ಅಪ್ಪ ತಾಯಿಯಾಗಬಹುದೇನೋ..
ಎಂದೂ ಕಣ್ಣಂಚು ಒದ್ದೆ ಮಾಡದ
ಅಪ್ಪ ಕಲ್ಲು ಬಂಡೆಯಾಗಿರಬಹುದೇನೋ..
ಸ್ವಾಭಿಮಾನಕ್ಕೊ, ಒಳಗೊಳಗೆ ನೊಂದಿದ್ದಕ್ಕೊ ಏನೋ
ಅಪ್ಪನ ಕಣ್ಣ ಸೆಲೆ ಬತ್ತಿರಬಹುದೇನೋ..
ನಾಳೆಯ ನಮ್ಮ ನೆಮ್ಮದಿಗಾಗಿ ಅಪ್ಪ
ನಿದ್ದೆ ಮಾಡಲಿಲ್ಲವೇನೋ
ಎದೆಮೇಲೆ ಮಲಗಿಸಿಕೊಂಡ ಅಪ್ಪ
ಎದೆಯಾಳ ತೋರಿಸಲಿಲ್ಲವೇನೋ..
ಹೆಗಲಮೇಲೆ ಹೊತ್ತು ಎತ್ತರಕ್ಕೆರಿಸುವುದು
ಕಡುಕೋಪದಲೂ ಪ್ರೀತಿ ತೋರಿಸುವುದು
ಅವ್ವನಿಗೂ ಅವ್ವನಾಗುವುದು
ಅಪ್ಪನೊಬ್ಬನಿಗೆ ಸಾಧ್ಯವಾಗುವುದೆನೋ..
ಸಿರಿಯಿಲ್ಲದಿದ್ದರೂ ಸಾಲ’ದಂತೆ ಸಾಕುವುದು ತಾ
-ನೊಂದೆ ಬಟ್ಟೆಯೊಂದುಟ್ಟು ಬಣ್ಣದಂಗಿಯ ಉಡಿಸುವವ
ನೂರು ಕಷ್ಟ ಎದೆಯಲಿಟ್ಟು ಮಕ್ಕಳ ನೋಡಿ
ನಗುವವ ಅಪ್ಪನೊಬ್ಬನೇನೋ..
ಅಕ್ಷರ ಕಲಿಸಿದವ, ಅನ್ನವನ್ನಿಕ್ಕಿದವ
ಎಲ್ಲೋ ಬೇಡಿ ತಂದು ನಮ್ಮೆದುರು ಸುರಿದವ
ಕಲಿತನದ ಹಿರಿತನದ ಕತೆ ಹೇಳಿ
ತಾನೆ ಧೈರ್ಯ ತಂದುಕೊಳ್ಳುವವ ಅಪ್ಪನೊಬ್ಬನೇನೋ..
ಕೈ ಹಿಡಿದು ನಡೆಯುವುದ ಕಲಿಸಿ
ಜಗವೆಲ್ಲವ ತಿಳಿಸಿ, ತನ್ನದೆಲ್ಲವ ಒಡಲ ಕುಡಿಗಳಿಗಿರಿಸಿ,
ತಾ ಖಾಲಿಯಾಗಿ ಹೋಗುವವ ಅಪ್ಪನೊಬ್ಬನೇನೋ..
ಒಡದ ಹಿಮ್ಮಡಿಗಳು ಬಾಯ್ಬಿಟ್ಟು ಹೇಳುವುದಿಲ್ಲ
ಅಪ್ಪ ಹೊತ್ತಿದ್ದ ಭಾರ’ದ ಕತೆಯನು
ಅಂಗೈಯಲ್ಲಿನ ಬಿರುಸು ಹೇಳುವುದಿಲ್ಲ
ಅಪ್ಪ ಮುಚ್ಚಿಟ್ಟ ಕತೆಯನು..
ಅವ್ವ ದೈವವಿರಬಹುದೇನೋ
ತನ್ನೊಡನೆ ಜೀವ ಹಂಚಿಕೊಂಡವಳಿಗೆ
ಅಪ್ಪ ದೇವನಾಗಿರಬಹುದೇನೋ..
– ಸೂಗೂರೇಶ ಹಿರೇಮಠ.