ಪುಸ್ತಕ ಪರಿಚಯ-
ಕೃತಿ :- ಡಾ. ಎಸ್. ಎಸ್. ನರಸಣಗಿ
ಕೃತಿಕಾರರು:- ಶ್ರೀ ಗಿರಿರಾಜ ಹೊಸಮನಿ
ವೈದ್ಯ ಲೋಕದ ಅಚ್ಚರಿಯಾಗಿ, ಶಸ್ತ್ರ ಚಿಕಿತ್ಸೆಯಲ್ಲಿ ಮಾಂತ್ರಿಕತನ ತೋರಿದ, ರೋಗಿದೇವೋಭವ ಎಂಬ ಹೊಸ ಮಂತ್ರವನ್ನೇ ರೂಪಿಸಿದ, ದಯಾಮಯ, ತನು ಮನ ಸೇವಾನಿಷ್ಠರು, ಧನವನ್ನು ಮೆಚ್ಚದೇ ದೈನ್ಯತೆಯನ್ನು ಗಳಿಸಿಕೊಂಡು ಬಡವರ ಆಶಾಕಿರಣರಾಗಿದ್ದ ಡಾ ಎಸ್ ಎಸ್ ನರಸಣಗಿ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ಕಣ್ಣ ಮುಂದೆ ಪ್ರತ್ಯಕ್ಷವಾಗಿಸುವ ಕೃತಿ, ಶ್ರೀಯುತ ಗಿರಿರಾಜ ಹೊಸಮನಿ ವಿರಚಿತ “ಡಾ. ಎಸ್. ಎಸ್. ನರಸಣಗಿ”.
‘ಲಿಂಗಾಯತ ಪುಣ್ಯ ಪುರುಷ ಸಾಹಿತ್ಯ ರತ್ನಮಾಲೆ’ ಮಾಲಿಕೆ ಕಾರ್ಯಕ್ರಮದಲ್ಲಿ, ಉಪನ್ಯಾಸಗೊಂಡಂತಹ ಸ-ವಿವರಕ್ಕೆ ಅಕ್ಷರ ರೂಪದ ದಾಖಲೆ ರೂಪಿಸಿರುವುದು ‘ಡಾ ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ’ಯ ಹೆಮ್ಮೆಯೇ ಸರಿ.
ಡಾ ಎಸ್ ಎಸ್ ನರಸಣಗಿಯವರ ಒಡನಾಡಿಗಳಾಗಿ ಅವರ ಬದುಕನ್ನು ಅಕ್ಷರರೂಪದಲ್ಲಿ ಕಟ್ಟಿಕೊಡುವಲ್ಲಿ ಕೃತಿಕಾರರು ಗೆದ್ದಿದ್ದಾರೆ. ಕೃತಿ ಓದುತ್ತಾ ಸಾಗಿದಂತೆ, ನರಸಣಗಿಯವರ ಮಾದರಿ ಆದರ್ಶ ಜೀವನ ನಮ್ಮನ್ನು ಭಾವಪರವಶರನ್ನಾಗಿಸುತ್ತದೆ. ಯಾವತ್ತಿಗೂ ತಮ್ಮ ಮನೆಯ ಕಡೆ ಮುಖ ಮಾಡಿ ಚಿಂತಿಸದೆ, ಸಮಾಜಮುಖಿಯಾಗಿಯೇ ಇದ್ದು, ಸಮಾಜವನ್ನೇ ತನ್ನ ಮನೆ, ಅವರೇ ನಮ್ಮವರು ಎಂದು ಬದುಕಿದ ಗಿರಿಶೃಂಗ ಡಾ ನರಸಣಗಿಯವರು. ಅಂತೆಯೇ ನರಸಣಗಿಯವರ ಧರ್ಮಪತ್ನಿ ಲಕ್ಷ್ಮೀಬಾಯಿಯವರ ಬದುಕೂ ಕೂಡ. ತನ್ನ ಪತಿಯ ಸಮಾಜ ಸೇವೆಗೆ ಬೆನ್ನೆಲುಬಾಗಿ ಮನೆಯ ಯಾವ ಕಷ್ಟಗಳನ್ನೂ ತೋರಿಸದೆ, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಪತಿಯ ಮನಕ್ಕೆ ಮನೆಯ ಚಿಂತೆ ಹಚ್ಚಿಸದಂತೆ ಕಾಳಜಿ ಮತ್ತು ಜಾಗ್ರತೆವಹಿಸಿದವರು.
