ಸ್ತ್ರೀ ವಾದಿ ಶರಣೆ ಸತ್ಯಕ್ಕ

ಸ್ತ್ರೀವಾದಿ ಶರಣೆ ಸತ್ಯಕ್ಕ

ಸತ್ಯಕ್ಕ ೧೨ ನೇಶತಮಾನದ ಶ್ರೇಷ್ಠ ನಿಷ್ಠುರ ಅಭಿವ್ಯಕ್ತಿಗೆ ಹೆಸರಾದ ಶರಣೆ.ವಚನ ಚಳುವಳಿಯ ಆಶಯವನ್ನು ನಿರ್ದಿಷ್ಟ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿ ವಚನಗಳ ಮೂಲಕ ಎಚ್ಚರಿಸಿದಾಕೆ.ಅಂದಿನ ಶರಣ ಸಮುದಾಯದಲ್ಲಿ ಆತ್ಮ ಗೌರವದ ಪ್ರಶ್ನೆ ಬಂದಾಗ ಮೌನ ಮುರಿದು ಪ್ರತ್ಯುತ್ತರ ನೀಡಿದಾಕೆ.ಅಂದು.ಪುರುಷ ವರ್ಗದ ಶೋಷಣೆ ಯನ್ನು ನೋಡುತ್ತಾ ಅನುಭವಿಸಿದಂತಾ ಸಮಯದಲ್ಲಿ ಬಂಡಾಯದ ಪ್ರತಿಭಟನೆಯ ಮೂಲಕ ಸಿಡಿದೆದ್ದಳು. ನಡೆ ನುಡಿಯಲ್ಲಿ ಸಾಮರಸ್ಯ ಸಾಧಿಸಿ ಶರಣ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡದ್ದನ್ನು ಅವಳ ವಚನಗಳಲ್ಲಿ ಕಾಣಬಹುದು.

ಅಡಿಗಡಿಗೆ ನಿಮ್ಮ llಶರಣರೆದೆಗೆ ಶರಣೆಂಬೆ

ನುಡಿಯ ಭೋದೆಯ ಮಾತುll ಅನ್ಯನುಡಿಯ.

ಸಮನಿಸದು ll ಒಡೆದೆಲು ಶಿರ ಬಿಗಿದು ಮಡು

ಗಟ್ಟಿ ಕಂಬನಿಯ ಕಡಲೊಳಗೆ ll ತೇಗಾಡುತೆಂದಿ

ಪ್ಪನೋ ll ಮೃಡ ಶರಣೆಂಬ ಶಬ್ದಒಡಲುಗೊಂಡು

ಶಂಬುಜಕ್ಕೇಶ್ವರll ದೇವರಿಗೆ ಶರಣೆನುತ

ಮೈಮರಿದೆಂಪ್ಪೆನೊll
.
ಏಕದೇವೋಪಾಸಕಳಾದ ಸತ್ಯಕ್ಕ ಶಿವನ ಚಿತ್ ಚೈತನ್ಯವನ್ನು ವಿಶ್ವಾತ್ಮಕವಾಗಿ ಹಂಚಿಕೊಡಿದ್ದಾಳೆ. ಶಿವನ ಮೂಲಕ ಆನಂದವಾದ ಭಕ್ತಿ ಯನ್ನು ಸ್ವೀಕರಿಸಿ ಪರಮಾನಂದವನ್ನು ಪಡೆದು ಕೊಳ್ಳುವ ಧಾವಂತ ಆಕೆಗೆ.ಶರಣ ಧರ್ಮದ ಮೂಲಕ ಸರ್ವ ವ್ಯಾಪಕತೆಯನ್ನು ಪಡೆದು ಕೊಂಡು ಶಿವನಲ್ಲಿ ವಿಲೀನವಾಗುವ ಮನಸ್ಥಿತಿ ಆಕೆಯದು,ಅವನೇ ಕರುಣಿಸಿದ ಈ ಜನ್ಮಕ್ಕೆ ಶರಣೆನ್ನುತ್ತಾಳೆ. ತನ್ನ ಶಿವ ಭಕ್ತಿಯ ಕಥನಕ್ಕೆ “ಮೃಡ ಶರಣೆಂಬ ಶಬ್ದ ಒಡಲುಗೊಂಡು ಶಂಭು ಜಕ್ಕೇಶ್ವರ ‘ಇದು ಸತ್ಯಕ್ಕನ ಅಂತರಂಗದ ಸತ್ಯವೂ ಆಗಿದೆ.

