ಒಬ್ಬ ತಂದೆಯ ಬಸಿರಿನಲ್ಲಿ

ವಚನ ಸಾಹಿತ್ಯದ ಅನರ್ಘ್ಯರತ್ನ ಅಂಬಿಗರ ಚೌಡಯ್ಯ

“ಒಬ್ಬ ತಂದೆಯ ಬಸಿರಿನಲ್ಲಿ” ವಚನ ವಿಶ್ಲೇಷಣೆ

ಶರಣ ಶರಣೆಯರು “ಇಡೀ ಪ್ರಪಂಚವೇ ನಮ್ಮ ಮನೆ” ಯೆಂಬ ಸಂಸ್ಕೃತಿಯ ಆರಾಧಕರು. ಈ ತತ್ವದ ಅಡಿಯಲ್ಲಿ ಮಾನವೀಯ ಮೌಲ್ಯಗಳನ್ನು ತಮ್ಮ ವಚನಾಮೃತದಿಂದ ಜನಮನ ವಿಕಾಸದ ಮಾರ್ಗವನ್ನು ತೋರಿದರು. ಜಾಗತಿಕ ಸಾಹಿತ್ಯ ಲೋಕದ ಒಂದು ವಿಶಿಷ್ಟವಾದ ಮತ್ತು ಬಹು ಅಮೂಲ್ಯವಾದ ಭಾಗವೆಂದರೆ ಅದು ವಚನ ಸಾಹಿತ್ಯ. ಈ ಅಪರೂಪದ ವಚನಗಳು ಇಂದಿಗೂ ನಮಗೆ ದಾರಿ ದೀಪಗಳಾಗಿವೆ. 12 ನೇ ಶತಮಾನದಲ್ಲಿ ಇಡೀ ಪ್ರಪಂಚವೇ ಸಾಹಿತ್ಯಿಕವಾಗಿ ಕಗ್ಗತ್ತಲಲ್ಲಿದ್ದಾಗ ಕನ್ನಡದ ವಚನ ಸಾಹಿತ್ಯ ತನ್ನ ಅದ್ಭುತ ದಿಟ್ಟ ಹೆಜ್ಜೆಗಳನ್ನು ಮೂಡಿಸಿ ಅತ್ಯಂತ ಉತ್ಕೃಷ್ಟ ವಚನ ಸಾಹಿತ್ಯ ರಚನೆಯಾದ ಕಾಲಘಟ್ಟ. ಸಾಹಿತ್ಯ ಲೋಕದ ಅದ್ಭುತಗಳ ಗಣಿ ನಮ್ಮ ವಚನ ಸಾಹಿತ್ಯ. ಈ ಮಹಾನ್‌ ಅಕ್ಷರ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಹೊರ ಹೊಮ್ಮಿದ ಅನರ್ಘ್ಯ ರತ್ನಗಳಲ್ಲಿ ಅಂಬಿಗರ ಚೌಡಯ್ಯನವರೂ ಒಬ್ಬರಾಗಿದ್ದಾರೆ.

ಮೈಲಾರ ಶಾಸನದ ಪ್ರಕಾರ ಮತ್ತು ಶಿಶುನಾಳ ಶರೀಫರು ಬರೆದಂಥ “ಶಿವದೇವ ವಿಜಯಂ” ಎಂಬ ಗ್ರಂಥದಲ್ಲಿ ಉಲ್ಲೇಖವಾದಂತೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಶಿವಪುರ (ಈಗಿನ ಚೌಡಯ್ಯದಾನಪುರ) ಅಂಬಿಗರ ಚೌಡಯ್ಯನವರ ಜನ್ಮಸ್ಥಳ. ಇವರ ತಂದೆ ವಿರೂಪಾಕ್ಷ, ತಾಯಿ ಪಂಪಾದೇವಿ. ಇವರ ಮೂಲ ಹೆಸರು ಚೌಡೇಶ. ಚೌಡಯ್ಯನವರಿಗೆ ‘ಪುರವಂತ’ ಎಂಬ ಹೆಸರಿನ ಮಗನಿದ್ದನು ಎನ್ನಲಾಗಿದೆ. ಇವರ ಧರ್ಮಗುರು ಮತ್ತು ಆಧ್ಯಾತ್ಮ ಗುರುಗಳು ಉದ್ದಾಲಕ ಅಥವಾ ಶಿವದೇವಮುನಿ. ಅವರ ಗೌರವಾರ್ಥಕ್ಕಾಗಿಯೇ ಈ ಗ್ರಾಮಕ್ಕೆ ಶಿವಪುರವೆಂಬ ಹೆಸರನ್ನು ಅಂಬಿಗರ ಚೌಡಯ್ಯನವರು ನಾಮಕರಣ ಮಾಡಿದ್ದರು ಎನ್ನಲಾಗಿದೆ.
ಅತ್ಯಂತ ಕಠೋರ ಶಬ್ದಗಳಲ್ಲಿ ನಿಷ್ಠೂರವಾಗಿ ವಚನಗಳನ್ನು ಬರೆದ ಅಂಬಿಗರ ಚೌಡಯ್ಯನವರು ಸತ್ಯವನ್ನೇ ಪ್ರತಿಪಾದಿಸಿ, ನುಡಿದಂತೆ ನಡೆದವರು. ಅವರು ವಚನಗಳಲ್ಲಿ ಬಳಸಿದ ಭಾಷೆಯಲ್ಲಿ ಒರಟುತನವಿದ್ದರೂ ವಿಚಾರಗಳಲ್ಲಿ ಜಿಗುಟುತನವಿದೆ. ಹೇಳಬೇಕಾದ ವಿಷಯವನ್ನು ನೇರವಾಗಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇವರೊಬ್ಬರೇ ಎಂದು ತೋರುತ್ತದೆ. ಇವರೊಬ್ಬ ಕೆಚ್ಚೆದೆಯ ವಚನಕಾರ. ಇವರು ರಚಿಸಿದ ಸುಮಾರು 270 ವಚನಗಳು ದೊರಕಿವೆ. ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿ ಬಳಸಿಕೊಂಡಿದ್ದಾರೆ. ಎಲ್ಲಾ ಶರಣರಂತೆ ಇವರೂ ಸಹ ಕಾಯಕಯೋಗಿ, ದೋಣಿ ನಡೆಸುವುದು ಅಂದರೆ ಅಂಬಿಗ ಅವರ ಕಾಯಕ. ಅಂಬಿಗ ಎಂದರೆ ಯಾರು ಅಂತ ಅವರ ವಚನವೊಂದರಲ್ಲಿ ಉತ್ತರಿಸಿದ್ದಾರೆ:

