ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಸಾಹಿತ್ಯ ಸೇವೆ….

ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಸಾಹಿತ್ಯ ಸೇವೆ….

ಕಲ್ಯಾಣದ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟು ಅಲ್ಲಮಪ್ರಭುದೇವರ ಬಳಿವಿಡಿದು ಬಂದು, ಶೂನ್ಯಪೀಠದ ಅಸ್ತಿತ್ವವೆನಿಸಿದ ಶರಣ ಪರಂಪರೆಯ ವಿರಕ್ತ ಮಠಗಳು ಆತ್ಮಕಲ್ಯಾಣಕ್ಕಾಗಿ ಶಿವಯೋಗ ಮತ್ತು ಲೋಕಕಲ್ಯಾಣಕ್ಕಾಗಿ ಶಿವಾನುಭವಗಳ ಮೂಲಕ ಅದರ ತತ್ವ ಮತ್ತು ಸಂಸ್ಕೃತಿಗಳ ಪ್ರಸರಣದ ಕಾಯಕವನ್ನು ಆಯಾ ಕಾಲದ ಅನುಕೂಲತೆಯ ನೆಲೆಯಲ್ಲಿ ಅಹರ್ನಿಶವಾಗಿ ಮುನ್ನಡೆಸುತ್ತ ಅದನ್ನು ಉಜ್ವಲವಾಗಿ ಬೆಳಗಿಸುತ್ತಿರುವದನ್ನು ಕಾಣುತ್ತೇವೆ.

ಅಂದರೆ ಕಲ್ಯಾಣದ ಶರಣರು ಮತ್ತು ಅವರ ವಚನಗಳು ಮೈದಳೆದಾಗಿನಿಂದ ಆಧುನಿಕ ಕಾಲದವರೆಗೆ ಶರಣರ ಮತ್ತು ಅವರ ಪರಂಪರೆಯ ಸಾಹಿತ್ಯ ಮತ್ತು ಸಿದ್ಧಾಂತಗಳು ತಾಳೆಗರಿಗಳು ಹಾಗೂ ಕೋರಿಕಾಗದಗಳ ಮೂಲಕವಾಗಿ ಸಂಕಲನ, ಸಂಪಾದನ ಹಾಗೂ ಟೀಕಿನ ರೂಪವಾಗಿ ಜೊತೆಗೆ ಆಗಾಗ ಆ ಪರಂಪರೆಯವರ ವಚನವೇ ಮೊದಲಾಗಿ ವಿವಿಧ ಬಗೆಯ ಪ್ರಕಾರಗಳಲ್ಲಿ ರಚನೆಗೊಳ್ಳುತ್ತ ,ಮುಂದೆ ಆಧುನಿಕ ಕಾಲದ ಶಾಸ್ತ್ರೀಯ ನೆಲೆಯ ಸಂಪಾದನೆ, ಸಂಶೋಧನೆ ಹಾಗೂ ವಿಮರ್ಶೆಯಂಥ ಅಕ್ಯಾಡೆಮಿಕ್ ವಿಧಾನದಲ್ಲಿ ಓದುವ ಬಗೆ ಮತ್ತು ಮುದ್ರಣ ವ್ಯವಸ್ಥೆಗಳಿಂದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಪ್ರಸರಣಗೊಳಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿರುವದನ್ನು ಕಾಣುತ್ತೇವೆ.
ಈ ಹಿನ್ನೆಲೆಯಲ್ಲಿ ಶರಣ ಪೀಳಿಗೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರರ ಶೂನ್ಯಪೀಠ ಪರಂಪರೆಯ ಇಂಥ ಮಣಿಹವೂ ವಿಶೇಷವೂ, ಮಹತ್ವವೂ ಆಗಿರುವದನ್ನು ಗಮನಿಸಬಹುದಾಗಿದೆ.
ಈ ಮಠದ ಚರಿತ್ರೆ ಕಲ್ಯಾಣದ ಪ್ರಭುದೇವರಿಂದಲೇ ಆರಂಭವಾಗುವುದಾಗಿ ಹೇಳಲಾಗುತ್ತದೆಯಾದರೂ ಪೀಠಾಧಿಪತಿಗಳ ಪರಂಪರೆಯನ್ನು ಹದಿನೈದನೇ ಶತಮಾನದ ವಿಜಯಮಹಾಂತರಿಂದಲೇ ಆರಂಭಿಸಲಾಗಿದೆ. ಅದು ಏನೇ ಆದರೂ ಶರಣ ಸಿದ್ಧಾಂತ ಮತ್ತು ಸಂಸ್ಕೃತಿಯ ಪ್ರಸರಣದ ಕಾಯಕ ಮಾತ್ರ ಅದ್ಯಾವುದರ ತೊಡಕಿಲ್ಲದೇ ಅವ್ಯಾಹತವಾಗಿ ಮುನ್ನಡೆದು ಬಂದಿದೆ.

ಈ ಪೀಠದ ಪಟ್ಟವೇರಿದ ಈವರೆಗಿನ ಎಲ್ಲಾ ಪೀಠಾಧಿಪತಿಗಳು, ಪೀಠಾಧಿಪತಿಗಳಿಲ್ಲದಾಗ ಅದರ ಚಟುವಟಿಕೆ ನಿಲ್ಲಬಾರದೆಂಬ ಸದುದ್ದೇಶದಿಂದ ಅದರ ಉಸ್ತುವಾರಿಗಳಾಗಿ ಪಟ್ಟವೇರದೇ ಸೇವೆಗೈದ ಮದ್ದಾನೀಶ್ವರ ಸ್ವಾಮಿಗಳು, ಹಾನಗಲ್ಲ ಕುಮಾರಸ್ವಾಮಿಗಳು ಮತ್ತು ಕೊಪ್ಪದ ಮಹಾಂತ ಸ್ವಾಮಿಗಳು ಸೇವಾಭಾವದಿಂದ ಇದರ ಆಧಾರ ಸ್ತಂಭಗಳಂತಾಗಿ ಪರಂಪರೆಯ ಜೀವಂತಿಕೆಗೆ ಶಕ್ತಿಯಾದರೆಂಬುದು ಇದರ ಚರಿತ್ರೆಯ ವಿಶೇಷವೇ ಆಗಿದೆ.‌ ಅದೇನೇ ಆದರೂ ಹದಿನೈದನೇ ಪೀಠಾಧಿಪತಿಗಳವರೆಗಿನ ಚರಿತ್ರೆ ಕಾಲದಲ್ಲಿ ಕರಗಿಹೋಗಿದ್ದು,ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದ ಹದಿನೈದನೆಯ ಪೀಠಾಧಿಪತಿಗಳಾದ ಗುರುಮಹಾಂತ ಶಿವಯೋಗಿಗಳವರಿಂದ ದಾಖಲೆಯುಕ್ತ ಚರಿತ್ರೆಯನ್ನು ಅರಿಯಬಹುದಾಗಿದೆ.
ಪೀಠದ ಹದಿನೇಳನೆಯ ಪೀಠಾಧಿಪತಿಗಳಾದ ದೋಟಿಹಾಳದ ಶ್ರೀ ಗುರು ಮಹಾಂತ ಸ್ವಾಮಿಗಳವರ ಕಾಲದಲ್ಲಿ ಈ ಮಠವು ತನ್ನ ಸಂಪ್ರದಾಯದಂತೆ ಶಿವಯೋಗ ಮತ್ತು ಶಿವಾನುಭವಗಳ ಜೊತೆಗೆ ಮೊದಲ ಬಾರಿಗೆ ದ್ಯಾಂಪುರದ ಚನ್ನಕವಿಗಳು ಬರೆದ ವಿಜಯ ಮಹಾಂತ ಶಿವಯೋಗಿಗಳ ಪುರಾಣವನ್ನು ಪ್ರಕಟಿಸುವ ಮೂಲಕ ಮುದ್ರಣ ಮಾಧ್ಯಮ ರೂಪದಲ್ಲಿ ಸಾಹಿತ್ಯಕೃಷಿಯನ್ನು ಆರಂಭಿಸಲಾಯಿತು.

