ಡಿ. ವಿ. ಜಿ
ಡಿ.ವಿ. ಗುಂಡಪ್ಪನವರು ಕನ್ನಡ ಸಾಹಿತ್ಯಲೋಕದ ಪರಮ ಪೂಜ್ಯರೆಂಬ ಭಾವವನ್ನು ನಮ್ಮ ಹೃದಯಗಳು ತುಂಬಿಕೊಂಡಿವೆ. ಡಿ.ವಿ.ಜಿ ಅವರನ್ನು ನೆನೆಯುತ್ತಿದ್ದರೆ ಒಂದು ರೀತಿಯ ಗೌರವ ಹೃದಯದಲ್ಲಿ ಸ್ಥಾಪಿತವಾಗುತ್ತದೆ. ಡಿ.ವಿ.ಜಿ. ಅವರು ಜನಿಸಿದ್ದು 1887ರ ಮಾರ್ಚ್ 17ರಂದು.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಸೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
ಮಂಕುತಿಮ್ಮನ ಕಗ್ಗದ ಈ ಬರಹ ಪುಟ್ಟವರಿದ್ದಾಗಲೇ ನಮ್ಮ ನರ ನಾಡಿಗಳೊಳಗೆ ಬೆರೆತು ಹೋದಂತದ್ದು. ಡಿ.ವಿ.ಜಿ. ಅವರ ಬರಹಗಳು ಪಡೆದಿರುವ ವೈಶಾಲ್ಯತೆ ಅಚ್ಚರಿ ಹುಟ್ಟಿಸುವಂತದ್ದು.
“ಒಲವೇಂ, ಸಂಭ್ರಮವೇಂ, ಪ್ರಿಯಾಭಿಸರಮೇಂ, ಲಾವಣ್ಯಮೇಂ ಲೀಲೆಯೇಂ…. ಬಲಮಂ ತೋರುವ ಠೀವಿಯೇಂ, ಚಪಲಮೇಂ….” ಎಂದು ಕಾವೇರಿ ನದೀಸ್ರೋತದ ವಿಜೃಂಭಣೆಯನ್ನು ವರ್ಣಿಸಿದವರು ಅವರು. ಡಿ.ವಿ.ಜಿ ಅವರ ಬಹುಮುಖ ಸಾಧನೆಯನ್ನು ನೆನೆಯುವಾಗ ನಮ್ಮಲ್ಲುಂಟಾಗುವುದೂ ಅಂಥದೇ ಭಾವನೆ, ರೋಮಾಂಚನ. ಪಾಂಡಿತ್ಯ-ಸಹೃದಯತೆ, ದಾರ್ಶನಿಕತೆ-ಲೌಕಿಕಾಸಕ್ತಿ, ವೈಚಾರಿಕತೆ-ಪರಂಪರಾಶ್ರದ್ಧೆ, ಪ್ರತಿಭೆ-ಪರಿಶ್ರಮ-ಈ ವಿವಿಧ ಗುಣಗಳ ಸಮನ್ವಯವನ್ನು ಡಿ.ವಿ.ಜಿ ಯಂತೆ ಮೆರೆದವರು ವಿರಳ. ಸಮಾಜಸೇವೆ, ರಾಜಕೀಯ ಚರ್ಚೆಗಳಲ್ಲಿಯೂ, ಪತ್ರಿಕೋದ್ಯಮದಲ್ಲಿಯೂ ಅವರು ಮಾಡಿದ ಪರಿಶ್ರಮ ಅವರ ಸಾಹಿತ್ಯಕ ಪರಿಶ್ರಮಕ್ಕಿಂತ ಬಹುಪಾಲು ಮಿಗಿಲಾದದ್ದು ಮತ್ತು ಅವರನ್ನು ಕುರಿತು ಚಿಂತಿಸುವಾಗ ಜೀವನ ಕ್ಷೇತ್ರಗಳನ್ನು ಹೀಗೆ ವಿಂಗಡಿಸುವುದು ಕೃತಕವೆನಿಸುತ್ತದೆ. ತಮ್ಮ ‘ಶ್ರೀ ಕೃಷ್ಣ ಪರೀಕ್ಷಣಂ’ ಕೃತಿಯಲ್ಲಿ ಡಿ.ವಿ.ಜಿ.ಯವರೇ ಹೇಳಿದ ಈ ಮಾತುಗಳು ಅವರ ಜೀವನ ರೀತಿಯನ್ನು ಸಂಗ್ರಹಿಸುತ್ತವೆನ್ನಬಹುದು.
ಜೀವಕೆ ಸಂಸ್ಕಾರದ್ವಯ-
ಮಾವಶ್ಯಕಮಾತ್ಮಪದವ ಪಡೆವೊಡೆ ಪುರುಷಂ
ಗೀವ್ಯವಸಾಯಂ ತತ್ವಕೆ
ಭಾವಪರಿಷ್ಕರಣ ಲೋಕಸಂಪರ್ಕಗಳಿಂ
ಅತ್ತಲ್ ಬುದ್ಧಿವಿಚಾರಮು-
ಮಿತ್ತಲ್ ಲೋಕಪ್ರಸಕ್ತ ಹೃದ್ವಿಕಾಸಮುಂ
ಯುಕ್ತಾಮಿಹಾ ಸಂಸ್ಕಾರದಿ-
ನಾತ್ಮದ ಸಾರ್ವತ್ರಿಕತ್ವಮನುಭವಮಕ್ಕುಂ.
ಸಾಮಾಜಿಕ ಜೀವನ, ಸಾಹಿತ್ಯ ವ್ಯವಸಾಯ ಹೇಗೆ ಒಂದಕ್ಕೊಂದು ಪೂರಕವಾಗಿದ್ದವೋ ಹಾಗೆಯೇ ಶಾಸ್ತ್ರಪಾಂಡಿತ್ಯ, ಕಾವ್ಯರಸಿಕತೆಗಳೂ ಅವರಲ್ಲಿ ಅಭಿನ್ನವಾಗಿ ಮನೆಮಾಡಿದ್ದವು. ‘ಶ್ರೀಮದ್ ಭಗವದ್ಗೀತಾ ತಾತ್ಪರ್ಯ’ ಗ್ರಂಥದಲ್ಲಿ ಗೀತೆಯ ಗೇಯ ಗುಣವನ್ನು ಪ್ರಸ್ತಾಪಿಸುತ್ತಾ ಡಿ.ವಿ.ಜಿ ಹೇಳಿರುವ ಮಾತುಗಳು ಮನನೀಯ.
