ಕ.ಸಾ.ಪ. ಚುನಾವಣೆ ಮತ್ತು ಸುಡುವ ಸತ್ಯಗಳು

ಕ.ಸಾ.ಪ. ಚುನಾವಣೆ ಮತ್ತು ಸುಡುವ ಸತ್ಯಗಳು

ಕಳೆದ ಮೇ ತಿಂಗಳ ಒಂಬತ್ತನೇ ತಾರೀಖಿನಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಜರುಗಬೇಕಿತ್ತು. ಕೊರೊನಾ ಹಾವಳಿಯಿಂದ ಸರಕಾರ ಚುನಾವಣೆಗಳನ್ನು ಮುಂದೂಡಿ ಇದೀಗ ನವೆಂಬರ್ ಇಪ್ಪತ್ತೊಂದನೆಯ ತಾರೀಖಿನಂದು ಚುನಾವಣೆಗಳು ಜರುಗಲಿವೆ. ಯಾವುದೇ ರಾಜಕೀಯ ಪಕ್ಷಗಳ ಸಾರ್ವತ್ರಿಕ ಚುನಾವಣೆಗಳಿಗೆ ಕಮ್ಮೀ ಇಲ್ಲದಂತೆ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಝಗಮಗಿಸುತ್ತಿವೆ. ಜಾತಿ, ಒಳಕುಲ, ಮತ, ಮಠ, ಧರ್ಮ, ಹಣ, ಇತರೆ ಎಲ್ಲ ಆಟೋಟ, ವಹಿವಾಟುಗಳನ್ನು ಮುಚ್ಚು ಮರೆಯಿಲ್ಲದಂತೆ ಮೆರೆಯುತ್ತಿವೆ.

ಮೇಲೋಗರದ ಹೊಲಬುಗೇಡಿ ರಾಜಕಾರಣದಂತಾಗಿದೆ. ಒಂದು ಹಂತದಲ್ಲಿ ಎಡ – ಬಲ ನಡುಪಂಥಗಳ ಒಣತೌಡು ಕುಟ್ಟುವಿಕೆ. ಸ್ವಜಾತಿ ಮತಗಳ ಲೆಕ್ಕಾಚಾರ. ಆಣೆ ಪ್ರಮಾಣ, ಪತ್ರಿಕಾಗೋಷ್ಠಿ, ಲಕ್ಷ ಲಕ್ಷ ಖರ್ಚುಮಾಡಿ ಲಕ್ಷ ಲಕ್ಷ ಸಂಖ್ಯೆಯ ಮನವಿ ಪತ್ರಗಳ ರವಾನೆ. ಎರಡೆರಡು ಬಾರಿ ಜಿಲ್ಲಾ ತಾಲೂಕು ಪ್ರವಾಸ. ಪತ್ರಿಕಾಗೋಷ್ಟಿಗಳಲ್ಲಿ ಯಾವೊಬ್ಬ ರಾಜಕಾರಣಿಗೂ ಕಮ್ಮೀ ಇಲ್ಲದ ಭರವಸೆಗಳ ಮಹಾಪೂರ.
ಸಾಮಾಜಿಕ ಜಾಲತಾಣಗಳ ಥರಾವರಿ ಬಳಕೆ. ಅಜಮಾಸು ವರ್ಷ, ತಿಂಗಳುಗಟ್ಟಲೇ ಊರೂರು ತಿರುಗಾಟ. ಭರ್ಜರಿ ಕಾರುಬಾರುಗಳಾಟ.

ವಿವಿಧ ಪಕ್ಷಗಳ ರಾಜಕಾರಣಿ, ಸ್ವಾಮೀಜಿ, ಜಾತಿವಾರು ಮಠಗಳ ಮನಾಮನಿ ಭೇಟಿ. ಸ್ವಾಮಿಗಳ ಆಶೀರ್ವಾದದಿಂದ ಹಿಡಿದು ಬಾಡೂಟದವರೆಗೆ ಅಬ್ಬರದ ಪ್ರಚಾರ. ಮತ್ತದರ ಎಲ್ಲ ಸಾಧ್ಯತೆಗಳ ಬಹುಬಗೆಯ ಬಲಾಢ್ಯ ಬಳಕೆ. ಕೆಲವು ಮಠಾಧಿಪತಿಗಳು ತಮಗೆ ಬೇಕಾದವರ ಪರ ಒಳಗಿಂದೊಳಗೇ ಬ್ಯಾಟಿಂಗ್ ಮಾಡುವುದು ಅಷ್ಟೇನು ಗುಟ್ಟಿನ ವಿಷಯಗಳಲ್ಲ.