ಈ ಕೃತಿಯಲ್ಲಿ ಮೊದಲ ಬಾರಿಗೆ ಚಿತ್ತರಗಿ ಪೀಠದ ಚರಿತ್ರೆಯೊಂದಿಗೆ ಅಗಾಧವಾದ ಶಿವಯೋಗದ ಶಕ್ತಿಯಿಂದ ಪೀಠದ ಮಹಿಮೆಯನ್ನು ಬೆಳಗಿದ ಕಾರಣಿಕ ಪುರುಷ ಸಸಿವಾಳದ ವಿಜಯ ಮಹಾಂತ ಶಿವಯೋಗಿಗಳ ಪಾವನ ಚರಿತ್ರೆಯನ್ನು ಪುರಾಣ ಕಾವ್ಯದ ಮೂಲಕ ದಾಖಲಿಸಿ ಸಮಾಜದಲ್ಲಿ ಮಹಾಂತ ಭಕ್ತಿ ಹಾಗೂ ಪ್ರಜ್ಞೆಗಳು ಹೆಚ್ಚುವಂತಾಗಿಸಿಗಿತು.ಇದು ನಿಜಕ್ಕೂ ಈ ಪರಂಪರೆಯಲ್ಲಿ ಹೊಸ ಸಂಚಲನವನ್ನುಂಟು ಮಾಡಿತು.ಇದರ ಬೆನ್ನ ಹಿಂದೆಯೇ ಒಂದೆರಡು ವರ್ಷಗಳ ನಂತರ ತಮ್ಮ ಅಗಾಧವಾದ ಸೇವಾಭಾವದಿಂದ ಪರಂಪರೆಯನ್ನು ಬೆಳಗಿದ ನಿಜ ವಿರಕ್ತ ಪೂಜ್ಯ ಶ್ರೀ ಕೊಪ್ಪದ ಮಹಾಂತ ಸ್ವಾಮಿಗಳವರು 1930 ರಲ್ಲಿ ಓತಗೇರಿ ರಾಮರಾಯ ಕೃತ ‘ಶ್ರೀ ವಿಜಯ ಮಹಾಂತೇಶ್ವರ ಲೀಲಾಮೃತ ‘ ಎಂಬ ಕೃತಿಯನ್ನು ಪ್ರಕಟಿಸಿದರು.ಇದರಲ್ಲಿ ಹದಿನಾರನೆಯ ಪೀಠಾಧಿಪತಿಗಳಾದ ಕಾರಣಿಕ ಪುರುಷ ಸಸಿವಾಳದ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ರೋಮಾಂಚನಕಾರಿಯಾದ ಶಿವಯೋಗದ ಬದುಕನ್ನು ಶರಣರ ವಚನಗಳು ಮತ್ತು ಸಂಸ್ಕೃತ ಶ್ಲೋಕ ಉದಾಹರಣೆಯೊಂದಿಗೆ ಹದಿನೈದು ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ಈ ನಂತರದಲ್ಲಿ ಬಹುವರ್ಷಗಳ ನಂತರ ಅಂದರೆ 1963 ರಲ್ಲಿ 18 ನೆಯ ಪೀಠಾಧಿಪತಿಗಳಾಗಿ ಬಂದ ಜಮಖಂಡಿಯ ಗುರುಮಹಾಂತ ಸ್ವಾಮಿಗಳವರು ಆಧುನಿಕ ದೃಷ್ಟಿಕೋನದವರಾಗಿದ್ದು ಮಠದ ಸಂಪ್ರದಾಯದ ಜೊತೆಗೆ ಸಮಾಜದ ಏಳಿಗೆಗಾಗಿ ಶಿಕ್ಷಣ ಮತ್ತು ಮಠಕ್ಕೆ ದಾನರೂಪವಾಗಿ ಬಂದ ಜಮೀನುಗಳಲ್ಲಿ ಸ್ವಯಂ ಕೃಷಿ ಮೂಲಕವಾಗಿ
