e-ಸುದ್ದಿ, ಮಸ್ಕಿ
ಹೊಳಿಮೆ ಹುಣ್ಣಿಮೆ ಕಳೆದು ಯುಗಾದಿ ಸಮೀಪಿಸುತ್ತಿದ್ದಂತೆ ಮಸ್ಕಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಕುಡಿಯುವ ನೀರಿನ ತತ್ವಾರ ಸಹಜವೆಂಬಂತೆ ಕಾಣಿಸಿಕೊಳ್ಳುತ್ತಿದೆ.
ಮಸ್ಕಿ ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗುಂಟ ಇರುವ ಹಳ್ಳಿಗಳಲ್ಲಿ ಮುಂಜಾಗೃತ ಕ್ರಮವಾಗಿ ಕಾಲುವೆ ನೀರನ್ನು ಕೆರೆಗೆ ತುಂಬಿಸಿಕೊಂಡು ಬೇಸಿಗೆಯ ಬಿಸಿಲಿನ ತಾಪಕ್ಕೆ ಕೊಂಚ ದಾಹ ತಣಿಯುವಂತೆ ತುಂಗಭದ್ರೆ ಆಸರೆಯಾಗಿದ್ದಾಳೆ.
ಆದರೆ ನೀರಾವರಿಯಿಂದ ವಂಚಿತವಾದ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಗಗನ ಕುಸುಮವಾಗಿದ್ದು ಆರ್ಸೆನಿಕ್ ನೀರೆ ಗತಿಯಾಗಿದೆ. ತಾಲೂಕಿನಲ್ಲಿ ಒಟ್ಟು 192 ಹಳ್ಳಿಗಳಿದ್ದು ನೂರಕ್ಕೂ ಹೆಚ್ಚುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.
ಶುದ್ಧ ಕುಡಿಯುವ ನೀರಿನ ಯೋಜನೆಯ ಘಟಕಗಳು ಕಾಟಚಾರಕ್ಕೆ ಎಂಬಂತೆ ಇವೆಯಾಗಲಿ ಶುದ್ಧ ಕುಡಿಯುವ ನೀರು ಗಗನ ಕುಸುಮವಾಗಿವೆ. ಕುಡಿಯುವ ನೀರಿನ ಬಹುಗ್ರಾಮ ಯೋಜನೆ ಪ್ರಗತಿ ಹಂತದಲ್ಲಿದ್ದು ಪೂರ್ಣಗೊಳ್ಳುವುದು ಯಾವಾಗ ಎಂಬ ಯಕ್ಷ ಪ್ರಶ್ನೆಯಾಗಿದೆ.
ತಾಲೂಕಿನಲ್ಲಿ 44 ಕೆರೆಗಳಿಗೆ ತುಂಗಭದ್ರಾ ಕಾಲುವೆಯ ನೀರನ್ನು ಸಂಗ್ರಹಿಸಿದರೆ ಉಳಿದ ಕೆರೆಗಳಲ್ಲಿ ನೀರಿಲ್ಲದೆ ದನ ನಿಲ್ಲಿಸುವ ಕೊಂಡವಾಡಗಳಾಗಿವೆ. ಕೆಲ ಹಳ್ಳಿಹಗಳ್ಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಟ್ಟಲಾಗಿದೆ. ಆದರೆ ನೀರು ಪೂರೈಕೆ ಸ್ಥಗಿತವಾಗಿವೆ. ಕೆಲ ಕಡೆ ಕುಡಿಯುವ ನೀರಿನ ಪ್ಲಾಂಟ್‍ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಇನ್ನೂ ಕೆಲವು ಉದ್ಘಾಟನೆಯಾಗದೆ ಶಬರಿಯಂತೆ ಕಾಯುವ ಸ್ಥಿತಿ ಬಂದಿದೆ.
————————————————
ಬೆಳ್ಳಗನೂರಿಗೆ ಆರ್ಸೆನಿಕ್ ನೀರೆ ಗತಿ
ತಾಲೂಕಿನ ಗೌಡನಬಾವಿ ಗ್ರಾ.ಪಂ.ವ್ಯಾಪ್ತಿಯ ಬೆಳ್ಳಿಗನೂರು ಗ್ರಾಮದಲ್ಲಿ 2500 ಜನ ಸಂಖ್ಯೆ ಇದೆ. ಗ್ರಾಮದಲ್ಲಿ ಒಂದೇ ಒಂದು ಬೊರವೆಲ್ಲ ಇದೆ. ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮದಿಂದ 4 ಕೀ.ಮೀ ದೂರು ಇರುವ ಹಳ್ಳದಿಂದ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ. 8.ಕೀ.ಮೀ ದೂರದ ಬಳಗಾನೂರು ಪಟ್ಟಣದಿಂದ ಕೆಲವರು ಮೊಟರ್ ಸೈಕಲ್ ಮೇಲೆ ನೀರು ತರುವುದು ಸಾಮಾನ್ಯವಾಗಿದೆ.
ಕಳೆದ ಎರಡು ವರ್ಷದಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಲಕ್ಷಾಂತರ ರೂ.ವೆಚ್ಚ ಮಾಡಿ ನೀರು ಶುದ್ಧ ಮಾಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಅಧಿಕಾರಿಗಳ ಬೇಜವಬ್ದಾರಿ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ರ್ಷತನದಿಂದ ಸರ್ವಾಜನಿಕರಿಗೆ ವರವಾಗಬೇಕಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗದೆ ಯಂತ್ರಗಳು ತುಕ್ಕು ಹಿಡಿಯುವ ಹಂತದಲ್ಲಿವೆ.
