ಬಸವತತ್ವ ಮಾರ್ಗ ತೊರಿದ‌ ಮಾಹಾಗುರು ತೊಂಟದ ಶ್ರೀಗಳು

ಬಸವತತ್ವದ ಮಾರ್ಗ ತೊರಿದ ಮಹಾಗುರು ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ

ಜ್ಯೋತಿಯೊಳಗಣ | ಕರ್ಪೂರಕ್ಕೆ ||
ಅಪ್ಪುವಿನ ಕೈಯಲಿಪ್ಪ | ಉಪ್ಪಿಂಗೆ ||
ಶ್ರೀಗುರುವಿನ ಹಸ್ತದೊಳಗಿಪ್ಪ | ಶಿಷ್ಯಂಗೆ ||
ಈ ಮೂರಕ್ಕೆ ಬೇರೆ | ಕ್ರಿಯಾವರ್ತನೆಯುಂಟೆ ಗುಹೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-62)

ಉರಿ ತಾಕಿದ ಕರ್ಪೂರ ಒಂದು ಕ್ಷಣದಲ್ಲಿ ಆವಿಯಾಗಿ ಹೋಗತದ. ಸಮುದ್ರದಲ್ಲಿ ಒಂದು ಚಮಚ ಉಪ್ಪು ಹಾಕಿದರ ಅದು ಸಮುದ್ರದಲ್ಲಿ ಲೀನವಾಗಿ ಬಿಡತದ. ಗುರುವು ಪೂರ್ಣನು, ಕರುಣಾಸಾಗರನು. ಗುರುವೇ ಜ್ಞಾನ ನೀಡುವನು. ಸಮರ್ಪಣಾಭಾವಿಯಾದ ಶಿಷ್ಯ ಗುರುವಿಗೆ ಸರ್ವಸ್ವವನ್ನೂ ಅರ್ಪಿಸಿದಾಗ ಗುರುವಿನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಒಬ್ಬ ಸಮರ್ಥ ಗುರುವಿನ ಕೈಯಲ್ಲಿರುವ ಶಿಷ್ಯ ಗುರುವೇ ಆಗಿ ಹೋಗತಾನೆ ಎನ್ನುತ್ತದೆ ಅಲ್ಲಮಪ್ರಭುಗಳ ಈ ವಚನ.

ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಜೊತೆಗಿನ ಒಡನಾಟದ ಬಗ್ಗೆ ಬರೆಯಲು ಲಿಂಗಸೂರಿನ ಹಿರಿಯ ಸಹೋದರರು ಮತ್ತು ಅರಿವಿನ ಮಾರ್ಗದರ್ಶಕರಾದ ಡಾ. ಶಶಿಕಾಂತ ಕಾಡ್ಲೂರ ಅವರು ಹೇಳಿದಾಗ ಎರಡು ನಿಮಿಷ ಮಾತೇ ಹೊರಡಲಿಲ್ಲ. ಶ್ರೀಗಳ ಆಶೀರ್ವಾದದ ಫಲವೇ ನಾನಿಂದು ಹಿರಿಯರ ಮತ್ತು ಆಧ್ಯಾತ್ಮ ಸಾಧಕರ ಒಡನಾಟಕ್ಕೆ ಬಂದಿದ್ದು ಮತ್ತು ಗುರುತಿಸುವಂತಾಗಿದ್ದು. 1985 ರಿಂದ ಶ್ರೀಗಳ ಕೃಪಾಶೀರ್ವಾದ ನನ್ನ ಮೇಲೆ ಇದ್ದದ್ದನ್ನು ಲೇಖನದಲ್ಲಿ ಹಿಡಿದಿಟ್ಟುಕೊಂಡು ಬರೆಯುವದು ಅತ್ಯಂತ ಕಠಿಣ ಕೆಲಸ.

ನಾನು ಬೆಳಗಾವಿಯ ಕೆ.ಎಲ್.ಈ ಇಂಜನೀಯರಿಂಗ ಕಾಲೇಜಿಗೆ 1983 ನವಂಬರನಲ್ಲಿ ಸೇರಿದ್ದೆ. 1985 ರ ಅಗಸ್ಟ ತಿಂಗಳ ರಜಾದಿನಗಳಲ್ಲಿ ಧಾರವಾಡಕ್ಕೆ ಬಂದಿದ್ದೆ. ಅಕ್ಟೋಬರ 26 / 27 ರಂದು ರಾಜ್ಯ ಮಟ್ಟದ ಎರಡನೇಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡದ ಆಗಿನ ಶಾಸಕರಾಗಿದ್ದಂಥ ಶ್ರೀ ಚಂದ್ರಕಾಂತ ಬೆಲ್ಲದ ಅವರು ಮತ್ತು ವಿಜಯಪುರದ ಲಿಂಗೈಕ್ಯ ಶ್ರೀ ಶಿಶು ಸಂಗಮೇಶ ಅವರ ನೇತೃತ್ವದಲ್ಲಿ ತಯಾರಿ ಬಹಳ ಜೋರಿನಿಂದ ನಡೆದಿತ್ತು. ನಮ್ಮ ತಂದೆ ಶ್ರೀ ಈಶ್ವರ ಕಮ್ಮಾರ ಅವರು ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು.