ಅಂಬಿಗ ಅಂಬಿಗ | ಎಂದು ಕುಂದ ನುಡಿಯದಿರು ||
ನಂಬಿದರೆ ಒಂದೇ | ಹುಟ್ಟಿನಲ್ಲಿ ಕಡೆಯ ||
ಹಾಯಿಸುವನಂಬಿಗರ | ಚೌಡಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-945 / ವಚನ ಸಂಖ್ಯೆ-17)

ಕಾಯಕವನ್ನೇ ಉದಾಹರಣೆಯನ್ನಿಟ್ಟುಕೊಂಡು, ಈ ವಚನದಲ್ಲಿ ಆಧ್ಯಾತ್ಮ ಮತ್ತು ತನ್ನ ಕಾಯಕದ ಶ್ರೇಷ್ಠತೆಯನ್ನು ಹೇಳುತ್ತಾರೆ ಚೌಡಯ್ಯನವರು. ಅಂಬಿಗ ಅಂದರೆ ದೋಣಿ ನಡೆಸುವವನು ಮತ್ತು ಅಂತರಂಗದ ಅರಿವು. ತನ್ನನ್ನು ತಾನು ಅರಿದೊಡೆ, ತನ್ನ ಮೇಲೆ ನಂಬಿಕೆಯಿದ್ದರೆ ಮತ್ತು ಅಂಬಿಗನ ಮೇಲೆ ನಂಬಿಕೆಯಿದ್ದರೆ, ಜೀವನವೆಂಬ ಭವಸಾಗರವನ್ನು ಯಾವ ತೊಂದರೆಯಿಲ್ಲದೆ ದಾಟಬಹುದು ಎಂಬ ಸಂದೇಶವನ್ನು ನೀಡತಾರೆ ಅಂಬಿಗರ ಚೌಡಯ್ಯ. ಇವರ ಒಂದು ಅನುಪಮ ವಚನವನ್ನು ಇಲ್ಲಿ ವಿಶ್ಲೇಷಣೆ ಮಾಡುವ ಪ್ರಯತ್ನ.

ಒಬ್ಬ ತಂದೆಯ ಬಸಿರಿನಲ್ಲಿ | ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ? ||
ಅವರೊಳಗೊಬ್ಬಾತಂಗೆ ಸೆರಗ ಕಟ್ಟಿ | ಮದುವೆಯ ಮಾಡಿದ ಬಳಿಕ ||
ಆತಂಗೆ ತನ್ನಂಗದ | ಸುಖವನೊಪ್ಪಿಸಬೇಕಲ್ಲದೆ ||
ಉಳಿದಿರ್ದವರೆಲ್ಲ | ತನ್ನ ಮಾವನ ಮಕ್ಕಳೆಂದು ||
ಅವರಿಗೆ ಸೆರಗು ಹಾಸುವವಳನು | ಒಪ್ಪುವರೆ ಲೋಕದೊಳು? ||
ಪರಮಾತ್ಮನೆಂಬ ಶಿವನಿಗೆ | ಆಶ್ರಯವಾಗಿ ಹುಟ್ಟಿತ್ತು ಲಿಂಗ ||
ಆತಂಗೆ ವಾಹನವಾಗಿ | ಹುಟ್ಟಿದಾತ ವೃಷಭ ||
ಆತಂಗೆ ಯೋಗವಾಗಿ | ಹುಟ್ಟಿದಾತ ವಿನಾಯಕ ||
ಆತಂಗೆ ಯುದ್ಧಕ್ಕೆ ಸರಿಯಾಗಿ | ಹುಟ್ಟಿದಾತ ವೀರಭದ್ರ ||
ಇಂತಿವರೆಲ್ಲ | ಶಿವನ ಮಕ್ಕಳಾದರೆ ||
ತನಗೊಂದು ಪ್ರಾಣಲಿಂಗ | ವೆಂದು ಕಂಕಣ ಕಟ್ಟಿ ||
ಕರಸ್ಥಲಕ್ಕೆ ಬಂದ ಬಳಿಕ | ಅದನು ನಂಬಲರಿಯದೆ ||
ಮತ್ತನ್ಯದೈವಕ್ಕೆರಗಿದಡೆ | ನಾಯಕ ||
ನರಕವೆಂದಾತ ನಮ್ಮ | ಅಂಬಿಗಚೌಡಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-952 / ವಚನ ಸಂಖ್ಯೆ-83)

