ನಾನು ಓದಿದ ಪುಸ್ತಕ- ಪುಸ್ತಕ ಪರಿಚಯ
ಮಾಧವಿ
(ಪೌರಾಣಿಕ ಕಾದಂಬರಿ)
ಕೃತಿ ಕರ್ತೃ:- ಡಾ.ಅನುಪಮಾ ನಿರಂಜನ
ಮಾಧವಿ, ಒಂದು ಪೌರಾಣಿಕ ಕಥಾ ವಸ್ತು. ಪುರುಷ ಪ್ರಧಾನತೆಯಲ್ಲಿ ಹೆಣ್ಣು ಹೇಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾಳೆ, ಅವಳ ಸಂಪೂರ್ಣ ಸ್ವಾತಂತ್ರ್ಯವನ್ನು ಹರಣ ಮಾಡಿ ಪುರುಷನು ತನ್ನ ಮನೋಭೀಷ್ಟಕ್ಕೆ ಅವಳನ್ನು ಬಳಸಿಕೊಂಡು ನರಕ ದರ್ಶನ ಮಾಡಿಸುವ ಹೃದಯವಿದ್ರಾವಕ ಸನ್ನಿವೇಶಗಳ ಚಿತ್ರಣ. ಲೇಖಕಿ ಅನುಪಮಾ ನಿರಂಜನ ಅವರ ಈ ಕೃತಿ ಸಾಮಾಜಿಕವಾಗಿಯೂ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಸುಮಾರು ಹದಿನಾಲ್ಕು ಬಾರಿ ಮರುಮುದ್ರಣವನ್ನು ಪಡೆದ ಕೃತಿ, ಓದುಗರನ್ನು ಪ್ರಬಲವಾಗಿ ತನ್ನತ್ತ ಸೆಳೆಯುತ್ತಿದೆ. ಓದುಗನ ಮನ ಕರಗುವಂತಹ ಸನ್ನಿವೇಶಗಳನ್ನು ಕಣ್ಣ ಮುಂದೆ ನೈಜವಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೇನೋ ಎಂಬಂತೆ ದೃಶ್ಯೀಕರಿಸಿದ್ದಾರೆ.
ಇಲ್ಲಿ ಲೇಖಕಿಯರೇ ಹೇಳುವಂತೆ, ಪೌರಣಿಕ ಎಂದೊಡನೆ ಸಂಭಾಷಣೆಯ ಭಾಷೆ, ಬಳಸುವ ಪದಗಳು ಬದಲಾಗುವುದಿಲ್ಲ. ಮಹಾಭಾರತ, ರಾಮಾಯಣ ಅಥವಾ ಇನ್ನಿತರ ಕೃತಿ ಆಧಾರಿತ ಸಿನೆಮಾ ಧಾರವಾಹಿಗಳಲ್ಲಿ ಸಂಭಾಷಣೆಯಲ್ಲಿ ಬಳಸುವ ಪದಗಳು, ಮಾತನಾಡುವದರಲ್ಲಿ ಇರುವ ವಿಭಿನ್ನತೆ ಕಲ್ಪನೆಯಾಗಿರಬಹುದು. ಯಾರು, ಯಾವತ್ತಿಗೂ ಕೂಡ ಗ್ರಾಂಥಿಕ ಭಾಷೆಯಲ್ಲಿ ಸಂವಹನಿಸುವುದಿಲ್ಲ. ಕೇವಲ ಓದಿಗೆ ಮತ್ತು ಬರವಣಿಗೆಗೆ ಸೀಮಿತವಾಗಿರುವ ಗ್ರಾಂಥಿಕ ಭಾಷೆ ಸಂಭಾಷಣೆಯಲ್ಲಿ ಬರಲು ಸಾಧ್ಯವಿಲ್ಲ ಎಂಬ ವಾದದೊಂದಿಗೆ ಲೇಖಕಿಯವರು ಈ ಕಾದಂಬರಿಯನ್ನು ಆಡುಭಾಷೆಯಲ್ಲಿಯೇ ರಚಿಸುತ್ತಾರೆ. ಆ ಕಾರಣಕ್ಕಾಗಿಯೇ ಸಾಮಾನ್ಯ ಓದುಗನಿಗೂ ಕಾದಂಬರಿಯ ತಿರುಳು ಅರ್ಥವಾಗಿಬಿಡುತ್ತದೆ.
