ಬಸವಣ್ಣವರ ವಚನಗಳಲ್ಲಿ ಗುರು
ಅಷ್ಟಾವರಣದಲಿ ಮೊದಲನೆ ಆವರಣವಾದ ಈ ‘ಗುರು’ ಅಂದರೆ ಯಾರು ? ಗುರು ಎಂದರೆ ವ್ಯಕ್ತಿಯೆ, ತತ್ವವೆ ಹೀಗೆ ಹತ್ತು ಹಲವು ಪ್ರಶ್ನೆಗಳು ಮನದ ಮುಂದೆ ಬಂದು ಕಾಡುವವು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಒಂದು ಪುಟ್ಟ ಪ್ರಯತ್ನ.
ಪ್ರತಿ ವಿಷಯ , ವ್ಯಕ್ತಿಗೂ ಬೆಳವಣಿಗೆಯ ಹಂತಗಳಿರುತ್ತವೆ. ಇದು ಸಹಜವಾದ ಪ್ರಕೃತಿಯ ಪರಿವರ್ತನೆಯ ನಿಯಮ. ಹೊರ ಜಗತ್ತು ಹಾಗೂ ಒಳಜಗತ್ತಿನ ಸಮನ್ವಯದೊಂದಿಗೆ ವ್ಯಕ್ತಿ ಬೆಳೆವಂತೆ ಅಂತರಂಗ ಹಾಗೂ ಬಹಿರಂಗಗಳೆರಡೂ ಪೂರಕವಾಗಿ ವಿಕಾಸವಾಗುವದನ್ನು ನಾವು ಕಾಣುತ್ತೇವೆ. ಯಾರೂ ಉದ್ಬವಮೂರ್ತಿಯಾಗಿ ಹುಟ್ಟುವುದಿಲ್ಲ. ತನ್ನ ಸುತ್ತಲಿನ ಪರಿಸರ, ಸಂಸ್ಕೃತಿ, ಸಂಸ್ಕಾರ , ಆನುವಂಶಿಕತೆ ಎಲ್ಲವೂ ಕಾರಣವಾಗಿ ಹುಟ್ಟಿನಿಂದ ಸಾವಿನವರೆಗೂ ಮನುಷ್ಯನಿಗೆ ಬೆಳವಣಿಗೆ ಹಂತಗಳು ಇರುತ್ತವೆ. ಭೌತಿಕ ಬೆಳವಣಿಗೆ ಒಂದು ಹಂತಕ್ಕೆ ಸ್ಥಗಿತವಾಗುವುದು ಆದರೆ ಬೌದ್ಧಿಕ ಬೆಳವಣಿಗೆ ನಿರಂತರ. ಹೀಗೆ ಕಲಿಕೆ ಎನ್ನುವುದು ಬದುಕು ಪೂರ್ತಿ ಇರುವಂಥದು. ಎಷ್ಟೋ ವ್ಯಕ್ತಿ, ವಿಷಯ ಗಳು ಗುರುವಾಗಿ ಮಾರ್ಗ ತೋರುವವು.
ಈಗ ಗುರುವಿನ ಮಹತಿ ಒಂದು ಉದಾಹರಣೆ ಮೂಲಕ ನೋಡೋದಾದರೆ …..ಒಂದು ಉತ್ತಮವಾದ ಪುಸ್ತಕ ಓದಿ ಮುಗಿಸಿ ಆದ ಮೇಲೆ ಆಗುವ ಪರಿಣಾಮದ ಪರಿವರ್ತನೆ, ಪ್ರಗತಿ, ಆನಂದವನ್ನ ಕಂಡಮೇಲೆ ಆ ಪುಸ್ತಕ ನಿರುಪಯುಕ್ತ ಎನಬಹುದೆ? ಹಾಗೆ ದಾರಿತೋರಲು ಗುರು ಬೇಕು. ಭುವಿಯ ಬೆಳಗಿಗೆ ರವಿ ಹೇಗೆ ಕಾರಣನೋ ಹಾಗೆ ಪಿಂಡಾಂಡದ ಆಂತರ್ಯದ ಜ್ಞಾನದ ಬೆಳಗಿಗೆ ಸಾಕಾರ ರೂಪದ ಗುರು, ನಿರಾಕಾರರೂಪದ ಲಿಂಗತತ್ವ ಎರಡೂ ಕಾರಣವಾಗಬಲ್ಲವು.
