ತಿರುವು ಮುರುವು
(ಕತೆ)
ಆರುಗಂಟೆಗೆ ಅಲಾರಾಂ ರಿಂಗಣಿಸುವ ಮೊದಲೇ ಎಚ್ಚರವಾಗಿದ್ದ ಮುಕುಂದರಾಯರು ಏಳುವ ಯೋಚನೆ ಇಲ್ಲದೇ ಹಾಗೇ ಹೊರಳಿ ಮತ್ತೆ ಮಲಗಿಕೊಂಡರು. ಸುಮಾರು ಮುವತ್ತೊಂದು ವರ್ಷಗಳಿಂದ ದಿನಾಲೂ ಆರುಗಂಟೆಗೆ ಅಭ್ಯಾಸ ಬಲದಿಂದ ತಾನಾಗಿಯೇ ಎಚ್ಚರಾಗಿ ಬಿಡುತ್ತಿತ್ತು. ಆದರೆ ಅಲಾರಾಂ ಇಡುವ ಅಭ್ಯಾಸ ತಪ್ಪಿರಲಿಲ್ಲ. ಅಲಾರಾಂ ಸುಮ್ಮನೇ ನೆಪಕ್ಕೆ. ಇಂದು ಎಚ್ಚರವಾದ ತಕ್ಷಣ ನೆನಪಾಗಿದ್ದು ಎಂದಿನಂತೆ ಆಫೀಸ್‌ಗೆ ಹೋಗುವ ಅವಸರವಿಲ್ಲ.
ಹಿಂದಿನ ದಿನದ ಬಿಳ್ಕೊಡುಗೆಯ ಕಾರ್ಯಕ್ರಮ ಮತ್ತೆ ಕಣ್ಣ ಮುಂದೆ ಕಟ್ಟಿದಂತಾಯಿತು. ಆದರ್ಶ ಕೋಪರೆಟಿವ್ ಸೋಸೈಟಿಯ ಸ್ಥಳೀಯ ಶಾಖೆಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿ ಕಳೆದ ಹತ್ತು ವರ್ಷ ಮ್ಯಾನೇಜರ ಆಗಿ ಈಗ ನಿಯಮಕ್ಕನುಗುಣವಾಗಿ ನಿವೃತ್ತಿ ಹೊಂದಿದ ಮುಕುಂದರಾಯರಿಗಾಗಿ ಆಡಳಿತ ಮಂಡಳಿಯವರು ವಿಶೇಷವಾದ ಬಿಳ್ಕೋಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಮುಕುಂದರಾಯರ ಪತ್ನಿ ಸವಿತಾ ಸಹ ವಿಶೇಷ ಆಹ್ವಾನದೊಂದಿಗೆ ಆಗಮಿಸಿದ್ದಳು. ದಂಪತಿಗಳಿಗೆ ಜೋಡಿಯಾಗಿ ಸನ್ಮಾನ ಮಾಡಿ ಗಂಧದ ಗೀತೋಪದೇಶದ ಮಾದರಿಯನ್ನು ಕಾಣಿಕೆ ನೀಡಿ ಆದರದಿಂದ ಬಿಳ್ಕೋಟ್ಟಿದ್ದರು. ಶಾಲು, ಹಣ್ಣಿನ ಬುಟ್ಟಿ, ಕಾಣಿಕೆಯ ಪೆಟ್ಟಿಗೆ ಹಿಡಿದು ಮನೆಗೆ ಬಂದಾಗ ಆಗಲೇ ಏಳುಗಂಟೆ ಮೀರಿ ಹೋಗಿತ್ತು. ಸವಿತಾ ನಿರಂತರವಾಗಿ ಮಾತನಾಡುತ್ತ ತಮ್ಮ ಮಾತುಗಳಲ್ಲಿ ಆಡಳಿತ ಮಂಡಳಿಯ ಸದಸ್ಯರು, ಸಹದ್ಯೋಗಿಗಳು ಮುಕುಂದರಾಯರನ್ನು ಹೊಗಳಿ ಹಾಡಿದ್ದನ್ನು ಪದೆ ಪದೆ ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದಳು.