ಸತ್ಯಾನ್ವೇಷಣೆ ಶಾಸ್ತ್ರಂ
ಹೃತ್ತೋಷಣೆ ಕಾವ್ಯಂ, ಅಂತು ಮತಿ-ಮನಗಳ ದಾಂ-
ಪತ್ಯದ ಫಲಮಧಿರಸರುಚಿ-
ಯಾತ್ಮಾನಂದಮದು ಶಾಸ್ತ್ರಕಾವ್ಯಾನುಭಾವಂ
ಸಾಹಿತ್ಯ ಪ್ರಸಾದ ಜನದ ತಪಸ್ಸಿಗೆ ಪ್ರತ್ಯುತ್ತರ – ಎಂದು ಸೂತ್ರಿಸಿದ ಡಿ.ವಿ.ಜಿ ಜನತೆಯಲ್ಲಿರಬೇಕಾದ ತಪೋನಿಷ್ಠೆಯಲ್ಲಿ ಮೂರು ಅಂಶಗಳನ್ನು ಗುರುತಿಸಿದ್ದಾರೆ: ೧. ಲೋಕ ವಸ್ತು ಪರಿಜ್ಞಾನ ೨. ವಿಮರ್ಶಕನ ಜಾಗರೂಕತೆ ೩. ಪರಮಾರ್ಥದ ದೃಷ್ಟಿ (ಐಡಿಯಲಿಸ್ಮ್)
ರಾಷ್ಟ್ರಕತೆ-ಸಾಹಿತ್ಯ ಕಾರ್ಯಗಳು ಡಿ.ವಿ.ಜಿ.ಯವರಲ್ಲಿ ಸಮನ್ವಿತವಾದದ್ದು. ಈ ಸೂತ್ರದ ಆಧಾರದ ಮೇಲೆ: “ಯಾವ ವಸ್ತುಸೌಂದರ್ಯ, ಗುಣಸೌಂದರ್ಯಗಳಿಂದ ಕವಿಯ ನಿರ್ಮಿತಿ ನಮಗೆ ಆನಂದದಾಯಕವಾಗಿರುತ್ತದೆಯೋ…. ಆ ದಿವ್ಯ ಸೌಂದರ್ಯಗಳನ್ನು, ತೇಜಸ್ಸುಗಳನ್ನು ಜನತೆಯ ನಿತ್ಯಜೀವನದಲ್ಲಿ ಯತ್ಕಿಂಚಿತ್ತಾದರೂ ಘನರೂಪಕ್ಕೆ ತರುವುದು ರಾಜ್ಯಕರ್ಮಿಯ ಪ್ರಯತ್ನ…” ಈ ಚಿಂತನೆಯ ಸವಿಸ್ತಾರ ಮಂಡನೆಯನ್ನು ಡಿ.ವಿ.ಜಿ.ಯವರ ಉಪನ್ಯಾಸ ಸಂಗ್ರಹಗಳಾದ ‘ಜೀವನ ಸೌಂದರ್ಯ ಮತ್ತು ಸಾಹಿತ್ಯ’ (1932), ‘ಸಾಹಿತ್ಯ ಶಕ್ತಿ’ (1950) ಮತ್ತು ‘ಕಾವ್ಯಸ್ವಾರಸ್ಯ’ (1975) ಕೃತಿಗಳಲ್ಲಿ ಕಾಣುತ್ತೇವೆ.
ದೀರ್ಘಕಾಲ ಶಾಸನ ಪರಿಷತ್ತಿನ ಸದಸ್ಯರಾಗಿ (1927-40), ಪೌರಸಭಾ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ(1927-43), ಮೈಸೂರು ರಾಜ್ಯ ನಿಬಂಧನ ಸುಧಾರಣೆ ಸಮಿತಿ ಮತ್ತಿತರ ತಜ್ಞಸಮಿತಿಗಳಲ್ಲಿ ಡಿ.ವಿ.ಜಿ ಸಲ್ಲಿಸಿದ ಸೇವೆ ಇದೇ ಉದಾತ್ತ ರಾಷ್ಟ್ರನಿಷ್ಠೆಯಿಂದ ಪ್ರೇರಣೆ ಪಡೆದದ್ದು. ಡಿ.ವಿ.ಜಿ ತಮ್ಮ ಜೀವನಕ್ಕೆ ತೋರುಬೆರಳಾಗಿ ಇರಿಸಿಕೊಂಡು ಮೇಲಿಂದ ಮೇಲೆ ಸ್ಮರಿಸುತ್ತಿದ್ದ:
ಜ್ಞಾನಿನಾ ಚರಿತುಂ ಶಕ್ಯಂ
ಸಮ್ಮಗ್ ರಾಜ್ಯಾದಿ ಲೌಕಿಕಮ್
(ಜ್ಞಾನಿಯಿನಕ್ಕುಂ ಹಿತಸಂ
ಧಾನಂ ರಾಜ್ಯಾದಿ ಲೌಕಿಕವ್ಯವಹೃತಿಯೋಳ್)
-ಎಂಬ ವಿದ್ಯಾರಣ್ಯ ವಚನವೂ, ‘ಸಾರ್ವಜನಿಕ ಜೀವನವನ್ನು ಧರ್ಮಮಯವನ್ನಾಗಿಸಬೇಕು’ ಎಂಬ ಗೋಪಾಲಕೃಷ್ಣ ಗೋಖಲೆಯವರ ಆದರ್ಶವೂ ಡಿ.ವಿ.ಜಿ.ಯವರ ಜೀವಿತ-ಸಾಧನೆಯನ್ನು ಅರಿಯಲು ಕೈಮರಗಳಾಗಿವೆ. ತಾವು ಪ್ರಧಾನವಾಗಿ ಪತ್ರಿಕೋದ್ಯಮಿಗಳೆಂದು ಕರೆದುಕೊಳ್ಳುತ್ತಿದ್ದುದು ಡಿ.ವಿ.ಜಿ.ಯವರ ರೂಢಿ. ಅವರ ಬೌದ್ಧಿಕ ಪರಿಶ್ರಮದ ಬಹುಪಾಲು ಅಭಿವ್ಯಕ್ತಗೊಂಡಿದ್ದು ಸಾಹಿತ್ಯ ಕೃತಿಗಳಿಗಿಂತ ಹೆಚ್ಚಾಗಿ ಅವರು ದಶಕಗಳುದ್ದಕ್ಕೂ ನಡೆಸಿದ ಒಂದಲ್ಲ ಒಂದು ಪತ್ರಿಕೆಯ ಮೂಲಕ. ಪತ್ರಿಕಾಕ್ಷೇತ್ರದ ಅವರ ಜೀವನಾನುಭವಗಳನ್ನೂ ಅವರ ದೃಗ್ರೀತಿಯನ್ನೂ ‘ವೃತ್ತಪತ್ರಿಕೆ’ (1928, 1968) ಗ್ರಂಥದಲ್ಲಿ ಕಾಣಬಹುದು.
