ಸಂಪ್ರದಾಯದ ಕೊಂಡಿ ಬೆಸೆಯುವ ಬೆಳಕಿನ ಹಬ್ಬ ದೀಪಾವಳಿ
ಈ ಭಾರತ ಭೂಮಿಯಲ್ಲಿ ರೂಢಿ, ಸಂಪ್ರದಾಯ, ಹಬ್ಬ-ಹರಿದಿನಗಳ ಆಚರಣೆಯು ತಲೆತಲಾಂತರಗಳ ಹಿಂದೆ ಪ್ರಾರಂಭವಾಗಿ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮುಂದುವರೆದುಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗುತ್ತಿದ್ದರು, ಈ ಎಲ್ಲ ಆಚರಣೆಗಳು ಇನ್ನೂ ಜೀವಂತವಾಗಿಟ್ಟಿರುವುದು ಈ ನೆಲದ ಸಂಸ್ಕೃತಿಯ ಗಟ್ಟಿ ಬೇರುಗಳು.
ನಾವು ಆಚರಿಸುವ ಪ್ರತಿಯೊಂದು ಹಬ್ಬ ಹರಿದಿನಗಳಿಗೂ ರಾಮಾಯಣ ಮಹಾಭಾರತ ಕಾವ್ಯ ಪೌರಾಣಿಕ , ಜಾನಪದ, ಇತಿಹಾಸಗಳು ತಮ್ಮದೆ ಆದ ಪುರಾವೆಗಳನ್ನು ಒದಗಿಸುತ್ತವೆ ಮತ್ತು ಆ ಆಚರಣೆಗಳ ಹಿಂದೆ ಬೌಗೋಳಿಕವಾದ & ವೈಜ್ಞಾನಿಕ ಹಿನ್ನೆಲೆಯನ್ನು ಕಾಣಬಹುದು.
ರಾಮಾಯಣ ಮಹಾಭಾರತ ಕಾವ್ಯಗಳ ಕಾಲದಿಂದ ಪ್ರಾರಂಭವಾಗಿ ಇಂದಿನವರೆಗೂ ಸಂಭ್ರಮದಿಂದ ಹಿಂದುಗಳು ಆಚರಿಸಲ್ಪಡುವ ಹಬ್ಬವೇ ದೀಪಾವಳಿ.
ಲಕ್ಷ್ಮಿ ಪೂಜೆಯು ಪ್ರಧಾನ. ಕಾರ್ತಿಕ ಮಾಸದ ಪ್ರಾರಂಭದಲ್ಲಿ ೫ ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಮೊದಲ ದಿನ ನೀರು ತುಂಬುವ ಹಬ್ಬವೆಂದು ಆಚರಿಸಲ್ಪಡುತ್ತದೆ. ಅಂದಿನ ದಿನ ನೀರು ತುಂಬುವ ಪಾತ್ರೆಗಳನ್ನು ಶುದ್ದಗೊಳಿಸಿ ಮಡಿಯಿಂದ ಶುದ್ದವಾದ ನೀರನ್ನು ತುಂಬಿ ಪೂಜಿಸಲಾಗುತ್ತದೆ ಅಂದಿನ ದಿನ ತುಂಬಿದ ಸ್ನಾನದ ನೀರಿನಲ್ಲಿ ಗಂಗೆ ಇರುತ್ತಾಳೆ ಎಂಬ ನಂಬಿಕೆ ಇದೆ.
ಎರಡನೇಯ ದಿನವೇ ನರಕ ಚತುರ್ದಶಿ ವಿಷೇಶವೆಂದರೆ ಎಣ್ಣೆ ಸ್ನಾನ ಮಾಡುವುದು ಇದರಿಂದ ಮೈಯೊಳಗಿನ ಜಡತ್ವ ಕಳೆದು ಆಯುರಾರೋಗ್ಯ ವೃದ್ದಿಯಾಗುವುದು ಎನ್ನುವುದು ವೈಜ್ಞಾನಿಕ ನಂಬಿಕೆಯಾದರೆ ಈ ದಿನವೇ ಸಮುದ್ರ ಮಂಥನದಲ್ಲಿ ಶ್ರೀ ವಿಷ್ಣು ಅಮೃತ ಕಳಶದೊಂದಿಗೆ ಧನ್ವಂತರಿಯಾಗಿ ಅವತಾರವೆತ್ತಿದ್ದನೆಂದು ಪುರಾಣಗಳು ಹೇಳುತ್ತವೆ.
ಭೂದೇವಿಯ ಮಗ ಸ್ತ್ರೀ ಪಿಡಕನು, ಲೋಕಕಂಠಕನೂ ಆದ ನರಕಾಸುರನನ್ನು ಶ್ರೀ ಕೃಷ್ಣನ್ನು ಅಶ್ವಯುಜ ಕೃಷ್ಣ ಚತುರ್ಥಿಯ ಕಗ್ಗತ್ತಲಿನಲ್ಲಿ ಸಂಹರಿಸಿ, ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಂಧಮುಕ್ತಗೊಳಿಸಿ ಕನ್ಯಾಸೆರೆಯನ್ನು ಬಿಡಿಸಿದನೆಂದು ಮಹಾಭಾರತ ಹೇಳುತ್ತದೆ.
