ಅಲ್ಲಮಪ್ರಭುದೇವರ ವಚನ – ನಿರ್ವಚನ.

 

ಅಲ್ಲಮಪ್ರಭುದೇವರ ವಚನ – ನಿರ್ವಚನ.

ಭಕ್ತಸ್ಥಲ.

ಕಬ್ಬುನದ ಗುಂಡಿಗೆಯಲ್ಲಿ ರಸದ ಭಂಡವ ತುಂಬಿ
ಹೊನ್ನ ಮಾಡಬಲ್ಲಡೆ ಅದು ಪರುಷ ಕಾಣಿರಣ್ಣಾ.
ಲಿಂಗ ಬಂದುಂಬಡೆ ಪ್ರಸಾದಕಾಯವಪ್ಪಡೆ
ಅಂದಂದಿಗೆ ಭವಕರ್ಮ ಮುಟ್ಟಲಮ್ಮವು ಕಾಣಿರೆ!
ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ!
ಶಶಿಯಲ್ಲಿ ಕರಗದು, ಬಿಸಿಲಲ್ಲಿ ಕೊರಗದು.
ರಸವುಂಡ ಹೊನ್ನು ಗುಹೇಶ್ವರಾ, ನಿಮ್ಮ ಶರಣ!

ಭಾವ

ಕಬ್ಬಿಣದ ಪಾತ್ರೆ, ಅದರಲ್ಲಿ ಸಿದ್ಧರಸವನ್ನು ತುಂಬಿದರೆ ಅದು ಹೊನ್ನಾಗುತ್ತದೆ. ಇದುವೆ ಪರುಷಕ್ರಿಯೆ. ಸಂಸಾರದಲ್ಲಿ ಬಂಧಿತನಾದ ಜೀವನು ಲೋಹದ ಪಾತ್ರೆಯಂತೆ. ಅವನಲ್ಲಿ ಜಡಭಾವನೆಗಳಿವೆ. ಶ್ರೀಗುರುವು ದೀಕ್ಷೆ ಹಾಗೂ ಉಪದೇಶಗಳ ಮೂಲಕ ಅವನಲ್ಲಿ ಲಿಂಗ ಭಕ್ತಿರಸಾಯನವನ್ನು ತುಂಬುತ್ತಾನೆ. ಆಗ ಅವನ ದೇಹ-ಮನ-ಭಾವಗಳು ಪರಿವರ್ತನೆಗೊಳ್ಳುತ್ತವೆ; ಶುದ್ಧವಾಗುತ್ತವೆ. ಅವನೀಗ ಹೊನ್ನಪುರುಷ. ಪೂರ್ವದ ಭವಕರ್ಮಗಳು ಅವನನ್ನು ಈಗ ಮುಟ್ಟವು. ಭಾವೀ ಜನ್ಮ-ಮರಣಗಳಿಗೆ ಕಾರಣವಾಗವು. ಲಿಂಗಸ್ಪರ್ಶದಿಂದ ಹಾಗೂ ಲಿಂಗದ ಭಕ್ತಿ ಸಾಧನೆಯಿಂದ ಉಂಟಾದ ಆತನ ಭಾವಪ್ರಸಾದಕ್ಕೆ ಬಾಧೆಯಿಲ್ಲ. ಸಾಂಸಾರಿಕ ಕಷ್ಟನಷ್ಟಗಳು ಅದೆಷ್ಟೇ ಬಂದರೂ ಅವನ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ರಸ ಉಂಡ ಹೊನ್ನು ಹೇಗೋ ಹಾಗೆ ಭಕ್ತಿರಸವನ್ನುಂಡ ಶರಣನಾತ.

ಭಾಷ್ಯ

ಕಬ್ಬುನದ ಗುಂಡಿಗೆಯಲ್ಲಿ ರಸದ ಭಂಡವ ತುಂಬಿ ಹೊನ್ನ ಮಾಡಬಲ್ಲಡೆ ಅದು ಪರುಷ ಕಾಣಿರಣ್ಣಾ.

