ಮಹಾಪ್ರಭೆ ಬಸವಣ್ಣ
ಜಗಜ್ಯೋತಿಯ ಜಯಂತಿಯನ್ನು ಅವರ ಬೋಧನೆಗಳ ಮಹತ್ವ ಅರಿತುಕೊಳ್ಳುವ ಮೂಲಕ ಆಚರಿಸೋಣ!
ವಚನ ಚಳುವಳಿಯು ಮುಂದಿರಿಸಿದ ಸಮಸಮಾಜದ ಕನಸುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳೋಣ!
ವ್ಯವಸ್ಥೆಯ ಬದಲಾವಣೆಯ ಕುರಿತಾದ ಅವರ ಧೃಢಸಂಕಲ್ಪವನ್ನು ಮೈಗೂಡಿಸಿಕೊಳ್ಳೋಣ!
ಕ್ರಾಂತಿಕಾರಿ ಬಸವಣ್ಣನವರಿಗೆ ಎಲ್ಲ ಕಸುವು ಸೇರಿಸಿಕೊಂಡು ಬಹುಪರಾಕ್ ಹೇಳೋಣ!
ಪ್ರಿಯರೇ, ಮತ್ತೊಂದು ಬಸವ ಜಯಂತಿ ನಮ್ಮೆದುರಿಗಿದೆ. ಕರುನಾಡಿನ ಜನತೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಬಸವ ಜಯಂತಿಯು ಒಂದು ಹಬ್ಬವೇನೋ ನಿಜ; ನಾಡಿನ ಪ್ರತಿ ಮೂಲೆ ಮೂಲೆಯಲ್ಲಿ ಕಳೆದ ಎಂಟುನೂರಕ್ಕೂ ಹೆಚ್ಚು ವರ್ಷಗಳಿಂದ ಪ್ರೀತಿ ಮತ್ತು ಹೆಮ್ಮೆಯೊಂದಿಗೆ ಇದನ್ನು ಆಚರಿಸುತ್ತಾ ಬರಲಾಗುತ್ತಿದೆಯಷ್ಟೆ. ಆದರೆ, ಈ ಜಯಂತಿಯ ಆಚರಣೆಯು ಬಸವಣ್ಣನವರನ್ನು ಅವರ ವ್ಯಕ್ತಿತ್ವ ಮತ್ತು ಬೋಧನೆಗಳನ್ನು ಅರಿತುಕೊಳ್ಳಲು ಎಷ್ಟೊಂದು ಬಳಕೆಯಾಗಿದೆ? ಜನ್ಮದಿನವು ಸಡಗರದ ಸೊತ್ತಾಗಿರುವಾಗಲೇ ಅವರು ಬೆಳಗಿಸಿರುವ ವೈಚಾರಿಕ ಜ್ಯೋತಿಯ ಪ್ರಭೆಯು ಎಲ್ಲೆಡೆ ಹರಡಲು ಅನುವು ಮಾಡಿಕೊಡಬೇಕಲ್ಲವೆ? ಜಾಗತಿಕ ತತ್ವಜ್ಞಾನಿಗಳಾದ ಬಸವಣ್ಣನವರು ಮತ್ತು ಆತನ ಸಮಕಾಲೀನ ಹೋರಾಟಗಾರರು ಸಮತೆಯ ಸಮಾಜದ ಸ್ಥಾಪನೆಯನ್ನು ಬೋಧಿಸಿದವರು. ಅಸಮಾನತೆಯ ವ್ಯವಸ್ಥೆಯನ್ನು ನಾಶಮಾಡಲು ಮುಂದಾಗುವ ಮೂಲಕವೇ ಇದು ಸಾಧ್ಯವೆಂದು ಗಟ್ಟಿಯಾಗಿ ಕೂಗಿ ಹೇಳಿದವರು. ಆ ಯತ್ನದಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡು ಮಹಾಪ್ರಭೆಯಾದವರು!