**
ಕುಗ್ರಾಮದಲ್ಲಿ ಸಾಧಾರಣ ಬಡವರ ಮನೆಯಲ್ಲಿ ಜನ್ಮ ತಾಳಿದ ಡಾ ಎಸ್ ಎಸ್ ನರಸಣಗಿಯವರು ಬಡವರ ಬಂಧು ಆಗಿ ಬೆಳೆದದ್ದು ಈಗ ಇತಿಹಾಸ ಮತ್ತು ಆದರ್ಶ. ಬಿಜಾಪುರ ಜಿಲ್ಲೆ ಮುದ್ದೇಬಿಹಾಳಿನ ಗುಡಿಹಾಳ ಗ್ರಾಮದಲ್ಲಿ ಅವತರಿಸಿದ (ವೈದ್ಯೋ) ನಾರಾಯಣ. ಅಂತರಾಷ್ಟ್ರಿಯ ಮಟ್ಟದಲ್ಲಿ ತಮ್ಮ ನಾಮವನ್ನು ಪಸರಿಸಿದುದು ನಮ್ಮ ಕನ್ನಡ ನಾಡಿನ ಅದೃಷ್ಟ ಮತ್ತು ಹೆಮ್ಮೆಯೂ ಕೂಡ. ತನ್ನ ಹೆಣ್ಣಜ್ಜಿ(ಗಂಗಮ್ಮ)ಗೇ ದತ್ತು ಪುತ್ರನಾಗಿ ಬರುತ್ತಾರೆ. ದತ್ತು ಬಂದುದರಿಂದಲೇ ಇವರು ತಮ್ಮ ತಂದೆಯ ಮನೆತನದ ಹೆಸರಾದ ‘ಯಾಳವಾರ’ದ ಬದಲಾಗಿ ಅಜ್ಜಿಯ ಮನೆತನದ ಹೆಸರಾದ ನರಸಣಗಿ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ಎಸ್ ಎಸ್ ನರಸಣಗಿ ಎಂದರೆ, ಸೊಲಬಣ್ಣ ಸೊಲಬಪ್ಪ(ಹೆಣ್ಣು ತಾತನ ಹೆಸರು) ನರಸಣಗಿ. ದತ್ತು ಬಂದ ಬಳಿಕ ತಾತನ ಹೆಸರೇ ತಂದೆಯ ಸ್ಥಾನದಲ್ಲಿ ಉಳಿಯುತ್ತದೆ. ಈ ಸೊಲಬಣ್ಣ ಬಾಲ್ಯದಿಂದಲೇ ಅಜ್ಜಿಯ ನೆರಳಲ್ಲೇ ಬೆಳೆದು ಇಡೀ ಊರಿಗೆ ನೆರಳಾಗುವಷ್ಟು ಎತ್ತರಕ್ಕೇರುತ್ತಾರೆ ಎಂಬುದು ಈಗಲೂ ಆ ಮನೆತ ಐದುನದ ಹೆಮ್ಮೆಯಾಗಿದೆ.
**
ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಾರದ ಮನೆಯಲ್ಲಿ ತಮ್ಮ ಉದರವನ್ನು ಪೋಷಿಸಿಕೊಂಡು, ತಮ್ಮ ಜ್ಞಾನಾರ್ಜನೆಯ ಹಸಿವನ್ನು ಸಂಪೂರ್ಣವಾಗಿ ನೀಗಿಸಿಕೊಂಡ ನರಸಣಗಿಯವರು, ಬಾಲ್ಯದಲ್ಲೇ ತಮ್ಮ ನಿಜ ತಂದೆ ತಾಯಿಯನ್ನು ಕಳೆದುಕೊಂಡರೂ, ವಿಚಲಿತರಾಗದೆ ತಮ್ಮ ಮೆಟ್ರಿಕ್ ಶಿಕ್ಷಣವನ್ನು ಪೂರೈಸುತ್ತಾರೆ.
