ಬೆಳವಡಿ ರಾಣಿ ಮಲ್ಲಮ್ಮ

ಬೆಳವಡಿ ರಾಣಿ ಮಲ್ಲಮ್ಮ (1650-1717)


ನಮ್ಮ ದೇಶ ರೋಚಕ ಇತಿಹಾಸವುಳ್ಳ ದೇಶ. ಈ ದೇಶವನ್ನು ವೀರಾಧಿವೀರರು ಆಳಿದ್ದು ಒಂದು ಕಥೆಯಾದರೆ ಅವರನ್ನೂ ಮೀರಿಸುವಂತೆ ವೀರವನಿತೆಯರು ಆಳಿದ್ದು ಇನ್ನೊಂದು ಕಥೆ. ಅಂಥವರಲ್ಲಿ ನಮಗೆ ಮೊದಲು ನೆನಪಾಗುವುದು ಬೆಳವಡಿಯ ರಾಣಿ ಮಲ್ಲಮ್ಮಾಜಿ. ಶೌರ್ಯಕ್ಕೆ,ಪರಾಕ್ರಮಕ್ಕೆ,ಹೋರಾಟಕ್ಕೆ ಇನ್ನೊಂದು ಹೆಸರೇ ಬೆಳವಡಿ ಮಲ್ಲಮ್ಮಾಜಿ.
ಬೆಳವಡಿಯ ರಾಣಿ ಮಲ್ಲಮ್ಮಾಜಿಯದ್ದು ಸೋದೆ ಮನೆತನ. ವೀರತ್ವಕ್ಕೆ ಇನ್ನೊಂದು ಹೆಸರೆನ್ನುವಂತಿತ್ತು ಆಗಿನ ಸೋದೆ ಸಾಮ್ರಾಜ್ಯ. ಸೋದೆಯ ರಾಜ ಮಧುಲಿಂಗ ನಾಯಕ. ಮಧುಲಿಂಗ ನಾಯಕ ಶೂರನೂ ಧೀರನೂ ಮತ್ತು ಘನಗಂಭೀರನೂ ಆಗಿದ್ದನು.ಈತನ ಪತ್ನಿಯೇ ವೀರಮ್ಮಾಜಿ. ಸುಖ ಸಮೃದ್ಧಿ ನೆಲೆಸಿದ್ದ ಸೋದೆಯ ಮಧುಲಿಂಗ ದಂಪತಿಗೆ ಮಕ್ಕಳಾಗಲಿಲ್ಲ. ಪುತ್ರಕಾಮೇಷ್ಠಿಯಾಗ ಮಾಡಿದರೂ ಸಂತಾನ ಪ್ರಾಪ್ತಿಯಾಗಲಿಲ್ಲ. ಇದರಿಂದ ಅವರು ಚಿಂತಾಕ್ರಾಂತರಾಗಿದ್ದರು.
ಅದೇ ಸಮಯಕ್ಕೆ ರಾಜ್ಯಕ್ಕೆ ಸೊಪ್ಪಿ ಸಿದ್ಧಬಸವ ಅನ್ನೋ ಮಹಾಯೋಗಿಯೊಬ್ಬರ ಪ್ರವೇಶವಾಗುತ್ತದೆ. ಅವರು ವೀರಮ್ಮಾಜಿಗೆ ಪ್ರತಿನಿತ್ಯ ಇಷ್ಟಲಿಂಗ ಪೂಜೆ, ಹರನಾಮ ಜಪ ಮತ್ತು ಬಸವಾದಿ ಶರಣರ ವಚನ ಪಠಣ ಮಾಡಲು ಸೂಚಿಸುತ್ತಾರೆ. ಆ ವ್ರತದಿಂದ ಜನಿಸಿದವನೇ ಸದಾಶಿವ ನಾಯಕ. ಅದಾಗಿ ಎರಡು ವರ್ಷಗಳ ನಂತರ ಅಂದರೆ ಕ್ರಿಸ್ತಶಕ ೧೬೫೦ರಲ್ಲಿ ಮಧುಲಿಂಗ ದಂಪತಿಗೆ ಜನಸಿದ ಮಗುವೇ ಮಲ್ಲಮ್ಮಾಜಿ. ರೂಪಲಾವಣ್ಯವತಿಯಾಗಿದ್ದ ಮಲ್ಲಮ್ಮಾಜಿ ಚಾಣಾಕ್ಷಳೂ ಅಪಾರ ಬುದ್ಧಿವಂತೆಯೂ ಆಗಿದ್ದಳಲ್ಲದೆ ಅದ್ಭುತ ಮಾತುಗಾರ್ತಿಯೂ ಆಗಿದ್ದಳು.