ಪರಂಪರೆಯ ಹೊಸತನಕ್ಕೆ ಮುನ್ನುಡಿಯಾದರು.ಮಠದ ಹೊಲಗಳಲ್ಲಿ ಸ್ವಯಂ ಕೃಷಿ ಗೈಯುತ್ತ ಈ ಪೂಜ್ಯರು,ಸಾಮಾಜಿಕ ಬೆಳವಣಿಗೆಗೆ ಶಿಕ್ಷಣವೇ ಮೂಲ ಎಂಬ ಶರಣರ ನಿಲುವಿನ ಅನುಷ್ಠಾನಕ್ಕಾಗಿ ವಿಜಯಮಹಾಂತೇಶ್ವರ ವಿದ್ಯಾವರ್ಧಕ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ರೇಷ್ಮೆ ಸೀರೆ ಮತ್ತು ಗ್ರಾನೈಟ್ ಶಿಲೆಗೆ ಹೆಸರಾದ ಇಲಕಲ್ಲ ಎಂಬ ಊರನ್ನು ಶಿವಯೋಗ ಮತ್ತು ಶಿವಾನುಭವ ಮೂಲಕ ಪಾವನಗೊಳಿಸಿದ ತಮ್ಮ ಪರಂಪರೆಯಿಂದ ಶಿಕ್ಷಣದ ಕಲಶವನಿಟ್ಟು ನಾಡೆಲ್ಲ ಅದರ ಬೆಳಕು ಪಸರಿಸುವಂತಾಗಿಸಿದರು. ಈ ಸಂಸ್ಥೆಯಲ್ಲಿ ಸೇವೆಗಾಗಿ ಸೇರಿದ ಪ್ರಾಧ್ಯಾಪಕರು ನಾಡಿನ ಹೆಸರಾಂತ ವಿದ್ವಾಂಸರೆನಿಸಿದರು.ಇವರು ತಮ್ಮ ಸಾಹಿತ್ಯ ಸೇವೆಗಾಗಿ ಮಠ ಮತ್ತು ಪರಂಪರೆಯನ್ನು ವಸ್ತು ಹಾಗೂ ನೆಲೆಯನ್ನಾಗಿಸಿಕೊಂಡು ಇದರ ಸೇವಾ ಕ್ಷಿತಿಜದ ವಿಸ್ತಾರಕ್ಕೆ ನೆರವಾದರು.

ಕ್ರಿ.ಶ.1963 ರಲ್ಲಿ ಪೀಠಾಧಿಪತಿಗಳಾಗಿ ಬಂದ ಗುರುಮಹಾಂತ ಸ್ವಾಮಿಗಳವರ ಕಾಲದಲ್ಲೂ ಈ ಮಠದ ಸಾಹಿತ್ಯ ಸೇವೆ ಮರು ಜೀವ ಪಡೆದುಕೊಂಡಿತು.1969 ರಲ್ಲಿ ಶ್ರೀ ಬಾಲಚಂದ್ರ ಶಾಸ್ತ್ರಿಗಳು ರಚಿಸಿದ ಶ್ರೀ ವಿಜಯ ಮಹಾಂತೇಶ್ವರ ಸುಪ್ರಭಾತ ಎಂಬ ಕೃತಿಯು ದ್ವಿತೀಯ ಮುದ್ರಣದೊಂದಿಗೆ ಪ್ರಕಟವಾಯಿತು.ಆದರೆ ಕೃಷಿ ಮತ್ತು ಶಿಕ್ಷಣದೊಂದಿಗೆ ತಮ್ಮ ಪರಂಪರೆಗೆ ಹೊಸ ಆಯಾಮ ನೀಡುತ್ತಿದ್ದ ಈ ಪೂಜ್ಯರು ಆಕಸ್ಮಿಕವಾಗಿ ಪಟ್ಟವೇರಿದ ಕೇವಲ ಏಳು ವರ್ಷಗಳ ಅವಧಿಯಲ್ಲಿ ಅಂದರೆ 1970 ರಲ್ಲಿ ಲಿಂಗೈಕ್ಯರಾದರು.