ಹ್ಯಾಪಿ ನ್ಯೂ ಈಯರೆಂದರೆ ಮಿರುಗದ ಮದ್ಯರಾತ್ರಿಯ ಹೊಳೆಯಂತೆ….

ಹ್ಯಾಪಿ ನ್ಯೂ ಈಯರೆಂದರೆ ಮಿರುಗದ ಮದ್ಯರಾತ್ರಿಯ ಹೊಳೆಯಂತೆ….

ಅಷ್ಟಕ್ಕೂ ಅಷ್ಟು ದೂರ ಇರುವಾಗಲೇ ಹೊಸವರ್ಷದ ಕುರಿತು ಮತ್ತದೇ ಕುರುಕಲು ಕನವರಿಕೆಗಳು. ಬಂಡಲ್ಲುಗಟ್ಟಲೇ ಹಳವಂಡಗಳು. ಮಾಧ್ಯಮಗಳ ಸುದ್ದಿಮನೆಯ ಬೇತಾಳದ ಬಹುರೂಪಿ ಕತೆಗಳು. ಅದೂ ಕೊರೊನಾ ಎಂಬ ನೈಟ್ ಕರ್ಫ್ಯೂವಿನ ದುರಿತ ಕಾಲದಲ್ಲಿ. ಒಮಿಕ್ರಾನ್ ರೂಪಾಂತರಿ ವೈರಸ್ಸಿನ ಅವತಾರದ ನಡುವೆ, ಮತಾಂತರ ನಿಷೇಧದ ಬಸವಧರ್ಮ ವಿರೋಧಿ ವಿಷಮಗಾಳಿಯ ಗದ್ದಲದಲ್ಲಿ ಇನ್ನೆಲ್ಲಿಯ ಹೊಸ ವರ್ಷಾಚರಣೆ.? ಹೀಗೆ ಆಚರಣೆಯ ಆಲೋಚನೆಗಳು ಗುದುಮುರಗಿ ಹಾಕುತ್ತಿರುವಾಗ ವಾಟಾಳ್ ನಾಗರಾಜ್ ನೀಡಿರುವ “ಕರ್ನಾಟಕ ಬಂದ್ ಬಂದ್ ಬಂದ್” ಎಂಬ ಠುಸ್ಸೆಂದ ಕಂಠಘೋಷದ ಕರೆ. ಟೀವಿಗಳಲ್ಲಿ ತರಹೇವಾರಿ ಚರ್ಚೆಗಳು. ಇದೆಲ್ಲ ಕಲಸು ಮೇಲೋಗರದ ನಡುವೆಯೂ ಅನೇಕರಿಗೆ ಹ್ಯಾಪಿ ನ್ಯೂ ಈಯರ್‌ ಆಚರಿಸುವ ಉಮೇದು ಕುಸಿಯುವುದಿಲ್ಲ.

ಹೊಸವರ್ಷಕ್ಕೆ ವಾರವೊಪ್ಪತ್ತು ಹಿಂದೆಯಷ್ಟೇ ಬಂದು ಹೋಗುವ ಕ್ರಿಸ್ಮಸ್ ಹಬ್ಬದ ಆಚರಣೆ ಮತ್ತು ಅದಕ್ಕಾಗಿ ಸಿಗುವ ರಜೆಗಳ ಕುರಿತು ಸುಳಿದು ಸೂಸುವ ಸಮಾಲೋಚನೆಗಳು. ಅದೇನೇ ಆಚರಣೆಗಳಿದ್ದರೂ ಕಡ್ಡಾಯವಾಗಿ ಕೊವಿಡ್ ಹತ್ತೊಂಬತ್ತರ ನಿಯಮಗಳನ್ನು ಪಾಲಿಸುವುದು ಅಷ್ಟೇ ಕಡ್ಡಾಯ. ಇವೆಲ್ಲ ಕಡ್ಡಾಯದ ಕಾನೂನುಗಳು ಆಮಂತ್ರಣ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಕ್ಷರಗಳ ಅನುಷ್ಠಾನಗಳಷ್ಟೇ. ಸುಂದರ ಸುಳ್ಳುಗಳಷ್ಟೇ ಚೆಂದದಂತೆ.

