e-ಸುದ್ದಿ ಮಸ್ಕಿ
ಮಸ್ಕಿ ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಏ.17ಕ್ಕೆ ಉಪ ಚುನಾವಣೆಯನ್ನು ಘೋಷಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆರ್.ಬಸನಗೌಡ ತುರ್ವಿಹಾಳ ಬುಧವಾರದಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.
ತಾಲೂಕಿನ ಗುಡಗಲದಿನ್ನಿ ಮತ್ತು ಹಂಪನಾಳ ಗ್ರಾಮಕ್ಕೆ ಪ್ರಚಾರಕ್ಕೆಂದು ತೆರಳಿದಾಗ ಗುಡಗಲದಿನ್ನಿ ಗ್ರಾಮಸ್ಥರು ಆರ್.ಬಸನಗೌಡ ತುರ್ವಿಹಾಳ ಅವರಿಗೆ ಉಪ ಚುನಾವಣೆಯ ಖರ್ಚು-ವೆಚ್ಚಕ್ಕಾಗಿ ಗ್ರಾಮಸ್ಥರೆಲ್ಲಾ ಸೇರಿಕೊಂಡು 21 ಸಾವಿರ ರೂ.ಗಳನ್ನು ಹಾಗೂ ಹಂಪನಾಳ ಗ್ರಾಮದ ಮುತೈದರಿಂದ 5001 ರೂ.ಗಳ ದೇಣಿಗೆಯನ್ನು ಬುಧವಾರ ನೀಡಿದ್ದಾರೆ.
ಉಪ ಚುಣಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಕ್ಷೇತ್ರದ ಪ್ರತಿಯೊಂದು ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಅಭ್ಯರ್ಥಿಯ ಪರವಾಗಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾ. 20 ಕ್ಕೆ ಮಸ್ಕಿ ಪಟ್ಟಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮನದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವದರ ಜತೆಗೆ ಉಪ ಚುನಾವಣೆಯ ಪ್ರಚಾರವನ್ನು ಕೈಗೊಂಡಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಗಮನದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭರದಿಂದ ಜನರನ್ನು ಕರೆತರಲು ಪ್ರತಿಯೊಂದು ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಮಸ್ಕಿ ಪಟ್ಟಣದ ಪೊಲೀಸ ಠಾಣೆ ಪಕ್ಕದ ಬಯಲು ಜಾಗದಲ್ಲಿ ಸಾರ್ವಜನಿಕ ಸಭೆ ನಡೆಸುವ ಉದ್ದೇಶದಿಂದ ಬೃಹತ್ ಪೆಂಡಾಲ್, ಕಮಾನುಗಳನ್ನು ಕಟ್ಟುವ ಕೆಲಸನಡೆದಿದೆ. ದಿನದಿಂದ ದಿನಕ್ಕೆ ಪ್ರಚಾರದ ಬಿರುಸು ನಡೆಯುತ್ತಿದೆ.