1906-07ರ ಸುಮಾರಿಗೇ ಆರಂಭವಾದದ್ದು ಡಿ.ವಿ.ಜಿ.ಯವರ ಪತ್ರಿಕಾವೃತ್ತಿ: ಆಗಿನ ‘ಸೂರ್ಯೋದಯ ಪ್ರಕಾಶಿಕಾ’, ‘ಮೈಸೂರು ಸ್ಟ್ಯಾಂಡರ್ಡ್ಸ್, ‘ಈವನಿಂಗ್ ಮೈಲ್’, ‘ಮೈಸೂರು ಟೈಮ್ಸ್’ ಪತ್ರಿಕೆಗಳ ಆಶ್ರಯದಲ್ಲಿ, ಒಂದೆರಡು ವರ್ಷಗಳಲ್ಲಿ ನವರತ್ನ ಕೃಷ್ಣಸ್ವಾಮಿಯವರೊಡನೆ ‘ಭಾರತಿ’ ಎಂಬ ದಿನಪತ್ರಿಕೆಯೊಂದನ್ನು ತಾವೇ ಹೊರಡಿಸುವ ಸಾಹಸ ಮಾಡಿದರು. 1908ರಲ್ಲಿ ಪತ್ರಿಕಾ ವಾಗ್ಬಂಧನ ಜಾರಿಯಾದಾಗ ಮದರಾಸಿಗೆ ವಲಸೆ ಹೋಗಿ ಅಲ್ಲಿ ‘ಹಿಂದೂ’, ‘ಇಂಡಿಯನ್ ಪೇಟ್ರೀಯಟ್’ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು.
ಬೆಂಗಳೂರಿಗೆ ವಾಪಸ್ಸು ಬಂದು ನಂತರ 1913ರಲ್ಲಿ ‘ಕರ್ನಾಟಕ’ ಅರ್ಧವಾರಪತ್ರಿಕೆಯನ್ನು ಆರಂಭಿಸಿ ಏಳೆಂಟು ವರ್ಷ ನಡೆಸಿದರು. ಒಂದೆರಡು ವರ್ಷಗಳ ಬಿಡುವಿನ ನಂತರ ‘ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಇಂಗ್ಲಿಷ್ ಮಾಸಪತ್ರಿಕೆಯನ್ನು 1921 ಆಗಸ್ಟ್ ರಲ್ಲಿ ಆರಂಭಿಸಿದರು. 1923ರಿಂದಾಚೆಗೆ ಡಿ.ವಿ.ಜಿ ನಡೆಸಿದ ಪತ್ರಿಕೆ ‘ಕರ್ನಾಟಕ ಜನ ಜೀವನ ಮತ್ತು ಅರ್ಥಸಾಧಕ ಪತ್ರಿಕೆ’. 1945ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪುನರ್ಜನ್ಮ ಪಡೆದಾಗಿನಿಂದ ತಮ್ಮ ಕೊನೆಯವರೆಗೆ ಡಿ.ವಿ.ಜಿ ಆ ಸಂಸ್ಥೆಯ ಅಂಗಪತ್ರಿಕೆ ‘ಪಬ್ಲಿಕ್ ಅಫೇರ್ಸ್’’ ಮೂಲಕ ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ಕುರಿತು ಸತತವಾಗಿ ವ್ಯಾಖ್ಯೆ ನೀಡಿದರು. ತಮ್ಮದೇ ಪತ್ರಿಕೆ ಇಲ್ಲದಿದ್ದಾಗಲೂ ಡಿ.ವಿ.ಜಿ. ವಿರಮಿಸಿದವರಲ್ಲ. ‘ಹಿಂದೂ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಮೂಲಕ ತಮ್ಮ ಟೀಕೆಗಳನ್ನು ನಿರಂತರವಾಗಿ ಪ್ರಕಟಿಸಿದರು. ಇವಲ್ಲದೆ ಸಾಮಾಜಿಕ ರಾಜಕೀಯ ರಾಜಕೀಯ ವಿಷಯಗಳನ್ನು ಕುರಿತು ಪ್ರತ್ಯೇಕ ಪುಸ್ತಿಕೆಗಳನ್ನು ಆಗಿಂದಾಗ್ಗೆ ಹೊರತಂದರು. ‘ಸರ್ ಕೆ ಶೇಷಾದ್ರಿ ಅಯ್ಯರ್’ (1916), ‘ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು’ (1917), ‘ಟಾಲ್ಸ್ ಟಾಯ್’ (1917), ‘ಹಿಂದೂ ಧಾರ್ಮಿಕ ಸಂಸ್ಥೆಗಳ ಸುಧಾರಣೆ’ (1923), ‘ಭಾರತಕ್ಕೆ ಡೊಮಿನಿಯನ್ ಸಂವಿಧಾನದ ಅನ್ವಯ’ (1929) – ಇಂಥ ಹತ್ತಾರು ಕಿರು ಪುಸ್ತಕಗಳು ಸಮಕಾಲೀನ ಇತಿಹಾಸ ರಚಿಸಬಯಸುವವರಿಗೆ ಇಂದಿಗೂ ಅತ್ಯುಪಯುಕ್ತವಾಗಬಲ್ಲ ಸಾಮಗ್ರಿ. ಅಂತೆಯೇ ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಅಧ್ಯಯನಯೋಗ್ಯವಾದ ಶಾಸ್ತ್ರಗ್ರಂಥಗಳು ‘ರಾಜ್ಯಶಾಸ್ತ್ರ’ (1951), ‘ರಾಜ್ಯಾಂಗ ತತ್ವಗಳು’ (1954), ರಾಜಕೀಯ ಪ್ರಾಸ್ತಾವಿಕ ಉಪನ್ಯಾಸ ಸಂಗ್ರಹ ರೂಪವಾದ ‘ರಾಜಕೀಯ ಪ್ರಸಂಗಗಳು’ (1958).
