ಮಹಾಶರಣ ಅಲ್ಲಮ ಮತ್ತು ಶರಣೆ ಮುಕ್ತಾಯಕ್ಕ

ಮಹಾಶರಣ ಅಲ್ಲಮ ಮತ್ತು ಶರಣೆ ಮುಕ್ತಾಯಕ್ಕ

(ಇವರೀರ್ವರ ನಡುವಿನ ಒಂದು ಅಪೂರ್ವ ಸಂವಾದ)
ಹನ್ನೆರಡನೇ ಶತಮನದ ಶರಣರು

ವಚನಕಾರರಲ್ಲಿ ಅಲ್ಲಮ ತುಂಬ ಮುಖ್ಯವಾದ ವ್ಯಕ್ತಿ. ಈತನಿಗೆ
ದೊರೆತಿರುವಷ್ಟು ಪ್ರಾಮುಖ್ಯತೆ ಶರಣ ಸಮುದಾಯದಲ್ಲಿ ಬೇರೆ ಯಾರಿಗೂ ದೊರೆತಿಲ್ಲ. ಅಲ್ಲಮನ ಬಗ್ಗೆ ಮೊದಲು
ಕೃತಿ ರಚಿಸಿದವರು ಹರಿಹರ ೧೨೦೦ರಲ್ಲಿ. ಆತ ಸಹಜವಾಗಿ ಚಾರಿತ್ರಿಕವಾಗಿ ಅಲ್ಲಮನಿಗೆ ಬಹಳ ಸಮೀಪನಾದ ವ್ಯಕ್ತಿ!
ಅಲ್ಲಮನ ಗುರು ಅನಿಮಿಷ. ಅಲ್ಲಮನ ಗುರುದರ್ಶನ ಮತ್ತು ಲಿಂಗಪ್ರಾಪ್ತಿ ಅತ್ಯಪೂರ್ವವಾದುದು. ತುಂಬ ಮುಖ್ಯವೆಂದರೆ ಗುರುವಾದ ಅನಿಮಿಷ ಮೌನಿ. ಶಿಷ್ಯನಾದ ಅಲ್ಲಮ ತನ್ನ ಅಂತರಂಗದ ಭಾವಗಳಾದ ಆ ಗುರುವಿನ
ಸ್ವರೂಪ, ವ್ಯಕ್ತಿತ್ವ, ತನ್ನ ಮತು ಅವರ ನಡುವಣ ಅಭಿನ್ನತೆ, ಲಿಂಗಸ್ವೀಕಾರಗಳನ್ನು ಕುರಿತಂತೆ ಹೇಳುತ್ತ,
ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡೆ’’ ಎಂದು ಹೇಳುತ್ತಾನೆ.
ಶರಣೆ ಮುಕ್ತಾಯಕ್ಕ ಅಜಗಣ್ಣನೆಂಬ ಗುಪ್ತ ಭಕ್ತನೊಬ್ಬನ ತಂಗಿ. ಅಜಗಣ್ಣ ಇಷ್ಟಲಿಂಗವನ್ನು ಯಾವಾಗಲೂ
ಬಾಯಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಜನ ಇವನನ್ನು ಮರುಳ ಎಂದು ಭಾವಿಸುತ್ತಿದ್ದರು. ಅಜಗಣ್ಣ ಮನೆಯನ್ನು
ಪ್ರವೇಶಿಸುವಾಗ ಅದರ ಬಾಗಿಲುವಾಡಕ್ಕೆ ಹಣೆ ಬಡಿದು ಸಾಯುತ್ತಾನೆ. ಮುಕ್ತಾಯಕ್ಕ ಅಣ್ಣನನ್ನು ತನ್ನ ಗುರು
ವನ್ನಾಗಿಯೂ ಸ್ವೀಕರಿಸಿದ್ದಳು. ಅಣ್ಣನ ಸಾವಿನಿಂದ ಅವಳು ನೊಂದು ವಿಯೋಗಾವಸ್ಥೆಯಿಂದ ಪ್ರಲಾಪಿಸುತ್ತಿದ್ದಾಳೆ.
