ನಾವು- ನಮ್ಮವರು
-ವಿಜಯಕುಮಾರ ಕಮ್ಮಾರ, ತುಮಕೂರು
ಒಂದು ದೇಶಕ್ಕೆ ಖನಿಜ, ಅರಣ್ಯದಂತಹ ನೈಸರ್ಗಿಕ ಸಂಪನ್ಮೂಲಗಳಷ್ಟೇ ಸಂಪತ್ತಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಕೂಡ ಈ ದೇಶದ ಸಂಪತ್ತೇ. ಯಾವುದೇ ವೃತ್ತಿಯಲ್ಲಿದ್ದರೂ ಅವರಿಗೆ ಅವರದ್ದೇ ಆದ ಪ್ರತಿಭೆ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ, ಯಾವುದೇ ವೃತ್ತಿಯಲ್ಲಿ ಹಣದಿಂದ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪ್ರತಿಭೆ ಇದ್ದವರು ಮಾತ್ರ ಯಶಸ್ಸು ಗಳಿಸುತ್ತಾರೆ. ಸಮಾಜ ಅಂತವರನ್ನು ಗುರುತಿಸುವ ಕೆಲಸವನ್ನು ಮಾಡಬೇಕು.
ಮೊದಲು ನಮ್ಮಲ್ಲಿ ಪೋಲಿಸ್ ಅಂತ ಯಾರೂ ಇರಲಿಲ್ಲ. ಆದರೆ ತೋಟಿ-ತಳವಾರರು, ಅಮಲ್ದಾರರು, ಕಟ್ಟುಬಿಡಿ, ನೀರಗಂಟಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರಿಯೋ ರೂಢಿಯಿತ್ತು. ಮೈಸೂರು ಸಂಸ್ಥಾನದಲ್ಲಿ ಮೊದಲ ಸಲ ಪೋಲೀಸ್ ಅನ್ನೋ ಹುದ್ದೆ ಹುಟ್ಟಕೊಂಡಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ.
ತಾಲೂಕ ಮಟ್ಟದಲ್ಲಿ ಅಮಲ್ದಾರರೇ ಪೋಲೀಸ್ ಮುಖ್ಯಸ್ಥರಾಗಿರುತ್ತಿದ್ದರು. 1817 ರ ಹೊತ್ತಿಗೆ ಪೋಲೀಸ್ ಜಾವಾಬ್ದಾರಿ ಊರ ಪಟೇಲರಿಗೆ, ಶಾನುಭೋಗರಿಗೆ ಬಂತು.
ಏಕೀಕರಣಕ್ಕೆ ಮುಂಚೆ ಕರ್ನಾಟಕ ಮೈಸೂರು, ಬಾಂಬೆ, ಹೈದರಾಬಾದ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಅಂತ ನಾಲ್ಕು ತರಹದ ಪೋಲೀಸ್ ವ್ಯವಸ್ಥೆ ಇತ್ತು.
1853 ರರಲ್ಲಿ ಬ್ರೀಟೀಷರು ಪೋಲೀಸ್ ಕಾಯ್ದೆ ತಂದರು. ಆಗ ಲಾರ್ಡ್ ಕಬ್ಬನ್ ಪೋಲೀಸ್ ಕಮೀಶನರ್ ಆದರು. ಪೋಲೀಸ್ ಕೆಲಸಕ್ಕೆ ಸೇರೋರಿಗೆ ತರಬೇತಿ ಅಂತ ಶುರುವಾಗಿದ್ದು 1892 ರಲ್ಲಿ. ಬೆಂಗಳೂರಲ್ಲಿ ಮೊದಲ ಟ್ರಾಫಿಕ್ ಸ್ಟೇಶನ್ ಗಳು ಅಂದರೆ ಉಪ್ಪಾರಪೇಟೆ, ಹಲಸೂರ ಗೇಟ್ ಮತ್ತು ಕಲಾಸಿಪಾಳ್ಯ. 1956 ರರಲ್ಲಿ ಕರ್ನಾಟಕ ರಾಜ್ಯ ರಚನೆಯಾದಾಗ ಪೋಲೀಸ್ ವ್ಯವಸ್ಥೆ ಒಂದೇ ಸೂರಿನಡಿ ಬಂದು ಒಂದೇ ಥರದ ಯೂನಿಫಾರ್ಮ ಬಂದಿತು. 1963 ರರಲ್ಲಿ ಒಂದೇ ಥರದ ಕಾನೂನು ಸುವ್ಯವಸ್ಥೆಗಾಗಿ ಕರ್ನಾಟಕ ಪೋಲೀಸ್ ಕಾಯ್ದೆ ಮಾಡಿದರು. 1965 ರಲ್ಲಿ ಅದು ಜಾರಿಗೆ ಬಂತು. ಈಗೀನ ಪೋಲೀಸ್ ವ್ಯವಸ್ಥೆಯ ರೂವಾರಿ 1972 ರಲ್ಲಿ ಮುಖ್ಯಮಂತ್ರಿಗಳೂ ಮತ್ತು ಗೃಹ ಸಚಿವರೂ ಆಗಿದ್ದಂಥ ಶ್ರೀಮಾನ್ ದೇವರಾಜು ಅರಸರವರು.
