ವ್ಯಸನ ಮುಕ್ತ ಸಮಾಜ ನಮ್ಮ ಆದರ್ಶವಾಗಲಿ
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಬಾಲ್ಯದಿಂದಲೇ ಮಕ್ಕಳಿಗೆ ವ್ಯಸನದಿಂದ ಆಗುವ ಹಾನಿಯನ್ನು ಪರಿಚಯಿಸಬೇಕು. ಮನೆಯಲ್ಲಿ ಅಂತ ವಾತಾವರಣವನ್ನು ನಿರ್ಮಾಣ ವಾಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಮನುಕುಲವನ್ನು ಹಾಳು ಮಾಡುವಂತಹ ವ್ಯವಹಾರಗಳಿಗೆ ಸರಕಾರ ಅನುಕೂಲ ಮಾಡಿಕೊಡಬಾರದು.
ಸಪ್ತ ವ್ಯಸನಗಳಿಗೆ ಮನ ಹಾರದಂತೆ ಬಾಲ್ಯದಿಂದಲೇ ತನುವಿಗೆ ಸಾತ್ವಿಕ ಆಹಾರ, ಮನಸ್ಸಿಗೆ ಸುಜ್ಞಾನ, ಆತ್ಮಕ್ಕೆ ಧ್ಯಾನ ತಿಳಿಸಿ ಕೊಡುವುದರ ಮುಖಾಂತರ ಈ ಶರೀರ ಹದ ಗೊಳಿಸುವಲ್ಲಿ ವ್ಯಕ್ತಿ ಹಾಗೂ ಸಮಾಜ ಪ್ರಯತ್ನಿಸಬೇಕು. ಮಧ್ಯಪಾನ ,ತಂಬಾಕು ಬೀಡಿ ಸಿಗರೇಟ್ ಸೇವನೆ ನರಗಳನ್ನು ನಿಷ್ಕ್ರಿಯಗೊಳಿಸಿ ರಕ್ತ ಸಂಚಲನ,ಹಾಗೂ ಶ್ವಾಸೋಚ್ಛ್ವಾಸಕ್ಕೆ ತೊಂದರೆ ಕೊಡುತ್ತದೆ ಎಂಬುದನ್ನು ವೈದ್ಯಕೀಯ ಕ್ಷೇತ್ರ ದೃಢಪಡಿಸಿದೆ.
ಪ್ರಕೃತಿ ನಾಶವೇ ಶರೀರಕ್ಕೆ ಆಮ್ಲಜನಕದ ಕೊರತೆಯನ್ನುಂಟು ಮಾಡಿ ಅನಾರೋಗ್ಯಕ್ಕೂ ಕಾರಣವಾಗಿದೆ. ಇವತ್ತು ಕರೋನ ಮಹಾಮಾರಿ ಚಿಕಿತ್ಸೆಗೆ ಒಳಪಟ್ಟು ಸಾವಿಗೀಡಾದವರಲ್ಲಿ ವ್ಯಸನಿಗಳು ಹಾಗೂ ಸಾವಿಗೆ ಭಯಬೀತರಾದವರ ಸಂಖ್ಯೆ ಹೆಚ್ಚು ಎಂಬುದು ದೃಢ ಗೊಂಡಿದೆ.
ಕೆಳಗಿನ ವಚನದಲ್ಲಿ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಹಾಗೂ ಹುಟ್ಟು ಸಾವುಗಳನ್ನು ಸಹಜವಾಗಿ ಸ್ವೀಕರಿಸಿ ನಿರ್ಭಯದ ವಾತಾವರಣ ಉಂಟುಮಾಡುವ ಕರ್ತವ್ಯಗಳನ್ನು ಅಕ್ಕ ನಮಗೆ ತಿಳಿಸಿ ಕೊಡುತ್ತಾಳೆ. ಕರೋನ ಹಿಮ್ಮೆಟ್ಟಿಸುವಲ್ಲಿ ಅಕ್ಕ ಹೇಳಿದ ಸೂತ್ರಗಳನ್ನು ಜಗವೆ ಇವತ್ತು ಸಾರಿ ಹೇಳುತಿದೆ.