ಇನ್ನು ಈ ವಿಷಯವನ್ನು ಬಸವ ವಚನಗಳ ನೆಲೆಗಟ್ಟಿನಲ್ಲಿ ವಿಶ್ಲೇಷಿಸೋಣ.
ಮಡಿಕೆಯ ಮಾಡುವರೆ ಮಣ್ಣೇ ಮೊದಲು, ತೊಡಗೆಯ ಮಾಡುವರೆ ಹೊನ್ನೆ ಮೊದಲು, ಶಿವಪಥವರಿವೆಡೆ ಗುರುಪಥವೆ ಮೊದಲು ಕೂಡಲಸಂಗಮ ದೇವನರಿವೆಡೆ ಶರಣರ ಸಂಗವೆ ಮೊದಲು.
ಅಪ್ಪ ಬಸವಣ್ಣನವರ ಈ ವಚನದಲ್ಲಿ ಮಡಿಕೆ ಮಾಡಲು ಮಣ್ಣು ಹೇಗೆ ಮುಖ್ಯವೊ, ಆಭರಣ ಮಾಡಲು ಹೊನ್ನು ಹೇಗೆ ಮುಖ್ಯವೋ ಹಾಗೆ ಈ ಸತ್ಯದ ನೆಲೆಯನ್ನು ಕಂಡುಕೊಳ್ಳಲು ಅಂದರೆ ಶಿವನ ನೆಲೆಯನ್ನು ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಬೇಕು ಎಂಬ ಭಾವವನ್ನು ನಾವಿಲ್ಲಿ ಕಾಣತೇವೆ.
ಇನ್ನು ಗುರುವಿನ ಮಾರ್ಗದರ್ಶನ ಯಾಕೆ ಬೇಕು ಎಂದರೆ….
ಅರಿದಿಹೆನೆಂದರೆ ಅರಿವಿಂಗಸಾಧ್ಯ, ನೆನೆದಿಹೆನೆಂದಡೆ ನೆನಹಿಂಗಸಾಧ್ಯ, ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ ವಾಙ್ಮನಕ್ಕಗೋಚರ ಲಿಂಗವ ಅರಿವ ಪರಿಯಂತಯ್ಯಾ ಗುರುತೋರದನ್ನಕ್ಕ
ಅಂತರಂಗದಲ್ಲಿ ಆಗುವ ಅರಿವು ಅದು ಹೇಗೆ ಸಿಗುವದು ಅದು ಕೊಂಡುಕೊಳ್ಳುವ ವಸ್ತುವಲ್ಲ. ಅದು ಅರಿವಿಗೆ, ನೆನಹಿಗೆ, ಭಾವಕ್ಕೆ ಸಿಗದ ಅಗೋಚರವಾದ ತನ್ನಷ್ಟಕ್ಕೆ ತಾನೇ ಆಗುವ ಸ್ಫುರಣ. ಅದಕ್ಕಾಗಿ ಸಾಧನೆ ಬೇಕು, ಆ ಸಾಧನೆಗಾಗಿ ಮಾರ್ಗ ತೋರುವ ಗುರು ಬೇಕು. ಊರಿಗೆ ದಾರಿ ಆರು ತೋರಿದಡೇನು? ಈ ಬದುಕಿನ ಪಯಣದಲ್ಲಿ ಸಮರ್ಥವಾದ ಗುರು ಆವ ರೂಪದಲ್ಲಿ ಬಂದು ಮಾರ್ಗ ತೋರುವರೋ ಆರು ಬಲ್ಲರು. ಕಲಿವ ಹಂಬಲ,ಸಾಧಿಸುವ ಅದಮ್ಯ ಬಯಕೆ, ತುಡಿತ, ನಿಸ್ವಾರ್ಥ , ಶ್ರದ್ಧೆ, ಇವಿಷ್ಟಿದ್ದರೆ ಮಾರ್ಗ ತಾನೆ ಸಾಗುವದು .
