ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ

 ವಚನ ಸಾಹಿತ್ಯದ ಆಶಯಗಳು-2

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ

ವಚನ ಸಾಹಿತ್ಯ ಎಂಬ ಈ ಹೊಸ ಬಗೆಯ ಸಾಹಿತ್ಯದ ರಚನೆಯಲ್ಲಿ ಈ ಎರಡು ಅಂಶಗಳು ಪ್ರಧಾನವಾಗಿದ್ದುವು

೧) ಜಾತಿಭೇದವಿಲ್ಲದ,ಎಲ್ಲರೂ ಸಮಾನರೆಂದು ಸಾರುವ ,ಎಲ್ಲರೂ ಕಾಯಕ ಮಾಡಬೇಕೆನ್ನುವ ಮತ್ತು ಕಾಯಕಗಳೆಲ್ಲವೂ ಸಮಾನ ಎನ್ನುವ ವಚನಗಳು
೨) ಹೊಸ ಧರ್ಮವನ್ನು ಎತ್ತಿ ಹಿಡಿಯುವ ಮತ್ತು ಎಲ್ಲರಿಗೂ ಧಾರ್ಮಿಕ ಸಮಾನತೆ ನೀಡಬೇಕೆಂಬ ವಚನಗಳ ರಚನೆಯಾಗಬೇಕೆಂಬ ಆಶಯ.

ನಮಗೆ ಲಭ್ಯವಿರುವ ಇಪ್ಪತ್ತೊಂದು ಸಾವಿರ ವಚನಗಳಲ್ಲಿ ಹದಿನೈದು ಸಾವಿರ ವಚನಗಳನ್ನು ಹನ್ನೆರಡನೇ ಶತಮಾನದಲ್ಲಿಯೇ ರಚಿಸಲಾಯಿತು ಎಂದರೆ , ಬಸವಣ್ಣನವರ ಚೈತನ್ಯ, ಅವರ ವ್ಯಕ್ತಿತ್ವ ಅದೆಷ್ಟು ಅದಮ್ಯ ಮತ್ತು ಘನವಾಗಿರಬೇಕು ಎಂಬುದು ಆಶ್ಚರ್ಯಕರವೇ ಸರಿ.ಇದಲ್ಲದೆ ಸಂಸ್ಕೃತ ದ ಬದಲು ಕನ್ನಡ ಭಾಷೆಯನ್ನೇ ಆರಿಸಿಕೊಂಡದ್ದು ಸಹ ಒಂದು ಕ್ರಾಂತಿಯೇ. ಬಸವಣ್ಣನವರು ಮೂರ್ತಿಪೂಜೆಗೆ ಬದಲಾಗಿ ಏಕದೇವೋಪಾಸನೆಗೆ ಮಹತ್ವ ಕೊಟ್ಟರು.ಶರಣರ ‘ಶಿವ’ ನಿರಾಕಾರ,ಅಪರಿಮಿತ ಶಕ್ತಿಯಿಂದ ಕೂಡಿದ ಅಪರಿಮಿತ ಚಿತ್ತ ! ಎಲ್ಲ ಜಾತಿ ಧರ್ಮದವರಿಗೆ ,ಲಿಂಗಭೇದ ಇಲ್ಲದೆ ಲಿಂಗದೀಕ್ಷೆ ಮಾಡುವ ಮೂಲಕ ಎಲ್ಲರೂ ಒಂದು ಎನ್ನುವ ಭಾವ ಮೂಡಿತು. ಅದೇ ಸಮಾನತಾ ಭಾವವನ್ನು ತಮ್ಮ ವಚನಗಳಲ್ಲಿ ಕೂಡಾ ತೋರ್ಪಡಿಸಿ, ನುಡಿದಂತೆ ನಡೆದರು.ಕಾಯಕದ ಜೊತೆಗೆ ಜಂಗಮದಾಸೋಹದ ಮಹತ್ವವನ್ನು ಸಾರಿದರು.ಶರಣರು ‘ ಸನ್ಯಾಸವಿರೋಧಿ’ ಆಗಿದ್ದರೆಂದರೆ ತಪ್ಪಿಲ್ಲ. ಸಂಸಾರದಲ್ಲಿದ್ದು ಪರಮಾತ್ಮನನ್ನು ಒಲಿಸಿಕೊಳ್ಳುವ ಪರಿಯನ್ನು ವಚನಸಾಹಿತ್ಯದಲ್ಲಿ ನೋಡಬಹುದು. ” ಹೆಣ್ಣನ್ನು ತ್ಯಜಿಸಿ ಶಿವನನ್ನು ಒಲಿಸಬೇಕೆಂಬರು,ಏಕೆ,ಶಿವನಿಗೂ ಹೆಣ್ಣಿಗೂ ವಿರೋಧವೇ?” ಎಂದು ಒಬ್ಬ ಶರಣೆ ಕೇಳುತ್ತಾಳೆ. ” ಹಾವಿನ ಹಲ್ಲು ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸಾದಂತೆ” ಸಂಸಾರದ ಬಗೆಗಿನ ಅತಿ ಆಸೆಗಳನ್ನು ಕಳೆದು ಸಂಸಾರದಲ್ಲಿ ಇರುವುದೂ ಲೇಸು.ಅದಕ್ಕೆ ಅಂಜಿ ಕಾಡಿಗೆ ಏಕೆ ಹೋಗಬೇಕೆಂಬುದು ಶರಣರ ಪ್ರಶ್ನೆ. ” ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂಬ ಮಾತು ಶರಣರದು.

