ಶೋಷಿತರ ದಲಿತರ ಕಾರ್ಮಿಕರ ನಿಜ ನಾಯಕ -ಅಣ್ಣ ಬಸವಣ್ಣ

ಶೋಷಿತರ ದಲಿತರ ಕಾರ್ಮಿಕರ ನಿಜ ನಾಯಕ -ಅಣ್ಣ ಬಸವಣ್ಣ

ಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ ಮನುವಾದಿಗಳ ಅಸ್ಪ್ರಶ್ಯತೆ ಆಚರಣೆ , ಜಾತಿ ಪದ್ಧತಿ ತಾಂಡವವಾಡುತಿತ್ತು .ಯಜ್ಞ ಹವನ ಹೋಮ ಪ್ರಾಣಿ ಬಲಿ ಸ್ತ್ರೀ ಶಿಶು ಹತ್ಯೆ ಸತಿ ಪದ್ಧತಿ ಹೀಗೆ ದಲಿತರು ಪಂಚಮ ಸ್ತ್ರೀ ಕುಲವು ಪುರೋಹಿತರ ಶೋಷಣೆಗೆ ನಲುಗಿ ಹೋಗಿತ್ತು.
ಹನ್ನೆರಡನೆಯ ಶತಮಾನವು ಈ ಜಗವು ಕಂಡ ಸುವರ್ಣ ಯುಗ . ಬಸವಣ್ಣನೆಂಬ ವೈಚಾರಿಕ ಪುರುಷ ಕರ್ನಾಟಕದ ಇಂದಿನ ಬಿಜಾಪುರದ ಬಾಗೇವಾಡಿಯಲ್ಲಿ ಮಧುವರಸ ಮಾದಲಾಂಬಿಕೆಯರ ಹೊಟ್ಟೆಯಲ್ಲಿ 1131 ರಲ್ಲಿ ಹುಟ್ಟಿದನು . ಬಸವಣ್ಣ ಜಗವು ಕಂಡ ಶ್ರೇಷ್ಟ ದಾರ್ಶನಿಕ ಚಿಂತಕ ಮುಕ್ತ ಸಮಾಜದ ಕಾರಣಕರ್ತ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಶಾಂತಿ ಸಹ ಬಾಳ್ವೆ ,ದುಡಿಮೆ ಕಾಯಕ ದಾಸೋಹ , ಬದುಕಿನಲ್ಲಿ ಧರ್ಮದ ಸರಳ ಆಚರಣೆ ,ನೀತಿ,ತತ್ವ ವೈಚಾರಿಕತೆ ಅಭಿವ್ಯಕ್ತಿ ಸ್ವಾತಂತ್ರ ಧಾರ್ಮಿಕ ಸಾಮಾಜಿಕ ಚಿಂತನೆ ಹೀಗೆ ಪ್ರತಿ ಹಂತದಲ್ಲೂ ಬಸವಣ್ಣ ಗಟ್ಟಿ ಮುಟ್ಟಾದ ಆಯಾಮವನ್ನು ಸ್ರಷ್ಟಿಸಿದನು.
ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು .
ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನು ಕೊನೆ ಹಾಡಿದ. ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾ ಬಂಧನದಿಂದ ಮುಕ್ತವಾದರು . ಕರ್ಮಲತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದನು . ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು.

ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಭಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ -Karl Marx has taught us the dignity of labor but Basavanna has taught us dignity and divinity of labor ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣ ಹೊಸ ಚೇತನ ನೀಡಿದ . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ .
ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರರ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವೀರಲಿಲ್ಲ ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣ ಇಷ್ಟ ಲಿಂಗವನ್ನು ಕಂಡು ಹಿಡಿದನು .

ಕಂಧಾಚಾರ,ಮೌಢ್ಯ ಆಚರಣೆ, ಧಾರ್ಮಿಕ ಶೋಷಣೆಗೆ ಕೊನೆ ಹಾಡಿದರು ಶರಣರು.