ಪೂರ್ವನಿರ್ಧಾರದಂತೆ ಧಾರವಾಡದ ಮುರುಘಾಮಠದ ಶ್ರೀಗಳಿಂದ ಧ್ವಜಾರೋಹಣ ಮತ್ತು ಗದಗದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ಮಕ್ಕಳ ಸಾಹಿತ್ಯ ಗೋಷ್ಠಿಗೆ ಅಧ್ಯಕ್ಷರನ್ನಾಗಿಸುವ ಸಂಕಲ್ಪ ಮಾಡಿದ್ದರು. ಇದಕ್ಕಾಗಿ ಶ್ರೀ ಚಂದ್ರಕಾಂತ ಬೆಲ್ಲದ ಅವರು ಮತ್ತು ಶ್ರೀ ಶಿಶು ಸಂಗಮೇಶ ಅವರು ಅಗಸ್ಟನಲ್ಲಿ ಗದಗಿನ ಮಠಕ್ಕೆ ಹೋಗುವಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಹೋದರು. ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡರು.

ನಮ್ಮ ತಂದೆಯವರ ಪಕ್ಕದಲ್ಲಿ ನಿಂತಿದ್ದ ನನ್ನ ಮೇಲೆ ಶ್ರೀಗಳ ದೃಷ್ಟಿ ಹರಿದು ಈ ಹುಡುಗ ಯಾರು ಅಂತ ಕೇಳಿದರು. ನಮ್ಮ ತಂದೆ, ಇಂವಾ ನನ್ನ ಮಗ ವಿಜಯಕುಮಾರ ಅಪ್ಪಾರ. ಈಗ ಇಂಜನೀಯರಿಂಗ ಕಾಲೇಜಿಗೆ ಸೇರಿದಾನೆ ತಮ್ಮ ಆಶೀರ್ವಾದಕ್ಕೆ ಕರೆದುಕೊಂಡು ಬಂದೇನಿ ಅಂದರು. ತಕ್ಷಣ ಬಾ ತಮ್ಮಾ ಇಲ್ಲೇ ಅಂದರು ಶ್ರೀಗಳು. ಅಂಜಿಕೋತ ಅವರ ಪಾದಗಳಿಗೆ ನಮಸ್ಕಾರ ಮಾಡಿ ಅವರ ಪಾದದಡಿಯಲ್ಲೇ ಕುಳಿತೆ. ಏನನ್ನಿಸಿತೋ ಏನೋ ಪೂಜ್ಯರಿಗೆ ನನ್ನ ಬೆನ್ನ ಮೇಲೆ ಕೈಯಾಡಿಸಿ ಚುಲೋತ್ನಂಗ ಓದ ಹುಡುಗಾ ಅಂತ ಹೇಳಿ ಆಶಿರ್ವಾದ ಮಾಡಿದರು.

ನಿಗದಿಯಾದ ಕಾರ್ಯಕ್ರಮ ಮುಗೀತು. ಎಲ್ಲರೂ ಹೊರಡುತ್ತಿಂತೆಯೇ ಬಾಗಿಲ ಬಳಿ ಇದ್ದ ನಮ್ಮ ತಂದೆಯವರನ್ನು ಕಮ್ಮಾರ ಅವರ ಸ್ವಲ್ಪ ಬರ್ರಿ ಇಲ್ಲೆ ಅಂತ ಶ್ರೀಗಳು ಅಂದರು. ಅವರ ಬಳಿ ಹೋದಾಗ ಶ್ರೀಗಳು ಹೇಳಿದ ನುಡಿಗಳು ಇನ್ನೂ ನನ್ನ ಕಿವಿಯಲ್ಲಿ ಹಾಗೆಯೇ ರಿಂಗಣಿಸತಾ ಇದಾವೆ.

ಹುಡುಗ ಶ್ಯಾಣ್ಯಾ ಇದ್ದಂಗ ಕಾಣತಾನ. ಮುಂದ ಚುಲೋ ಕೆಲಸ ಮಾಡತಾನ ಅಂತ ಅನಸತೈತಿ. ಆವಾಗಾವಾಗ ಕರಕೊಂಡ ಬರ್ರಿ ಇಲ್ಲಿಗೆ ಈ ಹುಡುಗನ್ನ ಅಂದರು.

ಭಾವುಕರಾದ ನಮ್ಮ ತಂದೆ ಆಗಲರಿ ಅಪ್ಪಾರ ಅಂದರು. ಅಲ್ಲೇ ಇದ್ದ ಶ್ರೀ ಚಂದ್ರಕಾಂತ ಬೆಲ್ಲದ ಅವರು ಏನೋ ಈಶ್ವರ ನಿನ್ನ ಮಗನ ಮ್ಯಾಲ ಶ್ರೀಗಳ ದೃಷ್ಟಿ ಬಿದೈತಿ ಅಂದರ ಮುಂದ ಚುಲೋ ಆಕ್ಕೇತಿ ಬಿಡ ಅಂತ ಹೇಳಿದರು.

ಅಲ್ಲಿಂದ ಮುಂದೆ ನಭೂತೋ ನ ಭವಿಷ್ಯತಿ ಅನ್ನೋ ಹಂಗ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಡಾ. ಸಿದ್ಧಯ್ಯ ಪುರಾಣಿಕ ಅವರ ಅಧ್ಯಕ್ಷತೆಯಲ್ಲಿ ಮುಗೀತು. ಸಮಯ ಸಿಕ್ಕಾಗಲೆಲ್ಲಾ ಶ್ರೀಗಳ ಆಶೀರ್ವಾದ ತುಗೋಳಾಕ ಗದಗಿನ ಮಠಕ್ಕೆ ಹೋಗುವದಕ್ಕೆ ಪ್ರಾರಂಭ ಆಯಿತು. ಹೀಗೆ ಮೊದಲ ಭೇಟಿಯಲ್ಲೇ ಗುರುಗಳ ಆಶೀರ್ವಾದ ಸಿಕ್ಕು 1988 ರಲ್ಲಿ ನನ್ನ ಬಿ.ಈ ಪದವಿಯನ್ನು ಮುಗಿಸಿ ಪುಣೆಯ ಹೆಸರಾಂತ ಕಂಪನಿಯಲ್ಲಿ ಟ್ರೇನಿಯಾಗಿ ಕೆಲಸ ಪ್ರಾರಂಭ ಆಯಿತು. ಕೆಲಸದ ಒತ್ತಡದಲ್ಲಿ ಎರಡು ವರ್ಷ ಶ್ರೀಗಳ ದರ್ಶನಕ್ಕೆ ಹೋಗಾಕ ಆಗಲಿಲ್ಲ. 1991 ರಲ್ಲಿ ರಜಾ ತುಗೊಂಡ ಧಾರವಾಡಕ್ಕ ಬಂದಾಗ ಶ್ರೀಗಳ ಆಶಿರ್ವಾದಕ್ಕೆ ಹೋದೆವು. ಕೆಲಸದ ಬಗ್ಗೆ ಎಲ್ಲಾ ವಿಚಾರಿಸಿದರು ಗುರುಗಳು.

