ಅರಿಯದ ಅಜ್ಞಾನಿ ಜನರೇನು ಬಲ್ಲರು – ಕೂಡಲೂರೇಶ್ವರರು.

ಅರಿಯದ ಅಜ್ಞಾನಿ ಜನರೇನು ಬಲ್ಲರು – ಕೂಡಲೂರೇಶ್ವರರು.

ಬಸವಾದಿ ಶರಣರ ದೃಷ್ಟಿಯಲ್ಲಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಷಟ್ ಸ್ಥಲವೆ ಆತ್ಮವಾಗುವ ಪರಿಯ ವರ್ಣಿಸಲು ಪದಗಳೇ ಸಾಲವು. ನಡೆ – ನುಡಿ, ಅರಿವು – ಆಚಾರ, ಅಂತರಂಗ – ಬಹಿರಂಗ ಶುದ್ಧಿ ಇಲ್ಲದವರು ಶರಣರಾಗಲಾರರು.
ತನ್ನೊಳಗಿನ ಅರಿವನು ಅರಿಯಬೇಕಾದರೆ ಗುರು ತೋರಿಸಿದ ಅರಿವಿನ ಪಥದಲ್ಲಿ ನಡೆಯಲೇ ಬೇಕು. ಅಂಥಾ ವಿಚಾರಧಾರೆಯನು ಕೂಡಲೂರೇಶ್ವರು ಬಹಳ ಚೆನ್ನಾಗಿ ಹೇಳುತ್ತರೆ.

ಗುರುವಿನಾಜ್ಞಯ ಮೀರದೆ ನಡೆಯವವನ ನರನೆನ್ನಬೇಡ ಅವನೆ ಪರಮಾತ್ಮ.
ಅರಿಯದ ಅಜ್ಞಾನಿ ಜನರೇನು ಬಲ್ಲರು
ಪರಕೆ ಪರತರ ವಸ್ತು ಅವನು,
ಮುತ್ತು ನೀರೊಳು ಹುಟ್ಟಿ ಮತ್ತೆ ನೀರಾಗುವುದೆ ?
ಮುತ್ತು ಲಕ್ಷಾಂತರ ಬೆಲಿಯಾಯಿತು.
ತತ್ವಜ್ಞಾನಿಯು ತಾನು ಸತ್ತು ಹುಟ್ಟುವನಲ್ಲ
ಅತ್ಯಂತ ಆನಂದ ಪರಿಪೂರ್ಣನವನು.
ಜಾತಿಯೊಳು ಪುಟ್ಟಿ ಅಜಾತನಾದವಂಗೆ
ಜಾತಿ ಭೇದಂಗಳು ಆತನಿಗುಂಟೆ ?
ಜ್ಯೋತಿ ಪ್ರಕಾಶ ಕೂಡಲೂರೇಶನೆ ದಾತ
ಪ್ರಖ್ಯಾತ ಅವಧೂತನವನು.!