ಅದೆಲ್ಲ ಒತ್ತಟ್ಟಿಗಿರಲಿ. ಹೊಸ ವರ್ಷದ ಸಂಭ್ರಮಾಚರಣೆ ಬಹುಪಾಲು ಜನರ ಪರಿಕಲ್ಪನೆಯೇ ಅಲ್ಲ.
ನನ್ನಹಾಗೆ ಸಹಸ್ರ ಸಹಸ್ರ ಮಂದಿಗೆ ಹೊಸವರ್ಷ ಮತ್ತು ಆಚರಣೆಯ ಹೊಸ ಕಲ್ಪನೆ ಕೂಡಾ ಖಂಡಿತಾ ಇಲ್ಲ. ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಬೆಳೆದ ನನ್ನಂತಹ ಮಕರನಿಗೆ ಶಹರ ಪ್ರೇರಿತ ಹ್ಯಾಪಿ ನ್ಯೂ ಈಯರ್ ಹುರುಪು ಅರ್ಥವಾಗದು. ನಮ್ಮೂರ ಮಡಿವಾಳಪ್ಪನ ಜಾತ್ರೆಗೆ ಅಪ್ಪ ತರುತ್ತಿದ್ದ ಯಡ್ರಾಮಿ ಸಂತೆಯ ಹೊಸ ಅಂಗಿ ಚಣ್ಣ ಉಟ್ಟಾಗ ಸಿಗುವ ಹೊಸತನದ ಸಡಗರ ನನಗೆ ಇದುವರೆಗೆ ಹೊಸ ವರ್ಷದ ಆಚರಣೆಗಳಲ್ಲಿ ಹುಡುಕಿದರೂ ಸಿಕ್ಕಿಲ್ಲ. ಜಾತ್ರೆಯ ಕಜ್ಜಭಜ್ಜಿ, ಉಗಾದಿಯ ಬೇವು, ಬೆಲ್ಲದ ಹೋಳಿಗೆ, ದೀವಳಿಗೆಯ ಬೆಳಕಿನ ಸಂಭ್ರಮ, ಸಂತಸ, ಉಲ್ಲಾಸ, ಹುರುಪು, ಹುಮ್ಮಸು ಹೊಸ ವರ್ಷಗಳಿಗೆ ಖರೇವಂದ್ರ ಇಲ್ಲವೇ ಇಲ್ಲ.

ಹಾಗಾದರೆ ಹೊಸವರ್ಷದ ಆಕರ್ಷಣೆ, ಪುಳಕ ಹುಟ್ಟಿಸುವ ಖುಷಿ ಎಂಬುದು ಯಾವುದೂ ಇಲ್ಲವೇ.? ಇಲ್ಲವೆಂದು ಹೇಳಲಾಗದು. ಹಳತು ಹೊಸತು ಎರಡರ ನಡುವಿನ ಫರಕಿನ ಗೆರೆಗಳು. ಕ್ಷೀಣತೆಯ ರೇಖಾಂಶದಲ್ಲಿ ನಿಂತು ಹೊಸ ಬೆಳಕಿನ ಹುಡುಕಾಟ ಅವುಗಳಿಗೆ ಅಷ್ಟು ಸುಲಭದ್ದಲ್ಲ. ಹಾಗಿದ್ದರೆ ಹೊಸತು ಎಂದರೆ ಅಂತರಂಗದ ಜೀವಪ್ರಜ್ಞೆಯ ಹುಡುಕಾಟವೇ.? ಇಲ್ಲವೇ ದೇಹಭಾದೆ ತಣಿಸುವ ಬಹಿರಂಗದ ಮೋಜು ಮಸ್ತಿಯೇ.? ಇವೆರಡೂ ಅಲ್ಲದ ಮೂರನೇಯದು ಇನ್ಯಾವುದಾದರೂ ಇದೆಯೇ.?