“ನಡೆ ಶುಚಿ, ನುಡಿ ಶುಚಿ, ತನು
ಶುಚಿ, ಮನ ಶುಚಿ,ಭಾವ ಶುಚಿ,
ಇಂತಿ ಪಂಚ ತೀರ್ಥಂಗಳ ಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ
ತೋರಿ ಎನ್ನನುಳುಹಿಕೊಳ್ಳಯ್ಯಾ ಚೆನ್ನಮಲ್ಲಿಕಾರ್ಜುನಾ.”
“ಕೆಡದಿರಿ ಕೆಡದಿರಿ ನಡಿಯ
ಹಿಡಿಯಿರೇ,
ದೃಢವಲ್ಲ ನೋಡಿರೆ ನಿಮ್ಮ ಒಡಲು,
ದೃಢವಲ್ಲ ನೋಡಿರೆ ಸಂಸಾರ ಸುಖವು,
ಚೆನ್ನಮಲ್ಲಿಕಾರ್ಜುನ ಬರೆದ ಅಕ್ಷರವು ತೊಳೆಯದ ಮುನ್ನ
ಬೇಗ-ಬೇಗ ಶಿವಶರಣೆನ್ನಿ.”
ಹೀಗೆ ಭೌತಿಕ ಶರೀರದ ನಶ್ವರತೆ ಹಾಗೂ ಶುಚಿತ್ವವನ್ನು ಅಕ್ಕ ಹೇಳಿದರೆ, ದೇವರ ಅದ್ಭುತ ಸೃಷ್ಟಿಯಲ್ಲಿ ಒಂದಾದ ಈ ಮಾನವ ಶರೀರವನ್ನು ದೈವತ್ವಕ್ಕೆ ಏರಿಸಿಕೊಂಡು ಬದುಕುವ ಕಲೆಯನ್ನು ಶಿವಶರಣ ಸಗರದ ಬೊಮ್ಮಯ್ಯನವರ ಜೀವನದಲ್ಲಿ ನಡೆದ ಒಂದು ಪ್ರಸಂಗ ಇಲ್ಲಿ ಸ್ಮರಿಸಿಕೊಳ್ಳಬಹುದು.
ಒಮ್ಮೆ ತಲೆ ನೋವು ಉಂಟಾದಾಗ ತನ್ನ ಪಂಚಾಕ್ಷರಿ ಮಂತ್ರ ಜಪದಲ್ಲಿ ಏನೋ ಕುಂದುಂಟಾಗಿರಬೇಕೆಂದು, ಅರ್ಪಿತ ಕ್ರಿಯೆಯಲ್ಲಿ ( ಪ್ರಸಾದ ಸ್ವೀಕರಿಸುವುದರಲ್ಲಿ)ದೋಷ ಉಂಟಾಗಿರಬೇಕು ಎಂದು ಚಿಂತಿಸಿ ಸಕ್ರಮವಾಗಿ ಪಂಚಾಕ್ಷರಿ ಜಪ ಮತ್ತು ಪ್ರಸಾದ ಸ್ವೀಕಾರದಲ್ಲಿ ಶಾಸ್ತ್ರೀಯತೆಯನ್ನು ಹೊಂದಿ ಅದನ್ನು ಕಳೆದುಕೊಂಡು ತಲೆನೋವನ್ನು ನಿವಾರಿಸಿ ಕೊಂಡ ಕಥೆ ಬರುತ್ತದೆ.