ಓರ್ವ ಶಾಸಕನಂತೂ ಕೇಂದ್ರ ಕ.ಸಾ.ಪ. ಅಭ್ಯರ್ಥಿಯೊಬ್ಬರಿಗೆ ಬೆಂಬಲಿಸಿ ಅದು ತಮ್ಮ ರಾಷ್ಟ್ರೀಯ ಪಕ್ಷದ ಅಧಿಕೃತ ನಿರ್ಣಯವೆಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಹೀಗೆ ಬಹಿರಂಗವಾಗಿ ರಾಜಕೀಯ ಪಕ್ಷವೊಂದರ ಶಾಸಕರೇ ಹೇಳಿಕೆ ನೀಡಿರುವಾಗ ನಿಷ್ಪಕ್ಷಪಾತ ಮತ್ತು ಮುಕ್ತ ಮತದಾನ ಸಾಧ್ಯವೇ.? ಯೋಗ್ಯ ಅಭ್ಯರ್ಥಿಯ ಆಯ್ಕೆ ಸುಗಮವೇ.?

ಇನ್ನೊಬ್ಬ ಶಾಸಕ, ಕೇಂದ್ರ ಕ.ಸಾ.ಪ. ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಿರುವ ತನ್ನ ಸಂಬಂಧಿಯೊಬ್ಬರನ್ನು ಮಾಜಿ ಮುಖ್ಯಮಂತ್ರಿಯೊಬ್ಬರ ಬಳಿ ಕರೆದೊಯ್ದು ”ಬಹಿರಂಗ ಬೆಂಬಲದ ಹೇಳಿಕೆ ನೀಡಬೇಕೆಂದು” ಮನವಿ ಮಾಡಿದ್ದಾರೆ. ಸಧ್ಯಕ್ಕೆ ಆ ಮಾಜಿ ಮುಖ್ಯಮಂತ್ರಿ ಸಾಹಿತ್ಯ ಪರಿಷತ್ತು ಚುನಾವಣೆಗಳಲ್ಲಿ ನಾವು ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ನಿರಾಕರಿಸಿದ್ದಾರೆ. ನೆನಪಿರಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಈ ಇಬ್ಬರೂ ಶಾಸಕರು ಕಲ್ಯಾಣ ಕರ್ನಾಟಕಕ್ಕೆ ಸೇರಿದವರು.

ಅಂದಹಾಗೆ ಈ ಬಾರಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಹವಾ ಹೆಚ್ಚಿಗಿದೆ. ಅದರಲ್ಲೂ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಹಿರಿಯ ಕವಯತ್ರಿಯೊಬ್ಬರು ಕೇಂದ್ರ ಕ.ಸಾ.ಪ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಸಾಹಿತ್ಯಕ ಸಂಸ್ಥೆಯ ಚುನಾವಣಾ ಉಮೇದಿಗೆ ಹೊಸ ಖದರು ತಂದಿದೆ. ಅಷ್ಟು ಮಾತ್ರವಲ್ಲದೇ ನೂರಾ ಆರುವರ್ಷಗಳ ಇತಿಹಾಸವುಳ್ಳ ಕ.ಸಾ.ಪ. ಚರಿತ್ರೆಯಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಸ್ಪರ್ಧೆ ಎಂಬ ತೀವ್ರ ಕುತೂಹಲ ಉಂಟು ಮಾಡಿದೆ.