ಇವಳ ಶಿವ ನಿಷ್ಠೆ ಭಕ್ತಿಯ ಪ್ರಾಮಾಣಿಕತೆ ಶಿಷ್ಟ ಮತ್ತು ಜನಪದ ಸಾಹಿತ್ಯ ಗಳೆರಡರಲ್ಲೂ ಕಾಣಬಹುದು. ಆದಯ್ಯ ತನ್ನ ಎರಡು ವಚನಗಳಲ್ಲಿ ಈಕೆಯ ಸ್ತುತಿ ಮಾಡಿದ್ದಾನೆ.ಭೈರವೇಶ್ವರ ಕಾವ್ಯ, ಶಿವತತ್ವ ಚಿಂತಾಮಣಿ ,ಚೆನ್ನಬಸವ ಪುರಾಣ, ಪಾಲ್ಕುರುಕಿ ಸೋಮೇಶ್ವರ ಪುರಾಣ , ಬಸವರಾಜ ವಿಜಯಂ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ,ಪುರಾತರ ದೇವಿಯರ
ತ್ರಿವಿದಧ , ಸರ್ವಜ್ಞನ ವಚನ ಮುಪ್ಪಿನ ಷಡಕ್ಷರಿಯ ಹಾಡು ಹಾಗೂ ಜನಪದರ ಗರತಿಯ ಹಾಡುಗಳಲ್ಲೂ ಈ ಶರಣೆಗೆ ಸಂಬಂದಿಸಿದ ಕಥೆಗಳಿಂದ ತಿಳಿದು ಬರುತ್ತದೆ.

ಸತ್ಯಕ್ಕನ ೨೭ ವಚನಗಳು ಲಭ್ಯವಾಗಿವೆ. ಶಂಬು ಜಕ್ಕೇಶ್ವರ ಇವಳ ಅಂಕಿತವಾಗಿದೆ. ಸತ್ಯಕ್ಕನ ಜನ್ಮಸ್ಥಳ ವಾದ ಜಂಬುಕೇಶ್ವರ ದೇವಾಲಯ ವಿದ್ದು ಅವನೇ ಆಕೆಯ ಆದಿ ದೈವವಾಗಿದ್ದಾನೆ. ಸತ್ಯಕ್ಕನ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳ ಕೊಪ್ಪದ ಸಮೀಪ ಹಿರೇಜಂಬೂರು. ಶಿವಭಕ್ತರ ಮನೆಯ ಅಂಗಳ ಕಸ ಗುಡಿಸುತ್ತಾ ಶಿವಭಕ್ತಿಯನ್ನು ಆಚರಿಸುವುದು ಇವಳ ಕಾಯಕವಾಗಿತ್ತು. ಶಿವನಲ್ಲದೆ ಅನ್ಯದೈವ ಶಬ್ದವ ಕೇಳೆ ನೆಂದು ಇವಳ ಪ್ರತಿಜ್ಞೆಯಾಗಿತ್ತು.