ದೇಶೀಯ ಸಂಸ್ಥಾನಗಳ ವಿಶಿಷ್ಟ ಸಮಸ್ಯೆಗಳನ್ನು ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಭಾರತೀಯರಲ್ಲಿ ಅಗ್ರಪಂಕ್ತಿಯವರೆಂದು ಡಿ.ವಿ.ಜಿ. 1914-15ರ ವೇಳೆಗೇ ವಿಶಾಲ ಮನ್ನಣೆಗಳಿಸಿಕೊಂಡಿದ್ದರು. ಈ ವಿಷಯದ ವಿವಿಧ ಮುಖಗಳನ್ನು ಕುರಿತ ಅವರ ಬರಹಗಳು ಪ್ರೊ. ಬೇರಿಡೇಲ್ ಕೀತ್ ಮೊದಲಾದ ಜಗದ್ವಿಖ್ಯಾತ ರಾಜ್ಯಶಾಸ್ತ್ರಜ್ಞರ ಹಾಗೂ ಸರ್ ಪಿ.ಎಸ್. ಶಿವಸ್ವಾಮಿ ಅಯ್ಯರ್ ಮೊದಲಾದ ಭಾರತೀಯ ಸಂವಿಧಾನತಜ್ಞರ ಗಮನವನ್ನೂ ಸೆಳೆದಿದ್ದವು. ದೇಶೀಯ ಸಂಸ್ಥಾನ ಪ್ರಜೆಗಳ ಸಮ್ಮೇಳನವೊಂದು 1929ರಲ್ಲಿ ತಿರುವಾಂಕೂರಿನಲ್ಲಿ ನಡೆದಾಗ ಅದರ ಅಧ್ಯಕ್ಷರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಡಿ.ವಿ.ಜಿ.ಯವರನ್ನು ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು. 1918ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ಸಿನ ವಿಶೇಷಾಧಿವೇಶನದಲ್ಲಿ ಡಿ.ವಿ.ಜಿಯವರು ದೇಶೀಯ ಸಂಸ್ಥಾನಗಳ ಸ್ಥಿತಿಗತಿ ಬಗೆಗೆ ನಿರ್ಣಯವೊಂದನ್ನೂ ಮಂಡಿಸಿದ್ದರು. ಅಲ್ಲಿಂದಾಚೆಗೆ 1928ರಲ್ಲಿ ಬಟ್ಲರ್ ಆಯೋಗಕ್ಕೆ, 1942ರಲ್ಲಿ ಕ್ರಿಪ್ಸ್ ಆಯೋಗಕ್ಕೆ, 1945ರಲ್ಲಿ ಸಪ್ರು ಸಮಿತಿಗೆ-ಇಂಥ ನಾಲ್ಕಾರು ಸಂದರ್ಭಗಳಲ್ಲಿ ಡಿ.ವಿ.ಜಿ ಸಲ್ಲಿಸಿದ ಮನವಿಗಳು ಉಲ್ಲೇಖನೀಯ.
ಬರಿಯ ವಿದ್ವತ್ಕಾರ್ಯಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಂಡವರಲ್ಲ ಡಿ.ವಿ.ಜಿ.. ತಮ್ಮ ಧ್ಯೇಯಗಳ ಪ್ರವರ್ತನೆಗಾಗಿ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. 1915ರ ಸುಮಾರಿಗೇ ‘ಸೋಷಲ್ ಸರ್ವೀಸ್ ಲೀಗ್’, ‘ಪಾಪ್ಯುಲರ್ ಎಜುಕೇಶನ್ ಲೀಗ್’ ಮುಂತಾದ ಸಾರ್ವಜನಿಕ ಸಂಘಟನೆಗಳನ್ನು ಹುಟ್ಟುಹಾಕಿದ್ದರು. ಈ ‘ಸೋಷಲ್ ಸರ್ವೀಸ್ ಲೀಗ್’ ಸಂಘಟನೆಯೇ ಆಮೇಲಿನ ವರ್ಷಗಳಲ್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯಾಗಿ ಮರುಜನ್ಮ ಪಡೆಯಿತು. ಉತ್ತಮ ರಾಷ್ಟ್ರದ ಪ್ರಜೆಗಳಾಗಲು ಜನತೆಗೆ ಶಿಕ್ಷಣ ನೀಡುವುದಕ್ಕೂ ಸಾರ್ವಜನಿಕ ಸಮಸ್ಯೆಗಳ ನಿಷ್ಪಾಕ್ಷಿಕ ಅಧ್ಯಯನಕ್ಕೂ ಮಾಧ್ಯಮವಾಗಿ ಈ ಸಂಸ್ಥೆಯು ಇಂದಿಗೂ ಕಾರ್ಯಪ್ರವೃತ್ತವಾಗಿದೆ.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1933-37) ಡಿ.ವಿ.ಜಿ ಆ ಸಂಸ್ಥೆಯ ಕಾರ್ಯ ವಿಸ್ತರಣೆಗೆ ಕಾರಣರಾದರು. ವಸಂತ ಸಾಹಿತ್ಯೋತ್ಸವ, ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಮುಂತಾದ ಹಲವಾರು ಚಟುವಟಿಕೆಗಳ ಉಪಕ್ರಮವಾದದ್ದು ಡಿ.ವಿ.ಜಿಯವರ ಉತ್ಸಾಹದ ಫಲವಾಗಿ. ಕರ್ನಾಟಕ ವೃತ್ತಪತ್ರಿಕಾಕರ್ತರ ಸಂಘ, ಶೀಘ್ರಲಿಪಿ ಬರಹಗಾರರ ಸಂಘ, ಪಂಡಿತ ಮಂಡಲ, ರಾಮಾಯಣ ಪ್ರಕಾಶನ ಸಮಿತಿ, ರಾಮಾಯಣ ಮಹಾಭಾರತಾದಿ ಪ್ರಕಾಶನ ಸಮಿತಿ ಮೊದಲಾದ ವಿವಿಧ ಗೋಷ್ಠಿಗಳಿಗೂ ಡಿ.ವಿ.ಜಿ. ಯವರಿಂದ ಆರೈಕೆ ದೊರೆತಿತ್ತು.
