ಕಾಯಕದಲ್ಲೇ ಕೈಲಾಸ ಕಂಡ ‘ಕುಂಬಾರ ಗುಂಡಯ್ಯ’

ಕಾಯಕದಲ್ಲೇ ಕೈಲಾಸ ಕಂಡ ‘ಕುಂಬಾರ ಗುಂಡಯ್ಯ’

12ನೇ ಶತಮಾನ ಎಂದರೆ ನಮಗೆ ಥಟ್ಟನೆ ನೆನಪಿಗೆ ಬರುವುದು ವಚನ ಚಳುವಳಿ, ಅಸಂಖ್ಯಾತ ಶರಣರು, ಕಾಯಕ ಮತ್ತು ದಾಸೋಹ ಸಿದ್ಧಾಂತ, ಸಮ-ಸಮಾಜ ಪರಿಕಲ್ಪನೆ ಹಾಗೂ ವೈಚಾರಿಕತೆ ಸಹಿತವಾದ ಲಿಂಗಾಯತ ಧರ್ಮ. ಹಾಗೆಯೇ ಮಾನವ ಬದುಕಿಗೆ ಘನತೆಯನ್ನು ತಂದುಕೊಟ್ಟ ಶತಮಾನ ಎಂದರೆ ಅದು ಹನ್ನೆರಡನೇ ಶತಮಾನ ಎಂದು ಹೇಳಿದರೂ ತಪ್ಪಾಗಲಾರದು.

ಬಸವ ಪೂರ್ವ ಕಾಲದಲ್ಲಿ ಅಸಮಾನತೆ, ಜಾತಿ ತಾರತಮ್ಯ, ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಅನ್ಯಾಯ ಸೇರಿದಂತೆ ಹಲವು ಶೋಷಣೆಗಳು ವಿಜೃಂಭಿಸುತ್ತಿದ್ದವು. ಈ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಆಳವಾಗಿ ಬೇರೂರಿದ ಕಾರಣ ತಳವರ್ಗ ಸಮುದಾಯದವರ ಬದುಕು ದುರ್ಬರವಾಗಿತ್ತು. ಇಂಥ ವಿಷಮ ಪರಿಸ್ಥಿತಿಯ ಆತಂಕದ ಕತ್ತಲಲ್ಲಿ ಬಸವಣ್ಣನವರ ನೇತ್ರತ್ವದ ಶರಣ ಸಂಕುಲ ಕಲ್ಯಾಣ ಅಂಗಳದಲ್ಲಿ ಅಕಾಶ ದೀಪವಾಗಿ ಬೆಳಕು ಹರಿಸಿತು.

ಅನುಭವ ಮಂಟಪ’ ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯ ವೇದಿಕೆಯ ಮುಖಾಂತರ ಅರಿವಿನ ಜ್ಞಾನ ಎಲ್ಲೆಡೆ ಹರಡಿತ್ತು. ಮಾನವನ ಗೌರವ, ಘನತೆಯ ಬದುಕಿಗೆ ಅವಶ್ಯವಾದ ಮಾನವೀಯ ಮೌಲ್ಯಗಳ ಚಿಂತನೆ ಕುರಿತು ವಿಸ್ತಾರವಾದ ಸಂವಾದಗಳು ನಡೆಯುತ್ತಿದ್ದವು. ಶರಣರ ಅನುಭವಗಳು ಅನುಭಾವಗಳಾಗಿ ರೂಪಾಂತರಗೊಂಡು ಮುಂದೆ ವಚನಗಳಾಗಿ ಮಾರ್ಪಟ್ಟು ‘ವಚನ ಸಾಹಿತ್ಯ’ವಾಗಿ ದಾಖಲಾಯಿತು. ಆದರೆ ವಚನಕಾರರು ಬರೀ ಧರ್ಮ ಸ್ಥಾಪಿಸಲು ಮಾತ್ರ ಪ್ರಯತ್ನ ಮಾಡಲಿಲ್ಲ. ಅದಷ್ಟೇ ಅವರ ಉದ್ದೇಶವೂ ಆಗಿರಲಿಲ್ಲ. ಸಮಾನತೆ ಧರ್ಮದ ಸ್ಥಾಪಿಸುವ ಜೊತೆಗೆ ಕಾಯಕ ಪರಿಕಲ್ಪನೆ ಮೂಡಿಸುವ ಮೂಲಕ ವಚನಾನುಭವ ಉಣಬಡಿಸಲು ಮುಂದಾಗಿದ್ದರು. ಹೀಗಾಗಿ ಶರಣರು ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಜೊತೆಗೆ ದೈಹಿಕವಾಗಿ ಕಾರ್ಯ ನಿರ್ವಹಿಸಲು ಪ್ರಯತ್ನಪಟ್ಟಿದ್ದಾರೆ. ಶರಣರು ಶ್ರಮಜೀವಿಗಳಾಗಿ ನೆಲ ಸಂಸ್ಕೃತಿಯನ್ನು ಉಳಿಸಿದವರು.