ಅಂದಿನ ವಚನಸಾಹಿತ್ಯ ಕಾಲದ ಮಹಿಳೆಯರು ಸಮಾಜವನ್ನು ಮರು ಸಂಘಟನೆ ಮಾಡಲು ವ್ಯವಸ್ಥಿತವಾದ ವಚನಗಳ ಮೂಲಕ ಹೇಳಿಕೆ ಕೊಟ್ಟರು.ಮೂಲತಃ ಲಿಂಗ ಸಮಾನತೆಯನ್ನು ತಂದರಲ್ಲದೆ ಸ್ತ್ರೀ ಪುರುಷರ ನಡುವೆ ಲಿಂಗ ಬೇಧವನ್ನು ತಿರಸ್ಕರಿಸಿದರು.ಹೆಣ್ಣು ಗಂಡು ಎನ್ನುವುದು ಜೈವಿಕ ಭಿನ್ನತೆ ಆತ್ಮದ ಪ್ರಶ್ನೆಗೆ ಬೇಧವಿಲ್ಲ .ಅದು ಉಭಯ ಲಿಂಗಿ ಎನ್ನುವ ಪ್ರತಿಪಾದನೆ. ಇಂದಿನ ಸ್ತ್ರೀ ವಾದದ ಮೂಲಭೂತ ಪ್ರಶ್ನೆ ಇದೇ ಎಂದು ಗಮನಿಸ ಬೇಕು.

ಸತ್ಯಕ್ಕನ ಈ ವಚನ..

ಮೊಲೆ ಮುಡಿ ಇದ್ದುದೆ llಹೆಣ್ಣೆಂದು

ಪ್ರಮಾಣಿಸಲಿಲ್ಲllಕಾಸೆ ಮೀಸೆ ಕಠಾರವಿದ್ದುದೆ

ಗಂಡೆಂದು ಪ್ರಮಾಣಿಸಲಿಲ್ಲll ಅದು ಜಗದ

ಹಾಹೆll ಬಲ್ಲವರ ನೀತಿಯಲ್ಲll ಏತರ ಹೆಣ್ಣಾ

ದಡೂ ll ಮಧುರವೇ ಕಾರಣ ll ಅಂದವಿಲ್ಲದ

ಕುಸುಮಕ್ಕೆ llವಾಸನೆಯೇ ಕಾರಣllಇದರಂದವ

ನೀನೇ ಬಲ್ಲೆll ಶಂಬು ಜಕ್ಕೇಶ್ವರ.