ಈಗ ಕರ್ನಾಟಕದಲ್ಲಿ 80,000+ ಸಿಬ್ಬಂದಿ ಹಾಗೂ 800+ ಪೋಲೀಸ್ ಸ್ಟೇಶನ್ನುಗಳಿವೆ.
ಪೊಲೀಸ್ ಅಂದ್ರೆ ಲಾಠಿ, ಐಪಿಸಿ ಅಷ್ಟೇ ಅಲ್ಲ. ಸದಾ ಪೊಲೀಸರೆಂದರೆ ಭಯ ಪಡುವ ಸಾರ್ವಜನಿಕರ ಮಧ್ಯೆ ಪೊಲೀಸರಲ್ಲಿಯೂ ಕೂಡ ಕಲೆ, ಸಂಗೀತ, ಸಾಹಿತ್ಯದಲ್ಲಿ ಸಾಧನೆ ಮಾಡಿರುವ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ASI ಮೈಸೂರಿನ ಕೂಡ್ಲಾಪುರ ಮಹದೇವ ನಾಯಕ, ಪೋಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ, ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ. ಅಜಯಕುಮಾರ ಸಿಂಗ್ ಮುಂತಾದ ಪೋಲೀಸ್ ಅಧಿಕಾರಿಗಳನ್ನು ಇಲ್ಲಿ ಹೆಸರಿಸಬಹುದು.
ಇಂತಹ ಅನುಪಮ ಸಾಹಿತ್ಯ ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವವರಲ್ಲಿ ಕಲ್ಯಾಣ ಕರ್ನಾಟಕದ ಕುಮಾರಿ ರೇಣುಕಾ ಹೆಳವರ ಕೂಡಾ ಒಬ್ಬರು. ಅತ್ಯಂತ ಕಠಿಣ ವೃತಿಯ ಸವಾಲುಗಳು ಮತ್ತು ಬಿಡುವಿಲ್ಲದ ವೃತಿ ನಿರ್ವಹಣೆಯ ಮಧ್ಯೆಯೂ ಸಮಾಜ ಸೇವೆ ಮತ್ತು ಸಾಹಿತ್ಯದಲ್ಲಿ ಕೃಷಿ ಮಾಡಿರುವ ಇವರ ಸಾಧನೆ ಎಲ್ಲ ಮಹಿಳೆಯರಿಗೆ ಸ್ಪೂರ್ತಿದಾಯಕ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪುಟ್ಟ ಗ್ರಾಮ ದೇಗಲ್ಮಡಿಯಲ್ಲಿ 10.10.1982 ರಲ್ಲಿ ಜನಿಸಿದ ಕುಮಾರಿ ರೇಣುಕಾ ಹೆಳವರ ಅವರ ತಂದೆ ಜಗನ್ನಾಥ ಮತ್ತು ತಾಯಿ ನೀಲಮ್ಮ. ಇವರಿಗೆ ಒಬ್ಬ ಸಹೋದರ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಾದ ದೇಗಲ್ಮಡಿಯಲ್ಲಿ ಪೂರೈಸಿದ್ದಾರೆ. ಕಲಬುರ್ಗಿಯಲ್ಲಿ ಪದವಿ ಶಿಕ್ಷಣವನ್ನು ಪಡೆದ ಕುಮಾರಿ ರೇಣುಕಾ ಹೆಳವರ ಅವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ M.A. ಪದವಿಯನ್ನು ಪೂರೈಸಿದ್ದಾರೆ. ಇವರು ಪ್ರಸ್ತುತ ಕಲಬುರ್ಗಿಯಲ್ಲಿ ಪೋಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿತ್ತಿದ್ದಾರೆ.