ಜಾತಿರಹಿತ, ವರ್ಗರಹಿತ, ವರ್ಣರಹಿತವಾದ ಸರ್ವಸಮಾನತೆ ಸಮಾಜ ಕಟ್ಟಲು ಶರಣರು ಅವಿರತವಾಗಿ ಶ್ರಮಿಸಿದರು. ವಿವಿಧ ಸ್ತರಗಳಿಂದ ಬಂದ ಎಲ್ಲಾ ಶರಣರು ತಮ್ಮ ತಮ್ಮ ವೃತ್ತಿಯನ್ನೇ ಅವಲಂಬಿಸಿ ಬದುಕಿದರು. ಭಕ್ತಿ, ಶ್ರದ್ಧೆಯಿಂದ ಮಾಡುವ ಕಾಯಕವನ್ನು ಅತಿಯಾಗಿ ಪ್ರೀತಿಸಿ ಹೆಮ್ಮೆ ಪಡುತ್ತಿದರು. ಅಷ್ಟೇ ಅಲ್ಲದೆ ಅದನ್ನು ತಮ್ಮ ಬದುಕಿನ ಭಾಗವಾಗಿ ಅರಿತುಕೊಂಡು ಕಾಯಕದಲ್ಲಿಯೇ ದೇವರನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ದೃಢವಾದ ಭಕ್ತಿ ಮತ್ತು ಕಾಯಕ ನಿಷ್ಠೆ ಅವರನ್ನು ದಾಸೋಹ ಭಾವನೆಗೆ ಪ್ರೇರಣೆಯಾಗಿತ್ತು. ಅಂತ ಅನೇಕ ಶಿವಶರಣರಲ್ಲಿ ಕುಂಬಾರ ಗುಂಡಯ್ಯ ಎನ್ನುವ ಕಾಯಕ ಶರಣ ಕೂಡ ಒಬ್ಬರಾಗಿದ್ದರು.

ಕುಂಬಾರ ಗುಂಡಯ್ಯನವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದವರು. ಈಗ ತಾಲೂಕು ಕೇಂದ್ರವಾಗಿರುವ ಭಾಲ್ಕಿಯ ಕಿಲ್ಲಾದ ಒಳಗಡೆ ಕುಂಬಾರ ಗಲ್ಲಿಯಲ್ಲಿ ಶರಣ ಗುಂಡಯ್ಯನವರ ಸ್ಮಾರಕವಿದೆ. ಅದಕ್ಕೆ ‘ಕುಂಬೇಶ್ವರ ದೇವಾಲಯ’ ಎಂದು ಕರೆಯುತ್ತಾರೆ. ಪ್ರಾಚೀನವಾದ ದೇವಾಲಯದ ಒಳಗಡೆ ಬೃಹತ್ ಶಿವಲಿಂಗವಿದೆ, ದೇವಾಲಯದ ಹಿಂಭಾಗದಲ್ಲಿ ಗುಂಡಯ್ಯನವರ ಸಮಾಧಿ ಇದೆ. ಕುಂಬಾರ ಗುಂಡಯ್ಯ ದೇವಾಲಯ ಎಂದು ಹೆಸರಿಗಷ್ಟೇ ಕರೆದರೂ ಈಗ ಅಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಿ ವೈದಿಕ ಸಂಸ್ಕೃತಿಯ ಆಚರಣೆಗಳು ಜರುಗುತ್ತಿವೆ. ಬಸವಾದಿ ಶರಣರ ತತ್ವ ಚಿಂತನೆಯನ್ನು ಮೈಗೂಡಿಸಿಕೊಂಡು ಸತ್ಯ, ನಿಷ್ಠೆಯಿಂದ ಬದುಕಿದ ಕಾಯಕಯೋಗಿ ಶರಣ ಗುಂಡಯ್ಯನವರ ಸ್ಮಾರಕ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸುಂದರವಾದ ‘ಶರಣರ ಸ್ಮಾರಕ’ವಾಗಿ ಅಭಿವೃದ್ಧಿಪಡಿಸುವಂತೆ ಸ್ಥಳೀಯರ ಹಕ್ಕೊತ್ತಾಯವಾಗಿದೆ.