ಆ ಎಲ್ಲ ಸಂಭ್ರಮದ ಮಧ್ಯೆಯೂ ಮುಕುಂದರಾಯರು ಎಲ್ಲಿಯೂ ಕಳೆದು ಹೋದ ಭಾವದಲ್ಲಿ ಕುಳಿತು ನಿರ್ಲಿಪ್ತ ಭಾವದಿಂದ ಆಲಿಸುತ್ತಿದ್ದರು. ಬೆಳಿಗ್ಗೆ ಎದ್ದಾಗಲೂ ಅದೇ ಭಾವ ಅವರನ್ನು ಕಾಡುತ್ತಿತ್ತು. ಇದೇನು ಈ ನಿವೃತ್ತಿ! ಎಲ್ಲರೂ ಎದುರಿಸಲೇ ಬೇಕಾದ ಸ್ಥಿತಿ! ಸರಕಾರದ ವೃತ್ತಿಯಲ್ಲಿರುವವರಿಗೆ ಕಡ್ಡಾಯವಾದರೆ ಖಾಸಗಿ ವೃತ್ತಿಯಲ್ಲಿರುವವರಿಗೆ ಸ್ವಯಂ ಪ್ರೇರಿತ! ದಶಕಗಳವರೆಗೆ ಒಂದೇ ವೃತ್ತಿಯಲ್ಲಿ ಪಳಗಿ ಪ್ರಭುದ್ಧತೆಯನ್ನು ಪಡೆದವರಿಗೆ ಒಂದೇ ದಿನದಲ್ಲಿ ನಿಮ್ಮ ಸೇವೆ ಸಾಕು ಇನ್ನು ಮನೆಗೆ ಹೋಗಿ ಎಂದಾಗ ಹೊತ್ತುಕೊಂಡಿರುವ ಆ ಅನುಭವನದ ಜ್ಞಾನದ ಗಂಟನ್ನು ಎಲ್ಲಿ ಇಟ್ಟು ಬರಲಿ ಎನ್ನುವ ಭಾವ! ಇನ್ನೂ ಚಟುವಟಿಕೆಯಿಂದ ಓಡಾಡುತ್ತಿರುವವರಿಗೆ ನಿಮಗೆ ವಯಸ್ಸಾಯಿತು ಇನ್ನು ವಿಶ್ರಾಂತಿ ತೆಗೆದುಕೊಳ್ಳಿ ಎನ್ನುವ ಆಭಾಸ ! ನಿವೃತ್ತಿಗೆ ಅರವತ್ತು ವರ್ಷ ಎಂದು ನಿರ್ಧರಿಸುವ ಹಿನ್ನೆಲೆ ಎನಿರಬಹುದು? ಮುಕುಂದರಾಯರ ಯೋಚನಾ ಲಹರಿಗೆ ತಡೆ ಒಡ್ಡಿದ್ದು ಪತ್ನಿ ಸವಿತಾಳ ಧ್ವನಿ “ಯಾಕರೀ ವಾಕಿಂಗ ಹೋಗುದಿಲ್ಲೇನು”
“ಯಾಕ ಹೋಗುದಿಲ್ಲ? ಹೋಗತೇನಿ. ಇವತ್ತೇನೂ ಗಡಿಬಿಡಿ ಇಲ್ಲ. ಆರಾಮ ಹೋಗತೆನಿ” ಎನ್ನುತ್ತ ಬಲ ಮಗ್ಗಲಿಗೆ ಹೊರಳಿ ಮೇಲೆದ್ದರು.
ಪತ್ನಿ ನೀಡಿದ ಅರ್ಧ ಕಪ್ ಮಾರ್ನಿಂಗ ಟೀ ಕುಡಿದು ಟ್ರಾö್ಯಕ್‌ಪ್ಯಾಂಟ್ ಧರಿಸಿ ಹತ್ತಿರದ ಪಾರ್ಕ ಕಡೆಗೆ ನಡೆದರು. ಪ್ರತಿದಿನದಂತೆ ಎರಡು ಸುತ್ತು ಹಾಕಿ ವಾಪಸ್ ಹೋಗುವ ಅವಸರವಿಲ್ಲ. ನಿಧಾನವಾಗಿ ಮೂರು ಸುತ್ತು ಹಾಕಿ ಬೆಂಚಿನ ಕಡೆಗೆ ಬಂದಾಗ ಅಲ್ಲಿ ಆಗಲೇ ಗೆಳೆಯರ ಗುಂಪು ಸೇರಿತ್ತು. ಎಲ್ಲ ನಿವೃತ್ತಿ ಹೊಂದಿದ ಅವರದೇ ಬಡಾವಣೆಯ ಬಿಳಿ ತಲೆಗಳು ಇವರನ್ನು ನೋಡಿ “ಬರಬೇಕು ಬರಬೇಕು ಹೊಸ ಸದಸ್ಯರು” ಎನ್ನುತ್ತ ಕೈ ಕುಲುಕಿ ಅವರಿಗೆ ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟರು. ದಿನಾಲೂ ಸುಮ್ಮನೆ ವಂದಿಸಿ ಹೋಗುವ ಅಭ್ಯಾಸ. ಇವತ್ತು ಹೋಗುವ ಅವಸರವಿಲ್ಲ. ಗುಂಪಿನ ಚರ್ಚೆ ರಾಜಕೀಯ, ಕ್ರೀಡೆ ಕಾಲನಿಯ ಸಣ್ಣ ಪುಟ್ಟ ಗೊಸಿಪ್‌ಗಳಿಂದ ಮುಕುಂದರಾಯರ ಕಡೆಗೆ ಹೊರಳಿತ್ತು.
