*ವಚನ ವಿಶ್ಲೇಷಣೆ*
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ
ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ
ನೀವಿರಿಸಿದಿರಿ ಕೂಡಲಸಂಗಮದೇವಾ
ಅತ್ತಿಯ ಹಣ್ಣು ಹೊರಗೆ ನೋಡಲು ಕೆಂಪಾಗಿ ಸುಂದರವಾಗಿ ಕಾಣಿಸುತ್ತದೆ. ಆದರೆ ತಿನ್ನಲು ಕೈಗೆತ್ತಿಕೊಂಡರೆ ಕೆಲವೊಂದು ಅತ್ತಿಯ ಹಣ್ಣಿನೊಳಗೆಲ್ಲಾ ಬರೀ ಹುಳುಗಳೇ ಇರುತ್ತವೆ.ಹೀಗೆ ಮನಸ್ಸು ಇದ್ದಂತೆ ಪ್ರತಿಬಿಂಬ ಹಾಗೆಯೇ ಮನುಷ್ಯ ಹೊರಗೆ ನೋಡಲು ಚೆನ್ನಾಗಿದ್ದು ಒಳಗೆ ಕೊಳಕು ಮನಸ್ಸು ಹೊಂದಿರಬಾರದೆಂಬುದೇ ಈ ವಚನದ ದಿವ್ಯ ಸಂದೇಶ.
ಮನುಷ್ಯನ ಮನಸ್ಸು ಬಹಳ ಜಟಿಲ. ಮನುಷ್ಯನ ಮನಸ್ಸೇ ಬಂಧನ ಮತ್ತು ಮೋಕ್ಷಕ್ಕೆ ಕಾರಣವಾಗುತ್ತದೆ.ಎನ್ನುವುದು ಅನುಭಾವಿಗಳ ನುಡಿಯಾಗಿದ್ದರೂ ಸತ್ಯದ ಕೈಗನ್ನಡಿ. ಸಹಜವಾಗಿ ಮನುಷ್ಯನ ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುತ್ತವೆ.ಅವುಗಳನ್ನು ಮಾತುಗಳಿಂದ, ಹಾವಭಾವಗಳಿಂದ ಅಭಿವ್ಯಕ್ತಗೊಳಿಸಬಹುದು.ನಮ್ಮ ಆಲೋಚನೆಗಳಿಗೆ ತಕ್ಕಂತೆ ಅಭಿವ್ಯಕ್ತಿ ಮನಸ್ಸಿನ ಕನ್ನಡಿಯಾಗಿ ಪ್ರತಿಬಿಂಬಿತವಾಗುತ್ತದೆ.ಸುಂದರ ಮನಸ್ಸಿನ ಪ್ರತಿಬಿಂಬ ಎದೆಯ ಸವಿಯಾದ, ನವಿರಾದ ಹನಿಗಳಂತಿರಬೇಕು. ಆ ಹನಿಗಳ ಸಿಂಚನದಲ್ಲಿ ಸಾಗುವ ಮನ ಮುಳ್ಳಿಲ್ಲದ ಹೂವಿನ ಹೆಜ್ಜೆಯಂತಿರಬೇಕು. ಆಗ ಮನಸ್ಸು ಮಲ್ಲಿಗೆಯಾಗಿ ಜೀವನ ಸೌರಭವಾಗುವುದು. ಮಾತ್ರವಲ್ಲ ಸುಸಂಸ್ಕೃತ ವಾಗುತ್ತದೆ.
ನವಿಲು ನರ್ತಿಸಿದಾಗ,ಗಿಳಿ ನುಡಿದಾಗ,ತಂತಿ ಮೀಟಿದಾಗ ಬರುವ ನಾದ ಇವೆಲ್ಲ ಮನಸ್ಸರಳಿಸುವ ಸಹಜ. ಮನದಲ್ಲಿ ಸುಳಿಯುವ ಆಲೋಚನೆಗಳು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದನ್ನು ನಮ್ಮ ಇಂದ್ರಿಯಗಳ ಗ್ರಹಿಕೆಗೆ ಮನಸ್ಸಿನ ಸಾಹಚರ್ಯವಿಲ್ಲದೆ ಸಾಧ್ಯವಿಲ್ಲ.ಒಂದು ರೀತಿಯಲ್ಲಿ ಕಣ್ಣಿದ್ದವರೆಲ್ಲಾ ನೋಡುತ್ತಾರೆ,ಕಣ್ಣಿಲ್ಲದವರೆಲ್ಲಾ ನೋಡಲಾಗುವುದಿಲ್ಲ ಎಂದು ಹೇಳಲಾಗದು.ಒಂದು ವಸ್ತು ಕಣ್ಣೆದುರಿಗೇ ಇದ್ದರೂ ಮನಸ್ಸು ಎಲ್ಲಿಯೋ ಇದ್ದರೆ ನೋಡಿದ ನೋಟದ ಗ್ರಹಿಕೆ ಉಂಟಾಗುವುದಿಲ್ಲ.ಅಂಚೆಯ ಪೇದೆಯು ತಂದುಕೊಟ್ಟ ಪತ್ರವು ತನ್ನ ಪ್ರಿಯಕರನು ಬರೆದ ಪತ್ರವೆಂದು ತಿಳಿದ ಪ್ರೇಯಸಿಗೆ ಆ ಪತ್ರವನ್ನು ಅವಸರದಲ್ಲಿ ಒಡೆದು ಓದುವಾಗ ಅವಳ ಕಣ್ಣೆದುರಲ್ಲಿ ಕಾಣಿಸುವುದು ಕಾಗದವಲ್ಲ.ಅದರಲ್ಲಿ ಬೇರೆಯವರ ಕಣ್ಣಿಗೆ ಕಾಣಿಸದ ತನ್ನ ಪ್ರಿಯಕರನ ಮಂದಹಾಸ ಬೀರುವ ಮುಖ
–ಶ್ರೀಮತಿ ರೇಖಾ ಪಾಟೀಲ
ರಾಯಚೂರು