“ಬಸವ ತತ್ವದ ಅನುಪಮ ಜಂಗಮ ಪ್ರಣತೆ”
ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು
ವಿಜಯಪುರ ಜಿಲ್ಲೆಯ ಸಿಂದಗಿಯ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಶ್ರೀ ಸಿ. ಮ. ಮಣ್ಣೂರ ಗುರುಗಳು, ಶ್ರದ್ಧಾ ಭಕ್ತಿಯಿಂದ ಕಲಿಯುತ್ತಿದ್ದ ಒಬ್ಬ ಬಾಲಕನಿಗೆ ಹೇಳಿಕೊಟ್ಟ ಪದ್ಯವಿದು.
ಕನ್ನಡಕ್ಕೆ ಹೋರಾಡು | ಕನ್ನಡದ ಕಂದ ||
ಕನ್ನಡವ ಕಾಪಾಡು | ಎನ್ನ ಆನಂದ ||
ಜೋಗುಳದ ಹರಕೆಯಿದು | ಮರೆಯದಿರು ಚಿನ್ನ ||
ಮರೆತೆಯಾದರೆ ನೀನು | ಮರೆತಂತೆ ನನ್ನ ||
ಈ ಕನ್ನಡದ ಜೋಗುಳ ಪದವನ್ನು ಕೇಳುತ್ತಾ, ಹಾಡುತ್ತಾ, ಕಲಿಯುತ್ತಾ ಮೈ ಮರೆಯುತ್ತಿದ್ದ ಬಾಲಕ ಮುಂದೆ ಬೆಳೆದು ದೊಡ್ಡವನಾಗಿ ಅತ್ಯುನ್ನತ ಆಧ್ಯಾತ್ಮ ಪರಂಪರೆಯ ಮಠದ ಪೀಠಾಧಿಪತಿಗಳಾಗಿ, ಕನ್ನಡ ನಾಡಿನ ಉದ್ದಗಲಕ್ಕೂ ವ್ಯಾಪಿಸಿದ್ದ ಕನ್ನಡ ಭಾಷಾ ಚಳುವಳಿ (ಗೋಕಾಕ ಚಳುವಳಿ) ಯ ಸಂದರ್ಭದಲ್ಲಿ ದಿನಾಂಕ 15.02.1982 ರಲ್ಲಿ ಆಡಿದ ಮಾತುಗಳು ಕನ್ನಡಿಗರ ನರನಾಡಿಗಳಲ್ಲಿ ಹರಿದು ಕೆಚ್ಚನ್ನು ಹೊತ್ತಿಸಿದ್ದು ಇನ್ನು ಜನಮಾನಸದಲ್ಲಿ ಹಸಿರಾಗಿದೆ. ಆ ಮಾತುಗಳನ್ನು ಯಥಾವತ್ತಾಗಿ ಇಲ್ಲಿ ಬರೆದರೆ ಇನ್ನೂ ರೋಮಾಂಚನವಾಗುತ್ತದೆ.
“ಗೋಕಾಕ ವರದಿ ಜಾರಿಗೆ ತರುವ ಸಲುವಾಗಿ ಹೋರಾಟಕ್ಕೆ ಸನ್ನದ್ಧರಾಗಿ. ನರನಾಡಿಗಳಲ್ಲಿ ಪೌರುಷವಿದ್ದರೆ ಕೂಡಲೇ ಸನ್ನದ್ಧರಾಗಿ. ಕನ್ನಡಾಂಬೆಯ ಸೇವೆಯನ್ನು ಅಗ್ರಪೂಜೆಯೆಂದು ಸಾಬೀತುಪಡಿಸಿ. ಜಾತಿ, ಮತ, ಪಂಥ, ಭೇದಗಳನ್ನು ಬದಿಗೊತ್ತಿ ಉಗ್ರ ಹೋರಾಟ ಪ್ರಾರಂಭಿಸಿ”.
ಇಂಥದ್ದೊಂದು ಧೀರವಾಣಿಯ ಕರೆಗಾಗಿ ಮತ್ತು ನಾಯಕತ್ವಕ್ಕಾಗಿ ಹಾತೊರೆಯುತ್ತಿದ್ದ ಕನ್ನಡಿಗರು ರೋಷಾವೇಶದಿಂದ ಹೋರಾಟ ಮಾಡಿದ್ದು ಆಧುನಿಕ ಕರ್ನಾಟಕದ ಇತಿಹಾದಲ್ಲಿ ದಾಖಲೆ ಅಂತಾನೇ ಹೇಳಬಹುದು. ಇಂಥದ್ದೊಂದು ಕ್ರಾಂತಿಕಾರಕ ಹಿನ್ನೆಲೆಯನ್ನೊದಗಿಸಿದ್ದು ತ್ರಿವಿಧ ದಾಸೋಹಿ, ಬಸವಣ್ಣನವರ ವಿಚಾರಧಾರೆಗಳಲ್ಲಿ ಅಚಲ ನಂಬಿಕೆಯುಳ್ಳ, ಪ್ರಖರ ವೈಚಾರಿಕತೆಯ “ಪ್ರಗತಿಪರ ಸ್ವಾಮೀಜಿ” ಎಂದೇ ಗುರುತಿಸಿಕೊಂಡಿದ್ದಂಥಾ ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಶ್ರೀಮಠದ 19 ನೇ ಪೀಠಾಧಿಪತಿಗಳಾಗಿದ್ದಂಥ ಲಿಂಗೈಕ್ಯ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ಇಂಥ ಅಪರೂಪದ ಮಹಾನ್ ಚೇತನರ ಪರಿಚಯ ಲೇಖನ ಬರೆಯುವದಕ್ಕೆ ನನಗೆ ಅವಕಾಶ ಸಿಕ್ಕಿದ್ದು ಸಾಕ್ಷಾತ್ ಕೂಡಲಸಂಗಮ ದೇವರ ವರ ಪ್ರಸಾದ ಮತ್ತು ಸಾಕ್ಷಾತ್ ಬಸವಣ್ಣನವರ ಆಶೀರ್ವಾದ.
ಬಸವಣ್ಣನವರ ಪಾದಸ್ಪರ್ಷದಿಂದ ಪವಿತ್ರವಾಗಿದ್ದಂಥ ಕರ್ನಾಟಕದ ಪುಣ್ಯ ಭೂಮಿಯಾದ ವಿಜಯಪುರ ಜಿಲ್ಲೆಯ ಸಿಂದಗಿಯ ಹಿರೇಮಠದ ಶ್ರೀ ಮರಯ್ಯನವರು ಮತ್ತು ಶ್ರೀಮತಿ ಶಂಕರವ್ವನವರ ದಂಪತಿಗಳ ದ್ವಿತೀಯ ಪುತ್ರರಾಗಿ ದಿನಾಂಕ 21.02.1949 ರಂದು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜನನವಾಗುತ್ತದೆ. ಹೆತ್ತವರು ಸಿಂದಗಿ ಪಟ್ಟಣದವರಾದರೂ, ಗರ್ಭಿಣಿಯಾಗಿದ್ದಾಗ ತಾಯಿ ಶ್ರೀಮತಿ ಶಂಕರವ್ವನವರು ಅಕ್ಕ ಶ್ರೀಮತಿ ಶಿವಬಾಯಿಯವರ ಗ್ರಾಮವಾದ ಕೋರವಾರಕ್ಕೆ ಹೋದಾಗ ಶ್ರೀಗಳ ಜನನವಾಗಿತ್ತು. ಇದಕ್ಕಾಗಿ ಕೋರವಾರದ ಜನರು ಶ್ರೀಗಳು ತಮ್ಮೂರಿನವರು ಎಂದು ಅತ್ಯಂತ ಆದರ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇವರ ಪೂರ್ವಾಶ್ರಮದ ಹೆಸರು “ಸಿದ್ಧರಾಮ”.
ನಾಲ್ವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದ ಒಟ್ಟು ಕುಟುಂಬದಲ್ಲಿ ದ್ವಿತೀಯ ಪುತ್ರರು ಶ್ರೀಗಳು. ಅಣ್ಣ ಶ್ರೀ ಮಲ್ಲಿಕಾರ್ಜುನಯ್ಯ ಹಿರೇಮಠ ಅವರು ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರರು. ಮೊದಲ ತಮ್ಮ ಶ್ರೀ ಕುಮಾರಸ್ವಾಮಿ ಹಿರೇಮಠ ಅವರು ಪ್ರಿಯದರ್ಶಿನಿ ಹ್ಯಾಂಡಲೂಮ್ಸ್ ನಲ್ಲಿ ನೌಕರರಾಗಿದ್ದಂಥವರು. ಎರಡನೇಯ ತಮ್ಮ ಶ್ರೀ ಶಾಂತು ಹಿರೇಮಠ ಅವರು ಪತ್ರಕರ್ತರು ಮತ್ತು ವಿಶ್ರಾಂತ ಪ್ರೋಫೇಸರ್.