ಇದರಿಂದಾಗಿ ನಿಜಕ್ಕೂ ಭಕ್ತರಲ್ಲಿ ಆಘಾತವಾಯಿತು. ಆದರೂ ಕೆಲವೇ ದಿನಗಳಲ್ಲಿ ವಿಜಯಮಹಾಂತರ ಕರುಣೆಯೇ ಮೈದಳೆದಂತಾಗಿ ಹುಬ್ಬಳ್ಳಿಯ ಜಗದ್ಗುರುಗಳ ಮೂಲಕ ಸವದಿ ಸಂಗನಬಸವ ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಮಹಾಂತ ಸ್ವಾಮಿಗಳವರು ಮಠದ ಹತ್ತೊಂಭತ್ತನೆಯ ಪೀಠಾಧಿಪತಿಗಳಾಗಿ ಪಟ್ಟವೇರಿದರು.ಈಗ ನಿಜಕ್ಕೂ ಇಲ್ಲಿ ಹೊಸ ಮನ್ವಂತರ ಆರಂಭವಾಯಿತು.ಶರಣ ಪರಂಪರೆಯ ಈ ಮಠಕ್ಕೆ ಹೊಸ ಸಂಚಲನವನ್ನುಂಟು ಮಾಡುವ ರೀತಿಯಲ್ಲಿ ದುಶ್ಚಟ,ದುರ್ವ್ಯಸನಗಳಿಂದ ನರಳುವ ಮಾನವ ಬದುಕನ್ನು ಅದರಿಂದ ಬಿಡುಗಡೆಗೊಳಿಸಿ ಸಂಸ್ಕಾರ ಮತ್ತು ಸಂತೋಷದ ಬದುಕಿನ ಸಮೃದ್ಧಿಗಾಗಿ ‘ಮಹಾಂತ ಜೋಳಿಗೆ ‘ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವದರೊಂದಿಗೆ ಶರಣ ಸಿದ್ಧಾಂತ ಪ್ರಸಾರಕ್ಕಾಗಿ ‘ಶರಣ ಸಿದ್ಧಾಂತ ವಿದ್ಯಾಪೀಠ’ ವನ್ನು ಹಾಗೂ ಶರಣ ಸಾಹಿತ್ಯ- ತತ್ವಗಳನ್ನು ಕೃತಿರೂಪದಲ್ಲಿ ಪ್ರಕಟಿಸಲು ಮತ್ತು ಶರಣ ಧರ್ಮವನ್ನು ಪ್ರಸಾರಗೊಳಿಸಲೆಂದು ‘ ಶ್ರೀ ವಿಜಯ ಮಹಾಂತೇಶ್ವರ ಧರ್ಮ ಪ್ರಸಾರಕ ಮಂಡಳ‘ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.ಇವರ ಈ ಮೂರು ಯೋಜನೆಗಳು ಪೂಜ್ಯರ ನಿಲುವುಗಳ ಪರಿಣಾಮಕಾರಿ ಅನುಷ್ಠಾನದ ಪ್ರಬಲ ಸಾಧನಗಳಾದವು.ಅದರಲ್ಲೂ ಪ್ರಕಟಣೆಯ ಸೇವೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದವು.ಹಾಗಾಗಿ ಈ ಪೂಜ್ಯರು ಪೀಠಕ್ಕೆ ಬಂದಾಗಿನಿಂದ ಪುಸ್ತಕ ಪ್ರಕಟಣೆಯ ಕಾರ್ಯ ವೇಗವನ್ನು ಪಡೆದುಕೊಂಡಿತು.