ಅಲ್ಲಿಂದ ಮೂರು ತಿಂಗಳು ಕಳೆದಿದ್ದವು. ನಮ್ಮ ಮಾಲಕರು ತಮ್ಮ ಚೇಂಬರಿಗೆ ಕರೆದು ಇನ್ನ ಮ್ಯಾಲ ನಿನ್ನನ್ನ ಮಾರ್ಕೇಟಿಂಗಗೆ ವರ್ಗಾವಣೆ ಮಾಡತಾ ಇದೀವಿ. ಭಾಳ ಪ್ರವಾಸ ಮಾಡಬೇಕು ಮತ್ತು ಕಂಪನಿಗೆ ವ್ಯವಹಾರ ವಹಿವಾಟನ್ನು ವೃದ್ಧಿ ಮಾಡುವ ಜಾವಾಬ್ದಾರಿಯನ್ನು ನಿಭಾಯಿಸಬೇಕು ಅಂತ ಹೇಳಿದರು. ಆಯ್ತು ಅಂತ ಒಪ್ಪಿಕೊಂಡು ಪ್ರವಾಸ ಶುರು ಆಯಿತು. ಈ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಪ್ರವಾಸಗಳು, ಅನೇಕ ರೀತಿಯ ಕಾರ್ಖಾನೆಗಳನ್ನು ಸಂದರ್ಶಿಸುವದು, ಈ ಮೂಲಕ ನಮ್ಮ ಕಂಪನಿಗೆ ವ್ಯವಹಾರಗಳನ್ನು ತರುವುದರಲ್ಲಿಯೇ ಸುಮಾರು ಒಂದು ವರ್ಷ ಕಳೆಯಿತು. ಶ್ರೀಗಳನ್ನು ಭೆಟ್ಟಿಯಾಗಿ ಆಶಿರ್ವಾದ ತೆಗೆದುಕೊಳ್ಳಬೇಕೆಂದು ಮನಸ್ಸು ಹೇಳುತ್ತಿತ್ತು.

1993 ರಲ್ಲಿ ಧಾರವಾಡಕ್ಕೆ ಬಂದಾಗ ನಾನು ಮತ್ತು ನಮ್ಮ ತಂದೆಯವರು ಶ್ರೀಗಳ ಬಳಿಗೆ ಹೋದೆವು. ಅತ್ಯಂತ ಕುತೂಹಲದಿಂದ ಶ್ರೀಗಳು ನಾನು ಮಾಡುವ ಪ್ರವಾಸ ಮತ್ತು ಕೆಲಸಗಳನ್ನು ಆಲಿಸಿದರು. ತಮ್ಮಾ ಎಲ್ಲ ಕೆಲಸ ಮುಗಿಸಿದ ಮೇಲೆ ಉಳಿದ ವೇಳೆಯಲ್ಲಿ ಏನ ಮಾಡತೀಪಾ ಅಂತ ಕೇಳಿದಾಗ ನನ್ನಲ್ಲಿ ಉತ್ತರವಿರಲಿಲ್ಲ. ಹಂಗಾರ ಒಂದ ಕೆಲಸಾ ಮಾಡು.

ನೀನು ಹೋದ ಕಡೆಯ ಸುತ್ತಮುತ್ತಲಿನ ಹಳ್ಳಿಗಳನ್ನು ನೋಡಿಕೊಂಡು ಅವರು ಮಾಡುವ ಕೆಲಸ-ಕಾರ್ಯಗಳು, ಶಿಕ್ಷಣ, ಆರೋಗ್ಯ, ಜಾನಪದ ಸಂಸ್ಕೃತಿ ಮತ್ತು ಅಲ್ಲಿ ಉಪಯೋಗಿಸಲ್ಪಡುವ ತಂತ್ರಜ್ಞಾನ, ಆ ಜಾಗದ ಐತಿಹಾಸಿಕ ಹಿನ್ನೆಲೆ ಇವುಗಳನ್ನು ತಿಳಿದುಕೊಂಡು ಬರೆದು ದಾಖಲಿಸುವ ಕೆಲಸ ಮಾಡು.