ಶತಮಾನದುದ್ದಕ್ಕೂ ನಡೆಸಿಕೊಂಡು ಬಂದ ಕಂಧಾಚಾರ,ಮೌಢ್ಯ ಆಚರಣೆ, ಧಾರ್ಮಿಕ ಶೋಷಣೆಗೆ ಶರಣರು ಅಂತ್ಯ ಹೇಳಿದರು. ದೇವರು ಮತ್ತು ಭಕ್ತನ ಮಧ್ಯೆ ಇದ್ದ ಪುರೋಹಿತನೆಂಬ ದಲ್ಲಾಳಿಯು ಜನರಿಂದ ಭಕ್ತರಿಂದ ದೇವರ ಹೆಸರಲಿ ಸುಲಿಗೆ ಮಾಡುತ್ತಾ ಸುಖ ಜೀವನ ನಡೆಸುತ್ತಿದ್ದಾಗ ,ಇದಕ್ಕೆ ಕೊನೆ ಹೇಳಿದ ಬಸವಣ್ಣನವರು ಇಷ್ಟಲಿಂಗವನ್ನು ಭಕ್ತನ ಕೈಗೆ ಕೊಟ್ಟು ಗುಡಿ ಸಂಸ್ಕೃತಿಗೆ ಅಂತಿಮ ಹೇಳಿದರು.
ನರ ಬಲಿ, ಪಶು ಬಲಿ, ಹವನ ಹೋಮ ಯಜ್ಞ ಅರ್ಥವಿಲ್ಲದ ಪೂಜೆಗಳನ್ನು ವಿರೋಧಿಸಿದನು ಬಸವಣ್ಣ. ನಿಸರ್ಗದತ್ತವಾದ ಸಹಜ ಶಿವಯೋಗವನ್ನು ಸರಳೀಕರಿಸಿದ ಬಸವಣ್ಣನವರು ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮವೆಂದು ಕಾಯಗುಣದಲ್ಲಿ ದೇವರನ್ನು ಕಾಣುವ ಮಾರ್ಗ ಸೂಚಿ ಕಂಡರು.

ಬಸವಣ್ಣ ಮೂರ್ತಿ ಬಂಜಕ  ಸ್ಥಾವರವನ್ನು ವಿರೋಧಿಸಿದವನು . ತನ್ನ ನಂಬಿದವರಿಗೆ ಒಂದು ಪರ್ಯಾಯ ಮತ್ತು ನಿಶ್ಚಿತ ಉಪಾಸನ ಆಯಾಮ ನೀಡಲು ಇಷ್ಟಲಿಂಗವನ್ನು ಕಂಡು ಹಿಡಿದರು. ಇದು ಮನುಷ್ಯನ ಚಿತ್ಕಳೆ ಪ್ರತಿಬಿಂಬಿಸುತ್ತದೆ , ಬಸವ ಕಾಲದ ಎಲ್ಲ ಶರಣರಿಗೆ ಸ್ತ್ರೀ ಮತ್ತು ಪುರುಷರಿಗೆ ಇಷ್ಟಲಿಂಗ ಕಡ್ಡಾಯ ,ಕಾಯಕ ಅನಿವಾರ್ಯ, ದಾಸೋಹ ಅಗತ್ಯತೆ . ಜಗತ್ತಿನಲ್ಲಿ ದುಡಿದು ತಿನ್ನುವ ಧರ್ಮ ಬಂದ ಆದಾಯದಲ್ಲಿ ಹಂಚಿ ತಿನ್ನುವ ಧರ್ಮವಿದ್ದರೆ ಅದು ಬಸವ ಧರ್ಮ ,ಲಿಂಗಾಯತ ಧರ್ಮ .ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ?ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ಗುಡಿ ಗುಂಡಾರ ಮಠಗಳ ಸಂಸ್ಕೃತಿಯನ್ನು ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ .
ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .ಬಸವಣ್ಣ ಲಿಂಗಾಯತ ಧರ್ಮದ ಚಳುವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ . Istalinga is not an object , it is subject to realize consciousness . ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ .

ಕಲ್ಲ ನಾಗರ ಕಂಡರೆ ಹಾಲ ನೆರೆವರಯ್ಯ
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ
ಉಂಬುವ ಜಂಗಮನಿಗೆ ಎಡೆಯಿಲ್ಲ ನಡೆಯೆಂಬರು
ಉಂಬದ ಲಿಂಗಕ್ಕೆ ಬೋನವ ಹಿಡಿವರು
ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ
ಕಲ್ಲು ತಾಗಿದ ಮಿಟ್ಟೆ ಎಂತಿರ್ಪರಯ್ಯ.

ಅದೇ ರೀತಿ ಬಸವಣ್ಣನವರು ವೃಥಾ ಆಚರಣೆಗೆ ಮಹತ್ವ ಕೊಡದೆ ಕಾಯಕ ದಾಸೋಹಕ್ಕೆ ಮಹತ್ವ ನೀಡಿ ಸಮಾಜವನ್ನು ಉನ್ನತಿಗೆ ತರಲು ಪ್ರಯತ್ನಿಸಿದರು..

ಎರೆದರೆ ನೆನೆಯದು ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಕೂಡಲ ಸಂಗಮ ದೇವಾ
ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.

ಇಲ್ಲಿಯೂ ಕೂಡ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹಣೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ . ಸಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಎಂದು ಹೇಳಿದ್ದಾರೆ .ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ .

ನೀರ ಕಂಡಲ್ಲಿ ಮುಳುಗುವರಯ್ಯ
ಮರವ ಕಂಡಲ್ಲಿ ಸುತ್ತುವುರಯ್ಯ
ಬತ್ತುವ ಜಲವ ಒಣಗುವ ಮರವ
ನೆಚ್ಚಿದವರ ನಿಮ್ಮನೆತ್ತ ಬಲ್ಲರು ಕೂಡಲ ಸಂಗಮದೇವ.