ಎನ್ನುವ ತಾತ್ವಿಕ ವಿವೇಚನೆಯು ಸ್ತ್ರೀ ಪುರುಷರ ಸಮಾನತೆಯ ಸಂಬಂಧವನ್ನು ಜೈವಿಕ ನೆಲೆಯಲ್ಲಿ ಮರು ರಚಿಸಿದರು.ಲಿಂಗ ಸಮಾನತೆಯ ಹೋರಾ ಟದಲ್ಲಿ ವಚನಕಾರರು ಹೆಣ್ಣಿನ ಸಾಂಪ್ರದಾಯಿಕ ಮಾದರಿಗಳನ್ನು ಮುರಿದರು. ಮಹಿಳೆ ಜೀವ ಶಾಸ್ತ್ರೀಯ ಘ್ಟಟಕದ ಮೂಲಕ ತಾಯ್ತನಕ್ಕೆ ಗೌರವವನ್ನು ಕೊಟ್ಟರು. ಅಬ್ಬೆ ಅವ್ವೆ ಅಕ್ಕಾ ಎನ್ನುವ ಗೌರವ ಪದ ಪ್ರಯೋಗಿಸಿ ದೈವತ್ವದ ಸ್ಥಾನವನ್ನು ಕೊಟ್ಟರು.
ಸತ್ಯಕ್ಕಈ ಜಗತ್ತಿಗೆ ಹೆಣ್ಣಿನ ಅನಿವಾರ್ಯತೆ ಯನ್ನು ಎಚ್ಚರಿಸುತ್ತಾಳೆ.”ಏತರ ಹೆಣ್ಣಾದರೂ ಮಧುರವೇ ಕಾರಣವೆಂದು” ತನ್ನ ಆತ್ಮಾವ ಲೋಕನದ ಪ್ರತಿಕ್ರಿಯೆಯಲ್ಲಿ ಶರಣ ಭಕ್ತಿಯ ಅನುಸಂಧಾನಕ್ಕೆ ದಾರಿ ಮಾಡಿ ಕೊಡುತ್ತಾಳೆ. ಅನುಭಾವಕ್ಕೆ ಲಿಂಗ ಬೇಧವಿಲ್ಲವೆಂದು ಎಚ್ಚರಿಸುತ್ತಾಳೆ. ಹೆಣ್ಣು ಪುರುಷ ಸಾಧನೆಗೆ ಅಡ್ಡಿ ಎನ್ನುವುದನ್ನು ನಿರಾಕರಿಸಿ ಹೆಣ್ಣನ್ನು ಅಪಮೌಲ್ಯದಿಂದ
ಬಿಡುಗಡೆ ಗೊಳಿಸಿ ತನ್ನ ವಚನದಲ್ಲಿ ನಿರೂಪಿಸಿದ್ದಾಳೆ.” ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ” ಎನ್ನುವ ಸತ್ಯಕ್ಕ ಭೌತಿಕ ಶರೀರಕ್ಕಿಂತ ಒಳಗಡ ಅಂತರಂಗದ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲಾ. ಮನವೇ ಲಿಂಗವಾದಾಗ ಶಿವಭಕ್ತಿಯೇ ಶ್ರೇಷ್ಠ .ಅದುವೇ ಕುಸುಮ ವಾಸನೆಯೆಂದು ಮಾನಸಿಕ ವಿಶ್ಲೇಷಣೆ ಕೊಡುತ್ತಾಳೆ. ಸ್ತ್ರೀ ಪುರುಷರ ಸಂಬಂಧ ಅವರ ದೇಹಗಳಲ್ಲಿ ವ್ಯತ್ಯಾಸವೇ ಹೊರತು ಆತ್ಮದ ನೆಲೆಯಲ್ಲಿ ಅಲ್ಲ.

೧೨ ನೇ ಶತಮಾನದಲ್ಲಿ ಶರಣ ಕ್ರಾಂತಿಯ ಪ್ರೇರಣೆ ಬೆಂಬಲ ,ಭಕ್ತಿಯ ವಚನಗಳ, ಯಶಸ್ಸಿರುವುದರಿಂದ ಅಂದಿನ ಶರಣೆಯರು ಅಭಿವ್ಯಕ್ತಿಸಿದ್ದರು.ಲಿಂಗ ಸಮಾನತೆಯ ದೃಷ್ಟಿಯಿಂದ ಇವರು ಗಮನ ಸೆಳೆದಿದ್ದಾರೆ. ಅಕ್ಕಮಹಾದೇವಿಯನ್ನು ಬಿಟ್ಟರೆ ಬೇರೆ ವಚನ ಕಾರ್ತಿಯರನ್ನು ಸ್ಥೂಲವಾಗಿ ಅಭ್ಯಾಸವನ್ನು ಕೈಗೆತ್ತಿಕೊಳ್ಳುತ್ತೇವೆಯೇ ವಿನಹ ಪರಿಪೂಣ೯ ವಾಗಿ ಚರ್ಚೆಗೆ ಒಳಗಾಗಿದ್ದು ಬಹಳ ಕಡಿಮೆ. ಆದರೆ ಸತ್ಯಕ್ಕ ಸ್ತ್ರೀ ಪ್ರಧಾನ ನೆಲೆಯಿಂದ ಪ್ರಶ್ನಿಸಲ್ಪಟ್ಟವಳು.ತನ್ನ ಮೇರು ವ್ಯಕ್ತಿತ್ವದಿಂದ ಗುರಿತಿಸಿಕೊಡಿದ್ದಾಳೆ. ದೇವರು ಧರ್ಮದ ಹೆಸರಿನಲ್ಲಿ ಮತ್ತು ಅಧಿಕಾರ ಲಂಚ ಭ್ರಷ್ಟಾಚಾರದ ನೆಪದಲ್ಲಿ ತನ್ನ ಕರಾಳ ಸ್ವರೂಪವನ್ನು ತೋರಿಸುತ್ತಲೇ ಇರುತ್ತದೆ. ಕಸ ಗುಡಿಸುವ ಸತ್ಯಕ್ಕ ತನ್ನ ಪ್ರಾಮಾಣಿಕತೆಯನ್ನು ಈ ವಚನದಲ್ಲಿ ಹೀಗೆ ಹೇಳಿದ್ದಾಳೆ.

