ಮಣ್ಣೆತ್ತಿನಾಮಾವಾಸ್ಯೆ

ಮಣ್ಣೆತ್ತಿನಾಮಾವಾಸ್ಯೆ

 

ಬಸವಕ್ಕ ಬಸವೆನ್ನಿರೆ
ಬಸವನ ಪಾದಕ ಶರಣೆನ್ನಿರೆ”
ಎನ್ನುವ ಜನಪದರ ಈ ಹಾಡನ್ನು ಕೇಳಿದರೆ ನಮಗೆ ಅರ್ಥವಾಗುತ್ತದೆ ಬಸವಣ್ಣ ಅಂದರೆ ರೈತನ ಮಿತ್ರ, ಎತ್ತುಗ ಳು ರೈತನ ಅನ್ನದಾತ ಸಂಗಾತಿಗಳು ಹಾಗೂ ಹೊಲದಲ್ಲಿ ರೈತನ ಜೊತೆ ದುಡಿಯುವ ಆತನಿಗೆ ಆಸರೆಯಾಗಿರುವ ಅವುಗಳನ್ನು ದೇವರೆಂದು ಪೂಜಿಸುತ್ತಾನೆ ರೈತ.

ಕೃಷಿ ಪ್ರಧಾನವಾಗಿರುವ ನಮ್ಮ ನಾಡಿನಲ್ಲಿ ಮಳೆ ಆರಂಭವಾದರೆ ಹಬ್ಬಗಳು ಆರಂಭವಾದಂತೆ. ಮುಂಗಾರು ಬಿತ್ತನೆ ಮುಗಿಸಿ ರೈತರು ಹಬ್ಬಗಳ ಆಚರಣೆ ಪ್ರಾರಂಭಿಸುವರು. ಕಾರಹು ಣ್ಣಿಮೆಯಂದು ಎತ್ತುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ, ಕರಿ ಹರಿದು ಆಚರಿಸುವ ರೈತರು ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಗೆ ಹೊಲಗಳಲ್ಲಿ ತಮ್ಮ ದುಡಿಮೆಯ ಸಂಗಾತಿ ಆಗಿರುವ ಎತ್ತುಗಳನ್ನು ಗೌರವಿಸಿ ಪೂಜಿಸುವ ಪ್ರತೀಕವಾಗಿ ಹಾಗೂ ಮಣ್ಣುಎಂದರೆ ನಮಗೆ ಅನ್ನ ಕೊಡುವ ಭೂಮಿತಾಯಿಯ ಪ್ರತೀಕ ಹೀಗಾಗಿ ರೈತರು ಮಣ್ಣಿಂದ ಮಾಡಿದ ಎತ್ತುಗಳನ್ನು ಬಸವಣ್ಣ ಎಂದು ಪೂಜಿಸುತ್ತಾರೆ. ಅಲ್ಲದೆ ಮನೆಯಲ್ಲಿರುವ ಎತ್ತುಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಅವುಗಳಿಗೆ ಆ ದಿನ ವಿಶ್ರಾಂತಿ ನೀಡಿ ಗೌರವಿಸುತ್ತಾರೆ.

ಮಣ್ಣಿಂದ ಕಾಯ ಮಣ್ಣಿಂದ” ಎನ್ನುವಂತೆ ವರ್ಷದಲ್ಲಿ ಐದು ಬಾರಿ ಮಣ್ಣನ್ನು ಪೂಜೆ ಮಾಡಬೇಕೆಂದು ಶಾಸ್ತ್ರದಲ್ಲಿ ತಿಳಿಸಿದೆ. ಅದರಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯೂ ಒಂದು.

