ಚಂಪ ಹುಟ್ಟು ಹಬ್ಬದಂದು ಅವರನ್ನು ನೆನೆಯುತ್ತ…

ಚಂಪ ಹುಟ್ಟು ಹಬ್ಬದಂದು ಅವರನ್ನು ನೆನೆಯುತ್ತ…

ಚಂಪಾ ಎಂಬುದು ಒಂದು ಹೆಸರೇ ಎಂಬಂತೆ ಕನ್ನಡ ಜನಮಾನಸದಲ್ಲಿ,ಸಾಹಿತ್ಯದ ವಲಯದಲ್ಲಿ ಜನಜನಿತವಾಗಿರುವುದು ಚಂದ್ರಶೇಖರ ಪಾಟೀಲರ ಹೆಸರು. 1939ರ ಜೂನ್ 18ರಂದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತೀಮತ್ತೂರಲ್ಲಿ ಜನಸಿ ರಾಜ್ಯದ ತುಂಬಾ ಸಾಹಿತಿಯಾಗಿ,ಹೋರಾಟಗಾರರಾಗಿ,ತೀಕ್ಷ್ಣ ವಿಡಂಬನಕಾರರಾಗಿ ಗುರುತಿಸಿಕೊಂಡವರು. ಇಂಗ್ಲಂಡದ ಲೀಡ್ಸ ವಿಶ್ವವಿದ್ಯಾಲಯದಲ್ಲಿ (ಭಾಷಾಶಾಸ್ತ್ರ)ಇಂಗ್ಲೀಷದಲ್ಲಿ ಎಂ.ಎ ಅಧ್ಯಯನ ಮಾಡಿದವರು.ಧಾರವಾಡ ವಿಶ್ವವಿದ್ಯಲಯದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಪ್ರಾಧ್ಯಾಪಕರಾಗಿ ದೀರ್ಘಕಾಲ ಸೇವೆಸಲ್ಲಿಸಿದವರು.

ಇಂಗ್ಲೀಷ್ ಪ್ರಾಧ್ಯಾಪಕರಾದರೂ ಅದರನೆರಳೂ ಬೀಳದಂತೆ ಕನ್ನಡ ಮಾತನಾಡುವ, ಬರೆಯುವ ಚಂಪಾರವರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯ,ನಾಟಕ,ಅಂಕಣಕಾರ,ವಿಮರ್ಶಕರಾಗಿ ಹೆಸರು ಮಾಡಿದವರು.ಸಾಮಾಜಿಕ ರಂಗದಲ್ಲಿ ಹೋರಾಟಗಾರರಾಗಿ ವಿಜೃಂಭಿಸಿದವರು.ಪತ್ರವ್ಯವಹಾರದಲ್ಲಿ ಕನ್ನಡ ಅಂಕಿಗಳನ್ನೇ ಬಳಸುವ ಅಪ್ಪಟ ಕನ್ನಡ ಪ್ರೇಮಿಗಳು.

1985ರಲ್ಲಿ ನಾನು ರಾಯಚೂರು ಎಲ್ ವಿ ಡಿ ಕಾಲೇಜಲ್ಲಿ ಬಿಎಸ್ ಸಿ ವಿದ್ಯಾರ್ಥಿ ಆಗಿದ್ದಾಗ ಸ್ನೇಹಿತರೊಂದಿಗೆ ಇವರ ನಾಟಕ ‘ಕುಂಟ ಕುಂಟ ಕುರವತ್ತಿ’ಯನ್ನು ಮಾಡಿ ಬಯಲು ರಂಗಮಂದಿರದಲ್ಲಿ ಆಡಿದ್ದೆವು.ಇವರ ಒಡನಾಡಿಗಳಾದ ಚೆನ್ನಣ್ಣವಾಲೀಕಾರರು ನನ್ನ ಕನ್ನಡದ ಗುರುಗಳು.

ನನ್ನ ಕವಿತೆಗಳನ್ನು ಗಮನಿಸುತ್ತಿದ್ದ ಇವರು ಮತ್ತು ವೈ ಕೆ ಚಂದ್ರಶೇಖರಪ್ಪನವರು ಪಾಟೀಲರ ‘ಸಂಕ್ರಮಣ’ಪತ್ರಿಕೆಯ ಕಾವ್ಯ ಸ್ಪರ್ಧೆಗೆ ಕಳಿಸಿದರು.ಆ ಸ್ಪರ್ಧೆಯಲ್ಲಿ ನನ್ನ ಕವಿತೆ ಆಯ್ಕೆಯಾಗಿ ಪ್ರಕಟವಾದ ಕಾರಣ ಸಾಹಿತ್ಯಲೋಕದಲ್ಲಿ ಕೆಲವರಿಗೆ ಪರಿಚಯವಾದೆ.ಸಂಕ್ರಮಣದಲ್ಲಿ ಕವಿತೆ ಓದಿ ನನ್ನನ್ನು ಕರೆಸಿಕೊಂಡ ಶಾಂತರಸರು ನನ್ನನ್ನು ಅತ್ಯಂತ ಪ್ರೇಮದಿಂದ ಕಂಡವರು.ಚಂಪಾ ಶಾಂತರಸರಿಗೆ ತುಂಬಾ ಆತ್ಮೀಯರು,ಇಬ್ಬರೂ ರಾಯಚೂರಿನ ಗಜಲ್ ಗುಂಡಮ್ಮನವರನ್ನು ಅಭಿಮಾನದಿಂದ ಕಂಡು ಸಾರಸ್ವತ ಲೋಕಕ್ಕೆ ಪರಿಚಯಿಸಿದವರು.

ಮುಂದೆ ಚಂಪಾ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾದಾಗ ಶಾಂತರಸರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಸಂತೋಷಪಟ್ಟವರು. ಬಂಡಾಯ ಸಂಘಟನೆಯ ಮುಂಚೂಣಿಯಲ್ಲಿದ್ದ ಚಂಪಾ ನನ್ನನ್ನು ಸೇರಿ ಅನೇಕ ಕವಿಗಳನ್ನು,ಬರಹಗಾರರನ್ನು,ಸಂಘಟಕರನ್ನು ಸಾಹಿತ್ಯದ ಗರಡಿಯಲ್ಲಿ ಬೆಸೆದವರು.ಧಾರವಾಡದಲ್ಲಿ ಜರುಗಿದ ಬಂಡಾಯಸಾಹಿತ್ಯ ಸಮ್ಮೇಳನಕ್ಕೆ ಕರೆಸಿಕೊಂಡು,ಗಾಣದಾಳದ ಸಮ್ಮೇಳನದಲ್ಲಿ ಕವಿತೆ ಓದಲು ಅವಕಾಶಕೊಟ್ಟವರು.’ ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ಎಂಬುದನ್ನು ಮನಗಾಣಿಸಿದವರು. ಅಂದಿನಿಂದ ಸಂಕ್ರಮಣ ಪತ್ರಿಕೆ ಚಂದಾದಾರನಾದ ನನಗೆ ಸಮ್ಮೇಳನಗಳಲ್ಲಿ ಕಂಡಾಗ ಚಂದಾಹಣ ಬಾಕಿಯಿದ್ದರೆ ಕೇಳಲು ಮರೆಯುತ್ತಿದ್ದಿಲ್ಲ.ಪುಸ್ತಕಗಳನ್ನು ಬಗಲುಚೀಲದಲ್ಲಿ ತುಂಬಿ,ಕೆಲವನ್ನು ಕೈಯಲ್ಲಿಹಿಡಿದು ಮಾರಾಟಮಾಡುತ್ತಿದ್ದ ‘ಚಂಪಾ’ ನಮ್ಮ ಕಣ್ಣಲ್ಲಿ ಮೂರ್ತಿಯಾಗಿ ನಿಂತಿದ್ದಾರೆ.

ಸಂಕ್ರಮಣ ಮುದ್ರಣದ ಸಂಕಷ್ಟಗಳು ಅವರಿಗೇ ಗೊತ್ತು.ತಡವಾಗಿ ಮುದ್ರಣಗೊಂಡರೂ ಕಳಿಸುತ್ತಿದ್ದರು.ಸಂಕ್ರಮಣದ ಎಲ್ಲ ಸಂಚಿಕೆಗಳನ್ನು ಸೇರಿಸಿ ಸಂಪುಟ ರೂಪದಲ್ಲಿ ಪ್ರಕಟಿಸಿದಾಗ ಬೆಂಗಳೂರಲ್ಲಿ ಚಂಪಾ,ಗಿರಡ್ಡಿ ಗೋವಿಂದರಾಜ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿಯವರನ್ನು ಒಟ್ಟಿಗೆ ಕಂಡು ಖುಷಿಪಟ್ಟವರು ಅವರು ಕೂಡಿ ಕೂತಾಗ ಭಾವಚಿತ್ರ ತೆಗೆದವರು ಅನೇಕ.ಏಕೆಂದರೆ ಸಂಕ್ರಮಣ ಹುಟ್ಟಿದ್ದೇ ಈ ಮುವರಿಂದ.

ಅಖಿಲಭಾರತಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ,ಪರಿಷತ್ ಅಧ್ಯಕ್ಷರಾಗಿ,ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ,ಕನ್ನಡಕ್ಕೆ ತಕ್ಕ ಸೇವೆ ಕೊಟ್ಟವರು. ಜ್ಞಾನಪೀಠಿಗಳಾದ ಬೇಂದ್ರೆ,ಕಾರಂತರನ್ನೂ ತಮ್ಮ ಶೈಲಿಯಲ್ಲೇ ಟೀಕಿಸುವ ಚಂಪಾ ಬಂಡಾಯದ ಚೆನ್ನಣ್ಣನವರನ್ನೂ ಕಾವ್ಯದಲ್ಲಿಯೇ ವ್ಯಂಗ್ಯಮಾಡುವವರು. ದೇಶದ ತುರ್ತು ಪರಿಸ್ಥಿತಿ ಸಕ್ರಿಯರಾಗಿ ಜೈಲು ಸೇರದವರು,ಗೋಕಾಕ ಚಳುವಳಿಯಲ್ಲಿ ಗಟ್ಟಿಗರಾಗಿನಿಂತವರು.ಅಕಾಡೆಮಿ,ಪಂಪ ಮೊದಲಾಗಿ ಅನೇಕ ಪ್ರಶಸ್ತಿಗಳನ್ನು ಪಡೆದು ಸದಾ ಕನ್ನಡದ ಧ್ವನಿಯಾದ ಅವರ ಜನಪ್ರಿಯ ಸಾಲುಗಳು. ..ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ. ಅವರ ಹುಟ್ಟು ಹಬ್ಬಕ್ಕೆ ಈ ಕೆಲ ಮಾತುಗಳಿಂದ ಶುಭಾಶಯಗಳು.

ಮಹಾಂತೇಶ ಮಸ್ಕಿ

Don`t copy text!