ಲಂಚ ವಂಚನಕ್ಕೆ llಕೈಯಾನದ ಭಾಷೆ

ಬಟ್ಟೆಯಲ್ಲಿ ಹೊನ್ನ ವಸ್ತ್ರll ಬಿದ್ದಿದ್ದರೆ

ನಾನು ಕೈಮುಟ್ಟಿll ಎತ್ತಿದೆನಾದರೆ

ನಿಮ್ಮಾಣೆ llನಿಮ್ಮಾಣೆ ನಿಮ್ಮಪ್ರಮಥರ

ಆಣೆllಇದೇನು ಕಾರಣವೆಂದರೆ ನೀವಿಕ್ಕಿದ

ಬಿಕಷೆ ದಲ್ಲಿಪ್ಪೆನಾಗಿ ll ಇಂತಲ್ಲದೆ ನಾನು

ಅಳಿಮನವ ಮಾಡಿll ಪರದ್ರವ್ಯಕ್ಕೆ ಆಸೆ

ಮಾಡಿದೆನಾದರೆ llನೀನಾಗಲೆ ನರಕದಲ್ಲಿ

ಅದ್ದಿ ನೀನೆದ್ದುll ಹೋಗಾ ಶಂಭು ಜಕ್ಕೇಶ್ವರ.

ಅಂದಿನ ಭ್ರಷ್ಟಾಚಾರದ ಕುರಿತಾಗಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತನ್ನ ವಚನದಲ್ಲಿ ವಿವೇಚಿಸಿದ್ದಾಳೆ.ಭ್ರಷ್ಟಾಚಾರವು ವ್ಯಕ್ತಿ ನಿಯಮಾವಳಿಗೆ ಬಾಹಿರವಾದದ್ದು.” ಲಂಚವಂಚನಕ್ಕೆ ಕೈಯಾನದ ಭಾಷೆ “ನ್ಯಾಯ ಬದ್ದವಾಗಿ ಸಮಾಜದಲ್ಲಿ ಹೆಚ್ಚಿನ ಸೌಲಭ್ಯ ಅನು ಕೂಲತೆ ಇದ್ದರೂ ಲಂಚ ಆಮಿಷಕ್ಕೆ ಒಳಗಾಗು ತ್ತಾರೆ. ಆದರೆ ಕಸ ಗುಡಿಸುವ ಸತ್ಯಕ್ಕ ಲಂಚದ ವಿರುದ್ದ ಪ್ರತಿಭಟಿಸುತ್ತಾಳೆ. ಇಂಥಹ ಸಾಮಾನ್ಯ ಮಹಿಳೆಗೆ ಪ್ರಾಮಾಣಿಕ ವ್ಯಕ್ತಿತ್ವ ನಿರ್ಮಾಣ ಮಾಡಿದ್ದು ಅಂದಿನ ವಚನ ಚಳುವಳಿಯ ಪ್ರೇರಣೆ ಎನ್ನುವುದು ದಾಖಲಾರ್ಹ. ಕಾಯಕದಲ್ಲಿ ಶಿವನನ್ನು ಕಂಡಂಥಹ ಈಕೆ ದುಡಿಯುವ ವರ್ಗದ ಪ್ರತಿನಿಧಿಯಾಗಿದ್ದಾಳೆ.