ಮನುಷ್ಯನ ದೇಹಕ್ಕೆ 11 ರಂಧ್ರ (ದ್ವಾರ) ಗಳಿವೆ. ಅವುಗಳಲ್ಲಿ ಹೊಕ್ಕಳು ಮತ್ತು ನೆತ್ತಿಯ ಮೇಲಿರುವ ಬ್ರಹ್ಮರಂಧ್ರಗಳು ಜನನವಾದ ಸ್ವಲ್ಪ ದಿನಗಳಾದ ಮೇಲೆ ಮುಚ್ಚಿ ಹೋಗುತ್ತವೆ. ಉಳಿದಿರುವ ರಂಧ್ರಗಳು 9 ಅವುಗಳು
೧) ಎರಡು ಕಣ್ಣುಗಳು.
೨) ಎರಡು ಕಿವಿಗಳು.
೩) ಎರಡು ನಾಸಿಕಗಳು.
೪) ಬಾಯಿ.
೫)ಗುದದ್ವಾರ.
೬)ಜನನೇಂದ್ರಿಯ.

ಸರ್ವಕರ್ಮಾಣಿ ಮನಸಾ | ಸನ್ನ್ಯಾಸ್ಯಾಸ್ತೇ ಸುಖಂ ವಶೀ ||
ನವದ್ವಾರೇ ಪುರೇ ದೇಹೀ | ನೈವ ಕುರ್ವನ್ನ ಕಾರಯನ್ ||

ತನ್ನ ಗುಣ-ಸ್ವಭಾವಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಶರಣನು ಸುಖವಾಗಿ ವಾಸಿಸುತ್ತಾನೆ. ಈ ದೇಹ ನವದ್ವಾರಗಳಿಂದ ನಿರ್ಮಾಣವಾಗಿದೆ. ಇವುಗಳ ನಿಯಂತ್ರಣವೇ ಉತ್ತಮ ಸ್ವಭಾವಕ್ಕೆ ಕಾರಣವಾಗುತ್ತದೆ. ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರ ದೇಹವನ್ನು ಕಾಪಾಡುವಂತಿರಬೇಕು. ಮೂಗು ಸೂಸಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿತಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ. ಹಾಗಾಗಿ ಪರಿಮಳವನ್ನೂ ಹುಡುಕುವ ಪ್ರವೃತ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ನಮ್ಮೊಳಗಿನ ಅರಿವನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.

ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ (ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ) ಎನ್ನುವ ಮೂರು ಶರೀರಗಳ ಪ್ರಸ್ತಾಪ ಬರುತ್ತದೆ. ಸ್ಥೂಲ ಶರೀರ ಅಂದರೆ ಕಣ್ಣಿಗೆ ಗೋಚರವಾಗುವ ನಮ್ಮ ದೇಹ. ಸೂಕ್ಷ್ಮ ಶರೀರ ಅಂದರೆ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿಯಿಂದ ಹುಟ್ಟಿದ ಪಂಚೇಂದ್ರಿಯಗಳು ಶ್ರೋತೃ (ಕಿವಿ), ತ್ವಕ್‌ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು) ಎನ್ನುವ ಸಮಷ್ಠಿ ಅಹಂಕಾರದಿಂದ ಹುಟ್ಟಿದ ಗುಣಗಳು. ನಾವು ನಿಧನರಾದಾಗ ಸ್ಥೂಲ ಶರೀರ ಮಣ್ಣಾಗುತ್ತದೆ. ಸೂಕ್ಷ್ಮ ಶರೀರ ಅಗ್ನಿ, ವಾಯು ಮತ್ತು ಪೃಥ್ವಿಯನ್ನು ಸೇರುತ್ತದೆ. ಕಾರಣ ಶರೀರ ಮುಂದೆ ಪ್ರಯಾಣ ಬೆಳೆಸುತ್ತದೆ.
ಒಬ್ಬ ತಂದೆಯ ಬಸಿರಿನಲ್ಲಿ ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ? ಎನ್ನುವ ಅಗ್ರಸಾಲಿನಲ್ಲಿ ಅಂಬಿಗರ ಚೌಡಯ್ಯನವರು ಪಂಚಭೂತ ಮತ್ತು ಪಂಚೇಂದ್ರಿಯಗಳಿಂದಾದ ತಂದೆಯೆಂಬ ದೇಹಕ್ಕೆ ನವರಂಧ್ರಗಳನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲ ಪಂಚಭೂತಗಳಿಂದ ನಮ್ಮ ಶರೀರ ನಿರ್ಮಾಣವಾಗಿರೋದು. ಪಂಚಭೂತಗಳು ಅಂದರೆ
 ಆಕಾಶ.
 ವಾಯು.
 ಅಗ್ನಿ.
 ನೀರು.
 ಪೃಥ್ವಿ.