ಇಂದಿಗೂ ಜಲ ಸ್ನಾನ ಪುಣ್ಯವೆಂದು ಗಂಗೆ ಕಾವೇರಿಯಲ್ಲಿ ಮುಳಗುವವರು ಇದ್ದಾರೆ .ಮರವು ದೇವರೆಂದು ಅದರ ಸುತ್ತಲೂ ತಿರುಗುತ್ತಾರೆ ಆದರೆ ಬತ್ತುವ ಜಲ ಒಣಗುವ ಮರವ ನಂಬಿದವರು ನಿಮ್ಮನ್ನು ಬಲ್ಲರೆ ಎಂದು ದೇವರನ್ನೇ ಪ್ರಶ್ನಿಸುತ್ತಾರೆ. ಪ್ರಕೃತಿಯ ಅಸ್ಥಿರತೆಯನ್ನು ನಂಬಿದ ಭಕ್ತ ದೇವರನ್ನು ಕಾಣಲು ಸಾಧ್ಯವೇ ? ಎಂದು ವಿಡಂಭಿಸಿದ್ದಾರೆ ಬಸವಣ್ಣನವರು.

ದೇವಲೋಕ , ಧರ್ಮದ ಹೊಸ ವ್ಯಾಖ್ಯಾನ ಬರೆದ ಬಸವಣ್ಣ.
ದೇವಲೋಕ ಮರ್ತ್ಯಲೋಕದ ಬೇರೆ ಬೇರೆ ಕಲ್ಪನೆಗಳನ್ನು ಶರಣರು ಒಪ್ಪುವದಿಲ್ಲ ,ಬಸವಣ್ಣ ದೇವಲೋಕದ ಪರಿಕಲ್ಪನೆಯನ್ನೇ ಬದಲಿಸಿದನು.

ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?
ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.

ಇದು ಭಕ್ತ ಪ್ರಧಾನವಾದ ಚಿಂತನೆ. ಕಾರಣ ಭಕ್ತನ ಕಾಯಕ ಪರಿಶುದ್ಧವಾಗಿದ್ದು ಆತನ ದಾಸೋಹವು ಶ್ರೇಷ್ಟತೆಯನ್ನು ಪಡೆದು ಸಮಾಜ ಮುಖಿಯಾದ ಜೀವನಕ್ಕೆ ನಾಂದಿ ಹಾಡುತ್ತದೆ .

ಧರ್ಮದ ವ್ಯಾಖ್ಯಾನ ಬಸವಣ್ಣನವರು ಅತ್ಯಂತ ಸರಳವಾಗಿ ವಿವರಿಸಿದ್ದಾರೆ
ದಯವಿಲ್ಲದ ಧರ್ಮವದೆವುದಯ್ಯ
ದಯವಿರಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

ದಯೆಯೇ ಧರ್ಮವು ನಮಗೆ ಪ್ರಾಣಿ ಪಕ್ಷಿ ಹತ್ಯೆ ಮಾಡುವ ಅಧಿಕಾರವಿಲ್ಲ ಮಾಂಸ ಭಕ್ಷಣೆಗೆ ಅವಕಾಶವಿಲ್ಲ .”ಹಬ್ಬಕ್ಕೆ ತಂದ ಹರಕೆಯ ಕುರಿಯು ತೋರಣಕ್ಕೆ ತಂದ ತಳಿರವ ಮೇದಿತ್ತು ಮುಂದೆ ಕೊಂದಿಹೇನೆಂಬುದನರಿಯದೆ ಬೆಂದೊಡಲ ಹೊರೆಯ ಮೇಯಿತ್ತು .ಅದೊಂದೇ ಹುಟ್ಟಿತ್ತು ಅದೊಂದೇ ಸತ್ತಿತ್ತು ಕೊಂದವರುಳಿದರೆ ಕೂಡಲ ಸಂಗಮದೇವ ” ಎನ್ನುವ ಕಳಕಳಿ ಭಾವ ಬಸವಣ್ಣನವರದು.ಲಿಂಗ ನಿಷ್ಠೆ ಜಂಗಮ ಪ್ರಜ್ಞೆ ಬಸವ ಧರ್ಮದ ಧ್ಯೇಯಗಳು . ಬಸವಣ್ಣ ವಿಶ್ವ ಮಾನವನ ಸಾಲಿನಲ್ಲಿ ನಿಲ್ಲಲು ಅವನ ಚಿಂತನೆ ಸಾಮಾಜಿಕ ಕಳಕಳಿ ಅಗಾಧವಾದದ್ದು.