ಮಹಾನ್ ಪುರುಷ ‘ಪ್ರತಿಷ್ಠಾನ’ ನಗರದ ರಾಜ, ಚಂದ್ರವಂಶದ ಯಯಾತಿ ತನ್ನ ಅರಮನೆಯ ರಾಜಕುಮಾರಿ, ತನ್ನ ಮಗಳಾದ (ಮಾಧವಿ)ಯನ್ನೇ ದಾನ ಕೊಟ್ಟು ಬಿಡುತ್ತಾನೆ. ದಾನವಾಗಿ ಪಡೆದುಕೊಂಡವನು ಮಾಧವಿಯನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದೇ ಕಾದಂಬರಿಯ ತಿರುಳು.
ವಿಶ್ವಾಮಿತ್ರನಲ್ಲಿ ವಿದ್ಯೆ ಕಲಿತ ಗಾಲವ, ವಿಶ್ವಾಮಿತ್ರ ಎಷ್ಟೇ ಬೇಡವೆಂದರೂ ಗುರುದಕ್ಷಿಣೆ ಕೊಡುವುದಾಗಿ ಹಟ ಬಿದ್ದು, ಏನು ಬೇಕು ಕೇಳಿ ಎನ್ನುತ್ತಾನೆ. ಇವನ ಹಟ, ಅಹಂಕಾರವನ್ನು ಕಂಡ ವಿಶ್ವಾಮಿತ್ರ, ಮೈಯೆಲ್ಲಾ ಬೆಳ್ಳಗಿರುವ ಮತ್ತು ಒಂದು ಕಿವಿ ಮಾತ್ರ ಕಪ್ಪಗಿರುವ ೮೦೦ ಕುದುರೆಗಳನ್ನು ಕೊಡಲು ಆಜ್ಞಾಪಿಸುತ್ತಾನೆ. ಅಂತಹ ಕುದುರೆಗಳನ್ನು ಹುಡುಕಿಕೊಂಡು ಹೊರಟ ಗಾಲವ, ಗುರುತ್ಮಂತ ಮುನಿಯ ಸಲಹೆಯ ಮೇರೆಗೆ ಯಯಾತಿಯ ಬಳಿ ಬಂದು, ತನ್ನ ಗುರುದಕ್ಷಿಣೆಗಾಗಿ ಆವಶ್ಯಕವಾದ ಕುದುರೆಗಳನ್ನು ಕೇಳುತ್ತಾನೆ. ಗಾಲವನಿಗೆ ದಾನ ಮಾಡಲು ಏನೂ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದ ಯಯಾತಿ, ಅಪಶಕುನ ಎಂದುಕೊಂಡಿದ್ದ ತನ್ನ ಮಗಳನ್ನೇ ಗಾಲವನಿಗೆ ದಾನಗೈದು, ಈ ಸೌಂದರ್ಯ ರಾಶಿ ಕನ್ಯೆಯನ್ನು ಯಾವುದಾದರೂ ರಾಜನಿಗೆ ಕೊಟ್ಟು, ನಿಮ್ಮ ಗುರುದಕ್ಷಿಣೆಗೆ ಬೇಕಾದ ಅಶ್ವಗಳನ್ನು ಕನ್ಯಾ ಶುಲ್ಕ ರೂಪದಲ್ಲಿ ಪಡೆಯಿರಿ ಎಂದು ಪ್ರಾರ್ಥಿಸುತ್ತಾನೆ.
(ಲೇಖಕಿ-ಡಾ.ಅನುಪಮ ನಿರಂಜನ)
ಸ್ವಯಂವರದ ಕನಸು ಕಂಡ ಮಾಧವಿಗೆ ಈ ಸನ್ನಿವೇಶ, ಒಮ್ಮೆಲೆ ಬೆಂಕಿಗೆ ನೂಕಿದಂತಾಗುತ್ತದೆ. ತಾನು ಕಂಡ ತನ್ನ ಒಡೆಯನ ಕಲ್ಪನೆಗೆ ಎಳ್ಳು ನೀರು ಬಿಡುವ ಈ ಸಂದರ್ಭ ಮಾಧವಿಯ ಹೃದಯವನ್ನು ಹಿಂಡಿಬಿಡುತ್ತದೆ. ತನ್ನ ಸ್ವಂತ ಮಗಳನ್ನೇ, ಅದೂ ತಾಯಿಯಿಲ್ಲದ ತಬ್ಬಲಿಯನ್ನು ಈ ರೀತಿಯಾಗಿ ನಿರ್ಜೀವ ವಸ್ತುವನ್ನು ದಾನ ಕೊಡುವಂತೆ ಕೊಟ್ಟಿರುವುದು ನುಂಗಲಾರದ್ದು, ಸಹಿಲಸಾಧ್ಯವಾದದ್ದು.