ಇನ್ನು ಈ ಗುರುತೋರಿದ ಮಾರ್ಗದಲ್ಲಿ ಅಡಿಯಿಡುವ ಮುನ್ನ ಬೇಕಾದ ಅನುಸರಿಸಬೇಕಾದ ಸೂತ್ರಗಳಾವವು? .ನೋಡಿ..
ಸ್ವಾಮಿ ಭೃತ್ಯ ಸಂಬಂಧಕ್ಕೆ ಆವುದು ಪಥವೆಂದಡೆ
ದಿಟವ ನುಡಿವುದು ನುಡಿದಂತೆ ನಡೆವುದು, ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲಸಂಗಮದೇವ
ಹೀಗೆ ಅರಿವೆಂಬ ಗುರುವಿನ ಆವಾಹನೆಗೆ ಸತ್ಯವ ನುಡಿವದು, ನುಡಿದಂತೆ ನಡೆವದು ಎರಡೂ ಇದ್ದಾಗಲೆ ಲಿಂಗದ ನೆಲೆ ಸಿಗಲು ಸಾಧ್ಯ.
ಇನ್ನು ಗುರುತೋರಿದ ಮಾರ್ಗದಲ್ಲಿ ನಡೆವವ ಒಬ್ಬ ಸಾಧಕ, ಸಾಮಾನ್ಯ ದಾರಿಹೋಕ ಆತ ಗಮ್ಯ ಸೇರುವ ಬಗೆ ಹೇಗೆ..
ಗುರು ಉಪದೇಶ ಮಂತ್ರ ವೈದ್ಯ
ಜಂಗಮ ಉಪದೇಶ ಶಸ್ತ್ರ ವೈದ್ಯ ಭವರೋಗವ ಕಳೆವ ಪರಿಯ ನೋಡಾ
ಈ ಭವ ಎಂಬ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಲು ಗುರುವಿನ ಉಪದೇಶವು ಮಂತ್ರವೈದ್ಯರಂತೆ ಅಂದರೆ ಒಂದು ಸಿದ್ಧಾಂತದ(theory) ಪರಿಚಯವನ್ನು ಮಾಡ್ತದೆ, ಜಂಗಮ ಉಪದೇಶ ಅಂದರೆ ಪ್ರಾಯೋಗಿಕ (practical) ಆಗಿ ಹೇಳ್ತದೆ. ಈ ಭವವ ಗೆಲ್ಲಲು, ಕ್ರಿಯಾ ಜ್ಞಾನ ಹೇಳುವವ ಗುರು ಆದರೆ, ಜ್ಞಾನದ ವಿಸ್ತಾರ ತೋರುವವ ಜಂಗಮ ಆಗ್ತಾನೆ.
ಪ್ರತಿಯೊಂದು ಬೆಳವಣಿಗೆಗೂ ಎರಡು ಮುಖಗಳಿರ್ತವೆ. ಒಂದು ಪ್ರವೃತ್ತಿ ಇನ್ನೊಂದು ನಿವೃತ್ತಿ. ಒಂದೆಡೆ ಆರೋಹ ನಂತರ ಇನ್ನೊಂದೆಡೆ ಅವರೋಹಣ.
