ರವಿಯೊಳಡಗಿದ ಪ್ರತಿಬಿಂಬದಂತೆ.

ಮುಕ್ತಾಯಕ್ಕನ ವಚನಗಳು

ರವಿಯೊಳಡಗಿದ ಪ್ರತಿಬಿಂಬದಂತೆ.

12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ ಶಬ್ದ ಮೋಕ್ಷವನ್ನು ಬೇಡುವುದು. ಗುರುವೆಂಬ ಶಿವನಲ್ಲಿ ವಿಲೀನವಾಗುವುದು. ತನ್ನ ಬೆಡಗಿನ ವಚನಗಳ ಮೂಲಕ ಮೇರು ಶಿಖರವಾದ ಅಲ್ಲಮನ ಪ್ರಶ್ನೆಗಳಿಗೆ ಎದುರಿಸಿ ಸವಾಲು ಹಾಕಿದ ವೈಚಾರಿಕ ದಿಟ್ಟ ಶರಣೆ.

ಶರಣರು ಸಾಕ್ಷಾತ್ ಶಿವನ ಸ್ವರೂಪದವರು. ಎಲ್ಲೆಲ್ಲೂ ಶಿವನ ದರ್ಶನವನ್ನು ಕಾಣಬಲ್ಲರು. ಸೃಷ್ಟಿ-ಸ್ಥಿತಿ-ಲಯ ನಿಗ್ರಹ ಅನುಗ್ರಹಗಳೆಂಬವುಗಳು. ಇವು ಪಂಚದರ್ಶನಗಳು. ಪರಶಿವನ ಸ್ವರೂಪಿಗಳಾದ ಆರಾಧಕರಿಗೆ ಶಿವನೇ ಭಕ್ತರ ರಕ್ಷಕ. ಮತ್ತಾರೂ ಅಲ್ಲ. “ಲಿಂಗ ಪ್ರಸಾದ ಮೇಲೆ ಗುರುಪ್ರಸಾದವನು ಇಕ್ಕಿಹೆನೆಂಬ ಗುರು ದ್ರೋಹಿಗಳ ಏನೆಂಬೆ ಇದು ಕಾರಣ, ಗುರು ಲಿಂಗ ಜಂಗಮ ತತ್ವವು ಆಧ್ಯಾತ್ಮಿಕ ಸೀಮೆಯ ಸಾಮಾಜಿಕ ರಕ್ಷಣೆಯಾಗಿ ಕಂಡಿತು. ಹೀಗಾಗಿ ಶಿವಶರಣರು ಆಧ್ಯಾತ್ಮಿಕ ಸಂಕಲ್ಪದ ಸಾಮಾಜಿಕ ರೂಪವನ್ನು ಆಂತರಿಕವಾಗಿಸಿದರು. ಮುಕ್ತಾಯಕ್ಕನ ಈ ವಚನ..

ಅಲರೊಳಗಡಗಿದ | ಪರಿಮಳದಂತೆ ||
ಪತಂಗದೊಳಡಗಿದ | ಅನಲದಂತೆ ||
ಶಶಿಯೊಳಡಗಿದ | ಷೋಡಶ ಕಳೆಯಂತೆ ||
ಉಲು ಹಡಗಿದ | ವಾಯುವಿನಂತೆ ||
ಸಿಡಿಲೊಳಡಗಿದ ಗಾತ್ರದ | ತೇಜದಂತಿರಬೇಕಯ್ಯಾ ಅಜಗಣ್ಣ ತಂದೆ ||