ಇಂತಹ ತಂದೆ ಪೌರಾಣಿಕ ಇತಿಹಾಸದಲ್ಲಿ ಸಿಕ್ಕಿರುವುದು ಪೌರಾಣಿಕ ಕಥೆಗಳಿಗೇ ಒಂದು ಕಳಂಕ ಏಂಬುದು ನನ್ನ ಭಾವನೆ. ಇಲ್ಲಿ ಕೇವಲ ಇದು ಪುರುಷರ ತೀರ್ಮಾನ ಅಷ್ಟೇ ಎಂದು ಹೇಳಲಾಗದು. ಮಲತಾಯಿ ಆದ ದೇವಯಾನಿ ಕೂಡ ಯಯಾತಿಯ ಮಾತಿಗೆ ತಲೆದೂಗಿ, ಇದು ಒಂದು ಉತ್ತಮ ನಿರ್ಧಾರ, ಮಾಧವಿಯನ್ನು ಹೊರಹಾಕಲು ಇದು ಸೂಕ್ತ ಸಂದರ್ಭ ಎಂದು ತನ್ನ ಮಲತಾಯಿ ಧೋರಣೆಯನ್ನು ಹೊರಹಾಕಿದ್ದಾಳೆ. ತನ್ನ ಮೇಲೆ ಅಪವಾದ ಬರಬಾರದೆಂಬುದನ್ನೂ ತಿಳಿಸಿ ತನ್ನ ಕಾರ್ಯ ಸಾಧಿಸಿರುವುದು ಶೋಚನೀಯ ಅನಿಸುತ್ತದೆ. ಒಂದು ಹೆಣ್ಣಾಗಿ, ಮತ್ತೊಂದು ಹೆಣ್ಣನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂಬ ಒಂದು ಮಾತು ಅವಳ ಮನಸಿಂದ ಬಂದಿದ್ದರೂ ಮಾಧವಿಗೆ ಈ ಗತಿ ಬರುತ್ತಿರಲಿಲ್ಲ.
ಮಾಧವಿಯನ್ನು ಸಂಪೂರ್ಣವಾಗಿ ಕೀಲು ಗೊಂಬೆಯಂತೆ ಇದರಲ್ಲಿ ಎಲ್ಲ ಪುರುಷರು ನಡೆಸಿಕೊಂಡಿದ್ದಾರೆ. ಮಾಧವಿಯನ್ನ ಕರೆದುಕೊಂಡು ಹೋದ ಗಾಲವ, ಮೊದಲಿಗೆ ಅಯೋಧ್ಯೆ ನಗರದ ರಾಜ ಹರ್ಯಶ್ವನಲ್ಲಿ ಬರುತ್ತಾನೆ. ಅವನಲ್ಲಿ ಕೇವಲ ೨೦೦ ಅಶ್ವಗಳು ಲಭ್ಯ ಇದ್ದುದರಿಂದ, ಮಾಧವಿಯಲ್ಲಿ ಕಾಮ ಸುಖ ಸವಿದು ಪುತ್ರಸಂತಾನ ಪಡೆದು ನಂತರ ಮರಳಿ ನಿಮಗರ್ಪಿಸುತ್ತೇನೆ, ನಂತರ ನೀವು ಇನ್ನೊಬ್ಬ ರಾಜನಿಗೆ ಮಾಧವಿಯನ್ನು ಒಪ್ಪಿಸಿ ಉಳಿದ ಅಶ್ವಗಳನ್ನು ಪಡೆಯಬಹುದೆನ್ನುತ್ತಾನೆ. ಅಂತೆಯೇ ಗಾಲವ ೨೦೦ ಕುದುರೆಗೆ ಒಪ್ಪಂದ ಮಾಡಿಕೊಂಡು ಮಾಧವಿಯನ್ನು ಬಾಡಿಗೆ ರೀತಿಯಲ್ಲಿ ಹರ್ಯಶ್ವನಿಗೆ ಒಪ್ಪಿಸುತ್ತಾನೆ. ಈ ಒಪ್ಪಂದ ಅರಿಯದ ಮಾಧವಿ, ಹರ್ಯಶ್ವನ ಬಲೆಗೆ ಸಿಕ್ಕು ವಿರೋಧವನ್ನು ವ್ಯಕ್ತಪಡಿಸುವ ಹಕ್ಕೂ ತನಗಿಲ್ಲವೇ? ಎಂದು ನೊಂದುಕೊಳ್ಳುತ್ತಲೆ ರಾಜನ ತೆಕ್ಕೆಗೆ ಸಿಲುಕುತ್ತಾಳೆ. ಅಲ್ಲಿ ಮಾಧವಿಗೆ ಪುತ್ರ (ವಸುಮಂತ) ಸಂತಾನವಾಗುತ್ತದೆ. ಮತ್ತೆ ಪ್ರಸೂತಿ ಆದ ಎರಡೇ ತಿಂಗಳಲ್ಲಿ ಮತ್ತೆ ಗಾಲವನ ಜೊತೆ ಬಾಣಂತಿ ಮಾಧವಿ ಹೋಗುವ ಸಂದರ್ಭ ಬರುತ್ತದೆ. ಈ ಸಂದರ್ಭದಲ್ಲಿ ಬಾಣಂತಿ ಕಾಡಿನಲ್ಲಿ ಅಲೆಯುವಾಗ ಪಟ್ಟ ಕಷ್ಟವನ್ನು ಲೇಖಕಿಯವರು ಮನಮುಟ್ಟುವಂತೆ ರಚಿಸಿದ್ದಾರೆ.
ತಾನು ಕೇವಲ ಲೈಂಗಿಕ ಭೋಗಕ್ಕೆ ಪುತ್ರ ಸಂತಾನಕ್ಕೆ ಬಳಕೆಯಾಗುತ್ತಿದ್ದೇನೆ, ಮುಂದೆ ಮತ್ಯಾರ ಬಳಿ ನನ್ನನ್ನು ಬಿಡುವರೋ ಎಂದು ಮರುಗುತ್ತಾಳೆ. ಮುಂದೆ, ಗಾಲವ ಕಾಶೀರಾಜ ದಿವೋದಾಸನ ಬಳಿ ಮಾಧವಿಯನ್ನು ಬಿಡುತ್ತಾನೆ. ಅವನು ಮಹಾನ್ ಸಾತ್ವಿಕ ಎನ್ನುವಂತೆ ನಾನು ಮದುವೆಯಾಗದೆ ಯಾವ ಸ್ತ್ರೀಯನ್ನೂ ಒರಿಸುವುದಿಲ್ಲ ಎನ್ನುತ್ತಾನೆ. ಪರಿಹಾರವಿಲ್ಲದೆ ಗಾಲವನ ಮಾತಿಗೆ ವಿರೋಧಿಸಲು ಸಾಧ್ಯವಾಗದೆ ದಿವೋದಾಸನ ಸತಿಯಾಗುತ್ತಾಳೆ. ಅಲ್ಲಿಯೂ ಕೇವಲ ೨೦೦ ಅಶ್ವಗಳಿಗೆ ಮಾಧವಿಯನ್ನು ಒತ್ತೆ ಇಟ್ಟಿರುತ್ತಾನೆ ಗಾಲವ. ಕಾಶೀರಾಜನಿಂದಲೂ ಪುತ್ರ(ಪ್ರತರ್ದನ) ಸಂತಾನವಾಗುತ್ತದೆ.
ಮತ್ತೆ ಯಥಾ ರೀತಿ ಮಾಧವಿಯನ್ನು ಗಾಲವ ಕರೆದುಕೊಂಡು ಭೋಜದೇಶಾಧಿಪತಿ ಉಶೀನರ ಬಳಿ ಬರುತ್ತಾನೆ. ಅಲ್ಲಿಯೂ ೨೦೦ ಅಶ್ವಗಳಿಗೆ ಮಾಧವಿಯನ್ನು ಬಾಡಿಗೆಗೀಯುತ್ತಾನೆ. ಉಶಿನರನಿಂದ ಇಲ್ಲಿಯೂ ಪುತ್ರೋ(ಶಿಬಿ)ತ್ಸವ ಆಗುತ್ತದೆ. ಮೂವರು ರಾಜರಿಂದ ತಲಾ ಎರಡು ನೂರರಂತೆ ಒಟ್ಟು ೬೦೦ ಅಶ್ವಗಳನ್ನು ಪಡೆದ ಗಾಲವನಿಗೆ ಮಿಕ್ಕ ಎರಡು ನೂರು ಅಶ್ವಗಳು ಎಲ್ಲಿಯೂ ಸಿಗುವುದಿಲ್ಲ. ಹಾಗಾಗಿ ಮಿಕ್ಕ ಎರಡು ಅಶ್ವಗಳ ಬದಲಾಗಿ ವಿಶ್ವಾಮಿತ್ರನಿಗೆ ಮಾಧವಿಯನ್ನೇ ಕೊಟ್ಟರಾಯಿತು ಎಂದು ೬೦೦ ಅಶ್ವಗಳೊಂದಿಗೆ ಮಾಧವಿಯನ್ನು ವಿಶ್ವಾಮಿತ್ರನ ಆಶ್ರಮಕ್ಕೆ ಕರೆತಂದು ನಡೆದ ಘಟನಯನ್ನೆಲ್ಲ ವಿವರಿಸಿ ಮಾಧವನ್ನು ಒಪ್ಪಿಸುತ್ತಾನೆ.
