ಬುದ್ದನು ತೋರಿದ ಬೆಳಕಿನಲ್ಲಿ
ಧರ್ಮಪ್ರವರ್ತಕರು, ಚಾರಿತ್ರಿಕ ವ್ಯಕ್ತಿಗಳು,ವಿಶ್ವದಲ್ಲಿ ಉದಿಸುತ್ತಲೇ ಇರುತ್ತಾರೆ.ಜನರ ಮೌಢ್ಯಗಳನ್ನು ಅಳಿಸಿ,ಕ್ರಾತಿಕಾರಕ ಪರಿವರ್ತನೆಗೆ ಕಾರಣವಾಗುತ್ತಲೇ ಇದ್ದಾರೆ.ಇತಿಹಾಸದಲ್ಲಿ ಬೌದ್ದಧರ್ಮ ಸ್ಥಾಪಿಸಿದ ಬುದ್ದ ಜಗತ್ತಿನ ದಾರ್ಶನಿಕರಲ್ಲಿ ಒಬ್ಬರು. ಸಾಮಾಜಿಕ,ಸಾಂಸ್ಕ್ರತಿಕ,ಧಾರ್ಮಿಕ ಕ್ರಾಂತಿಕಾರರಾಗಿ ಬಂದ ಪರಿಣಾಮ ಸ್ವಾತಂತ್ರ್ಯ,ಸಮಾನತೆಯಂತಹ ಪ್ರಜಾಪ್ರಭುತ್ವದ ನಿಲುವುಗಳು ಹೆಚ್ಚು ಮಹತ್ವ ಪಡೆದವು. ಕ್ರಿ,ಪೂ,೫೩೨-೪೮೭ರ ಅವಧಿಯಲ್ಲಿ ಗೌತಮಬುದ್ದನಿಂದ ಬೌದ್ದಧರ್ಮದ ತತ್ವಗಳು ಜನರಲ್ಲಿ ಪ್ರತಿಪಾದಿತವಾದವು.
ಗೌತಮಬುದ್ದನ ಜೀವನ ಮತ್ತು ಏಳಿಗೆ –
ಸಮಾಜದ ವಿಷಮತೆಗಳಿಗೆ ಪೆಟ್ಟುನೀಡಿ ಅವರ ವಿಚಾರಗಳು,ಬಡವರು,ನಿರ್ಲಕ್ಷಿತರು,ದೀನ-ದಲಿತರು,ಹಿಂದುಳಿದವರಿಗೆ ಆಪ್ಯಾಯಮಾನರಾದ ಗೌತಮಬುದ್ದ ಒಬ್ಬ ರಾಜಕುಮಾರ. ಕಪಿಲವಸ್ತು ರಾಜ್ಯವನ್ನಾಳುತ್ತಿದ್ದ ಅರಸ ಶುದ್ದೋದನ ಮತ್ತು ಮಾಯಾದೇವಿಯರಿಗೆ ಕ್ರಿ,ಪೂ ೬೨೪ರಲ್ಲಿ ಜನಿಸಿದನು.ಬುದ್ದನ ನಿಜವಾದ ಹೆಸರು ಸಿದ್ದಾರ್ಥ. ತನ್ನ ೨೯ನೇ ವಯಸ್ಸಿನಲ್ಲಿ ಆತ ಪತ್ನಿ,ಪುತ್ರರನ್ನು,ರಾಜವೈಭವವನ್ನು ತ್ಯಜಿಸಿ ಸತ್ಯದ ಅನ್ವೇಷಣೆಗೆ ಹೊರಟ. ಎಲ್ಲವನ್ನು ತ್ಯಾಗ ಮಾಡಿ ಮಹಾಪರಿತ್ಯಾಗಿಯಾದ. ದೀರ್ಘಕಾಲದವರೆಗೆ ಅಲೆದಾಡಿ ಹಲವು ಧರ್ಮ ಜ್ಞಾನಿಗಳ ಜೊತೆ ಚರ್ಚೆ ನಡೆಸಿ ಆತನಿಗೆ ಮನುಷ್ಯನ ದುಃಖದ ಮೂಲ ಶೋಧಿಸುವ ಮತ್ತು ಅದನ್ನು ಸರಳವಾಗಿ ನಿವಾರಣೆ ಮಾಡುವ ಸೂತ್ರವನ್ನು ರೂಪಿಸಬೇಕಿತ್ತು.ವ್ರತ-ಉಪವಾಸಗಳಿಂದ ದೇಹದಂಡನೆ ಮಾಡಿದರೂ ಸತ್ಯದರ್ಶನ ವಾಗಲಿಲ್ಲ. ನಂತರ ಆಲದಮರದ ಕೆಳಗೆ ಕುಳಿತು ಸತತ ೪೯ದಿನಗಳ ಕಾಲ ಚಿಂತನೆ -ಮಂಥನ,ಧ್ಯಾನಾದಿಗಳನ್ನು ಮಾಡಿದಾಗ ೫೦ ನೇ ದಿನದ ಮಧ್ಯರಾತ್ರಿಯಲ್ಲಿ ಅವನಿಗೆ ಜ್ಞಾನೋದಯವಾಯಿತು.