ಕೊನೇಯ ತಮ್ಮ ಸಿಂದಗಿ-ಹಾವೇರಿ ಹಿರೇಮಠದ ಪೀಠಾಧಿಪತಿ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು. ಇವರು ತಮ್ಮ ಆಧೀನದಲ್ಲಿನ ಐದು ಶಾಖಾ ಮಠಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಿಂದಗಿ ಮಠವೇ ಮೂಲ ಮಠ. ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಿದು. ಹಾವೇರಿ ನಗರದ ಶಿವಬಸವ ನಗರದಲ್ಲಿನ ಸಿಂದಗಿ ಹಿರೇಮಠ, ಗದಗ ನಗರದಲ್ಲಿರುವ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ, ಸಂಗೂರ, ಬ್ಯಾಡಗಿ ಪಟ್ಟಣದಲ್ಲಿರುವ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಹಾಗೂ ಹಾನಗಲ್ಲಿನಲ್ಲಿರುವ ಸಿಂದಗಿ ಹಿರೇಮಠದ ಉಸ್ತುವಾರಿ ಹೊಣೆ ನಿಭಾಯಿಸುತ್ತಿದ್ದಾರೆ.
ಸಹೋದರಿಯರಾದ ಶ್ರೀಮತಿ ಗಂಗಾಬಾಯಿ ಗಣಾಚಾರಿ ಮತ್ತು ಶ್ರೀಮತಿ ನಿರ್ಮಲಾ ಹಿರೇಮಠ ಇಬ್ಬರೂ ಗೃಹಸ್ಥಾಶ್ರಮದಲ್ಲಿದ್ದಾರೆ.
ಅತ್ಯಂತ ಸಂಕೋಚ ಸ್ವಭಾವದ ಸಿದ್ಧರಾಮರು ಪ್ರಾಥಮಿಕ ಶಿಕ್ಷಣವನ್ನು ಸಿಂದಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ನಂತರ ಮಾಧ್ಯಮಿಕ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬರುತ್ತಾರೆ. ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪದವಿ ಪೂರೈಸಿದ ಸಿದ್ಧರಾಮರು 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆಯ ಬಾದಾಮಿಯಿಂದ ಸುಮಾರು 14 ಕಿಲೋಮೀಟರ ದೂರವಿರುವ ಆಧ್ಯಾತ್ಮಿಕ ಕೇಂದ್ರವಾದ ಶಿವಯೋಗ ಮಂದಿರ ಮತ್ತು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಧಾರ್ಮಿಕ ತರಬೇತಿಯನ್ನು ಪಡೆದರು.
ಸಿದ್ಧರಾಮರ ಪೂರ್ವಿಕರ ಪುತ್ರವರ್ಗ ಪರಂಪರೆಗೆ ಸೇರಿದ ಸಿಂದಗಿ ಹಿರೇಮಠದ ಹನ್ನೆರಡನೇ ಪಟ್ಟಾಧ್ಯಕ್ಷರಾಗಿದ್ದ, ಪೂರ್ವಾಶ್ರಮದ ಸಂಬಂಧದಲ್ಲಿ ದೊಡ್ಡಪ್ಪ ಆಗಬೇಕಿದ್ದ ಶ್ರೀ ಶಾಂತವೀರ ಶಿವಾಚಾರ್ಯರಿಗೆ ಸಿದ್ಧರಾಮರ ಮೇಲೆ ಎಣೆಯಿಲ್ಲದ ಪ್ರೀತಿ ಮತ್ತು ಸಿದ್ಧರಾಮರ ಅಂತಃಶಕ್ತಿಯನ್ನು ಮೊಟ್ಟ ಮೊದಲು ಗುರುತಿಸಿದವರು. ಸಿದ್ಧರಾಮರ ವ್ಯಕ್ತಿತ್ವ ವಿಕಸನಕ್ಕೆ ಒಂದು ಬೆಳಕು ಬೇಕಿತ್ತು. ಅದಕ್ಕೆ ಬೆಳಕಾದವರು ಮತ್ತು ಬೆಳವಣಿಗೆಗೆ ನೀರೆರೆದು ಪೋಷಿಸಿದವರು ಶ್ರೀ ಶಾಂತವೀರ ಶಿವಾಚಾರ್ಯರು. ಅಲ್ಲಿಂದ ಸಿದ್ಧರಾಮರ ಆಧ್ಯಾತ್ಮ ಲೋಕದ ಅನಾವರಣ ಶುರುವಾಯಿತು. ಸಿಂದಗಿ ಹಿರೇಮಠದ ಪೀಠಕ್ಕೆ ಸಿದ್ಧರಾಮರೇ ಹದಿಮೂರನೇ ಪಟ್ಟಾಧ್ಯಕ್ಷ ಆಗಬೇಕು ಎಂದು ಅವರ ಬಯಕೆಯಾಗಿತ್ತು.
ಏಳನೇ ತರಗತಿ ಓದಲು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಸೇರ್ಪಡೆಯಾದರು. ಮಠದ ವಾತಾವರಣಕ್ಕೆ ಒಗ್ಗಿಕೊಂಡದ್ದಲ್ಲದೇ ಬಹಳ ಬೇಗ ಸಾಧಕರ ನಡುವೆ ಕೇಂದ್ರ ವ್ಯಕ್ತಿಯಾದರು. ಕಾಯಕಯೋಗಿ ಮತ್ತು ಪುಸ್ತಕ ಪ್ರೇಮಿಯಾಗಿದ್ದ ಸಿದ್ಧರಾಮರು, ತಾವು ಓದಿದ ಪುಸ್ತಕದ ಸಾರಾಂಶವನ್ನು ಸಾಯಂಕಾಲ ಎಲ್ಲರಿಗೂ ವಿವರಿಸುತ್ತಾ ಪ್ರೀತಿ, ಗೌರವ ಆದರವನ್ನು ಬೆಳೆಸಿಕೊಂಡರು. ಹೀಗಾಗಿ ಅವರ ಸುತ್ತ ಸುಸಂಸ್ಕೃತ ಪ್ರಜ್ಞಾವಂತರ ವರ್ತುಳ ನಿರ್ಮಾಣವಾಯಿತು.
ಸಿದ್ಧರಾಮರು ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆಯಿತ್ತಿರಲಿಲ್ಲ. ತಮ್ಮ ವ್ಯಕ್ತಿತ್ವಕ್ಕೆ ಪೂರಕವಾಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಎಷ್ಟು ಶ್ರದ್ಧೆಯಿಂದ ಕಲಿಯುತ್ತಿದ್ದರೆಂದರೆ ಮಠದ ಆವರಣದಲ್ಲಿ ಇದ್ದ ಮುದ್ರಣಾಲಯದಲ್ಲಿ ಬರುವ ಹಸ್ತಪ್ರತಿಗಳನ್ನು ತಿದ್ದುವುದರಿಂದ ಹಿಡಿದು, ಮೊಳೆ ಜೋಡಿಸುವ ಕೆಲಸದಿಂದ ಹಿಡಿದು ಮುದ್ರಣ ಯಂತ್ರವನ್ನೂ ನಡೆಸುವುದನ್ನು ಕಲಿತಿದ್ದರೆಂದರೆ ಆಶ್ಚರ್ಯವಾಗುತ್ತದೆ.
ತಮ್ಮ ಅಮೋಘ ಮತ್ತು ಆಧುನಿಕ ವೈಚಾರಿಕತೆಯ ಭಾಷಣಗಳಿಂದ ಅದಾಗಲೇ ಪ್ರಸಿದ್ಧರಾಗಿದ್ದ ಸಿದ್ಧರಾಮರಿಗೆ ದಿನಾಂಕ 09.10.1972 ರಲ್ಲಿ ಗದಗಿನ ಶ್ರೀ ತೋಂಟದಾರ್ಯ ಮಠದಿಂದ ಅತಿಥಿ ಉಪನ್ಯಾಸ ಮಾಡಲು ಆಹ್ವಾನ ಬರುತ್ತದೆ. ಒಟ್ಟು ಐದು ವಾರಗಳ ಕಾಲ “ನಡೆ ಕಲಿಸಿದ ಬಸವಣ್ಣ” ಎನ್ನುವ ವಿಷಯದ ಮೇಲೆ ಅಮೋಘ ಮತ್ತು ಪ್ರಭುದ್ಧ ಪ್ರವಚನ ನೀಡುತ್ತಾರೆ. ಈ ಪ್ರವಚನ ಮಾಲಿಕೆಗಳು ಅಲ್ಲಿನ ಭಕ್ತರ ಮೇಲೆ ಮತ್ತು ಅಂದಿನ ಪಟ್ಟಾಧ್ಯಕ್ಷರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಮಟ್ಟಕ್ಕೆ ಬೆಳೆಯುತ್ತದೆ.