ಪ್ರತಿಭಾವಂತ ನರಸಣಗಿಯವರು ಮೆಟ್ರಿಕ್ ಪರೀಕ್ಷೆಯಲ್ಲಿ ಗಣಿತದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದು, ಗಂಗಮ್ಮನವರ ಸಂಬಂಧಿ ಕುಪ್ಪಿ ಬಸವಂತರಾಯರ ಧನ ಸಹಾಯದೊಂದಿಗೆ ಉನ್ನತ ವ್ಯಾಸಂಗ ಮುಂದುವರೆಸುತ್ತಾರೆ. ಈ ಕುಪ್ಪಿ ಬಸವಂತರಾಯರ ಮಗಳೇ, ಲಕ್ಷ್ಮೀಬಾಯಿ.. ಮುಂದೆ ನರಸಣಗಿಯವರ ಧರ್ಮಪತ್ನಿ ಆಗುತ್ತಾರೆ. ಮುಂಚಿತವಾಗಿಯೇ ನನ್ನ ಅಳಿಯ ಎಂದು ನಿರ್ಧರಿಸಿಯೇ ಬಸವಂತರಾಯರು ನರಸಣಗಿಯವರ ಓದಿನ ಖರ್ಚನ್ನು ಹೊತ್ತುಕೊಂಡಿರುತ್ತಾರೆ. ಮುಂದೆ ಬಾಗಲಕೋಟೆಯಲ್ಲಿ ಬೋರ್ಡಿಂಗ್ ನಲ್ಲಿ ಉಳಿದು, ಎಫ್.ವಾಯ್.ಎಸ್ಸಿ ತರಗತಿಗೆ ಪ್ರವೇಶ ಪಡೆದು ಮೆರಿಟ್ನಲ್ಲಿ ಪಾಸಾಗಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಗೆ ಸೇರುತ್ತಾರೆ. ಗಣಿತದಲ್ಲಿ ಜಾಣರಾಗಿದ್ದ ನರಸಣಗಿಯವರನ್ನು ಇಂಜಿನಿಯರಿಂಗ್ (ಗ್ರುಪ್-ಎ)ವಿಭಾಗಕ್ಕೆ ಸೇರಿಸಿದಾಗ, ಬಸವಂತರಾಯರು, ನೀನು ವೈದ್ಯನಾಗ ಬೇಕೆಂದೂ; ಗ್ರುಪ್-ಬಿಗೆ ಸೇರಿದರೆ ಮಾತ್ರ ವೈದ್ಯನಾಗಲು ಸಾಧ್ಯ, ಆ ಗ್ರುಪ್ ಗೆ ಸೇರಿದರೆ ಮಾತ್ರ ಹಣ ಕಳುಹಿಸಿವುದಾಗಿ ಶರತ್ತು ಹಾಕುತ್ತಾರೆ. ”
“ಬಹುಶಃ ನರಸಣಗೆಯವರು ವೈದ್ಯ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಲು, ಈ ಘಟನೆ ಬಹು ಮುಖ್ಯ ಪಾತ್ರ ವಹಿಸುತ್ತದೆ”.
ಇಂಟರ್ ಸೈನ್ಸ್ ಪರೀಕ್ಷೆಯ ಸಂದರ್ಭದಲ್ಲಿ ಅನಾರೋಗ್ಯ ಉಂಟಾದರೂ, ನವಕಲ್ಯಾಣ ಮಠದ ಕುಮಾರಸ್ವಾಮಿಗಳ ವಾಣಿಯಂತೆ ಪರಿಕ್ಷೆ ಬರೆದು ರ್ಯಾಂಕ್ ಬಂದ ನಾಲ್ಕು ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾರೆ….