ಜ್ಞಾನ ಪಡೆದ ಸಿದ್ದಾರ್ಥ ಗೌತಮಬುದ್ಧನಾದ. ಪ್ರಥಮ ಬೋಧನೆ ಧರ್ಮಚಕ್ರಪ್ರವರ್ತನವಾಗಿ ಇತಿಹಾಸ ಸೇರಿತು. ತನ್ನ ೮೦ನೇ ವರ್ಷದಲ್ಲಿ ಪರಿನಿರ್ವಾಣ ಹೊಂದುವ ವರೆಗೆ ಆತ ಗ್ರಾಮಗಳ ಹೊರವಲಯದಲ್ಲಿ,ಉಪವನಗಳಲ್ಲಿ ವಾಸಮಾಡಿ ಜನರಿಗೆ ತಾನು ಕಂಡ ಬೆಳಕನ್ನು ತೋರಿಸಿದ. ಅವನ ವೈಚಾರಿಕ ಪ್ರಖರತೆಗೆ ರಾಜಮಹಾರಾಜರು ಆಸಕ್ತಿ ತೋರಿದರು.ಇದರಿಂದ ಬುದ್ದನ ವಿಚಾರಗಳು ಇಡೀ ಭಾರತ ಮಾತ್ರವಲ್ಲ ಜಗತ್ತನ್ನೇ ವ್ಯಾಪಿಸಿದವು.
ಬುದ್ದ ಜಗವ ಗೆದ್ದ ಪರಿ
ಬುದ್ದ ಒಬ್ಬ ಮನುಷ್ಯ ಅಸ್ತಿತ್ವ. ಸಾಮಾಜಿಕ ಕ್ರಾಂತಿಕಾರಕ, ಪ್ರಜಾಪ್ರಭುತ್ವವಾದಿ, ನಾನಾರೀತಿಯ ಶೋಷಣೆಗೆ ಒಳಗಾದ ಜನರನ್ನು ಸ್ವತಂತ್ರಗೊಳಿಸಿ ಅವರಿಗೆ ಅವರದ್ದೇ ಆದ ಗುರುತನ್ನು ನೀಡುವಲ್ಲಿ ಶ್ರಮಿಸಿದನು. ಸಂಸ್ಕೃತವನ್ನು ಧಿಕ್ಕರಿಸಿ ಜನಸಾಮಾನ್ಯರ ಭಾಷೆಯಾದ ಪಾಳಿ ಭಾಷೆಯಲ್ಲಿ ತನ್ನ ವಿಚಾರಗಳನ್ನು ಬೋಧಿಸಿದನು.ಇದರಿಂದ ಬುದ್ದನ ಮಾತು ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾದವು.
ಒಂದು ಸಲ ದ್ರೋಣನೆಂಬ ಬ್ರಾಹ್ಮಣ ಬುದ್ಧನಿಗೆ ಕೇಳಿದ.
ನೀನು ದೇವನೇ?
“ಇಲ್ಲ ” ಎಂದು ಉತ್ತರಿಸಿದ ಬುದ್ದ.
ನೀನು ಗಂಧರ್ವನೇ? ದ್ರೋಣ ಮತ್ತೆ ಕೇಳಿದ
“ಇಲ್ಲ”ಎಂದು ಉತ್ತರಿಸಿದ ಬುದ್ದ
ನೀನು ಯಕ್ಷನೇ? ದ್ರೋಣ ಮತ್ತೆ ಕೇಳಿದ
“ಇಲ್ಲ”ಎಂದು ಉತ್ತರಿಸಿದ ಬುದ್ದ
ಹಾಗಾದರೆ ನೀನು ಮನುಷ್ಯನೇ?ಪ್ರಶ್ನಿಸಿದ ದ್ರೋಣ
“ಇಲ್ಲ” ಎಂದು ಉತ್ತರಿಸಿದ ಬುದ್ದ
ಕೊನೆಗೆ ನಾನು ದೇವನಲ್ಲ ಗಂಧರ್ವನಲ್ಲ,ಯಕ್ಷಪ್ರಶ್ನೆ, ಮನುಷ್ಯನೂ ನಾನಲ್ಲ.ಹೀಗೆ ನಾವು ಇದರಲ್ಲಿ ಯಾರೋ ಒಬ್ಬರು ಮಹಾನ ವ್ಯಕ್ತಿಗಳು ಎಂದು ಹೇಳಿದರೆ ಅದು ನನ್ನನ್ನು ಸರ್ವನಾಶ ಮಾಡಿಬಿಡುತ್ತದೆ.ಅದಕ್ಕಾಗಿ *ನಾನು ಕೇವಲ ಬುದ್ದ*ಎಂದು ಸರಳವಾಗಿ ಉತ್ತರಿಸಿದ.ಇಲ್ಲಿ ಎನಗಿಂತ ಕಿರಿಯರಿಲ್ಲ ಎಂಬ ಮಾತು ಬುದ್ದ ಉತ್ತರಿಸಿದ ಮಾತಿನ ತಾತ್ಪರ್ಯ.ಜಗವ ಗೆಲ್ಲಲು ಇಷ್ಟು ಸಾಕಲ್ಲವೇ?