ಇದು ಒಂದು ದೊಡ್ಡ ಕಾರ್ಯದ ಮುನ್ಸೂಚನೆ ಎಂದು ಆವಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ಒಂದಷ್ಟು ಹಳ್ಳಿಗಳಿಗೆ ಭೇಟಿ ಕೊಡೋದು ಹಾಗೇನೆ ಅಲ್ಲಿಯ ಪರಿಸರ ವಾತಾವರಣ ತಿಳಿದುಕೊಳ್ಳೋದು ಅಷ್ಟೇನೆ ಅಂದೊಕೊಂಡಿದ್ದೆ. ಮುಂದೆ ಅದರ ಆಳ ಅರಿವು ಆಗತೊಡಗಿದಾಗ ಈ ವಿಷಯದ ಅಗಾಧತೆ, ಐತಿಹಾಸಿಕ ಹಿನ್ನೆಲೆ, ವೈವಿಧ್ಯಮಯ ಭಾರತೀಯ ಸಂಸ್ಕೃತಿಯ ಅನಾವರಣ, ಪ್ರಾಚೀನ ಭಾರತದ ತಂತ್ರಜ್ಞಾನ, ನಮ್ಮ ಗ್ರಾಮೀಣ ಸಾಮಾಜಿಕ ಮತ್ತು ಆರ್ಥಿಕತೆಯ ಒಂದು ಬ್ರಹ್ಮಾಂಡವನ್ನೇ ತೆರೆದಂತಾಯಿತು. ಶ್ರೀಗಳ ದೂರದೃಷ್ಟಿ ಮತ್ತು ಅವರಿಗಿರುವ ಭಾರತೀಯ ಪರಂಪರೆಯ ಐತಿಹಾಸಿಕ ಪ್ರಭುದ್ಧತೆಯ ಅಗಾಧ ಅರಿವು ನನಗೆ ಕ್ರಮೇಣ ಆಯಿತು. ಶ್ರೀಗಳು ನನ್ನಲ್ಲಿ ಸೃಷ್ಟಿಸಿದ ಸಂಚಲನ ಅಮೂಲ್ಯವಾದದ್ದು.

ಶ್ರೀಗಳ ಈ ಆಶೀರ್ವಚನಗಳನ್ನು ಮನದಲ್ಲಿ ನೆನೆಯುತ್ತಿದ್ದಾಗ 1994 ರಲ್ಲಿ ನನಗೆ ಪಂಜಾಬಿನ ಲೂಧಿಯಾನಾ ಬಳಿಯ ಹೋಶೀಯಾರಪುರದ ಸೋನಾಲಿಕಾ ಟ್ರ್ಯಾಕ್ಟರ ತಯಾರಿಸುವ ಕಂಪನಿ “ಇಂಟರನ್ಯಾಶನಲ್‌ ಟ್ರ್ಯಾಕ್ಟರ್ಸ್” ಗೆ ಹೋಗುವ ಪ್ರಸಂಗ ಬಂದಿತು. ನಾವು ಈ ದೂರದ ಊರಿಗೆ ಪ್ರವಾಸ ಹೋಗುವಾಗ ಎರಡು ಮೂರು ದಿನ ಹಚ್ಚು ವೇಳೆಯನ್ನು ನಿಗದಿ ಮಾಡಿಕೊಂಡಿರುತ್ತೇವೆ. ಏಕೆಂದರೆ ಕೆಲವು ಸಾರಿ ಕೆಲಸ ಬೇಗನೆ ಆಗದಿದ್ದರೆ ಅಲ್ಲಿಯೇ ಇನ್ನೆರಡು ದಿನ ಇದ್ದು ಕೆಲಸ ಮುಗಿಸಿಕೊಂಡು ಬರುತ್ತೇವೆ. ಇದು ಸಾಮಾನ್ಯವಾಗಿ ಎಲ್ಲ ಮಾರ್ಕೇಟಿಂಗನವರು ಅನುಸರಿಸುವ ಪ್ರತೀತಿ. ನಾನು ಹೋಶಿಯಾರಪುರಗೆ ಹೋದಾಗ ಕೇವಲ ಅರ್ಧ ಘಂಟೆಯಲ್ಲಿಯೇ ನನ್ನ ಕೆಲಸ ಮುಗಿಯಿತು. ನನ್ನ ಹಿಂತಿರುಗುವ ಪ್ರಯಾಣಕ್ಕೆ ಇನ್ನೂ ಮೂರು ದಿನ ಇತ್ತು. ಆವಾಗ ನೆನಪಿಗೆ ಬಂದದ್ದು ಶ್ರೀಗಳ ಮಾತುಗಳು. ಅಲ್ಲಿನ ಹೋಟೇಲಿನ ಮ್ಯಾನೇಜರಿಗೆ ಕೇಳಿದೆ. ನಾನು ಸುತ್ತಮುತ್ತಲಿನ ಹಳ್ಳಿಗಳನ್ನು ನೋಡಬೇಕು. ಏನಾದರೂ ಸಹಾಯ ಮಾಡಿ ಅಂತ. ಆತನಿಗೆ ಎಷ್ಟು ಖುಸಿ ಆಯಿತೆಂದರೆ “ಸಾಬ್‌ ಕೋಯೀ ಭಿ ಆಯೇತೊ ಬಾರ್‌ ಔರ್‌ ಬಸ್ಟ್ಯಾಂಡ್‌ ಪೂಛತೇ ಹೈ. ಆಪ್‌ ಅಕೇಲೇ ಆದಮೀ ಜೋ ಹಮಾರೆ ಗಾಂವೋ ಕಿ ಬಾರೇ ಮೆ ಪೂಛ ರಹೆ ಹೋ. ಚಲಿಯೇ ಮೈ ಭೀ ಆಪ್‌ ಕೆ ಸಾಥ್‌ ಘೂಮತಾ ಹೂ””ಅಂತ ಹೇಳಿ, ಅವನ ದ್ವಿಚಕ್ರ ವಾಹನದಲ್ಲಿ ಸವಾರಿ ಹೊರಟೇ ಬಿಟ್ಟೆವು.