ಹೀಗೆ ತೀವ್ರ ಜಿಜ್ಞಾಸೆಯ ತಿಳಿಗೊಳದಲ್ಲಿ ತೇಲುತ್ತಿರುವಾಗಲೇ ಎಂದಿನಂತೆ ಇಂದು ಮತ್ತೆ ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ ಬಂದೇ ಬಿಟ್ಟಿದೆ. ಬಹಳ ಮಂದಿ ಪಾಲಿಗದು *ಮದ್ಯರಾತ್ರಿಯೇ* ಆಗಿರ್ತದೆ. ಗಡಿಯಾರದ ಮುಳ್ಳುಗಳನ್ನು ಕಾಯುತ್ತಲೇ ಕುಂತು ನಟ್ಟ ನಡುರಾತ್ರಿ ಹನ್ನೆರಡು ಗಂಟೆ ಬಾರಿಸುತ್ತಿದ್ದಂತೆ *ಮದ್ಯರಾತ್ರಿಗರ* *ಹುಳಿಮದ್ಯದ* ಹುಳೀ ಕಿರುಚಾಟಗಳದ್ದೇ ಗೌಜು ಗದ್ದಲ !! ಬಹುಪಾಲು ನಗರವಾಸಿಗಳ ತುಂಬೆಲ್ಲ ಅಬ್ಬರದ ಅರಚಾಟಗಳು.

ಈ ರೋಗ ಈಗೀಗ ಹಳ್ಳಿಗಳ ಸಮುದಾಯಕ್ಕೂ ಹಬ್ಬಿದೆ. ಇದು ಹೊಸವರ್ಷದ ಸ್ವಾಗತವಂತೆ.! ಟೀವಿಗಳ ತುಂಬೆಲ್ಲ ಇವುಗಳದ್ದೇ ಹುಚ್ಚುಚ್ಚಾರದ ಪ್ರಚಾರ. ಲಿಂಗಭೇದ ಮರೆತ ಕುಡಿತ, ಕುಣಿತಗಳಿಂದಾಗಿ ಅವಗಡಗಳು ಘಟಿಸಬಾರದೆಂದು ಪೊಲೀಸರ ಗಸ್ತು ಸಂಚಾರ!!

ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವರ್ಷಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ. ತರಹೇವಾರಿ ಥ್ರಿಲ್ಲಿಂಗ್ ಭ್ರಮೆಯ ಡ್ರಿಲ್ಲಿಂಗ್ ಪೋಷ್ಟಗಳು. ಹೊಸ ಡೈರಿ, ಕ್ಯಾಲೆಂಡರ್ ಗಳು, ಈಗೀಗ ಹೊಸ ಗೆಳೆತನಗಳು. ಇವು ಯಾವೂ ನನಗೆ ಹೊಸ ವರ್ಷದ ಖುಷಿಯನ್ನು ಇದುವರೆಗೆ ನೀಡಿಲ್ಲ. ನನ್ನ ಹಾಗೆ ಅನೇಕರಿಗೂ ನೀಡಿಲ್ಲದಿರಬಹುದು.?

ಕುತೂಹಲಕ್ಕೆಂದು ಆಯ್ದ ಹದಿನೈದು ಮಂದಿ ಯುವಕ ಯುವತಿಯರಿಗೆ ನಿಮ್ಮ ನಜರಿನಲ್ಲಿ ಹೊಸ ವರ್ಷವೆಂದರೇನು.? ಎಂದು ಕೇಳಿದೆ. ಯುವತಿಯರೆಲ್ಲ ಥಟ್ಟಂತ ಉತ್ತರಿಸಿದರು. ಆದರೆ ಇಬ್ಬರು ಯುವಕರು ಮಾತ್ರ ತುಸು ತಡವಾಗಿಯೇ ಉತ್ತರಿಸಿದ್ದೆಲ್ಲಾ ಇಲ್ಲಿದೆ.