ಇನ್ನು ಶರಣರಾದವರು ಪಂಚಸೂತಕಗಳ ಆಚರಣೆಯನ್ನು ಮಾಡಬಾರದೆಂದು ವಚನಗಳಲ್ಲಿ ಉಲ್ಲೇಖವಾಘಿದೆ. ಪಂಚಸೂತಕಗಳು ಅಂದರೆ
 ಜಾತಿ
 ಮರಣ
 ಉಚ್ಛಿಷ್ಟ (ಜಂಗಮರಿಗೆ ಅರ್ಪಿಸಿ ಉಳಿದದ್ದೆಲ್ಲವೂ ಎಂಜಲು ಎಂಬ ಭಾವ)
 ಜನನ
 ರಜ

ಪಂಚಸೂತಕಗಳ ಆಚರಣೆಯನ್ನು ಧಿಕ್ಕರಿಸಬೇಕೆಂದು ತಿಳಿಸಿದ್ದಾರೆ. ಸೂತಕಗಳನ್ನು ನಿರಾಕರಿಸಿ, ಲಿಂಗಧಾರಣೆಯು ಎಲ್ಲ ಮೈಲಿಗೆಗಳನ್ನೂ ಹೋಗಲಾಡಿಸುತ್ತದೆ ಎಂದು ಹೇಳಿರುವರು. ಹೀಗೆ ಅಂಧ ಶ್ರದ್ಧೆಗಳ ಅಡಿಯಲ್ಲಿ ನಡೆಯುವ ಶೋಷಣೆಯನ್ನು ತಪ್ಪಿಸಬೇಕು.

ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಮುಳ್ಳಾಗುವ ಭಾವನೆಗಳ ಅರಿಷಡ್ವರ್ಗಗಳು ಅಂದರೆ
 ಕಾಮ.
 ಕ್ರೋಧ.
 ಲೋಭ.
 ಮೋಹ.
 ಮದ.
 ಮಾತ್ಸರ್ಯ

ಇವುಗಳನ್ನು ಶರಣನಾದವನು ತ್ಯಜಿಸಬೇಕೆಂದು ಚೌಡಯ್ಯನವರು ಈ ಮೇಲಿನ ವಚನದಲ್ಲಿ ಉಲ್ಲೇಖಿಸಿದ್ದಾರೆ. ಅರಿಷಡ್ವರ್ಗಗಳು ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಮಾಡಿ ನಮ್ಮ ಅಸ್ತಿತ್ವವನ್ನು ದೋಚುವ ನಾವೇ ಪೋಷಿಸುವ ಶತೃಗಳು.

ನಮ್ಮಲ್ಲಿ ಅತ್ಯಂತ ಸೂಕ್ಷ್ಮವಾದ ನಾಲ್ಕು ಇಂದ್ರಿಯಗಳಿವೆ. ಇವುಗಳನ್ನು ಕರಣ ಚತುಷ್ಟಯವೆಂದು ಎಂದು ಹೆಸರಿಸಿದ್ದಾರೆ.
 ಮನಸ್ಸು
 ಬುದ್ಧಿ
 ಚಿತ್ತ
 ಅಹಂಕಾರ

ಮನಸ್ಸು ವಸ್ತುಗಳನ್ನು ಅರಿಯುವ ಶಕ್ತಿ. ಉಪನಿಷತ್ತಿನಲ್ಲಿ ಬರುವ ಹಾಗೆ “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ” ಎನ್ನುವ ಹಾಗೆ ಮನುಷ್ಯರ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ. ಬುದ್ಧಿ ಎಂದರೆ “ನಿಶ್ಚಯತ್ಮಾಕಮ್‌ ಅಂತಃಕರಣಮ್”” ಇದಮಿತ್ಥಂ ಎಂದು ನಿಶ್ಚಯ ಮಾಡುವ ನಿರ್ಣಯ ಮಾಡುವ ಅಂತಃಕರಣವೇ ಬುದ್ಧಿ. ಮನಸ್ಸಿಗಿಂತಲೂ ಪ್ರಬಲ ಮತ್ತು ಚುರುಕಾದ ಕರಣವೆಂದರೆ ಬುದ್ಧಿ. ಮನಸ್ಸನ್ನೂ ಸಂಯಮ ಮಾಡಬಲ್ಲ ವಿವೇಕ ಬುದ್ಧಿಗಿದೆ. ಚಿತ್ತ ಎಂದರೆ ಚಂಚಲವಾದ ಅಂತಃಕರಣ. ಒಂದುಕಡೆ ಕೂರದೆ ಅಲ್ಲಿ ಇಲ್ಲಿ ಓಡಾಡುವ ಅಂತಃಕರಣ. “ಚೀತಯತೇ ಇತಿ ಚಿತ್ತಂ” ವಸ್ತಗಳನ್ನು ಅರಿಯುವ ಶಕ್ತಿಯೇ ಚಿತ್ತ. ಅಹಂಕಾರ ಎಂದರೆ ನಾನು ಎನ್ನುವ ಅಂತಃಕರಣ. ಅಹಂಕಾರವು ತಾಮಸೀ ಪ್ರವೃತ್ತಿ. ಇಂಥ ಸಂಪತ್ತುಗಳನ್ನು ಶುದ್ಧವಾಗಿ ಮಾಡಿಕೊಂಡರೆ ಸದಾ ಆನಂದವಾಗಿರಬಹುದು.