ಹೀಗೆ ಬಿಡುವಿಲ್ಲದ ಸಾರ್ವಜನಿಕ ಜೀವನದ ಚಟುವಟಿಕೆಗಳ ನಡುನಡುವೆಯೇ ಡಿ.ವಿ.ಜಿ.ಯವರ ಸಾಹಿತ್ಯಕೃತಿಗಳು ಹೊರಬಂದವು.
“ಉತ್ತಮ ರಾಜ್ಯ ವ್ಯವಸ್ಥೆಯ ಲಕ್ಷಣಗಳು, ರಾಜ್ಯಸೇವೆಯ ವಿಧಾನಗಳು, ಪ್ರಜಾ ಜೀವನದ ಉತ್ಕೃಷ್ಟಗತಿ ಇವೇ ಮೊದಲಾದ ಪ್ರಜಾಧರ್ಮದ ಮುಖ್ಯಾಂಶಗಳನ್ನು ನಿದರ್ಶನಪಡಿಸಲು ‘ದಿವಾನ್ ರಂಗಾಚಾರ್ಲು’ (1911) ಜೀವನಚರಿತ್ರೆಯನ್ನು ಬರೆದುದಾಗಿ ಡಿ.ವಿ.ಜಿ ಹೇಳಿದ್ದಾರೆ. ಅವರು ಬರೆದ ಇನ್ನೊಂದು ಜೀವನಚರಿತ್ರೆ ಸಾರ್ವಜನಿಕ ಕ್ಷೇತ್ರದಲ್ಲಿನ ಮಹತ್ಸಾದಕ ‘ಗೋಪಾಲಕೃಷ್ಣ ಗೋಖಲೆ’ (1915). “ಜನರಿಗೆ ಬದುಕು ಸಹ್ಯವೂ ಪ್ರಿಯವೂ ಅರ್ಥಪೂರಿತವೂ ಆಗಬೇಕೆಂಬ ಮಹೋದ್ದೇಶಕ್ಕೆ ರಾಜ್ಯಾಧಿಕಾರವನ್ನು ಸಾಧನವಾಗಿ ಬಳಸಿ ಕೃತಕೃತ್ಯರಾದವರು ರಂಗಾಚಾರ್ಯರು. ಅದೇ ಉದ್ದೇಶವನ್ನೇ ಸಾರ್ವಜನಿಕ ಕ್ಷೇತ್ರದೊಳಗಿನಿಂದ ಸಾಧಿಸಲು ಶ್ರಮಿಸಿದವರು ಗೋಪಾಲಕೃಷ್ಣ ಗೋಖಲೆಯವರು. ಅವರಿಬ್ಬರೂ ಪರಸ್ಪರ ಪೂರ್ಣಕಾರಿಗಳು. ಇಂಥಹ ಚಿಂತನೆ ಡಿ.ವಿ.ಜಿ.ಯವರದು.
ಜೀವನಚರಿತ್ರೆ, ತತ್ವಚಿಂತನೆ, ರಾಜ್ಯವಿಷಯಕ ಪ್ರಸಂಗಗಳು, ಕಾವ್ಯ, ಗೇಯ ಪ್ರಬಂಧ, ನಾಟಕ, ಸಂಸ್ಕೃತಿದರ್ಶನ, ದಾರ್ಶನಿಕ ಜಿಜ್ಞಾಸೆ, ಆಧ್ಯಾತ್ಮ ಪ್ರತಿಪಾದನೆ – ಈ ನಾಲ್ಕಾರು ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ವಿಫುಲಸಂಖ್ಯೆಯಲ್ಲಿ ಡಿ.ವಿ.ಜಿ. ಕನ್ನಡ ನಾಡಿಗೆ ನೀಡಿದ್ದಾರೆ. ‘ಸಾಹಿತ್ಯ ಶಕ್ತಿ’ (1950) ಪ್ರಬಂಧಸಂಕಲನದ ಆರಂಭದಲ್ಲಿ ಅವರು ಹೇಳಿರುವ ಮಾತು ಅವರ ವ್ಯಕ್ತಿತ್ವದ ಮೇಲಣ ವ್ಯಾಖ್ಯೆಯೂ ಆಗಿದೆಯೆನ್ನಬಹುದು.
ರಾವಣೀಯವೆಂದು ಬಿಸುಸುಯ್ಯಲದು ಕವಿತೆ
ಭೂಮಿಗದನೆಟುಕಿಸುವೆನೆಂಬೆಸಕ ರಾಷ್ಟ್ರಕತೆ
ಅಮೂಲಮದರರಿವನ್ ಅರಸಲ್ ಅದು ವಿಜ್ಞಾನ
ಸಾಮಗ್ರ್ಯದಿಂ ಕಾಣಲ್ ಅದುವೆ ದಿವ್ಯಜ್ಞಾನ.
1922ರಷ್ಟು ಹಿಂದೆಯೇ ಬೆಳಕಿಗೆ ಬಂದ ಡಿ.ವಿ.ಜಿ.ಯವರ ‘ವಸಂತ ಕುಸುಮಾಂಜಲಿ’ಯ ಕವನಗಳು ಒಂಬತ್ತು ದಶಕಗಳ ನಂತರವೂ ಕನ್ನಡಿಗರ ನಾಲಗೆಯಲ್ಲಿ ನಲಿದಾಡುತ್ತಿವೆ. ಅಂತೆಯೇ ‘ನಿವೇದನ’(1924) ಸಂಕಲನದ ಪದ್ಯಗಳು ಕೂಡ. ಅನುವಾದಗಳಾದರೂ ಸ್ವತಂತ್ರ ರಚನೆಗಳಂತೆ ಹೊಸತನ, ರಮ್ಯತೆಯಿಂದ ಮೆರೆದವು ‘ಉಮರನ ಒಸಗೆ’ (1930), ‘ಮ್ಯಾಕ್ ಬೆತ್’ (1936)ಮುಂತಾದವು. ಒಂದು ವಿಶಿಷ್ಟ ಚಿಂತನಪ್ರಧಾನ ರೀತಿಯ ಪದ್ಯಗಳ ಸಂಗ್ರಹ ‘ಕೇತಕೀವನ’ (1973).