ಹೊಸ ವರ್ಷವೆಂದರೆ Very simple. ಹೊಸ ಕ್ಯಾಲೆಂಡರಿನ ಮೊದಲ ಹಾಳೆ. ಹೀಗೆ ತಾಬಡತೋಬಡ ಉತ್ತರಿಸಿದ್ದು., ಹೊಸದಾಗಿ ಕವಿತೆ ಕಟ್ಟುತ್ತಿರುವ ಮನೋವಿಜ್ಞಾನ ಪದವಿ ಓದಿದಾಕೆ. ಬೇಕಾದ್ರ ಊರು ಬರೀರಿ, ತನ್ನ ಹೆಸರು ಉಲ್ಲೇಖಿಸಬಾರದೆಂದು ತಾಕೀತು ಮಾಡಿದ್ದು ಕಲಬುರ್ಗಿಯ ಹೊಸ ಗೆಳತಿ. ಅಫಝಲಪುರದ ಗೌಂಡಿ ಕೆಲಸ ಮಾಡುವ ಗಂಗಯ್ಯನದು ವಿಚಿತ್ರ ಉತ್ತರ. ಹಾಂಗಂದ್ರೇನು ಅಂತ ನನಗೇ ಮರುಪ್ರಶ್ನೆ ಹಾಕಿದ. ಶಾಂತಿ ಕೆ. ಅಪ್ಪಣ್ಣ ಎಂಬ ನನ್ನ ಮೆಚ್ಚುಗೆಯ ಕತೆಗಾರ್ತಿಯದು “ಪ್ರತಿ ಕ್ಷಣವೂ ಹೊಸದೆಂದು ಭಾವಿಸುವ ತನಗೆ ಇದು ಯಾವ ರೀತಿಯಲ್ಲೂ ವಿಶೇಷವಲ್ಲ”.

ಭಾಗಮಂಡಲದ ಚೆರಂಬಣೆಯ ಉಷಾವಿನೂಗೆ ಹೊಸ ವರ್ಷವೆಂದರೆ ನೋವುಗಳನ್ನು ಮರೆಯುವುದು ಎಂದರ್ಥ. ಬಂಟ್ವಾಳದ ಮಾರ್ನಬೈಲಿನ ಸುಮನ ಕ್ರಾಸ್ತಾಗೆ ಪ್ರತಿ ದಿನವೂ ಹೊಸತು ಹೊಸತಾಗ ಬೇಕೆನ್ನುವುದು. ಧಾರವಾಡದ ಚಂದ್ರಿಕಾ ದಮ್ಮಳ್ಳಿ ಕರ್ನಾಟಕ ರಾಜ್ಯ ಮಹಿಳಾ ಆರೋಗ್ಯ ಸಹಾಯಕಿಯರ ಸಂಘದ ಅಧ್ಯಕ್ಷೆ. ಇವರ ದೃಷ್ಟಿಯಲ್ಲಿ ತಪ್ಪುಗಳನ್ನು ತಿದ್ದಿಕೊಂಡು ತಾಜಾತನಕ್ಕೆ ಕಾಲಿಡುವ ಸಂಕ್ರಮಣ ಕಾಲ.

ಕರ್ನಾಟಕ ಸಂಧ್ಯಾಕಾಲದ ರಿಪೋರ್ಟರ್ ಅಸ್ಮಾ ಇನಾಮದಾರ ಆಲೋಚನೆ ತುಂಬಾ ಸೂಕ್ಷ್ಮ ಮತ್ತು ಸಂವೇದನಾಶೀಲ. ರಾತ್ರಿ ಮಲಗಿದ ನಿದ್ರೆಯಿಂದ ಬೆಳಗ್ಗೆ ಎಚ್ಚರಗೊಂಡು ಕಣ್ಬಿಟ್ಟು ಉಸಿರಾಡುವ ಪ್ರತಿಯೊಂದು ಬೆಳಗೂ ಪ್ರತಿನಿತ್ಯದ ತನ್ನ ಬದುಕಿನ ಹರುಷದ ಹೊಸ ವರುಷ. ಬೆಂಗಳೂರಿನ ಕುಲಕರಣಿ ಎಂಬ ತರುಣಗೆ ಹೊಸ ವರ್ಷದ ಆರಂಭಿಕ ಕ್ಷಣಗಳೆಂದರೆ ಮಿಂಚಿದ ಮಿರುಗ(ಮೃಗಶಿರ)ವನ್ನೇ ಮರೆಸಿ ಬಿಡುವ ಮಹಾಮಿರುಗದ ಮದ್ಯರಾತ್ರಿಯ ಹರಿಯುವ ಹೊಳೆಯಂತೆ.