ಇನ್ನು ಭವಿಯಿಂದ ಭಕ್ತ, ಭಕ್ತನಿಂದ ಶರಣನಾಗುವ ಪಥದಲ್ಲಿ ಸಾಗುವವನು ಅಷ್ಟಮದಗಳನ್ನು ಜಯಿಸಿದವನಾಗಿರಬೇಕೆಂದು ಹೇಳಿದ್ದಾರೆ. ಅಷ್ಟಮದಂಗಳು ಅಂದರೆ
 ಕುಲ ಮದ.
 ಛಲ ಮದ.
 ಧನ ಮದ.
 ರೂಪ ಮದ.
 ಯೌವನ ಮದ.
 ವಿದ್ಯಾ ಮದ.
 ರಾಜ ಮದ.
 ತಪೋ ಮದ.

ಶರಣನು ಕ್ರೋಧರಹಿತ, ನಿರ್ಲೋಭಿ, ನಿರ್ಮೋಹಿ ಆಗಿರಬೇಕು. ಅಷ್ಟಮದಂಗಳನ್ನು ಮೆಟ್ಟಿನಿಲ್ಲುವವನಾಗಿರಬೇಕು. ಮತ್ಸರವನ್ನು ಮೀರಿದವನಾಗಿರಬೇಕು, ಹೀಗೆ ಸಾಧಕನು ತನ್ನಲ್ಲಡಗಿದ ಅರಿಷಡ್ವರ್ಗಗಳ ಮೆಟ್ಟಿನಿಂತು, ಲೌಕಿಕದಲ್ಲಿ ಜೀವನಾಗಿ ಕಂಡರೂ ಅಲೌಕಿಕ ಸಿದ್ಧನಾಗಿ (ಶಿವಸ್ವರೂಪಿಯಾಗಿ) ತನ್ನ ಗುರಿಯನ್ನು ಮುಟ್ಟಬೇಕು. ಇದು ಶರಣರು ಈ ಲೋಕಕ್ಕೆ ಕೊಟ್ಟ ಹೊಸ ಪರಿಯ ಭಕ್ತಿಮಾರ್ಗ. ಇಲ್ಲಿ ಅಂಗವೇ ಲಿಂಗವಾಗುವುದು, ಜೀವನೇ ಶಿವನಾಗುವುದು, ಅದೇ ಶಿವ-ಜೀವ ಐಕ್ಯ ಮತ್ತು ಲಿಂಗಾಂಗ ಸಾಮರಸ್ಯ.

ವಚನದ ಎರಡು, ಮೂರು, ನಾಲ್ಕು ಮತ್ತು ಐದನೇ ಸಾಲುಗಳಲ್ಲಿ ಪಂಚತತ್ವಗಳಿಂದಾದ ದೇಹಕ್ಕೆ ಪಂಚಸೂತಕಗಳೆಂಬ ನಡೆಗಳು, ಅರಿಷಡ್ವರ್ಗಗಳು, ಕರಣ ಚತುಷ್ಟಯಗಳು ಮತ್ತು ಅಷ್ಟಮದಗಳಿಂದ ದಾರಿ ತಪ್ಪುವುದನ್ನು “ಸೆರಗು ಹಾಸುವುದು” ಎಂಬ ಉಪಮೆಯಿಂದ ದಾರಿ ತಪ್ಪುವವರನ್ನು ಲೋಕ ಮೆಚ್ಚುವುದಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.