ಮುಂದೆ MBBS ಮುಗಿಸಿ ಮುಂಬೈಗೆ ಹೋಗುತ್ತಾರೆ, ಸುಸಂದರ್ಭ ಒದಗಿ ಬಂದು, ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ತಮ್ಮ ಸೇವೆ ಪ್ರಾರಂಭಿಸುತ್ತಾರೆ. ಡಾ ಜೀತು ಮೆಹತಾ ಅವರ ಮಾರ್ಗದರ್ಶನದಲ್ಲಿ ಶಸ್ತ್ರ ಚಿಕಿತ್ಸೆಗೆ ಕೈ ಹಾಕಿದ್ದೇ ಇಲ್ಲಿ. ತಮ್ಮ ಕೈ ಚಳಕದಿಂದ ಯಶಸ್ವಿ ಶಸ್ತ್ರಚಿಕಿತ್ಸಕರಾಗಿ ಹೆಚ್ಚು ಪ್ರಭಾವಶಾಲಿಗಳಾಗುತ್ತಾರೆ. ಹಿರಿಯ ವೈದ್ಯರಿಗೆಲ್ಲಾ ಬೇಕಾಗುತ್ತಾರೆ. ವಿವಿಧ ಶಸ್ತ್ರ ಚಿಕಿತ್ಸೆಯಲ್ಲಿ ನಿಪುಣತೆ ಪಡೆದು “ಶಸ್ತ್ರ ಚಿಕಿತ್ಸೆಯ ಸರ್ವಜ್ಞ” ಎನ್ನುವಂತಾಗುತ್ತಾರೆ.
ನರಸಣಗಿಯವರ ಪ್ರತಿಭೆ ಎಷ್ಟಿತ್ತೆಂದರೆ, ಹಿರಿಯ ಸೂಪರಿಂಟೆಂಡೆಂಟ್ ಅವರು ಗುರುತಿಸಿದ ರೋಗ ತಪ್ಪು ಎಂದು ತಾವು ಸರಿಯಾಗಿ ಡಯಾಗ್ನೋಸ್ ಮಾಡಿ ಸಾಬೀತು ಕೂಡ ಮಾಡುತ್ತಾರೆ. ಹೀಗೆ ಪ್ರತಿಭಾನ್ವಿತರಾಗಿ ಹೆಸರುವಾಸಿಯಾಗಿದ್ದ ನರಸಣಗಿ ಅವರಿಗೆ, ಮಾತೃ ಭೂಮಿ ತಾಯ್ನಾಡು ಸೆಳೆಯುತ್ತಿರುತ್ತದೆ. ಹೀಗಾಗಿ ಮುಂಬೈಯಲ್ಲಿ ವಿಫುಲ ಅವಕಾಶಗಳಿದ್ದರೂ ಕೈ ಚೆಲ್ಲಿ ತಾಯ್ನಾಡಿಗೆ ಬರುತ್ತಾರೆ. ಆದರೆ, ತಾಯ್ನಾಡಲ್ಲಿ ಇವರ ಪ್ರತಿಭೆಯನ್ನು ಕಂಡು ಮಾತ್ಸರ್ಯ ಪಟ್ಟವರೇ ಹೆಚ್ಚು ಎಂದು ಕೃತಿಯಲ್ಲಿ ಕಾಣಸಿಗುತ್ತದೆ. ಬಸವಣ್ಣನವರ ವಾಣಿಗೆ ವಿರುದ್ಧವಾಗಿ ಇವನಮ್ಮವ ಇವನಮ್ಮವ ಎಂದು ಯಾರು ಅನ್ನಲಿಲ್ಲ, ಇದು ವಿಪರ್ಯಾಸ ಎಂದು ಕೃತಿಕಾರರಾದ ಹೊಸಮನಿಯವರು ತಮ್ಮ ಖೇದವನ್ನು ವ್ಯಕ್ತಪಡಿಸುತ್ತಾರೆ.