ಆದರೆ ಹಿರಿಯ ಕವಯತ್ರಿಯ ಪ್ರವೇಶ ತುಸು ತಡವಾಗಿದೆಯೆಂಬ ಅಳುಕು ಆರಂಭಿಕ ದಿನಗಳಲ್ಲಿತ್ತು. ಮೇ ತಿಂಗಳ ಚುನಾವಣೆ ಮುಂದೂಡಿಕೆಯಾಗಿ ಆರೇಳು ತಿಂಗಳುಗಳ ಯಥೇಚ್ಛ ಅವಕಾಶ ಸಿಕ್ಕಿತು. ಚುನಾವಣಾ ಕಣಕ್ಕಿಳಿದ ಹುರಿಯಾಳುಗಳ ನಡುವೆ ಈಗ ತುರುಸಿನ ಕಾಳಗವೇ ಏರ್ಪಟ್ಟಿದೆ. ಪಕ್ಕಾ ರಾಜಕಾರಣದ ವರಸೆಯನ್ನೇ ಧರಿಸಿದಂತಿರುವ ಸದರಿ ಚುನಾವಣೆಗಳು “ಸಾಹಿತ್ಯ” ಎಂಬ ಹಣೆಪಟ್ಟಿಯಿಂದಾಗಿ ಮಾತ್ರ ಅವನ್ನು ಸಾಂಸ್ಕೃತಿಕ ವಿದ್ಯಮಾನದ ಚಾಳೀಸುಗಳಿಂದ ನೋಡಬೇಕಿದೆ. ಇಲ್ಲದೇ ಹೋದರೆ ಯಾವುದೇ ಜಿಲ್ಲಾ ಪಂಚಾಯತಿ ಇಲ್ಲವೇ ಎಮ್ಮೆಲ್ಲೆ ಎಲೆಕ್ಷನ್ನುಗಳಿಗಿಂತ ಇವು ಹೊರತಾಗಿಲ್ಲ.

ಕೇಂದ್ರ ಕ.ಸಾ.ಪ. ಚುನಾವಣೆಯ ಕೆಲವು ಸ್ಪರ್ಧಾಳುಗಳು ಬೆಂಗಳೂರಿನಲ್ಲಿ ಚುನಾವಣಾ ಕಚೇರಿಗಳನ್ನೇ ಸ್ಥಾಪಿಸಿದ್ದಾರೆ. ಅಜಮಾಸು ಮೂರು ಲಕ್ಷದಷ್ಟು ಮತದಾರರಿಗೆ ಮತಭಿಕ್ಷೆಯ ಮನವಿ ಪತ್ರ ಕಳಿಸುವುದಾದರೆ ಕನಿಷ್ಠ ₹ ಹದಿನೈದು ಲಕ್ಷದಷ್ಟು ಹಣಬೇಕು. ವರ್ಣರಂಜಿತ ಮುದ್ರಣಕ್ಕೆ ₹ ನಾಕೈದು ಲಕ್ಷ ಬೇಕು. ಮುದ್ರಿತ ಮನವಿಪತ್ರಗಳಿಗೇ ಮತಗಳೇನು ಉದುರಿ ಬೀಳವು. ಅದಕ್ಕಾಗಿ ಜಿಲ್ಲೆ ತಾಲೂಕುಗಳಿಗೆ ಎರಡೆರಡು ಬಾರಿ ರಾಜ್ಯಾದ್ಯಂತ ತಿರುಗಾಡಿರುವ ಖರ್ಚು ಅದೆಷ್ಟು ಲಕ್ಷ ದಾಟಿರುವುದೋ ಅಭ್ಯರ್ಥಿಗಳಿಗೆ ಗೊತ್ತಿರುವ ಗುಟ್ಟು. ಹೀಗೆ ಲಕ್ಷ ಲಕ್ಷ ಕೆಲವರು ಹತತ್ರ ಕೋಟಿ ಖರ್ಚು ಮಾಡುವ ನಿರೀಕ್ಷೆಗಳಿವೆಯಂತೆ. ಸಾಹಿತ್ಯ ಪರಿಷತ್ತಿನಂತಹ ಸಾಂಸ್ಕೃತಿಕ ಸಂಸ್ಥೆಯ ಗಾದಿಗೇರಲು ಇಷ್ಟೆಲ್ಲ ಖರ್ಚು ಮಾಡಬೇಕಾದ ಅನಿವಾರ್ಯಎಂಬ ಸ್ಥಿತಿ ತಲುಪಿರುವುದು ಸಾಂಸ್ಕೃತಿಕ ದುರಂತ.