“ಮುಂದ ಏನ ಮಾಡಬೇಕಂತ ಮಾಡಿರಿ ಸರ್? ಎನರೆ ಬಿಸಿನೆಸ್ ಮಾಡೊ ವಿಚಾರ ಅದ ಏನು?” ಎಂಬ ಪ್ರಶ್ನೆಗೆ ಮುಕುಂದರಾಯರು ಉತ್ತರಿಸುತ್ತ “ಇಲ್ಲರಿ ಮಾರಾಯರ ಎಲ್ಲಿ ಬಿಜಿನೆಸ್? ವಿಶ್ರಾಂತಿ ತಗೊಳ್ರಿ ಅಂತ ಮನಿಗೆ ಕಳಿಸಿದ ಮ್ಯಾಲ ವಿಶ್ರಾಂತಿ ತಗೊಳದಪ್ಪಾ. ಎಷ್ಟು ದುಡದು ಗಳಿಸಿ ಎಲ್ಲಿ ತಗೊಂಡ ಹೋಗೊದ ಅದ” ಎಂದರು. ಔಪಚಾರಿಕವಾಗಿ ತೆಲೆಗೊಂದು ಸಲಹೆಗಳು ಪ್ರಾರಂಭವಾದವು.
“ಒಮ್ಮ ಮೆಡಿಟೆಷನ್ ಗ್ರುಪ್ ಸೇರಿಕೊಳ್ರಿ”
“ನಿಮ್ಮ ಸಲುವಾಗಿ ದುಡದಿದ್ದು ಸಾಕು ಸ್ವಲ್ಪ ಸಮಾಜಕ್ಕ ಎನರೇ ಮಾಡೋಣು ನಮ್ಮ ಸೇವಾಶ್ರಮದ ಮೆಂಬರ್ ಆಗ್ರಿ” ಇತ್ಯಾದಿ. ಎಲ್ಲದಕ್ಕೂ ತಲೆ ಆಡಿಸುತ್ತ ಕೊನೆಗೆ “ಸದ್ಯಕ್ಕೆ ಅದೇಲ್ಲ ಏನೂ ಬ್ಯಾಡರಿ ಖಾಸಗಿ ಬ್ಯಾಂಕದಾಗ ಮ್ಯಾನೆಜಮೆಂಟದವರ ಮರ್ಜಿ ಕಾಯಕೊಂಡು ಸರ್ವಿಸ್ ಮಾಡೊದ್ರಾಗ ಹೆಂಡತಿ ಜೋಡಿ ಕುಂತ ನೆಟ್ಟಗ ಮಾತಾಡಾಕೂ ಟೈಮ ಸಿಕ್ಕಿಲ್ಲ. ಸ್ವಲ್ಪ ದಿನಾ ಆರಾಮ ಇರತೇನಿ. ನಂತರ ಏನ ಮಾಡೊದು ನೋಡತೆನಿ. ಮತ್ತ ನಾಳೆ ಭೆಟ್ಟಿ ಆಗತೇನಿ” ಎಂದು ಎಂದು ಹೇಳುತ್ತ ಆ ಗುಂಪಿನಿಂದ ತಪ್ಪಿಸಿಕೊಂಡು ಹೊರಟಿದ್ದರು. ಹಿಂದೆ ಅವರನ್ನು ನೋಡಿ ರಿಟಾರ‍್ಡ ಗುಂಪು ಎಂದು ಲೇವಡಿ ಮಾಡಿದ್ದು ನೆನಪಿಗೆ ಬಂತು. ಮನೆಗೆ ಬರುವಷ್ಟದಲ್ಲಿ ಸವಿತಾ ಆಗಲೇ ಬ್ರೇಕ್‌ಪಾಸ್ಟ್ ಟೇಬಲ್ ಮೇಲೆ ರೆಡಿ ಮಾಡಿಟ್ಟು ತಾನು ಶಾಲೆಗೆ ಹೋಗಲು ತಯಾರಾಗುತ್ತಿದ್ದಳು. ಹತ್ತಿರದಲ್ಲಿಯೇ ಇದ್ದ ಫ್ರೌಢಶಾಲೆಯಲ್ಲಿ ವಿಜ್ಞಾನದ ಶಿಕ್ಷಕಿಯಾಗಿದ್ದ ಸವಿತಾಳಿಗೆ ಇನ್ನೂ ಆರು ವರ್ಷ ಸರ್ವಿಸ್ ಬಾಕಿ ಇತ್ತು. “ಲಗೂನ ಜಳಕಾ ಮಾಡಿ ರ‍್ರಿ ನಿಮಗ ಟಿಪಿನ್ ಕೊಟ್ಟು ನಾ ಹೋಗತೀನಿ” ಎಂದು ಪತಿಗೆ ಹೇಳುತ್ತ ಪಾತ್ರೆ ತೊಳೆಯುತ್ತಿದ್ದ ಕೆಲಸದ ನಿಂಗಮ್ಮನಿಗೆ “ದಿನಾ ಮಾಡಿದಂಗ ಮುಂದ ಮುಂದ ಕಸಾ ಉಡಿಗಿ ಹೋಗಬ್ಯಾಡ ಎನೂ ಗಡಿಬಿಡಿ ಇಲ್ಲ. ಸಾಹೇಬ್ರು ಮನ್ಯಾಗ ಇರತಾರ. ಹಂಗಂತ ನಾಳಿಂದ ನೀ ತಡಾ ಮಾಡಿ ಬರಬ್ಯಾಡ ಮತ್ತ” ಎನ್ನುತ್ತ ಹೊರ ನಡೆದಳು.
ಆರಾಮಾಗಿ ತಿಂಡಿ ತಿಂದು ಮುಕುಂದರಾಯರು ಬೆಳಿಗ್ಗೆೆ ಓದಿದ್ದ ಪತ್ರಿಕೆಯನ್ನು ಇನ್ನೊಂದು ಸಲ ತಿರುವಿ ಹಾಕುತ್ತ ಕುಳಿತುಕೊಂಡರು. ಒಮ್ಮಿಂದೊಮ್ಮೆ ಜೀವನ ನಿಂತು ಹೋದ ಹಾಗೆ ಎನಿಸತೊಡಗಿತ್ತು. ನಂತರ ಮೊಬೈಲ ತೆಗೆದು ನೋಡುತ್ತ ಕುಳಿತವರಿಗೆ ವಾಟ್ಸ್ಆ್ಯಪ್‌ನಲ್ಲಿ ಹ್ಯಾಪಿ ರಿಟೈಯರ್ಡ್ ಲೈಪ್ ಎನ್ನುವ ಸಂದೇಶಗಳು ತುಂಬಿಕೊಂಡಿದ್ದು ನೋಡಿ ಇಷ್ಟೆಲ್ಲ ಅಭಿಮಾನಿಗಳ ಇದ್ದಾರಲ್ಲಾ ಎಂದು ಸಂತೋಷ ಪಡುತ್ತಾ ಎಲ್ಲರಿಗೂ ಧನ್ಯವಾದಗಳನ್ನು ಬರೆಯುಷ್ಟರಲ್ಲಿ ಮಧ್ಯಾನದ ಊಟದ ವೇಳೆಯಾಗಿತ್ತು.
ರಿಟೈಯರ್ ಆಗುವ ಮೊದಲೇ ಜವಾಬ್ದಾರಿ ಮುಗಿಸಿಕೊಂಡು ಬಿಡುವ ಅವಸರದಲ್ಲಿ ರಾಯರು ಒತ್ತಾಯ ಪೂರ್ವಕವಾಗಿ ಮಗಳ ಮದುವೆ ಮುಗಿಸಿದ್ದಕ್ಕಾಗಿ ಮಗಳು ಮೊದ ಮೊದಲು ಅಪ್ಪ ಮೇಲೆ ಸಿಟ್ಟಿದ್ದರೂ ಗಂಡನ ಮುದ್ದಿನಲ್ಲಿ ಕರಗುತ್ತ ಅಪ್ಪನ್ನು ಕ್ಷಮಿಸಿದ್ದಳು ಆದರೆ ಫೊನ್ ಮಾಡುತ್ತಿದ್ದುದು ಅಮ್ಮನಿಗೆ ಮಾತ್ರ. ಬೇರೆ ಊರಿನಲ್ಲಿ ಇಂಜನಿಯರಿಂಗ ಓದುತ್ತಿದ್ದ ಅವರ ಮಗ ಯಾವಾಗಲೂ ಮಿತ ಭಾಷಿ. ಅಪ್ಪನ ಜೊತೆಯಂತೂ ಇನ್ನೂ ಮಾತು ಕಮ್ಮಿ. ರಾಯರ ಕೆಲಸದ ಒತ್ತಡದಲ್ಲಿ ತಮ್ಮ ಸಹದ್ಯೋಗಿಗಳ ಹೊರತಾಗಿ ಬೇರೆ ಸ್ನೇಹಿತರೊಂದಿಗೆ ಸಂಪರ್ಕ ಕಡಿಮೆ ಎಂದೇ ಹೇಳಬಹುದು.