ಸ್ತ್ರೀ ದೃಷ್ಟಿಕೋನ-
ಬುದ್ದ ಹುಟ್ಟಿದ ಕಾಲದಲ್ಲಿ ಸಮಾಜ ಸ್ತ್ರೀಯರನ್ನು ತೀರಾ ನಿಕೃಷ್ಟವಾಗಿ ಕಾಣುತ್ತಿತ್ತು. ಸ್ತ್ರೀಯರಿಗೆ ಯಾವುದೇ ರೀತಿಯ ಸ್ಥಾನಮಾನ,ಗೌರವವಾಗಲಿ ಇರಲಿಲ್ಲ.ಆದರೆ ಸ್ತ್ರೀಯರು ಪುರುಷರಷ್ಟೇ ಸಮಾನರು ಎಂಬುದನ್ನು ಬುದ್ದ ನಂಬಿದ್ದನು ಹಾಗಾಗಿ ಸ್ತ್ರೀಯರಿಗೂ ಬೌದ್ಧ ಸಂಘದ ಸದಸ್ಯರಾಗಲು ಅವಕಾಶ ಕೊಟ್ಟನು.ಸ್ತ್ರೀ ಪುರುಷ ಭಿಕ್ಷುಗಳ ಸಾಹಚರ್ಯದಲ್ಲಿ ಇರುವುದರಿಂದ ಮಾಯಾ ಭಾವನೆಗಳನ್ನು ಗೆಲ್ಲಬೇಕೆಂದು ತನ್ನ ಬೋಧನೆಯಲ್ಲಿ ತಿಳಿಸಿದ. ಸ್ತ್ರೀ ಪುರುಷರ ನೈತಿಕ, ಆಧ್ಯಾತ್ಮಿಕ, ಉನ್ನತಿಗೆ ಬುದ್ದ ಒತ್ತು ನೀಡಿ ಶಾಂತಿಯ ಕಡೆಗೆ ಮತ್ತು ಹುಟ್ಟು-ಸಾವುಗಳ ಚಕ್ರದಿಂದ ಬಿಡುಗಡೆಯಾಗಲು ಗುರಿ ಸಾಧಿಸಿದರೆ ಜೀವನ ಸಾರ್ಥಕವೆಂದು ಬೋಧಿಸಿ ಸಮಾನತೆಗೆ ನಾಂದಿ ಹಾಡಿದನು.
ಸನಾತನ ಮೌಲ್ಯಗಳಿಗೆ ಸವಾಲು-
ಗೌತಮಬುದ್ಧ ವೈದಿಕ ಧರ್ಮದ ಸನಾತನ ಮೂಢ ಆಚರಣೆಗಳಿಗೆ ಸವಾಲೆಂಬಂತೆ ಅವುಗಳನ್ನು ಧಿಕ್ಕರಿಸಿದನು. ಅದಕ್ಕಾಗಿ ಜನರನ್ನು”ಸಂಘ”ವಾಗಿ ಸಂಘಟಿಸಿ ಸಂಘದಲ್ಲಿ ಮುಕ್ತ ಚರ್ಚೆಗಳು, ಪ್ರಶ್ನೋತ್ತರಗಳಿಗೆ ಅವಕಾಶವಿತ್ತು.ಚರ್ಚೆಗಳಿಂದ ಸತ್ಯದ ಅನಾವರಣಗೊಳ್ಳುತ್ತಿತ್ತು. ಬುದ್ದ ಕರ್ಮಸಿದ್ಧಾಂತವನ್ನು ಒಪ್ಪಿಕೊಂಡಿದ್ದು ಮನುಷ್ಯನ ಕರ್ಮಗಳೇ ಅವನ ಶ್ರೇಷ್ಠತೆಗೂ,ನೀಚತೆಗೂ ಕಾರಣವೆಂದು ಮನುಷ್ಯನು ಎಲ್ಲ ತನ್ನ ಪಾಪಕರ್ಮದ ಬೇಡಿಯಿಂದ ಮನುಷ್ಯ ಬಿಡಿಸಿಕೊಂಡು ಆತ ಉನ್ನತಿಗೆ ಏರಬಲ್ಲ ಸನ್ಮಾರ್ಗವನ್ನು ಬುದ್ದ ಜಗತ್ತಿಗೆ ತೋರಿಸಿದನು.
