ಕನ್ನಡ ಕುವರ ಸರ್.ಎಂ.ವಿಶ್ವೇಶ್ವರಯ್ಯ

ಸೆಪ್ಟೆಂಬರ್ 15 ಇಂಜಿನಿಯರ್ ಗಳ ದಿನ. 

ಕನ್ನಡ ಕುವರ ಸರ್.ಎಂ.ವಿಶ್ವೇಶ್ವರಯ್ಯ

ವಿಶ್ವವಿಖ್ಯಾತ ಇಂಜಿನಿಯರ್, ದಕ್ಷ ಆಡಳಿತಗಾರ ಹಾಗೂ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದ ಕೀರ್ತಿಶೇಷ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸ್ಮರಣೆಗಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 15 ನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತದೆ

ಮಧ್ಯಮ ವರ್ಗದ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಅಂದಿನ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜನ್ನು ಸೇರುತ್ತಾರೆ. ಆ ಸಮಯದಲ್ಲಿ ತಮ್ಮ ನಿರ್ವಹಣಾ ವೆಚ್ಚವನ್ನು ಭರಿಸಲು ಶಾಲಾ ಮಕ್ಕಳಿಗೆ ಭೋದನೆ ಮಾಡುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ವಿಶ್ವೇಶ್ವರಯ್ಯನವರು ಆ ನಂತರ ಪುಣೆಯ ಪ್ರಖ್ಯಾತ ಕಾಲೇಜೊಂದರಲ್ಲಿ ತಮ್ಮ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರೈಸಿ ಅಂದಿನ ಮುಂಬೈ ಸರ್ಕಾರದಲ್ಲಿ ಸಿವಿಲ್ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

ವಿಶ್ವೇಶ್ವರಯ್ಯನವರು ಕನ್ನಡಿಗರಿಗೆಲ್ಲ ಮಾದರಿ ಮೈಸೂರು ಸಂಸ್ಥಾನದ ರೂವಾರಿಗಳೆಂದೇ ಚಿರಪರಿಚಿತರು. ಅವರು ಮೂರು ವರ್ಷಗಳ (1909 – 1912) ಅವಧಿಗೆ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿಯೂ ಆ ನಂತರ ಆರು ವರ್ಷಗಳ (1912 – 1918) ಅವಧಿಗೆ ದಿವಾನರಾಗಿಯೂ ಸೇವೆಸಲ್ಲಿಸಿದರು. ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಅವರು ಇತರರು ತೊoಬತ್ತು ವರ್ಷಗಳಲ್ಲಿ ತೋರಬಹುದಾದ ಸಾಧನೆಯನ್ನು ಮಾಡಿದರು.

ಅಂದಿನ ಮೈಸೂರಿನ ಶ್ರೀಮನ್ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಮಾದರಿ ಮೈಸೂರು ಸಂಸ್ಥಾನದ ಕನಸಿಗೆ ತಮ್ಮ ಅದ್ಭುತ ಇಂಜಿನಿಯರಿಂಗ್ ಪ್ರತಿಭೆ ಹಾಗೂ ದಕ್ಷ ಆಡಳಿತದ ಮೂಲಕ ಮೂರ್ತ ಸ್ವರೂಪವನ್ನು ನೀಡಿದವರು ವಿಶ್ವೇಶ್ವರಯ್ಯನವರು.

ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯನವರಿಂದ ಸಂದ ಕೆಲವು ಪ್ರಮುಖ ಕೊಡುಗೆಗಳು ಈ ಕೆಳಗಿಂನಂತಿವೆ.
1 ಮೈಸೂರಿನ ಕನ್ನಂಬಾಡಿಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜಸಾಗರ ಆಣೆಕಟ್ಟು.
2. ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
3. ಬೆಂಗಳೂರಿನಲ್ಲಿ, ಮೈಸೂರು ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಸ್ಥಾಪನೆ.
4. ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆಯ ಸ್ಥಾಪನೆ.
5. ಶಿವಮೊಗ್ಗ ದಲ್ಲಿ ಗಂಧದ ಎಣ್ಣೆಯ ಕಾರ್ಖಾನೆಯ ಸ್ಥಾಪನೆ.
6.ಬೆಂಗಳೂರಿನಲ್ಲಿ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಹಾಗೂ ಕೃಷಿ ಕಾಲೇಜ್ ಗಳ ಸ್ಥಾಪನೆ.
7. ಮೈಸೂರು ಬ್ಯಾoಕಿನ ಸ್ಥಾಪನೆ.
8. ಮೈಸೂರಿನಲ್ಲಿ ರೇಷ್ಮೆ ಕಾರ್ಖಾನೆಯ ಸ್ಥಾಪನೆ.

ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಿಂದಾಚೆಗೂ ಹಲವೆಡೆ ತಮ್ಮ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಮೆರೆದಿದ್ದಾರೆ. ಅವುಗಳಲ್ಲಿ ಕೆಲವು ಈ ಕೆಳಗಿಂನಂತಿವೆ.
1.ಮುಂಬೈ ಪ್ರಾಂತ್ಯದಲ್ಲಿನ ಖಡಖವಾಸಲದಲ್ಲಿ ಆಣೆಕಟ್ಟಿನಿಂದ ಹೆಚ್ಚಿನ ನೀರು ಹರಿದು ಹೋಗಲು ಸ್ವಯಂಚಾಲಿತ ತೂಬು ಬಾಗಿಲುಗಳನ್ನು ಮೊಟ್ಟಮೊದಲು ಅಳವಡಿಸಿದರು.
2. ಮೂಸಿ ನದಿಯಿಂದ ಹೈದ್ರಾಬಾದ್ ನಗರಕ್ಕೆ ಆಗುತ್ತಿದ್ದ ಪ್ರವಾಹದ ಭೀತಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸಿದರು.
3. ತಿರುಪತಿಯಿಂದ ತಿರುಮಲಕ್ಕೆ ರಸ್ತೆ ಮಾರ್ಗವನ್ನು ನಿರ್ಮಾಣ ಮಾಡಿದರು.
4. ವಿಶಾಖಪಟ್ಟಣದ ಬಂದರಿನಲ್ಲಿ ಆಗುತ್ತಿದ್ದ ಸಮುದ್ರ ಸವಕಳಿಯನ್ನು ತಡೆಗಟ್ಟಲು ಒಂದು ಸೂಕ್ತ ವ್ಯವಸ್ಥೆಯನ್ನು ರೂಪಿಸಿದರು.

ಸಾರ್ವಜನಿಕ ಜೀವನದಲ್ಲಿ ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದರು ಎನ್ನುವುದಕ್ಕೆ ಈ ಕೆಳಗಿನ ಘಟನೆಗಳು ಸಾಕ್ಷಿಯಾಗುತ್ತವೆ.

ಅವರು ದಿವಾನರಾಗಿದ್ದ ಅವಧಿಯಲ್ಲಿ ಒಮ್ಮೆ ಅವರು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ರಾತ್ರಿಯ ವಾಸ್ತವ್ಯವನ್ನು ಹೂಡಿದ್ದರು. ಆಗ ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ವಿಶ್ವೇಶ್ವರಯ್ಯನವರು ಮೇಣದ ಬತ್ತಿಯೊಂದನ್ನು ಹಚ್ಚಿ ತಮ್ಮ ಬರವಣಿಗೆಯಲ್ಲಿ ತೊಡಗಿದ್ದರು. ಸ್ವಲ್ಪ ಸಮಯದ ನಂತರ ಆ ಮೇಣದ ಬತ್ತಿಯನ್ನು ಆರಿಸಿ ಮತ್ತೊಂದು ಮೇಣದ ಬತ್ತಿಯನ್ನು ಹೊತ್ತಿಸಿ ಪುನಃ ತಮ್ಮ ಬರಹವನ್ನು ಮುಂದುವರೆಸಿದರು. ಇದನ್ನು ಗಮನಿಸಿದ ಅವರ ಮಿತ್ರರೊಬ್ಬರು, ಮೊದಲನೇ ಮೇಣದ ಬತ್ತಿಯೇ ಇನ್ನೂ ಕೆಲವು ಗಂಟೆಗಳ ಕಾಲ ಉರಿಯುವಂತ್ತಿದ್ದರೂ, ಅದನ್ನು ನಂದಿಸಿ ಬೇರೆ ಮೇಣದ ಬತ್ತಿಯನ್ನು ಹಚ್ಚಿದ ಔಚಿತ್ಯವೇನು ಎಂಬುದಾಗಿ ವಿಶ್ವೇಶ್ವರಯ್ಯನವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ವಿಶ್ವೇಶ್ವರಯ್ಯನವರು ನೀಡಿದ ಉತ್ತರವೆಂದರೆ, ಮೊದಲನೇ ಮೇಣದ ಬತ್ತಿಯನ್ನು ಹಚ್ಚಿದಾಗ ತಾವು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಪತ್ರವೊಂದನ್ನು ಬರೆಯುತ್ತಿದ್ದು, ಅದಕ್ಕೆ ಸರ್ಕಾರದ ವೆಚ್ಚದಲ್ಲಿ ಖರೀದಿಸಿದ ಮೇಣದ ಬತ್ತಿಯನ್ನು ಉಪಯೋಗಿಸಿ, ಆ ನಂತರ ತಮ್ಮ ಸ್ನೇಹಿತರೊಬ್ಬರಿಗೆ ಖಾಸಗಿ ಪತ್ರವೊಂದನ್ನು ಬರೆಯಬೇಕಾದ್ದರಿಂದ, ತಮ್ಮ ವೈಯಕ್ತಿಕ ಹಣದಿಂದ ಖರೀದಿಸಿದ ಮೇಣದ ಬತ್ತಿಯನ್ನು ಬಳಸಿದ್ದಾಗಿ ಹೇಳುತ್ತಾರೆ. ವಿಶ್ವೇಶ್ವರಯ್ಯನವರ ದೃಷ್ಟಿಯಲ್ಲಿ ಸರ್ಕಾರಿ ವೆಚ್ಚದಲ್ಲಿ ಖರೀದಿಸಿದ ಒಂದು ಮೇಣದ ಬತ್ತಿಯನ್ನು ವೈಯಕ್ತಿಕ ಕೆಲಸಕ್ಕೆ ಬಳಸುವುದು ಅಧಿಕಾರ ಹಾಗೂ ಸರ್ಕಾರೀ ಹಣದ ದುರುಪಯೋಗ ಎಂಬ ಅಭಿಪ್ರಾಯವಾಗಿತ್ತು.