ಬೆಲೆಯುಳ್ಳ ಬಂಗಾರ ಆಭರಣ ವಸ್ತ್ರ ದಾರಿಯಲ್ಲಿ ಸಿಕ್ಕರೂ ನಾನು ಮುಟ್ಟುವುದಿಲ್ಲವೆಂದು ಜನಪರ ಪರವಾಗಿ ಮಾತನಾಡುತ್ತಾಳೆ. ಅಂದಿನ ಆರ್ಥಿಕತೆಗೆ ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಒಂದು ಪ್ರಮುಖ ಅಡಚಣೆಯೆಂದು ನಂಬಿದಾಕೆ. ಕೂಲಿ ಕೆಲಸ ಮಾಡುವ ಸತ್ಯಕ್ಕ ಕಾರ್ಮಿಕ ವಲಯ ಪರವಾಗಿ “ನಾನು ಕೈ ಮುಟ್ಟಿ ಎತ್ತಿದೆ ನಾದರೆ ನಿಮ್ಮಣೆ ನಿಮ್ಮ ಪ್ರಮಥರ ಆಣೆ” ಎನ್ನುವ ಪ್ರತಿಜ್ಞೆ ಮೂಲಕ ಎಚ್ಚರಿಸುತ್ತಾಳೆ. ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ ಎನ್ನುವಲ್ಲಿ ಲಂಚ ಮತ್ತು,ಭ್ರಷ್ಟಾಚಾರ ನಿಗ್ರಹಕ್ಕೆ ಶರಣ ಪ್ರಮಥರೇ ಅಧಿಕಾರಿಗಳು.ತಪ್ಪಿ ನಡೆದರೆ ಶಿವ ಸ್ವರೂಪಿಗಳಾದ ಪ್ರಮಥರು ಶಿಕ್ಷ ವಿಧಿಸುವರು. ಲಂಚರಹಿತ ಸಮಾಜದ ಕನಸು ನನಸಾಗಿಸುವ ಆಶಯ ಹೊತ್ತಾಕೆ ಸತ್ಯಕ್ಕಳಾಗಿದ್ದಾಳೆ.

ಅರ್ಚನೆ ಪೂಜನೆ ನೇಮವಲ್ಲll ಮಂತ್ರ ತಂತ್ರ

ನೇಮವಲ್ಲ ll ಧೂಪ ದೀಪದಾರತಿ ನೇಮವಲ್ಲ

ಪರಧನ ಪರ ಸ್ತ್ರೀ llಪರ ದೈವಂಗಳಿಗೆ ಅರಿ

ದಪ್ಪದೆ ನೇಮll ಜಂಬುಕೇಶ್ವರನಲ್ಲಿ ಇವು

ಕಾಣಿರಣ್ಣಾllನಿತ್ಯ ನೇಮ ಎನ್ನುತ್ತಾಳೆ.