ಈ ಪ್ರಕಾಶನ ಸಂಸ್ಥೆಯಿಂದ ಇಲ್ಲಿಯವರೆಗೆ ಸುಮಾರು ಇಪ್ಪತ್ತೈದು ಕೃತಿಗಳನ್ನು ಪ್ರಕಟಿಸಲಾಗಿದೆ.ಅವುಗಳಲ್ಲಿ ಬಹುತೇಕ ಕೃತಿಗಳು ಪರಂಪರೆಯಲ್ಲಿ ಮಹಾತಪಸ್ವಿ ಎಂದೇ ಭಕ್ತಮಾನಸದಲ್ಲಿ ನೆಲೆಯಾಗಿರುವ ಸಸಿವಾಳದ ಶ್ರೀ ವಿಜಯ ಮಹಾಂತ ಶಿವಯೋಗಿಗಳ ದಿವ್ಯ ಜೀವನದ ಕಥೆಯನ್ನೇ ಒಳಗೊಂಡಿರುವ ಚರಿತ್ರೆ,ಆಧುನಿಕ ವಚನ,ನಾಮಾವಳಿಗಳು,ಭಕ್ತಿಗೀತೆಗಳು,ಕೀರ್ತನೆಗಳು,ಚಿಂತನಗಳು,ನಾಟಕಗಳು,ಸುಪ್ರಭಾತ,ಯಕ್ಷಗಾನಗಳಂಥ ಕೃತಿಗಳಾದ ಕಲ್ಯಾಣಪ್ಪ ಬ್ಯಾಳಿಯವರ ‘ಶ್ರೀ ವಿಜಯ ಮಹಾಂತೇಶ್ವರ ಲೀಲೆ’ (1974), ಶ್ರೀ ನಾಗರಾಳ ಶಂಕರಣ್ಣನವರ ‘ವಿಜಯ ಮಹಾಂತೇಶ ಹೇತೀ ಹಾಡುಗಳು’,(1974), ಶ್ರೀ ಕಿರಿಯ ಕಂದ ಮತ್ತು ಈಶ್ವರ ಕಂದ ಅವರ ‘ಮಹಾಂತ ಜ್ಯೋತಿ’, ಶ್ರೀಮತಿ ಚನ್ನಬಸಮ್ಮ ಕವಿಶೆಟ್ಟಿಯವರ ‘ಮಹಾಂತ ಮಂದಾರ’, ಶ್ರೀ ಬಾಲಚಂದ್ರ ಶಾಸ್ತ್ರಿಯವರ ‘ಶ್ರೀ ವಿಜಯ ಮಹಾಂತೇಶ್ವರ ಸುಪ್ರಭಾತ ‘,ಶ್ರೀಮತಿ ಗುರುದೇವಿ ಹಿರೇಮಠರವರ ‘ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಕೀರ್ತನೆ’,ಶ್ರೀ ಹನುಮಂತರಾವ ಕುಲಕರ್ಣಿಯವರ ‘ಶ್ರೀ ಗುರು ವಿಜಯ ಮಹಾಂತೇಶ ಮಹಿಮಾಮೃತ ಭಕ್ತಿಗೀತೆಗಳು'(1981),ಶ್ರೀ ವಿ.ವಿ.ತೆಗ್ಗಿಯವರ ‘ವಿಜಯ ಮಹಾಂತ ಗೀತ ಸುಮನ'(1991),ಡಾ.ಕೆ.ಎಸ್.ಮಠ ಮತ್ತು ಶಿವಾನಂದ ರುಳಿ ಸಂಪಾದಿತ ‘ಕವಿನಮನ'(1996), ಕಲ್ಯಾಣಮ್ಮ ಲಂಗೋಟಿ ಸಂಪಾದಿತ ಕವಿಗಳು ‘ಕಂಡ ಮಹಾಂತ ಶಿವಯೋಗಿಗಳು'(2002),ಶ್ರೀ ವೀರಶೆಟ್ಟಿ ಬಾವಿಗೆ ಸಂಪಾದಿತ ‘ಆಧುನಿಕ ವಚನಕಾರರ ದೃಷ್ಟಿಯಲ್ಲಿ ಮಹಾಂತ ಶಿವಯೋಗಿಗಳು’ (2002),ಪ್ರೊ.ಜಿ.ಹೆಚ್.ಹನ್ನೆರಡುಮಠ ಅವರ ‘ಚಿತ್ತರಗಿ ಚಿಜ್ಯೋತಿ'(1976),ಡಾ.ಹೆಚ್. ತಿಪ್ಪೇರುದ್ರಸ್ವಾಮಿಯವರ ‘ಮಹಾಂತ ದರ್ಶನ'(1985),ಡಾ.