ಮಾಧವಿಯಲ್ಲಿ ಕಾಮಾಪೇಕ್ಷೇ ಹೊಂದಿದವನಾಗಿ ವಿಶ್ವಾಮಿತ್ರನೂ ಮಾಧವಿಯಲ್ಲಿ ಲೀನವಾಗಿ ಗಂಡು ಸಂತಾನ(ಅಷ್ಟಕ)ವನ್ನು ಪಡೆಯುತ್ತಾನೆ. ಈ ಮಧ್ಯೇ ನಾಲ್ಕು ಪುರುಷರಿಂದ ನಾಲ್ಕು ಸಂತಾನಗಳನ್ನು ಪಡೆದ ಮಾಧವಿ ಅಕ್ಷರಶಃ ಕುಗ್ಗಿ ಹೋಗಿರುತ್ತಾಳೆ. ತಾನೂ ಮನುಷ್ಯಳು, ತನಗೂ ಮನಸ್ಸಿದೆ ಎಂಬುದನ್ನೇ ಮರೆತಂತಾಗಿರುತ್ತಾಳೆ. ಒಬ್ಬರಿಗೆ ತನ್ನನ್ನು ಮಾರಿದ್ದರೆ ಹೇಗೋ ಮಾನವಂತಳಾಗಿ ಇದ್ದು ನೆಮ್ಮದಿ ಕಂಡುಕೊಳ್ಳಬಹುದಿತ್ತು. ಆದರೆ ತನ್ನ ಸ್ವಾರ್ಥಕ್ಕೆ ಗಾಲವ ತನ್ನನ್ನು ಅನೀತಿ ಮಾರ್ಗಕ್ಕೆ ನೂಕಿರುವುದು ಸಹಿಸಲು ಅನರ್ಹವಾದುದು… ಗುರುದಕ್ಷಿಣೆ ಕೊಡಲಾಗದೆ ಧರ್ಮ ಮುರಿದರೂ ಇಷ್ಟು ಅಪರಾಧ ಆಗುತ್ತಿರಲಿಲ್ಲ ಎನಿಸುತ್ತದೆ.
ಪ್ರತಿಯೊಂದು ರಾಜ್ಯದಲ್ಲೂ ಮಾಧವಿ ಕಂಡದ್ದು ಸುಖವಲ್ಲ. ಯಾವ ಪುರುಷನನ್ನೂ ಸ್ವಯಿಚ್ಛೆಯಿಂದ ಸ್ವೀಕರಿಸಲೇ ಇಲ್ಲ. ಒಂದು ರೀತಿ ಬಲಾತ್ಕಾರಕ್ಕೆ ಒಳಪಟ್ಟಳು ಮಾಧವಿ. ದೈಹಿಕ ಬಲಾತ್ಕಾರ ಎಷ್ಟು ಹಿಂಸೆಯಾಯಿತೋ ಅದಕ್ಕೆ ನೂರು ಪಟ್ಟು ಹಿಂಸೆ ಮಾನಸಿಕ ಬಲಾತ್ಕಾರದಿಂದ ಅನುಭವಾಸಿದ್ದಾಳೆ.