“ರೇಣು ಕತ್ತಲೆಯಲ್ಲಿ ಕರಗಿದವರೇ ಹೆಚ್ಚು ಬಣ್ಣಗಳ ಹೊಸ್ತಿಲಲ್ಲಿ ನಿಲ್ಲುವುದು ಕಲಿಯಬೇಕು ಸಾಥಿ” ಇಂಥ ಅದ್ಭುತ ಶಬ್ದಗಳಿರುವ ಸಾಲುಗಳನ್ನು ತಮ್ಮ ಕವನಗಳಲ್ಲಿ ಬಳಸುವ ಸಹೋದರಿ ಕುಮಾರಿ ರೇಣುಕಾ ಹೆಳವರ ಅವರ ಕವನಗಳು ಎಂಥ ಸಾಹಿತ್ಯಪ್ರಿಯರನ್ನು ಚಕಿತಗೊಳಿಸುತ್ತವೆ. ಕಥೆ, ಕವನಗಳ ಸಾಹಿತ್ಯ ರಚಿಸುವ ಕುಮಾರಿ ರೇಣುಕಾ ಹೆಳವರ ಅವರು ದೊಡ್ಡಬಳ್ಳಾಪುರದಲ್ಲಿ 2017 ರಲ್ಲಿ ನಡೆದ ದ್ವಿತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಟ್ಟಕ್ಕೆ ಬೆಳೆದಿ ನಿಂತಿದ್ದಾರೆಂದರೆ ಮಹಿಳಾ ಸಾಹಿತ್ಯ ಕ್ಷೇತ್ರಕ್ಕೆ ಹೆಮ್ಮೆ. ಗುಲಬರ್ಗಾದ ಕನ್ನಡನಾಡು ಪ್ರಕಾಶನದಿಂದ ಹೊರಬಂದ ಇವರ ಕವನ ಸಂಕಲನ “ಬೆಳಕ ಮರೆಯ ಬೆಂಕಿ” ಅದ್ಭುತ ಮತ್ತು ಮಹಿಳೆಯರ ಸಂಘರ್ಷಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವೀ ಪುಸ್ತಕ. ಈ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಗೌರವಧನ ಪ್ರಾಪ್ತಿಯಾಗಿದೆ.
ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆಯ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಕ್ರಾಂತಿ ಪ್ರಶಸ್ತಿ ಇವರ ಮುಡಿಯೇರಿವೆ.
ಇನ್ನು ಇವರ ಸಾಮಾಜಿಕ ಸೇವೆ ಅನುಪಮ ಮತ್ತು ಅದ್ವಿತೀಯವಾದದ್ದು.
ಗುಡ್ಡಗಾಡು ಮತ್ತು ಬುಡಕಟ್ಟು ಜನಾಂಗದ ಮಹಿಳೆಯರಲ್ಲಿರುವ ಮುಟ್ಟಿನ ಸಮಸ್ಯೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದರ ಬಗ್ಗೆ ಇರುವ ಅಜ್ಞಾನವನ್ನು ತೊಡೆದು ಹಾಕಲು ಪಣ ತೊಟ್ಟಂತೆ ಕಾಣುತ್ತದೆ. ಪ್ರತೀ ತಿಂಗಳು ಈ ಕೆಲಸಕ್ಕಾಗಿ ಸಮಯವನ್ನು ಮೀಸಲಿರಿಸಿದಾರೆಂಬುದು ಇವರ ಸಾಮಾಜಿಕ ಕಳಕಳಿಗೆ ಸಾಕ್ಷಿ. ಅಲೆಮಾರಿ ಜನರ ಅತಿ ದೊಡ್ಡ ಪಿಡುಗು ಅಂದರೆ ವಿದ್ಯೆಯಿಲ್ಲದಿರುವುದು. ಈ ನಿಟ್ಟಿನಲ್ಲಿ 122 ಕ್ಕೂ ಹೆಚ್ಚು ಮಕ್ಕಳಿಗೆ ಅರಿವು ಮೂಡಿಸಿ ಅವರನ್ನು ಸ್ವತಃ ಶಾಲೆಗೆ ದಾಖಲಿಸಿ ಅವರಿಗೆ ಬೇಕಾದ ಬ್ಯಾಗು, ಪುಸ್ತಕ, ಪೆನ್ನು ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಕೋವಿಡ್ ಸಮಯದಲ್ಲಿ ಇಂಥ ನೂರಾರು ಕುಟುಂಬಗಳಿಗೆ ಗುಲಬರ್ಗಾ ವಿಶ್ವ ವಿದ್ಯಾಲಯದ NSS ವತಿಯಿಂದ ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಶರಣರ ವಚನ ಸಾಹಿತ್ಯಕ್ಕೆ ಕೊಡುಗೆ ನೀಡುವ ಹತ್ತು ಹಲವಾರು ಕನಸುಗಳು, ಯೋಜನೆಗಳು, ಪೋಲೀಸ್ ಕರ್ತವ್ಯದ ಜೊತೆಗೆ ಸಂಘ ಸಂಸ್ಥೆಗಳ ಒಡನಾಟ, ಮಹಿಳೆಯರ ಉಜ್ವಲ ಭವಿಷ್ಯಕ್ಕೆ ಹೆಗಲು ಕೊಟ್ಟು ಮಾಡುವ ಕೆಲಸಗಳು ಸಾರ್ಥಕತೆಯನ್ನು ಮೂಡಿಸುತ್ತವೆ. ಇಂಥಾ ಕವಿ ಹೃದಯದ, ಸೇವಾ ತತ್ಪರತೆ ಇರುವ ಕುಮಾರಿ ರೇಣುಕಾ ಹೆಳವರ ಅವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರಿ. ಇವರ ಸಾಹಿತ್ಯ ಸೇವೆ ಮತ್ತು ಸಮಾಜೆ ಸೇವೆ ಹೀಗೆಯೇ ಮುಂದುವರಿಯಲಿ.