ಕ.ಸಾ.ಪ. ಶತಮಾನ ಪೂರೈಸಿದ ಕನ್ನಡ ಸಂಸ್ಕೃತಿಯ ಪ್ರಾತಿನಿಧಿಕ ಸಂಸ್ಥೆ. ಕೆಲವು ಸಂದರ್ಭಗಳಲ್ಲಿ ಕ.ಸಾ.ಪ. ಹೆಚ್ಚು ಜಾಗೃತವಾಗಿರುತ್ತದೆ. ಅದರ ಅಧ್ಯಕ್ಷ ಸ್ಥಾನದ ಚುನಾವಣೆ ಮತ್ತು ಸಾಹಿತ್ಯ ಸಮ್ಮೇಳನಗಳು, ಹೆಚ್ಚೆಂದರೆ ಕನ್ನಡ ರಾಜ್ಯೋತ್ಸವ ಸಂದರ್ಭಗಳಲ್ಲಿ. ಆಗ ಪರಿಷತ್ತಿನ ಪರಿಣಾಮಕಾರಿ ಅವಾಜುಗಳು ಕೇಳಿಬರುವುದು ಅದರ ಅವಲಂಬಿಗಳ ಒಳಬಣ್ಣಕ್ಕೆ ಹಿಡಿದ ಕನ್ನಡಿ. ರಾಜಕಾರಣಿಗಳಂತೆ ಅಭ್ಯರ್ಥಿಗಳಿಂದ ಕಣದಲ್ಲಿ ತರಹೇವಾರಿ ಭರವಸೆಗಳ ಬಿತ್ತುಣಿಕೆ. ಮತ್ತೊಂದು ಗಂಭೀರ ಸ್ವರೂಪದ ಒಳಸತ್ಯವೆಂದರೆ : ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ, ಸಾಹಿತ್ಯಕ ಶಕ್ತಿಗಳಿಗೆ ಇಡೀ ರಾಜ್ಯದ ಮತ್ತು ಗಡಿನಾಡು ಪ್ರದೇಶಗಳ ಕ.ಸಾ.ಪ. ಚುನಾವಣಾ ಕಣದ ಶಕ್ತ ರಾಜಕಾರಣಗಳನ್ನು ನಿಯಂತ್ರಿಸಿ, ತನ್ನ ತೆಕ್ಕೆಗೆ ತಂದುಕೊಳ್ಳುವ ಒಳಹೇತುಗಳು. ಅದಕ್ಕಾಗಿ ಒಳಗೊಳಗೆ ಕಾಣದಂತೆ ಕೈಯಾಡಿಸುವ ಹಿಕಮತ್ತುಗಳು. ನಿಗೂಢ ನಿಲುವುಗಳ ರಾಜಕೀಯ ಮಸಲತ್ತಿನ ಡಾವು ಪೇಚುಗಳು. ಹೀಗೆ ಕ.ಸಾ.ಪ. ಚುನಾವಣೆಗಳು ಪಕ್ಷ ರಾಜಕಾರಣದ ತದ್ರೂಪದಂತಿವೆ.