ಅವ್ವೆ(ಸಾಕು ತಾಯಿ), ಚಾರುನೇತ್ರೆ(ದಾಸಿ) ಋಷಿಪತ್ನಿಯರು, ದಾಸಿಯರ ಪಾತ್ರಗಳು ಮಾಧವಿಗೆ ಬೆಂಬಲವಾಗಿದ್ದರೂ, ಅವಳ ನೋವನ್ನು ಶಮನ ಮಾಡವಲ್ಲಿ, ಅಥವಾ ಅವಳಿಗಾಗುವ ಅನ್ಯಾಯವನ್ನು ತಡೆಯುವಲ್ಲಿ ಯಾರೂ ಸಫಲರಾಗುವುದಿರಲಿ, ವಿರೋಧಿಸಲೂ ಸಾಧ್ಯವಾಗುವುದಿಲ್ಲ.
ಮಾಧವಿಯ ಮನಸ್ಥಿತಿ, ಅವಳು ಅನುಭವಿಸಿದ ವೇದನೆಯನ್ನು ಲೇಖಕಿ ಅನುಪಮಾ ಅವರು ಬಹಳ ಮನಮುಟ್ಟುವಂತೆ ಬರೆದಿದ್ದಾರೆ. ಕಾಡಿನಲ್ಲಿ ಗಾಲವನೊಂದಿಗಿನ ಪ್ರಯಾಣದ ಅನುಭವ, ಅಲ್ಲಿ ಬರುವ ಗಿಡಮರಗಳ ಹೆಸರುಗಳು ವಿಶೇಷವಾಗಿದ್ದು ಇಂದಿನ ಪೀಳಿಗೆಯವರಿಗೆ ಹೊಸ ಹೆಸರುಗಳು ಅನಿಸುತ್ತವೆ. ಅಷ್ಟೊಂದು ಸಂಪನ್ಮೂಲವನ್ನು ಸರಾಗವಾಗಿ ಕಾದಂಬರಿಯಲ್ಲಿ ಚಿತ್ರಿಸಿದ್ದು ಓದುಗನಿಗೆ ನೆನೆಪಿಟ್ಟುಕೊಳ್ಳಲೂ ಕಷ್ಟಸಾಧ್ಯದಂತಿದೆ.
ವಿಶ್ವಾಮಿತ್ರನ ಸಂಗದಲ್ಲಿ ಆಶ್ರಮವಾಸಿಯಾಗಿ, ಭಗವತಿಯಾಗಿ ಆಶ್ರಮದ ಬಹುತೇಕ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾಳೆ. ನಾಲ್ಕು ಅರಮನೆಗಳ ವೈಭೋಗಕ್ಕೂ ಈ ಆಶ್ರಮದ ಸರಳ ಬದುಕಿಗೂ ಹೋಲಿಸಿದರೆ, ಆಶ್ರಮದಲ್ಲಿನ ನೆಮ್ಮದಿ ಉತ್ತಮವೆನಿಸಿರುತ್ತದೆ. ಆದರೆ ರಾತ್ರಿ ಆಗಲೇ ಬಾರದು, ರಾತ್ರಿ ಬೇಗ ಮುಗಿದು ಬಿಡಲಿ ಎಂಬ ರಾತ್ರಿಗಳ ನರಕವನ್ನು ಹೊರತುಪಡಿಸಿ.
ವಿಶ್ವಾಮಿತ್ರನಲ್ಲಿ ಮಾಧವಿಯನ್ನು ಗಾಲವ ಕರೆತಂದು ವಿಷಯವನ್ನು ತಿಳಿಸಿದಾಗ, ೮೦೦ ಅಶ್ವಗಳ ಬದಲಾಗಿ ಮಾಧವಿಯನ್ನೇ ನನಗೆ ಮೊದಲೇ ತಂದು ಒಪ್ಪಿಸಿದ್ದರೆ ಚೆನ್ನಾಗಿತ್ತು ಎಂಬ ವಿಶ್ಲಾಮಿತ್ರನ ಯೋಚನೆ, ಋಷಿಗಳಲ್ಲೂ ಮನೋ ನಿಗ್ರಹದ ಕೊರತೆ ಇದೆ, ಸುಂದರ ಯುವತಿಯನ್ನು ಕಂಡು ಮೋಹಿಸಿ, ತಮ್ಮ ಆಶ್ರಮದ ನಿಯಮವನ್ನೂ ಮೀರಲು ತಯಾರಾಗುತ್ತಾರೆನ್ನುವುದು ಶೋಚನೀಯವೆನಿಸದೆ ಇರದು.