ಸಿಂದಗಿಯ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಶಾಂತವೀರ ಶಿವಾಚಾರ್ಯರನ್ನು ಇದಕ್ಕೆ ಸಂಬಂಧಿಸಿದಂತೆ ಕೋರಿದಾಗ ಸಮ್ಮತಿಸಲಿಲ್ಲ. ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಸಿದ್ಧರಾಮರು ಸಮ್ಮತಿ ಸೂಚಿಸಿದರು. ದೊಡ್ಡ ಮಠವೊಂದಕ್ಕೆ ಮಠಾಧೀಶನಾದರೆ ಅಪಾರ ಭಕ್ತರ ಸಹಕಾರ ಪಡೆದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ವ್ಯಾಪಕವಾಗಿ ಕೈಗೊಳ್ಳಬಹುದು ಎಂದು ಮನವೊಲಿಸಿದರು. ಈ ಹಂತದಲ್ಲಿ ಪೂರ್ವಾಶ್ರಮದ ಕಿರಿಯ ಸಹೋದರ ಶ್ರೀ ಶಿವಾನಂದ ಶಿವಾಚಾರ್ಯರನ್ನು ಸಿಂದಗಿಯ ಹಿರೇಮಠದ ಪಟ್ಟಾಧ್ಯಕ್ಷರನ್ನಾಗಿ ನೇಮಿಸಲಾಯಿತು. ದಿನಾಂಕ 29.06.1974 ರಂದು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 19 ನೇಯ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದ ಸಿದ್ಧರಾಮರು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಾದರು. 1974 ರಲ್ಲಿ ಗದಗಿನ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಮೇಲೆ ಸರಿ ಸುಮಾರು ನಾಲ್ಕು ದಶಕದ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರ, ವಚನ ಸಾಹಿತ್ಯ ಮತ್ತು ಬಸವಾದಿ ಶರಣ ಸಿದ್ಧಾಂತಗಳನ್ನು ಪ್ರಪಂಚದಾದ್ಯಂತ ಬೆಳಗಿಸುವುದರಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಪಟ್ಟಣಕ್ಕೆ ಪಂಚರಾತ್ರಿ, ಹಳ್ಳಿಗೆ ಏಕರಾತ್ರಿ ಎಂದು ದಕ್ಷಿಣ ಬಾರತದುದ್ದಕ್ಕೂ ಬಸವಾದಿ ಶರಣರ ಚಿಂತನೆಗಳನ್ನು ಪ್ರಸಾರ ಮಾಡಿದ 15 ನೇ ಶತಮಾನದಲ್ಲಿ ಬಾಳಿ ಬದುಕಿದ ಶಿವಯೋಗಿ ಸೂರ್ಯ ಶ್ರೀ ಎಡೆಯೂರು ತೋಂಟದ ನಿರಂಜನ ಜಗದ್ಗುರು ಶ್ರೀ ಸಿದ್ಧಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠ ಡಂಬಳ-ಗದಗಿನ ಶ್ರೀ ತೋಂಟದಾರ್ಯ ಸಂಸ್ಥಾನ ಮಠ. ಎರಡನೇ ಸಿದ್ಧಲಿಂಗೇಶ್ವರರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಅರ್ಧನಾರೀಶ್ವರ ಶಿವಯೋಗಿಗಳವರ ಕೊಡುಗೆ ಅಪಾರ. ಡಂಬಳದಲ್ಲಿರುವ ಅವರ ಸಮಾಧಿ ಇಂದಿಗೂ ಲಕ್ಷಾಂತರ ಭಕ್ತರಿಗೆ ಕಾಮಧೇನುವೆಂದೇ ಬಿಂಬಿತವಾಗಿದೆ. ಲಕ್ಕುಂಡಿ ಜಗದ್ಗುರುಗಳೆಂದೇ ಕರೆಯಲ್ಪಡುತ್ತಿದ್ದ 16 ನೇ ಜಗದ್ಗುರುಗಳಾಗಿದ್ದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿಯವರ ಕಾಲಘಟ್ಟದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ತದನಂತರ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 19 ನೇಯ ಜಗದ್ಗುರುಗಳಾದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಕಾಲಘಟ್ಟದಲ್ಲಿ ಅತ್ಯಂತ ಉನ್ನತ ಸ್ಥಾನವನ್ನಲಂಕರಿಸಿತು. ಶ್ರೀ ತೋಂಟದಾರ್ಯ ಮಠ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದಿದೆ.
ಅತ್ಯಂತ ಕಠಿಣವಾಗಿ ಸನ್ಯಾಸ ವೃತ ಆಚರಿಸಿದ್ದವರಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅಗ್ರಗಣ್ಯರು. ಇದರ ಉದಾಹರಣೆಯನ್ನು ಇಲ್ಲಿ ಉಲ್ಲೇಖ ಮಾಡಲೇಬೇಕು. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೀಠಾಧಿಪತಿಯಾದ ಮೇಲೆ ಸನ್ಯಾಸಿಯ ಜೀವನವನ್ನು ಅಕ್ಞರಶಃ ಪಾಲಿಸಲು ಪ್ರಜ್ಞಾಪೂರ್ವಕವಾಗಿ ಪೂರ್ವಾಶ್ರಮದ ಸಂಬಂಧಗಳನ್ನೆಲ್ಲಾ ಕಡಿದುಕೊಂಡಿದ್ದರು. ಅನೇಕ ಬಾರಿ ಸಿಂದಗಿಗೆ ಹೋಗಿದ್ದರೂ ಕೂಡ ಒಮ್ಮೆಯೂ ತಾವು ಹುಟ್ಟಿ, ಬೆಳೆದು, ಆಟವಾಡಿ ಬಾಲ್ಯ ಕಳೆದ ಮನೆಗೆ ಎಂದಿಗೂ ಹೆಜ್ಜೆಯಿಡಲಿಲ್ಲ. ತಂದೆ ಶ್ರೀ ಮರಯ್ಯ ಹಿರೇಮಠ ಅವರು ದಿನಾಂಕ 12.02.1994 ರಂದು ಮತ್ತು ತಾಯಿ ಶ್ರೀಮತಿ ಶಂಕರವ್ವ ದಿನಾಂಕ 27.11.2012 ರಂದು ನಿಧನರಾದರು. ಅವರ ಸಹೋದರ ಪ್ರಿಯದರ್ಶಿನಿ ಹ್ಯಾಂಡಲೂಮ್ಸ್ ನಲ್ಲಿ ನೌಕರರಾಗಿದ್ದ ಶ್ರೀ ಕುಮಾರಸ್ವಾಮಿ ಹಿರೇಮಠ ಅವರು ನಿವೃತ್ತರಾದ ಬಳಿಕ ನಿಧನರಾದರು. ಅಪ್ಪ, ಅವ್ವ, ಸಹೋದರರ ಅಂತ್ಯಕ್ರಿಯೆಗೆ ಹೋಗುವುದಿರಲಿ ಅಂತಿಮ ದರ್ಶನಕ್ಕೂ ಹೋಗಲಿಲ್ಲ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ಅವರ ಈ ಘನತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಇಡೀ ಕುಟುಂಬವೂ ಸಹ ಅವರ ಗೌರವ, ನಡೆ-ನುಡಿಗಳಿಗೆ ಚ್ಯುತಿ ಬಾರದಂತೆ ಅಷ್ಟೇ ಅಂತರ ಕಾಯ್ದುಕೊಂಡಿದ್ದು ಅನುಭೂತಿ ಚರಿತ್ರೆಯಲ್ಲಿ ದಾಖಲರ್ಹವಾದ ಸಂದೇಶ.
ಬಸವಾದಿ ಶರಣ ಸಿದ್ಧಾಂತಗಳನ್ನು ಮತ್ತು ಧಾರ್ಮಿಕ ಸೂಕ್ಮತೆಗಳನ್ನು ತಮ್ಮ ಇಡೀ ಜೀವನದುದ್ದಕ್ಕೂ ಅತ್ಯಂತ ಶ್ರದ್ಧೆಯಿಂದ ಮೈಗೂಡಿಸಿಕೊಂಡಿದ್ದ ಶ್ರೀಗಳ ನಡೆ-ನುಡಿಗಳು ಅತ್ಯಂತ ಶ್ರೇಷ್ಠ ಮಟ್ಟದ್ದಾಗಿದ್ದವು. ವೈದಿಕ ವಿಧಿ-ವಿಧಾನಗಳಂಥ ಅನೇಕ ಗೊಡ್ಡು ಸಂಪ್ರದಾಯಗಳನ್ನು ಮತ್ತು ಮಡಿವಂತಿಕೆಗಳನ್ನು ಆಮೂಲಾಗ್ರವಾಗಿ ಕಿತ್ತೆಸೆದು ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದವರು. 1974 ರಲ್ಲಿ ಪೀಠಾರೋಹಣದ ನಂತರ ಪೀಠ ಪರಂಪರೆಯ ಅನೇಕ ಮೂಢ ನಂಬಿಕೆಗಳನ್ನು ಜನರ ಪ್ರೀತಿ, ವಿಶ್ವಾಸದಿಂದ ಬದಲಾಯಿಸಿದರು.