ಉತ್ಪಾದಕತೆಯು ಕೃಷಿಪ್ರಧಾನವಾಗಿದ್ದ ಇತಿಹಾಸದ ಆ ಘಟ್ಟದಲ್ಲಿ ಬಸವಣ್ಣನವರು, ಆಗಿನ ಸಂದರ್ಭದಲ್ಲಿನ ಪ್ರಭುತ್ವದ ಮಾನ್ಯತೆ ಪಡೆದಿದ್ದ ಪ್ರತಿಗಾಮಿ ಪುರೋಹಿತಶಾಹಿ ಸಂಸ್ಕೃತಿಯು ಪ್ರತಿಪಾದಿಸುತ್ತಿದ್ದ ಅಸಮಾನತೆಯ ಸಿದ್ಧಾಂತ ಮತ್ತು ಮೌಢ್ಯಕ್ಕೆದುರಾಗಿ – ಸಮಾಜದ ಪ್ರತಿಯೊಬ್ಬನ ಬದುಕಿನಲ್ಲಿನ ಕಾಯಕದ ಮಹತ್ವದ ಕುರಿತು ಮಾತಾಡಿದ್ದು ಮತ್ತು ಸಾಮಾಜಿಕ ಜೀವನದಲ್ಲಿ ಎಲ್ಲ ವೃತ್ತಿಗಳು ಗೌರವಾರ್ಹವಾದವು ಎಂದು ಪ್ರತಿಪಾದಿಸಿದ್ದು ಸರ್ವವೇದ್ಯ. ಸಾಮಾಜಿಕ ವ್ಯವಸ್ಥೆಯೊಂದರಲ್ಲಿ ಮಾನವರು ಪರಸ್ಪರರನ್ನು ಶೋಷಿಸದೇ ನೋಯಿಸದೇ ಇರಬೇಕೆಂಬುದನ್ನು ಮತ್ತು ವಿವೇಚನೆಯೊಂದಿಗೆ ಜೀವಿಸುವದಾದಲ್ಲಿ ಇದು ಸಾಧ್ಯವೆಂದು ನಂಬಿದ್ದವರು. ಸಮಾಜದ ಸರ್ವ ಸದಸ್ಯರೂ ಸಾಮಾಜಿಕ ಐಕ್ಯತೆಯನ್ನು ಸ್ಥಾಪಿಸಿಕೊಂಡು ಸಮಾನತೆಯಿಂದ ಘನತೆಯಿಂದ ಜೀವಿಸಲು ಪ್ರತಿಗಾಮಿಯಾಗಿರುವ ಪಾರಂಪರಿಕ ನಂಬಿಕೆ ಮತ್ತು ಚಿಂತನಾ ವಿಧಾನದಿಂದ ಕಳಚಿಕೊಳ್ಳಬೇಕು ಮತ್ತು ಹೊಸದಾದ ಚಿಂತನಾ ಮತ್ತು ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು, ಅಲ್ಲಿ ಸಕಲರಿಗೆ ಲೇಸನ್ನು ಬಯಸುವ ಧೋರಣೆಯಿರಬೇಕು ಎಂಬ ತತ್ವವನ್ನು ಎತ್ತಿಹಿಡಿದು – ಅಂದಿನ ಸಮಾಜದಲ್ಲಿನ ಶೋಷಿತ ವರ್ಗಗಳೆಲ್ಲವನ್ನೂ ಒಟ್ಟುಗೂಡಿಸಿಕೊಂಡು ಚರಿತ್ರೆಯ ವೈಚಾರಿಕ ಮುನ್ನೆಡೆಗೆ ದೊಡ್ಡದಾದಂತಹ ಜೀಕನ್ನು ಒದಗಿಸಿದ ಬಸವಾದಿ ಪ್ರಮಥರ ಜೀವನ ಮತ್ತು ಬೋಧನೆ, ‘ದಯೆ’ಯೇ – ಪರಸ್ಪರ ಸಹಕಾರವೇ –‘ಜೀವನಧರ್ಮ’ವಾಗಿರಬೇಕೆಂದು ಮತ್ತು ಅದರ ಹೊರತಾದ ಧರ್ಮವೆಂಬುದು ಅಧರ್ಮವೆಂದು ಸಾರಿ ಸಾರಿ ಹೇಳಿದರು.
ಇದೆಲ್ಲ ಘಟಿಸಿ ಈಗ ಎಂಟು ನೂರು ವರ್ಷಗಳಿಗೂ ಮಿಕ್ಕಿ ಕಾಲ ಸಂದಿದೆ. ತಾರತಮ್ಯ ಮತ್ತು ಶೋಷಣೆಗಳಿರುವ ಸಾಮಾಜಿಕ ವ್ಯವಸ್ಥೆಯ ಅಮೂಲಾಗ್ರವಾದಂತಹ ಬದಲಾವಣೆಯನ್ನು ಬೋಧಿಸಿದ ಬಸವಣ್ಣ ಮತ್ತು ಅಂದಿನ ಆ ವಚನ ಚಳುವಳಿಯ ಶರಣಗಣ ತಾವು ನಂಬಿದ ವೈಚಾರಿಕತೆಯ ಹಿರಿಮೆಗಾಗಿ ಅಂದಿನ ಪ್ರತಿಗಾಮಿ ವ್ಯವಸ್ಥೆಯ ಅಧಿಪತಿಗಳು ಮತ್ತು ಅವರ ಕಾಲಾಳುಗಳೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿ ಹುತಾತ್ಮರಾದದ್ದನ್ನು