ಬಸವಣ್ಣ ಪರಿಪೂರ್ಣ ಬುದ್ಧ 
ಬುದ್ಧ ಮತ್ತು ಬಸವಣ್ಣನ ನಡುವಿನ ಹೋಲಿಕೆಯನ್ನು ಸಮತೆಯ ಸಂಘರ್ಷದ ಪರಿ ಎಂದು ಪರಿಗಣಿಸಲಾಗುತ್ತದೆ. ಬಸವಣ್ಣ ಮತ್ತು ಬುದ್ಧರ ನಡುವೆ 1700 ವರ್ಷಗಳ ಅಂತರವಿದೆ. ಬುದ್ಧ ಕ್ರಿ.ಪೂ.531 ರಲ್ಲಿ ಜನಿಸಿದರೆ ಬಸವಣ್ಣನವರು ಜನಿಸಿದ್ದು 1131 , ಜನರು ತಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು ಬುದ್ಧನನ್ನು ಏನನ್ನು ಹೇಳಿದ? ಯಾವುದಕ್ಕೆ ಬದ್ಧನಾಗಿದ್ದ ಬಸವಣ್ಣನ ಮತ್ತು ಬುದ್ಧನ ಸಾಮಾಜಿಕ ಕಳಕಳಿ ಸಾಮ್ಯತೆ ಅಧ್ಯಯನ ಮಾಡಿದರೆ ಅವರ ನಿಲುವುಗಳು ಸ್ಪಷ್ಟವಾಗಿ ಕಾಣಬಹುದು.

ಬುಧ್ಧ ಧರ್ಮದ ಸಿದ್ಧಾಂತ
ಬುದ್ದ ಸಹಜವಾಗಿ ಅಂಹಿಸೆ ತತ್ವದೊಂದಿಗೆ ಬೆರೆತು ಹೋಗಿದ್ದಾನೆ. ಬುದ್ಧನ ಬೋಧನೆಗಳು ಮತ್ತು ಚಿಂತನೆಗಳ ಹರಹು ತುಂಬಾ ವಿಶಾಲವಾದದ್ದು. ಇದು ಅಹಿಂಸೆಯನ್ನು ಮೀರಿ ಬೆಳೆದಿದೆ.