ಶ್ರೀರಾಮನು ಎದುರಿಸಿದ ಧರ್ಮದ್ವೈಧಗಳ ವಿವೇಚನೆಯನ್ನು ರಾಮಾಯಣದ ವಿವಿಧ ಪಾತ್ರಗಳ ನಡುವಣ ಸಂವಾದದ ರೀತಿಯಲ್ಲಿ ನಿರೂಪಿಸಿರುವ ಪದ್ಯಕೃತಿ ‘ಶ್ರೀ ರಾಮಪರೀಕ್ಷಣ’ (1945). ಇದಕ್ಕೆ ಪೂರಕವಾಗಿ 1971ರಲ್ಲಿ ಹೊರಬಂದ ‘ಶ್ರೀ ಕೃಷ್ಣಪರೀಕ್ಷಣ’ ಶ್ರೀ ಕೃಷ್ಣನನ್ನು ಕುರಿತು ಸಾಮಾನ್ಯರಿಗೆ ಬರುವ ಅನೇಕ ಸಂಶಯಗಳನ್ನು ಪರಿಹರಿಸುವ ಪ್ರಯತ್ನ. ಈ ಕೃತಿಯಲ್ಲಿ ಹಾಗೂ ‘ಶೃಂಗಾರ ಮಂಗಳಂ’ (1970) ಕಾವ್ಯಲಹರಿಯಲ್ಲಿ ಡಿ.ವಿ.ಜಿ ಪ್ರತಿಪಾದಿಸಿರುವ ಒಂದು ಸಿದ್ಧಾಂತ-ಸೌಂದರ್ಯಾಸ್ವಾದನೆಯು ಆತ್ಮೊತ್ಕರ್ಷಕ್ಕೆ ಬಾಧಕವಾಗದೆ ಸಹಾಯಕ ಹಾಗೂ ಸಂಸ್ಕಾರಕಾರಿ ಎಂಬುದು.
ರೂಪಂ ಧ್ವನಿ, ದನಿ ರಾಗಾ-
ಲಾಪಂ, ರಾಗೋಕ್ತಿಯಾ ಸುದೃಕ್ ಸಲ್ಲಾಪಂ
ದೀಪಿಪುದು ಮನವನಾ ರಸ-
ದಾಪಗೆಯಾತ್ಮೋಪವನವ ಸೊಂಪಾಗಿಸುಗುಂ
ಸುಖಮುಂ ಸಂಸ್ಕಾರಂ ಜೀ-
ವಾಕೆ ದುಃಖದವೊಲೆ ಚಿತ್ತಪರಿವಾಚನಕಂ
ವಿಕಸಿತಮದರಿಂ ಹೃತ್ಕೋ-
ರಕಮಾ ಸೌರಭದೆ ಜೀವಕಾತ್ಮಾನುಭವಂ
ಭೌತ-ಆಧ್ಯಾತ್ಮಗಳ ಪರಸ್ಪರ ಪೂರಕ ಗುಣವನ್ನು ‘ಶ್ರೀ ಕೃಷ್ಣ ಪರೀಕ್ಷಣ’ದ ಈ ಮಾತು ಸಂಗ್ರಹಿಸಿದೆ-
ಬ್ರಹ್ಮಕೆ ಹೃದಯವನಿತ್ತು ಜ-
ಗಂಮಂಗಲಕಾರ್ಯಕೊಡಲನೆಲ್ಲವನಿತ್ತುಂ
ಇಮ್ಮಿದಳೊಡನಾಡುತ ಸ-
ಚ್ಚಿನ್ನಯನಂ ಮರೆಯದಿರ್ಪೊಡದು ನಿರ್ವಾಣಂ.
ಕಾವ್ಯಕ್ಕೆ ಮಹತ್ವ ಬಂದಿರುವುದು ವಿಶ್ವ ಸಂಬೋಧನೆಯಿಂದ ಎಂಬ ಆಳವಾದ ನಂಬಿಕೆಯ ಇನ್ನೊಂದು ದಿಕ್ಕಿನ ಅಭಿವ್ಯಕ್ತಿ – ಬೇಲೂರು ಚನ್ನಕೇಶವ ಸನ್ನಿಧಿಯ ಅಂತಃಪುರದ ಮದನಿಕೆಯರ ವಿಲಾಸ ವಿಭ್ರಮಗಳನ್ನು ಗೀತರೂಪದಲ್ಲಿ ಹಿಡಿದಿಟ್ಟಿರುವ ‘ಅಂತಃಪುರ ಗೀತೆ’ (1950). ಸಂಗೀತ – ನೃತ್ಯ ರಸಿಕರ ಪಾಲಿಗೆ ಅದು ಮರೆಯಲಾಗದ ರಸದೌತಣ ಆ ವೈಭವ –
ವಿಶ್ವ ತಂತ್ರ ರಹಸ್ಯ-
ಬೋಧನೋತ್ಸಾಹಮಿದು
ವಿಶ್ವ ಶಿಲ್ಪಿಯ ಸಭೆಯೊ-
ಳುಚಿತಮೆನಿಕುಂ.
ಗೇಯ ಮಾಧ್ಯಮದ ಸಮರ್ಥವಾದ ಬಳಕೆಗೆ ಇನ್ನೊಂದು ನಿದರ್ಶನ ಡಿ.ವಿ.ಜಿ.ಯವರ ‘ಗೀತಶಾಕುಂತಲ’ (1960) : ಕಾಳಿದಾಸನ ಶಾಕುಂತಲ ನಾಟಕದ ಕೆಲವು ಸರಸ ಸಂದರ್ಭಗಳ ಸಂಗೀತಾನುವಾದ.
ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕೆನ್ನುವವರಿಗೆ “ಮರ್ಜಿ, ಮಾತು, ನಡೆವಳಿಕೆಗಳ ಸೊಬಗನ್ನು” ಸುಲಭಗ್ರಾಹ್ಯವಾಗಿ ತಿಳಿಸಿರುವ “ಬಾಳಿಗೊಂದು ನಂಬಿಕೆ” (1950) ಮತ್ತು ‘ಸಂಸ್ಕೃತಿ’ (1953).
ಪ್ರವೃತ್ತಿ-ನಿವೃತ್ತಿ ಸಮನ್ವಯ, ವ್ರತ್ಯಗ್ದೃಷ್ಟಿ ಮುಂತಾದ ದಾರ್ಶನಿಕ ತತ್ವಗಳ ಪ್ರತಿಪಾದನೆಗಾಗಿ ಡಿ.ವಿ.ಜಿ ಬರೆದವು – ‘ಈಶೋಪನಿಷತ್ತು’ ಮತ್ತು ‘ಪುರುಷ ಸೂಕ್ತ’ ವ್ಯಾಖ್ಯಾನಗಳು (1951).
ಎಲ್ಲರಿಗೂ ಬಂದೊದಗುವ ಆಘಾತಗಳನ್ನೂ ಜೀವನಕ್ಲೇಶಗಳನ್ನೂ ಎದುರಿಸಲು ಮನಃಸ್ಥೈರ್ಯವುಂಟುಮಾಡುವ ಹಿತಭೋಧನೆಗಳನ್ನೊಳಗೊಂಡ ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ (1943) ಕನ್ನಡ ಭಾಷೆಯ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದೆನಿಸಿದೆ. ಯಾವ ಕಾರಣದಿಂದಲಾದರೂ ಮನಸ್ಸು ಕುಗ್ಗಿದಾಗ ಎಂಥವರಿಗೂ ಸಾಂತ್ವನ ನೀಡುವ ಅಪೂರ್ವವಚನ ಸಂಗ್ರಹ ಇದು. ಜನತೆಗೆ ಡಿ.ವಿ.ಜಿ. ಮಾಡಿರುವ ಉಪಕಾರಗಳಲ್ಲಿ ‘ಕಗ್ಗ’ ವಿಶೇಷವಾಗಿ ಸ್ಮರಿಸಬೇಕಾದ್ದು. ‘ಕಗ್ಗ’ದ ಪದ್ಯಗಳು ಅನೇಕರ ಜೀವನದಲ್ಲಿ ಆತ್ಮೀಯ ಮಿತ್ರನ ಸ್ಥಾನ ಪಡೆದಿದೆ.
‘ಕಗ್ಗ’ದ ಒಂದೊಂದು ಪದ್ಯವೂ ಜೀವನ ಶ್ರದ್ಧೆಯನ್ನು ದೃಢಿಷ್ಠಗೊಳಿಸುವಂಥದು.
ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು
ಉಲ್ಲಾಸಕೆಡೆಮಾಡು ನಿನ್ನಿನಾದನಿತು
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ
ಎಲ್ಲಕಂ ಸಿದ್ಧನಿರು – ಮಂಕುತಿಮ್ಮ
ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಆತ್ಮೌಪಮ್ಯ’ ಇಲ್ಲಿಯ ಉಪದೇಶ.
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು
ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು
ಬಗೆಯರಿತವನೆ ಸುಖಿ-ಮಂಕುತಿಮ್ಮ.
ಡಿ.ವಿ.ಜಿ ಯವರ ಉಪನ್ಯಾಸ ಸಂಗ್ರಹವಾದ ‘ಶ್ರೀಮದ್ ಭಗವದ್ಗೀತಾ ತಾತ್ಪರ್ಯ’ದ (1956) ಉದ್ದಕ್ಕೂ ನಾವು ಕಾಣುವುದು ಇದೇ ಅಂತರ್ದ್ವನಿಯನ್ನು. ಭಗವದ್ಗೀತೆಯು ಕಾಷಾಯ-ಸಂನ್ಯಾಸವನ್ನು ಉಪದೇಶಿಸುವ ಗ್ರಂಥವಲ್ಲ. ಲೋಕಜೀವನದ ವಿಷಯದಲ್ಲಿ ಗೌರವ ಬುದ್ಧಿಯನ್ನೂ, ಕರ್ತವ್ಯಾಚರಣೆಯಲ್ಲಿ ಉತ್ಸಾಹವನ್ನೂ ಉಂಟುಮಾಡುವ ಗ್ರಂಥ ಅದೆಂದು ಡಿ.ವಿ.ಜಿ. ವ್ಯಾಖ್ಯೆ ಮಾಡಿದ್ದಾರೆ.
ವಿವಿಧ ಮತ ಗಂಭೀರಂ ಸಾಮರಸ್ಯ ಪ್ರಕಾರಂ
ಗೃಹಿ-ಯತಿ ಸಮುದಾರಂ ಸರ್ವಜೀವೋಪಚಾರಂ
ಸುರ-ನರ ಸಹಕಾರಂ ಸ್ವಾತ್ಮ್ಯ-ಸರ್ವಾತ್ಮ್ಯಸಾರಂ
ಭವಜಲನಿಧಿಪಾರಂ ಕೃಷ್ಣಗೀತಾವತಾರಂ
ಮತಭೇದ ವಿವಾದಗಳೆಲ್ಲ ಬಹುಮಟ್ಟಿಗೆ ಶಾಬ್ದಿಕವೆಂದೂ ವಿವಿಧ ಮತಗಳಲ್ಲಿ ಸಾಮರಸ್ಯ ಶಕ್ಯ ಹಾಗೂ ಅವಶ್ಯವೆಂದೂ ಡಿ.ವಿ.ಜಿ. ಪ್ರತಿಪಾದಿಸಿದ್ದಾರೆ.
