ಶಿವಶರಣೆಯರು ಕಂಡಂತೆ ಬಸವಣ್ಣನವರು.

ಶಿವಶರಣೆಯರು ಕಂಡಂತೆ ಬಸವಣ್ಣನವರು.

ಬಸವಣ್ಣನವರು ಅವರ ಸಮಕಾಲಿನ ಶರಣರು ಕಂಡಂತೆ, ಕವಿ ದಾರ್ಶನಿಕರು ಕಂಡಂತೆ, ಜನಪದರು ಕಂಡಂತೆ, ನಾಡಿನ ಎಲ್ಲ ಮಹಾತ್ಮರು ಕಂಡಂತೆ, ಮಹಾನ್ ಮಹಾನ್ ನಾಯಕರುಗಳು ಕಂಡಂತೆ ಒಟ್ಟಾರೆ ಈ ಜಗತ್ತು ಕಂಡಂತೆ ಮಹಾಮಾನವತವಾದಿ, ಸರ್ವಶ್ರೇಷ್ಠ ಚಿಂತಕ, ಸರ್ವಸಮಾನತೆಯ ಹರಿಕಾರ, ಸಕಲ ಜೀವಾತ್ಮಗಳಿಗೆ ಲೇಸನ್ನೆ ಬಯಸಿದ ಮಹಾ ವಿಭೂತಿಪುರುಷ ಗುರುಬಸವಣ್ಣನವರು.

ಹನ್ನೆರಡನೆಯ ಶತಮಾನದ ಅಂದಿನ ಶಿವಶರಣೆಯರು ಕೂಡ ಬಸವಣ್ಣನವರನ್ನು ತುಂಬಾ ಕೊಂಡಾಡಿದ್ದಾರೆ. ಅಣ್ಣನವರ ಬಗ್ಗೆ ಏನೆಲ್ಲ ಹೇಳಿದ್ದಾರೆ ಎಂದು ಶರಣಶರಣೆಯರ ವಚನಗಳ ನೋಡಲಿಕ್ಕಾಗಿ ಎಲ್ಲ ಸಮಕಾಲಿನ ಶರಣರಂತೆ ಬಸವಣ್ಣನವರೇ ನಮ್ಮ ಪ್ರಾಣ, ನಮ್ಮುಸಿರು ಎಂಬಂತೆ ಹಾಲು ಜೇನು ಬೆರೆತುಕೊಂಡಂತೆ ಶರಣೆಯರು ಕೂಡ ತಮ್ಮೊಳಗಡೆ ಬೆರೆಸಿಕೊಂಡಿದ್ದಾರೆಂಬುದಕ್ಕೆ ಅವರ ಈ ಕೆಳಗಿನ ವಚನದ ಸಾಲುಗಳೇ ಸಾಕ್ಷಿ.

ಅಕ್ಕಮಹಾದೇವಿ ತಾಯಿಯು ಬಸವಣ್ಣನನ್ನು ತಂದೆತಾಯಿಯಾಗಿ, ಗುರುಲಿಂಗಜಂಗಮವಾಗಿ, ಪಾದೋದಕ ಪ್ರಸಾದವಾಗಿ ಕಂಡು ಮತ್ತು ಬಸವಣ್ಣನಲ್ಲಿರುವ ಐವತ್ತೆರಡು ಶೀಲಗಳನ್ನು ಕಂಡು ಅಪ್ಪನ ನಿಪುಣತೆಯನ್ನು ಮೆಚ್ಚಿ ಮನದುಂಬಿ ಹಾಡಿದ್ದಲ್ಲದೆ ಬಸವಣ್ಣನವರೇ ನಿಜವಾದ ದೇವರೆಂದು ತಿರ್ಮಾನಿಸಿ ಇಡಿ ಜಗತ್ತಿಗೆ ಈ ರೀತಿ ಸಾರಿ ಹೇಳಿದವಳು
“ದೇವಲೋಕದವರೆಗು ಬಸವಣ್ಣನೆ ದೇವರು. ಮರ್ತ್ಯಲೋಕದವರೆಗು ಬಸವಣ್ಣನೆ ದೇವರು. ನಾಗಲೋಕದವರೆಗು ಬಸವಣ್ಣನೆ ದೇವರು. ಮೇರುಗಿರಿ ಮಂದರಗಿರಿ ಮೊದಲಾದವೆಲ್ಲವಕ್ಕೂ ಬಸವಣ್ಣನೆ ದೇವರು. ಚೆನ್ನಮಲ್ಲಿಕಾರ್ಜುನಯ್ಯಾ ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು.” ಎಂದು ಈ ಜಗತ್ತಿಗೆ ಪರಿಚಯಿಸಿಕೊಟ್ಟ ಶ್ರೇಯಸ್ಸು ಅಕ್ಕಮಹಾದೇವಿಯವರಿಗೆ ಸಲ್ಲುತ್ತದೆ. ಇಲ್ಲಿ ದೇವರೆಂದರೆ ಪೂಜೆಗೊಳ್ಳುವ ದೇವರಲ್ಲ. ದೇವರೆಂದರೆ,
ದೇ=ದೇಹ
ವ=ವಚಿಸು, ಓದು
ರು=ರುಚಿಸು, ಅಥವಾ ಅನುಭವಿಸು
ಎಂಬ ಅರ್ಥ ಬರುತ್ತದೆ. ಬಸವಣ್ಣನವರು ತಮ್ಮ ಸ್ವಕಾಯದಲ್ಲೆ ಎಲ್ಲವನ್ನು ಕಂಡು ಅನುಭವಿಸಿದ ಕಾರಣ ” ದೇವರು” ಎಂಬ ಪದಕ್ಕೆ ಭಾಜನರಾದರು. ಇಲ್ಲಿ ದೇವರೆಂದರೆ ತತ್ವ ಮಾತ್ರ ಎಂಬುದನ್ನ ಸೂಕ್ಷ್ಮವಾಗಿ ಅಕ್ಕಮಹಾದೇವಿ ಬಸವಣ್ಣನವರ ಮುಖಾಂತರ ಇಡಿ ಜಗತ್ತಿಗೆ ಅರ್ಥ ಮಾಡಿಸಿದ್ದಾಳೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.
ಮತ್ತೊಬ್ಬ ಶರಣೆ ಅಪ್ಪ ಬಸವಣ್ಣನವರು ಸೇರಿದಂತೆ ಏಳುನೂರೆಪ್ಪತ್ತು ಅಮರಗಣಂಗಳನ್ನು ಸಮನಾಗಿ ನೆನೆದು ತನ್ನ ವ್ರತ ನೇಮ ಆಚಾರವೇ ಪ್ರಾಣವಾದ ರಾಮೇಶ್ವರಲಿಂಗವೆಂದರಿದು ಆಚರಿಸುತ್ತ ಬಂದವಳಾಗಿದ್ದಳು.
ಇತ್ತ ಅಮುಗೆ ರಾಯಮ್ಮನು ಸಹಿತ ಬಸವಣ್ಣನವರ ಭಕ್ತಿಯ ಕಂಡು ತಾನು ಬಸವಣ್ಣ ಸಾಕ್ಷಿಯಾಗಿ ಅನಚಾರಿಗಳ ಮುಖ ನೋಡಲಾರೆ ಎಂದು ಅಮುಗೇಶ್ವರಲಿಂಗಕ್ಕೆ ನಿವೇದನೆ ಮಾಡಿಕೊಳ್ಳುತ್ತಾಳೆ.
ಮತ್ತೊರ್ವ ಶರಣೆ ಆಯದ ಕಾಯಕ ಮಾಡುವ ಲಕ್ಕಮ್ಮನು ಕೂಡ ಬಸವಣ್ಣನವರ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತು ಎಂದು ಕಂಡು, ಬಸವಣ್ಣನೆ ಮಹಾಪ್ರಸಾದಿಯನ್ನಾಗಿ ನೋಡಿದ್ದಾಳೆ ಆ ತಾಯಿ.
ಇತ್ತ ಕದಿರ ಕಾಯಕದ ರೆಮ್ಮವ್ವೆ ಕೂಡ ” ಎನ್ನ ಸ್ಥೂಲ ತನುವೆ ಬಸವಣ್ಣನೆಂದು ಕಂಡಿದ್ದಾಳೆ.
ಬಸವಣ್ಣನ ಧರ್ಮಪತ್ನಿಯಾದ
