ಲಿಂಗಾಯತ ನಿಜಾಚರಣೆಯ ಹೆಸರಿನಲ್ಲಿ ನವಪೌರೋಹಿತ್ಯ
ಲಿಂಗಾಯತ ಧರ್ಮವು ವರ್ಗ ವರ್ಣ ಆಶ್ರಮ ಲಿಂಗ ಭೇದ ರಹಿತ ಸಾಂಸ್ಥಿಕರಣವಲ್ಲದ ಧರ್ಮವಾಗಿದೆ . ನಾಳೆ ಬರುವುದು ನಮಗಿಂದೇ ಬರಲಿ ಇಂದು ಬರುವುದು ನಮಗೀಗಲೇ ಬರುವುದು ಎಂದ ಬಸವಣ್ಣನವರ ಸೈದ್ಧಾಂತಿಕ ನಿಲುವಿನಲ್ಲಿ ಮೌಢ್ಯ ಆಚರಣೆಗಳಿಲ್ಲ .ಇದು ಪ್ರಕೃತಿದತ್ತವಾದ ಸರಳ ಸಹಜ ವೈಚಾರಿಕ ಧರ್ಮವಾಗಿದೆ . ಹದಿನಾರನೆಯ ಶತಮಾನದಿಂದ ಈಚೆಗೆ ಲಿಂಗಾಯತ ಧರ್ಮದೊಳಗೆ ಶೈವೀಕರಣ ನುಸುಳಿ ಧರ್ಮದ ಮೂಲ ಸ್ವರೂಪವನ್ನೇ ಬದಲಾಯಿಸಿತು
ಲಿಂಗ ಯೋಗ -ಲಿಂಗ ಪೂಜೆಯಾಯಿತು
ಪಾದೋದಕ – ಕಾಲು ತೊಳೆದ ನೀರಾಯಿತು
ಪ್ರಸಾದ – ಊಟವಾಯಿತು .
ಅಷ್ಟಾವರಣಗಳ ಲಾಂಛನಗಳಾದವು, ಪಂಚಾಚಾರಗಳು ಆಚರಣೆಗಳಾದವು ಷಟಸ್ಥಲವು ವಿಕಸಿತವಾಗದೆ ಭೋದೆ ಸೀಮಿತವಾದ ಶಬ್ದಗಳ ಸಂತೆಯಾಯಿತು .
ಬಸವಣ್ಣನವರ ಸಮಾಜವಾದಿ ಪರಿಕಲ್ಪನೆಯು ಅದನ್ನು ಸಂಪೂರ್ಣ ವಿರೂಪಗೊಳಿಸುವಲ್ಲಿ ವೀರಶೈವರು ಮತ್ತು ಸನಾತನಿಗಳು ಯಶವನ್ನು ಕಂಡರು.
1 ) ಅತ್ಯಂತ ನೋವಿನ ಸಂಗಾತಿಯಂದರೆ ಬಸವಣ್ಣನವರ ಹೆಸರು ಹೇಳಿ ನಿಜಾಚರಣೆಯ ನೆಪದಲ್ಲಿ ಕಲ್ಯಾಣ ಮಹೋತ್ಸವ ಮಾಡಿ ಅತಿ ವಿಜೃಂಭಣೆಯಿಂದ ದುಂದು ಖರ್ಚು ವೆಚ್ಚದಿಂದ ಮಾಡುವ ಮದುವೆಗಳು ಬಸವ ತತ್ವದಡಿಯಲ್ಲಿ ಸಹಜ ಮದುವೆ ಎನಿಸಬಹುದೇ ??