ಶರಣರ ನೇಮ ನಿಯಮಗಳು ವ್ಯಕ್ತಿಯ ವಯಕ್ತಿಕ ಬದುಕಿಗೆ ಸಂಬಂಧಿಸಿದ್ದು.ನೇಮ ಎನ್ನುವುದು ಪ್ರಾಮಾಣಿಕತೆಯಾಗಿದೆ.” ಸತ್ಯವಲ್ಲದವರಿಗೆ ನಿತ್ಯನೇಮ ವೆಲ್ಲಿಯದೋ” ಅರ್ಚನೆ ಪೂಜೆ ನೇಮವಲ್ಲ .ಮಂತ್ರ ತಂತ್ರ ನೇಮವಲ್ಲ.ಪರ ಸ್ತ್ರೀ ಪರಧನಕ್ಕೆ ಆಶೆ ಪಡದಿರುವುದೇ ನೇಮವೆಂಬ ಎಚ್ಚರಿಕೆ ಆಕೆಯದು. ಪರ ಸ್ತ್ರೀ ವ್ಯಾಮೋಹ ಚಾರಿತ್ರ್ಯಹೀನ ಎನ್ನುವುದು ಆಕೆಯ ಆರೋಪ.ದುರಾಚಾರವು ಮನುಷ್ಯನ ವ್ಯಕ್ತಿತ್ವಕ್ಕೆ ಕಳಂಕವಾದದ್ದು.
ನೇಮ ಮತ್ತು ಸದಾಚಾರದ ವ್ಯಕ್ತಿಗಳ ಅವಶ್ಯಕತೆ ಯನ್ನು ಅಪೇಕ್ಷಿಸುತ್ತಾಳೆ.ನೇಮವಿಲ್ಲದ ವ್ಯಕ್ತಿಯು ದೇವರ ಮುಂದೆ ಅಪರಾಧಿಯಾಗುತ್ತಾನೆ. ಹೀಗಾಗಿ ಸತ್ಯಕ್ಕನ ಮಾತಿನಂತೆ .ಏಕೆನ್ನ ಬಾರದ ಭವಂಗಳಲ್ಲಿ ಬಂದಿಸಿದೆ. ಏಕೆನ್ನ ಘೋರ ಸಂಸಾರದಲ್ಲಿರಿಸಿದೆ.ಎನ್ನುವ ನೋವಿನ ಮಾತುಗಳನ್ನು ಗಮನಿಸ ಬೇಕು. ಶಿವನೇ ಪ್ರಾಣಲಿಂಗವಾಗಿ ಸ್ತ್ರೀ ಸಂವೇದನೆಯ ಉನ್ನತೀಕರಣವನ್ನು ಪರಿಚಯಿಸುತ್ತವೆ ಸ್ತ್ರೀ ವಚನಕಾರ್ತಿಯರ ಮಹಿಳಾಪರ ವಾದಗಳು ವಚನಗಳ ವಿಶ್ಲೇಷಣೆ ಯಲ್ಲಿ ಭದ್ರ ಅಡಿಪಾಯ ವನ್ನು ಹಾಕಿವೆ. ನಮಗೆ ನೈತಿಕ್ಕ ಮಾರ್ಗದ ಸಮಾಜವನ್ನು ನಿರ್ಮಿಸುವಲ್ಲಿ ಭಿನ್ನ ಆಯಾಮಗಳ ಮಾಹಿತಿಯನ್ನು ನೀಡುತ್ತವೆ. ಈಕೆಯ ಹಲವಾರು ವಚನಗಳು ಶಿವಭಕ್ತಿ ಸದ್ಭಕ್ತರಕುರಿತಾದ ವಚನಗಳು ಸತಿ ಪತಿ ಭಾವ.. ಸದಾಚಾರದ ಕಲ್ಪನೆ..ಡಾಂಭಿಕ ಗುರು ಶಿಷ್ಯರ ಜಂಗಮರ ಕುರಿತು ,ಭವಿಗಳ ಟೀಕೆ, ಸ್ತ್ರೀ ಪುರುಷರ ಸಮಾನತೆ, ಈ ಎಲ್ಲಾ ಅಂಶ ಗಳು ವಚನ ಚರಿತ್ರೆಯ ಸ್ತ್ರೀ ಧೋರಣೆಯ ಪ್ರಾತಿನಿಧಿಕ ಶರಣೆಯಾಗಿ ಸತ್ಯಕ್ಕ ನಮಗೆ ಕಂಡು ಬರುತ್ತಾಳೆ.


ಡಾ.ಸರ್ವಮಂಗಳ ಸಕ್ರಿ,
ಕನ್ನಡ ಉಪನ್ಯಾಸಕರು, ರಾಯಚೂರು.

Don`t copy text!