ಅವರೊಳಗೊಬ್ಬಾತಂಗೆ ಸೆರಗ ಕಟ್ಟಿ | ಮದುವೆಯ ಮಾಡಿದ ಬಳಿಕ ||
ಆತಂಗೆ ತನ್ನಂಗದ | ಸುಖವನೊಪ್ಪಿಸಬೇಕಲ್ಲದೆ ||
ಉಳಿದಿರ್ದವರೆಲ್ಲ | ತನ್ನ ಮಾವನ ಮಕ್ಕಳೆಂದು ||
ಅವರಿಗೆ ಸೆರಗು ಹಾಸುವವಳನು | ಒಪ್ಪುವರೆ ಲೋಕದೊಳು? ||

ಇಂತಹ ತಂದೆಯೆಂಬ ನಿರಾಕಾರ ಶಿವನ ನೆಲೆಯಿರುವ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಲಾಗಿದೆ. ಈ ಸಾಲುಗಳಲ್ಲಿ ವ್ಯಕ್ತವಾಗಿರುವದು ಏಕದೇವೋಪಾಸನೆಯ ತತ್ವ. ಮದುವೆಯಾದ ಹೆಣ್ಣು ತನ್ನ ಗಂಡನ ಜೊತೆಗೆ ಭೋಗಿಸಬೇಕಲ್ಲದೆ ಮಾವನ ಮನೆಯ ಇತರೆ ಮಕ್ಕಳಿಗೆ ಮೈ-ಮನಸ್ಸನ್ನು ಕೊಡುವದನ್ನು ಲೋಕ ಒಪ್ಪುವುದಿಲ್ಲ. ಅವಳನ್ನು ಬೇರೇ ರೀತಿಯಲ್ಲಿ ಸಂಭೋಧಿಸುತ್ತಾರೆ. ಕರ್ಮಫಲಗಳಿಗೆ ಮಾರುಹೋಗುವವನು ತೊಡಕಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕರ್ಮಫಲಗಳನ್ನು ಯೋಚಿಸದೆ ಒಂದೇ ರೀತಿಯಾದ ನಿಷ್ಠೆಯಿಂದಿರುವವನ ಆತ್ಮ ಪರಿಶುದ್ಧವಾದ ಶಾಂತಿಯನ್ನು ಹೊಂದಲು ಸಾಧ್ಯ.

ಈ ವಚನದ ಮುಂದಿನ ಸಾಲುಗಳಲ್ಲಿ ಬರುವ ಶಿವ, ಲಿಂಗ, ವೃಷಭ, ವಿನಾಯಕ ಮತ್ತು ವೀರಭದ್ರ ಎನ್ನುವ ಪಾತ್ರಗಳು ಪಂಚಾಚಾರದ ಅರಿವಿನ ಕುರುಹನ್ನು ಇಲ್ಲಿ ನಿರೂಪಣೆ ಮಾಡುತ್ತವೆ. ಪುರಾಣ ಪುಣ್ಯ ಕಥೆಗಳನ್ನು ಕಾಯಕ ಯೋಗಿಗಳಾದ ಶರಣರು ಒಪ್ಪಿಲ್ಲ. ಆದರೆ ಅಂಬಿಗರ ಚೌಡಯ್ಯನವರು ಈ ದೃಷ್ಟಾಂತಗಳ ಮೂಲಕ ಪಂಚಾಚಾರಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ ಅಂತ ಅನಿಸುತ್ತದೆ.

ಪರಮಾತ್ಮನೆಂಬ ಶಿವನಿಗೆ | ಆಶ್ರಯವಾಗಿ ಹುಟ್ಟಿತ್ತು ಲಿಂಗ ||
ಆತಂಗೆ ವಾಹನವಾಗಿ | ಹುಟ್ಟಿದಾತ ವೃಷಭ ||
ಆತಂಗೆ ಯೋಗವಾಗಿ | ಹುಟ್ಟಿದಾತ ವಿನಾಯಕ ||
ಆತಂಗೆ ಯುದ್ಧಕ್ಕೆ ಸರಿಯಾಗಿ | ಹುಟ್ಟಿದಾತ ವೀರಭದ್ರ ||

ಜೀವನ ಕ್ರಮ ಜೀವಿತದ ಚಿಂತನೆಯಲ್ಲಿಯೇ ಮುಕ್ತಾಯವಾಗುವುದಿಲ್ಲ ಮತ್ತು ಅದರ ಜೊತೆಗೆ ಸಾಮಾಜಿಕ ವ್ಯವಸ್ಥೆಯ ಅಗತ್ಯವೂ ಇರುತ್ತದೆ. ಒಳ್ಳೆಯ ನಡತೆ, ನಡವಳಿಕೆಗಳು, ಸ್ವಾತಂತ್ರ್ಯ, ಸರ್ವ ಸಮಾನತೆ ಮತ್ತು ಸಹೋದರತ್ವ ಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಮತ್ತು ಅಗತ್ಯತೆ ಇದೆ. ಸಾಮಾಜಿಕ ಕಟ್ಟಳೆಗಳನ್ನು ಒಳಗೊಂಡ ನೀತಿಸಂಹಿತೆಯನ್ನು ರಚಿಸಿದ ಶರಣರು ಇವನ್ನು ಐದು ಆಚಾರಗಳು ಎಂದರು. ಇವುಗಳೇ ಪಂಚಾಚಾರಗಳು.