ಲೂಧಿಯಾನಾ ಸುತ್ತಮುತ್ತಲಿನ ಸುಮಾರು 70 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಎರಡು ದಿನ ಪ್ರವಾಸ ಮಾಡಿ ಅಲ್ಲಿನ ಗ್ರಾಮಗಳ ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳನ್ನು ಅಭ್ಯಾಸ ಮಾಡಿದಾಗ ಅದ್ಭುತ ಲೋಕವೊಂದು ನನ್ನ ಕಣ್ಣೆದುರಿಗೆ ತೆರೆದುಕೊಂಡಿತು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಉಲ್ಲೇಖಿಸಬೇಕು. ಲೂಧಿಯಾನಾ ಭಾರತದ ಫೋರ್ಜಿಂಗ್‌ ತಂತ್ರಜ್ಞಾನ ಅಂದರೆ ಕಮ್ಮಾರಿಕೆಯಲ್ಲಿ ಉನ್ನತ ಸ್ಥಾನ ಪಡೆದಂಥ ನಗರ. ಪರಂಪರಾನುಗತವಾಗಿ ಬಂದಂಥ ಕಮ್ಮಾರಿಕೆಯನ್ನು ಇಂದಿಗೂ ಕಾಣಬಹುದು. ಸೈಕಲ್‌ ಬಿಡಿಭಾಗಗಳ ಒಂದು ಅದ್ಭುತ ಲೋಕವನ್ನೇ ನಾವು ಕಾಣಬಹುದು.

1994 ರಲ್ಲಿಯೇ ಶೇಕಡಾ 70% ಸೈಕಲ್‌ ಬಿಡಿಭಾಗಗಳನ್ನು ಎಕ್ಷಪೋರ್ಟ್‌ ಮಾಡುವ ಏಕೈಕ ನಗರ ಲೂಧಿಯಾನಾ ಆಗಿತ್ತು ಮತ್ತು ಇಂದಿಗೂ ಆ ಸ್ಥಾನವನ್ನು ಉಳಿಸಿಕೊಂಡಿದೆ. ಇನ್ನೊಂದು ಆಶ್ಚರ್ಯಕರ ಸಂಗತಿ ಬಡಿಗೇರ ವೃತ್ತಿಯವರು. ಪಾರಂಪರಿಕ ಫರ್ನೀಚರಗಳನ್ನು ಹೊರತು ಪಡಿಸಿ ಅವರು ಕ್ರೀಡೆಗೆ ಸಂಬಂದಿಸಿದಂತೆ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್‌ ಬ್ಯಾಟ್‌, ಹಾಕಿ ಸ್ಟಿಕ್‌, ಕೇರಂ ಬೋರ್ಡ್ ಮುಂತಾದ ಪರಿಕರಗಳನ್ನು ತಯಾರಿಸುತ್ತಿದ್ದರು. ಸುಮಾರು ದೇಶದವರು ಇಂದಿಗೂ ಕ್ರಿಕೆಟ್‌ ಬ್ಯಾಟುಗಳನ್ನು ಲೂಧಿಯಾನಾ, ಜಲಂಧರನಿಂದ ಖರೀದಿಸುತ್ತಾರೆಂದರೆ ನಮಗೆ ಅವರ ವೃತ್ತಿ ಕೌಶಲ್ಯಕ್ಕೆ ಗೌರವ ನೀಡಲೇಬೇಕು. ಅಂದಿನ ಕಾಲಕ್ಕೆ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಕೊಂಡುಕೊಳ್ಳಲಾಗದ ಮಾರುತಿ ಕಾರನ ಮಾಲೀಕರಾಗಿದ್ದರು ಕಮ್ಮಾರ ಬಡಿಗೇರ ವೃತ್ತಿಯವರು. ಅಲ್ಲಿನ ಭಾಂಗ್ರಾ ನೃತ್ಯ, ಸ್ವಾದಿಷ್ಠ ಆಲೂ ಪರಾಠಾ, ಅದರ ಮೇಲೆ ಮಕ್ಖನ್‌ (ಬೆಣ್ಣೆ), ಜನರ ಆತ್ಮೀಯತೆ, ಅಲ್ಲಿನ ಜನರ ವೇಷ-ಭೂಷಣಗಳು ಎಲ್ಲವೂ “ಚಂದ ಟು ದ ಪಾವರ್‌ ಆಫ್‌ ಚಂದ” “Excellent to the power of Excellent”.

ಇಂಥ ಅನುಭವಗಳನ್ನೆಲ್ಲಾ ಒಂದು ಲೇಖನದ ರೂಪದಲ್ಲಿ ಬರೆದು ಶ್ರೀಗಳ ಮುಂದಿಟ್ಟಾಗ ಶ್ರೀಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದು ಇನ್ನೂ ನನ್ನ ಕಣ್ಣಮುಂದೆ ಇನ್ನೂ ಹಸಿರಾಗಿದೆ.

ತಮ್ಮಾ ಭಾಳ ಚುಲೋ ಕೆಲಸಾ ಮಾಡೀದಿ. ಇನ್ನೊಂದ ಕೆಲಸಾ ಹೇಳತೀನಿ ಮಾಡು. ಇದಕ್ಕ ಬಸವಾದಿ ಶರಣರ ಚಿಂತನೆಯೊಂದಿಗೆ ತಾಳೆ ಹಾಕಿ ನೋಡು. ಶರಣರ ಕಾಯಕದ ಒಂದು ಅದ್ಭುತ ಲೋಕವನ್ನು ಜಗತ್ತಿಗೆ ತೆರೆದಿಟ್ಟಂಗಾಕ್ಕೇತಿ. ಅದರ ಪರಿಚಯದ ಅನಾವರಣ ಆಕ್ಕೇತಿ ಅಂತ ಇನ್ನೊಂದು ಮಾತನ್ನು ಸೇರಿಸಿದರು.