ಶರಣೆ ಗಂಗಾಂಬಿಕೆಯು ಸಹ ಬಸವಣ್ಣನ ಆಚರಣೆಯೆ ಸೊಗಸು ಎಂದು ಕಂಡಿದ್ದಾಳೆ.
ಮತ್ತೊರ್ವ ಶರಣೆಯಾದ ಗಜೇಶ ಮಸಣಯ್ಯಗಳ ಪುಣ್ಣಸ್ತ್ರೀ ಬಸವಣ್ಣನವರನ್ನು ” ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ” ಎಂದು ಹೇಳಿದ್ದಲ್ಲದೆ ” ಬಸವಣ್ಣನಿಂದ ಶುದ್ಧಪ್ರಸಾದಿಯಾದೆನು” ಎಂದು ಬಸವಣ್ಣನವರ ಕಂಡು ಹರ್ಷಿತಳಾಗಿದ್ದಾಳೆ.
ಶರಣೆ ದುಗ್ಗಳೆಯು ಸಹ ” ಬಸವಣ್ಣನಿಂದ ಗುರುಪ್ರಸಾದಿಯಾದೆನು” ಅಂದರೆ ಜ್ಯೋತಿ ಮುಟ್ಟಿ ಜ್ಯೋತಿಯಾಗಿರುವೆ ಎಂದಲ್ಲದೆ ” ಭಕ್ತನಾದಡೆ ಬಸವಣ್ಣನಂತಾಗಬೇಕು” ಎಂದು ಬಸವಣ್ಣನ ಭಕ್ತಿಯ ಕಂಡು ಶರಣು ಹೋಗಿದ್ದಾಳೆ ಆ ತಾಯಿ.
ಬಸವಣ್ಣನವರ ಸಹೋದರಿಯಾದ ನಾಗಲಾಂಬಿಕೆಯು ತನ್ನ ವಚನಗಳಲ್ಲಿ ಬಸವಣ್ಣನು ನನ್ನ ಎಲ್ಲ ಸೂತಕಗಳನ್ನು ಕಳೆದು ನನ್ನ ಹೆತ್ತ ತಂದೆಯೆ ಆಗಿರುವನು ಎಂದು ಹೇಳಿದ್ದಲ್ಲದೆ ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು. ಗುರುಲಿಂಗಜಂಗಮಪೂಜೆ, ಲಿಂಗಾಂಗ ಸಾಮರಸ್ಯದ ಸುಧೆಯು, ಭಕ್ತಭಕ್ತರಲಿ ಸಮಭಾವ, ತನುಮನಭಾವ ಎನ್ನಂತರಂಗ ಬಸವಣ್ಣ ಹೊರಗೆ ಗುರುಬಸವನ ಕೀರುತಿ. ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ ಎನ್ನುತ್ತಾ ಬಸವಾ ಬಸವಾ ಜಯತು ಎಂದು ಜಯಘೋಷಣೆ ಕೂಗಿದ್ದಾಳೆ ನಾಗಲಾಂಬಿಕೆ. ಬಸವಣ್ಣನನ್ನು ಮಗುವಂತೆ ಮುದ್ದಿಸಿ ವಚನಗಳ ಲಾಲಿಯನ್ನೆ ಹಾಡಿದ್ದಾಳೆ ಶರಣೆ ನಾಗಲಾಂಬಿಕೆ.
ಬಸವಣ್ಣನವರ ಮತ್ತೊರ್ವ ವಿಚಾರಪತ್ನಿ ಎಂದೆನಿಸಿಕೊಂಡ ಶರಣೆ ನೀಲಾಂಬಿಕೆ ತನ್ನ ಅನೇಕ ವಚನಗಳಲ್ಲಿ ಬಸವಣ್ಣನವರ ವ್ಯಕ್ತಿತ್ವನ್ನ ವರ್ಣಿಸಿದ್ದಾಳೆ ಅಷ್ಟೆ ಸ್ತುತಿಸಿದ್ದಾಳೆ ಕೂಡ.
“ಅಂಡಜವಳಿದ ಬಸವಾ;
ಪಿಂಡಜವಳಿದ ಬಸವಾ;
ಆಕಾರವಳಿದ ಬಸವಾ;
ನಿರಾಕಾರವಳಿದ ಬಸವಾ;
ಸಂಗವಳಿದ ಬಸವಾ;
ನಿಸ್ಸಂಗವಳಿದ ಬಸವಾ;
ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ.” ಎಂದು ಸ್ತುತಿಸುವುದರ ಜೋತೆಗೆ ಆತನ ಅರಿವನ್ನ ಮತ್ತಷ್ಟು ಎತ್ತಿ ತೋರಿಸಿದ್ದಾಳೆ ಶರಣೆ ನೀಲಾಂಬಿಕೆ.
ಶರಣೆ ಮುಕ್ತಾಯಕ್ಕಳು ಸಹ “ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು” ಎಂದು ಹೇಳುವ ಮುಖಾಂತರ ಜಗದ್ಗುರು ಪಟ್ಟವನ್ನೆ ಎತ್ತಿ ತೋರಿದ್ದಾಳೆ ತನ್ನ ವಚನದ ಸಾಲಿನಲ್ಲಿ.