ನಿಧಾನವಾಗಿ ರಾಯರಿಗೆ ಏಕಾಂಕಿತನ ಕಾಡ ತೊಡಗಿತ್ತು. ಸವಿತಾ ತನಗಾಗಿ ಓದಲು ತಂದಿಟ್ಟುಕೊಂಡಿದ್ದ ಪುಸ್ತಕಗಳನ್ನು, ಮ್ಯಾಗಜಿನ್‌ಗಳನ್ನು ಓದಲು ಪ್ರಯತ್ನಿಸಿದರು. ಆದರೆ ಏಂದೂ ಓದುವ ಹವ್ಯಾಸವೇ ಇಲ್ಲದ ರಾಯರಿಗೆ ಓದುವದರಲ್ಲಿ ಆಸಕ್ತಿ ಮೂಡಲಿಲ್ಲ. ಬೆಳಗಿನ ವಾಕಿಂಗ ನಂತರ ಬಿಳಿ ತಲೆಯ ಗೆಳೆಯರ ಗುಂಪಿನಲ್ಲಿ ಸ್ವಲ್ಪ ಸಮಯ ಕಳೆಯುತ್ತಿತ್ತು. ಅವರ ಜೊತೆ ತಮ್ಮನ್ನೂ ಗುರುತಿಸಿಕೊಳ್ಳಲು ಪ್ರಾರಂಭಿಸಿದ್ದರು. ಚರ್ಚೆಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದ್ದ್ಟರು. ಸ್ಪಂದ£ ಸೇವಾ ಸಂಘದ ಅಧ್ಯಕ್ಷರಾದ ಶಿವಶಂಕರ ರಾಯರಿಗೆ ಆಪ್ತರಾಗ ತೊಡಗಿದ್ದರು. ಅವರ ಸಂಘದ ಬಗ್ಗೆ ಹೇಳುವಾಗ ಕುತೂಹಲದಿಂದ ಕೇಳುತ್ತಿದ್ದರು.
“ಮನಿಯಾಗ ಕುಂತ ಏನಮಾಡತಿರಿ? ರ‍್ರಿ ನಮ್ಮ ಜೋಡಿ. ಸುತ್ತ ಮುತ್ತ ಏನ ನಡದೇತಿ ಅಂತÉ ಗೊತ್ತ ಆಗತೈತಿ” ಎಂದಾಗ ಅವರ ಜೊತೆಗೂಡಿ ಅವರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದರು.
ಈ ಮಧ್ಯ ಗುಂಪಿನಲ್ಲಿ ಒಂದು ದಿನ ನಿವೃತ್ತಿಯು ತಮ್ಮ ಮೆಚ್ಚಿನ ಹವ್ಯಾಸ ಮುಂದುವರೆಸಲು ಅವಕಾಶ ಎಂಬ ಚರ್ಚೆ ನಡೆದಾಗ ಅದರಿಂದ ಪ್ರಭಾವಿತರಾಗಿ ಮನೆಯ ಹತ್ತಿರದಲ್ಲಿಯೇ ಇದ್ದ ಶಾರದಾ ಸಂಗೀತ ವಿದ್ಯಾಲಯದಲ್ಲಿ ಹೋಗಿ ತಬಲಾ ಕ್ಲಾಸಿಗೆ ಹೆಸರು ನೋಂದಾಯಿಸಿಕೊAಡಿದ್ದರು. ಒಂದು ವಾರ ರಾಯರಿಗೆ ತಬಲಾದ ಬೀಟ್ಸ್ ಕಲಿಸಲು ಹೆಣಗಿದ ಯುವ ತಬಲಾ ಮಾಸ್ಟರ್ ಕೊನೆಗೆ ನಿರ್ವಾಹವಿಲ್ಲದೇ “ಸರ್ ನಿಮ್ಮ ಬೆರಳು ಭಾಳ ಸ್ಟಿಪ್ ಅದಾವು. ಈ ವಯಸ್ಸನ್ಯಾಗ ತಬಲಾ ಕಲಿಯಾಕ ಸ್ವಲ್ಪ ಕಷ್ಟ ಆಗಬಹುದು. ಬ್ಯಾರೆ ಎನರೇ ಟ್ರೆö ಮಾಡತಿರೆನರೀ” ಎಂದು ಕೇಳಿದ್ದ. ತಮಗೂ ಹಾಗೆ ಅನಿಸಿದ್ದರಿಂದ ಸುಮ್ಮನೇ ಬಿಟ್ಟು ಕುಳಿತಿದ್ದರು.
