ಶರಣೆ ಅಕ್ಕಮ್ಮನ ವಚನ ವಿಶ್ಲೇಷಣೆ
ವಚನಾಂಕಿತ : ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ
ಜನ್ಮಸ್ಥಳ : ಏಲೇಶ್ವರ (ಏಲೇರಿ)
ಕಾಯಕ : ವಚನಕಾರ್ತಿ
ಐಕ್ಯಸ್ಥಳ : ಕಲ್ಯಾಣ
ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ ವೈರಾಗ್ಯನಿಧಿ ಅಕ್ಕಮಹಾದೇವಿಯ ನಂತರ ಅತಿ ಹೆಚ್ಚು ವಚನಗಳನ್ನು ರಚಿಸಿದವರು ನಿಜ ಶರಣೆ ಅಕ್ಕಮ್ಮನವರು. ಅಕ್ಕಮ್ಮನ ಜೀವಿತ ಕಾಲ 1160 ಎಂದು ಚರಿತ್ರೆಕಾರರು ಊಹಿಸಿದ್ದಾರೆ. ಅವರು ಬರೆದ 154 ವಚನಗಳು ದೊರಕಿದ್ದರೂ ಅವರ ಜೀವನ ಕುರಿತಾದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ‘ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ’ ಎಂದು ಅಕ್ಕಮ್ಮ ತಮ್ಮ ವಚನಗಳ ಅಂಕಿತವಾಗಿ ಬಳಸಿದ್ದಾರೆ. ಶರಣೆ ಅಕ್ಕಮ್ಮ ಗುರು ಲಿಂಗ ಜಂಗಮವನ್ನೇ ತನ್ನ ಬದುಕಿನ ಮೂಲಮಂತ್ರವಾಗಿ ಸ್ವೀಕರಿಸಿದವರು ನಿಷ್ಠಾವಂತ ಜೀವನವನ್ನು ನಡೆಸಿದರು. ಏಕನಿಷ್ಠೆ, ವ್ರತೋಪವಾಸ, ಆಚಾರ-ವಿಚಾರಗಳ ಕುರಿತು ಅನೇಕ ವಚನಗಳನ್ನು ಬರೆದಿರುವ ಅಕ್ಕಮ್ಮ ಸತ್ಯಶುದ್ಧ ಕಾಯಕದ ಮಹತ್ವ, ಜ್ಞಾನ ಮತ್ತು ಕ್ರಿಯೆಗಳ ಒಂದುಗೂಡುವಿಕೆಯ ಅಗತ್ಯ, ನೈತಿಕ ನಿಷ್ಠೆ, ಭಕ್ತನ ಅಂತರಂಗಶುದ್ಧಿ ಮೊದಲಾದ ವಿಷಯಗಳ ಕುರಿತು ತನ್ನ ಅನಿಸಿಕೆಯನ್ನು ಅತ್ಯಂತ ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ. ಅಕ್ಕಮ್ಮ ಹೇಳುವಂತೆ 64 ವ್ರತಗಳು, 56 ಬಗೆಯ ಶೀಲಗಳು ಹಾಗೂ 32 ಬಗೆಯ ನಿಯಮಗಳಿದ್ದು, ಅವುಗಳನ್ನೆಲ್ಲ ಭಕ್ತಿಶ್ರದ್ಧೆಯಿಂದ ಅನುಸರಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಇದರಿಂದಾಗಿ ಅಕ್ಕಮ್ಮ ತನ್ನ ಬದುಕಿನಲ್ಲಿ ಈ ಎಲ್ಲಾ ನಿಯಮ ಶೀಲಗಳನ್ನು ಅರಿತು ಆಚರಿಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ವೈಚಾರಿಕ ಶ್ರೇಷ್ಠತೆಯಿಂದ ಕೂಡಿದ ವಚನಗಳಿಂದಾಗಿ ಶರಣೆ ಅಕ್ಕಮ್ಮನ ಹೆಸರು ವಚನಲೋಕದಲ್ಲಿ ಚಿರಸ್ಥಾಯಿಯಾಗಿದೆ. ಆಕೆಯ ಒಂದು ವಚನದ ವಿಶ್ಲೇಷಣೆಯನ್ನು ಈ ಲೇಖನದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ.