ದ್ವೈತಮೊ ಮತಂ ವಿಶಿಷ್ಟಾ-
ದ್ವೈತಮೊ ಅದ್ವೈತಮೋ ಅದೇನಾದೊಡದೇಂ
ಭೂತವ್ರಾತದೊಳಾರ್ಗನು-
ಭೂತಮೊಪರವಸ್ತುವನೆ ಕೃತಪರಮಾರ್ಥಮಂ
ಸರ್ವೋಹಮೆಂದು ಲೋಕವ
ನಿರ್ವಹಿಪಂಗೆತ್ತಲು ವಸಂತರಾಮಂ
ನಿರ್ವೈರಂ ನಿರ್ಮೋಹಂ
ನಿರ್ವಾಣಪದಸ್ಥನಾತನುಸಿರ್ದೆಡೆ ಪುಣ್ಯಂ
ಅಂತರಂಗ ಜೀವನೋತ್ಸಾಹಿಗಳಿಗೆ ಅತ್ಯವಶ್ಯವಾದ್ದು ಈ ಸಾಮರಸ್ಯದ ದೃಷ್ಟಿ.
ಡಿ.ವಿ.ಜಿ.ಯವರ ಒಂದು ಅಸಾಧಾರಣ ಕೃತಿಮಾಲೆ ಅವರ ‘ಜ್ಞಾಪಕಚಿತ್ರಶಾಲೆ’ಯ ಎಂಟು ಸಂಪುಟಗಳು. ಗತಯುಗದ ಸಮಾಜ ಪರಿಸರ, ಜೀವನ ರೀತಿ ಹಾಗೂ ಹಿಂದಿನ ಎರಡು ಪೀಳಿಗೆಗಳ ಹತ್ತಾರು ಮಂದಿ ಸಾರ್ವಜನಿಕರ ಪ್ರಸಿದ್ಧ ಪುರುಷರ ಮತ್ತು ಜನಸಾಮಾನ್ಯರ ವ್ಯಕ್ತಿ ವೈಶಿಷ್ಟ್ಯಗಳನ್ನು ಚಿತ್ರಿಸಿರುವ ಅಪೂರ್ವ ದಾಖಲೆಗಳು ಇವು. ಸ್ವಭಾವತಃ ವಿನೋದಪ್ರಿಯರಾದ ಡಿ.ವಿ.ಜಿಯವರ ಹಾಸ್ಯಪ್ರಜ್ಞೆ ಈ ಸಂಪುಟಗಳುದ್ದಕ್ಕೂ ವಿಜ್ರಂಭಿಸಿದೆ. ನಮ್ಮ ದೇಶದಲ್ಲಿ ಒಂದು ಕಾಲದಲ್ಲಿ ಸರ್ವಸಾಮಾನ್ಯವಾಗಿದ್ದ ಜೀವನಶೈಲಿ ಇಲ್ಲಿದೆ. ಒಂದು ನೆಮ್ಮದಿಯ ಯುಗ ಕಳೆದುಹೋಗಿ ಎಂಥ ನಿರಂತರ ತಳಮಳದ ಯುಗ ಆರಂಭವಾಗಿದೆ ಎಂದೆನಿಸುತ್ತದೆ ಡಿ.ವಿ.ಜಿ.ಯವರ ‘ಜ್ಞಾಪಕ ಚಿತ್ರಶಾಲೆಯ’ ಸಂಪುಟಗಳನ್ನು ಓದಿದಾಗ
ಒಮ್ಮೆ ಹೂದೋಟದಲ್ಲಿ ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲ್ಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ – ಮಂಕುತಿಮ್ಮ.
ಎಲ್ಲ ಸನ್ಮಾನಗಳನ್ನು ದೂರವಿರಿಸ ಬಯಸಿದ ಡಿ.ವಿ.ಜಿ.ಯವರಿಗೆ ಸಹಜವಾಗಿಯೇ ಕೆಲವಾರು ಗೌರವಗಳು ಬಂದವು. ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟೊರೇಟ್, ‘ಶ್ರೀಮದ್ ಭಗವದ್ಗೀತಾ ತಾತ್ಪರ್ಯಕ್ಕೆ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಗರಿಕರಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ, ‘ರಾಷ್ಟ್ರಾಧ್ಯಕ್ಷರ ‘ಪದ್ಮಭೂಷಣ’ ಪ್ರಶಸ್ತಿ ಇವುಗಳು ಪ್ರಮುಖವಾದುದು. ಆದರೆ ಡಿ.ವಿ.ಜಿ.ಯವರ ಎಣಿಕೆಯಲ್ಲಿ ಅವರಿಗೆ ಸಂದ ಬಹು ದೂಡ್ಡ ಪ್ರಶಸ್ತಿ ಎಂದರೆ ಜನಾದರಣೆ. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರನ್ನು ಅಭಿನಂದಿಸಲು ಮನೆಗೆ ಹೋದಾಗ ಬಸವಪ್ಪ ಶಾಸ್ತ್ರಿಗಳ ಈ ಪದ್ಯ ನೆನೆದರಂತೆ –
ಅರಸರ ಕುಡುವಾ ಕಾರ್ತ-
ಸ್ವರ ಕಂಕನಮಿರ್ಕೆ, ರಸವನಾಸ್ವಾದಿಸಿ ಕಾ-
ವ್ಯರಸಿಕರೊಲಿದೀವಾ ಭಾ-
ಸುರತರ ಕಣ್ ಕಣಮೆ ಕವಿಗೆ ಕಂಕಣಮಲ್ತೇ.
ಈ ಮಹಾನ್ ಚೇತನರು ಈ ಲೋಕವನ್ನಗಲಿದ್ದು ಅಕ್ಟೋಬರ್ 7, 1975ರಲ್ಲಿ. ಈ ಮಹಾನ್ ತಪಸ್ವಿ, ಮಹಾನ್ ಸಾಧಕರ ಚರಣಗಳಲ್ಲಿ ಈ ಕಿರುಪ್ರಯತ್ನವನ್ನು ಅರ್ಪಿಸುತ್ತ ಅವರ ಆಶೀರ್ವಾದವನ್ನು ಭಕ್ತಿಯಿಂದ ಬೇಡುತ್ತೇನೆ.
ಈ ಲೇಖನ ಎಸ್. ಆರ್. ರಾಮಸ್ವಾಮಿ ಅವರ ಸಾಲುದೀಪಗಳು ಕೃತಿಯಲ್ಲಿನ ಬರಹದ ಆಧಾರಿತ