ಕನ್ಯಾಸೆರೆಯನ್ನು ಬಿಡಿಸಿದ ಕೃಷ್ಣನ ಸ್ವರೂಪನಾದ ಅಳಿಯನನ್ನು ದೀಪಾವಳಿಯ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಿ ಉಡುಗೊರೆಯನ್ನು ನೀಡಿ ಉಪಚರಿಸುವ ಸಂಪ್ರದಾಯ ಇಂದು ನಮ್ಮ ನಾಡಿನಲ್ಲಿದೆ .
ನರಕಾಸುರನನ್ನು ಸಂಹರಿಸಿ ಕೃಷ್ಣ ಸ್ನಾನಮಾಡಿದ್ದಕ್ಕಾಗಿ ಅಭ್ಯಂಜನ ಸ್ನಾನ ವಿಶೇಷತೆಯನ್ನು ಪಡೆದಿದೆ. ನಮ್ಮೊಳಗಿನ ಕೆಟ್ಟತನವೆನ್ನುವ ನರಕಾಸುರನನ್ನು ಕೊಂದುಹಾಕಿ ಮೈಮನಸುಗಳನ್ನು ಹಗುರಮಾಡುವ ಅಭ್ಯಂಜನವನ್ನು ಮಾಡಿದರೆ ನರಕ ಚತುರ್ದಶಿಯ ಆಚರಣೆ ಈ ಕಾಲದಲ್ಲಿ ಪ್ರಸ್ತುತವಾಗುತ್ತದೆ
ಮೂರನೆಯ ದಿನ ಅಮವಾಸೆ, ಸಮುದ್ರ ಮಂಥನದಲ್ಲಿ ಲಕ್ಷ್ಮೀಯು ಉದಯಿಸಿದ ದಿನ ಎಂದು ಪುರಾಣಗಳು ಹೇಳುತ್ತವೆ. ಸಂಪತ್ತಿನ ಒಡತಿಯಾದ ಲಕ್ಷ್ಮೀಯನ್ನು ಶೃದ್ದಾ ಭಕ್ತಿಯಿಂದ ಪೂಜಿಸಲಾಗುತ್ತದೆ ಅಂದು ವ್ಯಾಪಾರಸ್ಥರಿಗೆ ನೂತನ ವರ್ಷ ತಮ್ಮ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರಲೆಂದು ಲಕ್ಷ್ಮೀಯನ್ನು ದೀಪಾರಾಧನೆಯ ಮೂಲಕ ಆರಾಧಿಸುತ್ತಾರೆ. ರೈತಾಪಿ ವರ್ಗಕ್ಕೆ ಮುಂಗಾರಿನ ಫಸಲು ಬಂದು ಧವಸ ಧಾನ್ಯ ರೂಪದಲ್ಲಿ ಲಕ್ಷ್ಮೀಯು ಶಾಶ್ವತವಾಗಿ ನೆಲೆಸಲಿ ಎಂದು ಪೂಗಿಸಿ ಅವಳ ಕೃಪೆಗೆ ಪಾತ್ರರಾಗುತ್ತಾರೆ.
ಶ್ರೀರಾಮನು ೧೪ ವರ್ಷ ವನವಾಸವನ್ನು ಮುಗಿಸಿ ಅಯೋದ್ಯೆಗೆ ಬಂದಾಗ ಪುರದ ಜನರು ಸಾಲು ದೀಪಗಳನ್ನು ಹಚ್ಚಿ ಸ್ವಾಗತಿಸಿದ ದ್ಯೂತಕವಾಗಿ ದೀಪಾವಳಿ ಆಚರಣೆ ಬಂದಿತು ಎಂದು ರಾಮಾಯಣವು ಹೇಳುತ್ತದೆ. ಬಾರತದ ಇತಿಹಾಸವು ದೀಪಾವಳಿ ಆಚರಣೆಗೆ ತನ್ನದೆ ಸಾಕ್ಷಿಗಳನ್ನು ಒದಗಿಸುತ್ತದೆ.
ಜೈನ ಪುರಾಣಗಳ ಪ್ರಕಾರ ಭಗವಾನ ಮಹಾವೀರರು ನಿರ್ವಾನ ಹೊಂದುವುದು ದೀಪಾವಳಿಯ ದಿನದಂದೆ ಆದ್ದರಿಂದ ಜೈನ ಧರ್ಮಿಯರು ಈ ಹಬ್ಬವನ್ನು ಆಚರಿಸುತ್ತಾರೆ. ಸಿಖ್ಖ ಗುರು ಹರಗೋವಿಂದಜಿ ಮತ್ತು ಇತರೆ ೨೫ ಹಿಂದು ಮಹಾರಾಜರು ಮೊಘಲರಿಂದ ಬಂಧಮುಕ್ತವಾದುದು ಇದೇ ದೀಪಾವಳಿಯ ದಿನದಂದು ಸಿಖ್ಖ ಧರ್ಮಿಯರು ಶೃದ್ದಾ ಭಕ್ತಿಯಿಂದ ದೀಪಾವಳಿಯನ್ನು ಆಚರಿಸುತ್ತಾರೆ.