ಜಿ.ಪಂ.ನ ಎಕೆಡಬ್ಲ್ಯೂಎಸ್ ಯೋಜನೆಯಲ್ಲಿ 11 ಲಕ್ಷರೂ ವೆಚ್ಚದ ಒಂದು ಲಕ್ಷ ಲೀಟರ್ ನೀರು ಸಂಗ್ರಹದ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಕಾಮಗಾರಿ ಮುಗಿದು ಅನೇಕ ವರ್ಷ ಕಳೆದರೂ ಉದ್ಘಾಟನೆ ಆಗಿಲ್ಲ. ನೀರು ಪೂರೈಸದಿರುವದಕ್ಕೆ ಕಾರಣಗಳೇನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ.
ಸ್ಥಗಿತವಾದ ಘಟಕಗಳು
ಗೌಡನಬಾವಿ ಪಂಚಯಾತಿಯಲ್ಲಿ 2, ಗೂಡದೂರು ಪಂಚಾಯತಿಯಲ್ಲಿ 5, ವೆಂಕಟಾಪೂರು, ಮೆದಕಿನಾಳ, ಹಾಲಪೂರು ಪಂಚಾಯತಿ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಘಟಕಗಳು ಸ್ಥಗಿತವಾಗಿದ್ದರಿಂದ ಕುಡಿಯುವ ನೀರನ್ನು ಖಾಸಗಿಯವರಿಂದ ಹಣ ಕೊಟ್ಟು ಪಡೆಯುವ ಪರಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಜನರ ಸಹಕಾರ ತಾತ್ಕಲಿಕ
ಪ್ರತಿವರ್ಷವೂ ನೀರಿನ ಸಮಸ್ಯೆ ತಲೆದೂರೂತ್ತಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಮಾತ್ರ ಕಂಡುಕೊಳ್ಳುತ್ತಿಲ್ಲ. ಒಂದು ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದರೆ ಅಧಿಕಾರಿಗಳಿಗೆ, ಮದ್ಯವರ್ತಿಗಳಿಗೆ ಜನ ಪ್ರತಿನಿಧಿಗಳಿಗೆ ಬಂಗಾರದ ತತ್ತಿ ಇಡುವ ಕೊಳಿ ಯಂತಾಗಿದೆ.
ಬೇಸಿಗೆ ಬಂತೆಂದರೆ ಸಾಕು ಅಧಿಕಾರಿಗಳು ಖಾಸಗಿ ಜಮೀನು ಮಾಲಿಕರಿಂದ ಹೆಚ್ಚು ಹೆಚ್ಚು ಹಣ ನೀಡಿ ನೀರು ಖರಿಧಿಸುವುದು ರೂಢಿಯಾಗಿದೆ. ಇದಕ್ಕಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ಮದ್ಯವರ್ತಿಗಳು ಹುಟ್ಟಿಕೊಂಡಿದ್ದು ಹಣ ಮಾಡುವಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
————————-
ಗ್ರಾ.ಪಂ. ನಿರ್ಲಕ್ಷ್ಯ
ಪ್ರತಿಯೊಂದು ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಸರ್ಕಾರ ಲಕ್ಷಾಂತರ ರೂ.ಹಣ ವಿನಿಯೋಗಿಸಿ ಅದರ ಜವಬ್ದಾರಿಯನ್ನು ಗ್ರಾ.ಪಂಗೆ ವಹಿಸಿಕೊಡಲಾಗುತ್ತದೆ. ಆದರೆ ಗ್ರಾ.ಪಂ. ಆಢಳಿತ ಮಂಡಳಿಯ ನಿರ್ಲಕ್ಷತನದಿಂದ ಬಹುತೇಕ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತು ಅಶುದ್ಧ ನೀರು ಕುಡಿಯುವ ಪರಸ್ಥಿತಿ ಬಂದಿದೆ.
—————————————-
ಮಸ್ಕಿ ತಾಲೂಕಿನಲ್ಲಿ 6 ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುವ ಲಕ್ಷಣಗಳಿವೆ. ಗ್ರಾ.ಪಂ.ಪಡಿಓಗಳಿಗಳಿಗೆ ಸೂಚನೆ ನೀಡಿದ್ದು ಯಾವುದೇ ಕಾರಣಕ್ಕೂ ಕೂಡಿಯುವ ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಲಾಗುವದು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಖಾಸಗಿಯವರಿಂದ ಬಾಡಿಗೆ ನೀಡಿ ನೀರು ತರುವದು, ಬೊರವೆಲ್ಲ ಕೊರೆಸುವುದು, ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲಾಗುವದು.
-ಬಾಬು ರಾಠೋಡ, ತಾ.ಪಂ.ಇಒ, ಮಸ್ಕಿ
———————————
ಬೆಳ್ಳಿಗನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ಈ ಬಗ್ಗೆ ಗೌಡನಬಾವಿ ಗ್ರಾ.ಪಂ.ಪಿಡಿಒ ಗಮನಕ್ಕೆ ತಂದರೂ ಪ್ರಯಯೋಜನವಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯ ಭಾಗ್ಯ ಕಾಣುತ್ತಿಲ್ಲ. ನೀರಿನ ಟ್ಯಾಂಕ್ ಪೂರ್ಣಗೊಂಡರೂ ಅದರಿಂದಲೂ ನೀರು ಕೊಡುತ್ತಿಲ್ಲ
-ಅಮರೇಶ ಬೆಳ್ಳಿಗನೂರು ನಿವಾಸಿ