ಪ್ರಕೃತಿ
” ಇಳೆ ನಿಮ್ಮ ದಾನ
ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಆದ್ಯ ವಚನಕಾರರಾದ ಜೇಡರ ದಾಸಿಮಯ್ಯನವರು ಹೇಳುವಂತೆ ಇಳೆ,ಮಳೆ,ವಾಯು,ನೀರು ಮುಂತಾದ ಪ್ರಾಕೃತಿಕ ಅಂಶಗಳನ್ನು ದೇವರ ಪ್ರಸಾದವೆಂದು ಪವಿತ್ರ ಭಾವನೆಯಿಂದ ಅವುಗಳನ್ನು ಸ್ವೀಕರಿಸುವ, ಅವುಗಳ ಬಗ್ಗೆ ಕಾಳಜಿ ವಹಿಸುವ,ಅಭಿಮಾನ ತೋರುವ ಮೂಲಕ ನಮ್ಮ ಬದುಕಿನ ಅಂಗಗಳೆಂದು ಸ್ವೀಕರಿಸಬೇಕು.
ಪ್ರಕೃತಿ ಪರಮಾತ್ಮನ ಪರಮ ಸೃಷ್ಟಿ. ಅದರ ಅದ್ಬುತ ಲಕ್ಷಣಗಳು ಅನನ್ಯ.ಗಿಡ-ಮರ-ಬಳ್ಳಿ,ಕಾಡು-ಮೇಡು, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ, ಕ್ರಿಮಿ- ಕೀಟ ಹೀಗೆ ಸೃಷ್ಟಿಯ ಚರಾಚರ ಜೀವಿಗಳು ಪೃಕೃತಿಯ ಸಂಗಾತಿ. ಭುವಿ-ಬಾನು, ಸೂರ್ಯ-ಚಂದ್ರ,ಮಳೆ- ಬೆಳೆ ಇವೆಲ್ಲ ನಿತ್ಯ ನಿರಂತರ ನಡೆಯುವ ಚಟುವಟಿಕೆಗಳು. ಹಚ್ಚ ಹಸಿರಿನ ನಯನ ಮನೋಹರ ಭೂರಮೆಯ ಶೃಂಗಾರ, ಜುಳು ಜುಳು ಹರಿಯುವ ನದಿಯ ನಿನಾದ, ಸುಯ್ಯೆಂದು ಬೀಸುವ ತಂಪಾದ ಗಾಳಿ,ಅರಳಿ ನಗುವ ಪುಷ್ಪರಾಶಿ, ಪಕ್ಷಿಗಳ ಕಲರವ, ಕೋಗಿಲೆಯ ಮಧುರ ಗಾನ,ಆಹಾ!ಎಷ್ಟು ಅದ್ಬುತ ಪ್ರಕೃತಿಯ ಸೊಬಗು.
ಮಾನವ ಪ್ರಕೃತಿಯ ಕೂಸು.ತನ್ನ ಬೇಕು-ಬೇಡಗಳಿಗೆ, ಜ್ಞಾನ- ವಿಜ್ಞಾನಗಳಿಗೆ,ಎಲ್ಲ ಚಟುವಟಿಕೆಗಳಿಗೆ ಮೂಲವೇದಿಕೆ.ಪ್ರಕೃತಿಯ ಮಡಿಲಲ್ಲಿ ಬದುಕುವ ರೈತ ಭೂಮಿಯನ್ನು ಉತ್ತಿ ಬಿತ್ತಿ ಅನ್ನ ಬೆಳೆಯುತ್ತಾನೆ.ಒಬ್ಬ ವಿಜ್ಞಾನಿಗೆ ಪ್ರಕೃತಿ ಅನೇಕ ರಹಸ್ಯಗಳ ತಾಣ. ಒಬ್ಬ ಕವಿಗೆ ಕಾವ್ಯ ಸೃಷ್ಟಿಯ ಅದ್ಭುತ ಸೌಂದರ್ಯ ಲೋಕ.ಹೀಗೆ ಎಲ್ಲರೂ ತಮತಮಗೆ ಕಂಡಂತೆ ಬಳಸಿದರು,ಬಣ್ಣಿಸಿದರು, ವಿಮರ್ಶಿಸಿದರು. ಆದರೆ ಯಾರ ಕೈಗೂ ನಿಲುಕದ,ಯಾರ ಜ್ಞಾನದ ಆಳಕ್ಕೂ ಸಿಗದ ಅಪೂರ್ವ, ಅವರ್ಣನೀಯ ಪ್ರಕೃತಿ.ಪ್ರಕೃತಿಯ ಎಷ್ಟು ಅದ್ಬುತ ಎನ್ನುವುದಕ್ಕೆ ಒಂದು ಉದಾ.. ವಿಜ್ಞಾನದ ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಮಗು ಪ್ರಶ್ನೆ ಕೇಳಿತು. ಎಲೆ ಅಲುಗಾಡಿದ್ದರಿಂದ ಗಾಳಿ ಬೀಸುತ್ತೋ? ಗಾಳಿ ಬೀಸಿದ್ದರಿಂದ ಎಲೆ ಅಲುಗಾಡುತ್ತೋ? ಎಂದು ಪ್ರಶ್ನಿಸಿದಾಗ ಅಲ್ಲಿದ್ದ ಮತ್ತೊಂದು ಮಗು ಉತ್ತರಿಸಿತು ಎಲೆ ಅಲುಗಾಡಿದ್ದರಿಂದ ಗಾಳಿ ಬೀಸುತ್ತೆ ಕಣೊ ಎಂದು ಉತ್ತರಿಸಿದ. ಆಗ ಮಗು ಮತ್ತೆ ಪ್ರಶ್ನಿಸುತ್ತ ಎಲೆಗೆ ಆ ರೀತಿ ಅಲುಗಾಡುವ ಶಕ್ತಿ ಎಲ್ಲಿಂದ ಬರುತ್ತದೆ? ಎಂದಾಗ ಗಾಳಿ ಬೀಸಿದ್ದರಿಂದ ಎಲೆ ಅಲುಗಾಡುತ್ತೆ ಎಂದು ಮಗು ಉತ್ತರಿಸಿತು ಆಗ ಇಡೀ ತರಗತಿಗೆ ತಿಳಿಯಿತು ಗಾಳಿಯಿಂದ ಎಲೆ ಅಲುಗಾಡುತ್ತದೆ ಎನ್ನುವ ಸತ್ಯ.