ಯೋಗದಲ್ಲಿ ದೇಹವನ್ನು ವಜ್ರಕಾಯವಾಗಿಸಿ ಕೊಳ್ಳುವುದು ಸಾಧಕರ ಸಾಧನೆ. ಕಾಯಕ್ಕೆ ಬಲಿಷ್ಠತೆ ಬರಬೇಕಾದರೆ ದೇಹದಂಡನೆಯ ಕಠಿಣ ವೃತ ಮಾಡಬೇಕಾಗುತ್ತದೆ. ಸಂಸಾರ ವ್ಯಾಮೋಹದ ಹಂಗು ಹರಿಯ ಬೇಕಾಗುತ್ತದೆ. ಶರೀರ ರಹಸ್ಯದ ಬೆನ್ನು ಹತ್ತಿದವನಿಗೆ ವಿರಕ್ತಿ ನಿರಾಕರಣೆ ದೇಹಕ್ಕೆ ಪ್ರಖರತೆ ಕೊಡುವ ರೂಪಗಳು. ಯೋಗದಲ್ಲಿ ಪರಮ ಶ್ರೇಷ್ಠತೆಯನ್ನು ಕಾಣಬೇಕಾದರೆ ಬೆಡಗಿನ ಅರ್ಥಕೋಶದಲ್ಲಿ ಹುಡುಕಬೇಕು. ಪತಂಗ ದೀಪದ ಬೆಳಕಿನ ಸುಂದರತೆಗೆ ಮಾರು ಹೋದರೆ ರೆಕ್ಕೆಯನ್ನು ಸುಟ್ಟು ಕೊಳ್ಳಬೇಕಾಗುತ್ತದೆ. ಸಾಧಕನು ತನ್ನ ಅಂತರಂಗದ ಅ ಜ್ಞಾನವನ್ನು ಕಳಚಿದಾಗ ಮಾತ್ರ ಪರಿಶುಭ್ರವಾದ ಹುಣ್ಣಿಮೆ ಚಂದ್ರನ ಷೋಡಶ ರೂಪದ ಸುಂದರತೆ ನಿನಗೊಲಿದು ಕಾಣಲಾಗುತ್ತದೆ. ಸಿಡಿಲಿನಲ್ಲಿ ಅಡಗಿದ ಬೆಳಕು ಭಾವ ಸನ್ನಿಹಿತವಾದ ಅಂತರಂಗದಲ್ಲಿ ಶಿವೋಹಂ ಎಂಬ ಪ್ರಣವ ತೇಜಪುಂಜ ಪ್ರತಿದ್ವನಿಸುತ್ತದೆ. ಸ್ಥೂಲ-ಸೂಕ್ಷ್ಮ-ಸಮತೆ ದಾರ್ಶನಿಕ ನೈತಿಕಾರ್ಥಗಳಾಗಿವೆ. ಈ ವಚನದಲ್ಲಿ ಅಡಗಿರುವ ರೂಪಕ ಶಕ್ತಿ ಮುಕ್ತಾಯಕ್ಕನ ಅರಿವಿನ ಸಂಕಲ್ಪವೆಂದು ಸ್ಪಷ್ಟಪಡಿಸ ಬಹುದು. ಈ ವಚನ…
ರವಿಯಳಗಿದ ಪ್ರತಿಬಿಂಬದಂತೆ | ಹಿಡಿವರಿಗಳವಲ್ಲದಿರಬೇಕು ಅಣ್ಣಾ ||
ನಿನ್ನೊಳು ಅಡಗಿದ ಭೇದವ ಭಿನ್ನವ | ಮಾಡುವರೆ ಅಣ್ಣಾ ||
ನಿನ್ನ ನುಡಿಯೆಲ್ಲ | ಪ್ರತಿಬಿಂಬಗಳಾದವೆ ಅಣ್ಣ ||
ಕೊಡನೊಳಗಣ ಜ್ಯೊತಿಯ | ಅಡಗಿಸಲರಿಯದದೆಮಗೆ ||
ಏರಿದಂತಾದೆಯೋ | ಅಜಗಣ್ಣ ||

ಮುಕ್ತಾಯಕ್ಕ ತನ್ನ ಅಣ್ಣನನ್ನು ಗುರುವೆಂದು ನಂಬಿದಾಕೆ. ಅವನ ವಿಶಿಷ್ಟ ಜ್ಞಾನ ಮತ್ತು ವ್ಯಕ್ತಿತ್ವವನ್ನು ಗೌರವಿಸಿದಾಕೆ. ತನ್ನ ಜೀವನದ ಕಥಾನಕ ಮಾದರಿಗಳಿಗೆ ತಾತ್ವಿಕ ಸಾಮರಸ್ಯದ ಸಮರ್ಥನೆಯನ್ನು ತನ್ನ ವಚನಗಳಲ್ಲಿ ಅಭಿವ್ಯಕ್ತಿಸಿದ್ದಾಳೆ. ಅಣ್ಣ ತಂಗಿಯರ ಅನುಭಾವದ ಅನಾವರಣಗಗಳು ತಾತ್ವಿಕ ಸಂವಾದಗಳು ರಸಾನಂದಪೂರಿತವಾದವುಗಳೆಂದು ವಿಮರ್ಶಕರ ವಾದ.