ಕತ್ತಲೆ ಬೆಳಗ ಕಾಬ ಸಂದೇಹಿ ನಾನೊಬ್ಬಳು’’ ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತು. ಅಜಗಣ್ಣ ನಿನ್ನ
ವಿಯೋಗ… ಎಂದು ಒರಲುತ್ತಿದ್ದಳು ಆಕೆ. ಅದೇ ವೇಳೆಗೆ ದೇಶಾಂತರ ಮಾಡುತ್ತ ಬಂದ ಅಲ್ಲಮನ ಕಣ್ಣಿಗೆ
ಬೀಳುತ್ತಾಳೆ ಮುಕ್ತಾಯಿ.
ಅರಿವಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು. ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು;
ನಾನೆಂತು ಬದುಕುವೆನಣ್ಣ…’’ ಎಂದು ಪ್ರಲಾಪಿಸುತ್ತಾಳೆ.
ವಚನಾರ್ಥ: ಜಗತ್ತಿನ ಜನ ಜ್ಞಾನಕ್ಕಾಗಿ ಹಸಿದಿದ್ದು, ಅದನ್ನು ಪಡೆದಾಗಲೂ ಬಾಯಲ್ಲಿಟ್ಟುಕೊಂಡು ಅಗಿಯುತ್ತಲೇ
ಇದೆ. ಆದರೆ ಅದರ ಹಸಿವು ಇಂಗಲಿಲ್ಲ. ಶಾಂತಿ ನೆಮ್ಮದಿಗಳು ದೊರೆಯಲಿಲ್ಲ. ಅದನ್ನು ಪಡೆದ ಅಜಗಣ್ಣನನ್ನು
ತಾನು ಅರ್ಥೈಸಿಕೊಳ್ಳಲಿಲ್ಲವಲ್ಲ… ಎಂದು ಅಳುತ್ತಿರುತ್ತಾಳೆ.
ಆಗ ಅಲ್ಲಮ ಅವಳನ್ನು ಕುರಿತು ಬಹಳ ಸುಂದರವಾದ ಮಾತು ಆಡುತ್ತಾನೆ.
* “ಅಂಗೈಯೊಳಗೊಂದು ಆರಳ್ದ
ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ? ಒಂದೆಂಬೆನೆ? ಎರಡಾಗಿದೆ ಎರಡೆಂಬೆನೆ? ಒಂದಾಗಿದೆ; ಅರಿವಿನೊಳಗಣ ಮರಹಿದೇನು ಹೇಳಾ? ದುಃಖವಿಲ್ಲದ ಅಕ್ಕೆ, ಅಕ್ಕೆ ಇಲ್ಲದ ಅನುತಾಪ, ನಮ್ಮ
ಗುಹೇಶ್ವರ ಲಿಂಗದಲ್ಲಿ ತೋರುತ್ತಿದೆ; ನೀನಾರೆಂದು ಹೇಳಾ ಎಲೆ ಅವ್ವಾ!…’’*
ಅಂಗವು ಲಿಂಗದಿಂದ ಬೇರೆ ಎಂದು ಕಂಡು ಬಂದರೂ ವಾಸ್ತವವಾಗಿ ಅದು ಲಿಂಗವೇ ಆಗಿರುವಾಗ
ಅದಕ್ಕೆಲ್ಲಿಯ ದುಃಖ? ಹೂವಿನ ಬಳಿ ದುಂಬಿ ಬಂದಿದ್ದರೂ ಆ ಭೇದವರಿಯದೇ ನೀನೇಕೆ ಹಂಬಲಿಸುತ್ತಿರುವೆ?
ನೀನಾರು ಅವ್ವಾ – ಎನ್ನುತ್ತಾನೆ ಅಲ್ಲಮ. ಆಗ ಮುಕ್ತಾಯಕ್ಕ ಹೇಳುತ್ತಾಳೆ.