ಇಂದು ಮಾನವ ತನ್ನನ್ನು ಪೋಷಿಸಿ ಬೆಳೆಸಿದ, ತನ್ನೆಲ್ಲ ಪ್ರಗತಿಗೆ ಕಾರಣವಾದ ಪ್ರಕೃತಿಯ ಮೇಲೆಯೇ ತನ್ನ ಪ್ರಭುತ್ವವನ್ನು ಸಾಧಿಸಲು ಹೊರಟಿದ್ದಾನೆ.ಅವನ ಅತಿಯಾದ ಆಸೆ, ಆಕಾಂಕ್ಷಿಗಳು,ಅವನ ಅತಿಯಾದ ಬುದ್ದಿವಂತಿಕೆ ಪ್ರಕೃತಿಯ ಸಹಜ ಸ್ಥಿತಿಯನ್ನು ಪಲ್ಲಟಗೊಳಿಸಿ ಅಸಮತೋಲನ ಉಂಟುಮಾಡಲು ಮಾತ್ರವಲ್ಲ ಅದರ ವಿಕೋಪಕ್ಕೆ ಗುರಿಯಾಗಲು ಕಾರಣವಾಗಿದೆ.ಬೃಹತ್ ಕೈಗಾರಿಕೆಗಳು, ಅಣುಸ್ಥಾವರಗಳು ಸ್ಥಾಪನೆಯಾಗಿ ವನಸಂಪತ್ತು ನಾಶವಾಗಿ ಪರಿಸರವೆಲ್ಲ ಮಲೀನವಾಗಿದೆ.ಶುದ್ದ ಗಾಳಿ,ನೀರು ಶುದ್ದ ಆಹಾರವಿಲ್ಲದೆ ನಾವೆಲ್ಲ ನಿತ್ಯ ವಿಷಾನಿಲವನ್ನು ಕುಡಿದು ಬದುಕುವ ಪರಿಸ್ಥಿತಿ ಬಂದಿದೆ. ನಮ್ಮ ಜೀವಾನಿಲ ಗಾಳಿಯನ್ನು ವಿಷವಾಗಿಸಿ ಇಂದು ಆಕ್ಸಿಜನ್ ಮಾಸ್ಕ್ ಗಳನ್ನು ತಯಾರಿಸಿ ಬೆಲೆಕೊಟ್ಟು ಕೊಂಡುಕೊಳ್ಳುವ,ಶುದ್ದ ನೀರನ್ನು ಮಲಿನಗೊಳಿಸಿ ಅದೇ ನೀರನ್ನು ರಾಸಾಯನಿಕಗಳಿಂದ ಶುದ್ದಗೊಳಿಸಿ ಕುಡಿಯುವ ದುರ್ದೈವ ನಮ್ಮದು. ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಬಂಜೆಯಾಗತೊಡಗಿದೆ.ಅಂತರ್ಜಲ ಬತ್ತಿ ಹೋಗಿದೆ.ಕಾಡುಗಳ ನಿರಂತರ ನಾಶದಿಂದಾಗಿ ಮಳೆ ಗಾಳಿ ಕ್ಷೀಣಿಸಿ ಬರಗಾಲದ ಬಿರುಗಾಳಿ ಬೀಸುತ್ತಿದೆ.ಪ್ರಕೃತಿಯ ಮೇಲೆ ನಡೆಯುತ್ತಿರುವ ನಿರಂತರ ಆಘಾತಕಾರಿ ಕ್ರಿಯೆಗಳಿಂದ ಭೂಕಂಪ,ಸುನಾಮಿ,ಗಳಂತ ವಿನಾಶಕಾರಿ ವಿಕೃತಗಳು ಸಂಭವಿಸುತ್ತಿವೆ. ಇನ್ನು ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ರಕ್ಷಾಕವಚವಾಗಿರುವ ಓಜೋನ್ ಸೂರ್ಯನಿಂದ ಬರುವ ಶಕ್ತಿಯುತ ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಭೂಮಿಗೆ ತಲುಪದಂತೆ ತಡೆದು ಜೀವರಾಶಿ ಸಸ್ಯಸಂಕುಲ ರಕ್ಷಿಸುವ ಓಜೋನ್ ತನ್ನ ಬಲದ ಕ್ಷೀಣತೆಯಿಂದ ಕವಚ ರೂಪದ ತನ್ನ ಪದರದಲ್ಲಿ ರಂಧ್ರಗಳಾಗಿರುವುದು ಪ್ರಕೃತಿಯ ನಾಶಕ್ಕೆ ಕೈಗನ್ನಡಿ.