ಪಂಚಾಕ್ಷರಿ ಹಿರೇಮಠರವರ ‘ಚಿತ್ತರಗಿ-ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು'(19..), ಶ್ರೀ ಬಸವರಾಜ ನಾಯ್ಕರ ಅವರ ‘ His Holiness Swamy Vijaya Mahantesh'(1981),ಶ್ರೀ ಬಸವರಾಜ ಭಗವತಿ ಅವರ ‘ಪವಾಡ ಪುರುಷ'(1976),ಶ್ರೀ ಪಿ.ಬಿ.ಧುತ್ತರಗಿ ಅವರ ‘ ಸರ್ವಮಂಗಳ’,ಪ್ರೊ.ಜಿ.ಹೆಚ್.ಹನ್ನೆರಡುಮಠ ಅವರ ‘ಮಹಾತಪಸ್ವಿ’ (ಇದು ಚಲನಚಿತ್ರವೂ ಆಯಿತು)ಯಂಥ ನಾಟಕಗಳು,ಸೊಕ್ಕೆ ಸಿದ್ಧವೀರ ಕವಿಕೃತ ‘ಶ್ರೀ ವಿಜಯ ಮಹಾಂತೇಶ್ವರ ನೂರೆಂಟು ನಾಮಾವಳಿಗಳು'(1976),ಶ್ರೀ ಶೇಖರಪ್ಪ ಹೂಲಗೇರಿಯವರ ‘ಮಹಾಂತ ನುಡಿಮುತ್ತು'(1976),ಹತ್ತೊಂಭತ್ತನೆಯ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಲಿಂ.ಮಹಾಂತಪ್ಪಗಳವರ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ನೆನಪಿನ ಸಂಪುಟ’ಮಹಾಂತ'(1986), ಇದೇ ಪೂಜ್ಯರ ವಜ್ರಮಹೋತ್ಸವದ ನೆನಪಿನಲ್ಲಿ ಡಾ.ಕಲ್ಬುರ್ಗಿಯವರ ಮಾರ್ಗದರ್ಶನದಲ್ಲಿ ಬಂದ ಅಭಿನಂದನ ಸಂಪುಟ ‘ಲಿಂಗಾಯತ’ ಎಂಬ ಕೃತಿ,ಈ ಪೂಜ್ಯರಿಗೆ ಅಂತರರಾಷ್ಟ್ರೀಯ ಖ್ಯಾತಿಯನ್ನಿತ್ತ ಮಹಾಂತ ಜೋಳಿಗೆ ಕುರಿತಾದ ಶ್ರೀ ಸಂಗಮೇಶ ಹೊಸಮನಿಯವರ ‘ಮಹಾಂತ ಜೋಳಿಗೆ'(1979),ಶ್ರೀ ಶೇಖರಪ್ಪ ಹೂಲಗೇರಿಯವರ ‘ಮಹಾತ ಜೋಳಿಗೆ'(1981),ಪ್ರೊ.ಹೆಚ್. ಬಿ.ಮಾಳಿಯವರ ‘ಮಹಾಂತ ಜೋಳಿಗೆಯ ಫಲಶ್ರುತಿ'(1983),ಶ್ರೀ ವಿ.ಎಸ್. ಚರಂತಿಮಠ ಕೃತ ‘Saga of The Saffron Mahanta Jolige'(1996),ಶ್ರೀ ಹೆಚ್. ಬಿ.ಮಾಳಿಯವರ ‘Gains and Rewards of Mahant Jolige'(1990),ಹೀಗೆ ಇಂಥ ಕೃತಿಗಳೊಂದಿಗೆ ಪೂಜ್ಯರ ವಿಶೇಷ ಕಾಳಜಿಯೂ, ಅವರ ಬದ್ಧತೆಯ ದ್ಯೋತಕವೂ ಆದ ಶರಣ ಮತ್ತು ಅನುಭಾವ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳು ಪ್ರಕಟಗೊಂಡಿವೆ.