ಒಬ್ಬರಿಗೂ ಹುಟ್ಟದ ಅಯೋನಿಯಲ್ಲಿ ಬಂದು, ದುರ್ಬುದ್ಧಿಯಾದವಳನೇನೆಂಬೆನಣ್ಣಾ! ತಲೆಯಳಿದು ನೆಲೆಗೆಟ್ಟು ಬೆಳಗುವ
ಜೋತಿ ಎನ್ನ ಅಜಗಣ್ಣ ತಂದೆಯ ಬೆನ್ನ-ಬಳಿಯವಳಾವನಯ್ಯ’’ ಇದನ್ನು ಕೇಳಿದ ಅಲ್ಲಮ-
“ಕಾಣದುದ ಕಂಡೆ’ ಕೇಳದುದು ಕೇಳಿದೆ, ಮುಟ್ಟಬಾರದುದ ಮುಟ್ಟಿದೆ; ಅಸಾಧ್ಯವ ಸಾಧಿಸಿದೆ… ನಿಮ್ಮ ಶರಣ
ಅಜಗಣ್ಣಂಗೆ ಶರಣೆಂದು ಬದುಕಿದೆನು’’ ಎಂದು ಹೇಳಿ ಅಜಗಣ್ಣನನ್ನು ಸ್ತುತಿಸುತ್ತಾನೆ. ಇದಕ್ಕೆ ಮುಕ್ತಾಯಕ್ಕ
ಅಭಿಮಾನಗೊಂಡು “ಎನ್ನಂ ಅಜಗಣ್ಣ ತಂದೆಯನರಿದು ಶರಣೆಂಬಾತ ನೀನಾರು ಹೇಳಯ್ಯ’’ ಎಂದು ಪ್ರಶ್ನಿಸುತ್ತಾಳೆ
ಆದಿಶಕ್ತಿ ಮತ್ತು ಅನಾದಿ ಸ್ವಯಂಭುವಾದ ಶಿವನ ಪುತ್ರ ತಾನೆಂದೂ, ಲೈಕಿಕದಲ್ಲಿದ್ದೂ ನಿಸ್ಸಂಗತ್ವವನ್ನು
ಅಳವಡಿಸಿಕೊಂಡಿದ್ದೆನೆಂದು ಹೇಳುತ್ತಾನೆ ಅಲ್ಲಮ.
ಇದರಲ್ಲಿ ಅಲ್ಲಮನ ಶೂನ್ಯ ಮೂರ್ತಿತ್ವ ಒಡಮೂಡಿದೆ.
ಈ ಉತ್ತರ ಕೇಳಿ ಮುಕ್ತಾಯಕ್ಕ ಅಚ್ಚರಿಯಿಂದ “ಶಿವಶರಣರ ದರುಶನದ ಸುಖವನೇನೆಂದೆನಬಹುದು! ಮದವಳಿದು
ಮಹನನೊಡಗೂಡಿದ ಎನ್ನ ಅಜಗಣ್ಣ ನನ್ನಗಲಿದ ದುಃಖ, ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೇ’’-
ಎನ್ನುತ್ತಾಳೆ. ಆದರೆ ಮತ್ತೆ ಅಣ್ಣನ ನೆನಪಾಗಿ ಕೊರಳುಬ್ಬಿ “ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯ’’
ದುಃಖಿಸಿದಾಗ “ಕಂಡೆನೆಂಬುದು ಕಂಗೆ ಮರವೆ, ಕಾಣೆನೆಂಬುದು ಮನದ ಮರವೆ.. ಕಂಡೆ ಕಾಣೆ ಕೂಡಿದೆನಗಲಿದೆನೆಂಬ
ಭ್ರಾಂತಿಸೂತಕವ ತಿಳಿದು ನೋಡಾ’’-ಎಂದು ತಿಳಿಯ ಹೇಳುತ್ತಾನೆ. ಆದರೂ ಮುಕ್ತಾಯಿ ಅಜಗಣ್ಣನನ್ನು ನೆನೆದು
