ಆತ್ಮೀಯರೇ,
ಇಂದಿನ ದಿನ ವಿಶೇಷ. 10-10-2020. ಹತ್ತು ಹತ್ತು ಇಪ್ಪತ್ತು ಇಪ್ಪತ್ತು. ಹತ್ತು ಹತ್ತು ದ್ವಿಗುಣವಾದರೆ ಇಪ್ಪತ್ತು ಇಪ್ಪತ್ತು ಹಾಗುತ್ತದೆ. ಲೆಕ್ಕ ಅಥವಾ ಗಣಿತ ವಿಶೇಷವಾದ ಶಾಸ್ತ್ರ. ಗಣಿತವನ್ನು ದೂರ ಇಟ್ಟು ಜೀವನ ನಡೆಸುವದು ಕಷ್ಟ. ಗಣೀತ ಜೀವನದ ಅವಿಭಾಜ್ಯ ಅಂಗ. ಗಣಿತದ ಸಂಖ್ಯೆಗಳು ತುಂಬಾ ಆಕರ್ಷಕ.
ನಿನ್ನೆಯಿಂದ ಸಮಾಜಿಕ ಜಾಲ ತಾಣದಲ್ಲಿ ಇಂದಿನ ದಿನಾಂಕದ ಕುರಿತು ಪೋಸ್ಟರ್ ಹರಿದಾಟ ಅಧಿಕವಾಗಿದ್ದು, ಅದನ್ನು ನೆಪವಾಗಿಸಿಕೊಂಡು ಗಣಿತ ಕುರಿತು ಮಾಹಿತಿಯನ್ನು ಅವಲೋಕೊಸೋಣ.
ಗಣಿತ ಕ್ಷೇತ್ರಕ್ಕೆ ಭಾರತದ ಕೊಡುಗೆ `ಸೊನ್ನೆ’ ಎಂಬುದು ನಮಗೆಲ್ಲ ಗೊತ್ತು. ಆದರೆ ಇದರ ಹೊರತಾಗಿಯೂ ಗಣಿತ ಕ್ಷೇತ್ರಕ್ಕೆ ಭಾರತದ ಕೊಡುಗೆ ಬಹಳಷ್ಟಿದೆ ಮತ್ತು ಆಧುನಿಕ ಗಣಿತದವರೆಗೂ ಅದರ ಪ್ರಭಾವ ಇದೆ ಎಂಬುದು ವಿಶೇಷ ಸಂಗತಿ. ಅದಲ್ಲದೇ ಭಾರತೀಯ ಸಂಸ್ಕೃತಿಯ ಬೆಳವಣಿಗೆಯಲ್ಲಿ ಗಣಿತವೂ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ.
ಈಗ ಜಾಗತೀಕವಾಗಿ ಬಳಕೆಯಲ್ಲಿರುವ ಅಂಕಿಗಳು ಭಾರತದ ಕೊಡುಗೆ ಅಷ್ಟೇ ಅಲ್ಲದೇ, ಬೀಜಗಣಿತದ ಮೂಲವೂ ಭಾರತದವೇ ಆಗಿದೆ.
ಸಿಂಧೂ ನಾಗರೀಕತೆ ಕ್ರಿಸ್ತಪೂರ್ವ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತು. ಆ ಕಾಲದ ಅತ್ಯಂತ ಪ್ರಸಿದ್ಧ ಎರಡು ನಗರಗಳೆಂದರೆ ಹರಪ್ಪಾ ಮತ್ತು ಮೊಹೆಂಜೊದಾರೊ. ಈ ಎರಡೂ ನಗರಗಳ ಅವಶೇಷಗಳು ಪ್ರಾಕ್ತನ ಸಂಶೋಧಕರಿಗೆ ಮತ್ತು ಇತಿಹಾಸಕಾರರಿಗೆ ಮೊದಲ ಬಾರಿ ದೊರೆತಾಗ ಸಿಂಧೂ ನಾಗರೀಕತೆಯ ಜನರ ಜೀವನದ ಕುರಿತು ಸ್ಪಷ್ಟ ಚಿತ್ರ ಸಿಕ್ಕಿತು. ಅವರು ಕಟ್ಟಿದ ಪಟ್ಟಣದ ರಚನೆ, ಕಟ್ಟಡಗಳ ವಿನ್ಯಾಸಗಳು ಆ ಜನರಿಗೆ ಗಣಿತ ಆಳವಾಗಿ ಗೊತ್ತಿತ್ತು ಎಂಬುದನ್ನು ಸಾರಿ ಹೇಳುವಂತಿದ್ದವು. ಕಟ್ಟಡಗಳ ಅಳತೆಗಳು ದಶಮಾಂಶ ಪದ್ಧತಿಯ ಪ್ರಕಾರ ಇದ್ದವು. ಇದಕ್ಕಿಂತಲೂ ಮೊದಲಿನದು ಎಂದು ಹೇಳಲಾಗುವ ಖಗೋಳ ಶಾಸ್ತ್ರ ಕೂಡಾ ಗಣಿತದ ಸಿದ್ಧಾಂತಗಳ ಮೇಲೆಯೇ ರೂಪುಗೊಂಡಿರುವಂತಹದ್ದು. ಮತ್ತು ತ್ರಿಕೋನಮಿತಿಯಂತಹ ಗಣಿತಕ್ಷೇತ್ರಗಳ ಬೆಳವಣಿಗೆಯಲ್ಲಿ ಖಗೋಳಶಾಸ್ತ್ರದ ಕೊಡುಗೆಯೂ ಬಹಳಷ್ಟಿದೆ.