ಹಬ್ಬದ ನಾಲ್ಕನೇಯ ದಿನ ಬಲಿಪಾಡ್ಯಮಿ ಅಂದು ಬಲಿ ಚಕ್ರವರ್ತಿಯು ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ, ದಾನಶೂರನಾದ ದೈತ್ಯರಾಜ ಬಲಿಚಕ್ರವರ್ತಿಯ ಬಳಿಗೆ ವಿಷ್ಣು ವಾಮನ ಅವತಾರವನ್ನು ಧರಿಸಿ ಬಲಿಯಿಂದ ಮೂರು ಹೆಜ್ಜೆ ಇಡುವಷ್ಟು ಭೂಮಿಯನ್ನು ದಾನವಾಗಿ ಕೇಳುತ್ತಾನೆ ಒಂದು ಹೆಜ್ಜೆ ಭೂಮಿಯ ಮೇಲೆ ಇನ್ನೊಂದು ಹೆಜ್ಜೆ ಆಕಾಶದ ಮೇಲಿಟ್ಟ ವಾಮನನಿಗೆ ಮೂರನೇಯ ಹೆಜ್ಜೆ ತನ್ನ ತಲೆಯ ಮೇಲೆ ಇಡುವಂತೆ ಕೇಳುತ್ತಾನೆ ವಾಮನನು ತನ್ನ ಮೂರನೇಯ ಹೆಜ್ಜೆಯನ್ನು ಬಲಿಯ ತಲೆ ಮೇಲಿಟ್ಟು ಅವನನ್ನು ತುಳಿಯುತ್ತಾನೆ ಬಲಿಯ ಭಕ್ತಿಯ ಮತ್ತು ದಾನಶೀಲ ಗುಣಗಳನ್ನು ಮೆಚ್ಚಿ ಪ್ರತೀ ವರ್ಷ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ಹರಸುತ್ತಾನೆ ಎಂದು ಪುರಾಣವು ಹೇಳುತ್ತದೆ.
ಐದನೇಯ ದಿನ ಹಟ್ಟಿ ಹಬ್ಬ ಕಾರ್ತಿಕ ಶುಕ್ಲ ಪಂಚಮಿಯಂದು ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿ ತನ್ನ ಗೋ ಸಮೂಹವನ್ನು ರಕ್ಷಿಸಿದ ಪ್ರತೀಕವಾಗಿ ಅಂದು ಗೋವನ್ನು ಕೊಟ್ಟಿಗೆಯಲ್ಲಿ ಪೂಜೆಯನ್ನು ಮಾಡುವರು ಉತ್ತರ ಕರ್ನಾಟಕದ ಜನಪದರಲ್ಲಿ ಪಾಂಡವರು ತಮ್ಮ ವನವಾಸವನ್ನು ಮುಗಿಸಿ ಪುರಕ್ಕೆ ಬಂದರೆAದು ನಂಬಿಕೆ ಇದೆ ಅಂದು ಬೆಳಿಗ್ಗೆ ಅಂಗಳದಲ್ಲಿ ಸಗಣಿಯಿಂದ ಪಾಂಡವರನ್ನು ಮಾಡಿ ಪೂಜಿಸುತ್ತಾರೆ. ಇಷ್ಟೆಲ್ಲಾ ಹಿನ್ನೆಲೆಯನ್ನು ಹೊಂದಿರುವ ದೀಪಾವಳಿಯು ಲೋಕ ರಕ್ಷಕನಾದ ವಿಷ್ಣುವನ್ನು ಸಂಪತ್ತಿನ ಒಡತಿಯಾದ ಲಕ್ಷ್ಮೀಯನ್ನು ಪೂಜಿಸುವ ಹಬ್ಬವಾಗಿದೆ.
ಈ ದೀಪಾವಳಿಯು ಸ್ನೇಹ ಪ್ರೀತಿ ವೃದ್ದಿಸಿ ಬಾಂದವ್ಯಗಳನ್ನು ಗಟ್ಟಿಗೊಳಿಸಿ ಮನದ ಕತ್ತಲೆಯನ್ನು ಅಳಿಸಿ ಪ್ರೀತಿಯ ಜ್ಯೋತಿಯನ್ನು ಬೆಳಗಿಸುವಂತಾಗಲಿ.
-ಡಾ.ನಿರ್ಮಲಾ ಬಟ್ಟಲ
ಬೆಳಗಾವಿ