ಶರಣ ಕುಂಬಾರ ಗುಂಡಯ್ಯನವರು ಮಣ್ಣಿನ ಮಡಿಕೆ ತಯಾರಿಸಲು ಮಣ್ಣನ್ನು ಹದಗೊಳಿಸುವುದು ಅವಶ್ಯವಾಗಿತ್ತು. ಮಣ್ಣಿನಿಂದ ತಯಾರಿಸಿದ ಹಸಿಯ ಮಡಿಕೆಗಳಿಗೆ ರೂಪ ಬರುವಂತೆ ಕೈಯಿಂದ ತಟ್ಟುವುದು, ನಂತರ ಆವಿಗೆಯಲ್ಲಿ ಸುಡುವುದು…. ಹೀಗೆ ಮಡಿಕೆ, ಕುಡಿಕೆ ಸೇರಿದಂತೆ ಅನೇಕ ಬಗೆಯ ಮಣ್ಣಿನ ಕಲಾಕೃತಿಗಳನ್ನು ಸಿದ್ಧಪಡಿಸುವ ಗುಂಡಯ್ಯನವರ ಕಾಯಕ ದೈಹಿಕ ಶ್ರಮಕ್ಕೆ ಸಾಕ್ಷಿಯಾಗಿತ್ತು. ಇದು ಎಲ್ಲರಿಗೂ ದಕ್ಕುವ ಕಲೆಯಲ್ಲ, ಇದಕ್ಕೆ ಶ್ರದ್ಧೆ ಭಕ್ತಿ ಹಾಗೂ ಏಕಾಗ್ರತೆ ಬೇಕು. ಅದನ್ನು ಗುಂಡಯ್ಯವವರಿಗೆ ಕರಗತವಾಗಿತ್ತು. ದೈಹಿಕ ಶ್ರಮದ ಜೊತೆಗೆ ಮಾನಸಿಕ ಮಿಲನವೂ ಅಗತ್ಯ. ಎರಡೂ ಒಗ್ಗೂಡಿದಾಗ ದೇಹದ ದಣಿವು ದೂರವಾಗಿ ಮನಸ್ಸು ಮತ್ತಷ್ಟು ಉಲ್ಲಾಸಗೊಳ್ಳುತ್ತದೆ.