ಅದರ ನೀತಿಗಳು ಹೀಗಿವೆ
ಮುಕ್ತ ಸಮಾಜಕ್ಕಾಗಿ ಧರ್ಮದ ಅವಶ್ಯಕತೆ ಇದೆ. ಪ್ರತಿಯೊಂದು ಧರ್ಮವನ್ನು ಜೀವನದೊಳಗೆ ಅಳವಡಿಸಿಕೊಳ್ಳಬೇಕಾಗಿಲ್ಲ.. ಧರ್ಮವು ಜೀವನದ ಲೌಕಿಕ ಜಗತ್ತಿನ ಜೊತೆಗೆ ಸಂಬಂಧವಿರಿಸಿಕೊಳ್ಳಬೇಕೇ ಹೊರತು ದೇವರ ಕುರಿತಾದ ಕಟ್ಟು ಕತೆಗಳು ಮತ್ತು ಊಹಾಪೋಹಗಳಿಂದಲ್ಲ. ಅಥವಾ ಸ್ವರ್ಗ,ಆತ್ಮ,ಮಾತೃಭೂಮಿಯ ಜೊತೆಗಂತೂ ಅಲ್ಲವೇ ಅಲ್ಲ. ದೇವರನ್ನು ಧರ್ಮದ ಕೇಂದ್ರವನ್ನಾಗಿ ಸ್ಥಾಪಿಸುವುದು ಸಂಪೂರ್ಣವಾಗಿ ತಪ್ಪು.. ಆತ್ಮದ ಮೋಕ್ಷವನ್ನು ಧರ್ಮದ ಕೇಂದ್ರವನ್ನಾಗಿ ಸ್ಥಾಪಿಸುವುದು ತಪ್ಪು.. ಪ್ರಾಣಿ ಬಲಿಯನ್ನು ಧರ್ಮದ ಕೇಂದ್ರವನ್ನಾಗಿ ಸ್ಥಾಪಿಸುವುದು ತಪ್ಪು.. ನಿಜದ ಧರ್ಮವು ಮನುಷ್ಯನ ಹೃದಯದೊಳಗಿರುತ್ತದೆ ಹೊರತಾಗಿ ಶಾಸ್ತ್ರದಲ್ಲಿ ಅಲ್ಲ.. ಮನುಷ್ಯ ಮತ್ತು ನೈತಿಕತೆ ಧರ್ಮದ ಕೇಂದ್ರವಾಗದೇ ಹೋದರೆ ಅದು ಕ್ರೌರ್ಯದ ಮೌಢ್ಯಶಾಸ್ತ್ರವಾಗುತ್ತದೆ. ನೈತಿಕತೆಯು ಕೇವಲ ಆದರ್ಶವಾದರೆ ಸಾಕಾಗುವುದಿಲ್ಲ, ದೇವರು ಇಲ್ಲದಿರುವುದರಿಂದ ಅದು ಜೀವನದ,ಭೌತಿಕ ಜಗತ್ತಿನ ಕಾನೂನು ಆಗಬೇಕು. ಜಗತ್ತನ್ನು ಪುನರೂಪಿಸುವುದು ಮತ್ತು ಸಂತೋಷಮಯಗೊಳಿಸುವುದು ಧರ್ಮದ ಕರ್ತವ್ಯವಾಗಿರಬೇಕು. ಧರ್ಮದ ಉಗಮ ಮತ್ತು ಅಂತ್ಯದ ಪಾಠಗಳ ಅವಶ್ಯಕತೆ ಇಲ್ಲ… ಜಗದೊಳಗಿನ ಅಶಾಂತಿ ಮತ್ತು ಅತೃಪ್ತಿಗೆ ಸ್ವಹಿತಾಸಕ್ತಿಗಳ ನಡುವಿನ ಘರ್ಷಣೆಗಳೇ ಕಾರಣ ಮತ್ತು ಅಷ್ಟಾಂಗ ಮಾರ್ಗವನ್ನು ಅನುಸರಿಸುವುದರ ಮೂಲಕ ಇದರಿಂದ ಮುಕ್ತಿ ಹೊಂದಬಹುದು.. ಖಾಸಗಿ ಆಸ್ತಿಯ ಒಡೆತನವು ಒಂದು ವರ್ಗಕ್ಕೆ ಅಧಿಕಾರವನ್ನು ತಂದುಕೊಟ್ಟರೆ ಮತ್ತೊಂದು ವರ್ಗಕ್ಕೆ ದುಖವನ್ನು ತಂದುಕೊಡುತ್ತದೆ.. ಈ ದುಖಕ್ಕೆ ಮೂಲ ಕಾರಣವನ್ನು ಹುಡುಕುವುದರ ಮೂಲಕ ಅದನ್ನು ಸಮಾಜದಿಂದ ತೆಗೆದುಹಾಕಬೇಕು. ಮನುಜರೆಲ್ಲರೂ ಸಮಾನರು. ಮನುಷ್ಯನನ್ನು ಆತನ ಹುಟ್ಟಿನ ಆಧಾರದ ಮೇಲೆ ಅಳೆಯಬಾರದು ಬದಲಾಗಿ ಆತನ ಯೋಗ್ಯತೆಯ ಮೂಲಕ ಅಳೆಯಬೇಕು. ಉನ್ನತ ಆದರ್ಶಗಳು ಮುಖ್ಯವೇ ಹೊರತು ಹುಟ್ಟಿನ ಮೂಲವಲ್ಲ. ಮನುಷ್ಯರ ನಡುವಿನ ಮೈತ್ರಿಯನ್ನು ಅದು ಶತೃವೇ ಆಗಿದ್ದರೂ ಸರಿಯೇ ತುಂಡರಿಸಬಾರದು. ಪ್ರತಿಯೊಬ್ಬನಿಗೂ ಜ್ಞಾನವನ್ನು ಗಳಿಸುವ ಹಕ್ಕು ಇದೆ. ಗುಣವಿಲ್ಲದ ಕಲಿಕೆ ಅಪಾಯಕಾರಿ. ಎಲ್ಲವನ್ನೂ ಸಂಶೋಧಿಸಿ, ಪ್ರಶ್ನಿಸಿಯೇ ಒಪ್ಪಿಕೊಳ್ಳಬೇಕು. ಯಾವುದೂ ಅಂತಿಮವಲ್ಲ. ಪ್ರತಿಯೊಂದು ಸಂಗತಿಯೂ ಕಾನೂನಿನ ಕಾರ್ಯಕಾರಣಕ್ಕೆ ಸಂಬಂಧಿಸಿರುತ್ತದೆ.
ಸತ್ಯಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೊರತುಪಡಿಸಿ ನಡೆಯುವ ಯುದ್ಧವು ಸಂಪೂರ್ಣವಾಗಿ ಅನೀತಿಯುತವಾದದ್ದು.
ಬುದ್ಧನು ವರ್ಗ (Class ) , ವರ್ಣದ (Caste)ವಿರುದ್ಧ ಹೋರಾಟ ನಡೆಸಿದನು ,ಚಳುವಳಿಯ ಮುಂದುವರೆದ ಕಾಲ ಘಟ್ಟದಲ್ಲಿ ಮಹಿಳೆಯರಿಗೆ ಸಮಾನತೆ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿದನು. ಆದರೆ ಎಲ್ಲಿಯೂ ಬುದ್ಧನು ಆಶ್ರಮಗಳ (Monarchy )ವಿರುದ್ಧ ಹೋರಾಟ ನಡೆಸಲಿಲ್ಲ.
ಇದು ಬಸವಣ್ಣನವರ ಹೋರಾಟಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿತ್ತು . ಅಕ್ಕ ನಾಗಮ್ಮನಿಗೆ ಧಾರ್ಮಿಕ ಸಂಸ್ಕಾರ ಕೊಡದಿದ್ದಾಗ ಬಂಡೆದ್ದ ಬಸವಣ್ಣ ತನ್ನ ಜನಿವಾರವನ್ನೇ ಹರಿದೊಗೆದನು. ಲಿಂಗ ಭೇದವನ್ನು (Gender Discrimination ) ಸಂಪೂರ್ಣವಾಗಿ ತಳ್ಳಿ ಹಾಕಿದನು ಬಸವಣ್ಣ. ಮಠಗಳು ಆಶ್ರಮಗಳನ್ನು (Monarchy ) ಬಸವಣ್ಣ ಧಾರ್ಮಿಕ ಚೌಕಿಟ್ಟಿನಲ್ಲಿ ವಿರೋಧಿಸಿದನು.. ಬದಲಾಗಿ ಮನೆಗಳೆ ಮಹಾ ಮನೆಯಾಗಬೇಕೆಂದು ಹಂಬಲಿಸಿದನು.
ಬಸವಣ್ಣ ಬುದ್ಧನ ಕನಸು ಮತ್ತು ಪರಿಪೂರ್ಣ ಬುದ್ಧನಾಗಿ ಕಾಣುತ್ತಾನೆ.

