ಕಲ್ಯಾಣ ಕರ್ನಾಟಕದ ಕಣಜ ಕಣ್ಮರೆ

ಕಲ್ಯಾಣ ಕರ್ನಾಟಕದ ಕಣಜ ಕಣ್ಮರೆ


ಅಗಲಿದ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ
ಹಾರೈಕೆ ಕವಿ ಎಂದೇ ಕರ್ನಾಟಕದ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಪ್ರೊ. ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಪ್ರೌಢಶಾಲಾ ಪಠ್ಯದಲ್ಲಿ ಅವರು ರಚಿಸಿದ ಹಾರೈಕೆ ಕವಿತೆಯ ಮೂಲಕ ಸಮಸ್ತ ಕನ್ನಡಿಗರಿಗೆ ಹಾರೈಕೆ ಕವಿ ಎಂದೇ ಗುರುತಿಸಲ್ಪಟ್ಟಿರುವ ಅವರ ನಿಧನದಿಂದ ಕಲ್ಯಾಣ ಕರ್ನಾಟಕದ ಜ್ಞಾನ ಕಣಜ ಕಣ್ಮರೆಯಾದಂತಾಗಿದೆ.
ಅಂಗವಿಕಲರಾಗಿದ್ದರೂ ಜೀವನೋತ್ಸಾಹಕ್ಕೆ ಚ್ಯುತಿ ಬಾರದಂತೆ ಬದುಕಿದ ಅವರು, ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿ, ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದರು.
ಹೈದರಾಬಾದ್ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದು, ದಾಸ ಸಾಹಿತ್ಯದಲ್ಲಿ ವಿಶೇಷ ಸಂಶೋಧನೆ ನಡೆಸಿ, ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಮತ್ತು ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಪ್ರಥಮ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ಅಪಾರ ಶಿಷ್ಯರನ್ನು ಸಂಪಾದಿಸಿದ್ದರು. ದೀನದಲಿತರ ಅಭ್ಯುದಯಕ್ಕಾಗಿ ಸತತ ಜ್ಞಾನ ಪ್ರಸಾರ ಮಾಡಿದ್ದಾರೆ. ಸಾಕ್ಷರತಾ ಶಿಕ್ಷಣಕ್ಕಾಗಿ ಪಠ್ಯಪುಸ್ತಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ಕಲ್ಯಾಣ ಕರ್ನಾಟಕದಲ್ಲಿ ಕನ್ನಡಾಭಿವೃದ್ದಿಗಾಗಿ ಶ್ರಮಿಸಿದ ಕನ್ನಡ ಸೇನಾನಿಗಳಲ್ಲಿ ಮುಂಚೂಣಿಯಲ್ಲಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಉರ್ದು ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಮಕ ಕಲಾ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಕಲಕತ್ತಾದ ಏಸಿಯಾಟಿಕ್ ಸೊಸೈಟಿ, ಕರ್ನಾಟಕ ಅನುವಾದ ಅಕಾಡೆಮಿ ಮುಂತಾದ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಒಂಭತ್ತು ಕವನ ಸಂಕಲನ, 27 ಗದ್ಯ ಸಾಹಿತ್ಯ ಕೃತಿಗಳು, 16 ಸಂಪಾದಿತ ಕೃತಿಗಳು, 20 ಇತರರೊಡನೆ ಸಂಪಾದಿಸಿದ ಕೃತಿಗಳನ್ನು ಪ್ರಕಟಿಸಿದ ಅವರು, ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ದಾಸ ಸಾಹಿತ್ಯ ಸಂಪುಟಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಇವರ ಸಾಹಿತ್ಯ ಸೇವೆಗೆ ಪ್ರತಿಯಾಗಿ ಗುಲ್ಬರ್ಗ ಜಿಲ್ಲಾ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಸೇಡಂನ ಗಡಿನಾಡು ಕನ್ನಡಾಭಿವೃದ್ದಿ ಸಂಘದ ಪ್ರಥಮ ಗಡಿನಾಡು ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ಬಾದಾಮಿ ಹಾಗೂ ಕುಷ್ಟಗಿ
ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವ ಪಡೆದುಕೊಂಡಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಪ್ರೊ. ಕುಷ್ಟಗಿಯವರ ಸಾಧನೆಗೆ ಸಂದ ಗೌರವಗಳಾಗಿವೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಎಂ.ರಾಘವೇಂದ್ರ

Don`t copy text!