ಅಣ್ಣನ ವ್ಯಕ್ತಿತ್ವವನ್ನು ರವಿಯ ಚಿತ್ ಪ್ರಭೆಯ ಬೆಳಕೆಂದು ಘನಲಿಂಗ ಮಹಿಮನೆಂಬುದು ಆಕೆಯವಾದ. ರವಿಯೊಳಡಗಿದ ಪ್ರತಿಬಿಂಬ ಎನ್ನುವಲ್ಲಿ ….ಬರೀ ರವಿಯಲ್ಲ ಪ್ರಕಾಶಮಯವಾದ ಜ್ಞಾನವಂತನು ಮುಕ್ತಾಯಕ್ಕಗೆ. ಅಣ್ಣನ ವ್ಯಕ್ತಿತ್ವವನ್ನು ತತ್ವವಾಗಿಸುತ್ತಾಳೆ. ಅಜಗಣ್ಣನ ಜ್ಞಾನವನ್ನು ಅದ್ವೈತ ನೆಲೆಯಲ್ಲಿ ಕಾಣುತ್ತಾಳೆ. ಅವಳ ಒಂದೊಂದು ವಚನದ ಮಾತುಗಳು “ನಿನ್ನ ನುಡಿಗಳು ಕೊಡದೊಳಗಿನ ಪ್ರತಿಬಿಂಬದಂತೆ” ಎನ್ನುವ ಸ್ಥೂಲರೂಪವು ಮುಕ್ತಾಯಕ್ಕನ ಭಾವರೂಪವೂ ಹೌದು. ತುಂಬಿದ ಕೊಡದ ಜ್ಞಾನದ ಜ್ಯೊತಿಯನ್ನು ಅಜಗಣ್ಣನ ದಾರ್ಶನಿಕತೆಯನ್ನು, ಗುರು ಶಿಷ್ಯರ ಸಂಬಂದದ ಮೂಲಕ ಮುಖಾಮುಖಿಯಾಗಿಸುತ್ತಾಳೆ. ಎಲ್ಲೆಲ್ಲೂ ಆವರಿಸಿರುವ ತನ್ನ ಅಣ್ಣನ ಆಧ್ಯಾತ್ಮಿಕ ಮೌಲ್ಯದ ದರ್ಶನವನ್ನು ಗೌರವಿಸುತ್ತಾಳೆ.

ಸಾಧನೆಯ ಆರಾಧನೆಯನ್ನು ಗುರುವಿನಲ್ಲಿ ಕಾಣುವ ಮುಕ್ತಾಯಕ್ಕ ಸಮಷ್ಟಿ ಪ್ರಜ್ಞೆಯನ್ನು ಅಜಗಣ್ಣನ ಅನುಭಾವದ ಪ್ರತಿಮೆಯಲ್ಲಿ ಕಾಣುತ್ತಾಳೆ. ತಾಯಿಯಾಗಿ ಜೋಗುಳವಾಡುತ್ತಾ ನಿರಾಕಾರ ಲಿಂಗವನ್ನು ಕಾಣುವ ಅವಳ ನಿವೇದನೆ ಆಧ್ಯಾತ್ಮಿಕ ರಹಸ್ಯದ ಬೆಡಗು….