ಮಾರ್ಕ್ಸ್ ಮತ್ತು ಬಸವಣ್ಣ
ಬಸವಣ್ಣ ಮತ್ತು ಮಾರ್ಕ್ಸ್ ನಡುವಿನ ಹೋಲಿಕೆಯನ್ನು ಸಮಂಜಸವೇ ಎಂಬ ಪ್ರಶ್ನೆ ಮೂಡುತ್ತದೆ.. ಬಸವಣ್ಣ ಮತ್ತು ಮಾರ್ಕ್ಸ್ ನಡುವೆ 687 ವರ್ಷಗಳ ಅಂತರವಿದೆ. ಬಸವಣ್ಣ 1131 ರಲ್ಲಿ ಜನಿಸಿದರೆ ,ಮಾರ್ಕ್ಸ್ ಕ್ರಿ.ಶ. 1818 ರಲ್ಲಿ ಜನಿಸಿದ್ದಾರೆ. ಮಾರ್ಕ್ಸ್ ಅವರನ್ನು ಹೊಸ ಸಿದ್ಧಾಂತ , ಹೊಸ ಆರ್ಥಿಕ ಚಿಂತನೆಗಳ ಜನಕನೆಂದು ಕರೆಯುತ್ತಾರೆ. ಬಸವಣ್ಣ ರಾಜಕೀಯ-ಆರ್ಥಿಕ, ಸಾಮಾಜಿಕ ನೈತಿಕ ವೈಚಾರಿಕ ಸಾಹಿತ್ಯಿಕ ಅನುಭಾವ ಬದುಕನ್ನು ಕಲ್ಪಿಸಿದ ಮಾನವ ಧರ್ಮದ ಸ್ಥಾಪಕನೆಂದು ಕರೆಯುತ್ತಾರೆ. ಶತಮಾನಗಳ ನಡುವಿನ ಅಂತರದಿಂದಾಗಿ ಹಂಚಿಹೋದ ಈ ಇಬ್ಬರು ಮಾನವತಾವಾದಿಗಳ ನಡುವಿನ ಹೋಲಿಕೆ ಅಥವಾ ವೈರುಧ್ಯಗಳ ಕಾರಣದಿಂದಾಗಿ ಬಸವಣ್ಣ ಅಥವಾ ಮಾರ್ಕ್ಸ್ ’ ಕೊಂಚ ಅಭಾಸವಾಗಿಯೇ ಕಂಡುಬರುತ್ತದೆ. ಬಸವಣ್ಣ ಅಥವಾ ಮಾಕ್ರ್ಸ’ ಇಬ್ಬರನ್ನೂ ಒಂದೇ ಸಮಪಾತಳಿಯ ಮೇಲಿಟ್ಟು ನೋಡುವುದನ್ನು ಕಂಡು ಮಾರ್ಕ್ಸ್ ವಾದಿಗಳು ನಗಬಹುದು. ಮಾರ್ಕ್ಸ್ ಎಷ್ಟೊಂದು ಆಧುನಿಕ ಮತ್ತು ಬಸವಣ್ಣ ಎಷ್ಟೊಂದು ಹಳೆಯ !! ಹಾಗಿದ್ದರೆ ಈ ಇಬ್ಬರು ವ್ಯಕ್ತಿತ್ವದ ನಡುವೆ ಯಾವ ಹೋಲಿಕೆ ಇದೆ? ಒಬ್ಬ ಮಾರ್ಕ್ಸ್ ವಾದಿ ಬಸವಣ್ಣನನಿಂದ ಏನನ್ನು ಕಲಿಯಬಹುದು? ಬಸವಣ್ಣ ಮಾರ್ಕ್ಸ್ ವಾದಿಗೆ ಏನನ್ನು ಬೋಧಿಸಬಹುದು? ಏನೇ ಆದರೂ ಇಬ್ಬರ ನಡುವಿನ ಹೋಲಿಕೆಯು ಆಕರ್ಷಕ ಮತ್ತು ಬೋಧನೆ ಪ್ರಧಾನವಾಗಿರುತ್ತದೆ. ಮಾರ್ಕ್ಸ್ ವಾದಿಗಳು ತಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು ಬಸವಣ್ಣ ಏನನ್ನು ಹೇಳಿದ? ಯಾವುದಕ್ಕೆ ಬದ್ಧನಾಗಿದ್ದ ಎಂದು ಅಧ್ಯಯನ ಮಾಡಿದರೆ ಅವರ ನಿಲುವುಗಳು ಸ್ಪಷ್ಟವಾಗುತ್ತದೆ.