ಮಲ್ಲಮ್ಮಾಜಿಯದ್ದು ಬೆರಳು ತೋರಿದರೆ ಹಸ್ತ ನುಂಗುವಂಥ ವ್ಯಕ್ತಿತ್ವ. ಕೇವಲ ಐದು ವರ್ಷದವಳಾಗೋ ಹೊತ್ತಿಗೆ ಕನ್ನಡ, ಮರಾಠಿ, ಉರ್ದು, ಸಂಸ್ಕೃತ ಭಾಷೆಗಳನ್ನೆಲ್ಲಾ ಕಲಿತಿದ್ದಳು. ಹನ್ನೆರಡನೇ ವಯಸ್ಸಿಗೆಲ್ಲಾ ಕನ್ನಡ ಮತ್ತು ಸಂಸ್ಕೃತದಲ್ಲಿ ಕಾವ್ಯರಚನೆ ಮಾಡುತ್ತಿದ್ದಳು ಅಂದ್ರೆ ಮಲ್ಲಮ್ಮಾಜಿಯ ಭಾಷಾ ಪ್ರೌಢಿಮೆ ಹೇಗಿತ್ತು ಊಹಿಸಿಕೊಳ್ಳಿ.
ಮಲ್ಲಮ್ಮಾಜಿ ಯುದ್ಧಕಲೆ ಮತ್ತು ಶಸ್ತ್ರಕಲೆಯಲ್ಲಿ ನಿಪುಣಳಾಗಿದ್ದಳು. ಧನುರ್ವಿದ್ಯೆಯಲ್ಲಿ ಮಲ್ಲಮ್ಮಾಜಿ ದಿಟ್ಟೆ. ಅವಳಿಗೆ ಭಯ ಅನ್ನೋದೆ ಗೊತ್ತಿರಲಿಲ್ಲ. ಯುದ್ಧರಂಗಕ್ಕಿಳಿದರೆ ರಣಚಂಡಿಯಂತೆ ಹೋರಾಡುತ್ತಿದ್ದಳು. ಅಷ್ಟು ಶೂರತ್ವ ಅವಳಲ್ಲಿತ್ತು. ಇದಲ್ಲದೆ ಇನ್ನೊಂದು ವಿಶೇಷ ಗುಣ ಮಲ್ಲಮ್ಮಾಜಿಯಲ್ಲಿತ್ತು. ಆಕೆ ಮಹಾನ್‌ ಹರಭಕ್ತೆಯಾಗಿದ್ದಳು. ಹರಪೂಜೆ ಗುರುಸೇವೆ ಮಾಡದೆ ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಅಂಥ ಹರಭಕ್ತೆಗೆ ಹದಿನಾರು ತುಂಬಿದಾಗ ಬೆಳವಡಿಯ ರಾಜಕುಮಾರ ಈಶಪ್ರಭು ದೇಸಾಯಿಯೊಂದಿಗೆ ಮದುವೆ ಮಾಡಲಾಗುತ್ತದೆ. ಈ ಈಶಪ್ರಭು ಎಂಥ ಪರಾಕ್ರಮಿ ಎಂದರೆ ೨೧ ಹುಲಿಗಳನ್ನು ಭೇಟೆಯಾಡಿ ಸಂಸ್ಥಾನದಲ್ಲಿ ಹೆಬ್ಬುಲಿ ಎನಿಸಿಕೊಂಡಿದ್ದವ. ಮಲ್ಲಮ್ಮಾಜಿಯನ್ನ ಈಶಪ್ರಭು ಯಾಕೆ ಮೆಚ್ಚಿಕೊಂಡನೆಂದರೆ ಆಕೆಯೂ ಹುಲಿಬೇಟೆಯಲ್ಲಿ ನಿಪುಣಳು. ಛಲದಂಕಮಲ್ಲೆಯಾಗಿದ್ದಳು.
ಇಬ್ಬರೂ ಸೇರಿ ಬೆಳವಡಿಯನ್ನು ಸುಖವಾಗಿಟ್ಟಿದ್ದರು.