ಚಿನ್ನ ಒಡೆದಡೆ ಕರಗಿದಡೆ | ರೂಪಪ್ಪುದಲ್ಲದೆ ||
ಮುತ್ತು ಒಡೆದು | ಕರಗಿದಡೆ ರೂಪಪ್ಪುದೆ ||
ಮರ್ತ್ಯದ ಮನುಜ | ತಪ್ಪಿದರೊಪ್ಪಬೇಕಲ್ಲದೆ ||
ಸದ್ಭಕ್ತ ಸದೈವ | ತಪ್ಪಿದಡೆ ಒಪ್ಪಬಹುದೆ ||
ಆಚಾರಕ್ಕು ಅಪಮಾನಕ್ಕು | ಅಂಗವೆ ಕಡೆಯಲ್ಲದೆ ||
ಬೇರೊಂದಂಗವ ಮಾಡಿ | ಗುರುಲಿಂಗಜಂಗಮದ ಮುಖದಿಂದ ||
ಶುದ್ಧವೆಂದು ತಂದು | ಕೂಡಿಕೊಳಬಹುದೆ ||
ಲಿಂಗಬಾಹ್ಯನ ಆಚಾರಭ್ರಷ್ಠನ | ಜಂಗಮವ ಕೊಂದವನ ||
ಇವರುವ ಕಂಡು ನುಡಿದಡೆ | ಕುಂಭೀಪಾತಕ್ಕೆ ಒಳಗು ||
ಇದಕ್ಕೆ ಸಂದೇಹವಿಲ್ಲ ಆಚಾರವೇ | ಪ್ರಾಣವಾದ ರಾಮೇಶ್ವರಲಿಂಗದ ಆಣತಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-839 / ವಚನ ಸಂಖ್ಯೆ-483)
ಬೆಡಗಿನ ಈ ವಚನದಲ್ಲಿ ಪಂಚಾಚಾರಗಳ ಉಲ್ಲೇಖವಿರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಲಿಂಗವಂತನಾದವು ಎಂಥ ನಡೆ-ನುಡಿ, ಆಚಾರ-ವಿಚಾರಗಳನ್ನು ರೂಢಿಸಿಕೊಳ್ಳಬೇಕೆಂಬುದನ್ನು ವಿವರಿಸಿದ್ದಾರೆ ಹಾಗೆಯೇ ಈ ವಚನದ ಮೂಲಕ ಎಚ್ಚರವನ್ನೂ ನೀಡಿದ್ದಾರೆ.
ವಚನದ ಮೊದಲನೇಯ ಸಾಲಿನಲ್ಲಿ ಉಲ್ಲೇಖವಾಗಿರುವ ಚಿನ್ನ ಶುದ್ಧತೆ ಮತ್ತು ಅತ್ಯಂತ ಮೌಲ್ಯಯುತ ವಸ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂತರಂಗದ ಅರಿವಿನ ಅಥವಾ ಅಮೂಲ್ಯವಾದ ಜ್ಞಾನದ ಸಂಕೇತ. ಈ ಜ್ಞಾನವನ್ನು ತಿಳಿಯುವಾಗ, ಅರಿತುಕೊಳ್ಳುವಾಗ ಅಥವಾ ಅಳವಡಿಕೊಳ್ಳುವಾಗ ಅನೇಕ ರೀತಿಯ ಕಠಿಣ ಮಾರ್ಪಾಡಿಗೆ ಒಳಪಡಬೇಕು ಅಂದರೆ ಶ್ರಮದ ಅಗತ್ಯವಿದೆ. ಬಸವಣ್ಣನವರ ಒಂದು ವಚನದಲ್ಲಿ ಹೇಳುವಂತೆ :
ಕರಗಿಸಿ ಎನ್ನ ಮನದ | ಕಾಳಿಕೆಯ ಕಳೆಯಯ್ಯಾ ||