ಮುಂಬೈನಲ್ಲಿ ಎಂ ಎಸ್, ಪೂರ್ಣಗೊಳಿಸಿ ಬಿಜಾಪುರಕ್ಕೆ ಬಂದರೆ, ಇಲ್ಲಿ ಎಲ್ಲ ವೈದ್ಯರಿಂದ ತಿರಸ್ಕಾರಕ್ಕೊಳಪಡುತ್ತಾರೆ. ರಾಯಚೂರು, ಹುಬ್ಬಳ್ಳಿಯಲ್ಲೂ ಇದೇ ಧೋರಣೆ ಕಂಡು, ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ಆಶೀರ್ವಾದದ ನುಡಿಯಂತೆ, ಕಲಬುರ್ಗಿಗೆ ಬರುತ್ತಾರೆ. ಕಲಬುರ್ಗಿಯಲ್ಲೇ ತಮ್ಮ ಜೀವಮಾನದ ಅರ್ಧ ಆಯುಷ್ಯವನ್ನು ರೋಗಿಗಳ ಸೇವೆಯಲ್ಲಿ ಕಳೆಯುತ್ತಾರೆ. ಬಹಳಷ್ಟು ಖ್ಯಾತಿಯನ್ನು ಕಲಬುರ್ಗಿಯ ವೈದ್ಯಕೀಯ ಸೇವೆಯಿಂದಲೇ ಗಳಿಸುತ್ತಾರೆ, ಅಲ್ಲದೆ ಅನೇಕ ವೈದ್ಯರ ಹೊಟ್ಟೆಕಿಚ್ಚಿಗೂ ಇಲ್ಲೇ ಗುರಿಯಾಗುತ್ತಾರೆ ಎಂಬುದು ವಿಷಾದನೀಯವೆಂದು ಹೊಸಮನಿಯವರು ಬೇಸರ ವ್ಯಕ್ತಪಡಿಸುತ್ತಾರೆ.
ಸತತ ೨೭ ವರ್ಷ ಕಲಬುರ್ಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ, ಉಚಿತ ಶಸ್ತ್ರ ಚಿಕಿತ್ಸೆಯನ್ನು ನೀಡುತ್ತಾರೆ. ಸತತ ೨೭ ವರ್ಷದ ಉಚಿತ ಸೇವೆ ಸಲ್ಲಿಸಿದ ಈ ಮಹಾನ್ ಪುರುಷರಿಗೆ ನಿಜವಾಗಲೂ ಸಲ್ಲಬೇಕಾದ ಮನ್ನಣೆ ಸಲ್ಲಲಿಲ್ಲ, ಸಿಗಬೇಕಾದ ಗೌರವ ಪ್ರಶಸ್ತಿಗಳು ಸಿಕ್ಕಿಲ್ಲ ಎಂಬುದು ನೋವಿನ ಸಂಗತಿ ಎನ್ನುತ್ತಾರೆ ಲೇಖಕರು. ಇದು ನಮ್ಮ ನಾಡಿನ ಬಗ್ಗೇ ನಾವೇ ನಾಚಿಕೆ ಪಡುವ ವಿಷಯ ಎಂಬುದು ಸತ್ಯ. ಅಷ್ಟೇ ಅಲ್ಲದೇ ತಮ್ಮ ಲಿಂಗಾಯತ ಸಮಾಜದಲ್ಲೇ ತುಳಿತಕ್ಕೊಳಪಟ್ಟು ಮಾತ್ಸರ್ಯಕ್ಕೊಳಪಟ್ಟಿದ್ದು ಉಚಿತವಲ್ಲ. ನಮ್ಮ ಶರಣರು ತೋರಿದ ಮಾರ್ಗ ಇದು ಅಲ್ಲ ಎಂಬುದನ್ನು ಕೃತಿಕಾರರು ನೋವಿನಿಂದಲೇ ಪ್ರಸ್ತುತಪಡಿಸುತ್ತಾರೆ.
“ಆದಾಗ್ಯೂ ನರಸಣಗಿಯವರು ಪ್ರಶಸ್ತಿಗಳಿಗೆ ಯಾವತ್ತಿಗೂ ಬೆನ್ನು ಮಾಡಿಯೇ ಇದ್ದವರು. ಮುಖಮಾಡಿ ಆಸೆಪಟ್ಟವರೇ ಅಲ್ಲ” ಎನ್ನುತ್ತಾರೆ.