2 ) ಅಂಗಡಿ ವಾಹನ ಗುಡಿ ಪೂಜೆ , ಗುರು ಪ್ರವೇಶ ಹುಟ್ಟು ಹಬ್ಬ ,ಜವಳ ಹುಟ್ಟು ಹಬ್ಬ ,ಅಕ್ಕಿ ಗಂಟು ಕಟ್ಟುವುದು ,ಕಲ್ಯಾಣ ಮಹೋತ್ಸವ,ಕುಬಸದ ಕಾರ್ಯಕ್ರಮ,ಇಷ್ಟಲಿಂಗ ದೀಕ್ಷೆ ಸ್ಮರಣೋತ್ಸವ ಅಂತ್ಯ ಸಂಸ್ಕಾರಗಳು ಹೀಗೆ ಸಹಜ ನಿಜಾಚರಣೆಯ ಹೆಸರಿನಲ್ಲಿ ಮತ್ತೊಂದು ರೀತಿಯ ನವ ಪೌರೋಹಿತ್ಯ್ದವನ್ನು ಹುಟ್ಟು ಹಾಕುವ ಹುನ್ನಾರವನ್ನು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವ ಕೆಲ ಪಂಡಿತರು ಬುದ್ಧಿಜೀವಿಗಳು ಪ್ರಗತಿಪರರು ಎಂದೆಣಿಸಿ ಕೊಳ್ಳುವವರು .ಮಾಡುತ್ತಿದ್ದಾರೆ . ನಾನು ಭಾಗವಹಿಸಿದ್ದ ನಮ್ಮ ಸಂಬಂಧಿಕರ ಕುಬುಸದ ಕಾರ್ಯಕ್ರಮದಲ್ಲಿ ನಿಜಾಚರಣೆಯ ಅತಿರೇಕತೆ ಎಷ್ಟಿತ್ತೆಂದರೆ ತುಂಬು ಗರ್ಭಿಣಿಯ ನಿಟ್ಟುಸಿರು ಪ್ರಯಾಸದ ಮಧ್ಯೆ ಪಂಡಿತರು ಎರಡು ಘಂಟೆ ಪ್ರವಚನ ಮಾಡುತ್ತಾ ಇನ್ನೊಬ್ಬರ ಭಾವನೆಗಳಿಗೆ ಅನಾನುಕೂಲತೆ ಬಗ್ಗೆ ಚಿಂತಿಸುವದಿಲ್ಲ. ಮಠೀಯ ಪರಂಪರೆಯನ್ನು ಪ್ರೋತ್ಸಾಹಿಸುವ ಈ ಪ್ರಾಧ್ಯಾಪಕರು ಪಂಡಿತರು ಹೊಸ .ಸಂಪ್ರದಾಯವನ್ನು ಹುಟ್ಟು ಹಾಕುತ್ತಿದ್ದಾರೆ .
ಶರಣರು ಯಾವುದನ್ನೂ ಹೀಗೆ ಹಾಗಿರಬೇಕೆಂದು ಹೇಳಿಲ್ಲ .
ಶರಣರ ಬಸವಣ್ಣನವರ ಭಾವ ಚಿತ್ರದ ಜೊತೆಗೆ ಬೇರೆ ಬೇರೆ ಕಾಯಕ ಮಾಡುವ ಜನರು ತಮ್ಮ ತಮ್ಮ ಕಾಯಕದ ನಿಜ ಶರಣರ ಭಾವ ಚಿತ್ರವನ್ನಿಟ್ಟು ಅವರ ವಚನಗಳನ್ನು ಸಾಕ್ಷಿ ಪ್ರಜ್ಞೆಯಾಗಿ ಸ್ವೀಕರಿಸಿ ಕಾರ್ಯ ಮುಂದುವರೆಸಬೇಕೇ ವಿನಹ ಅದನ್ನೇ ವೈಭವೀಕರಿಸಿಕೊಂಡು ಕಾರ್ಯಾಗಾರವನ್ನಿಟ್ಟು ತಮ್ಮ ಶ್ರೇಷ್ಠತೆಯನ್ನು ಮೆರೆಯುವ ಹರಸಾಹಸವನ್ನು ಕೈ ಬಿಡಬೇಕು.
ಬಸವ ತತ್ವ ಅಭ್ಯಾಸಕರು ಇಂತಹ ಶಬ್ದಗಳ ಲಜ್ಜೆ ಸಂತೆ ಗೋಜಿಗೆ ಹೋಗದೆ ಅರಿವಿನೊಂದಿಗೆ ಅನುಸಂಧಾನ ಮಾಡಬೇಕು. ಇಂತಹ ಬಾಹ್ಯ ಸಂಪ್ರದಾಯಗಳು ಇನ್ನೊಂದು ಶ್ರೇಣೀಕೃತ
ಪುರೋಹಿತ ವರ್ಗವನ್ನು ನಿರ್ಮಿಸಬಲ್ಲದು . ಸ್ವಲ್ಪ ಜಾಗೃತಿ ವಹಿಸಿ ಬಸವ ತತ್ವ ಅಭ್ಯಾಸಕರು ತಮ್ಮ ಕಾಳಜಿ ಪೂರ್ವಕ ಚಿಂತನೆ ಮಾಡಲಿ.
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