ಮೊದಲ ಬಾರಿ ವಿಶ್ವಾಮಿತ್ರ ಮಾಧವಿಯೊಂದಿಗೆ ಮಿಲನಕ್ಕೆ ಸಿದ್ಧವಾದಾಗ, ಈ ದಿನ ಬೇಡ ಎಂದ ಮಾಧವಿಗೆ, “ಕಾಮವನ್ನು ಬೇಕಾದ ಹಾಗೆ ಸವಿದೋಳು ನೀನು. ಅದಕ್ಕೆ ನಿನಗೆ ಬಯಕೆಯಿಲ್ಲ. ಆದರೆ ನನಗೆ ಇರೋ ಹಸಿವು ಹಲವು ವರ್ಷಗಳದ್ದು. ಅದನ್ನು ತಣಿಸದೇ ಹೋದ್ರೆ ನಾನು ಹುಚ್ಚನಾಗ್ತೀನಿ” ಎಂದು ಬಲವಂತವಾಗಿ ಬೆವರ್ಹರಿಸುತ್ತಾನೆ. ಇಂತಹ ಚುಚ್ಚು ,ಮಾತುಗಳನ್ನು ಉಶೀನರನ ಹೆಂಡತಿ ‘ಮಹಿಮಾ’ಳಿಂದನೂ ಕೇಳಿ ದುಃಖ ತಪ್ತೆಯಾಗಿರುತ್ತಾಳೆ ಮಾಧವಿ. ಆದರೆ ಅನುಭವಿಸದೇ ವಿಧಿ ಇಲ್ಲ ಎಂದು ಮನಗಂಡು ಸಹಿಸಿರುತ್ತಾಳೆ.
ನಾಲ್ಕು ಮಕ್ಕಳ ತಾಯಿಯಾದರೂ, ಒಂದು ಮಗುವಿನ ಮೇಲೂ ತನಗೆ ಹಕ್ಕಿಲ್ಲ. ಅವುಗಳ ಲಾಲನೆ ಪಾಲನೆ ಮಾಡುವ ಸಂತೋಷ ತನ್ನ ಪಾಲಿಗಿಲ್ಲ ಎಂಬ ಮಾಧವಿಯ ರೋಧನೆಯನ್ನು ಓದಿ, ಓದುಗ ಭಾವುಕನಾಗುತ್ತಾನೆ.
ಕೊನೆಗೆ ಶಿಬಿಯ ಜನನದ ತರುವಾಯ ಗಾಲವ ತನ್ನ ಗುರುದಕ್ಷಿಣೆ ತೀರಿತೆಂದು, ಮಾಧವಿಯನ್ನು ಮತ್ತೆ ಯಯಾತಿಗೆ ಒಪ್ಪಿಸಿಬಿಡುತ್ತಾನೆ. ನಡೆದ ಘಟನೆಯನ್ನೆಲ್ಲಾ ಕೇಳಿ ಕ್ರೋಧಗೊಂಡ ಯಯಾತಿಗೆ, ಗಾಲವನನ್ನು ಕೊಂದು ಬಿಡಬೇಕೆನಿಸುತ್ತದೆ. ಆದರೆ ಗಾಲವನೊಬ್ಬ ಮುನಿ, ಮೇಲಾಗಿ ನಮ್ಮ ಅತಿಥಿ ಎಂಬ ಕಾರಣಕ್ಕೆ ಸುಮ್ಮನಾಗುತ್ತಾನೆ. ತನ್ನ ಮಗಳನ್ನು ಪಶುವಿನಂತೆ ಬಳಸಿಕೊಂಡಿರುವುದು ಅವನಿಗೆ ನೋವೆನಿಸುತ್ತದೆ. ಈಗಲಾದರೂ ಮಾಧವಿಯ ಸ್ವಯಂವರ ಮಾಡೋಣವೆಂದು ನಿರ್ಧರಿಸಿ ಸ್ವಯಂವರ ಆಯೋಜಿಸುತ್ತಾನೆ. ಅದಕ್ಕೆ ಸಮ್ಮತಿಯಿಲ್ಲದೆ, ಒಲ್ಲದ ಮನಸಿನಿಂದ ಪಾಲ್ಗೊಳ್ಳುತ್ತಾಳೆ ಮಾಧವಿ. ಸ್ವಯಂವರದ ಸಂದರ್ಭದಲ್ಲಿ, “ನಾನು ಮೂವರು ರಾಜರು ಮತ್ತು ಒಬ್ಬ ಮುನಿಯೊಡನೆ ಇದ್ದು ಬಂದಿದ್ದೇನೆ. ಇದನ್ನು ತಿಳಿದೂ ನೀವು