ಹೀಗಿದ್ದಾಗಲೇ ಈಶಪ್ರಭು ದೇಸಾಯಿ ಮತ್ತು ಮಲ್ಲಮ್ಮಾಜಿಗೆ ಸಮರೋತ್ಸವದ ಘಳಿಗೆ ಎದುರಾಗುತ್ತದೆ. ಕ್ರಿಸ್ತಶಕ ೧೬೭೬-೭೮ರಲ್ಲಿ ಛತ್ರಪತಿ ಶಿವಾಜಿ ಕರ್ನಾಟಕ ದಂಡಯಾತ್ರೆ ಕೈಗೊಳ್ಳುತ್ತಾನೆ. ದಂಡಯಾತ್ರೆಯಲ್ಲಿ ತಿರುಪತಿ ವೆಂಕಟೇಶ್ವರ, ಹಂಪಿಯ ವಿರೂಪಾಕ್ಷ ಕ್ಷೇತ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾನೆ. ಮೊದಲೇ ಹಿಂದೂ ಹೃದಯ ಸಾಮ್ರಾಟನೆನಿಸಿದ್ದ ಶಿವಾಜಿಯನ್ನು ಕಂಡರೆ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ. ಶಿವಾಜಿ ಕೊಪ್ಪಳದ ಕೋಟೆ ಗೆದ್ದು ಧಾರವಾಡದ ಹತ್ತಿರವಿರುವ ಹಾಗೂ ಬೆಳವಡಿ ಸಂಸ್ಥಾನಕ್ಕೆ ಸೇರಿದ್ದ ಯಾದವಾಡದಲ್ಲಿ ಬಿಡಾರ ಹೂಡುತ್ತಾನೆ.
ಇದನ್ನು ತಿಳಿದ ಈಶಪ್ರಭು ದೇಸಾಯಿಗೆ ಶಿವಾಜಿಯನ್ನು ಸತ್ಕರಿಸಬೇಕೆನ್ನುವ ಆಸೆ ಹುಟ್ಟುತ್ತದೆ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾನೆ. ವೀರಾಧಿವೀರನಾಗಿದ್ದ ಶಿವಾಜಿಯ ಮುಂದೆ ತನ್ನ ಸೈನ್ಯದ ಪರಾಕ್ರಮವನ್ನು ತೋರಿಸಬೇಕೆನ್ನುವ ಇಚ್ಛೆ ಈಶಪ್ರಭುವಿಗಿತ್ತು. ನೀವು ನಂಬಲ್ಲ ಐದುನೂರು ವರ್ಷಗಳ ಹಿಂದೆಯೇ ಬೆಳವಡಿ ಸಾಮ್ರಾಜ್ಯದಲ್ಲಿ ಒಂದು ಸ್ತ್ರೀಸೈನ್ಯ ಇತ್ತು. ಅದರಲ್ಲಿ ರಣಚಂಡಿಯಂಥಹ ಎರಡು ಸಾವಿರ ವೀರವನಿತೆಯರಿದ್ದರು. ಆ ಸ್ತ್ರೀ ಸೈನ್ಯಕ್ಕೆ ಮಲ್ಲಮ್ಮಾಜಿಯೇ ನೇತೃತ್ವ ವಹಿಸಿದ್ದಳು.
ಯಾದವಾಡದಲ್ಲಿ ಬೀಡು ಬಿಟ್ಟಿದ್ದ ಶಿವಾಜಿ ಸೈನಿಕರು ಬೆಳವಡಿಗೆ ಹತ್ತಿರವಿದ್ದ ಗೋಶಾಲೆಗೆ ನುಗ್ಗಿ ಗೋಪಾಲಕರನ್ನು ಹಾಲು ಕೇಳುತ್ತಾರೆ. ಆದರೆ ಅವರಿಗೆ ಕೊಡುವಷ್ಟು ಹಾಲು ಗೋಪಾಲಕರ ಬಳಿ ಇರುವುದಿಲ್ಲ. ಎಲ್ಲಾ ಹಾಲು ಮತ್ತು ಹೈನು ಶಿವಾಜಿಯ ಸತ್ಕಾರಕ್ಕೆಂದೇ ಮೀಸಲಿಟ್ಟಿರುತ್ತಾರೆ. ಇದನ್ನರಿಯದ ಶಿವಾಜಿ ಸೈನಿಕರು ಬೆಳವಡಿಯ ಗೋವುಗಳನ್ನು ದಾರ್ಷ್ಟ್ಯದಿಂದ ಹೊತ್ತೊಯ್ಯುತ್ತಾರೆ. ಇದು ಬೆಳವಡಿಯ ರಾಣಿ ಮಲ್ಲಮ್ಮಾಜಿಯನ್ನು ಕೆರಳಿಸುತ್ತದೆ. ಯಾಕೆಂದ್ರೆ ಹಿಂದೂಗಳಿಗೆ ಗೋವುಗಳೆಂದರೆ ಸಾಕ್ಷಾತ್‌ ಮಾತೆಯೇ ಸರಿ. ಅದರಲ್ಲೂ ಕೃಷಿಕ ಪಂಚಮಸಾಲಿಗಳಿಗೆ ಗೋವುಗಳೆಂದರೆ ಪಂಚಪ್ರಾಣ. ಹೀಗಿದ್ದಾಗ ಗೋಮಾತೆಯನ್ನು ಯಾರೋ ಬಂದು ಕದ್ದೊಯ್ಯುತ್ತಾರೆ ಅಂದ್ರೆ ಸುಮ್ಮನಿರಲು ಸಾಧ್ಯವೇ?
