ಶಿವಸ್ಮರಣೆ


ಶಿವಸ್ಮರಣೆ
ತರಳಬಾಳು ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರಕಮಲ ಸಂಜಾತ
ರಂಗ ಜಂಗಮರೆಂದೇ ಖ್ಯಾತರಾದ
ಸಾಣೆಹಳ್ಳಿ ಮಠದ ಪೀಠಾದ್ಯಕ್ಷರಾದ.
ಡಾ! ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಜನ್ಮ ವರ್ಧಂತಿಯ
ಶುಭಾಶಯಗಳು

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕನಸಿನ ಬಳ್ಳಿ. ಜವಾನ ಕೆಲಸ ಬಯಸಿ 1967ರಲ್ಲಿ ಸಿರಿಗೆರೆಗೆ ಬಂದವರು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಸಿರಿಗೆರೆಯಲ್ಲೇ ಪಿಯುಸಿ ಸೇರಿ ಬಿ ಎ ಪದವಿಯಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮ ರ‍ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದರು. 1974ರಲ್ಲಿ ಮೈಸೂರಲ್ಲಿ ಎಂ ಎ ಪದವಿಯಲ್ಲೂ ತತ್ವಶಾಸ್ತ್ರದಲ್ಲಿ

ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದರು. 1977 ಡಿಶಂಬರ್ 25 ರಂದು ಸಾಣೇಹಳ್ಳಿ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡರು.

ಪೂಜ್ಯರು ಜನಿಸಿದ್ದು (4/9/1951) ಹೆಡಿಯಾಲ ಪೂರ್ವಾಶ್ರಮದ ಗ್ರಾಮದಲ್ಲಿ (ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು). ತಂದೆ ನಾಗಯ್ಯ, ತಾಯಿ ಶಿವನಮ್ಮ. ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ. ಪ್ರೌಢ ಶಿಕ್ಷಣ ಸುಣಕಲ್ಬಿದರೆಯಲ್ಲಿ. ಕಾಲೇಜು ಶಿಕ್ಷಣ ಸಿರಿಗೆರೆಯಲ್ಲಿ.ಸ್ನಾತಕೋತ್ತರ ಪದವಿ ಮೈಸೂರಲ್ಲಿ. ಆಗ ಸ್ವಲ್ಪ ಹಣ ಕಟ್ಟಿ ಚಿನ್ನದ ಪದಕ ಪಡೆಯಲು ವಿಶ್ವವಿದ್ಯಾಲಯ ಸೂಚಿಸಿದಾಗ ಅಂಥ ಪದಕವೇ ಬೇಡವೆಂದು ಪ್ರತಿಭಟಿಸಿದ ಬಂಡಾಯ ಮನೋಧರ್ಮದವರು.

ಶ್ರೀಗಳ ಸೇವಾ ಕ್ಷೇತ್ರಗಳು ಹಲವಾರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರು. ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷರು. ಸಿರಿಗೆರೆಯ ಎಂ ಬಿ ಆರ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಹಾಪೋಷಕರು. ವಚನಮಂಟಪದ ಅಧ್ಯಕ್ಷರು. ಶಿವಸಂಚಾರದ ಶಿವಶಿಲ್ಪಿಗಳು. ಪರಿಸರ ರಕ್ಷಣೆ, ಪುಸ್ತಕ ಪ್ರೇಮ, ಸಾಹಿತ್ಯ ಕೃಷಿ, ರಂಗಚಟುವಟಿಕೆ, ವೈಚಾರಿಕ ಮುನ್ನೋಟ, ನಿರಂತರ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಪಾರ ಜನಮನ್ನಣೆಗಳಿಸಿದ್ದಾರೆ.

ಗ್ರಾಮೀಣ ಜನರ, ದೀನದಲಿತರ ಬಗ್ಗೆ ವಿಶೇಷ ಕಾಳಜಿಯುಳ್ಳ ಶ್ರೀಗಳು ಅವರ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಪರಿಹರಿಸುವ ಪ್ರಯತ್ನ ಮಾಡುವರು.
ಪೂಜ್ಯರ ಲೇಖನಿಯಿಂದ ಇದುವರೆಗೆ 50ಕ್ಕೂ ಹೆಚ್ಚು ವೈಚಾರಿಕ ಕೃತಿಗಳು ಹೊರಬಂದಿವೆ. ಹಲವು ಪತ್ರಿಕೆಗಳಲ್ಲಿ ಲೇಖನ ಬರೆಯುವ ಜೊತೆಗೆ ಪ್ರಜಾವಾಣಿಯ ಬಾಳಬುತ್ತಿಯ ಅಂಕಣಕಾರರಾಗಿದ್ದರು. ನೇರ, ನಿಷ್ಠುರ ನಡೆ ನುಡಿಯ ಇವರು ಸಂನ್ಯಾಸಿಗಳಲ್ಲೇ ಅಪರೂಪದ ವ್ಯಕ್ತಿತ್ವವುಳ್ಳವರು. ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತರನ್ನೆಲ್ಲ ಒಂದೇ ವೇದಿಕೆಯಲ್ಲಿ ಸೇರಿಸಿ ಅವರಿಗೆ ಬೆಳ್ಳಿಯ ಬೆತ್ತ, ಮೈಸೂರು ಪೇಟ ನೀಡಿ ಗೌರವಿಸಿದ್ದು ರಂಗಭೂಮಿಯ ಇತಿಹಾಸದಲ್ಲೇ ಸ್ಮರಣೀಯ.