ನನ್ನನ್ನು ಸ್ವೀಕರಿಸುವಿರಾ” ನಿಮಗೆ ಯಾವ ಅಭ್ಯಂತರಲಿಲ್ಲವೇ ಎಂದು ಬಹಿರಂಗವಾಗಿಯೇ ಕೇಳುತ್ತಾಳೆ. ಆದರೆ ಇದರ ಅರ್ಥವನ್ನರಿಯದ ರಾಜರುಗಳು, ಓಹ್ ಈಕೆ ಮೂರು ರಾಜ್ಯಗಳನ್ನೂ ಮತ್ತು ಋಷ್ಯಾಶ್ರಮವನ್ನೂ ಸುತ್ತಿ ತನ್ನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಂಡವಳು, ಇಂತಹ ಜಾಣ್ಮೆ ಇರುವವಳೇ ಮಹಾರಾಣಿ ಸ್ಥಾನಕ್ಕೆ ಯೋಗ್ಯಳೆಂಬ ನಿರ್ಧಾರಕ್ಕೆ ಬಂದು,”ನಮಗೆ ಯಾವ ಅಭ್ಯಂತರವೂ ಇಲ್ಲ” ಎಂದು ಒಕ್ಕೊರಲಿನಿಂದ ಕೂಗುತ್ತಾರೆ.
ತಥ್, ಥೂ! ಗಂಡಸು ಜಾತಿಯೇ! ಎಂದು ಬೈದುಕೊಂಡು ಪುಷ್ಪ ಮಾಲೆ ಹಿಡಿದು ಎರಡು ಬಾರಿ ರಾಜರ ಮುಂದೆ ಸುತ್ತಿದರೂ ಒಬ್ಬರಿಗೂ ಮಾಲೆ ಹಾಕದೆ, ಜಗತ್ತಿನಲ್ಲಿ ನನಗ್ಯಾರೂ ಬೇಡ, ಬರುವಾಗ ಒಬ್ಬಳೇ ಬಂದೆ, ಹೋಗುವಾಗಲೂ ಒಬ್ಬಳೇ ಹೋಗುವೆ ಎಂದು… ನಾನೂ ನಿನ್ನ ಜೊತೆ ಬರುತ್ತೇನೆ ಎಂದ ಚಾರುನೇತ್ರೆಗೆ ಹೇಳಿ, ಕಾಡಿನೊಳಕ್ಕೆ ಹೋಗಿ ಬಿಡುತ್ತಾಳೆ.
ಒಟ್ಟಿನಲ್ಲಿ ಅನುಪಮಾ ನಿರಂಜನ ಅವರ ಈ ಪೌರಾಣಿಕ ಕಾದಂಬರಿ, ಪುರಾಣಕ್ಕೆ ಸಂಬಂಧಿಸಿದ್ದರೂ, ಓದುವಾಗ ಎಲ್ಲಿಯೂ ಪೌರಾಣಿಕ ಭಾಷೆ ಸುಳಿಯುವುದಿಲ್ಲ. ಸಾಮಾನ್ಯ ಓದುಗನಿಗೂ ಅರ್ಥವಾಗುವ ಆಡುಭಾಷೆಯಲ್ಲಿ ಸಲಲಿತವಾಗಿ ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನತೆ ನೈತಿಕವಾಗಿರಬೇಕೇ ಹೊರತು, ಹೆಣ್ಣು ಮಕ್ಕಳನ್ನು ಗೌರವಿಸುವಲ್ಲಿ ತಮ್ಮತನವನ್ನು ಉಳಿಸಿಕೊಳ್ಳಬೇಕೇ ಹೊರತು, ತಮ್ಮ ಸ್ವಾರ್ಥಕ್ಕೆ, ಕಾಮೋದ್ವೇಗಕ್ಕೆ ಬಳಸಿಕೊಂಡು ಬಿಸಾಡುವ ವಸ್ತುವನ್ನಾಗಿ ಹೆಣ್ಣನ್ನು ಎಂದಿಗೂ ಬಳಸಿಕೊಳ್ಳಬಾರದೆಂಬುದೇ ಈ ಕಾದಂಬರಿಯ ಉದ್ದೇಶ.
– ವರದೇಂದ್ರ ಕೆ ಮಸ್ಕಿ
೯೯೪೫೨೫೩೦೩೦