ಈಶಪ್ರಭು ದೇಸಾಯಿ ತನಗಾದ ಅವಮಾನದಿಂದ, ಶಿವಾಜಿ ಸೈನಿಕರ ಆಕ್ರಮಣದಿಂದ ಕುಪಿತನಾಗಿ ಗೋವುಗಳನ್ನು ಮರಳಿ ಪಡೆಯಲು ದಂಡನಾಯಕನಾದ ಸಿದ್ದನಗೌಡ ಪಾಟೀಲನನ್ನು ಕಳಿಸುತ್ತಾನೆ. ಆತ ಶಿವಾಜಿ ಸೈನ್ಯದ ದಂಡನಾಯಕ ಸಕುಜಿಯಿಂದ ಹತನಾಗುತ್ತಾನೆ. ಇದರಿಂದ ಕ್ರುದ್ಧಗೊಂಡ ಈಶಪ್ರಭು ದೇಸಾಯಿ ತಾನೇ ಯುದ್ಧಕ್ಕೆ ಹೊರಡಲು ಸನ್ನದ್ಧನಾಗುತ್ತಾನೆ. ಇದನ್ನು ಗಮನಿಸಿದ ಮಲ್ಲಮ್ಮಾಜಿ ʼ ನೀವು ಯುದ್ಧಕ್ಕೆ ಹೋಗಬೇಡಿ. ಗೋವುಗಳು ಮಾತೆಯಾದ್ದರಿಂದ ಅವುಗಳ ರಕ್ಷಣೆಗೆ ನಾನೇ ಹೊರಡುತ್ತೇನೆʼ ಎಂದು ಪ್ರತಿಜ್ಞೆ ಮಾಡುತ್ತಾಳೆ. ಅಲ್ಲದೆ ತನ್ನ ವೀರಾವೇಶದ ಸ್ತ್ರೀ ಸೈನ್ಯವನ್ನು ತೆಗೆದುಕೊಂಡು ಹೋಗಿ ಮರಾಠರಿಗೆ ನಮ್ಮ ಪೌರುಷ ಏನೆಂದು ತೋರಿಸುತ್ತೇನೆ ಅಂತ ಗುಡುಗುತ್ತಾಳೆ. ನೀವು ನಂಬಲ್ಲ ಮರಾಠರು ಮಲ್ಲಮ್ಮಾಜಿ ಸ್ತ್ರೀ ಸೈನ್ಯವನ್ನು ನೋಡಿಯೇ ಬೆಚ್ಚಿಬಿದ್ದಿದ್ದರು. ನೂರಾರು ಸೈನಿಕರು ಮಲ್ಲಮ್ಮಾಜಿಯ ಖಡ್ಗದ ರುಚಿ ನೋಡಿ ಹೆದರಿ ಓಡಿಹೋಗುತ್ತಾರೆ. ಮರಾಠ ಸೈನಿಕರು ಕದ್ದಿದ್ದ ಗೋವುಗಳನ್ನ ಹಿಂದಿರುಗಿಸಿ ಪ್ರಾಣ ಉಳಿಸಿಕೊಳ್ಳುತ್ತಾರೆ. ಇಡೀ ಬೆಳವಡಿಯಲ್ಲಿ ಮಲ್ಲಮ್ಮಾಜಿಯ ವಿಜಯೋತ್ಸವ ಮೊಳಗುತ್ತದೆ.