ಗುಂಡಿಗೆ = ಪಾತ್ರೆ. ರಸದ ಭಂಡ = ಸಿದ್ಧರಸ.
ಪರುಷ =ಕಬ್ಬುನವನ್ನು ಹೊನ್ನಾಗಿಸುವ ವಸ್ತು ಮತ್ತು ಕ್ರಿಯೆ.

ಲೋಹದ ಪಾತ್ರೆಯಲ್ಲಿ ಸಿದ್ಧರಸವನ್ನು ತುಂಬಿದರೆ ಆ ಪಾತ್ರೆಯು ಹೊನ್ನಾಗುತ್ತದೆ. ಇದುವೆ ಪರುಷಕ್ರಿಯೆ. ಇದೊಂದು ಪ್ರಚಲಿತ ದೃಷ್ಟಾಂತ.

ಲಿಂಗ ಬಂದುಂಬಡೆ ಪ್ರಸಾದಕಾಯವಪ್ಪಡೆ

ಲಿಂಗ ಬಂದುಂಬಡೆ = ಲಿಂಗವು ಬಂದು ವ್ಯಾಪಿಸಿದರೆ ಅಥವಾ ಲಿಂಗಭಕ್ತಿಯು ಉದಿಸಿ ವ್ಯಾಪಿಸಿದರೆ.
ಪ್ರಸಾದಕಾಯವಪ್ಪಡೆ = ಕಾಯವು ಪ್ರಸಾದವಾದರೆ.

ಲಿಂಗ ಅಥವಾ ಲಿಂಗದ ಭಕ್ತಿಯು ಸಿದ್ಧರಸದಂತೆ. ಅದು ಕಾಯವನ್ನು ತುಂಬಿದರೆ ಆ ಕಾಯವು ಪ್ರಸಾದಕಾಯವಾಗುತ್ತದೆ. ಇಲ್ಲಿ ಕಾಯವೆಂದರೆ ಸಾಂಸಾರಿಕ ಜೀವನ ತನು, ಮನ, ಭಾವಗಳು. ಲಿಂಗಭಕ್ತಿಯು ಈ ತನು-ಮನ-ಭಾವಗಳನ್ನು ತುಂಬಿಕೊಂಡರೆ ಅವೆಲ್ಲ ಶುದ್ಧವಾಗುತ್ತವೆ, ವಿಕಾರರಹಿತವಾಗುತ್ತವೆ. ಅವುಗಳಲ್ಲಿ ನೆಲೆಸಿರುವ ಜೀವಾತ್ಮನು ಸಾಂಸಾರಿಕ ಭಾವವನ್ನು ಕಳಚಿಕೊಂಡು ತಾನು ನಿಸ್ಸಂಸಾರಿ, ಆತ್ಮವಸ್ತು ಎಂದು ಪರಿಭಾವಿಸುತ್ತಾನೆ. ಮೊದಲಿನ ಜಡಭಾವ ಕಳೆದುಹೋಗಿ ಅಜಡವಾದ ಚೈತನ್ಯದ ಭಾವ ಉಂಟಾಗುತ್ತದೆ.

ಅಂದಂದಿಗೆ ಭವಕರ್ಮ ಮುಟ್ಟಲಮ್ಮವು ಕಾಣಿರೆ!

ಅಂದಂದಿಗೆ = ಆಗಾಗ.
ಭವಕರ್ಮ = ಭವ ಉಂಟುಮಾಡುವ ಕರ್ಮ.

ಭಕ್ತಿರಸಾಯನ ಕುಡಿದು ಶುದ್ಧನಾದ ಜೀವಾತ್ಮನನ್ನು ಭವಕಾರಕವಾದ ಕರ್ಮಗಳು ಸ್ಪರ್ಶಿಸಲಾರವು. ಏಕೆಂದರೆ ಭವಬಂಧನೆಗೆ ಕಾರಣವಾಗುವ ಆಸೆ-ಆಮಿಷಗಳು, ಮೋಹ ಮಾಯೆಗಳು ಅವನಲ್ಲಿ ಇಲ್ಲ.

ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ!

ಆದಿಯ ಪ್ರಸಾದ = ಲಿಂಗಸ್ಪರ್ಶದಿಂದುಂಟಾಗುವ ಪ್ರಸಾದ.

ಅದು ಜಡಭಾವವನ್ನು ಕಳೆದು ಅಜಡಭಾವವನ್ನು ಉಂಟುಮಾಡುತ್ತದೆ. ಆ ಅಜಡಭಾವದ ಅನುಭವವುಳ್ಳಾತನೆ ನಿಸ್ಸಂಸಾರಿಯಾದ ಶರಣ. ಅವನಿಗೆ ಭವದ ಬಾಧೆಯಿಲ್ಲ.

ಶಶಿಯಲ್ಲಿ ಕರಗದು, ಬಿಸಿಲಲ್ಲಿ ಕೊರಗದು.

ಚಂದ್ರನ ಬೆಳದಿಂಗಳಲ್ಲಿ ಚಂದ್ರಕಾಂತ ಶಿಲೆಯು ಕರಗುತ್ತದೆ, ಹನಿಗೂಡುತ್ತದೆ. ಸೂರ್ಯನ ಬಿಸಿಲಿನಲ್ಲಿ ಪುಷ್ಪ ಮುಂತಾದವು ಬಾಡುತ್ತವೆ, ಕೊರಗುತ್ತವೆ. ಹಾಗೆ ಆ ಶರಣನು; ಯಾವ ಆಮಿಷಕ್ಕೂ ಆತ ಕರಗುವುದಿಲ್ಲ, ಯಾವ ಚಿಂತೆಯಿಂದಲೂ ಆತ ಕೊರಗುವುದಿಲ್ಲ.

ರಸವುಂಡ ಹೊನ್ನು ಗುಹೇಶ್ವರಾ, ನಿಮ್ಮ ಶರಣ!

ಶರಣನು ಭಕ್ತಿರಸವನ್ನುಂಡ ಹೊನ್ನೆಂದರೆ ಅಪ್ಪಟ ಅಪರಂಜಿ, ಶುದ್ಧಜೀವ, ಆಮೃತಾತ್ಮ. ಭಕ್ತಿರಸಾಯನದಲ್ಲಿ ಅದ್ಭುತ ಶಕ್ತಿಯಿದೆ. ಅದು ಭವಿಯನ್ನು ಭಕ್ತನನ್ನಾಗಿಸುತ್ತದೆ. ಅದನ್ನು ಆಕಂಠ ಕುಡಿದಾಗ; ತನು, ಮನ, ಭಾವಗಳಲ್ಲಿ ಅದನ್ನು ತುಂಬಿಕೊಂಡಾಗ ಜೀವಾತ್ಮನ ಜೀವಭಾವವೇ ನಷ್ಟವಾಗುತ್ತದೆ. ಶಿವೋಹಂ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಆಗ ಭವದ ಬಾಧೆಯಿಲ್ಲ. ಕಾಲದ ಪರಿಣಾಮವಿಲ್ಲ. ಇಂಥ ಪರುಷಸದೃಶ ಭಕ್ತಿಯನ್ನು ಮನುಷ್ಯ ಸ್ವೀಕರಿಸಬೇಕು.

✍️ ವಿಶ್ವಪ್ರೇಮಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು. ಜ್ಞಾನಯೋಗಾಶ್ರಮ. ವಿಜಯಪುರ.

ಸಂಗ್ರಹ: ದಿನಕರ ಸಿ ಕೋರಿಶೆಟ್ಟರ, ಹಾವೇರಿ

Don`t copy text!