e-ಸುದ್ದಿ, ಮಸ್ಕಿ
ಜೆಡಿಎಸ್ ಮತ್ತು ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ಅಭಿವೃದ್ದಿಗೆ ಮನ್ನಣೆ ಸಿಗಲಿಲ್ಲ ಮತ್ತು ರಾಜ್ಯದ ಜನರ ಭಾವನೆ ಪ್ರಧಾನಿ ಮೋದಿ ಮತ್ತು ರೈತಪರ ಹೊರಾಟಗಾರ ಬಿ.ಎಸ್.ಯಡಿಯೂರಪ್ಪ ಪರ ಇದ್ದುದ್ದನ್ನು ಮನಗಂಡು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ತೃಪ್ತಿ ನನಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಾನು ಮೊದಲಿನಿಂದಲು ಕ್ಷೇತ್ರದ ಅಭಿವೃದ್ದಿಗಾಗಿ ಪಣ ತೊಟ್ಟಿರುವೆ. ಅಭಿವೃದ್ದಿಗಾಗಿ ಮತ್ತು ನಮ್ಮ ಕಾರ್ಯಕರ್ತರ ಮುಖಂಡರ ಒತ್ತಾಯದ ಮೇಲೆ ಪಕ್ಷ ಬದಲಿಸಿದ್ದೇನೆ ಆಗಲಿ ಸ್ವಹಿತಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಚುಚ್ಚಿದರು.
ಕಳೆದ ಎರಡು ವರ್ಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮುಖ್ಯಮಂತ್ರಿ ಯಡಿಯೂರಪ್ಪ ಕ್ಷೇತ್ರದ ಅಭಿವೃದ್ದಿಗಾಗಿ ನೂರಾರು ಕೋಟಿ ಅನುದಾನ ನೀಡುವ ಮೂಲಕ ಸ್ಪಂದಿಸಿದ್ದಾರೆ. ಈ ಭಾರಿಯ ಉಪಚುನಾವಣೆಯಲ್ಲಿ ನಾನು ಗೆದ್ದರೆ ರಾಜ್ಯದ ಮಂತ್ರಿಯಾಗಿ ಕ್ಷೇತ್ರಕ್ಕೆ ಮತ್ತಷ್ಟು ಕೆಲಸ ಮಾಡಲು ಸಹಕಾರಿಯಾಗುತ್ತದೆ ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಮತದಾರರ ಮನ ಒಲಿಸಿ ಮತದಾನ ಮಾಡುವಂತೆ ಮನವಿ ಮಾಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ ದೇಶದಲ್ಲಿ ಗುಲಾಮರು ಯಾರು ಸ್ವಾಭಿಮಾನಿಗಳು ಯಾರು ಎಂಬುದರ ಬಗ್ಗೆ ಮಾಜಿ ಸಿ.ಎಂ.ಸಿದ್ಧರಾಮಯ್ಯ ಅವರು ಬಹಿರಂಗ ಸಭೆಯಲ್ಲಿ ಚರ್ಚೆಗೆ ಬರಲಿ. ವಿದೇಶಿ ಮಹಿಳೆಯನ್ನು ಕಾಂಗ್ರೆಸ್‍ನವರು ಗುಲಾಮಗಿರಿ ಪೋಷಿಸಿಕೊಂಡು ಬಂದಿದ್ದಾರೆ ವಿನಾ ಸ್ವಾಭಿಮಾನಿ ಬಿಜೆಪಿಗರು ಅಲ್ಲ ಎಂದು ವ್ಯಂಗವಾಡಿದರು.
ದೇಶವನ್ನು ಕಾಂಗ್ರೆಸ್‍ನ ಒಂದೇ ಕುಟುಂಬದವರು ಅನೇಕ ವರ್ಷ ಆಳ್ವಿಕೆ ನಡೆಸಿದರು. ಅದು ಗುಲಾಮಗಿರಿಯ ಸಂಕೇತವಲ್ಲವೇ? ಕಾಂಗ್ರೆಸ್‍ನಲ್ಲಿ ನಾಯಕರು ಇಲ್ಲವೇ ಎಂದು ಪ್ರಶ್ನಿಸಿದರು.
ಸುರುಪುರ ಶಾಸಕ ರಾಜುಗೌಡ ಮಾತನಾಡಿ ಕಾಂಗ್ರೆಸ್ ಕಸ ಇದ್ದಲ್ಲಿ ಏನೂ ಬೆಳೆಯುವುದಿಲ್ಲ. ಅದಕ್ಕಾಗಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ರಾಜ್ಯದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲು ಕಾರಣರಾಗಿದ್ದಾರೆ ಎಂದರು,.
ಸಂಸದರಾದ ಕರಡಿ ಸಂಗಣ್ಣ, ರಾಜ ಅಮರೇಶ್ವರನಾಯಕ್, ಮಾಜಿ ಸಂಸದ ಕೆ.ವೀರುಪಾಕ್ಷಪ್ಪ, ಶಾಸಕರಾದ ಬಸವರಾಜ ದಡೇಸೂಗೂರು, ಡಾ.ಶಿವರಾಜ ಪಾಟೀಲ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಮಾನಂದ ಯಾದವ, ಶಾಸಕ ಪರಣ್ಣ ಮನವಳ್ಳಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್, ಎನ್.ಶಂಕ್ರಪ್ಪ, ಶರಣಪ್ಪಗೌಡ ಜಾಡಲದಿನ್ನಿ, ರೈತಮುಖಂಡ ಹನುಮನಗೌಡ ಬೆಳಗುರ್ಕಿ ಹಾಗೂ ಇತರರು ಇದ್ದರು.