ಪ್ರಸ್ತುತ ಜ್ವಲಂತ ಸಮಸ್ಯೆಯಾಗಿರುವ ಕೊರೋನಾ ರೋಗ ಮನುಕುಲ ವಿನಾಶದ ಸುನಾಮಿ ಅಲೆಯಂತೆ ಅಪ್ಪಳಿಸಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ.ಇಂದು ಮನುಷ್ಯನ ಬದುಕು ಅಶಾಂತಿ, ಅಭದ್ರತೆಯ ಗೂಡಾಗಿದೆ.ಭವಿಷ್ಯ ಅಸ್ಪಷ್ಟವಾಗಿ ಕಾಣುತ್ತಿದೆ. ಜೀವನವೇ ಅತಂತ್ರವಾಗಿ ಸಾಧನೆಯ ಗುರಿ, ಆತ್ಮವಿಶ್ವಾಸ ಕಣ್ಮರೆಯಾಗುತ್ತಿದೆ. ಮತ್ತೆ ನಮ್ಮ ಬಾಳಲ್ಲಿ ಶಾಂತಿ ನೆಮ್ಮದಿ ನೆಲೆಸಲು ತನ್ನ ಸ್ವಾರ್ಥ ,ದುರಾಸೆ ಗಳಿಂದ ಹೊರಬರಬೇಕು. *ಮಣ್ಣಿಂದ ಬಂದ ಕಾಯ ಮಣ್ಣಿಗೆ* ಎಂದು ಹುಟ್ಟು ಸಾವಿನ ಸತ್ಯವನ್ಧರಿತಾಗ ಜೀವನ ಸಾರ್ಥಕವಾಗುತ್ತದೆ. ಮೊದಲು ಪ್ರಕೃತಿಯ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಯನ್ನು ನಿಲ್ಲಿಸಬೇಕು.
ಭಕ್ತಿ ಭಂಡಾರಿ ಬಸವಣ್ಣನವರು ಭಕ್ತಿಯನ್ನು ಪೃಥ್ವಿಯ ಅಗಾಧತೆಗೆ ಹೋಲಿಸಿ ಅದರಲ್ಲಿ ಬೆಳೆ ತೆಗೆದು ಫಲ ಪಡೆಯುವ ಸಾಧನೆಯ ಹಾದಿಯನ್ನು ಈ ವಚನದ ಮೂಲಕ ತಿಳಿಸಿದ್ದಾರೆ.
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು,
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹೆಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ
ಇಲ್ಲಿ ಪ್ರಕೃತಿಯ ಅಂಶಗಳೊಡನೆ ಒಂದಾಗಿ ಬದುಕುವ, ಅವುಗಳಿಂದ ಪಾಠ ಕಲಿಯುವ ವೈಚಾರಿಕ ಪ್ರಗತಿಯ ಮನೋಭಾವ, ಸಾಮರಸ್ಯದ ಪ್ರವೃತ್ತಿ ತಿಳಿಯಬೇಕಿದೆ.
ಪರಿಸರವನ್ನು ಹಿತವಾಗಿ- ಮಿತವಾಗಿ ತನ್ನ ಬದುಕಿನ ಉಜ್ವಲತೆಗೆ ಪೂರಕವಾಗಿ ಬಳಸಿಕೊಳ್ಳಬೇಕು.ಪರಿಸರ ಪ್ರಜ್ಞೆ,ಪರಿಸರ ಪ್ರೀತಿ, ನಿಸರ್ಗದ ಉಪಾಸನೆಯಿಂದ ಸತ್ಯ-ಶಿವ-ಸುಂದರವಾದ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಅಂದಾಗ ಕರುಣಾಮಯಿ ಭೂತಾಯಿ ನಮ್ಮ ತಪ್ಪುಗಳನ್ನು ಕ್ಷಮಿಸಿ ನಿತ್ಯ ನಗುತ್ತಾಳೆ. ಜಗದ ಜೀವಿಗಳನ್ನು ನಗಿಸುತ್ತಾಳೆ- ನಲಿಸುತ್ತಾಳೆ.
–ಶ್ರೀಮತಿ ರೇಖಾ ಪಾಟೀಲ
ರಾಯಚೂರು