ಶರಣೆ ಮೋಳಿಗೆಮಹಾದೇವಿಯೂ ಕೂಡ ಬಸವಣ್ಣನವರು ಸೇರಿದಂತೆ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ಎನ್ನ ಅರಿವು ಎಂದು ಸಮನಿಸಿಕೊಂಡಿದ್ದಾಳೆ.
ಮತ್ತೊರ್ವ ಶರಣೆ ಹಡಪದ ಲಿಂಗಮ್ಮತಾಯಿಯು ನಾನು ಬಸವಾದಿ ಶರಣರಿಂದ ಲಿಂಗವ ಕಂಡೆನಾಗಿ ಬಸವಣ್ಣನ ತೊತ್ತಿನ ಮಗಳಾಗಿರುವೆ ಎಂದು ಆ ಬಸವಣ್ಣನವರನ್ನು ಮತ್ತು ಶರಣರನ್ನು ಕಂಡು ಅವರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನು ಎಂದು ಹೇಳಿಕೊಂಡಿದ್ದಾಳೆ.
ಹೀಗೆ ಎಲ್ಲ ಶರಣರಂತೆ ಶರಣಿಯರು ಕೂಡ ಬಸವಣ್ಣನೇ ತಮ್ಮ ಅರಿವು ಎಂಬಂತೆ ಕಂಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ. ಅಷ್ಟಾವರ್ಣ, ಪಂಚಾಚಾರ ಮತ್ತು ಷಟ್ ಸ್ಥಲ ಸಕಲವು ಬಸವಣ್ಣನೆ ಆಗಿದ್ದಾನೆ.
ಬಸವಣ್ಣ ಒಬ್ಬ ವ್ಯಕ್ತಿಯಾಗಿರಲಿಲ್ಲ ಎಲ್ಲರ ಶಕ್ತಿಯ ಕೇಂದ್ರಬಿಂದುವಾಗಿ ಸರ್ವಕಾಲಕ್ಕು ಪ್ರಸ್ತುತನೆಸಿದ್ದಾನೆ. ಹಾಗಾಗಿ ಇಡಿ ಜಗತ್ತು ಬಸವಣ್ಣನನ್ನ ಕೊಂಡಾಡುತ್ತಿದೆ. ಈ ಭಕ್ತಿಯೆಂಬುದೆ ಬಸವಣ್ಣನವರ ಧರ್ಮವಾಗಿದೆ. ಸಕಲ ಜೀವಾತ್ಮಗಳಿಗೆ ಲೇಸನ್ನೆ ಬಯಸುವುದೆ, ನಿಜವಾದ ಭಕ್ತಿ.
ಗುಡಿಗುಂಡಾರ ಸುತ್ತಿ, ಆ ಪೂಜೆ ಈ ಪೂಜೆ ಮಾಡುವುದು, ಜಡದೇವರುಗಳನ್ನ ನಂಬಿ ಪೂಜಿಸುವುದು, ತೀರ್ಥ ಕ್ಷೇತ್ರಗಳನ್ನು ಸುತ್ತಿ ನೀರ ಕಂಡಲ್ಲಿ ಮುಳುಗಿ ಉಪವಾಸ ವನವಾಸ ಮಾಡುವುದು ಇನ್ನು ಮುಂತಾದ ಏನು ಗೊಡ್ಡು ಆಚರಣೆಗಳಿವೆಯೊ ಖಂಡಿತ ಅದಾವುದು ಭಕ್ತಿಯಲ್ಲ.
ತನ್ನ ತಾನರಿದು ತಾನಾರೆಂದು ತಿಳಿದುಕೊಂಡು ತನ್ನಂತೆಯೆ ಸಕಲ ಜೀವರಾಶಿಗಳೆಂದು ಪರಿಭಾವಿಸುವವನೆ ನಿಜವಾದ ಭಕ್ತ ಇದೆ ಅವನ ಭಕ್ತಿ ಹಾಗಾಗಿ ಅಪ್ಪ ಬಸವಣ್ಣನವರು ” ಭಕ್ತಿ ಭಂಡಾರಿ ಬಸವಣ್ಣ” ಎಂದೆನಿಸಿಕೊಂಡರು. ಎಲ್ಲ ಬಸವಾದಿ ಶರಣರು ತಮ್ಮ ತಾವು ಅರಿಯಬೇಕಾದರೆ ಬಸವಣ್ಣನಲ್ಲಿರುವ ನಿಷ್ಕಾಮ ಭಕ್ತಿಯೆ ಕಾರಣ. ಅದಕ್ಕೆ ಬಸವಣ್ಣನವರನ್ನು ಶಿವಶರಣೆಯರು ಕೂಡ ಅಷ್ಟೆ ಭಕ್ತಿಯಿಂದ ಕಂಡಿದ್ದಾರೆ ಎಂದೆ ಹೇಳಬಯಸುವೆ. ನಾವು ಕೂಡ ಬಸವಣ್ಣನವರ ತತ್ವ ಸಿದ್ಧಾಂಗಳನ್ನ ಅರಿತು ಆಚರಣೆ ತರುವ ಮುಖಾಂತರ ಆ ಅಪ್ಪ ಬಸವಣ್ಣನವರನ್ನ ನಮ್ಮೊಳಗೆ ಕಂಡುಕೊಳ್ಳೋಣ.

ಜೈಗುರು ಬಸವೇಶ.

ಶ್ರೀಮತಿ ರುದ್ರಮ್ಮ ಅಮರೇಶ್ ಹಾಸಿನಾಳ ಗಂಗಾವತಿ.

Don`t copy text!