ವೇದ ಸಾಹಿತ್ಯದಲ್ಲಿಯೂ ಗಣಿತದ ಬಳಕೆಯ ಕುರಿತು ವಿವರಗಳಿವೆ. ಕ್ರಿ.ಪೂ. 1800 ರ ಕಾಲದ್ದೆನ್ನಲಾದ ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣದಲ್ಲಿ ಯಜ್ಞಕ್ಕೆ ಬೇಕಾದ ವೇದಿಕೆಯ ರಚನೆಯ ಕುರಿತು ದೀರ್ಘ ವಿವರಣೆಗಳನ್ನು ನೀಡಲಾಗಿದೆ. ವೇದಗಳಿಗೆ ಅನುಬಂಧಗಳಾದ ನಾಲ್ಕು “ಶುಲ್ಬ ಶಾಸ್ತ್ರ”ಗಳು ಬೋಧಾಯನ (ಕ್ರಿ.ಪೂ.600), ಮಾನವ (ಕ್ರಿ.ಪೂ.750), ಅಪಸ್ಥಂಭ (ಕ್ರಿ.ಪೂ.600), ಮತ್ತು ಕಾತ್ಯಾಯನ (ಕ್ರಿ.ಪೂ.200) ಎಂದು ಅವುಗಳ ಲೇಖಕರ ಹೆಸರನ್ನೇ ಹೊಂದಿದ್ದು, ಅವುಗಳಲ್ಲಿ ಪೈಥಾಗೋರಸ್‌ನ ಸಂಶೋಧನೆ ಎಂದು ಹೇಳಲಾಗುತ್ತದೆ.
ಇಂದು ವಿಶ್ವದಾದ್ಯಂತ ಹೆಚ್ಚು ಪ್ರಚಾರದಲ್ಲಿರುವುದು ಜ್ಯೋತಿಷ್ಯ ಶಾಸ್ತ್ರ. ಇದರಲ್ಲಿ ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ, ವಾಸ್ತು, ಗಿಣಿ ಶಾಸ್ತ್ರ, ಇಲಿಶಾಸ್ತ್ರ, ಶಕುನಶಾಸ್ತ್ರ, ಪಂಚಾಂಗ ಶಾಸ್ತ್ರ ಸೇರಿದಂತೆ ಹತ್ತು ಹಲವು ಶಾಸ್ತ್ರಗಳಿವೆ.
ಇವುಗಳೆಲ್ಲವೂ ನಮ್ಮ ದೇಶದ ಶಾಸ್ತ್ರಗಳೇ ಎಂದು ಹೇಳಲಾಗದು. ಹಸ್ತ ಸಾಮುದ್ರಿಕ ಜಪಾನಿನಲ್ಲಿ, ವಾಸ್ತುಶಾಸ್ತ್ರ ಚೀನಾದಲ್ಲಿ, ಗಿಣಿಶಾಸ್ತ್ರ ಅಮೆರಿಕದಲ್ಲಿ, ಇಲಿಶಾಸ್ತ್ರ ಆಫ್ರಿಕಾದಲ್ಲಿ, ಸಂಖ್ಯಾಶಾಸ್ತ್ರ ಗ್ರೀಕ್ ಮತ್ತು ಈಜಿಪ್ಟ್‌ಗಳಲ್ಲಿ ಹಾಗೂ ಪಂಚಾಂಗಶಾಸ್ತ್ರ ನಮ್ಮ ದೇಶದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಇಂದು ಎಲ್ಲೆಡೆ ಸಂಖ್ಯಾಶಾಸ್ತ್ರ ತನ್ನ ಸ್ಥಾನಮಾನ ಭದ್ರಪಡಿಸಿಕೊಂಡಿದೆ. ಇದನ್ನು ‘ನ್ಯೂಮರಾಲಜಿ’ ಎಂದೂ ಕರೆಯುತ್ತಾರೆ.
ಇದನ್ನು ಮೊದಲು ಬಳಕೆಗೆ ತಂದವರು ಗ್ರೀಕ್‌ನವರು. ಖ್ಯಾತ ಗಣಿತಜ್ಞ ಪೈಥಾಗೊರಸ್ ಸಂಖ್ಯಾಶಾಸ್ತ್ರವನ್ನು ನಿಯಮಬದ್ಧವಾಗಿ ಅಭಿವೃದ್ಧಿಪಡಿಸಿದ. ನಂತರ ಇದು ಜಗತ್ತಿನ ಎಲ್ಲಾ ದೇಶಗಳಲ್ಲೂ ಬಳಕೆಗೆ ಬಂತು.
ಸಂಖ್ಯೆಗಳೇ ಆಧಾರ
ಇಂದು ಸಂಖ್ಯೆಗಳಿಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯದು. ಅಂದರೆ ಲೋಕದ ಎಲ್ಲಾ ನಡವಳಿಕೆಗೂ ಸಂಖ್ಯೆಗಳೇ ಆಧಾರ. ಎಲ್ಲಾ ಕಾಲದಲ್ಲೂ ಲೋಕದ ಸೃಷ್ಟಿ, ಸ್ಥಿತಿ, ಲಯಗಳನ್ನು ತಿಳಿಸುವುದು ಸಂಖ್ಯೆಗಳೇ. ಮನುಷ್ಯನ ಇಂದಿನ ಜೀವನದ ಸಕಲ ಆಗುಹೋಗುಗಳಿಗೂ ಸಂಖ್ಯೆಗಳೇ ಕಾರಣ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅವನನ್ನು ಸಂಖ್ಯೆಗಳೇ ನಿಯಂತ್ರಿಸುತ್ತವೆ.
( ಈ ಲೇಖನವನ್ನು ಅಂತರಜಾಲದಿಂದ ಪಡೆಯಲಾಗಿದೆ. )