ಹೀಗೆ ಹೇಳುತ್ತಾಳೆ. “ನೀರಬೊಂಬೆಗೆ ನಿರಾಳ ಗೆಜ್ಜೆಯ ಕಟ್ಟಿ, ಬಯಲು ಬೊಂಬೆಯ ಕೈಯ್ಯಲ್ಲಿ ಕೊಟ್ಟು
ಮುದ್ದಾಡಿಸುತಿರ್ದೆನಯ್ಯಾ
ಕರ್ಪೂರದ ಪುತ್ತಳಿಗೆ ಅಗ್ನಿಯ ಸೀಂಹಾಸನವನಿಕ್ಕಿ, ಅಗ್ನಿಕರಗಿ ಕರ್ಪೂರ ಉಳಿದುದಕೆ ಬೆರಗಾದೆನಯ್ಯಾ ಎನ್ನ
ಅಜಗಣ್ಣನ ಯೋಗಕ್ಕೆ’’-
ಇದಕ್ಕೆ ಅಲ್ಲಮ -“ನಿನ್ನೊಳಗೆ ನಿನ್ನ ತಿಳಿದು ನೋಡಲು ಭಿನ್ನವುಂಟೇ?’’… ಎಂದಾಗ ಮುಕ್ತಾಯಕ್ಕ “ಸಾಧಕನಿಗೆ
ಗುರುವಿನ ಅಗತ್ಯವಿದೆ’’ ಎನ್ನುತ್ತಾಳೆ. ಆಗ ಅಲ್ಲಮ-“ನಿನಗೆ ನೀನೇ ಗುರು, ಗುರು-ಶಿಷ್ಯರೆಂಬ ದ್ವೆವತ್ವ ಭಾವವ ದಾಟಿ
ಮುನ್ನಡೆ’’ ಎನ್ನುವ ಪ್ರಭು – ಇಬ್ಬರ ನಡುವಣ ಮಾತಿನ ಚಕಮಕಿ ಜೋರಾಗಿದೆ. ಗುರು-ಶಿಷ್ಯರೆಂಬ ಭೇದವೇ
ಅಜ್ಞಾನ ಮೂಲವಾದದ್ದು- ಎಂದು ಅಲ್ಲಮ ನುಡಿದರೆ,
“ತನ್ನ ತಾನರಿಯದವಂಗೆ ಅರಿವೇ ಗುರು, ಅರಿವರತು ಮರದು ನಷ್ಟವಾದಲ್ಲಿ ದೃಷ್ಟನಷ್ಟವೇ ಗುರು, ಗುರು
ತಾನಾದರೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ’’ ಎಂದು ಮುಕ್ತಾಯಿ ಶ್ರೇಷ್ಠ ಉತ್ತರ ಕೊಡುತ್ತಾಳೆ.
ಅದ್ವೆತದ ಮಾತನ್ನು ಉದ್ದಕ್ಕೂ ಆಡುತ್ತಿರುವ ಅಲ್ಲಮ ಬರೀ ಮಾತಾಡುತ್ತಿರುವಂತೆ ಅವಳಿಗೆ ಭಾಸವಾಗುತ್ತದೆ. ಅವಳು ಮತ್ತೆ ಅಲ್ಲಮನನ್ನು ಕೆಣಕಿ ಅವನನ್ನು ಒರೆಗೆ ಹಚ್ಚುತ್ತಾಳೆ. “ಅದ್ವೆತದ ನೆಲೆಯೊಳಗೆ
ಎರಡಳಿದೆನೆಂಬವರು ಶಿಶು ಕಂಡ ಕನಸಿನಂತಿರಬೇಕಲ್ಲದೆ, ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?’’-
ಇದು ಅಲ್ಲಮನನ್ನು ಅತ್ಯಂತಿಕವಾಗಿ ಪರೀಕ್ಷೆಗೆ ಗುರಿಮಾಡಿದ ಸನ್ನಿವೇಶ.