ಶಿವಶಂಕರ ಅವರ ಜೊತೆ ಓಡಾಡಲು ಪ್ರಾರಂಭ ಮಾಡಿದ ಮೇಲೆ ಸಮಾಜ ಸೇವೆಯ ಹುಚ್ಚು ತಲೆಗೇರಿತ್ತು. ಸ್ಪಂದನ ಸೇವಾಸಂಘ ಸದಸ್ಯರಿಂದ ಪ್ರತಿ ವರ್ಷ ತಲಾ ಒಂದು ಸಾವಿರ ದೇಣಿಗೆಯನ್ನು ಸಂಗ್ರಹಿಸಿ ಆ ಹಣವನ್ನು ವಿಂಗಡಿಸಿ ಪ್ರತಿ ತಿಂಗಳು ಯಾವುದಾದರೂ ಕುಟುಂಬಕ್ಕೆ ಅಥವಾ ಸಂಸ್ಥೆಗಳಿಗೆ ಅವರ ಅವಶ್ಯಕತೆಯಂತೆ ಸಾಮಾನುಗಳನ್ನು ವಿತರಿಸುತ್ತಿದ್ದರು. ಅಂತಹ ಕುಟುಂಬ ಅಥವಾ ಸಂಸ್ಥೆಗಳ ಬಗ್ಗೆ ಮಾಹಿತಿ ಸಿಕ್ಕಾಗ ಅದನ್ನು ಪರಿಶೀಲಿಸಲು ಕಾರ್ಯಕಾರಿ ಸಮಿತಿಯ ಸದಸ್ಯರು ಹೋಗಿ ಪರಿಶಿಲಿಸಿ ಖಾತ್ರಿ ಮಾಡಿಕೊಂಡು ನಂತರ ದೇಣಿಗೆಯನ್ನು ನೀಡಲಾಗುತ್ತಿತ್ತು.
ಆ ರೀತಿ ಪರಿಶೀಲನೆಗೆ ಹೋಗುವಾಗ ಶಿವಶಂಕರ ಮುಕುಂದರಾಯರನ್ನು ಅನೇಕ ಸಲ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದರು. ಸಂಘದ ಸದಸ್ಯತ್ವವನ್ನು ಪಡೆಯಲು ಒತ್ತಾಯಿಸಿದರು. ಆದರೆ ಮುಕುಂದರಾಯರ ಮನದಲ್ಲಿ ಬೇರೆಯದ್ದೇ ಯೋಚನೆ ನಡೆದಿತ್ತು. ಸ್ಪಂದನದ ಸದಸ್ಯರಾಗಿ ಒಂದು ಸಾವಿರ ದೇಣಿಗೆ ನೀಡಿದರೆ ಅದು ಸಂಘದಿಂದ ಹೆಸರಿನಲ್ಲಿ ಹೋಗುತ್ತದೆ. ಹಾಗು ತಮಗೆ ಪರಿಚಯವಿಲ್ಲದೇ ಇರುವ ಯಾರಿಗೂ ಉಪಯೋಗವಾಗಬಹುದು. ಅವರ ಬದಲಾಗಿ ಒಂದು ಸಾವಿರ ರೂಪಾಯಿ ಕೊಡುವುದೇ ಆದರೆ ತಮ್ಮಯವರಿಗೆ ಯಾರಿಗಾದರೂ ನೀಡಿದರೆ ಅವರು ತಮ್ಮನ್ನು ನೆನೆಪಿಸಿಕೊಳ್ಳುತ್ತಾರೆ. ಅದೇ ಯೋಚನೆಯಲ್ಲಿದ್ದ ಮುಕುಂದರಾಯರಿಗೆ ಮೊದಲಿಗೆ ನೆನಪಾಗಿದ್ದು ಯಾವಾಗಲೂ ಸಾಲ ಕೇಳುತ್ತಿದ್ದ ತಮ್ಮ ಬ್ಯಾಂಕಿನ ವಾಚಮನ್. ತಮ್ಮ ಮೊದಲ ದೇಣಿಗೆ ಆತನಿಗೆ ಎಂದು ನಿರ್ಧರಿಸಿದರು. ಸಾಯಂಕಾರ ವಾಕಿಂಗ್ ಮುಗಿಸಿ ಬರುವಾಗ ಆತನ ಮನೆಯ ಕಡೆಗೆ ಕಾಲು ಹೊರಳಿತ್ತು. ಯಾವಾಗಲೋ ಹಿಂದೆ ನೋಡಿದ ಮನೆಯನ್ನು ಹುಡುಕಿಕೊಂಡು ಹೋಗಿ ಮನೆಯ ಮುಂದೆ ನಿಂತು ಕರೆದಾಗ ಹೊರಗಡೆ ಬಂದಿದ್ದು ಜಿನ್ಸ್ ಟೀಶರ್ಟ ಹಾಕಿಕೊಂಡಿದ್ದ ಯುವಕ. ಆತನ ಕೈಯಲ್ಲಿ ಐಫೋನ!! ಇವರನ್ನು ನೋಡಿದ ತಕ್ಷಣ ಬನ್ನಿ ಸರ್ ಎಂದು ಕರೆದಾಗ ಗುರುತು ಸಿಕ್ಕಿತ್ತು. ಪಿಯುಸಿಯಲ್ಲಿ ಮೂರು ವರ್ಷ ಡುಮ್ಕಿ ಹೊಡೆದಿದ್ದ ವಾಚಮನ್ ಸಿದ್ದನ ಮಗ!! ಒಳಗಡೆ ಹೋದಾಗ ಆ ಚಿಕ್ಕ ಮನೆಯ ಮೂಲೆಯಲ್ಲಿ ದೊಡ್ಡ ೩೬ ಇಂಚ್ ಸೋನಿ ಕಲರ್ ಟಿವಿ !! ಇದೇನು ಇವನಿಗೆನಾದರೂ ಲಾಟರಿ ಹೊಡಿತಾ ಅಥವಾ ಮಗ ಏನಾದರೂ ಸ್ಮಗಲಿಂಗ ಗಿಗಲಿಂಗ ಮಾಡಾಕತ್ತಾನೂ? ಎಂದು ಯೋಚಿಸುತ್ತ ಆ ಯುವಕನನ್ನು ಉದ್ದೇಶಿಸಿ ಕೇಳಿದ್ದರು.
“ನಿಮ್ಮ ಅಪ್ಪಾ ಇಲ್ಲೇನು ಮನ್ಯಾಗ?”
“ಇಲ್ಲ ಸರ್ ಇಲ್ಲೆ ಪ್ಯಾಟಿಗ್ ಹೋಗ್ಯಾನ ಏನರೆ ಕೆಲಸಾ ಇತ್ತ ಎನ್ರಿ?” ಎಂದು ಕೇಳಿದ ಆ ಯುವಕನಿಗೆ “ಏನೂ ಇಲ್ಲ ಹಂಗ ಈ ಕಡೆ ಬಂದಿದ್ದೆ ಮಾತಾಡಿಸಿ ಹೋಗೋಣ ಅಂತ ಬಂದೆ. ಎಲ್ಲಾ ಆರಾಮ ಇದ್ದಿರಲ್ಲಾ?” ಎಂದು ಕೇಳಿದರು.
“ಆತು ಮತ್ತ ಬರತೆನು ಅಪ್ಪಾಗ ಹೇಳು ಏಂದು ಹೇಳಿ ಬಂದ ದಾರಿಗೆ ಸುಂಕವಿಲ್ಲವೆAದು ಮರಳಿದರು. ತಮ್ಮ ದೇಣಿಗೆಗಾಗಿ ಬೇರೆ ಯಾರನ್ನಾದರೂ ಹುಡುಕಬೇಕಾಗಿತ್ತು. ಐಫೋನ ಇಟಕೊಂಡವನಿಗೆ ಬಂದು ಸಾವಿರ ಯಾವ ಲೆಕ್ಕ!