1918 ರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಶ್ರೀಮನ್ಮಹಾರಾಜರೊಂದಿಗೆ ವಿಶ್ವೇಶ್ವರಯ್ಯನವರಿಗೆ ಇದ್ದ ತಾತ್ತ್ವಿಕ ಭಿನ್ನಾಭಿಪ್ರಾಯದಿಂದ, ಅವರು ತಮ್ಮ ದಿವಾನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುತ್ತಾರೆ. ಆ ಸಂಧರ್ಭದಲ್ಲಿ ಅರಮನೆಗೆ ಸರ್ಕಾರೀ ಕಾರಿನಲ್ಲಿ ಬಂದಿಳಿದ ವಿಶ್ವೇಶ್ವರಯ್ಯನವರು ಶ್ರೀಮನ್ಮಹಾರಾಜರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ನಂತರ ಸರ್ಕಾರೀ ಕಾರನ್ನು ಅರಮನೆಯ ಆವರಣದಲ್ಲೇ ಬಿಟ್ಟು, ತಮ್ಮ ಸೋದರಸಂಬಂಧಿಯೊಬ್ಬರ ವಾಹನದಲ್ಲಿ ಹಿಂದಿರುಗಿದರು.

ನಮ್ಮ ಇಂದಿನ ವ್ಯವಸ್ಥೆಯಲ್ಲಿ ಅಧಿಕಾರವನ್ನು ಕಳೆದುಕೊಂಡ ನಂತರವೂ ಧೀರ್ಘ ಕಾಲದವರೆಗೂ ತಮಗೆ ಸರ್ಕಾರ ನೀಡಿದ್ದ ಸವಲತ್ತುಗಳನ್ನು ಬಿಟ್ಟುಕೊಡಲು ಹಿಂಜರೆಯುವ ಭ್ರಷ್ಟ ರಾಜಕಾರಣಿಗಳು ಹಾಗೂ ಸರ್ಕಾರೀ ಅಧಿಕಾರಿಗಳು ಇರುವಾಗ, ವಿಶ್ವೇಶ್ವರಯ್ಯನವರಂಥಹ ಪ್ರಾಮಾಣಿಕರನ್ನು ನಾವು ನಮ್ಮ ಕನಸಿನಲ್ಲೂ ಕಾಣವುದು ದುಸ್ತರವಾದ ಸಂಗತಿ ಎಂಬುವುದರಲ್ಲಿ ಯಾವುದೇ ಅತೀಶಯೋಕ್ತಿಇಲ್ಲ.

ಇಂಥಹಾ ಧೀಮಂತ ಕನ್ನಡಾಂಬೆಯ ಪುತ್ರನಿಗೆ 1955 ರಲ್ಲಿ ಭಾರತ ಸರ್ಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವಿಶ್ವೇಶ್ವರಯ್ಯನವರು ನಿಜ ಅರ್ಥದಲ್ಲೂ ಭಾರತ ರತ್ನವಾಗಿದ್ದರು ಎಂಬುದು, ಕನ್ನಡಿಗರಾದ ನಮ್ಮೆಲ್ಲರಿಗೂ ನಿಜಕ್ಕೂ ಒಂದು ಹೆಮ್ಮೆಯ ಸಂಗತಿ.

ಆದ್ದರಿಂದ, ಅವರ ಜನ್ಮದಿನದ ಈ ಸಂದರ್ಭದಲ್ಲಿ ನಾವೆಲ್ಲರೂ ಅವರಿಗೆ ಶಿರಬಾಗಿ ನಮಿಸಿ ನಮ್ಮ ಗೌರವವನ್ನು ಸಲ್ಲಿಸುವುದು ನಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.

ನಟರಾಜ ಸೋನಾರ, ಕುಷ್ಟಗಿ

Don`t copy text!