ಅಷ್ಟಾಂಗ ಮಾರ್ಗಗಳು-
ಬುದ್ದನ ಅಷ್ಟಾಂಗ ಮಾರ್ಗಗಳು ಸರಳ ಜೀವನ್ಮುಕ್ತಿಯ ಎಂಟು ಮಾರ್ಗಗಳನ್ನು ಪ್ರತಿಪಾದಿಸಿದನು.ಸಮತಾಭಾವವನ್ನು ಪ್ರತಿಪಾದಿಸಿದ ಈ ತತ್ವಗಳು ವಿಶ್ವಕ್ಕೆ ಮಾದರಿಯಾದವು.ಆರ್ಯಸತ್ಯಗಳಿಂದ ಆಸೆಯೇ ದುಃಖದ ಮೂಲ ಎಂದು ತಿಳಿಸಿ ದುಃಖದ ನಿವಾರಣೆಗೆ ಅಷ್ಟಾಂಗ ಮಾರ್ಗಗಳ ಅನುಸರಣೆ. ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ನಿಶ್ಚಿತವೆಂಬ ಸತ್ಯವನ್ನು ಸಾವಿರದ ಮನೆಯ ಸಾಸಿವೆ ಕಾಳಿನಿಂದ ಜಗತ್ತಿಗೆ ಜೀವನ್ಮರಣದ ಸಂದೇಶ ನೀಡಿದನು.
ಒಟ್ಟಿನಲ್ಲಿ ಗೌತಮಬುದ್ಧ ಆಗ ಪ್ರಚುರವಿದ್ದ ಮೂಢನಂಬಿಕೆಗಳ ಬುಡಕ್ಕೆ ಕೊಡಲಿಪೆಟ್ಟು ನೀಡಿದರು.ಬುದ್ದನ ಬೋಧನೆಗಳಿಂದ ಸನಾತನಿಗಳು ನಡುಗಿದ್ದು ನಿಜವಾದರೂ ಅವನ ವಿರುದ್ಧ ಅನೇಕ ಸಂಚುಗಳು ನಡೆದವು.ಹೊಸತನ್ನು ಸ್ವೀಕರಿಸದ ಈ ಶಕ್ತಿಗಳು ಬುದ್ದನನ್ನು ದೇಶದಿಂದ ಹೊರಹಾಕುವಲ್ಲಿ ಯಶಸ್ವಿಯಾದವು.ಏಷ್ಯಾದ ಬೆಳಕಾದ ಬುದ್ದ ತನ್ನ ಕಾಲದಲ್ಲಿ ಕಾಲವನ್ನು ಮೀರಿದ ಪ್ರೌಢತೆ ಮೆರೆದ. ಜೀವನ ಮೌಲ್ಯಗಳ ಬಗ್ಗೆ ಅಗಾಧವಾದ ಅರಿವು ಮಾತ್ರವಲ್ಲ ಮನುಷ್ಯನ ಏಳಿಗೆಗೆ ಸ್ವಪ್ರಯತ್ನಗಳೇ ಮುಖ್ಯವೆಂಬ ನಿಲುವನ್ನು ಜಗತ್ತಿಗೆ ಸಾರಿದನು.” ಅಯ್ಯ ಎಂದರೆ ಸ್ವರ್ಗ ಎಂಬ ಬಸವಣ್ಣನವರು ಹೇಳಿದಂತೆ ” ನಿನ್ನ ಮಾತಿನಲ್ಲಿ ಜೇನಿರಲಿ,ವಿನಯವಿರಲಿ ” ಎಂಬುದು ಬುದ್ದನ ನಿಲುವು. ಈಗಲಾದರೂ ತಿಳಿದು ಅನುಸರಿಸಿದರೆ ನಮ್ಮ ಬಾಳಲ್ಲೂ ಬುದ್ದ ತೋರಿದ ಬೆಳಕು ಬರಲು ಸಾಧ್ಯ.
-ಶ್ರೀಮತಿ ರೇಖಾ ಪಾಟೀಲ
ಇತಿಹಾಸ ಉಪನ್ಯಾಸಕರು
ರಾಯಚೂರು
ಮೊ.ಸಂ 9481937664