿರಾಕರಿಸಿ ಇರಬಲ್ಲ ಗುಹೇಶ್ವರ, ನಿಮ್ಮ ಶರಣ.
ಶರಣ ಮೂರ್ತಯನಲ್ಲ ಅಮೂರ್ತ ನಲ್ಲ ಲಿಂಗದಲ್ಲಿ ಪ್ರಾಣ ಸಂಚಿತ ಪ್ರಾಣದಲ್ಲಿ ಪ್ರಸಾದ ಸಂಹರಣೆ ಪ್ರಸಾದದಲ್ಲಿ ಕಾಯಾಶ್ರಿತನು. ಲೋಕಲೌಕಿಕ ಪ್ರಕಾರದುದಯನಲ್ಲ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ
ಶರಣರ ವಚನಗಳಿಗೆ ಅಗಾಧವಾದ ಶಕ್ತಿ ಇದೆ.ಲಿಂಗಾಯತದ 102 ಉಪ ಪಂಗಡಗಳು ಒಂದಾಗಿ *ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗುವಂತೆ ನಾವು ಹೋರಾಡದೇ ಹೋದರೆ ನಮಗೆ ಉಳಿಗಾಲವಿಲ್ಲ.
–ರವೀಂದ್ರ ರುದ್ರಪ್ಪ ಪಟ್ಟಣ
ಮುಳುಗುಂದ—- ರಾಮದುರ್ಗ
*9481931842*