ಒರೆಗೆ ಬಣ್ಣಕ್ಕೆ ತಂದೆನ್ನ | ಪುಟವನಿಕ್ಕಿ ನೋಡಯ್ಯಾ ||
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ | ಕಡೆಯಾಣಿಯ ಮಾಡಿ ||
ನಿಮ್ಮ ಶರಣರ ಪಾದಕ್ಕೆ | ತೊಡಿಗೆಯ ಮಾಡಿ ||
ಸಲಹು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-251)
ಕಸರುಳ್ಳ ಚಿನ್ನವನ್ನು ಸುಡುವ, ಕಳೆಯುವ, ಪುಟವನಿಡುವ, ಕಡಿಯುವ, ಬಡಿಯುವ, ಸಲುಹುವ ಮೂಲಕ ಕಾಳಿಕೆ ಅಂದರೆ ಕಲ್ಮಷವನ್ನು ಕಳೆಯುವ ಪ್ರಕ್ರಿಯೆ. ಸುಡುವ ಕ್ರಿಯೆಯಿಂದ ಶುರುವಾಗುವ ವಿವರಣೆ ಒಡವೆಯಾಗುವಲ್ಲಿ ಮುಗಿಯುತ್ತದೆ. ಇಂಥದ್ದೊಂದು ರೂಪಾಂತರ ಪ್ರಕ್ರಿಯೆಯಲ್ಲಿ ಸಿಕ್ಕು ಚಿನ್ನವು ಕಡೆಯಾಣಿ (ಅಪರಂಜಿ) ಹಾಗೂ ಆಭರಣಾಗುತ್ತದೆ. ಬಸವಣ್ಣ ವ್ಯಕ್ತಿತ್ವವು ತನ್ನಲ್ಲಿರುವ ಕಳೆಯನ್ನು ಕಳೆದುಕೊಂಡು ಆಭರಣವಾಗುವುದು ಮೊದಲ ಘಟ್ಟದ ಪರಿವರ್ತನೆಯಾದರೆ, ಶರಣರ ಪಾದಕ್ಕೆ ತೊಡಿಗೆಯಾಗುವುದು ತನ್ನ ತರಂಗದ ನಿಜಸ್ವರೂಪದ ನೆಲೆ ಕಂಡುಕೊಳ್ಳುವ ಸ್ಥಾನಾಂತರದ ಸಂಕೇತ. ಹಾಗೆಯೇ, ಅಂತರಂಗದ ಅರಿವಿನ ಜ್ಞಾನವನ್ನು ಎಷ್ಟೇ ಒಡೆದು, ಬಡಿದು ಕರಗಿಸಿದರೂ ತನ್ನ ನಿಜ ನಿಲವನ್ನೇ ತೋರುತ್ತದೆ ಎನ್ನುವುದನ್ನು ನಿಜ ಶರಣೆ ಅಕ್ಕಮ್ಮ ಉಲ್ಲೇಖಿಸದ್ದಾರೆ. ಹಾಗೇನೆ ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ ಎಂದು ತನ್ನನ್ನು ತಾನು ಸಂಸ್ಕರಣೆಗೊಳ್ಳುವ ರೂಪಾಂತರ ಪ್ರಕ್ರಿಯೆಗೆ ಒಳಪಡುವ ಮನುಷ್ಯನನ್ನು ಆಭರಣವಾಗುವವರೆಗೂ ಪರೀಕ್ಷಿಸಬೇಕೆಂದು ನಿರೂಪಣೆ ಮಾಡುತ್ತಾಳೆ.
ಎರಡನೇಯ ಸಾಲಿನ ವಿಶ್ಲೇಷಣೆಗೆ ಹೋಗೋದಕ್ಕಿಂತ ಮುಂಚೆ ಪಂಚತತ್ವಗಳನ್ನು ನೋಡಿಕೊಂಡು ಮುಂದೆ ಹೋಗೋಣ.