ಗುರು ಸ್ವಾಯತವಾದಬಳಿಕ ಗುರುವ ಮರೆಯಬೇಕಯ್ಯಾ
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ
ಇಂತೀ ಗುರುಲಿಂಗಜಂಗಮ ಪ್ರಸಾದದಲ್ಲಿ ಪರಿಣಾಮಿಯಾಗಿ ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ ಕೂಡಲಸಂಗಮದೇವಾ
ಹೀಗೆ ಅರಿವೆಂಬ ಗುರುವಿಗೆ ಕಾರಣವಾದ ವಸ್ತುವಿಷಯಗಳನ್ನೂ ಮರೆಯಬೇಕಾಗುತ್ತದೆ. ಜಂಗಮವೆಂಬ ಜ್ಞಾನಕ್ಕೆ ಕಾರಣವಾಗುವ ವಿಷಯಗಳನ್ನೂ ಮರೆಯಬೇಕಾಗುತ್ತದೆ. ಅರಿವಿಗೆ ಕಾರಣವಾಗುವ ಕುರುಹುಗಳನೆಲ್ಲಾ ಮರೆಯಬೇಕಾಗುತ್ತದೆ. ಅಂದರೆ ಆಂತರ್ಯದಲ್ಲಿ ಪರಿಣಾಮದ ಪ್ರಸಾದದ ಆನಂದವನ್ನು ಅನುಭವಿಸುವದಕ್ಕೆ ಸಾಧ್ಯ.
ಹೀಗೆ ಎಲ್ಲ ಹಂತಗಳನು ದಾಟಿದಮೇಲೆ ತಮ್ಮಷ್ಟಕ್ಕೆ ತಾನೆ ಉದಯವಾಗುವ ಅರಿವೇ ಗುರುವಾಗುವುದು.
ಒಳಹೊರಗೆ ಬೆಳಗುವ ಜ್ಯೋತಿ ಲಿಂಗವಾಗಿ ಬೆಳಗುವದು……
ಎನ್ನ ಗುರು ಪರಮಗುರು ನೀವೆ ಕಂಡಯ್ಯ, ಎನ್ನ , ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ, ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ ಕೂಡಲಸಂಗಮದೇವಾ
ಕಾಯದೊಳು ಗುರುಲಿಂಗಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿರಿಟ್ಟು ಬಾಹ್ಯ ಸ್ಥಲಕೆ ಕುರುಹಾಗಿ ದಾಯತೋರಿ ಸಮಸ್ತಭಕ್ತನಿಕಾಯವನು ಪಾವನ ಮಾಡಿದ ರಾಯಪೂರ್ವಾಚಾರ್ಯ ಸಂಗನಬಸವ ಶರಣು ಶರಣಾರ್ಥಿ
ಎಂದು
ಹೀಗೆ ಕಾಯದಲಿ ಗುರುಲಿಂಗಜಂಗಮಗಳು ಅಂತಸ್ಥವಾಗಿವೆ, ಅವನು ಕುರುಹು ಹಿಡಿದು ಅರಿಯಬೇಕು ಎಂದು ಸಮಸ್ತ ಭಕ್ತರ ಕಾಯವನು ಪಾವನ ಮಾಡಿದಾತ ಅಪ್ಪ ಬಸವಣ್ಣ ಎಂದು ಚಾಮರಸ ಸ್ಮರಿಸಿರುವನು.
ಇದು ಶಿಷ್ಯನಿಂದ ಗುರುವಾಗುವವರೆಗಿನ ಪಯಣ, ಮರೆವಿನಿಂದ ಅರಿವಿನಡೆಗೆ ನಡೆವ ಪಯಣ, ಕತ್ತಲೆಯಿಂದ ಬೆಳಕಿನೆಡೆಗೆ ಪಯಣ. ಇದು ಅಪ್ಪಬಸವರ ಗುರುವಿನ ಪರಿಕಲ್ಪನೆ .
–ಸುನಿತಾ ಮೂರಶಿಳ್ಳಿ ಧಾರವಾಡ.