ಇಷ್ಟಲಿಂಗ ಧರಿಸಿದ ಎಲ್ಲರೂ ಸಮಾನರು. ” ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ವಚನದಲ್ಲಿ ಶರಣರು ಈ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ವಚನ ಸಾಹಿತ್ಯದಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಅಂಶ – ಶರಣರು ಮಹಿಳೆಯರಿಗೆ ಕೊಟ್ಟ ಗೌರವ ಮತ್ತು ಸಮಾನತೆ. ಹೆಣ್ಣನ್ನು ಕೇವಲ ಭೋಗವಸ್ತು, ಶಿಕ್ಷಣ ಪಡೆಯಲು ಅನರ್ಹಳು,ಪುರುಷನ ಸರಿಸಮಾನಳಾಗಲು ಸಾಧ್ಯವಿಲ್ಲ ಅನ್ನುವಂಥ ಕಾಲದಲ್ಲಿ ಬಸವಣ್ಣನವರು ಸ್ತ್ರೀಯರಿಗೆ ಪ್ರಾಮುಖ್ಯ ಕೊಟ್ಟರು.
ಹೆಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ”

” ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ”

– ಎಂಬ ವಚನಗಳು ಹೆಣ್ಣಿನ ಘನತೆಯನ್ನು ಎತ್ತಿ ತೋರಿಸಿದುವು.

ಮೊಲೆ ಮುಡಿ ಬಂದರೆ ಹೆಣ್ಣೆಂಬರು,ಗಡ್ಡ ಮೀಸೆ ಬಂದರೆ ಗಂಡೆಂಬರು,ಆದರೆ ಒಳಗೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ” – ಎಂಬ ವಚನ ಲಿಂಗಭೇದವನ್ನಳಿಸಿ ಸಮಾನತೆಯನ್ನು ಎತ್ತಿಹಿಡಿಯುತ್ತದೆ. ಅನುಭವ ಮಂಟಪದಲ್ಲಿ ಮೂವತ್ತಮೂರಕ್ಕೂ ಹೆಚ್ಚು ಶರಣೆಯರು ಸೇರಿ,ಚಿಂತನೆ ಮಾಡಿ,ಅದ್ಭುತವಾದ ವಚನಗಳನ್ನು ಬರೆದರು. ಅಂದರೆ,ಅವರಲ್ಲಿಯ ಅದಮ್ಯ ಶಕ್ತಿ, ಅಂತಃಸತ್ತ್ವ ಅಪೂರ್ವವಾದುದು!

ಒಟ್ಟಾರೆ ವಚನ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿದಾಗ ಕಂಡುಬರುವ ಅತ್ಯಂತ ಪ್ರಮುಖ ಅಂಶಗಳು ಎರಡು ಅನ್ನಬಹುದು.
೧) ಸಮಾನತೆ
೨)ಮಾನವೀಯತೆ.

ವಚನ ಸಾಹಿತ್ಯದ ಕೆನೆಪದರ ಬಸವಣ್ಣನವರ ಎರಡು ವಚನಗಳೇ ಸಾಕ್ಷಿ.
೧) ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯ

೨) ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ಇದಿರ ಹಳಿಯಲು ಬೇಡ,
ತನ್ನ ಬಣ್ಣಿಸಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವನನೊಲಿಸುವ ಪರಿ….

ವಚನಸಾಹಿತ್ಯ ಮಾನವಕುಲಕ್ಕೆ ಅಂದಿಗೂ ಇಂದಿಗೂ ಎಂದಿಗೂ ಮಾಣಿಕ್ಯದ ದೀಪ್ತಿಯೇ ಆಗಿದೆ.

ಶರಣು!

( ಸಶೇಷ)

ಆಧಾರ -ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ

Don`t copy text!