ಅವುಗಳಲ್ಲಿ ಡಾ.ಹೆಚ್. ತಿಪ್ಪೇಸ್ವಾಮಿಯವರು ರಚಿಸಿದ ‘ಕನ್ನಡದಲ್ಲಿ ಕೈವಲ್ಯ ಸಾಹಿತ್ಯ’ ಎಂಬ ಕೃತಿ, ಶ್ರೀ ಬಿ.ಎಸ್. ಪಾಟೀಲರವರ ‘ಶರಣರು ತೋರಿದ ದಾರಿ ಮತ್ತು ಗುರಿ'(1996),ಶ್ರೀಮಠದ ಚರಿತ್ರೆ ಮತ್ತು ಸಾಧನೆಗಳ ಕುರಿತಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಡಿ ಅವರು ಎಂ.ಫಿಲ್. ಮತ್ತು ಬಸು ಪಟ್ಟದ ಅವರು ಪಿಹೆಚ್.ಡಿ.ಪದವಿಗಳಿಗಾಗಿ ಗೈದ ಸಂಶೋಧನಾ ಪ್ರಬಂಧಗಳು, ಇವುಗಳೊಂದಿಗೆ ಶ್ರೀ ಸಂಗಮೇಶ ಹೊಸಮನಿ ಕೃತ ‘ಜಾನಪದ ಜೇಂಗೊಡ’ ಎಂಬ ಜಾನಪದಕ್ಕೆ ಸಂಬಂಧಿಸಿದ ಕೃತಿಯಂಥ ಮಹತ್ವದ ಕೃತಿಗಳು ಪ್ರಕಟಗೊಂಡಿವೆ.
ಹೀಗೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಧರ್ಮ ಪ್ರಸಾರಕ ಮಂಡಳ ಹಾಗೂ ಶರಣ ಸಿದ್ಧಾಂತ ವಿದ್ಯಾಪೀಠಗಳ ವತಿಯಿಂದ ಇಂಥ ಮಹತ್ವದ ಕೃತಿಗಳು ಪ್ರಕಟಗೊಂಡಿರುವದರೊಂದಿಗೆ ಪ್ರೊ.ಸಿದ್ದಣ್ಣ ಲಂಗೋಟಿಯವರ ಸಂಪಾದಕತ್ವದಲ್ಲಿ ‘ಬಸವ ಬೆಳಗು’ಎಂಬ ಶರಣ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳಿಗೆ
ಸಂಬಂಧಿಸಿದ ಸಾಹಿತ್ಯವುಳ್ಳ ತ್ರೈಮಾಸಿಕ ಪತ್ರಿಕೆಯೂ ಸಹ ಪ್ರಕಟವಾಗುತ್ತಿದೆ.ಇವೆಲ್ಲವೂ ಅನೂಚಾನವಾಗಿ ವಿರಕ್ತ ಪರಂಪರೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ.
ಆದರೂ ಇಲ್ಲಿ ಕೇವಲ ವಿಜಯ ಮಹಾಂತ ಪರಂಪರೆ ಮತ್ತು ಸಾಧನೆಗಳನ್ನು ಕುರಿತಾಗಿ ಮಾತ್ರ ಬಹಳಷ್ಟು ಕೃತಿಗಳು ಪ್ರಕಟಗೊಂಡಿರುವದನ್ನು ಗಮನಿಸುತ್ತೇವೆ.ಇದರೊಂದಿಗೆ ವಿರಕ್ತ ಪರಂಪರೆಯ ಮೂಲವಾದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ ಮೌಲಿಕವಾದ ಅನೇಕ ಕೃತಿಗಳನ್ನು ಪ್ರಕಟಿಸಬೇಕಾದದ್ದು ಬಹು ಮುಖ್ಯವೆನಿಸುತ್ತದೆ.ಮುಂದಿನ ದಿನಗಳಲ್ಲಿ ಈ ಕಾರ್ಯ ನೆರವೇರಲಿ ಎಂಬ ನಿವೇದನೆಯನ್ನು ಮಹಾಮಹಂತರಲ್ಲಿ ಸಲ್ಲಿಸುತ್ತೇನೆ.

ಕೆ.ಶಶಿಕಾಂತ ಲಿಂಗಸುಗೂರು.

One thought on “ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಸಾಹಿತ್ಯ ಸೇವೆ….

  1. ಇಳಕಲ್ ವಿರಕ್ತ ಮಠದ ಇತಿಹಾಸ, ಪರಂಪರೆ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದೀರಿ, ನಿಮ್ಮ ನೀವೇದನೆ ನೆರವೇರಲಿ.

Comments are closed.

Don`t copy text!