ಭೌತಿಕ ಅಥವಾ ಶಾರೀರಿಕ ಶುಚಿತ್ವಕ್ಕೆ ಸಾತ್ವಿಕ ಆಹಾರ , ಮನದ ಶುಚಿತ್ವಕ್ಕೆ ಸುಜ್ಞಾನ ಸುವಿಚಾರ, ಆತ್ಮಿಕ ಶುಚಿತ್ವಕ್ಕೆ ಧ್ಯಾನ, ಪೂಜೆ ಅವಶ್ಯ ಎಂಬುದನ್ನು ವೈದ್ಯ ಸಂಗಣ್ಣ ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ.
“ತ್ರೀದೋಷದ ಗುಣದಿಂದ ನಾನಾ ಬಹು ತಾಪತ್ರಯದ
ವ್ಯಾಧಿಯ ಚಿಕಿತ್ಸೆಯನಾದರೂ ಅರಿಯರಲ್ಲಾ!
ತನುವಿಂಗೆ ವಾತ, ಪಿತ್ತ ,ಶ್ಲೇಷ್ಮ:
ಆತ್ಮಂಗೆ ಆಣವ,ಮಾಯಾ,ಕಾರ್ಮಿಕ
ಇಂತೀ ತ್ರಿವಿಧ ಮಲತ್ರಯ ರೋಗ-ರುಜೆಯಡಗಿಸಿ ಬಂಧನದಲ್ಲಿ ಸಾಯುತಿದೆ ಅಂಗ,
ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರು ತಂದೆ,
ಒಂದು ಲಿಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ, ಒಂದು ಅರಿವಿನಲ್ಲಿ ಪಾಕವ ಮಾಡಿ
ಈ ರೋಗವ ಹರಿಯುವದು ಇದಕ್ಕನುಪಾನ ಇದರೆಡೆಯಿಲ್ಲ,
ಮರುಳಶಂಕರಪ್ರಿಯ ಸಿದ್ದರಾಮೇಶ್ವರಲಿಂಗ ಸಂಗಿ.”
ಹೀಗೆ ರೋಗ ಬರುವುದಕ್ಕೆ ಲಿಂಗಾಚಾರದಲ್ಲಿ ಅಕ್ರಮವೋದಗುವುದೇ ಕಾರಣವೆಂದೂ, ಸಕ್ರಮ ಆಚಾರ-ವಿಚಾರಗಳಿಂದ ಪ್ರಸಾದ ಪರಿಣಾಮದಿಂದ ಅದನ್ನು ಪರಿಹರಿಸಿಕೊಳ್ಳಬಹುದು ಎಂಬ ತಾತ್ವಿಕ ಸಾತ್ವಿಕ ಬದುಕಿನ ಅವಶ್ಯಕತೆ ಕುರಿತು ವೈದ್ಯ ಸಂಗಣ್ಣ ಹೇಳಿದ ತತ್ವಗಳನ್ನು ಇವತ್ತು ಹೋಮೋಪತಿಕ್, ಆಲೋಪತಿಕ್ ವೈದ್ಯರು ಸ್ಪರ್ಧಾತ್ಮಕವಾಗಿ ಕೋರೋಣ ಸೋಂಕನ್ನು ತಡೆಯುವಲ್ಲಿ ಸಲಹೆಗಳನ್ನು ನೀಡುತ್ತಿರುವುದು ಗಮನಿಸಿದಾಗ, ವೈದ್ಯ ಸಂಗಣ್ಣನವರ ವಚನ ನಮಗೆ ವಿಸ್ಮಯವನ್ನು ಉಂಟುಮಾಡುತ್ತದೆ. ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿ ಆರೋಗ್ಯಪೂರ್ಣ ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಪ್ರಸ್ತುತ ವಚನಗಳ ಅನುಷ್ಠಾನ ತುಂಬಾ ಮಹತ್ವದ್ದಾಗಿವೆ.
–ಪ್ರೇಮಕ್ಕ ಅಂಗಡಿ ಬೈಲಹೊಂಗಲ
One thought on “ವ್ಯಸನ ಮುಕ್ತ ಸಮಾಜ ನಮ್ಮ ಆದರ್ಶವಾಗಲಿ”
Comments are closed.