ಕಾರಹುಣ್ಣಿಮೆ ಮುಗಿದು ಬರುವ ಅಮಾವಾಸ್ಯೆಯೇ ಮಣ್ಣೆತ್ತಿನ ಅಮಾವಾಸ್ಯೆ. ಈ ಹಬ್ಬದ ಆಚರಣೆಯನ್ನು ನಗರಗಳಿಗಿಂತಲೂ ಹಳ್ಳಿಗಳಲ್ಲಿಯೇ ತುಂಬಾ ಸಡಗರ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಆ ದಿನ ಮನೆಗಳನ್ನು ಸುಣ್ಣ ಬಣ್ಣಗಳಿಂದ ಸಾರಿಸಿ, ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಿ ಹೊಲದಿಂದ ಮಣ್ಣು ತಂದು ಸುಂದರವಾದ ಜೋಡಿ ಎತ್ತುಗಳನ್ನು ಭೂಮಿಯನ್ನು ಉಳುವ ಸಂಕೇತವಾಗಿ ತಯಾರಿಸುತ್ತಾರೆ. ಹಾಗೆಯೇ ಗ್ವಾದಲಿ(ಗೋದಲಿ)ಯನ್ನು ಮಾಡಿ ಆ ಮಣ್ಣೆತ್ತುಗಳ ಕೋಡುಗಳನ್ನು ಸಿಂಗರಿಸಿ ಹೂಗಳಿಂದ ಅಲಂಕರಿಸುತ್ತಾರೆ. ಇಲ್ಲವೇ ಕುಂಬಾರರ ಮನೆಗಳಿಂದಲೂ ಜೋಡೆತ್ತುಗಳನ್ನು ಖರೀದಿಸಿ ತರುತ್ತಾರೆ.ಕುಂಬಾರರು ಎತ್ತುಗಳ ಜೊತೆ ಹಿಡಿ ಜೇಡಿಮಣ್ಣು ಕೊಡುವುದು ವಾಡಿಕೆ. ಅದನ್ನು ಕೂಡ ಅವುಗಳ ಜೊತೆ ಜಗಲಿ ಮೇಲೆ ಇಟ್ಟು ,ಸಿಹಿ ಅಡುಗೆ ಮಾಡಿ ನೈವೇದ್ಯ ಅರ್ಪಿಸಿ ಪೂಜೆ ಮಾಡುತ್ತಾರೆ.

ನಗರಗಳಲ್ಲಿ ಜನ ಮಣ್ಣೆತ್ತುಗಳನ್ನು ಕುಂಬಾರರಿಂದ ಖರೀದಿಸಿ ಪೂಜಿಸುವರು. ಕುಂಬಾರರು ಎಂಟು ಹತ್ತು ದಿನ ಮುಂಚಿತವಾಗಿ ಮಣ್ಣೆತ್ತುಗಳನ್ನು ತಯಾರಿಸಿ ಇಟ್ಟುಕೊಂಡಿರುತ್ತಾರೆ. ಅವುಗಳ ಗಾತ್ರ, ಅಲಂಕಾರಕ್ಕೆ ತಕ್ಕಂತೆ ದರ ನಿಗದಿ ಮಾಡಿ ಮಾರುತ್ತಾರೆ. ಈ ಕೆಲವು ಸಂದರ್ಭಗಳೇ ಕುಂಬಾರರ ಜೀವನೋಪಾಯಕ್ಕೆ ದಾರಿ ಎನ್ನಬಹುದು.

ಮರುದಿನ ಪಾಡ್ಯ. ಆ ದಿನ ಕೂಡ ಮಣ್ಣೆತ್ತುಗಳನ್ನು ಪೂಜಿಸಿ ಹೊಲ ಇದ್ದವರು, ನಾಗರ ಪಂಚಮಿವರೆಗೂ ದಿನವೂ ಪೂಜಿಸಿ ಕೆರೆಕಟ್ಟಂಬಲಿ ಅಂತ ಮಾಡಿ ಪಂಚಮಿಯ ನಂತರ ಅಂಬಲಿ ಮಾಡಿಕೊಂಡು ಹೊಲಗಳಿಗೆ ತೆಗೆದುಕೊಂಡು ಹೋಗಿ ಇಡುತ್ತಾರೆ. ಅಂದರೆ ಮಳೆಯಿಂದ ಬಿತ್ತಿದ ಫಸಲು ಚನ್ನಾಗಿ ಬರಲಿ, ತಮ್ಮ ದನಕರುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದು ಸ್ಮರಿಸುತ್ತಾರೆ.