ಮಾರ್ಕ್ಸ್ ಪದಾರ್ಥವಾದಿ (Materialism ) ಬಸವಣ್ಣ ಪ್ರಸಾದವಾದಿ.

ಕಾರ್ಲ್ ಮಾರ್ಕ್ಸ್ ಮನುಷ್ಯ ತಾನು ಗಳಿಸಿದ್ದರ ಆದಾಯಕ್ಕೆ ತಾನೇ ಒಡೆಯನಾಗುತ್ತಾನೆ. ಹಣ ಆಸ್ತಿ ಗಳಿಕೆ ಕಾರ್ಮಿಕ ಶ್ರಮಿಕನಿಗೆ ಸಲ್ಲುತ್ತದೆ.ಆದರೆ ಬಸವಣ್ಣ ತಾನು ಗಳಿಸಿದ ಆದಾಯದಲ್ಲಿ ವ್ಯಕ್ತಿ ಎಲ್ಲವನ್ನೂ ತಾನೇ ಇಟ್ಟುಕೊಳ್ಳದೆ ಲಿಂಗ ಜಂಗಮ ಸಮಾಜಕ್ಕೆ ಹಂಚಬೇಕು.ನಾಡಿನ ಅಭಿವೃದ್ಧಿಗೆ ಬಂದ ಆದಾಯದಲ್ಲಿ ಕೆರೆ ಕಟ್ಟೆ ಭಾವಿಗಳಿಗೆ ವಿನಿಯೋಗಿಸಬೇಕು. ಮತ್ತು ಕಾಯಕ ಪರಿ ಶುದ್ಧವಾಗಿರಬೇಕು, ” ತನುವ ನೋಯಿಸಿ ಮಾನವ ಬಳಲಿಸಿ ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಲಿಂಗಾರ್ಪಿತ ” . ಸುಂಕದ ವ್ಯವಸ್ಥೆಯು ಅಂದು ಅತ್ಯಂತ ಸುಂದವಾಗಿ ಹೆಣೆದಿದ್ದರು ಆರ್ಥಿಕ ಮಂತ್ರಿ ಬಸವಣ್ಣ. ಕಾಯಕ ಆದಾಯ ಸಂಪನ್ಮೂಲಗಳ ಕ್ರೋಢೀಕರಣವಾದರೆ (Collection of Wealth ) ದಾಸೋಹವು ಹಂಚಿ ತಿನ್ನುವ ಅಥವಾ ಸಂಪನ್ಮೂಲಗಳ ವಿನಿಯೋಗವೆಂದೇ ಹೇಳಬಹುದು.(Distribution of Wealth ).
ಬಸವಣ್ಣ ಮತ್ತು ಕಾರ್ಲ ಮಾರ್ಕ್ಸ್ ಬೇರೆ ಬೇರೆ ಕಾಲ ಘಟ್ಟದಲ್ಲಿ ಕಂಡು ಬಂದರೂ ಅವರಿಬ್ಬರ ಮಧ್ಯೆ ಇರುವ ಸಮತೆಯ ಸಂಘರ್ಷ ಒಂದೆ.
ಬದಲಾವಣೆಗಾಗಿ ಕಮ್ಯುನಿಷ್ಟರು ಕಿರಿದಾದ, ಕ್ಷಿಪ್ರವಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅದೆಂದರೆ 1) ಹಿಂಸೆ 2) ಪ್ರೊಲೆಟೇರಿಯೇಟ್ ಸರ್ವಾಧಿಕಾರ ಇವೆರಡರ ಹೊರತಾಗಿ ಬೇರೆ ಯಾವುದೇ ಮಾರ್ಗವು ಹೊಸ ವ್ಯವಸ್ಥೆಯನ್ನು ರೂಪಿಸುವುದಿಲ್ಲ ಎಂದು ಕಮ್ಯುನಿಷ್ಟರು ನಂಬುತ್ತಾರೆ.