ಇಂಥ ಒಂದು ಸಮಾನಾಂತರದ ಆಧುನಿಕ ವೈಚಾರಿಕತೆಗೆ ನನ್ನನ್ನು ಪ್ರೇರೇಪಿಸಿ ಆರು ಪುಸ್ತಕಗಳನ್ನು ನನ್ನ ಉಡಿಯಲ್ಲಿ ಹಾಕಿದರು. ಇವುಗಳನ್ನು ಓದಿಕೊಂಡು ತುಲನಾತ್ಮಕ ಅಧ್ಯಯನ ಪ್ರಾರಂಭ ಮಾಡು ಅಂತ ಅಪ್ಪಣೆ ಮಾಡಿದರು. ಅಂದರೆ ನಿಮಗೆ ಶ್ರೀಗಳ ದೂರದೃಷ್ಟಿ ಹಾಗೂ ಹೇಗೆ ಅವರು ವ್ಯಕ್ತಿತ್ವವನ್ನು ರೂಪಿಸುತ್ತಾರೆ ಎನ್ನುವ ಅದ್ಭುತ ಸಂದೇಶವನ್ನು ಈ ಮೂಲಕ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇನೆ.

1985 ರಲ್ಲಿ ಪ್ರಾರಂಭವಾದ ಅವರ ಆಶೀರ್ವಾದದ ದೃಷ್ಟಿಯಿಂದ ನನಗೆ ಬಸವ ತತ್ವದಲ್ಲಿ ಆಧುನಿಕ ಚಿಂತನೆಯ ಪ್ರಣತೆಯನ್ನು ಹಚ್ಚುವಲ್ಲಿ ಸಂಯಮ ಮತ್ತು ತಾಳ್ಮೆಯಿಂದ ಸುಮಾರು 10 ವರ್ಷ ನನಗೆ ಅರಿಯದಂತೆ ತಾಲೀಮು ನೀಡಿದರು ಎನ್ನುವುದೇ ಅಪ್ರತಿಮ ಸಂದೇಶ. ಅವರ ಆಶೀರ್ವಾದಕ್ಕೆ ಹೋದಾಗ ನಮಗೆ ಸಿಗುತ್ತಿದ್ದುದೇ ಹತ್ತು ನಿಮಿಷ. ಆ ಹತ್ತು ನಿಮಿಷಗಳಲ್ಲಿಯೇ ಯೋಚಿಸಿ ಶ್ರೀಗಳು ಅಪ್ಪಣೆ ಮಾಡತಾ ಹೋದರು. ಒಬ್ಬ ಸಾಮಾಜಿಕ ಶ್ರೇಷ್ಠ ಚಿಂತಕರು ಎಷ್ಟು ಬೇಗನೆ ವ್ಯಕ್ತಿಯನ್ನು ಗುರುತಿಸುತ್ತಾರೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವಂತೆ ಅವರನ್ನು ಹೇಗೆ ತಯಾರು ಮಾಡಬೇಕೆಂಬುದು ಶ್ರೀಗಳ ಕರ್ತೃತ್ವ ಶಕ್ತಿ ಅನಂತ.

ಇಂಥ ಒಂದು ವಿಷಯದ ಮೇಲೆ ನಾನು ಅಧ್ಯಯನ ಶುರು ಮಾಡಿದಾಗಲೇ ಹೊರ ಬಂದಿದ್ದು “ಅಂತರಾಷ್ಟ್ರೀಯ ಆಧುನಿಕ ಆರ್ಥಿಕ ವ್ಯವಹಾರದ ವಿಷಯ” ದ ಲೇಖನಗಳು. ಮೊಟ್ಟ ಮೊದಲನೇಯ ಲೇಖನ ಬರೆದಿದ್ದು “ವಚನ ಸಾಹಿತ್ಯದಲ್ಲಿ ಆರ್ಥಿಕ ಚಿಂತನೆ”. ಇದನ್ನು ಓದಿದ ಶ್ರೀಗಳು ಈ ಲೇಖನವನ್ನು “Micro-Socio Economic Revolution in 12th Century” ಅಂತ English ನಲ್ಲಿ ಬರೀ ಅಂತ ಸಲಹೆ ನೀಡಿದಾಗ ಯಾಕೆ ಅಂತ ಗೊತ್ತಾಗಲಿಲ್ಲ ಮತ್ತು ಯಾಕೆ English ನಲ್ಲಿ ಬರೀ ಅಂದರು ಅಂತ ಆಶ್ಚರ್ಯ ಸಹ ಆಯಿತು. ಇರಲಿ, ಇದರ effect ಮುಂದೆ ಹೇಳತೀನಿ. ಅಂದರೆ ಶ್ರೀಗಳ ಜ್ಞಾನದ ವಿಸ್ತಾರ ಎಷ್ಟು ಆಳ ಮತ್ತು ಗಹನವಾಗಿದೆ ಎನ್ನುವದು ನನಗೆ ತಿಳಿದದ್ದು ಆವಾಗಲೇ. ಶ್ರೀಗಳ ಆಶೀರ್ವಾದದಿಂದ ನನ್ನ ಬರವಣಿಗೆಗೆ ಓಂಕಾರ ಹಾಡಿದ್ದು ಈ ಲೇಖನ. ಮುಂದೆ ಇನ್ನು ಹಲವಾರು ಲೇಖನಗಳನ್ನು ಬರೆದೆ. ಅವುಗಳಲ್ಲಿ ಕೆಲವು ಲೇಖನಗಳನ್ನು ಉಲ್ಲೇಖ ಮಾಡುತ್ತೇನೆ.