ಶ್ರೀಗಳು ಕೇವಲ ಮಠೀಯ ಚಿಂತನೆಗಳಿಗೆ ಸೀಮಿತವಾಗದೆ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡಿದರು. ಜಾತ್ರೆ ಎಂದರೆ ಕೇವಲ ಉತ್ತತ್ತಿ ಬಾಳೆಹಣ್ಣು ತೇರಿಗೆ ಎಸೆಯುವುದಲ್ಲ. ಅದೊಂದು ಭಾವೈಕ್ಯತೆಯ ಸಂದೇಶವನ್ನು ನೀಡಬೇಕೆಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ವಿಯಾಗಿದ್ದರು. ಎಲ್ಲ ಸಮುದಾಯದವರೂ ಒಟ್ಟಿಗೆ ಕುಳಿತು ಊಟ ಮಾಡುವ ರೊಟ್ಟಿ ಜಾತ್ರೆ ವಿಶೇಷ ಮಹತ್ವ ಪಡೆಯಿತು. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ತೇರಿನ ಗಾಲಿಗಳಿಗೆ ಅನ್ನ ಹಾಕುವುದು ಮೂರ್ಖತನ ಎಂದು ಅದನ್ನು ನಿಲ್ಲಿಸಿದರು. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವ ಬದಲು ಬಡಮಕ್ಕಳಿಗೆ ಹಾಲುಣಿಸುವುದು, ಪವಾಡ ಬಯಲು ಮಾಡುವುದರ ಮೂಲಕ ವೈಚಾರಿಕ ಕ್ರಾಂತಿಯನ್ನು ಪ್ರಾರಂಭಿಸಿದರು.
ಸ್ವಾಮಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತುಕೊಂಡು ನಡೆಯುವುದು ಮಾನವೀಯತೆಯ ವಿರೋಧಿ ಎಂದು ಶ್ರೀಗಳು ನಂಬಿದ್ದರು. 1976 ರಲ್ಲಿ ಅಡ್ಡಪಲ್ಲಕ್ಕಿ ಉತ್ಸವವನ್ನು ಮತ್ತು ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ನೀಡಿದ್ದ ಬಂಗಾರದ ಕಿರೀಟ, ಬಂಗಾರದ ಆಭರಣಗಳನ್ನು ಶ್ರೀಗಳು ತ್ಯಜಿಸಿದ್ದರು. ಅಡ್ಡ ಪಲ್ಲಕ್ಕಿಯಲ್ಲಿ ಬಸವಾದಿ ಶರಣರ ವಚನ ಕಟ್ಟುಗಳನ್ನು, ಶರಣರ ಭಾವಚಿತ್ರಗಳನ್ನು ಇಟ್ಟು ಅದರ ಮುಂದೆ ಪಾದಯಾತ್ರೆಯಿಂದ ಉತ್ಸವಗಳಲ್ಲಿ ಭಾಗವಹಿಸಿ ಸರಳಾತಿ ಸರಳ ನಡೆಯನ್ನು ಪ್ರದರ್ಶಿಸಿದ್ದರು. ಇಡೀ ಶ್ರೀಮಠವನ್ನೇ ಬಸವ ತತ್ವದ ಮಠವನ್ನಾಗಿ ಪರಿವರ್ತಿಸಿದರು.
ಕೊಲುವನೇ ಮಾದಿಗ | ಹೊಲಸು ತಿಂಬವನೇ ಹೊಲೆಯ ||
ಕುಲವೇನೊ | ಅವದಿರ ಕುಲವೇನೊ ||
ಸಕಲ ಜೀವಾತ್ಮರಿಗೆ | ಲೇಸನೆ ಬಯಸುವ ||
ನಮ್ಮ ಕೂಡಲ ಸಂಗನ | ಶರಣರೇ ಕುಲಜರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-591)
12 ನೇ ಶತಮಾನದ ಸಾಮಾಜಿಕ ಸಮಾನತೆಯ ಕ್ರಾಂತಿಯನ್ನು ಅಕ್ಷರಶಃ ಪಾಲಿಸುವಲ್ಲಿ ಮುಂಚೂಣಿಯಲ್ಲಿದ್ದವರು ಶ್ರೀಗಳು. ಸಕಲ ಜೀವಾತ್ಮರಿಗೇ ಲೇಸನೇ ಬಯಸುವ ನಮ್ಮ ಕೂಡಲ ಸಂಗಮನ ಶರಣರೆ ಕುಲಜರು ಎನ್ನುವ ವಚನದ ಸಾಲಿನಂತೆ ದೀನ ದಲಿತರ, ನೊಂದವರ, ಶೋಷಿತರ ಸೇವೆಯೇ ಲಿಂಗಪೂಜೆಯೆಂದು ಬಾಳಿ ಬದುಕಿದ್ದವರು. ದಲಿತರು, ಅಲ್ಪಸಂಖ್ಯಾತರು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡು ದಾಸೋಹದಲ್ಲಿ ಪ್ರಸಾದ ವಿತರಣೆಯಲ್ಲಿಯೂ ಕಾರ್ಯಪ್ರವೃತ್ತರಾಗತೊಡಗಿದರು. ಇದು ಶ್ರೀಗಳ ಸಾಮಾಜಿಕ ಕಳಕಳಿಯ ಒಂದು ಅತ್ಯುತ್ತಮ ಉದಾಹರಣೆ.
ಕಳೆದ ನಾಲ್ಕು ದಶಕಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದ ಪ್ರತೀ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಒಂದು ಇತಿಹಾಸವನ್ನೇ ಸೃಷ್ಟಿಸಿದೆ. ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ ವಿಚಾರಗಳ ವಿನಿಮಯಕ್ಕೆ ಪ್ರಖ್ಯಾತಿಯನ್ನು ಪಡೆಯಿತು. ಈ ವೇದಿಕೆ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗೆ ಎಲ್ಲ ಮತಬಾಂಧವರ ವಿಚಾರ ವೇದಿಕೆಯಾದದ್ದು ಶೀಗಳ ಸಮರ್ಥ ದಾರ್ಶನಿಕತೆಗೆ ಸಾಕ್ಷಿ.
ಬಸವ ತತ್ವವನ್ನು ದೇಶ-ವಿದೇಶದಲ್ಲಿ ಪ್ರಸಾರ ಮಾಡಿದ್ದಾರೆ. ಬಸವ ಸಿದ್ಧಾಂತ-ಪರಂಪರೆಯ ಪ್ರತಿನಿಧಿಗಳಾಗಿ ಬಸವಣ್ಣನವರಿಗೆ ಅರ್ಪಿಸಿಕೊಂಡಂಥವರಾಗಿ ಜನಮಾನಸರ ಹೃದಯದಲ್ಲಿ ಸಾಮಾನ್ಯರ ಸ್ವಾಮೀಜಿಗಳೆಂದೇ ನೆಲೆಯೂರಿದ್ದಾರೆ. ಬಸವಣ್ಣನವರು ತೋರಿದ ಮಾರ್ಗದಲ್ಲಿ ಮುನ್ನಡೆದ ಶ್ರೀಗಳು ಜಾತೀಯತೆ, ಅಸಮಾನತೆ, ಅಸ್ಪೃಷ್ಯತೆ, ಮೇಲು-ಕೀಳು, ಹೆಣ್ಣು-ಗಂಡು, ಎಂಬ ಭೇದಭಾವಗಳ ವಿರುದ್ಧ ನಿರಂತರ ಹೋರಾಟ ಮಾಡಿದ್ದರು. ಶ್ರೀಗಳ ಈ ಸಮಾಜಮುಖಿ ಚಿಂತನೆಯನ್ನು ಗುರುತಿಸಿದ ಅಂದಿನ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಕೇಂದ್ರ ಸರ್ಕಾರ 2001 ರಲ್ಲಿ ರಾಷ್ಟ್ತಪತಿ ಭವನದಲ್ಲಿ “ರಾಷ್ಟ್ರೀಯ ಕೋಮು ಸೌಹಾರ್ದತಾ ಮತ್ತು ಏಕತಾ ಪ್ರಶಸ್ತಿ” ನೀಡಿ ಗೌರವಿಸಿತು.
ಕಳೆದ ಹಲವಾರು ದಶಕಗಳಿಂದ ಅನ್ನ ದಾಸೋಹ ನಡೆಸಿಕೊಂಡು ಬಂದ ಶ್ರೀಗಳು ಶೈಕ್ಷಣಿಕವಾಗಿ ಅನುಕೂಲವಾಗಲು ಗದಗ, ಹಾವೇರಿ ಸುತ್ತಮುತ್ತ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಬಾಲವಾಡಿ, ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿ ಸಹಿತ, ಪಾಲಿಟೆಕ್ನಿಕ್ ಮತ್ತು ಇಂಜನೀಯರಿಂಗ್ ನಂಥ ಉನ್ನತ ವ್ಯಾಸಂಗವೂ ಸೇರಿದಂತೆ 80 ಕ್ಕೂ ಅಧಿಕ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಪ್ರಸಾರ ಮತ್ತು ಸಮಾಜ ಸೇವೆಗಾಗಿ 1994 ರಲ್ಲಿ ಗುಲಬರ್ಗಾ ವಿಶ್ವ ವಿದ್ಯಾಲಯ ಡಿ. ಲಿಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಬಸವ ತತ್ವ ಮತ್ತು ಶರಣ ಸಿದ್ಧಾಂತಗಳನ್ನು ಪ್ರಸಾರ ಮಾಡುವಲ್ಲಿ ಶ್ರಮಿಸುತ್ತಿರುವ ಅಪರೂಪದ ಲೇಖಕ ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆಯವರು. ಅವರು ಶ್ರೀಗಳ ಒಂದು ಸಂದರ್ಶನದಲ್ಲಿ ಕೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಸ್ವಾಮೀಜಿ ತಾವು ಯಾಕೆ ಮೆಡಿಕಲ್ ಕಾಲೇಜು ಆರಂಭಿಸಲಿಲ್ಲ? ಅಯ್ಯೋ ತಮ್ಮಾ ಮೆಡಿಕಲ್ ಕಾಲೇಜು ಅಂದರೆ ಹಣ ಮಾಡುವ ದಂಧೆ. ನಮಗ್ಯಾಕೆ ಹಣ ಬೇಕು?