ಕಲಬುರ್ಗಿಯಲ್ಲಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವ ಮಹಾದೇವಪ್ಪ ರಾಮಪುರೆಯವರ ಕನಸಿಗೆ ಜೊತೆಯಾದವರು ಡಾ ನರಸಣಗಿಯವರು. ಈ ಕಾಲೇಜಿನಲ್ಲಿಯೇ PG ಶಿಕ್ಷಣ ಲಭ್ಯವಾಗುವಂತೆ ಮಾಡಿದವರೂ ನರಸಣಗಿಯವರೇ. ಜೊತೆಗೆ ೬೪ ಸೀಟುಗಳ ಪ್ರವೇಶಾತಿಯನ್ನು ೧೦೦ ಕ್ಕೇರುವಂತೆಯೂ ಮಾಡುತ್ತಾರೆ.
ತಮ್ಮ ಸಂಪೂರ್ಣ ಸೇವೆಯನ್ನು ಬಡಜನರಿಗೆ ಮುಡಿಪಾಗಿಟ್ಟ ನರಸಣಗಿಯವರು, ವಿದ್ಯಾರ್ಥಿಗಳೊಂದಿಗೆ ಅನೇಕ ಶಿಬಿರಗಳನ್ನು ಆಯೋಜಿಸಿ, ಹಳ್ಳಿ ಹಳ್ಳಿಗೂ ವೈದ್ಯಕೀಯ ಸೌಲಭ್ಯ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅಲ್ಲದೆ “ಹೊಟ್ಟೆಯಲ್ಲಿ ಕೀವಿನ ಗಂಟು” ಎಂಬ ಗೊತ್ತಿರದ ರೋಗವನ್ನು ಪರಿಚಯಿಸಿ ವೈದ್ಯಲೋಕವೇ ಬೆರಗಾಗುವಂತೆ ಮಾಡುತ್ತಾರೆ.
*
ಇವರು ಶಿಬಿರ ಏರ್ಪಡಿಸಿ ಆನೆಕಾಲು ರೋಗಕ್ಕೆ ‘ಟ್ರಿಪಲ್ ಎಂಟಿಜನ್’ ಮತ್ತು ಮಕ್ಕಳಿಗೆ ‘ಪೋಲಿಯೋ ಲಸಿಕೆ’ ನೀಡುವ ಆಂದೋಲನವನ್ನು ಪ್ರಾರಂಭಮಾಡಿರುವುದನ್ನು ಕಂಡು ಸರಕಾರವೇ ಕಡ್ಡಾಯವಾಗಿ ಈ ಲಸಿಕೆಯನ್ನು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತು…. ಈ ಆಂದೋಲನದ ಮುಖ್ಯ ರೂವಾರಿಗಳೇ ನರಸಣಗಿಯವರು ಎಂಬುದು ಅವರ ಹೆಸರಿಗೆ ಮತ್ತೊಂದು ಗರಿ.
**
ಕಲಬುರ್ಗಿಯಲ್ಲಿ ಇವರ ಸೇವೆಯನ್ನು ಕಂಡು ಮಾತ್ಸರ್ಯ ಪಟ್ಟ ವೈದ್ಯರು, ರಾಜಕಾರಣಿಗಳು, ಇವರಿಗೆ ಸಿಗಬಹುದಾದ ಅವಕಾಶಗಳನ್ನು ಕುತಂತ್ರದಿಂದ ತಪ್ಪಿಸುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೇಗಳನ್ನು ಕೃತಿಕಾರು ದಾಖಲಿಸುತ್ತಾರೆ.
ದೇಹಕ್ಕೆ ಮುಪ್ಪಾದರೂ ಮನಸಿಗೆ ಮುಪ್ಪಿಲ್ಲ ಎಂಬಂತೆ, ನರಸಣಗಿಯವರು ಇಳಿ ವಯಸ್ಸಿನಲ್ಲೂ ಬೀದರ್ ಗೆ ಹೋಗಿ ತಮ್ಮ ವಿದ್ಯೆಯನ್ನು ವಿದ್ಯರ್ಥಿಗಳಿಗೆ ಧಾರೆಯೆರೆಯುತ್ತಿದ್ದರೆಂಬುದನ್ನು ಹೊಸಮನಿಯವರು ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ.