 Micro-Socio Economic Revolution in 12th Century.
 Magnitude of Agriculture Economics in Vachanas.
 BASAVANNA: The Management Guru.
 BASAVANNA: The World Leader.
 Graphic Poetry in Vachanas.
 Magna Carta.
 Culture in Economics: The Way of Basavanna.
 ಶರಣ ಸಾಹಿತ್ಯದಲ್ಲಿ ಮಾಂಸಾಹಾರ: ಒಂದು ಅಧ್ಯಯನ ಮತ್ತು ವಿಶ್ಲೇಷಣೆ.
 ಬಸವ ಯುಗದ ಶರಣರ ಪರಿಚಯ ಮಾಲಿಕೆ.
 ನವೋದಯ ಯುಗದ ಸಾಹಿತಿಗಳು ಕಂಡ ವಚನ ಸಾಹಿತ್ಯ.
 ವಚನ ಸಾಹಿತ್ಯದಲ್ಲಿ ಕೃಷಿ ಮತ್ತು ಸಂಸ್ಕೃತಿ.
 ಶೂನ್ಯ ಸಂಪಾದನೆಯಲ್ಲಿ ಮುಕ್ತಾಯಕ್ಕನ ಸಂಪಾದನೆಗಳು.
 ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿಯವರ ಸಾಂಗತ್ಯ.
 ಬಸವ ತತ್ವ ಸಾಗಿ ಬಂದ ದಾರಿ.
 “ಶರಣರು ಕಂಡ ಬಸವಣ್ಣ” ಮಾಲಿಕೆಗಳು.
 “ಬಸವಾದಿ ಶರಣರ ದೃಷ್ಟಿಯಲ್ಲಿ ಅಷ್ಟಾವರಣಗಳು” ಲೇಖನ ಮಾಲಿಕೆಗಳು.
 “ಬಸವಾದಿ ಶರಣರ ದೃಷ್ಟಿಯಲ್ಲಿ ಪಂಚಾಚಾರಗಳು” ಲೇಖನ ಮಾಲಿಕೆಗಳು.
 Forging, Casting & CNC Machining Presentations.
 Understanding the factors influencing fuel price rise.

ಇಂಥ ಒಂದು ವಿಷಯದ ಮೇಲೆ ನಾನು ಅಧ್ಯಯನ ಶುರು ಮಾಡಿದಾಗಲೇ ಹೊರ ಬಂದಿದ್ದು “ಅಂತರಾಷ್ಟ್ರೀಯ ಆಧುನಿಕ ಆರ್ಥಿಕ ವ್ಯವಹಾರದ ವಿಷಯ” “Micro-Socio Economic Revolution in 12th Century” ಲೇಖನಗಳು. ಇದೇ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸ ಕೊಡುವುದಕ್ಕೆ ಅವಕಾಶಗಳು ಅರಸಿ ಬಂದವು. ಶ್ರೀಗಳು ಇಂಥ ಒಂದು ವೇದಿಕೆಯನ್ನು ಸಿದ್ಧಪಡಿಸಿದ ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಎಕೆಂದರೆ ನನ್ನ ಎಲ್ಲ ವಿದೇಶಗಳ ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸಕ್ಕೆ ನಾಂದಿ ಹಾಡಿದ ಪ್ರಸಂಗವಿದು.

ಸುಮಾರು 1996/97 ರ ಸಮಯ. ಗುರುಗಳ ಆಶೀರ್ವಾದಕ್ಕೆ ಹೋಗಿದ್ದೆ. ಆಗ ಅಲ್ಲಿಯೇ ಇದ್ದ ಇಂಜನೀಯರಿಂಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಂತ ಡಾ. ಸಿ. ಡಿ. ನಾಗನಗೌಡರ ಅವರಿಗೆ ಪರಿಚಯ ಮಾಡಿಸಿ ಹೇಳಿದ್ದು ನನ್ನ ಇಡೀ ಬಸವ ತತ್ವ ಪ್ರಚಾರಕ್ಕೆ ಹೊಸ ತಿರುವನ್ನು, The Turning Point ತಂದಿತು.

ಪ್ರಿನ್ಸಿಪಾಲರೇ, ಈ ಹುಡುಗ Economics, Latest Industrial Technology, Ancient Indian Technology ಗಳನ್ನು ಭಾರತದ ತುಂಬೆಲ್ಲಾ ಓಡಾಡಿ ಮಾಹಿತಿ ಸಂಗ್ರಹಿಸ್ಯಾನ. ಚುಲೋ ಜ್ಞಾನ ಬೆಳೆಸಿಕೊಂಡಾನ. ಇದನ್ನ ಬಸವ ತತ್ವದೊಂದಿಗೆ Compaire ಮಾಡಿ ಮಾತನಾಡತಾನ. ನಿಮ್ಮ ಕಾಲೇಜಿನ್ಯಾಗ ಇವನ ಒಂದ ಉಪನ್ಯಾಸ ಎರ್ಪಡಿಸಿ ನೋಡರಿ. ನಿಮ್ಮ ವಿದಾರ್ಥಿಗಳಿಗೆ ಅನುಕೂಲವಾಗಬಹದು.

ಇದಕ್ಕೆ ಸಮ್ಮತಿ ಸೂಚಿಸಿದ ಡಾ. ಸಿ. ಡಿ. ನಾಗನಗೌಡರು ಒಂದು ಉಪನ್ಯಾಸವನ್ನು ಏರ್ಪಡಿಸಿಯೇ ಬಿಟ್ಟರು. ಆ ಕಾರ್ಯಕ್ರಮ ಯಶಸ್ವಿಯಾಗಿ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸ ನೀಡುವಂತಾಯಿತು. ಹೀಗೆ ನನ್ನ ಅತಿಥಿ ಉಪನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶ್ರೀಗಳ ದೂರದೃಷ್ಟಿ ಅರಿವಿಗೆ ಬರುವ ಹೊತ್ತಿಗೆ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಗಳು ಆದವು. ಇಷ್ಟಕ್ಕೇ ನಿಲ್ಲದ ಈ ಅಭಿಯಾನ ವಿದೇಶಗಳಿಗೂ ಹಬ್ಬಿತು.