ಕಾವಿ ತೊಟ್ಟು ಧಾರ್ಮಿಕ ಉದ್ಯಮದಿಂದ ದೂರವೇ ಉಳಿದ ಅಪರೂಪದ ಸ್ವಾಮೀಜಿಗಳ ಪೈಕಿ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳೂ ಒಬ್ಬರು. ಇದು ಕಾವಿಯೊಳಗೆ ಅಂತಃಕರಣವನ್ನು ಮಾತ್ರವೇ ಉಳಿಸಿಕೊಂಡು ಇತರೆ ವಸೂಲಿ ಬಾಜಿಗಳಿಂದ ದೂರವೇ ಉಳಿದಿದ್ದ ಸ್ವಾಮಿಗಳು ಎಂದು ಮಿತ್ರರಾದ ವಿಶ್ವಾರಾಧ್ಯ ಸತ್ಯಂಪೇಟೆಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಪುಸ್ತಕ ಪ್ರಕಟಣೆಯಲ್ಲಿ ವಿಶ್ವ ವಿದ್ಯಾಲಯದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಲಿಂಗಾಯತ ಮಠಗಳಲ್ಲಿ ಡಂಬಳ-ಗದಗಿನ ಶ್ರೀ ತೋಂಟದಾರ್ಯ ಸಂಸ್ಥಾನ ಮಠ ಅಗ್ರಗಣ್ಯ. ಈ ನಿಟ್ಟಿನಲ್ಲಿ ಶ್ರೀಗಳ ಕಾರ್ಯ ಅಮೋಘವಾದದ್ದು. ತಮ್ಮ ಪ್ರವಚನಗಳಿಂದ ಬಂದ ಹಣವನ್ನು ಮಠಕ್ಕೆ ಖರ್ಚು ಮಾಡದೆ ಅಪ್ರಕಟಿತ ವಚನ ಸಾಹಿತ್ಯ ಮುದ್ರಣಕ್ಕೆ ಉಪಯೋಗಿಸಿಕೊಂಡರು. ಹಾಗಾಗಿಯೇ ಶ್ರೀಗಳನ್ನು ಕನ್ನಡದ ಜಗದ್ಗುರುಗಳು, ಪುಸ್ತಕದ ಸ್ವಾಮೀಜಿಗಳು ಎಂದೇ ಅಭಿಮಾನ ಮತ್ತು ಗೌರವದಿಂದ ಸಂಭೋಧಿಸಲ್ಪಡುವಂತಾಯಿತು.
ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕನಸಿನ ಕೂಸಾದ “ಲಿಂಗಾಯತ ಪುಣ್ಯಪುರುಷರ ಸಾಹಿತ್ಯ ಮಾಲೆ” ವತಿಯಿಂದ ವಚನ ಸಾಹಿತ್ಯ, ಬಸವಾದಿ ಶರಣರ ಚರಿತ್ರೆಗಳು, ಐತಿಹಾಸಿಕ ಮೈಲಿಗಲ್ಲುಗಳನ್ನು ಬಿಂಬಿಸುವ ಪುಸ್ತಕಗಳ ಪ್ರಕಟಣೆಯನ್ನು ಯುದ್ಧೋಪಾದಿಯಲ್ಲಿ ಮಾಡಿದ್ದು ಕನ್ನಡ ಸಾಹಿತ್ಯ ಲೋಕದ ಅದ್ಭುತ ಕೆಲಸ. 600 ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಶ್ರೀಮಠದ ಮೂಲಕ ಪ್ರಕಟ ಮಾಡುವುದರ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇದಕ್ಕೆ ತಮ್ಮ ನಿಸ್ವಾರ್ಥ ಸೇವೆಯನ್ನು ಒದಗಿಸಿದವರು ಅನೇಕ ಮಹನೀಯರಲ್ಲಿ ವಚನ ಸಾಹಿತ್ಯ ಸಂಶೋಧಕರಾದಂಥ ಡಾ. ಎಮ್. ಎಮ್. ಕಲಬುರ್ಗಿಯವರು, ಶ್ರೀಗಳ ನಿಕಟ ಒಡನಾಡಿಗಳಾಗಿದ್ದಂತ ಡಾ. ಚಂದ್ರಶೇಖರ ವಸ್ತ್ರದ ಅವರು, ಬಸವ ತತ್ವದ ಸಂಶೋಧಕರು ಡಾ. ವೀರಣ್ಣ ರಾಜೂರ ಅವರು, ಸಮನ್ವಯ ಕವಿ ಶ್ರೀ ಚನ್ನವೀರ ಕಣವಿಯವರಂಥವರ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಇದೆ. ಈ ಪ್ರಕಾಶನ ಸೇವೆಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರ 2010 ರ ಸಾಲಿನ “ಅತ್ಯುತ್ತಮ ಪ್ರಕಾಶನ ಸಂಸ್ಥೆ” ಪ್ರಶಸ್ತಿ ನೀಡಿ ಗೌರವಿಸಿದೆ.
ಬಸವಣ್ಣನವರ ಅತಿದೊಡ್ಡ ಕನಸು ಎಂದರೆ ದುಡಿಯುವ ಕೈಗಳಿಗೆ ನಿರಂತರ ಕೆಲಸ ಮತ್ತು ಹಸಿವುಮುಕ್ತ ಸಮಾಜ. ಒಂದರ್ಥದಲ್ಲಿ ಬಸವನೆಂಬ ಬಳ್ಳಿಯ ತಾಯಿ ಬೇರು ಅಂದರೆ ಕಾಯಕವೇ ಕೈಲಾಸ. ಈ ತತ್ವದಲ್ಲಿ ಅಚಲ ನಂಬಿಕೆಯಿದ್ದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸ್ವತಃ ಗುದ್ದಲಿ ಹಿಡಿದು ಡಂಬಳದಲ್ಲಿ ಕೈಯಾರೆ ಭಾವಿ ತೋಡಿ, ಉತ್ತಿ-ಬಿತ್ತಿ ಕೃಷಿಕರಂತೆ ಕಾಯಕ ಮಾಡಿದ್ದನ್ನು ಅಲ್ಲಿನ ಭಕ್ತರು ಇನ್ನೂ ನೆನಪಿಸಿಕೊಳ್ಳುತ್ತಾರೆ.
ಕೃಷಿಯಲ್ಲಿ ಆಧುನಿಕ ವಿಜ್ಞಾನವನ್ನು ಬಳಸಿಕೊಳ್ಳಲು ಸಲಹೆ ನೀಡಿದರು. ಇದಕ್ಕಾಗಿ ಹರಿಯಾಣಾದ ಹಿಸ್ಸಾರನಲ್ಲಿರುವ ಶ್ರೀ ಚೌಧರಿ ಚರಣಸಿಂಗ್ ಕೃಷಿ ವಿಶ್ವ ವಿದ್ಯಾಲಯ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ಮತ್ತು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿ ವಿಜ್ಞಾನಿಗಳನ್ನು ಕರೆಸಿ ಶ್ರೀಮಠದಲ್ಲಿ ಉಪನ್ಯಾಸಗಳನ್ನೂ ಸಹ ಏರ್ಪಡಿಸಿದ್ದರು. ದಿನಾಂಕ 13.01.2001 ರಂದು ಬೆಳಗಾವಿಯ ಕೆ.ಎಲ್.ಈ ಸಂಸ್ಥೆಯ ಸಂಸ್ಥಾಪನಾ ದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮಾತುಗಳನ್ನು ಇಲ್ಲಿ ಪ್ರಸ್ತಾಪ ಮಾಡಲೇಬೇಕು.