ಈ ಕೃತಿಯಲ್ಲಿ ನರಸಣಗಿಯವರ ಕುರಿತಾಗಿ ಅನೇಕ ಪತ್ರಿಕೆಯವರು ಪ್ರಕಟಿಸಿದ ಕಿರು ಬರಹಗಳು, ಮತ್ತು ನರಸಣಗಿಯವರ ಕುರಿತಾಗಿ ಅನೇಕ ವೈದ್ಯರು ಹೇಳಿದ ಹೇಳಿಕೆಗಳನ್ನು ಬಿತ್ತರಿಸಿದ್ದು ದೇಶ ವಿದೇಶಗಳಲ್ಲೂ ಎಷ್ಟು ತಮ್ಮ ಛಾಪನ್ನು ಮೂಡಿಸಿದ್ದರು, ಎಷ್ಟು ಮೆಚ್ಚುಗೆಯನ್ನು ಸಂಪಾದಿಸಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಅನೇಕ ಹೊಟ್ಟೆಕಿಚ್ಚಿನ ಮನಸ್ಸಿನವರ ನಡುವೆಯೂ, ತಮ್ಮ ಸಧೃಡ ಮನದ ಕಿಚ್ಚಿನಿಂದ ಸೋಲದೆ ಬಡವರಿಗೆ ಬೆಳಕಾಗಿ ನಿಂತವರು ಡಾ ಎಸ್ ಎಸ್ ನರಸಣಗಿಯವರು ಎಂಬುದು ಈ ಕೃತಿಯಿಂದ ತಿಳಿಯಬಹುದಾಗಿದೆ.
**
ಒಂದೇ ಓದಿನಲ್ಲಿ ಓದಿಸಿಕೊಂಡು ಹೋಗುವಷ್ಟು ಆಪ್ತವಾಗಿ ಕೃತಿಕಾರರಾದ ಗಿರಿರಾಜ ಹೊಸಮನಿಯವರು ಈ ಕೃತಿಯನ್ನು ಬರೆದಿದ್ದಾರೆ.
. ಕೇವಲ ಪುಸ್ತಕ ಮಾಡಬೇಕೆಂದು ಹೊರಟರೆ ಸಾಕಷ್ಟು ಸಾಹಿತ್ಯ ಪ್ರಕಾರಗಳಲ್ಲಿ ಕಾರ್ಮಗೈಯಬಹುದು, ಆದರೆ ಒಬ್ಬ ವ್ಯಕ್ತಿಯ ಕುರಿತಾಗಿ ಕೃತಿ ರೂಪಿಸಬೇಕಾದರೆ, ಸಮಗ್ರ ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಕಾಲ್ಪನಿಕತೆಗೆ ಕೃತಿಯಲ್ಲಿ ಸ್ಥಳಾವಕಾಶ ಇರುವುದಿಲ್ಲ. ಸತ್ಯಕ್ಕೆ ಹತ್ತಿರವಾಗಿದೆ ಎನ್ನಲು ಬರುವುದಿಲ್ಲ. ಸಂಪೂರ್ಣ ಸತ್ಯವಾದುದನ್ನೇ ಬರೆಯಬೇಕಾಗುತ್ತದೆ. ಸಂಶೋಧನೆ ಮಾಡಬೇಕು, ದೇಶ ಸುತ್ತಿ ಅವರ ಒಡನಾಡಿಗಳ ಸಂಪರ್ಕ ಸಾಧಿಸಿ ಮಾಹಿತಿ ಕಲೆಹಾಕಬೇಕು. ಅಷ್ಟೇ ಅಲ್ಲದ ಅವರ ಕುರಿತಾದ ಲೇಖನಗಳನ್ನೂ ಓದಬೇಕು. ಇದೇನು ಅಷ್ಟು ಹೈರಾಣ ಅಲ್ಲದಿದ್ದರೂ ಊರೂರು ಸುತ್ತಿ ಅಪರಿಚಿತರನ್ನು ಪರಿಚಯಿಸಿಕೊಂಡು ಮಾಹಿತಿ ಸಂಗ್ರಹಿಸುವುದು ಕಷ್ಟಸಾಧ್ಯದ ಕಾರ್ಯ. ಈ ಎಲ್ಲ ಕಾರ್ಯಗಳನ್ನೂ ಕೃತಿಕಾರರಾದ ಹೊಸಮನಿಯವರು ತಪಸ್ಸಿನಂತೆ ಮಾಡಿರುವುದರಿಂದ ಈ ದಿನ, ಮಹಾನ್ ವ್ಯಕ್ತಿಯಾದ ನರಸಣಗಿಯವರ ಪರಿಚಯ ನಮಗೆ ದಕ್ಕಿದೆ, ಇದು ನಮ್ಮ ನಾಡಿನ ಅದೃಷ್ಟವೂ ಕೂಡ.