ಇನ್ನು ಕೆಲವು ಕಡೆ ಮರುದಿನ ಮಕ್ಕಳು ಮಣ್ಣೆತ್ತುಗಳನ್ನು ತೆಗೆದುಕೊಂಡು ಒಂದು ಎತ್ತಿನ ಕಾಲು ಮುರಿದು ಒಂದು ತಟ್ಟೆಯಲ್ಲಿ ಇಟ್ಟು “ಎಂಟೆತ್ತಿನ್ಯಾಗ ಒಂದು ಕುಂಟೆತ್ತು ಬಂದೈತಿ,ಜ್ವಾಳಾ ನೀಡರಿ” ಎಂದು ಮನಮನೆಗೂ ತಿರುಗಿ ಅವರು ನೀಡುವ ಜೋಳ, ಗೋದಿ ಸಜ್ಜೆ, ಅಕ್ಕಿ, ಹಣ ತೆಗೆದುಕೊಂಡು ಅಂಗಡಿಗೆ ಹೋಗಿ ಪಂಚಫಳಾರ ಎಂದು ಹಣ್ಣು, ಕಾಯಿ, ಕರ್ಪೂರ, ಊದುಬತ್ತಿ ತೆಗೆದುಕೊಂಡು ಊರ ಹೊರಗೆ ಕರೆ, ಬಾವಿಗೆ ಹೋಗಿ ಪೂಜಿಸಿಮಣ್ಣೆತ್ತುಗಳ ನ್ನು ಬಿಟ್ಟು ಬರುವರು.

ಹಿಂದಿನಷ್ಟು ಈಗ ಎಲ್ಲಿಯೂ ಹಬ್ಬಗಳ ಸಂಭ್ರಮ ಇಲ್ಲ. ಮಣ್ಣೆತ್ತುಗಳನ್ನು ತಂದು ಪೂಜಿಸಿದರೆ ಮುಗಿಯಿತು ಹಬ್ಬ. ರೈತರಲ್ಲೂ ಸಂಭ್ರಮ ಕಡಿಮೆಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬೀಳದೆ ಇರುವುದರಿಂದ ಅವರೂ ಚಿಂತೆ ಮಾಡುವಂತಾಗಿದೆ. ಬತ್ತಿರುವ ಬೀಜಗಳಾದ್ರೂ ಮೊಳಕೆ ಒಡೆದು ಬೆಳೆ ಚೆನ್ನಾಗಿ ಬಂದರೆ ಸಾಕು ಎಂದುಪ್ರಾರ್ಥಿಸುವರು.

ಇನ್ನು ಆ ದಿನ ಈ ಹಬ್ಬದ ಮಹತ್ವ ನಗರದ ಮಕ್ಕಳಲ್ಲೂ ಇದರ ಬಗ್ಗೆ ಮಾಹಿತಿ,ಅರಿವು ಮೂಡಿಸುವ ಅಂಗವಾಗಿ ಕೆಲವು ಶಾಲೆಗಳಲ್ಲಿ ಮಕ್ಕಳಿಂದ ಸ್ಥಳದಲ್ಲೇ ಮಣ್ಣೆತ್ತುಗಳನ್ನು ತಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಮಾಧಾನದ ವಿಷಯ ಎನ್ನಬಹುದು.

ಕರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಮುಂಬರುವ ನಮ್ಮ ಮಣ್ಣೆತ್ತಿನ ಅಮಾವಾಸ್ಯೆ ನಮಗೂ ರೈತರಿಗೂ ಶುಭದಾಯಕವಾಗಲಿ. ಕರೋನಾದ ಅಟ್ಟಹಾಸ ಕಡಿಮೆಯಾಗಲಿ. ಸಂಭ್ರಮದಿಂದ ಮಣ್ಣೆತ್ತುಗಳನ್ನು ಪೂಜಿಸುವ ಸೌಭಾಗ್ಯ ಸಿಗಲಿ, ಈ ಹಬ್ಬದ ಆಚರಣೆಯ ಉದ್ದೇಶ ,ಮಳೆಗಾಲದ ಚನ್ನಾಗಿ ಆಗಿ ರೈತರಿಗೆ ಸಂತಸ ತರಲಿ, ಹೊಸ ಪೀಳಿಗೆಯ ಮಕ್ಕಳಿಗೂ ಈ ಹಬ್ಬದ ಪರಿಕಲ್ಪನೆ ಮೂಡಲಿ ಎಂದು ಆಶಿಸೋಣ.
ಜೈ ಭುವನೇಶ್ವರಿ.

ಶೈಲಜಾ ಹಿರೇಮಠ. ಗದಗ

Don`t copy text!