ಗುರುವೆಂದರೆ; ಕಾವಿ, ಕೇಶ ಕಾಷಾಂಬರವ ಹೊತ್ತು, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಬಾಯಲ್ಲಿ ನಶ್ವರವಾದ ಮಾತು, ಮನದಲ್ಲಿ ಧನ ಕನಕ, ವಜ್ರ ವೈಡೂರ್ಯಗಳ ಆಸೆ ತುಂಬಿದ
ಸಂಸಾರ ಭಾವ, ಹೇಯ ಕೃತ್ಯಂಗಳು, ಇಂಥವರು ಗುರುವೆಂದು ಭಾವಿಸಿ ಅವರ ಬಾಯ ಎಂಜಲು ತಿಂಬುವವರು ಶರಣರಾಗಲು ಸಾಧ್ಯವಿಲ್ಲ.
ತನ್ನತಾನರಿದು
ತನ್ನೊಳಗನರಿದ ಸದ್ವಿನಯದ ಅನುಭಾವವನ್ನು ಮೀರದೇ ನಡೆಯುವವನು ನಿಜಕ್ಕೂ ಗುರುವಿನಗುರು ಪರಮಗುರುವೇ ಆಗುವನು. ತನ್ನೊಳಗಣ ಅರಿವು ತನ್ನ ನಡೆ-ನುಡಿ ಆಚಾರ-ವಿಚಾರ ಅಂತರಂಗ-ಬಹಿರಂಗದ ಆಚರಣೆಯಲ್ಲಿ ಕಾಣಿಸತೊಡಗಿದಾಗ ಮಾತ್ರ ಮಾನವನು ಶರಣನಾಗಿ, ದೇಹವು ದೇವಾಲಯವಾಗಿ ತನ್ನಾತ್ಮದಲ್ಲೆ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ.
ಅಂಥಾ ಶರಣರು ಮಾತ್ರ ಪರಮಾತ್ಮನಾಗಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಇಂಥಾ ಮಾರ್ಮಿಕ ವಾದ ಅರಿವೇ ತನ್ನ ನಿಜವಾದ ಗುರುವಾಗುವುದು. ಈ ವಿಷಯವನ್ನು ಅರಿಯದ ಅಜ್ಞಾನಿಗಳಿಗೆ ಗುರುವಿನ ಮಹಾತ್ಮೆ ಹೇಗೆ ಗೊತ್ತಾಗಲು ಸಾಧ್ಯ.? ಅದು ಹೇಗೆಂದರೆ, ಸಮುದ್ರದೊಳಗಿನ ಸಿಂಪು ಸ್ವಾತಿ ಮಳೆಯ ಹನಿಯ ಸಲವಾಗಿ ಎಷ್ಟೋ ದಿನಗಳಿಂದ ಬಾಯ್ತೆರೆದು ಕೂಡುತ್ತದೆ. ಸ್ವಾತಿ ಮಳೆ ಹನಿಯನ್ನು ಗ್ರಹಿಸಿ, ಆ ಸಿಂಪಿ ಮುಚ್ಚಿಕೊಂಡು ಅಮೂಲ್ಯ ಬೆಲೆ ಬಾಳುವ ಮುತ್ತು ರತ್ನಗಳನ್ನು ಕೊಡುವುದು. ಹೀಗಾಗಿ ಮುತ್ತುಗಳ ಬೆಲೆ ಬಾಳುವಿಕೆ ಅತಿಹೆಚ್ಚು. ಹಾಗೆ, ತತ್ವಜ್ಞಾನಿಯಾದ ಶರಣನು ಹುಟ್ಟು ಸಾಯುವ ಕಾಲಚಕ್ರದಲ್ಲಿ ಜನ ಸಾಮಾನ್ಯರಂತೆ ಬೀಳುವನಲ್ಲ. ಮುತ್ತಿನಂತೆ ಅತ್ಯಂತ ಪರಿಪೂರ್ಣತೆಯ ಲಕ್ಷಣವನ್ನು ಹೊಂದಿರುತ್ತಾನೆ. ಮಾನವರು ನಿರ್ಮಿಸಿದ ಜಾತಿ ವ್ಯವಸ್ಥೆಯಲ್ಲಿ ಹುಟ್ಟಿದರೂ ಶರಣನು ಅಜಾತನಾಗಿರುತ್ತನೆ. ಶರಣರಿಗೆ ಜಾತಿಭೇದಂಗಳು ಇರುವುದೇ ಇಲ್ಲ. ಪರಂಜ್ಯೋತಿ ಸ್ವಯಂಪ್ರಕಾಶನಾಗಿದ್ದ ಕೂಡಲೂರೇಶ್ವರನು ಕಳಿಸಿದ ಶರಣನು ತನ್ನತಾನರಿದು ತನ್ನೊಳಗಿನ ಪರಮೇಶ್ವರನನ್ನು ತಿಳಿದುಕೊಂಡು ಯಾರು ನಡೆಯುವವರೋ ಅವರೇ ಪರಮ ಪ್ರಖ್ಯಾತ ಅವಧೂತನೆಂದು ಹೇಳಲಾಗಿದೆ.

ಬಸವಾದಿ ಶರಣನರಾದ ಹಾವಿನಹಾಳ ಕಲ್ಲಯ್ಯ ತನ್ನದೊಂದು ವಚನದಲ್ಲಿ, ಶರಣರು ಲೋಕದಂತೆ ಇರಲಿಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ,
ಸಾಕದೆ ತನ್ನ ಶಿಶುವ ಮನಬುದ್ಧಿಯಿಂದ.
ಇಕ್ಕಿದಡೇನೊ, ದೇವಾ ಪಿಂಡವ ತಂದು
ಮಾನವ ಯೋನಿಯಲ್ಲಿ ಹುಟ್ಟಿದಡೇನೊ ?
ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ.
ಬಾರದೆ ಪಕ್ಷಿಯ ಬಸುರಲ್ಲಿ ಅಶ್ವತ್ಥವೃಕ್ಷವು ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ ಕಾಗೆಗೆ ಪಿಕ ಶಿಶುವೆ ?

ಕೋಗಿಲೆ ತನ್ನ ತತ್ತಿಯನ್ನು ಕಾಗಿಯ ತತ್ತಿಯಲ್ಲಿ ಇಕ್ಕಿ, ತನ್ನ ಮನಬುಧ್ಧಿಯಿಂದ ತನ್ನ ಶಿಶುವನ್ನು ಸಾಕುತ್ತದೆ. ಅಶ್ವತ್ಥ ವೃಕ್ಷವು ತನ್ನ ಜನನ ಪಕ್ಷಿಯ ಬಸುರಿನಲ್ಲಿ ಮೊದಲು ಹೊಂದಿ, ನಂತರ ಭೂಮಿಯ ಸಂಗದಿಂದ ತನ್ನ ಬೆಳವಣಿಗೆಯನ್ನು ಯಾವ ರೀತಿ ಆಗುತ್ತದೆಯೇ ಅದೇ ರೀತಿ ಶರಣನು ಸಹ, ಮಾನವ ಯೋನಿಯಲ್ಲಿ ಹುಟ್ಟಿದರೂ, ನರನ ಬಾಳುವೆ ಅವನದಾಗದು. ಶರಣನು ಅವನ ಪರಿಯೇ ಬೇರೆ ಎಂದು ಹೇಳಿದರು. ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ, ಎಂದು ಹಾವಿನಹಾಳ ಕಲ್ಲಯ್ಯ ತನ್ನ ವಚನದಲ್ಲಿ ಸ್ಪಷ್ಟಪಡಿಸಿದರು.

ಮಡಪತಿ.ವಿ.ವಿ
ಜಹೀರಾಬಾದ್, ತೆಲಂಗಾಣ ರಾಜ್ಯ

Don`t copy text!