ಅದ್ವೆತದ ಅನುಭವ ಶಿಶು ಕಂಡ ಕನಸಿನಂತಿರಬೇಕು, ಅನುಭವಪೂರ್ಣವಾಗಿ, ವಿನಾ ಅಭಿವ್ಯಕ್ತಿ
ರೂಪದಲ್ಲಿರಬಾರದು’’! ಎಂಬುದು ಅವಳ ಅಭಿಪ್ರಾಯ. ನಿಜವಾದ ಜ್ಞಾನಿ ಶಬ್ದಮುಗ್ಧನಾಗಿರಬೇಕು ಎಂಬುದು
ಅವಳ ನಿಲುವು. ಇದು ನಿಜಕ್ಕೂ ಅಲ್ಲಮನ ವ್ಯಕ್ತಿತ್ವವನ್ನೇ ಕಲಕುವಂಥದು.
ಶರಣ ಸಮುದಾಯದಲ್ಲಿ ಅಲ್ಲಮನನ್ನು ಹೀಗೆ ಪರೀಕ್ಷಿಸಿದವಳೆಂದರೆ ಮುಕ್ತಾಯಕ್ಕ ಒಬ್ಬಳೇ!
ಮುಕ್ತಾಯಕ್ಕನ ಮಾತಿಗೆ ಅಲ್ಲಮನೂ ಉತ್ತರಿಸುತ್ತಾನೆ.- “ಮಾತೆಂಬುದು ಜೋತಿರ್ಲಿಂಗ, ಸ್ವರವೆಂಬುದು ಪರತತ್ವ
ತಾಳೋಷ್ಟ ಸಂಪುಟವೆಂಬುದೆ ನಾದಬಿಂದು ಕಳಾತೀತ; ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ ಕೇಳಾ
ಮರುಳೇ’’– ಈ ಮಾತಿನಿಂದ ಮುಕ್ತಾಯಕ್ಕ ಇನ್ನಷ್ಟು ಕನಲುತ್ತಾಳೆ.
ನುಡಿಯ ಹಂಗಿನ್ನೂ ನಿಮಗೆ ಹಿಂಗದು; ನಡೆಯನೆಂತು ಪರರಿಗೆ ಹೇಳುವಿರಿ? ಒಡಲ ಹಂಗಿನ ಸುಳ್ಳದು ಬಿಡದು,
ಎನ್ನೊಡನೆ ಮತ್ತೇತರನುಭವವಣ್ಣಾ?’’…
ಒಡಲ ಹಂಗು ಮಾತಿನ ಮಥನದ ಚಪಲ ನಿಮಗಿನ್ನೂ ಬಿಟ್ಟಿಲ್ಲ. ನನಗೆ ಯಾವುದರ ಅರಿವನ್ನು ಹೇಳುತ್ತೀ
ಹೋಗು ಎನ್ನುತ್ತಾಳೆ ಮುಕ್ತಾಯಕ್ಕ! ಅದಕ್ಕೆ ಅಲ್ಲಮ- ಶರಣ ನಡೆದರೆ ನಿರ್ಗಮನಿ, ಮುನಿದರೆ ನಿಶ್ಯಬ್ದ; ಗುಹೇಶ್ವರನ
ಶರಣರಿಗೆ ಕುರುಹಿಲ್ಲ ಕೇಳಾ ಅವ್ವಾ’’-
ತಾನಳಿದು ತನು ತಾನಾದ ನಿಜ ಶರಣರಿಗೆ ಅಂತರಂಗದಲ್ಲಿ ಒಂದು ಅರಿವುಂಟೇ
?’’ ಎನ್ನುತ್ತಾನೆ. ಹೀಗೆ ಅಲ್ಲಮ
ಮುಕ್ತಾಯಕ್ಕನ ಸಂದೇಹಗಳನ್ನು ನಿವಾರಿಸುತ್ತಾನೆ. ಇದರಿಂದ ತೃಪ್ತಳಾದ ಮುಕ್ತಾಯಕ್ಕ -“ಅಹುದಹುದು ಶಿವಶರಣರ
ಮಹಿಮೆ ಆರಿಗೆಯೂ ಕಾಣಬಾರದು, ಕಬ್ಬನು ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ, ಉರಿಯೊಳಡಗಿದ
ಕರ್ಪೂರದಂತೆ, ಬಯಲನಪ್ಪಿದ ವಾಯುವಿನಂತೆ, ಇಪ್ಪ ನಿಲವ ನುಡಿದ ಹೇಳಿಹೆನೆಂಬ ಮಾತಿಂಗೆ ಅಳವಡುವುದೇ?