ನೀರ ಬೊಂಬೆಗೆ | ನಿರಾಳದ ಗೆಜ್ಜೆಯ ಕಟ್ಟಿ ||
ಬಯಲು ಬೊಂಬೆಯ ಕೈಯಲ್ಲಿ | ಕೊಟ್ಟು ಮುದ್ದಾಡಿಸುತ್ತಿರ್ದೆನಯ್ಯಾ ||
ಕರ್ಪೂರದ ಪುತ್ಥಳಿಗೆ | ಅಗ್ನಿಯ ಸಿಂಹಾಸನವನಿವಿಕ್ಕಿ ||
ಬೆರಗಾದೆನಯ್ಯಾರಿನ್ನು | ಅಜಗಣ್ಣನ ಯೋಗಕ್ಕೆ ||

ಮುಕ್ತಾಯಕ್ಕನಿಗೆ ಆಧ್ಯಾತ್ಮಿಕ ಪಯಣದಲ್ಲಿ ಅಜಗಣ್ಣ ಎಷ್ಟು ಮುಖ್ಯವೋ ಅವಳ ಮನದಲ್ಲಿ ನೆಲೆಯೂರಿದ ತನ್ನ ಆತ್ಮದರ್ಶನದಲ್ಲಿ ಅವನ ಸಾಂಸ್ಥಿಕ ರೂಪವು ಮುಖ್ಯವಾಗಿದೆ. ಹೀಗಾಗಿ ಆಕೆ ಮನವೆಂಬ ನೀರ ಬೊಂಬೆಯಲ್ಲಿ ಶಿವ ಚೈತನ್ಯದ ನಿರಾಕಾರವೆಂಬ ಬಯಲ ಬೊಂಬೆಗೆ ಗೆಜ್ಜೆಯನ್ನು ಕಟ್ಟಿ ಕುಣಿಸುತ್ತಾಳೆ. ಚಿತ್ ಚೈತನ್ಯದ ಬೊಂಬೆಯನ್ನು ಮನದ ಸಿಂಹಾಸನದಲ್ಲಿ ಸ್ಥಾಪಿಸುತ್ತಾಳೆ. ಗೆಜ್ಜೆ, ಗೊಂಬೆ, ನಿರಾಳ ಪದಗಳು ವಚನವನ್ನು ಓದುವಿಕೆಯಲ್ಲಿ ತನ್ಮಯ ಭಾವದ ಆನಂದ ಪಡೆಯುತ್ತಾಳೆ. ಸ್ವಾನುಭಾವವೆಂಬ ಕರ್ಪೂರದ ಪುತ್ಥಳಿ ಮನವೆಂಬ ಬೆಂಕಿಯಲ್ಲಿ ದಹಿಸುವಾಗ ಸುಜ್ಞಾನದ ಸಿಂಹಾಸನದಲ್ಲಿ ಬೆಳಕಾಗಿ ಪ್ರಕಾಶಿಸಿದೆ. ಮನದ ಅದ್ವೈತದ ಭಕ್ತಿಯಲ್ಲಿ ಆಕೆಗೆ ಬೆಡಗಾಗಿದೆ. ಮುಕ್ತಾಯಕ್ಕನ ಈ ವಚನದ ಸಂವೇದನೆ ತತ್ವಾನುಭೂತಿಯನ್ನು ಕೊಡುವುದರ ಜೊತೆಗೆ ಗುರುವಾದ ಅಜಗಣ್ಣನನ್ನು ವ್ಯಕ್ತಿ ವಿಶಿಷ್ಟ ಸಾಧಕನಂತೆ ಪರಿಚಯಿಸಿ ಬೆರಗು ಕೊಡುತ್ತಾಳೆ. ಬೆರಗಾದೆನಯ್ಯ ಅಜಗಣ್ಣ ನಿನ್ನ ಯೋಗಕ್ಕೆ ನಿರಾಳ ಶಿವ ತತ್ವಕ್ಕೆ ಕರ್ಪೂರದ ಸುವಾಸನೆಯನ್ನು ಕೊಡುವುದು ಆಕೆಯ ಆಳವಾದ, ಬೆಡಗಿನ ಲಾಲಿತ್ಯವೆಂದು ಹೇಳಬಹುದು.

ಡಾ. ಸರ್ವಮಂಗಳಾ ಸಕ್ರಿ
ಕನ್ನಡ ಉಪನ್ಯಾಸಕರು.
ರಾಯಚೂರು.

Don`t copy text!