ಮಾರನೇ ದಿನ ಕೆಲಸದ ನಿಂಗಮ್ಮನನ್ನು ನೋಡಿದಾಗ ‘ಅವರಿಗೆ ಇವರಿಗೆ ಕೊಡೊ ಬದಲು ಈ ನಿಂಗಮ್ಮನಿಗೆ ಕೊಟ್ಟರ ಹೆಂಗ’ ಎನಿಸಿತ್ತು. ‘ದಾನಕ್ಕ ದಾನಾನೂ ಆಯ್ತು ನಮ್ಮ ಸಹಾಯ ನೆನೆನಪಿಸಿಕೊಂಡ ಕೆಲಸಾರೆ ಛೋಲೊ ಮಾಡತಾರ ಎಂದುಕೊಳ್ಳುತ್ತ. ‘ಸವಿತಾ ಹೋದ ಮ್ಯಾಲೆ ಕೊಟ್ರ ಆತ ಇಲ್ಲ ಅಂದರ ಸುಮ್ಮ ಅಡ್ಡಗಾಲ ಹಾಕತಾಳ ಎಂದು ಕೊಳ್ಳುತ್ತ ಪೇಪರ್ ಓದುತ್ತಾ ಅಲ್ಲಿಯೇ ಡೈನಿಂಗ್ ಟೇಬಲ್ ಹತ್ತಿರ ಕುಳಿತುಕೊಂಡರು. ನಿಂಗಮ್ಮ ತನ್ನೆಲ್ಲ ಕೆಲಸಗಳನ್ನು ಮುಗಿಸಿ “ಹೋಗತೇನರಿ ಅಣ್ಣಾರ” ಎನ್ನುತ ಕಟ್ಟಿದ ಸೆರಗನ್ನು ಬಿಚ್ಚಿ ಹಿಂದೆ ಹಾಕಿ ಹೊರಟಾಗ ರಾಯರು ಪೇಪರ ಕೆಳಗಿಟ್ಟು ತಮ್ಮ ಜೇಬಿನಿಂದ ಐದುನೂರರ ಎರಡು ನೋಟು ತೆಗೆದು “ನಿಂಗಮ್ಮ ಇದು ತಗೊ” ಎನ್ನುವದಕ್ಕೂ ಆಕೆಯ ಸೆರಗು ಅವರು ಕುಳಿತ ಖುರ್ಚಿಗೆ ಸಿಕ್ಕಿಹಾಕಿಕೊಳ್ಳುವುದಕ್ಕೂ ಸರಿಹೋಯಿತು. ತಮ್ಮ ಖುರ್ಚಿಗೆ ಸಿಕ್ಕಿಹಾಕಿಕೊಂಡಿದ್ದ ಆಕೆಯ ಸೆರಗನ್ನು ಬಿಡಿಸುತ್ತ ಮೇಲೆಳಲು ಪ್ರಯತ್ನಿಸುತ್ತಿದ್ದ ರಾಯರ ಲುಂಗಿ ಕಾಲಿಗೆ ಸಿಲುಕಿ ಕೆಳಗೆ ಜಾರಿತು. ಹಿಂದೆ ತಿರುಗಿ ನೋಡಿದ ನಿಂಗಮ್ಮನಿಗೆ ಬಲಗೈಯಲ್ಲಿ ಐದುನೂರು ರೂಪಾಯಿಯ ಎರಡು ನೋಟು ಮತ್ತು ಎಡಗೈಯಲ್ಲಿ ತನ್ನ ಸೆರಗು ಹಿಡಿದು ಬರಿ ಅಂಡರವೇÉರನಲ್ಲಿ ನಿಂತ ಮುಕುಂದ ರಾಯರು !! ಗಾಬರಿಯಿಂದ ಸೆರಗನ್ನು ಎಳೆದುಕೊಂಡ ನಿಂಗಮ್ಮ “ಹರಾಮಖೊರ” ಎಂದು ಬೈಯುತ್ತ ಬಾಯಿ ಬಡಿದುಕೊಳ್ಳುತ್ತ ಹೊರಗೆ ಓಡಿದಳು. ಮುಕುಂದರಾಯರು ಒಂದು ಸಲ ಕೈಯಲಿದ್ದ ನೋಟು ಮತ್ತು ಜಾರಿ ಬಿದ್ದ ಲುಂಗಿ ನೋಡಿ ಗರಬಡಿದವರಂತೆ ಬಾಗಿಲತ್ತ ನೋಡುತ್ತ ನಿಂತುಕೊಂಡರು.
-ಪ್ರೋ.ರಾಜನಂದ ಗಾರ್ಘಿ, ಬೆಳಗಾವಿ