ಅರಿವಡೆ ಮತಿಯಿಲ್ಲ, ನೆನೆವೆಡೆ ಮನವಿಲ್ಲ; ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ ನಮೋ
ನಮೋ ಎನುತಿರ್ದೆನು’’ – ಈ ವಚನದಿಂದ ಆಕೆಯ ತೀಕ್ಷ್ಣವಾದ ಬುದ್ಧಿಮತ್ತೆ ಅರಿವಿಗೆ ಬರುತ್ತದೆ.
ಹನ್ನೆರಡನೆಯ ಶತಮಾನದ ಶರಣೆಯರ ಶ್ರೇಣಿಯಲ್ಲಿ ಮುಕ್ತಾಯಕ್ಕನದು ದೊಡ್ಡ ಹಾಗೂ ದಿಟ್ಟ ಹೆಸರು. ತನ್ನ
ಚತುರಮತಿ, ತರ್ಕಮನೋಧರ್ಮ, ಪರಿಕ್ಷಕ ಸ್ವಭಾವ, ದಿಟ್ಟ ಹೋರಾಟ, ಆಂತರಿಕ ತುಮುಲಗಳ ನೆಲೆಯಲ್ಲಿ ಆಕೆ
ಅಲ್ಲಮನನ್ನು ಸಂಧಿಸುತ್ತಾಳೆ, ದುಃಖದ ಸಂದರ್ಭದಲ್ಲೂ ತನ್ನ ಚಿತ್ತಸ್ಥೆರ್ಯ ಕಳೆದುಕೊಳ್ಳದೆ ತನ್ನನ್ನು ಜ್ಞಾನನಿಕಷ್ಟಕ್ಕೆ
ಆಕೆ ಒಳಪಡಿಸಿಕೊಳ್ಳುವುದನ್ನು ನಾವಿಲ್ಲಿ ಗಮನಿಸಬಹುದು. ಅಲ್ಲಮನ ಎತ್ತರಕ್ಕೆ ಏರಿ ಆಕೆ ಆತನನ್ನು ಪ್ರಶ್ನಿಸುತ್ತಾಳೆ.
ಉತ್ತರಿಸುತ್ತಾಳೆ; ಕೆಣಕುತ್ತಾಳೆ, ಕನಲುತ್ತಾಳೆ!
ಗುರುವೆನ್ನಿಸಿಕೊಂಡವನನ್ನು ನಾನಾ ವಿಧವಾಗಿ ಪರಿಕ್ಷಿಸಿ ನಿನಗೆ ಗುರುವಾಗುವ ಯೋಗ್ಯತೆಯಿಲ್ಲವೆಂದು
ಕಟುವಾಗಿ ಟೀಕಿಸಿ, ವಿಶ್ವಾಸ ಹುಟ್ಟಿದ ಮೇಲೆ ಗುರುವೆಂದು ಒಪ್ಪಿಕೊಳ್ಳುವುದು ಒಂದು ಅಸಾಧಾರಣ ಸಂಗತಿ! ಇಂಥ
ಮಹಿಮಾಪೂರ್ಣ ವ್ಯಕ್ತಿತ್ವ’’ ಮುಕ್ತಾಯಕ್ಕನದು. ನಿಜಕ್ಕೂ ಮುಕ್ತಾಯಕ್ಕ ಜ್ಞಾನಮೌಲ್ಯದ ಸಂಕೇತ.