ಅವುಗಳ ನಿರ್ಧಾರದ ಒಳಮರ್ಮ ಅಭ್ಯರ್ಥಿಗಳೊಂದಿಗಿನ ಒಳ ಒಪ್ಪಂದವೂ ಆಗಿರ್ತದೆ. ಒಂದರ್ಥದಲ್ಲಿ ಅವು ರಾಜಕೀಯ ಪಕ್ಷಗಳ ಹೈಕಮಾಂಡ್ ತರಹವೇ ಕೆಲಸ ಮಾಡುತ್ತವೆ. ದೂರದ ಉ.ಕ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗೆ ಈ ಬಾರಿ ಅವಕಾಶ ಮಾಡಿಕೊಡುತ್ತಿದ್ದೇವೆ. ಇದು “ಬೆಂಗಳೂರುಧ್ವನಿ”ಯ ಹೈಕಮಾಂಡ್ ಸ್ಟೈಲ್. ಈ ಅನುಭೂತಿ ಧ್ವನಿಗೆ ತನ್ನ ಸಾಂಸ್ಕೃತಿಕ ಹಿಡಿತ ಸಾಧಿಸುವ ಒಳಹುನ್ನಾರ. ಈ ಮನೋಭೂಮಿಕೆ ಕೇವಲ ಕ.ಸಾ.ಪ. ಚುನಾವಣೆಗಳಿಗೆ ಸೀಮಿತವಾಗಿರದು. ಅದು ಇತರೆ ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರ, ಪ್ರತಿಷ್ಠಾನಗಳ ಸ್ವಾಧೀನತೆಯಲ್ಲೂ ‘ಬೆಂಗಳೂರುಧ್ವನಿ’ಯ ರಾಜಕಾರಣ. ಕಾಣದ ಕೈವಾಡಗಳ ಮೂಲಕ ತನ್ನ ಅಧಿಪತ್ಯ ಮತ್ತು ಸಾಂಸ್ಕೃತಿಕ ಪ್ರಭುತ್ವ ಸಾಧಿಸುತ್ತಲೇ ಬಂದಿರುವುದು ಸುಲಭದ ಮೇಲ್ನೋಟಕ್ಕೆ ಕಾಣಿಸದು.

ಮತ್ತೊಂದೆಡೆ ಕೆಲವು ಹೆಸರಾಂತ ಸಾಹಿತಿಗಳು, ಪ್ರಗತಿಪರರು ಅವರಿವರ ಪರ, ವಿರೋಧನೀತಿ ಅನುಸರಿಸದೇ ಗೆದ್ದನಂತರ ಶುಭಾಶಯ ಕೋರುವ ಅವಕಾಶವಾದಿ ಶ್ಯಾಣೇತನ ತೋರುವವರು. ಕೆಲವರಂತೂ ಗೆದ್ದೆತ್ತಿನ ಬಾಲಬಡುಕರು. ವಾಸ್ತವವಾಗಿ ಪರಿಷತ್ತನ್ನು ಪರಿಶುದ್ಧವಾಗಿ ಕಟ್ಟಬೇಕಾದ ಇವರುಗಳು ರಣಹೇಡಿತನದ ಹೊಣೆಗೇಡಿಗಳು. ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕ.ಸಾ.ಪ. ವನ್ನು ಹಿಗ್ಗಾಮುಗ್ಗಾ ತಡವಿಕೊಳ್ಳುವ ಕೇವಲ ಜಗಳಗಂಟರು.

ಮತ್ತೆ ಕೆಲವರು ಕ.ಸಾ.ಪ. ಸಾಹಿತ್ಯ ಗೋಷ್ಠಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಗಳಿಗೆ ಒಳಗೊಳಗೆ ಗುಳುಗುಳು ಮಾಡುವ ದ್ರಾಬೆಗಳು. ಸಾಹಿತ್ಯ ಕಾರ್ಯಕ್ರಮಗಳ ಅಧ್ಯಕ್ಷ ಸ್ಥಾನಗಳನ್ನು ಹೊಡಕೊಳ್ಳುವಲ್ಲಿ ಕುಶಲಿಗರು. ಇನ್ನೂ ಕೆಲವರು ನೇರವಾಗಿ ಅಭ್ಯರ್ಥಿಪರ ಪ್ರಚಾರಕ್ಕಿಳಿದು ಗೌರವ ಕಾರ್ಯದರ್ಶಿ, ಇತರೆ ಹುದ್ದೆಗಳ ಅಂಗಿಚಣ್ಣ, ಹೊಲಿಸಿಕೊಂಡು ಗೌ.ಕಾ. ಕುರ್ಚಿಗಳ ಮೇಲೆ ಈಗಾಗಲೇ ಟವೆಲ್ಲು ಹಾಕಿದ್ದಾರೆಂದರೆ ಇವರ ಲೆವೆಲ್ಲು ಎಂಥದೆಂಬುದು ತಿಳಿಯುತ್ತದೆ. ಈಗಾಗಲೇ ಪರಿಷತ್ತಿನೊಳಗೆ ಛೇಂಬರ್ ಆಂಟಿ ಛೇಂಬರುಗಳನ್ನು ಹಂಚಿಕೊಳ್ಳುವಮಟ ಕೋಡಂಗಿತನ ಪ್ರದರ್ಶಿಸುವಲ್ಲಿ ಇವರದು ಭಯಂಕರ ಪೈಪೋಟಿ .