ಇಲ್ಲಿ ಇನ್ನೊಂದು ಅಚಾತುರ್ಯ ನಡೆಯುತ್ತದೆ. ಶಿವಾಜಿ ಸೈನ್ಯದ ದಂಡನಾಯಕ ಸಕುಜಿ ಶಿವಾಜಿಯನ್ನ ದಾರಿತಪ್ಪಿಸುವ ಕೆಲಸ ಮಾಡುತ್ತಾನೆ. ನಮ್ಮ ಗೋವುಗಳನ್ನು ಅವರೇ ಕದ್ದೊಯ್ದಿದ್ದಾರೆ. ನಾವು ಅವುಗಳನ್ನ ಮರಳಿ ಪಡೆಯಲು ಯುದ್ಧಕ್ಕೆ ಹೊರಡಬೇಕು ಎಂದು ಹೇಳಿ ಬೆಳವಡಿಯ ಮೇಲೆ ಯುದ್ಧ ಹೂಡುತ್ತಾನೆ. ಶಿವಾಜಿಯೂ ಮದ್ದುಗುಂಡುಗಳನ್ನು ಬಳಸದೆ ಯುದ್ಧಮಾಡಿ ಎಂದು ಅಪ್ಪಣೆ ಕೊಟ್ಟುಬಿಡುತ್ತಾನೆ. ಈ ಯುದ್ಧ ಶಿವಾಜಿ ಸೈನ್ಯ ಮತ್ತು ಬೆಳವಡಿಯ ಸೈನ್ಯದ ನಡುವೆ ೨೮ ದಿನಗಳ ಕಾಲ ನಡೆಯುತ್ತದೆ. ಈ ವಾರ್ತೆ ಕೇಳಿ ಶಿವಾಜಿಯು ಕುಪಿತನಾಗುತ್ತಾನೆ. ದೇಸಾಯಿ ಮತ್ತು ಕುಟುಂಬವನ್ನು ಬಂಧಿಸಿ ಕರೆತರುವಂತೆ ಆಜ್ಞಾಪಿಸುತ್ತಾನೆ. ಶಿವಾಜಿ ಸೈನ್ಯ ಬೆಳವಡಿ ಕೋಟೆಯನ್ನು ಸುತ್ತುವರಿಯುತ್ತದೆ. ದುರಂತವೆಂದರೆ ಕೋಟೆಯ ಹೊರಗಿದ್ದ ಮರಾಠರಿಗೆ ಎಲ್ಲಾ ಯುದ್ಧಸಾಮಾಗ್ರಿಯೂ ಆಹಾರ ಪದಾರ್ಥಗಳು ಸಿಗುತ್ತಿದ್ದವು. ಒಳಗಿದ್ದ ಈಶಪ್ರಭು ದೇಸಾಯಿ ಕಡೆಯವರಿಗೆ ಏನೂ ಸಿಗುತ್ತಿರಲಿಲ್ಲ. ಸ್ವಾದಿಯ ಸದಾಶಿವ ನಾಯಕ ಮತ್ತು ಹೂಲಿ ಮಠದ ಸ್ವಾಮಿಗಳಿಗೆ ಸೈನ್ಯ ಮತ್ತು ಅನ್ನಾಹಾರ ಸಾಮಾಗ್ರಿಯನ್ನು ಕಳಿಸಿಕೊಡುವಂತೆ ದೇಸಾಯಿ ಹೇಳಿ ಕಳುಹಿಸಿದ್ದರೂ ಅದು ಸಕಾಲಕ್ಕೆ ತಲುಪುವುದಿಲ್ಲ. ಇದರಿಂದ ಬಸವಳಿದು ನಿರಾಶನಾದ ಈಶಪ್ರಭು ಕೋಟೆಯಿಂದ ಹೊರಬಂದು ಯುದ್ಧಕ್ಕಿಳಿಯುತ್ತಾನೆ. ಅಷ್ಟರಲ್ಲಿ ತೋಪುಗಳು ಮುಗಿದಿರುತ್ತವೆ. ಈಶಪ್ರಭುವಿಗೆ ಗಾಯವಾಗಿ ಕುದುರೆಯಿಂದ ಬಿದ್ದು ಗಾಯಗೊಳ್ಳುತ್ತಾನೆ. ಅಷ್ಟೊತ್ತಿಗೆ ಹೂಲಿ ಸೈನ್ಯ ಬಂದು ಬೆಳವಡಿಯ ಸೈನಿಕರ ಜೊತೆ ಸೇರಿ ಕಾದಾಡುತ್ತದೆ. ಹೆದರಿದ ಮರಾಠ ಸೈನ್ಯ ಅಲ್ಲಿಂದ ಕಾಲುಕೀಳುತ್ತದೆ. ನಂತರ ಸ್ವಲ್ಪ ದಿನಗಳಲ್ಲೇ ಗಾಯಗೊಂಡಿದ್ದ ಈಶಪ್ರಭು ಮರಣ ಹೊಂದುತ್ತಾನೆ. ಬೆಳವಡಿಯ ಸಂಪೂರ್ಣ ಜವಾಬ್ದಾರಿ ಮಲ್ಲಮ್ಮಾಜಿಯ ಹೆಗಲಿಗೆ ಬೀಳುತ್ತದೆ.