ಆದರೆ ಬಸವಣ್ಣ ಅಹಿಂಸೆ ಪ್ರೀತಿ ಮತ್ತು ಗಣಾಚಾರ ತ್ಯಾಗದಿಂದ ಸಮಗ್ರವಾದ ಕ್ರಾಂತಿಯನ್ನು ಪರಿಚಯಿಸಿದನು.

ಬಸವಣ್ಣ ಜಗತ್ತಿನ ಮೊಟ್ಟ ಮೊದಲ ಸಮಾಜವಾದಿ ಚಳುವಳಿಯ ಹರಿಕಾರ, ,ಶ್ರಮಿಕರ ಕಾರ್ಮಿಕರ ಪ್ರತಿನಿಧಿ , ಬಡವರ ಅಸ್ಪ್ರಶ್ಯರ ದಲಿತರ ಆಶಾಕಿರಣ , ಮಹಿಳೆಯರ ದುರ್ಬಲರ ದಾರಿ ದೀಪವಾಗಿ ನಿಲ್ಲುತ್ತಾನೆ. ವರ್ಗ ವರ್ಣ ಲಿಂಗ ಆಶ್ರಮ ಭೇದ ಬುಡಮಟ್ಟದಿಂದ ಕಿತ್ತೊಗೆದ ಕಾರಣೀಕರ್ತನು.

ಶರಣ ಸಂಸ್ಕೃತಿ ತನ್ನ ಪರಮೋಚ್ಚ ನೆಲೆಯನ್ನು ಕಂಡಾಗ . ವರ್ಣ ಸಂಕರವೆಂದು ವೈದಿಕರು ಬೊಬ್ಬೆ ಹೊಡೆದಾಗ (ಅಂತರ ಜಾತಿ ವಿವಾಹ) ,ಕಳಚೂರ್ಯರ ಕಲ್ಯಾಣ ಚಾಲುಕ್ಯರ ಆಂತರಿಕ ಕಿತ್ತಾಟ, ದಾಯಾದಿ ಕಲಹ, ವಿಪ್ರರ ವೈದಿಕರ ಕಾರಸ್ಥಾನದಿಂದ ಬಸವಣ್ಣನವರು ಸ್ಥಾಪಿಸಿದ ಸಮಾನತೆಯ ಚಳುವಳಿಗೆ ಕೊಡಲಿ ಏಟು ಬಿತ್ತು. ಎಳೆ ಹೂಟಿ ,ಶರಣರ ಕೊಲೆ ರಕ್ತದ ಮಡುವು ಕಲ್ಯಾಣದಲ್ಲಿ ನಿರ್ಮಾಣಗೊಂಡಿತ್ತು. ಅನುಭವ ಮಂಟಪಕ್ಕೆ ಬೆಂಕಿ ಹಚ್ಚಿದರು ಸನಾತನವಾದಿಗಳು.ವಚನಗಳು ಸುಟ್ಟು ಕಾರಕಲಾಗ ಹತ್ತಿದವು . ಚೆನ್ನ ಬಸವಣ್ಣ ಅಕ್ಕ ನಾಗಮ್ಮ ಮಡಿವಾಳ ಮಾಚಿದೇವ ,ಕಕ್ಕಯ್ಯ ಮುಂತಾದ ನೂರಾರು ಶರಣರು ವಚನಗಳ ಮೂಟೆಯನ್ನು ಹೊತ್ತುಕೊಂಡು ಸೋವಿದೇವನ ಸೈನಿಕರೊಂದಿಗೆ ಹೋರಾಡಿ ನಾಡಿನ ಮೂಲೆ ಮೂಲೆಯಲ್ಲಿ ವಚನಗಳನ್ನು ತಲುಪಿಸಿ ಸಾಹಿತ್ಯವನ್ನು ಕಾಪಾಡಿದರು.

ಕರ್ನಾಟಕ ನೆಲದಲ್ಲಿ ಇಂತಹ ಒಬ್ಬ ಶ್ರೇಷ್ಠ ದಾರ್ಶನಿಕ ಹುಟ್ಟಿರುವುದು ನಮ್ಮಯ ಹೆಮ್ಮೆ ಮತ್ತು ಭಾಗ್ಯವೆಂದೇ ತಿಳಿಯಬೇಕು. ಇಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬಸವಣ್ಣನವರ ಸಮಾನತೆಯ ಸಿದ್ಧಾಂತ ಕಾಯಕ ದಾಸೋಹಗಳ ಚರ್ಚೆ ನಡೆದಿದೆ. ಬಸವಣ್ಣ ಒಬ್ಬ ಮಹಾ ಮಾನವತಾವಾದಿ, ಸರ್ವಕಾಲಕ್ಕೂ ಸಮಾನತೆ ಸಾರಿದ ಧೀಮಂತ ನಾಯಕ.

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

Don`t copy text!