ಗುಂಡಯ್ಯನವರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟಿದವರು. ಮಣ್ಣಿನ ಮಡಿಕೆಗಳು ತಯಾರಿಸಿ ಅವುಗಳನ್ನು ಸರಿಯಾಗಿ ಸುಟ್ಟು ಹೆಚ್ಚು ದಿನಗಳ ಕಾಲ ಬಳಕೆಗೆ ಬರುವ ಹಾಗೇ ಸಮಾಜದ ಅನಿಷ್ಟತೆ, ದುರ್ಜನರ ದುರ್ಗುಣ, ಅಜ್ಞಾನ, ಅಂಧಕಾರ ಸುಟ್ಟು ಜ್ಞಾನದ ಜ್ಯೋತಿ ಬೆಳಗಿಸಲು ಮೌನವಾದ ಹೋರಾಟ ನಡೆಸಿದರು. ಅವರೊಬ್ಬ ಅನುಭಾವಿ ಶರಣಾಗಿದ್ದರು. ಅವರ ಬದುಕು ಇಡೀ ಶರಣ ಸಂಕುಲಕ್ಕೆ ಮಾದರಿಯಾಗಿತ್ತು. ಅವರಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಅವರ ಧರ್ಮಪತ್ನಿ ಕೇತಲಾದೇವಿಯವರು ಕೂಡ ಅದ್ಭುತ ವಚನಕಾರ್ತಿಯಾಗಿದ್ದರು. ಕುಂಬಾರ ಗುಂಡಯ್ಯ ಶರಣ ದಂಪತಿಗಳು “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎನ್ನುವ ನೆಲೆಯಲ್ಲಿ ಸಾಮರಸ್ಯದ ಬದುಕು ಅವರದ್ದಾಗಿತ್ತು. ಅವರು ವೈಯಕ್ತಿಕ ಬದುಕಿಗಾಗಿ ಹೆಚ್ಚು ಸಂಘರ್ಷ ಮಾಡಲಿಲ್ಲ. ಆರೋಗ್ಯವಂತ ಸಮಾಜ ರೂಪಿಸುವ ಉದಾತ್ತ ಚಿಂತನೆ ಅವರದಾಗಿತ್ತು. ಅದಕ್ಕಾಗಿಯೇ ಅವರು ಬದುಕಿನುದ್ದಕ್ಕೂ ದೇಹ ದಂಡಿಸಿದರು.

ಕುಂಬಾರ ಗುಂಡಯ್ಯನವರು ಒಬ್ಬ ಅನುಭಾವಿ ಶರಣ, ವೈಚಾರಿಕ ಚಿಂತಕ, ಕಾಯಕವನ್ನೇ ಹೊದ್ದುಕೊಂಡು ಭಕ್ತಿ ಭಾವ ತೋರಿದವರು. ಅವರೂ ವಚನಗಳು ರಚಿಸಿರಬಹುದು. ಆದರೆ ಇಲ್ಲಿಯವರೆಗೆ ಗುಂಡಯ್ಯನವರ ಯಾವುದೇ ವಚನಗಳು ನಮಗೆ ಲಭ್ಯವಾಗಿ ದೊರಕಲಿಲ್ಲ. ಆದರೆ ಅವರ ಪುಣ್ಯಸ್ತ್ರೀ ಕೇತಲದೇವಿಯವರು ರಚಿಸಿದ ಎರಡು ವಚನಗಳು ಮಾತ್ರ ಇಂದು ಲಭ್ಯವಾಗಿವೆ. ಗುಂಡಯ್ಯನವರ ವಚನಗಳು ಇಂದು ದೊರಕದೆ ಇರಬಹುದು, ಆದರೆ ಗುಂಡಯ್ಯನವರ ಕಾಯಕ ಮತ್ತು ಜೀವನ ಪ್ರೀತಿ ಇಂದಿನ ಸಮಾಜಕ್ಕೆ ಆದರ್ಶಮಯವಾಗಿದೆ.

ಕುಂಬಾರ ಗುಂಡಯ್ಯನವರ ಬಗ್ಗೆ ಹರಿಹರ ಕವಿಯು ರಗಳೆಯಲ್ಲಿ ವಿಶಿಷ್ಟ ದೃಷ್ಟಿಯಲ್ಲಿ ಹಿಡಿದಿಟ್ಟಿದ್ದಾನೆ. ಗುಂಡಯ್ಯನವರ ಅಪಾರವಾದ ಕಾಯಕ ಭಕ್ತಿ, ಹಾಡು, ಕುಣಿತ ಎಲ್ಲರನ್ನೂ ತಲೆದೂಗಿಸುವಂತೆ ಮಾಡುತ್ತಿತ್ತು.