ಆ ಮೂಲಕ ಕೆಲವರು ಅಭ್ಯರ್ಥಿಗಳಿಗೇ ಇರುಸು ಮುರುಸಾಗುವಂತೆ ನಡಕೊಂಡವರಿದ್ದಾರೆ. ಇಂತಹ ಹತ್ತು ಹಲವು ಅಪಸವ್ಯಗಳ ಆಗರವಾಗಿ ಕ.ಸಾ.ಪ. ಚುನಾವಣಾ ಕಣ ರಣಾಂಗಣವಾಗಿದೆ. ಓರ್ವ ಅಭ್ಯರ್ಥಿ ಹತ್ತಾರು ಕುರಿಗಳನ್ನು ಕಡಿಸಿ, ಕಂಟಮಟ ಕುಡಿಸಿ ಉಣಿಸಿದ, ಸೂಟ್ಕೇಸುಗಳನ್ನು ಹಂಚಿದ, ಮತ್ತೊಬ್ಬ ಹುರಿಯಾಳು ಬೆಳ್ಳಿಯುಂಗುರ ವಿತರಿಸಿದ ಪತ್ರಿಕೆಗಳ ಪ್ರಕಟಿತ ಸುದ್ದಿಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಸರಸ್ವತಿ ಮಂದಿರ. ಅಲ್ಲಿ ಸರಸ್ವತಿ ನೆಲೆಸಬೇಕು. ಆದರೆ ಅಲ್ಲಿ ಸರಸ್ವತಿಗೇ ಸ್ಥಾನವಿಲ್ಲದ ವಾತಾವರಣ ಅನುರಣಿಸಿದೆ. ವೃತ್ತಿಪರರನ್ನೇ ಮೀರಿಸುವ ಕೊಳಕು ರಾಜಕಾರಣದ ಕೈವಶ ಆಗಬಾರದಲ್ಲವೇ.?

ಯಾರೇ ಗೆದ್ದರೂ ಅದು ಸಾಹಿತ್ಯದ ಗೆಲುವೇ ಎಂದು ಅನುಮಾನಿಸುವ ಘೋರಸ್ಥಿತಿಯ ಗೂಡಾಗಿದೆ. ಹೌದು ಚುನಾವಣೆಗಳನ್ನು ಗೆಲ್ಲುವಲ್ಲಿ ಸಾಹಿತ್ಯೇತರ ಕೆಲವು ನಿಪುಣರಿಂದಾಗಿ ನಿಜವಾದ ಸಾಹಿತಿಗಳು ನೇಪಥ್ಯಕ್ಕೆ ಸರಿಯುವ ಅಪಾಯಗಳಿವೆ. ಇಂತಹ ಹತ್ತು ಹಲವು ಸುಡುವ ಸತ್ಯಗಳ ನಡುವೆ ಕ.ಸಾ.ಪ. ಪರಿಶುದ್ಧಗೊಳ್ಳುವುದು ಯಾವಾಗ ಮತ್ತು ಯಾರಿಂದ.? ಇದಕ್ಕೆ ಉತ್ತರ ದೊರಕುವ ಲಕ್ಷಣಗಳು ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ಮೈಸೂರು ಮಹಾರಾಜರು ಸದ್ಭಾವನೆಯಿಂದ ಸ್ಥಾಪಿಸಿದ, ಕನ್ನಡದ ಪ್ರಾತಃಸ್ಮರಣೀಯರು ಕಟ್ಟಿ ಬೆಳೆಸಿದ ಸಾಂಸ್ಕೃತಿಕ ಸಂಸ್ಥೆ. ಅದರ ಹಿರಿಮೆ ಗರಿಮೆಗಳ ಅಸ್ಮಿತೆಯ ಹುಡುಕಾಟದಂತೆ ಕನ್ನಡಿಗರನ್ನು ಕಾಡುತ್ತಿರುವ ಗುಡ್ಡದಾಕಾರದ ಅನೇಕ ಪ್ರಶ್ನೆಗಳಿವೆ.

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!