“ಪರಮಾತ್ಮನೆಂಬ ಶಿವನಿಗೆ” ಎನ್ನುವುದು ಶಿವಾಚಾರ ತತ್ವ. ಎಲ್ಲರೂ ಸಮಾನರು. ವಷ್ಠಿ ಮತ್ತು ಸಮಷ್ಠಿಯಲ್ಲಿ ಶಿವಸ್ವರೂಪವನ್ನು ಕಾಣುವುದೇ ಶಿವಾಚಾರ. ನಡೆನುಡಿಯಲ್ಲಿ ಸಾಮರಸ್ಯವನ್ನು ಕಂಡ ಶರಣರು ಎಲ್ಲರೂ ಸಮಾನರು ಎಂದು ಸಾರುವುದೇ ಶಿವಾಚಾರ. ಲಿಂಗಾಚಾರದಲ್ಲಿ ವೈಚಾರಿಕವಾಗಿ ಗುರುತಿಸಿದ್ದನ್ನು ಆಚಾರದಲ್ಲಿ ತೋರಿಸುವ ಹಂತ ಶಿವಾಚಾರವೆಂದು ಪ್ರಾಯಶಃ ಅನ್ನಬಹುದು.

“ಶಿವನಿಗೆ ಆಶ್ರಯವಾಗಿ ಹುಟ್ಟಿತ್ತು ಲಿಂಗ” ಇದು ಲಿಂಗಾಚಾರ ತತ್ವ. ಏಕದೇವೋಪಾಸನೆ. ಇಷ್ಟಲಿಂಗ ಧಾರ್ಮಿಕ ಸ್ವಾತಂತ್ರ್ಯ ನೀಡಿ ಆಧ್ಯಾತ್ಮಿಕವಾಗಿ ಸ್ವಾವಲಂಬಿಗಳನ್ನಾಗಿಸಿ ಆತ್ಮಸ್ಥೈರ್ಯ, ಸ್ವಾಭಿಮಾನ ನೀಡುತ್ತದೆ. ಏಕ ದೇವೋಪಾಸನೆಯಿಂದ ವರ್ಗ, ವರ್ಣ, ಜಾತಿ ಹಿನ್ನೆಲೆಯಲ್ಲಿ ಮೇಲು-ಕೀಳು ಎಂಬ ಭಾವ ನಿರಾಕರಿಸಲ್ಪಟ್ಟು ಎಲ್ಲರನ್ನೂ ಸಮಾನ ಭಾವದಿಂದ, ಗೌರವ ಭಾವದಿಂದ ನೋಡುವುದೇ ಲಿಂಗಾಚಾರ.

“ಆತಂಗೆ ವಾಹನವಾಗಿ ಹುಟ್ಟಿದಾತ ವೃಷಭ” ಎನ್ನುವುದು ಸದಾಚಾರ ತತ್ವ. ದಾಸೋಹಿಯಾಗಿರುವುದು. ವೃಷಭ ನಮ್ಮ ರೈತಾಪಿ ಜನರ ಜೀವನಾಡಿ. ತನ್ನ ಕಾಯಕದಿಂದ ದಾಸೊಹವನ್ನು ಮಾಡುತ್ತಾ ಬರುತ್ತದೆ. ವೃಷಭದ ಹಾಗೆ ದಿನ ನಿತ್ಯದ ಬದುಕನ್ನು ಚೆನ್ನಾಗಿ ಬಾಳುವುದು ಅಥವಾ ಶಿವಾಚಾರವನ್ನು ದೈನಂದಿನ ಬದುಕಿನ ಕ್ರಮವಾಗಿಸುವುದು ಸದಾಚಾರವೆನಿಸುತ್ತದೆ. ಇಡೀ ಸಮಾಜದ ಅಥವಾ ಸಮುದಾಯದ ಹಿತಕ್ಕಾಗಿ ದುಡಿಯಬೇಕೆನ್ನುವುದು ಸದಾಚಾರ.

“ಆತಂಗೆ ಯೋಗವಾಗಿ ಹುಟ್ಟಿದಾತ ವಿನಾಯಕ” ಇದು ಭೃತ್ಯಾಚಾರ ತತ್ವ. ವಿನಾಯಕನನ್ನು ಭೃತ್ಯಾಚಾರಕ್ಕೆ ಹೋಲಿಸಿರುವುದನ್ನು ನಾವು ಕಾಣಬಹುದು. ಸಮಾಜದಲ್ಲಿ ಹೊಂದಿಕೊಳ್ಳುವ ಬಗೆ ಅಥವಾ ಸಕಲ ಭಕ್ತರನ್ನು ಭ್ರಾತೃಭಾವದಿಂದ ಅಂದರೆ ಸಮಭಾವದಿಂದ ನೋಡುವುದೇ ಭೃತ್ಯಾಚಾರ. ಸಕಲ ಜೀವಿಗಳೊಡನೆ ಆತ್ಮೀಯವಾಗಿ ಬೆರೆಯುವುದರ ಜೊತೆಗೆ ಅಹಂ ಅಳಿದು ಸೋಹಂ ಮೀರಿ ದಾಸೋಹಂ ಭಾವ ಬೆಳೆಸಿಕೊಳ್ಳುವುದೇ ಭೃತ್ಯಾಚಾರ.