ದೀಕ್ಷೆಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮೂರು ಲಿಂಗಗಳ ಪ್ರಸ್ತಾಪ ಬರುತ್ತವೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮತ್ತು ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ ಎನ್ನುವ ಮೂರು ಶರೀರಗಳ ಪ್ರಸ್ತಾಪ ಬರುತ್ತದೆ. ಸ್ಥೂಲ ಶರೀರ ಅಂದರೆ ಕಣ್ಣಿಗೆ ಗೋಚರವಾಗುವ ನಮ್ಮ ದೇಹ. ಸೂಕ್ಷ್ಮ ಶರೀರ ಅಂದರೆ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಅಂದರೆ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿಯಿಂದ ಹುಟ್ಟಿದ ಶ್ರೋತೃ (ಕಿವಿ), ತ್ವಕ್ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು) ಎನ್ನುವ ಸಮಷ್ಠಿ ಅಹಂಕಾರದಿಂದ ಹುಟ್ಟಿದ ಗುಣಗಳು. ನಾವು ನಿಧನರಾದಾಗ ಸ್ಥೂಲ ಶರೀರ ಮಣ್ಣಾಗುತ್ತದೆ. ಸೂಕ್ಷ್ಮ ಶರೀರ ಅಗ್ನಿ, ವಾಯು ಮತ್ತು ಪೃಥ್ವಿಯನ್ನು ಸೇರುತ್ತದೆ. ಕಾರಣ ಶರೀರ ಮುಂದೆ ಪ್ರಯಾಣ ಬೆಳೆಸುತ್ತದೆ.
ಇದಕ್ಕೆ ಒಂದು ಉಪಮೆಯನ್ನು ನೀಡುವುದರ ಮೂಲಕ ನಿರೂಪಿಸುವ ಪ್ರಯತ್ನ ಮಾಡುತ್ತೇನೆ. ಟೇಪ್ ರೆಕಾರ್ಡರ್ ಅದು ಸ್ಥೂಲ ಶರೀರ ಕಣ್ಣಿಗೆ ಕಾಣುವಂಥಾದ್ದು. ಅದಕ್ಕೆ ಧ್ವನಿ ನೀಡಲು ಉಪಯೋಗಿಸುವ ಕ್ಯಾಸೆಟ್ ಅದು ಸೂಕ್ಷ್ಮ ಶರೀರ. ಅದರಿಂದ ಹೊರಡುವ ನಾದಬಿಂದು, ಅದು ಕಾರಣ ಶರೀರ, ನಮ್ಮ ಕಣ್ಣಿಗೆ ಕಾಣಲಾರದು. ಆದರೆ ಅದರಿಂದ ಹೊರಡುವ ಧ್ವನಿ ಅಥವಾ sub conscious mind ಮೂಲಕ ನಾವು ಅನುಭವಿಸಬಹುದು.
ಪಂಚೇಂದ್ರಿಯಗಳ ವಾಸನೆಗೆ ಒಳಪಟ್ಟು ಅನಾಚಾರದಿಂದ ವರ್ತಿಸಿದರೆ ಸೂಕ್ಷ್ಮ ಶರೀರ ಅಂದರೆ ಮನಸ್ಸು ಘಾಸಿಗೆ ಒಳಪಡುತ್ತದೆ. ಕಾರಣ ಶರೀರದ ಅನುಭೂತಿ ಕೆಟ್ಟ ವಿಚಾರದ ಮತ್ತು ಗೊಂದಲದ ಗೂಡಾಗುತ್ತದೆ. ಇದನ್ನೇ ನಿಜ ಶರಣೆ ಅಕ್ಕಮ್ಮ ಮುತ್ತು ಒಡೆದು ಕರಗಿದಡೆ ರೂಪಪ್ಪುದೆ ಎಂದು ಮುತ್ತಿನ ಸಂಕೇತದ ಮೂಲಕ ನಿರೂಪಣೆ ಮಾಡುತ್ತಾರೆ. ಹಾಗೇನೆ ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ ಎಂದು ಭಕ್ತನಾಗಿ ಘಟ್ಟಿತನದ ಅರಿವನ್ನು ಪಡೆದವನು ತಪ್ಪು ಮಾಡಿದಾಗ ಕ್ಷಮಿಸಲಾಗದು ಎಂದು ಹೇಳುತ್ತಾರೆ.