ಇನ್ನು ಕೆಲವರಂತೂ ” ತಾವು ಭಾರತೀಯರು ಅದರಲ್ಲೂ ಹಿಂದೂಗಳಿಗೆ ಯುಗಾದಿಯೇ ಹೊಸವರ್ಷ” ಮುಂತಾಗಿ ಸಂಸ್ಕಾರ ವರಸೆಯ ಕಮೆಂಟ್ಸ್ ಮಾಡುವುದು. ಹೋಗಲಿ ಉಗಾದಿಗಾದರೂ ಅಂಥದೊಂದು‌ ತಾಜಾ ತಾಜಾ ಜೀವಕಾಳಿನ ಖುಷಿ ಉಕ್ಕಿ ಹರಿದೀತೆಂದರೆ, ಹುಂ, ಹೂಂ ಅಲ್ಲೂ ಇಲ್ಲ. ನಮ್ಮ ಕೂಡುಕುಟುಂಬಗಳ ಜವಾರಿ ಪ್ರೀತಿಯ ಸಹಜ ಸಂತೃಪ್ತ ಬದುಕು ಹೈಜಾಕ್ ಆಗಿದೆ.

ಹಾಗಾದರೆ ಹ್ಯಾಪಿ ನ್ಯೂ ಈಯರ್ ಅಂದರೇನು? ಇಲ್ಲದಿರುವ, ಸಹಜವಾಗಿ ಉಂಟಾಗದಿರುವ ಸಂತಸ ಸಂಭ್ರಮಗಳ ಭ್ರಮೆಯ ಸಮೂಹ ಸನ್ನಿ ಸೃಷ್ಟಿಸುವುದೇ ಭಾಗಶಃ ನಿಜವಿರಬಹುದು. ಮತ್ತೆ ಮತ್ತೆ ಹೊಸ ವರ್ಷಾಚರಣೆ ಎಂಬ ಮಾಯಾವಿಯ ಹಿಂದೆ ಅಮಲಿನ ಲೋಕದ ಹುನ್ನಾರವೇ ಡೊಕ್ಕು ಹೊಡೆದಿದೆಯೆಂಬುದನ್ನು ನಿರಾಕರಿಸಲಾಗದು.

ಅದೊಂದು ಬಿಸಿನೆಸ್ ಮ್ಯಾನೇಜಮೆಂಟ್ ಜಗತ್ತಿನ ಹಿಡನ್ ಅಜೆಂಡಾ ಮತ್ತು ಲೆಕ್ಕಾಚಾರವೇ ಇದ್ದೀತು. ಗೋಳೀಕರಣ ಲೋಕದ ಬಂಡವಾಳಿಗರ ವ್ಯಾಪಾರಿ ಹೇತುವಲ್ಲದೇ ಇನ್ನೇನೂ ಇಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಹಳೆಯ ವ್ಯಸನದ ಹೊಸ ಅಧ್ಯಾಯ. ಇದೆಲ್ಲದರ ಹಿಂದೆ ಕಾರ್ಪೊರೇಟ್ ಕಲ್ಚರ್ ಹುನ್ನಾರಗಳಿವೆಯೆಂಬುದು ಅಲ್ಲಗಳೆಯಲಾಗದು. ನೀವೇನಂತೀರಿ..?

ಮಲ್ಲಿಕಾರ್ಜುನ ಕಡಕೋಳ
ಮೊ : 93410 10712

Don`t copy text!