ಕರ್ನಾಟಕ ಗಂಡುಮೆಟ್ಟಿನ ನೆಲ. ಬೆಳಗಾವಿಯಲ್ಲಿ ಕೆ.ಎಲ್.ಈ ಸಂಸ್ಥೆಯು ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಧ್ಯಾರ್ಥಿಗಳ ಕನಸಿಗೆ ನೀರೆರೆದು ಪೋಷಿಸುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಇಲ್ಲಿ ಆರಂಭವಾಗಿರುವುದು ತಾಂತ್ರಿಕ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಿದೆ. ಮಲೆನಾಡಿನ ಬೆಳಗಾವಿ ಕೃಷಿ ಚಟುವಟುಕೆಗಳ ಬೀಡು. ಬೆಳಗಾವಿಯಲ್ಲಿ ಪಶು ವೈದ್ಯಕೀಯ ವಿಶ್ವ ವಿದ್ಯಾಲಯ ಆರಂಭಗೊಂಡರೆ ರೈತಾಪಿ ಜನರಿಗೆ ಮತ್ತಷ್ಟು ವೈಜ್ಞಾನಿಕವಾಗಿ ಸಹಕಾರ ಸಿಗುತ್ತದೆ. ಆ ಕಾರಣ ಸರ್ಕಾರ ಬೆಳಗಾವಿಯಲ್ಲಿ ಪಶು ವೈದ್ಯಕೀಯ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು.
ಎಂಥ ದೂರದೃಷ್ಟಿಯ ಸಂದೇಶ. ರೈತರು ಈ ದೇಶದ ಬೆನ್ನೆಲುಬು. ಇಂಥ ಕೃಷಿ ಕೇತ್ರವನ್ನು ವಿಜ್ಞಾನದ ಮೂಲಕ ಸುಧಾರಿಸುವ ಕನಸನ್ನು ಶ್ರೀಗಳು ಕಂಡಿದ್ದರು ಮತ್ತು ಅದನ್ನು ಸಾಕಾರಗೊಳಿಸಲು ಸಾಕಷ್ಟು ಶ್ರಮವಹಿಸಿದ್ದರು. ವಿಜಯಪುರ ಜಿಲ್ಲೆಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಹರಿಸುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನೀರು ಬಿಡುವವರೆಗೂ ಇದ್ದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು ಇಂದಿಗೂ ರೈತರು ನೆನಪಿಸಿಕೊಳ್ಳುತ್ತಾರೆ. ಇದು ಶ್ರೀಗಳ ರೈತಪರ ಕಾಳಜಿಗೆ ಹಿಡಿದ ಕನ್ನಡಿ.
ರೈತಪರ ಕಾಳಜಿ ಮತ್ತು ರೈತಪರ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ಶ್ರೀಗಳು ಗದಗ ಜಿಲ್ಲೆಯಲ್ಲಿ ಪೋಸ್ಕೋ, ಎಸ್ಸಾರ್, ಆಧುನಿಕ್ ಮೆಟ್ಯಾಲಿಕಸ್ ಉಕ್ಕಿನ ಉದ್ಯಮಗಳು ಕಾರ್ಖಾನೆ ಪ್ರಾರಂಭ ಮಾಡುವುದನ್ನು ವಿರೋಧಿಸಿದ್ದರು. ಕಪ್ಪತಗುಡ್ಡದ ಸುತ್ತಮುತ್ತ ಸಿಗುವ ಕಬ್ಬಿಣದ ಅದಿರನ್ನು ಉಪಯೋಗಿಸಿ ಉಕ್ಕನ್ನು ತಯಾರಿಸುವ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದವು. ಇದಕ್ಕೆ ಬೇಕಾಗುವ 3,382 ಎಕರೆ ಗದಗ ತಾಲೂಕಿನ ಹಳ್ಳಿಗುಡಿ. 3,000 ಎಕರೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ, ಮುಂಡರಗಿ ತಾಲೂಕಿನ 800 ಎಕರೆ ಮೇವುಂಡಿ ಗ್ರಾಮಗಳ ರೈತರ ಫಲವತ್ತಾದ ಭೂಮಿಯನ್ನು ಕಬಳಿಸುವ ಹುನ್ನಾರದಲ್ಲಿತ್ತು. ಈ ಕೈಗಾರಿಕೆಗಳ ವಿರುದ್ಧ ಶ್ರೀಗಳು ಗುಡುಗಿದರು. ಬೃಹತ್ ಚಳುವಳಿಯನ್ನೇ ಪ್ರಾರಂಭಿಸಿದರು. ಶ್ರೀಗಳ ರೈತಪರ ಕಾಳಜಿಯನ್ನರಿತ ಕರ್ನಾಟಕ ಸರ್ಕಾರ ಈ ಯೋಜನೆಗಳನ್ನೇ ಕೈಬಿಟ್ಟಿತು.
ನ್ಯಾಯ ನಿಷ್ಠುರತೆ, ನಿರ್ಭೀತ ಮಾತುಗಾರಿಕೆ, ನಿರಾಡಂಬರ ಜೀವನ, ಪ್ರಗತಿಪರ ವಿಚಾರಧಾರೆ, ಸಾಮಾಜಿಕ ನ್ಯಾಯ ಪರಿಪಾಲನೆ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಎಲ್ಲರಿಗಿಂತ ವಿಭಿನ್ನವಾಗಿ ಎದ್ದು ನಿಲ್ಲುತ್ತಾರೆ. ಇದರ ಒಂದು ಉದಾಹರಣೆಯೇ 10.04.2009 ರಂದು ಶನಿವಾರ ಬಾದಾಮಿ ತಾಲೂಕಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ವೀರಶೈವ ಶಿವಯೋಗ ಮಂದಿರಗಳ ಶತಮಾನೋತ್ಸವ ಮತ್ತು ಸಾಹಿತ್ಯ ಸಮಾವೇಶದ ಸಂದರ್ಭದಲ್ಲಿ ಶ್ರೀಗಳು ಆಡಿದ ನಿರ್ಭಿತ ಮಾತುಗಳು.
ಶಿವಯೋಗ ಮಂದಿರದಲ್ಲಿ ಜಾತಿ ಜಂಗಮರಿಗೆ ಅಷ್ಠೇ ಪ್ರವೇಶ ಎನ್ನುವ ಬೈಲಾವನ್ನು ತಿದ್ದುಪಡಿ ಮಾಡಬೇಕು. ಅದೇ ರೀತಿ ಸಂಗನ ಬಸವ ಸ್ವಾಮಿಗಳು ಶಿವಯೋಗ ಮಂದಿರದ ಯಜಮಾನಿಕೆ ಬಿಡಲಿ. ಅವರ ಜಾಗಕ್ಕೆ ಮತ್ತೆ ಜಂಗಮ ಮೂಲದವರೇ ಬರಬೇಕೆಂಬ ಹಠ ಹಿಡಿಯದೆ, ಲಿಂಗಾಯತರ ಇತರೆ ಒಳಪಂಗಡಗಳಿಂದ ಒಬ್ಬರನ್ನು ಆಯ್ದು ತಂದು ಕೂರಿಸಲಿ. ಬರುವ ಹೊಸಬರಿಗೆ ಕನ್ನಡದ ಜೊತೆಗೆ ಹಿಂದಿ, ಇಂಗ್ಲೀಷು ಗೊತ್ತಿರಲಿ. ಇವತ್ತಿನ ವಿದ್ಯಮಾನಕ್ಕೆ ಅದು ಅವಶ್ಯಕ. ರಾಮಕೃಷ್ಣ ಪರಮಹಂಸರ ಹೆಸರು ಜಗತ್ತಿಗೆ ತಿಳಿಸುವುದಕ್ಕೆ ಕಾರಣ ಇಂಗ್ಲೀಷು ಬಲ್ಲ ವಿವೇಕಾನಂದರು ಕಾರಣ. ಆದರೆ, ಬಸವಣ್ಣನವರ ಹೆಸರು ಕರ್ನಾಟಕದಾಚೆ ದಾಟಿ ಹೋಗಲಿಲ್ಲ. ಇವತ್ತು ನಮ್ಮ ಲಿಂಗಾಯತ ಧರ್ಮ ನವೀಕರಣಗೊಳ್ಳಬೇಕಿದೆ. ಜಾಗತೀಕರಣಕ್ಕೆ ತೆರೆದುಕೊಳ್ಳಬೇಕಿದೆ. ಈ ಬಗ್ಗೆ ಸರ್ವರೂ ಯೋಚಿಸಲಿ. ಭೀಮಣ್ಣ ಖಂಡ್ರೆಯವರಿಗೆ ತುಂಬ ವಯಸ್ಸಾಗಿದೆ. ಅವರಿನ್ನು ವೀರಶೈವ ಮಹಾಸಭಾಕ್ಕೆ ರಾಜೀನಾಮೆ ಕೊಟ್ಟು ಯುವಕರಿಗೆ ನಾಯಕತ್ವ ವಹಿಸಲಿ.
ಎಂಥ ಗಟ್ಟಿ ಧ್ವನಿ ಶ್ರೀಗಳದ್ದು. ಇಡೀ ಸಭೆಯೇ ಒಂದು ಕ್ಷಣ ತಬ್ಬಿಬ್ಬಾಗಿದ್ದನ್ನು ಅಂದಿನ ಸಭೆಯಲ್ಲಿ ಭಾಗವಹಿಸಿದ್ದವರೂ ಇನ್ನೂ ಜ್ಞಾಪಿಸಿಕೊಳ್ಳುತ್ತಾರೆ. ಇಂಥ ಒಂದು ದಿಟ್ಟ ನಿಲುವಿಗೆ ಶ್ರೀಗಳು ಯಾವಾಗಲೂ ಬದ್ಧರಾಗಿದ್ದರು. ಅಂದಿನ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ತೂರಲಾಯಿತು. ಆದರೂ ಶ್ರೀಗಳು ವಿಚಲಿತರಾಗಲಿಲ್ಲ.
“ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎನ್ನುವ ಕುವೆಂಪುರವರ ವಾಣಿಯಂತೆ ಬಾಲ್ಯದಿಂದಲೂ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡಕ್ಕಾಗಿ ಅಗಾಧ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲಾ ಮುಂಚೂಣಿಯಲ್ಲಿ ನಿಂತು ಗುಡುಗಿದ್ದಾರೆ. 1980 ರಲ್ಲಿ ಸಿಂದಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾವೇಶದಲ್ಲಿ ಮಾಡಿದ ಗರ್ಜನೆ ಮುಂದೆ ಗೋಕಾಕ್ ಚಳುವಳಿಗೆ ದಾರಿ ಮಾಡಿಕೊಟ್ಟಿತು. ಈ ಹೋರಾಟವನ್ನು ಮುಂದುವರೆಸಿದ ಶ್ರೀಗಳು ಗೋಕಾಕ ವರದಿ ಅನುಷ್ಠಾನದವರೆಗೂ ಬಿಡಲಿಲ್ಲ.
2000 ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು 19.01.2007 ರಂದು ನರಗುಂದದಲ್ಲಿ ಪಾದಯಾತ್ರೆ ನಡೆಸಿದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸರ್ಕಾರದ ವಿರುದ್ಧ ಗುಡುಗಿ ಸರ್ಕಾರದ ಗಮನ ಸೆಳೆದಿದ್ದರು. ರಾಜ್ಯದ ಹಿಂದುಳಿದ 114 ತಾಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ ಯಾವ ರೀತಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೊಳಿಸಬೇಕೆಂಬ ವಿಸ್ತೃತ ವರದಿಯನ್ನು ಡಾ. ಡಿ. ಎಮ್. ನಂಜುಡಪ್ಪ ಸಮಿತಿ 2002 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಅನುಷ್ಠಾನ ವಿಳಂಬವಾದಾಗ ಶ್ರೀಗಳು ಖಾರವಾಗಿ ಪ್ರತಿಕ್ರಯಿಸಿ ಸರ್ಕಾರವನ್ನು ಎಚ್ಚರಿಸಿದ್ದರು.
ಕನ್ನಡ ನಾಡು-ನುಡಿ-ಜಲದ ಪ್ರಶ್ನೆ ಬಂದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡಿದರು. ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆಗಳಿಗೆ ಅಂತಃಕರಣದಿದಂದ ಸ್ಪಂದಿಸಿ ಹೋರಾಟ ಮಾಡಿದ್ದಾರೆ. ಇಂಥ ಕನ್ನಡಾಂಬೆಯ ಸೇವೆಗಾಗಿ ಕರ್ನಾಟಕ ಸರ್ಕಾರ 1995 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಂಕಲ್ಪದಂತೆ ಗದಗ ಭೀಷ್ಮಕೆರೆಯ 105 ಎಕರೆಯಲ್ಲಿ ದೇಶದಲ್ಲೇ ಅತೀ ಎತ್ತರದ ಬಸವೇಶ್ವರರ 116 ಅಡಿ ಎತ್ತರದ ಪ್ರತಿಮೆ ಸ್ಥಾಪನೆಯಾಯಿತು. ದೇಶದಲ್ಲೇ ಅತೀ ಎತ್ತರದ ಏಳನೇಯ ಮೂರ್ತಿ ಇದಾಗಿದೆ.
ನಗರದ ಭೀಷ್ಮಕೆರೆ ಆವರಣದಲ್ಲಿ ನಿರ್ಮಾಣವಾಗಿರುವ ಈ ಬಸವಣ್ಣನವರ ಪುತ್ಥಳಿಯ ವೀಕ್ಷಣೆಗೆ ಪ್ರತಿದಿನ ನೂರಾರು ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರುತ್ತಾರೆ. ಬಸವಣ್ಣನವರ ಪುತ್ಥಳಿಯು ವಿಶ್ವ ಭೂಪಟದ ಮೇಲೆ ನಿಂತ ಭಂಗಿಯಲ್ಲಿ ವಚನ ಕಟ್ಟುಗಳನ್ನು ಹಿಡಿದು ಸರ್ವಜನತೆಗೆ ಸಮಾನತೆ, ಏಕತೆ ಸಂದೇಶವನ್ನು ಕೈ ಎತ್ತಿ ಹೇಳುವಂತಿದೆ. ಮಹಾಮಾನವತಾವಾದಿ ಬಸವಣ್ಣನವರ ಪುತ್ಥಳಿ ಐತಿಹಾಸಿಕವಾಗಿ ಮಹತ್ವ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಈ ಮೂಲಕ ಸಂಚರಿಸುವ ಪ್ರವಾಸಿಗರಿಗೆ ಇದೊಂದು ಪ್ರತಿಷ್ಠಿತ ಪ್ರವಾಸಿ ತಾಣವಾಗಿದೆ.
ಭಾರತದಲ್ಲಿ ಈಗಿನವರೆಗೂ ನಿರ್ಮಾಣವಾಗಿರುವ ಅತಿ ಎತ್ತರದ ಮೊದಲ ಹತ್ತು ಪುತ್ಥಳಿಗಳು:
1. ಸರ್ದಾರ ಪಟೇಲರ ಏಕತಾ ಪುತ್ಥಳಿ: 597 ಅಡಿ, ಕೇವಡಿಯಾ-ಗುಜರಾತ.
2. ವೀರಅಭಯಾಂಜನೇಯ ಸ್ವಾಮಿ ಪುತ್ಥಳಿ: 135 ಅಡಿ, ವಿಜಯವಾಡಾ-ಆಂಧ್ರ ಪ್ರದೇಶ.
3. ತಿರುವಳ್ಳುವರ ಪುತ್ಥಳಿ: 133 ಅಡಿ, ಕನ್ಯಾಕುಮಾರಿ-ತಮಿಳುನಾಡು.
4. ಪದ್ಮಸಾಂಬವ ಪುತ್ಥಳಿ: 123 ಅಡಿ, ರೆವಲ್ಸರ್ ಸರೋವರ, ಮಂಡಿ-ಹಿಮಾಚಲ ಪ್ರದೇಶ.
5. ಶಿವನ ಪುತ್ಥಳಿ: 122 ಅಡಿ, ಮುರ್ಡೇಶ್ವರ, ಉತ್ತರ ಕನ್ನಡ-ಕರ್ನಾಟಕ.
6. ಪದ್ಮಸಾಂಬ ಪುತ್ಥಳಿ: 118 ಅಡಿ, ನಮಚಿ-ಸಿಕ್ಕಿಂ.
7. ಬಸವಣ್ಣನವರ ಪುತ್ಥಳಿ: 116 ಅಡಿ, ಭೀಷ್ಮಕೆರೆ, ಗದಗ-ಕರ್ನಾಟಕ.
8. ಆದಿಯೋಗಿ ಶಿವನ ಪುತ್ಥಳಿ: 112 ಅಡಿ, ಕೋಯಿಮತ್ತೂರ-ತಮಿಳುನಾಡು.
9. ಅ. ಬಸವಣ್ಣನವರ ಪುತ್ಥಳಿ: 108 ಅಡಿ, ಬಸವ ಕಲ್ಯಾಣ, ಬೀದರ-ಕರ್ನಾಟಕ.
ಆ. ಹನುಮಾನ ಪುತ್ಥಳಿ: 108 ಅಡಿ, ಶಿಮ್ಲಾ-ಹಿಮಾಚಲ ಪ್ರದೇಶ.
10. ಮಿಂಡ್ರೋಲಿಂಗ್ ಮೊನೆಸ್ಟರಿ ಬುದ್ಧ ಪುತ್ಥಳಿ: 107 ಅಡಿ ಡೆಹರಾಡೂನ್-ಉತ್ತರಾಖಂಡ.
ಲಿಂಗಾಯಿತರಿಗೆ ಪ್ರತ್ಯೇಕವಾದ ಧರ್ಮಮಾನ್ಯತೆಯ ಅಗತ್ಯವಿದೆ ಎಂದು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಪಷ್ಟ ಅಭಿಪ್ರಾಯವಿತ್ತು. ಯಾರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಮಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ ಎಂದು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಧುಮುಕಿದ್ದರು. ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಶ್ರೀ ಸಿದ್ಧರಾಮ ಮಾಹಾಸ್ವಾಮಿಗಳು, ಭಾಲ್ಕಿಯ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದೇವರು, ಪಂಚಮಸಾಲಿ ಪೀಠ ಕೂಡಲಸಂಗಮ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮತ್ತಿತರರು ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು.