ಇತಿಹಾಸ ದಾಖಲಿಸಿದೆ. ಆದರೆ, ಅವರ ವೈಚಾರಿಕ ಪರಂಪರೆಯನ್ನು ಸಂಪೂರ್ಣವಾಗಿ ಹಿಡಿದೆತ್ತಿ ನಿಲ್ಲಿಸುವಲ್ಲಿ ಎಷ್ಟೊಂದು ಪ್ರಗತಿ ಸಾಧಿಸಲಾಗಿದೆ? ಬದಲಿಗೆ ಬಸವಾದಿ ಪ್ರಮಥರನ್ನೇ ಪ್ರತಿಗಾಮಿಯಾದ ಪಂಗಡಪದ್ಧತಿಯಲ್ಲಿ ಗುರುತಿಸುವ ಕೆಲಸ ನೆಡೆದಿದೆ! ವ್ಯಕ್ತಿಗಳನ್ನು ಆರಾಧಿಸುವ ಮೂಲಕ ಅವರ ವೈಚಾರಿಕ ಬೋಧೆಗಳನ್ನು ನಗಣ್ಯಗೊಳಿಸುವ ಅದೇ ಹಳೆಯ ದುರುಳ ಪರಂಪರೆ ಹಾಗೇ ಮುಂದುವರೆದಿದೆ. ಬಸವನನ್ನು ನೆನೆಯುವದೆಂದರೆ ಅದು ಸಮಾನತೆಯೆಡೆಗಿನ ತುಡಿತವಾಗಬೇಕಾದುದರ ಬದಲು – ಯಾವ ಜಾತಿ ಮತ್ತು ತಾರತಮ್ಯ ಹಾಗೂ ಶೋಷಣೆ ಮತ್ತು ಕ್ರೌರ್ಯದ ವಿರುದ್ಧ ಘರ್ಜಿಸಿ ದಯೆಯೇ ಧರ್ಮದ ಮೂಲವೆಂದು ಸಾರಲಾಗಿತ್ತೋ – ಅದನ್ನು ಮರೆಮಾಚಿ ಮೂರ್ತಿಯ ಆರಾಧನೆಯೇ ಪರಾಕಾಷ್ಠೆ ಪಡೆದಿದೆ. ಬಸವನ ನಿಜವಾದ ಕಾಲಾಳುಗಳಾಗಿರಬೇಕಾದ ಶೋಷಿತ ವರ್ಗಗಳ ಜನತೆಯು ದುರುಳರು ಹರಡಿದ ಅಜ್ಞಾನದ ಸೆಳವಿಗೆ ಸಿಲುಕಿ ಬಸವನನ್ನು ಎತ್ತಾಗಿ ಪರಿಗಣಿಸಿ ಪೂಜಿಸುವ ಆಚರಣೆಗೆ ಏನನ್ನಬೇಕೋ!
ದೀಪದಿಂದ ದೀಪವನ್ನು ಬೆಳಗುವ ಪ್ರಕ್ರಿಯೆ ಮಹಾಪ್ರಭೆಯನ್ನು ಸ್ಥಾಪಿಸುವಂತೆ – ವೈಚಾರಿಕ ಜ್ಯೋತಿ ಬೆಳಗುವಿಕೆಯು ಜಗಜ್ಯೋತಿಯು ಮೈದಾಳಿ ಬೆಳಗುವದಕ್ಕೆ ದಾರಿ ತೋರಬಲ್ಲದು! ಬಸವಾದಿ ಶರಣರ ಬೋಧನೆಗಳು ಜಗದಗಲ ಮುಗಿಲಗಲ ಹರಡಬೇಕು, ಅದು ಅವರ ಆಶಯಗಳನ್ನು ಈಡೇರಿಸುವ ಕ್ರಾಂತಿಕಾರಿ ಶಕ್ತಿ ಮೈದಾಳಲು ದಾರಿ ಮಾಡಬೇಕು. ಅದಕ್ಕಾಗಿ ನಾವು ಬಸವ ಜಯಂತಿಯನ್ನು – ಮಹಾಗುರು ಬಸವಣ್ಣನವರ ಬೋಧನೆಗಳನ್ನು ಅವು ಒಳಗೊಂಡಿರುವ ವೈಚಾರಿಕ ಮಹತ್ವವನ್ನು ಅರಿಯಲು ಮುಂದಡಿಯಿಡುವ ಮೂಲಕ ಆಚರಿಸಬೇಕು.
ಅವೈಚಾರಿಕತೆಯನ್ನು –ಅಜ್ಞಾನವನ್ನು ಹರಡುವ ಶೋಷಕ ಪ್ರತಿಗಾಮಿ ವರ್ಗಗಳ ಹುನ್ನಾರಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ – ಶರಣರು ಸಾರಿದ ಸಮಾನತೆಯ ಸಮಾಜದ – ಇವನಾರವ ಎನ್ನದ ಇವನಮ್ಮವ ಎನ್ನುವ ಸಮಾಜದ -ನಿರ್ಮಾಣಕ್ಕೆ ಧೃಢ ಸಂಕಲ್ಪ ಮಾಡಬೇಕಾಗಿದೆ. ಇದುವೇ ನಿಜವಾದ ರೀತಿಯ ಬಸವ ಜಯಂತಿಯ ಆಚರಣೆಯಾಗಿದೆ.
–ಅಯ್ಯಪ್ಪ ಹೂಗಾರ್ , ಮೈಸೂರು
೯೮೪೫೦೧೬೪೯೩