ಬಂದುದನರಿಯದೆ ಹೋದುದನರಿಯದೆ
ನಿಂದರನರಿಯದೆ ನೆರೆದರನರಿಯದೆ
ಮಾಟವನರಿಯದೆ ನಿದ್ರೆಯನರಿಯದೆ ನೋಟವನರಿಯದೆ ನೆನೆವುದನರಿಯದೆ”

ಸದಾ ಶಿವಧ್ಯಾನ ಜಪಿಸುತ್ತಲೇ ಮಡಿಕೆಗಳನ್ನು ತಯಾರಿಸುತ್ತಿದ್ದ ಗುಂಡಯ್ಯನವರ ಬಗ್ಗೆ ಹರಿಹರ ತನ್ನ ರಗಳೆಯಲ್ಲಿ ವರ್ಣಿಸುತ್ತಾನೆ. ಎಲ್ಲವನ್ನೂ ಮರೆತು ಶಿವ ಭಕ್ತಿಯಲ್ಲಿ ಮುಳುಗುತ್ತಿದ್ದನು. ಅಷ್ಟೊಂದು ಶ್ರದ್ಧೆ, ಭಕ್ತಿ ಹಾಗೂ ಏಕಾಗ್ರತೆಯ ಆತನಲ್ಲಿತ್ತು. ಅದು ಅಂತರಂಗ ಚಳವಳಿಯೇ ಹೌದು ಎನ್ನುವುದು ಇಲ್ಲಿ ಸ್ಮರಿಸಬಹುದು.

ಕುಂಬಾರ ಗುಂಡಯ್ಯನವರ ದೈವ ಭಕ್ತಿ, ಕಾಯಕ ನಿಷ್ಠೆ, ಜೀವನ ಪ್ರೀತಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿರುವುದು ಕಾಣಬಹುದು . ಗುಂಡಯ್ಯನವರ ಬಗ್ಗೆ ಜನಪದರು ಅನೇಕ ತ್ರಿಪದಿಗಳು ರಚಿಸಿದ್ದಾರೆ.
ಎರಡು ತ್ರಿಪದಿಗಳು ಇಲ್ಲಿವೆ:

ಬಲೆಕೇರಿ ಗುಂಡಯ್ಯ ಬಲವಂತ ಶಿವಭಕ್ತ
ಕುಲವಂತ ಶರಣ ಕುಂಬಾರ | ಕಾಯಕವು
ಕುಲಕೆಲಸ ನಿತ್ಯ ಜೀವನಕೆ”

“ದಿನದಂತೆ ಗುಂಡಯ್ಯ ದಣಿಯದಲೆ ಕಾಯಕವ ಕುಣಿಕುಣಿದು ಗಡಗಿ ಬಾರಿಸುತ | ನಡೆಸಿರಲು ಮನಮೆಚ್ಚಿ ಶಿವನು ತಲೆದೂಗಿ”

ಜಾನಪದ ಕವಿಗಳು ಹೀಗೆ ಅನೇಕ ತ್ರಿಪದಿಗಳಲ್ಲಿ ಗುಂಡಯ್ಯ ಶರಣ ದಂಪತಿಗಳ ಜೀವನ ಕಾಯಕ ಬದುಕು, ಭಕ್ತಿಯ ಕುರಿತು ತುಂಬಾ ಉತ್ಕಟವಾಗಿ ಬಣ್ಣಿಸಿದ್ದಾರೆ. ಕುಂಬಾರ ಗುಂಡಯ್ಯ ಹಾಗೂ ಪುಣ್ಯಸ್ತ್ರೀ ಕೇತಲಾದೇವಿ ದಂಪತಿಗಳ ಸಾಮರಸ್ಯದ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಬಸವಾದಿ ಶರಣರ ತತ್ವಗಳಿಗೆ ಒಳಗೊಂಡು ಜೀವನ ಸಾಗಿಸಲು ನಾವೆಲ್ಲರೂ ಪಣತೊಡಬೇಕಾಗಿದೆ. ವಚನಕಾರರ ಅನನ್ಯ ಚಿಂತನೆ, ಬದುಕು, ಅನುಭಾವ, ಕಾಯಕ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಅದನ್ನು ಮುನ್ನೆಲೆಗೆ ತರುವ ಜೊತೆಗೆ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಳ್ಳಬೇಕಾಗಿದೆ.

ಎಲ್ಲರಿಗೂ ಶರಣ ಕುಂಬಾರ ಗುಂಡಯ್ಯನವರ ಜಯಂತಿಯ ಶುಭಾಶಯಗಳು..💐💐🙏

ಬಾಲಾಜಿ ಕುಂಬಾರ, ಚಟ್ನಾಳ

Don`t copy text!