ಹೊಸದುರ್ಗದಲ್ಲಿ 2004 ರಲ್ಲಿ ನಡೆದ ‘ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ’ ಅಧ್ಯಕ್ಷತೆ ವಹಿಸಿದ್ದು ಪೂಜ್ಯರ ಸಾಹಿತ್ಯ ಪ್ರೇಮಕ್ಕೆ ಹಿಡಿದ ಕನ್ನಡಿ. ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ, ಅಂತರ ರಾಷ್ಟ್ರೀಯ ನಾಟಕೋತ್ಸವ ನಡೆಸಿದ್ದಾರೆ. ಬಸವಣ್ಣನವರ ಬದುಕಿನ ಸುತ್ತ ಹೆಣೆದ ಮೂರು ಕನ್ನಡ ನಾಟಕಗಳನ್ನು ಹಿಂದಿಯಲ್ಲಿ ಕಲಿಸಿ ‘ಭಾರತ ರಂಗಸಂಚಾರ’ ಏರ್ಪಡಿಸಿದ್ದು ಭಾರತೀಯ ರಂಗಭೂಮಿಯ ಇತಿಹಾಸದಲ್ಲೇ ದಾಖಲಾರ್ಹವಾದುದು.
ಮಠ ಮತ್ತು ಮಠಾಧೀಶರನ್ನು ಅನುಮಾನದಿಂದ ನೋಡುವ ಈ ಕಾಲದಲ್ಲೂ ಇದಕ್ಕೆ ಅಪವಾದವಾಗಿದ್ದಾರೆ ಶ್ರೀಗಳು.

ತಮ್ಮ ಪರಿಶ್ರಮ, ಜನಪರ ಕಾಳಜಿ, ವೈಚಾರಿಕತೆ, ರಂಗಾಸಕ್ತಿ, ಸಾಹಿತ್ಯಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಲವು, ವೈಚಾರಿಕ ಲೇಖನ, ಭಾಷಣಗಳ ಮೂಲಕ ಸಹೃದಯರ ಗಮನ ಸೆಳೆದಿದ್ದಾರೆ. ಸ್ವಾಮಿಗಳೆಂದರೆ ಮೂಗು ಮುರಿಯುತ್ತಿದ್ದ ಬುದ್ಧಿಜೀವಿಗಳೆನ್ನುವವರೂ ಶ್ರೀಗಳ ಬಗ್ಗೆ ವಿಶ್ವಾಸ, ಗೌರವ ತೋರುತ್ತಿದ್ದಾರೆ. ಇಂದು ಸಾಣೇಹಳ್ಳಿ ನಾಡಿನ ಎಲ್ಲ ವರ್ಗದ ಜನರ ಗಮನ ಸೆಳೆಯಲು ಕಾರಣವಾದದ್ದು ಶ್ರೀಗಳವರ ರಂಗಭೂಮಿಯ ಚಟುವಟಿಕೆಗಳೇ.

ಹೀಗಾಗಿ ಅವರು ರಂಗಜಂಗಮರೆಂದೇ ಪ್ರಖ್ಯಾತರಾಗಿದ್ದಾರೆ. ಪೂಜ್ಯರ ರಂಗಸಾಧನೆ ಗಮನಿಸಿ 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’ ನೀಡಿದ್ದರೆ, 2004ರಲ್ಲಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ‘ಫಾಲ್ ಹ್ಯಾರಿಸ್’ ಪ್ರಶಸ್ತಿ ನೀಡಿ ಅಭಿನಂದಿಸಿದೆ.

ಮೂಲ= ಚೆನ್ನಬಸವಣ್ಣ ಮುಚ್ಚನೂರು ಲಿಂಗಾಯತ ಕನ್ನಡಿಗ

ಕೃಪೆ= ಅಂಜಲಿ ಚನ್ನಬಸಪ್ಪಗೋಳ ರಾಷ್ಟ್ರೀಯ ಬಸವದಳ ಬೀರನಗಡ್ಡಿ

Don`t copy text!