ಮುಂದೆ ಭಾರತದ ತುಂಬೆಲ್ಲಾ ಪ್ರವಾಸ ಮಾಡುವದು ನನ್ನ ಹವ್ಯಾಸವಾಯಿತು. ಇದಕ್ಕಾಗಿ ಹಲವಾರು ನೌಕರಿಗಳನ್ನೂ ಸಹ ಕಳೆದುಕೊಳ್ಳಬೇಕಾದ ಪ್ರಸಂಗಗಳೂ ಎದುರಾದವು. ಭಾರತದ ಉದ್ದಗಲಕ್ಕೂ ಸಂಚರಿಸಿ ಒಟ್ಟು ಸುಮಾರು ಆರು ಲಕ್ಷ ಎಂಭತ್ತುಮೂರು ಸಾವಿರ ಹಳ್ಳಿಗಳಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಭೆಟ್ಟಿ ಮಾಡಿದ ಸೌಭಾಗ್ಯ ನನಗೆ ಸಿಕ್ಕಿದೆ. ಅಲ್ಲಿರುವ ಪ್ರಾಚೀನ ಪರಂಪರೆ, ತಂತ್ರಜ್ಞಾನಗಳ ಅಭ್ಯಾಸ, ಅವರ ಜನ ಜೀವನವನ್ನು ಕ್ರೋಢೀಕರಿಸುವ ಕೆಲಸ ಮಾಡುವಂತಾಯಿತು.

ಇಂಥ ಒಂದು ಅದ್ಭುತ ಚೇತನವಾದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಕೃಪಾಶಿರ್ವಾದದಿಂದ ಪ್ರಾಚೀನ ಇತಿಹಾಸದಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ ಕಲಿಯಲು ಅವಕಾಶ ಸಿಕ್ಕದಂತಾಯಿತು.

ಈಗಿನ ಜಗದ್ಗುರುಗಳಾದ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರೂ ಕೂಡ ಇಂದಿಗೂ ನನ್ನನ್ನು ಹರಸಿ ಆಶೀರ್ವಾದವನ್ನು ಮಾಡುತ್ತಿದ್ದಾರೆ. ಹಾಗೆಯೇ ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮುಚಳಂಬಾದ ಶ್ರೀ ನಾಗಭೂಷಣ ಶಿವಯೋಗಿಗಳ ಮಠಾಧ್ಯಕ್ಷರಾದಂಥ ಶ್ರೀ ಪ್ರಣವಾನಂದ ಮಾಹಾಸ್ವಾಮಿಗಳವರ ಕೃಪಾಶೀರ್ವಾದಗಳೂ ಸಹ ನನ್ನ ಮೇಲಿದೆ. ನನ್ನ ಪ್ರತೀ ವಿದೇಶ ಪ್ರವಾಸಕ್ಕೂ ಮುನ್ನ ನನಗೆ ಆಶೀರ್ವಾದ ನೀಡಿದಂಥ ತುಮಕೂರಿನ ಶ್ರೀ ಸಿದ್ಧಗಂಗಾಮಠದ ಲಿಂಗೈಕ್ಯ ಶ್ರೀ ಡಾ, ಶಿವಕುಮಾರ ಮಹಾಸ್ವಾಮಿಗಳು ಮತ್ತು ಅಟವೀ ಶಿವಲಿಂಗ ಮಹಾಸ್ವಾಮಿಗಳವರು ನೀಡಿದಂಥ ಆಶೀರ್ವಾದಗಳನ್ನು ಸ್ಮರಿಸಬೇಕು. ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಇಳಕಲ್ಲಿನ ಶ್ರೀ ಗುರು ಮಹಾಂತ ಸ್ವಾಮಿಗಳ ಆಶೀರ್ವಾದಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು.

ಹೀಗೆ ನನಗೆ ಬಸವ ತತ್ವವನ್ನು ಹೇಳಿ ತಿದ್ದಿ-ತೀಡಿ, “ನನ್ನನ್ನು ಬರೆದ ಶ್ರೀಗಳ” ಅನುಪಮ ದೂರದೃಷ್ಟಿ ಹಾಗೂ ಹೇಗೆ ಅವರು ವ್ಯಕ್ತಿತ್ವವನ್ನು ರೂಪಿಸುತ್ತಾರೆ ಎನ್ನುವ ಅದ್ಭುತ ಸಂದೇಶವನ್ನು ಈ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಅಪರಾಧ ಸಹಸ್ರಾಣಿ ಕ್ರೀಯಂತೆ ಅಹರ್ನಿಶಂ ದಾಸೋ ಆಯಮಿಥಿಮಾಂ ಮತ್ವ ಕ್ಞಮಸ್ವ ಪರಮೇಶ್ವರ ಎನ್ನುವಂತೆ ಏನೇ ತಪ್ಪುಗಳು ಈ ಲೇಖನದಲ್ಲಿ ಮೂಡಿ ಬಂದಿದ್ದರೆ ಕ್ಷಮಿಸಬೇಕಂತಾ ಹೇಳತಾ ನನ್ನ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಶರಣು ಶರಣಾರ್ಥಿಗಳು.

ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 9741 357 132
ಈ-ಮೇಲ್‌ : vijikammar@gmail.com
ಈ-ಮೇಲ್‌ : vijikammar@gmail.com

Don`t copy text!