“ಆತಂಗೆ ಯುದ್ಧಕ್ಕೆ ಸರಿಯಾಗಿ ಹುಟ್ಟಿದಾತ ವೀರಭದ್ರ” ಇದು ಗಣಾಚಾರ ತತ್ವ. ಶರಣ ತತ್ವಗಳ ರಕ್ಷಣೆ. ಶರಣ ತತ್ವಗಳ ವಿಷಯದಲ್ಲಿ ನಿಂದನೆಯನ್ನೂ ಅಪಚಾರವನ್ನೂ ಸಹಿಸದೇ ಇರುವುದು ಗಣಾಚಾರದ ಮಹತ್ವ. ತನ್ನ ಪ್ರಾಣವನ್ನಾದರೂ ಕೊಟ್ಟು ಸಮಾಜ ಮತ್ತು ಮಾನವತೆಯ ಒಳಿತಿಗಾಗಿ ತೆಗೆದುಕೊಳ್ಳುವ ಜವಾಬ್ದಾರಿಯೇ ಗಣಾಚಾರ.

ಇವು ಶರಣ ಸಿದ್ಧಾಂತದ ಬಹು ಮುಖ್ಯ ತತ್ವಗಳು. ಒಂದೊಂದು ತತ್ವವೂ ಒಂದೊಂದು ಗುಣಧರ್ಮವನ್ನು ತಿಳಿಸುತ್ತಾ ಶರಣರನ್ನಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಈ ವಚನದ ಕೊನೇಯ ಸಾಲುಗಳಲ್ಲಿ ಅಂಬಿಗರ ಚೌಡಯ್ಯನವರು

ಇಂತಿವರೆಲ್ಲ | ಶಿವನ ಮಕ್ಕಳಾದರೆ ||
ತನಗೊಂದು ಪ್ರಾಣಲಿಂಗ | ವೆಂದು ಕಂಕಣ ಕಟ್ಟಿ ||
ಕರಸ್ಥಲಕ್ಕೆ ಬಂದ ಬಳಿಕ | ಅದನು ನಂಬಲರಿಯದೆ ||
ಮತ್ತನ್ಯದೈವಕ್ಕೆರಗಿದಡೆ | ನಾಯಕ ||
ನರಕವೆಂದಾತ ನಮ್ಮ | ಅಂಬಿಗಚೌಡಯ್ಯ ||

ಏಕದೇವೋಪಾಸನೆಯನ್ನು ಪ್ರತಿಪಾದಿಸುವಲ್ಲಿ ಮತ್ತೊಂದು ದೃಷ್ಟಾಂತವನ್ನು ಈ ಸಾಲುಗಳ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರ ಅಂಬಿಗರ ಚೌಡಯ್ಯನವರು. ಹೀಗೆ ಕರಣ ಚತುಷ್ಟಯಗಳು, ಪಂಚಸೂತಕಗಳು, ಅರಿಷಡ್ವರ್ಗಗಳು, ಅಷ್ಟಮದಗಳನ್ನು ಜಯಿಸಿ ಪಂಚಾಚಾರಗಳ ಮೂಲಕ ನಿರಾಕಾರ ಶಿವನ ಮಕ್ಕಳಂತೆ ಆದಾಗ ದೇಹದಲ್ಲಿ ಆತ್ಮನೆಂಬ ಶಿವನ ಪ್ರಕಾಶದ ಉದಯವಾಗುತ್ತದೆ. ಅದನ್ನು ಹಿಡಿದಿಟ್ಟುಕೊಂಡು ಏಕದೇವೋಪಾಸನೆ ಮಾಡಿದರೆ ಶರಣತ್ವವನ್ನು ತಲುಪಬಹುದು. ಇಲ್ಲವಾದಲ್ಲಿ ನರಕವೆಂಬ ಕೂಪದಲ್ಲಿ ಬೀಳಬೇಕಾಗುತ್ತದೆ ಎನ್ನುವ ಆಶಯವನ್ನು ಅಂಬಿಗರ ಚೌಡಯ್ಯನವರ ಈ ವಚನ ಪ್ರಸ್ತುತ ಪಡಿಸುತ್ತದೆ.

ಇದು ಹನ್ನರಡನೇ ಶತಮಾನದ ಸಾಹಿತ್ಯ, ಎಂಥವರನ್ನು ಚಕಿತಗೊಳಿಸುವ, ಜ್ಞಾನದ ದೀಪ್ತಿಯನ್ನು ಬೆಳಗಿಸಬಲ್ಲ ಶಕ್ತಿ ಈ ಸಾಹಿತ್ಯ ಪ್ರಕಾರಕ್ಕಿದೆ. ಇಂತಹ ಸುಂದರ ಚಿತ್ರಣಕ್ಕಾಗಿಯೇ ಇನ್ನೂ ಜೀವಂತವಾಗಿದೆ.

ವಿಜಯಕುಮಾರ ಕಮ್ಮಾರ
ತುಮಕೂರು –

ಮೋಬೈಲ್‌ ನಂ : 9741 357 132

ಈ-ಮೇಲ್‌ : vijikammar@gmail.com

Don`t copy text!