ತನ್ನ ತಾನರಿದನೆಂಬವನ | ಮುನ್ನ ನುಂಗಿತ್ತು ಮಾಯೆ ||
ನಿನ್ನೊಳಗೆ ಅರಿವು | ಭಿನ್ನವಾಗಿರುತ್ತಿರಲು ||
ಮುನ್ನವೆ ನೀನು | ದೂರಸ್ಥ ನೋಡಾ ||
ಭಿನ್ನವಿಲ್ಲದ ಅಜ್ಞಾನವ | ಮಾಡಬಲ್ಲಡೆ ||
ತನ್ನಲ್ಲಿ ಅರಿವು | ನಿಜವಪ್ಪುದು ಗುಹೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-165 / ವಚನ ಸಂಖ್ಯೆ-349)
ತನ್ನ ತಾನರಿದನೆಂಬವನ ಮುನ್ನ ನುಂಗಿತ್ತು ಮಾಯೆ ಎನ್ನುವ ಅಲ್ಲಮಪ್ರಭುಗಳ ವಚನದ ವ್ಯಾಖ್ಯಾನದಂತೆ, ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಲ್ಲದೆ ಎನ್ನುವ ಅಕ್ಕಮ್ಮನ ವಚನದಲ್ಲಿ ಆಚಾರ-ವಿಚಾರಗಳು ಮತ್ತು ಅಂತರಂಗದ ಅರಿವೆಂಬ ಸಮಷ್ಠಿ ಪ್ರಜ್ಞೆಯನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟಾವರಣದ ಮುಖವಾಣಿಗಳಾದ ಅಂತರಂಗದ ಅರಿವೆಂಬ ಗುರು, ಸಂಪ್ರದಾಯ, ಸಂಸ್ಕಾರವೆಂಬ ಲಿಂಗ ಪ್ರಜ್ಞೆ ಮತ್ತು ಲೋಕ ಕಲ್ಯಾಣವೆಂಬ ಜಂಗಮ ಪ್ರಜ್ಞೆ ಬೆಳೆಸಿಕೊಂಡಿದ್ದೇನೆ ಎಂಬ ಅಹಂಕಾರದಿಂದ ವರ್ತಿಸಿದರೆ ಕೇಡು ನಿಶ್ಚಿತವೆನ್ನುವ ಅಗಾಧ ಸಂದೇಶವನ್ನು ಈ ವಚನದ ಮೂಲಕ ವಿವೇಚನೆಗೆ ಹಚ್ಚುತ್ತಾರೆ ನಿಜ ಶರಣೆ ಅಕ್ಕಮ್ಮನವರು.
ಲಿಂಗಬಾಹ್ಯನ ಆಚಾರಭ್ರಷ್ಠನ ಜಂಗಮವ ಕೊಂದವನ ಇವರುವ ಕಂಡು ನುಡಿದಡೆ ಕುಂಭೀಪಾತಕ್ಕೆ ಒಳಗು ಎಂದು ಹೇಳುವ ಮೂಲಕ ನಡೆ ನುಡಿಗಳಲ್ಲಿ ತಪ್ಪಿ ನಡೆದವರನ್ನು ಯಾರೂ ಕ್ಷಮಿಸಲಾರರು ಇದಕ್ಕೆ ಪ್ರಾಣಲಿಂವಾದ ರಾಮೇಶ್ವರಲಿಂಗವೇ ಸಾಕ್ಷಿ ಎಂದು ಧೃಢವಾಗಿ ಹೇಳುತ್ತಾರೆ ಶರಣೆ ಅಕ್ಕಮ್ಮನವರು.
ಪಂಚಾಚಾರಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮ ಲೋಕದ ಶರಣ ಸಂಕುಲದಲ್ಲಿ ಅತೀ ಎತ್ತರಕ್ಕೇರಿದ ಶರಣೆ ಅಕ್ಕಮ್ಮನವರ ಬದುಕು ಅನುಕರಣೀಯ ಮತ್ತು ಇಂದಿಗೂ ಎಂದೆಂದಿಗೂ ನೆನಪಿಡುವಂಥ ಅಮರ ಸಂದೇಶ. ಇಂಥ ಅದ್ಭುತ ಸಂದೇಶಗಳ ಗಣಿ ನಮ್ಮ ಹನ್ನರಡನೇ ಶತಮಾನ. ಎಲ್ಲ ಕಾಲಕ್ಕೂ ಸಲ್ಲುವ ಸೀಮೆಗಳನ್ನೂ ದಾಟಿದ ನಿಸ್ಸೀಮ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಛಲ ನಮ್ಮಲ್ಲಿ ಬರಬೇಕು.
ಲೇಖನ :ವಿಜಯಕುಮಾರ ಕಮ್ಮಾರ ತುಮಕೂರು –ಮೋಬೈಲ್ ನಂ : 9741 357 132 ಈ-ಮೇಲ್ : vijikammar@gmail.com