ಅನುಪಮ ಚರಿತ ಅಲ್ಲಮ ಪ್ರಭು :
ಅಲ್ಲಮ ಪ್ರಭುಗಳ ಅವರ ಜಂಗಮ ಜೀವನದಲ್ಲಿ ಅನಿಮಿಷ ಗುರುವಿನ ಸಂದರ್ಶನ ಒಂದು ಪ್ರಮುಖ
ಘಟ್ಟ. ಇಲ್ಲಿಂದ ಮುಂದೆ ಅವರ ಜಂಗಮತ್ವದ ನಿಲುವು, ಅರಿವಿನ ಗುರುವಾಗಿ, ದೊಡ್ಡ ಅನುಭಾವಿಯನ್ನಾಗಿ
ಮಾಡುತ್ತಾನೆ. ಅಪ್ರತಿಮ ಅನುಭಾವಿ ಆಗಿದ್ದ ಅಲ್ಲಮ, ಪ್ರಭುದೇವರಾಗಿ ಆಧ್ಯಾತ್ಮದ ಮೇರು ಶಿಖರವಾಗಿ ನಿಲ್ಲುತ್ತಾರೆ.
ತನ್ನಷ್ಟಕ್ಕೆ ತಾನು ಎಲ್ಲಿಯೋ ಗುಹಾವಾಸಿಯಾಗಿದ್ದು, ತನ್ನೊಬ್ಬನ ಉದ್ಧಾರವನ್ನು ಮಾತ್ರ ಬಯಸದೇ, ಲೋಕದ ಇತರ
ಸಾಧಕರ ಹಾಗೂ ಸಾಮಾನ್ಯ ಜನರ ಬಗ್ಗೆ ಕಾಳಜಿವಹಿಸಿ, ಅವರತ್ತ ಗಮನ ಹರಿಸಿದ್ದು ಆ ಕಾಲದ ಉಳಿದ
ಯೋಗಸಿದ್ಧರಿಂದ ಅವರನ್ನು ವಿಶಿಷ್ಟವಾಗಿಸುತ್ತದೆ. ಪ್ರಭುದೇವರಲ್ಲಿ ಕಂಡುಬರುವ ಇನ್ನೊಂದು ವಿಶೇಷತೆ ಎಂದರೆ ಸ್ವತಃ
ತಾನೇ ಸಾಧಕರನ್ನು ಹುಡುಕಿಕೊಂಡು ಹೋಗಿ ಅದರಲ್ಲಿಯ ಓರೆ-ಕೋರೆಗಳನ್ನು ತಿದ್ದಿ, ಕುಂದು ಕೊರತೆಗಳನ್ನು
ನೀಗಿಸಿ, ಅವರ ಸಾಧನೆ ಸಿದ್ಧಿಗಳನ್ನು ಪ್ರಶಂಸಿಸಿ, ಮಾರ್ಗದರ್ಶನ ನೀಡಿದ್ದು, ನಿರಂಜನ ಜಂಗಮಕ್ಕೆ ಪ್ರಭುದೇವರ
ಜೀವನವೇ ಆದರ್ಶ ಎಂಬುದರಲ್ಲಿ ಎರಡು ಮಾತಿಲ್ಲ. ದೀನ-ದಲಿತರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ,
ಆಧ್ಯಾತ್ಮದ ಸಾಧನೆಯಲ್ಲಿ ತೊಡಗಿರುವ ಸಾಧಕರಿಗೆ ಸರಿಯಾದ ಮಾರ್ಗವನ್ನು ತೋರಿಸುವ, ಲೋಕೋಪಕಾರದ
ಕರ‍್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಲೋಕಸಂಚರಿಯಾದ ಪ್ರಭುದೇವರಿಂದ ಉಪಕೃತರಾದವರು
ಹಲವಾರು ಜನರು, ಶರಣರು…!

*-ಶ್ರೀಮತಿ ಹಮೀದಾಬೇಗಂ ದೇಸಾಯಿ ಸಂಕೇಶ್ವರ.*

[ಆಧಾರ : ೧) ಶೂನ್ಯ ಸಂಪಾದನೆ
೨)) ಬಿ. ವಿ. ಮಲ್ಲಪುರ ಅವರ ಲೇಖನ]
****************

Don`t copy text!