**
(ಶ್ರೀ ಗಿರಿರಾಜ ಹೊಸಮನಿ ಶಿಕ್ಷಕರು ಲಿಂಗಸುಗೂರು)
ನಮ್ಮ ಕೃತಿಕಾರರು ನರಸಣಗಿಯವರ ಅನೇಕ ಅನುಭವಗಳ ದಾಖಲೆಯನ್ನು ಈ ಕೃತಿಯಲ್ಲಿ ಚಿತ್ರಿಸಿ; ನರಸಣಗಿಯವರ ಬದುಕನ್ನು ನಮ್ಮ ಮುಂದೆ ಸಂಪೂರ್ಣವಾಗಿ ತೆರೆದಿಟ್ಟಿದ್ದಾರೆ. ಅವರ ಪರಿಶ್ರಮಕ್ಕೆ ಖಂಡಿತವಾಗಿ ಅಭಿನಂದನಾಪೂರ್ವಕ ಸನ್ಮಾನ ಗೈಯಬೇಕಿದೆ. ಹೇಗೆ ನರಸಣಗಿಯವರಿಗೆ ದೇಹದ ಮುಪ್ಪು ವೃತ್ತಿಗೆ ಬಾಧಿಸಲಿಲ್ಲವೋ, ಹಾಗೆಯೇ ಶ್ರೀಯುತ ಗಿರಿರಾಜ ಹೊಸಮನಿಯವರ ದೇಹದ ಮುಪ್ಪು ಅವರ ಪ್ರವೃತ್ತಿಗೆ, ಓದಿನ ದಾಹಕ್ಕೆ ಬರೆಯುವ ಹುಮ್ಮಸ್ಸಿಗೆ ಬಾಧಿಸುತ್ತಿಲ್ಲ ಎಂದೇ ಹೇಳಬಹುದು. ಈ ಇಳಿ ವಯಸ್ಸಿನಲ್ಲೂ ಯುವ ಮನಸಿನ ಹೊಸಮನಿಯವರು ಸದಾ ಕ್ರಿಯಾಶೀಲರಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಇಂತಹ ಕೃತಿ ರಚಿಸುವಲ್ಲಿಯೂ ಶ್ರಮಿಸಿದ್ದಾರೆನ್ನುವುದು ನಮ್ಮಂತಹ ಯುವ ಪೀಳಿಗೆಯವರಿಗೆ ಮಾದರಿಯಾಗಿದೆ…. ಅವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ, ಅಂತೆಯೇ ಅವರಿಂದ ಮತ್ತಷ್ಟು ಸಾಹಿತ್ಯ ಹೊರಹೊಮ್ಮಿ ನಮ್ಮಂತಹ ಕಿರಿಯರಿಗೆ ದಾರಿದೀಪವಾಗಲಿ ಎಂದು ಆಶಿಸುತ್ತ, ಈ ಕೃತಿ ನಾಡಿನಾದ್ಯಂತ ಪ್ರಸಿದ್ಧವಾಗಲಿ, ಕೃತಿ ಮತ್ತು ಕೃತಿಕಾರರ ಹೆಸರು ಮನೆಮಾತಾಗಲಿ ಎಂಬ ಆಶಯದೊಂದಿಗೆ ನನ್ನ ಮಾತಿಗೆ ವಿರಾಮ ನೀಡುತ್ತೇನೆ.
. ವರದೇಂದ್ರ ಕೆ ಮಸ್ಕಿ
೯೯೪೫೨೫೩೦೩೦
——————–+———–_———–
ಇಂದಿನ ಸಂಚಿಕೆಯ ಪ್ರಾಯೋಜಕರು SUM ಕಾಲೇಜು ಲಿಂಗಸುಗೂರು