ಈ ನಿಟ್ಟಿನಲ್ಲಿ ಅವರು ಹೇಳಿದ ಮಾತುಗಳನ್ನು ನಾವು ಗಮನಿಸಬೇಕು.
ಲಿಂಗಾಯತರು ಹಿಂದೂಗಳಲ್ಲ, ಮೂರ್ತಿ ಪೂಜೆ ಮಾಡುವುದಿಲ್ಲ. ದೇಹವೇ ದೇಗುಲ ಎಂದು ಬಸವಣ್ಣ ಹೇಳಿದ್ದಾರೆ. ಬಸವಣ್ಣನವರು ವೇದ ಮತ್ತು ಆಗಮಶಾಸ್ತ್ರದಿಂದ ದೂರವಿದ್ದರು. ಇಷ್ಟಲಿಂಗ ಪೂಜಿಸುವ ಧರ್ಮ ಒಂದೇ ಒಂದು, ಅದುವೇ ಲಿಂಗಾಯತ ಧರ್ಮ. ಲಿಂಗಾಯತ ಧರ್ಮದಲ್ಲಿ ಯಾವುದೇ ಜಾತಿ ಭೇಧ ಇಲ್ಲ. ಹೀಗಾಗಿ ಹಿಂದೂ ಧರ್ಮಕಿಂತ ಭಿನ್ನವಾಗಿದೆ. ವೀರಶೈವ ಹಿಂದೂ ಧರ್ಮದ ಒಂದು ಶಾಖೆ. ಎಲ್ಲಿಯವರೆಗೆ ವೀರಶೈವ ಅನ್ನೋದು ಲಿಂಗಾಯತರ ಜೊತೆಗೆ ತಳುಕು ಹಾಕಿಕೊಳ್ಳುತ್ತದೆಯೋ ಅಲ್ಲಿಯವರೆಗೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವುದಿಲ್ಲ.
ತಾವು ಧೃಢವಾಗಿ ನಂಬಿದ್ದ ಬಸವ ತತ್ವ ಮತ್ತು ಶರಣ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಹೇಳಿದ ಈ ಮಾತುಗಳು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿಸುವ ಹೋರಾಟದ ಹಾದಿಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿತು. ಆದರೆ ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ಧರ್ಮದ ಕನಸು ನನಸಾಗಿಯೇ ಉಳಿದದ್ದು ದುರಂತ.
ಶಿಕ್ಷಣ, ಆರೋಗ್ಯ ಸೇರಿದಂತೆ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ದಿನಾಂಕ 20.10.2018 ರಂದು ತಮ್ಮ 76 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಜನಸಾಗರವೇ ಹರಿದುಬಂದಿತ್ತು. ತೋಂಟದಾರ್ಯ ಮಠದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳ ಜೊತೆಗೆ ಲಿಂಗಾಯತ ಧರ್ಮದಂತೆ ಅಂತ್ಯಕ್ರಿಯೆ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಯಿತು. ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪುಷ್ಪ ವಿಭೂತಿ ರುದ್ರಾಕ್ಷಿಗಳನ್ನು ಅರ್ಪಿಸುವುದರ ಮೂಲಕ ಅಂತ್ಯಕ್ರಿಯೆ ಮಾಡಲಾಯಿತು.
ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗದಗ-ಡಂಬಳ ತೋಂಟದಾರ್ಯ ಮಠದ 20 ನೇ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿ ಮಠದ ಡಾ. ಶ್ರೀ ಸಿದ್ದರಾಮ ಮಹಾಸ್ವಾಮಿಗಳನ್ನು ನೇಮಕ ಮಾಡಲಾಯಿತು. ಶ್ರೀಮಠದ ಸದ್ಭಕ್ತರು 29.10.2018 ರಂದು ಅವರಿಗೆ ಡಾ. ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಿ ಪೀಠಾರೋಹಣ ಕಾರ್ಯಕ್ರಮ ನಡೆಸಿದರು.
ಆಡುಮುಟ್ಟದ ಗಿಡವಿಲ್ಲ, ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅರಿಯದ ವಿಷಯವೇ ಇಲ್ಲ ಎಂದರೂ ತಪ್ಪಾಗಲಾರದು. ಇದ್ದದ್ದನ್ನು ಇದ್ದಂತೇ ಹೇಳುವ ಎದೆಗಾರಿಕೆ ಇದ್ದ ಶ್ರೀಗಳು ಭಕ್ತರಿಗಾಗಲಿ, ಅಧಿಕಾರಿಗಳಿಗಾಗಲಿ, ಸರ್ಕಾರವೇ ಆಗಲಿ ತಮ್ಮ ಕಂಚಿನ ಕಂಠದಿಂದ ಚಾಟಿ ಬೀಸುತ್ತಿದ್ದರು. ಜನಸಾಮಾನ್ಯರ ಸ್ವಾಮೀಜಿಯಾಗಿ, ಶರಣ ಸಿದ್ಧಾಂತ ಮತ್ತು ಸಂಸ್ಕೃತಿಗಳನ್ನು ಪಾಲಿಸಿ ಇತರರಿಗೆ ಮೇಲ್ಪಂಕ್ತಿಯಾಗಿದ್ದರು.
ಉಪಮಿಸಬಾರದ | ಉಪಮಾತೀತರು ||
ಕಾಲಕರ್ಮರಹಿತರು | ಭವವಿರಹಿತರು ||
ಕೂಡಲಸಂಗಮದೇವಾ | ನಿಮ್ಮ ಶರಣರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-78 / ವಚನ ಸಂಖ್ಯೆ-874)
ಹೀಗೆ ಶರಣ ಸಿದ್ಧಾಂತದಲ್ಲಿ ಸೀಮೆಯನ್ನೂ ದಾಟಿದ ನಿಸ್ಸೀಮ ಶ್ರೀಗಳು, ನಿಧಾನವಾಗಿ ನಮ್ಮ ಹೃದಯವನ್ನಾವರಿಸಿ ಪ್ರಣತೆಯಂತೆ ಬೆಳಗಿ ಕೇವಲ ಮಠಕ್ಕೆ ಸೀಮಿತವಾಗದೆ ಬಸವಣ್ಣನವರ ತತ್ವಗಳನ್ನು ಮತ್ತು ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಿ ಅಜರಾಮರರಾದರು.
ಜನ್ಮ ಜನ್ಮಕ್ಕೆ | ಹೋಗಲೀಯದೆ ||
ಸೋಹಂ ಎಂದೆನಿಸದೆ | ದಾಸೋಹಂ ಎಂದೆನಿಸಯ್ಯಾ ||
ಲಿಂಗ ಜಂಗಮ ಪ್ರಸಾದದ | ನಿಲವ ತೋರಿ ಬದುಕಿಸಯ್ಯಾ || ಕೂಡಲಸಂಗಮದೇವಾ | ನಿಮ್ಮ ಧರ್ಮ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-75 / ವಚನ ಸಂಖ್ಯೆ-834)
“ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ” ಎಂಬ ಶರಣರ ವಚನವಾಣಿಯಂತೆ ಕಾಯಕ, ದಾಸೋಹ ಮಾಡಿದ್ದಾರೆ. ಕನ್ನಡ ಜಗದ್ಗುರುವಾಗಿ ಗೌರೀಶಂಕರದಂತೆ ಅತೀ ಎತ್ತರಕ್ಕೆ ಬೆಳೆದು ನಿಂತವರು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ಈ ಕನ್ನಡ ನೆಲದ ಯುಗಪುರುಷ, ಕನ್ನಡ ನಾಡಿನ ಸಂತ, ದೇಶ ಕಂಡ ಅಪರೂಪದ ಪ್ರಗತಿಪರ ಸ್ವಾಮೀಜಿಗಳಾಗಿ ನಮ್ಮೆಲ್ಲರ ಹೃದಯದಲ್ಲಿ ನೆಲೆಯೂರಿದ್ದಾರೆ.
ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಡೆದಾಡುವುದನ್ನು ನಿಲ್ಲಿಸಿರಬಹುದು. ಆದರೆ ನಮ್ಮನ್ನು ಮುನ್ನಡೆಸುವುದನ್ನು ನಿಲ್ಲಿಸಿಲ್ಲ. ಶ್ರೀಗಳ ಬಗ್ಗೆ ಲೇಖನ ಬರೆಯುವ ಇಂಥ ಒಂದು ಸದಾವಕಾಶಕ್ಕಾಗಿ ವರ್ಷಗಟ್ಟಳೆ ಕಾಯ್ದಿದ್ದಕ್ಕೂ ಸಾರ್ಥಕ ಭಾವನೆ ಮೂಡಿದೆ. ಇಂಥ ಅದ್ಭುತ ಚೇತನವನ್ನು ಶಬ್ದಗಳಲ್ಲಿ ಹಿಡಿಯುವುದು ಕಷ್ಟ. ನನಗೆ ನಿಲುಕಿದಷ್ಟು ಪ್ರಸಾದವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಶರಣು ಶರಣಾರ್ಥಿಗಳು.
–ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com