ಅಂದರೆ ಶಿವಾಜಿಗೆ ೨೮ ದಿನಗಳ ಯುದ್ಧದ ಬಗ್ಗೆ ಅರಿವೇ ಇರುವುದಿಲ್ಲ. ಅದೆಲ್ಲಾ ಸಕುಜಿ ಮಾಡಿದ ಯಡವಟ್ಟಾಗಿರುತ್ತದೆ.
ಈ ನಡುವೆ ಬೆಳವಡಿಯ ಸರದಾರ ಶಾಂತಯ್ಯ ಸನ್ಯಾಸಿಯ ವೇಷ ಧರಿಸಿ ಶಿವಾಜಿಯ ಬಳಿಗೆ ಹೋಗಿ ಸಿದ್ಧಸಮುದ್ರದಲ್ಲಿ ತಾಯಿ ಧ್ಯಾಮವ್ವ ನೆಲೆಸಿದ್ದಾಳೆ. ಅವಳು ಸಾಕ್ಷಾತ್‌ ಜಗದಂಬೆ. ಅವಳ ದರ್ಶನ ಮಾಡಿ. ನಿಮ್ಮ ಸಾಮ್ರಾಜ್ಯಕ್ಕೆ, ನಿಮಗೆ ಒಳಿತಾಗುತ್ತದೆ ಎಂದು ಹೇಳುತ್ತಾನೆ ಮಾರುವೇಷದ ಸನ್ಯಾಸಿಯ ಮಾತು ಕೇಳಿದ ಶಿವಾಜಿ ಜಗದಂಬೆಯ ದರ್ಶನಕ್ಕೆ ಹೊರಟು ನಿಲ್ಲುತ್ತಾನೆ. ಧನಾಜಿಗೆ ಬೆಳವಡಿಗೆ ಮುತ್ತಿಗೆ ಹಾಕಿ ಮಲ್ಲಮ್ಮಾಜಿಯನ್ನು ಸೆರೆ ಹಿಡಿಯಲು ಹೇಳುತ್ತಾನೆ.
ಈ ವಿಷಯವನ್ನು ಶಾಂತಯ್ಯನು ರಾಣಿ ಮಲ್ಲಮ್ಮಾಜಿಗೆ ಬಂದು ತಿಳಿಸುತ್ತಾನೆ.
ಕೋಪಗೊಂಡ ಮಲ್ಲಮ್ಮಾಜಿ ಛತ್ರಪತಿ ಶಿವಾಜಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಎರಡು ಸಾವಿರ ರಣಚಂಡಿಯರ ಸೈನ್ಯದೊಂದಿಗೆ ದ್ಯಾಮವ್ವನ ಗುಡಿಯ ಬಳಿಗೆ ಬೆಂಕಿಬಿರುಗಾಳಿಯಂತೆ ಬರುತ್ತಾಳೆ. ಅವಳಿಗೆ ಶಿವಾಜಿಯ ರುಂಡ ಚಂಡಾಡಿ ತನ್ನ ಪತಿಯ ಸಾವಿನ ಸೇಡು ತೀರಿಸಿಕೊಳ್ಳಬೇಕು ಅನ್ನೋ ಆಕ್ರೋಶ ಇರುತ್ತದೆ. ದ್ಯಾಮವ್ವ ಗುಡಿ ತಲುಪಿದ ಶಿವಾಜಿಗೆ ತನ್ನ ಇಚ್ಚೆಗೆ ವಿರುದ್ಧವಾಗಿ ಪ್ರಸಾದ ಸಿಕ್ಕುತ್ತದೆ. ಇದರಿಂದ ಚಿಂತಾಕ್ರಾಂತನಾಗಿ ಬರುತ್ತಿದ್ದಾಗ ಚನ್ನಮ್ಮಾಜಿಯ ಸ್ತ್ರೀ ಸೈನ್ಯ ಕ್ಷಿಪ್ರದಾಳಿ ನಡೆಸುತ್ತದೆ. ಶಿವಾಜಿ ದಿಕ್ಕೇ ತೋಚದೆ ಕಂಗಾಲಾಗುತ್ತಾನೆ. ಮಲ್ಲಮ್ಮಾಜಿಯು ರಣಚಂಡಿಯಂತೆ ತನ್ನತ್ತ ಶರವೇಗದಲ್ಲಿ ನುಗ್ಗಿ ಬರುವುದನ್ನು ನೋಡಿದ ಶಿವಾಜಿ ಸೈನಿಕರು ಆಕೆಯ ಕುದುರೆಯ ಕಾಲನ್ನು ಕತ್ತರಿಸುತ್ತಾರೆ. ಆದರೇನೂ ಕುದುರೆ ಧರೆಗುರುಳಿದರೂ ಮಲ್ಲಮ್ಮಾಜಿ ತನ್ನ ಖಡ್ಗ ಬಿಡುವುದಿಲ್ಲ. ರಣಭೀಕರವಾಗಿ ಹೋರಾಡುತ್ತಾಳೆ. ಇದನ್ನು ಗಮನಿಸಿದ ಶಿವಾಜಿ ದಂಗುಬಡಿದುಹೋಗುತ್ತಾನೆ. ಈಕೆ ಮನುಷ್ಯಳಲ್ಲ ಸಾಕ್ಷಾತ್‌ ಜಗದಂಬೆ, ತುಳಜಾಭವಾನಿಯೇ ಸರಿ ಎಂದು ತಾನೇ ಕುದುರೆಯಿಂದ ಕೆಳಗಿಳಿದು ʼಜಗದಂಬಾ ಮಾಂ ಪಾಹಿ ಪಾಹಿ ಚಾರು ಕುಮುದಾಕ್ಷಿ ಘನಮುಕ್ತಿ ಸುಖಮಿಹ ದೇಹಿ ʼಎಂದು ಸ್ತುತಿಸುತ್ತಾನೆ. ನನ್ನ ಅಪರಾಧವನ್ನು ಕ್ಷಮಿಸು ತಾಯಿ ಎಂದು ದೀನನಾಗಿ ಬೇಡಿಕೊಳ್ಳುತ್ತಾನೆ.
ಆದರೆ ತನ್ನ ಪತಿಯ ಸಾವನ್ನು ನೆನೆದು ಶಿವಾಜಿಯ ಮುಂದೆ ಮಲ್ಲಮ್ಮಾಜಿ ಹೆಣ್ಣುಹುಲಿಯಂತೆ ಘರ್ಜಿಸುತ್ತಾಳೆ. ತನ್ನ ಪತಿಯ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗ ನುಗ್ಗಿ ಬರುತ್ತಾಳೆ. ಇದರಿಂದ ಬೆದರಿದ ಶಿವಾಜಿ ಮಲ್ಲಮ್ಮಾಜಿಯ ಕ್ಷಮೆ ಕೇಳುತ್ತಾನೆ. ರಾಣಿ ಮಲ್ಲಮ್ಮಾಜಿ ಶಿವಾಜಿಯನ್ನು ಕ್ಷಮಿಸುತ್ತಾಳೆ. ಮಲ್ಲಮ್ಮಾಜಿಯ ಮೇಲೆ ವಿನಾಕಾರಣ ಯುದ್ಧ ಮಾಡಿದ್ದ ಸಕುಜಿಯ ಕಣ್ಣುಕೀಳಿಸಿ ಆನೆ ಕಾಲಿನಿಂದ ತುಳಿಸಿ ಸಾಯಿಸುತ್ತಾನೆ ಶಿವಾಜಿ. ಯುದ್ಧದಿಂದಾಗಿ ಹಾನಿಯಾದ ಬೆಳವಡಿ ಕೋಟೆಯ ಪುನರ್ ನಿರ್ಮಾಣದ ವೆಚ್ಚವನ್ನು ಸ್ವತಃ ಶಿವಾಜಿಯೇ ಭರಿಸುತ್ತಾನೆ. ರಾಣಿ ಮಲ್ಲಮ್ಮಾಜೀ ಅಣ್ಣ ತಂಗಿಯ ಧ್ಯೋತಕವಾಗಿ ಛತ್ರಪತಿ ಶಿವಾಜಿ ಮಹಾರಾಜನಿಗೆ ಮುಂಗೈಗೆ ರಕ್ಷೆಯನ್ನು ಕಟ್ಟುತ್ತಾಳೆ,ಅಲ್ಲಿಯೇ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ.ನಂತರ ಮಲ್ಲಮ್ಮಾಜಿಯ ಮಗ ನಾಗಭೂಷಣನನ್ನು ಶಿವಾಜಿಯು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹಾಲುನಿಸುತ್ತಾನೆ,ನಾಗಭೂಷಣನ ಪಟ್ಟಾಭಿಷೇಕವನ್ನು ಖುದ್ದು ಶಿವಾಜಿಯೇ ನಿಂತು ಮಾಡಿಸುತ್ತಾನೆ.ತದನಂತರದಲ್ಲಿ ಶಿವಾಜಿಯ ಸೊಸೆ ಅಂದ್ರೆ ಶಿವಾಜಿಯ ಕಿರಿಯ ಮಗ ರಾಜಾರಾಮನ ಪತ್ನಿ ತಾರಾರಾಣಿ ಮತ್ತು ರಾಣಿ ಮಲ್ಲಮ್ಮ ಇಬ್ಬರು ಅಕ್ಕ-ತಂಗಿಯಂತೆ ಪರಸ್ಪರ ಬಾಂಧವ್ಯದ ಬಾಗಿಲು ತೆರೆಯುತ್ತಾರೆ.ಆಮೇಲೆ ಬೆಳವಡಿ ಮತ್ತು ಮರಾಠಾ ರಾಜಮನೆತನಗಳ ನಡುವೆ ಗಾಢವಾದ ಸ್ವರಾಜ್ಯರಾಷ್ಟ್ರ ನಿರ್ಮಾಣ ಸಂಕಲ್ಪ ಬೆಳೆಯುತ್ತದೆ.
ಇದಾಗಿ ಎಷ್ಟೋ ಕಾಲದ ನಂತರ ಮಲ್ಲಮ್ಮಾಜಿ ತನ್ನ ಅರವತ್ತೇಳನೇ ವಯಸ್ಸಿನಲ್ಲಿ ಅಂದರೆ ಕ್ರಿಸ್ತಶಕ ಫೆಬ್ರವರಿ ೧೯,೧೭೧೭ರಲ್ಲಿ ಲಿಂಗೈಕ್ಯಳಾಗುತ್ತಾಳೆ. ಜಗತ್ತಿನ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ, ಶಾಸ್ತ್ರ ಸಂಪ್ರದಾಯಗಳಲ್ಲೇ ಮುಳುಗೇಳುತ್ತಿದ್ದ ಆಗಿನ ತಾಯಂದಿರ ಕೈಯಲ್ಲಿ ಶಸ್ತ್ರ ಶಕ್ತಿಯನ್ನು ತುಂಬಿದ ಛಲಗಾತಿ ಮಲ್ಲಮ್ಮಾಜಿಯಾಗಿದ್ದಳು. ಆಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯದ ಕೊಂಡಿಯಾಗಿದ್ದಳು. ಸ್ವರಾಜ್ಯ, ರಾಷ್ಟ್ರದ ನಿರ್ಮಾಣ ಅವಳ ಗುರಿಯಾಗಿತ್ತು.
ಫೆಬ್ರವರಿ 28ರಂದು ಇಂಥ ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿಯ ೩೭೪ನೇ ವಿಜಯೋತ್ಸವ ದಿನ. ಆಕೆಯನ್ನು ಸ್ಮರಿಸಿಕೊಳ್ಳುವುದೇ ನಮ್ಮ ನಾಡಿಗೆ ದೇಶಕ್ಕೆ ದೊಡ್ಡ ಹೆಮ್ಮೆ.

*ಸರ್ಕಾರಕ್ಕೆ ಮನವಿ*
1.ಬೆಳವಡಿ ರಾಣಿ ಮಲ್ಲಮ್ಮಾಜಿಯ ಪ್ರಾಧಿಕಾರ ಆಗಬೇಕು.
2.ಮಲ್ಲಮ್ಮಾಜಿಯ ಕುರುಹುಗಳು ರಾಕ್‌ ಗಾರ್ಡನ್‌ ಆಗಬೇಕು.
3.ರಾಣಿ ಮಲ್ಲಮ್ಮಾಜಿಯ ಸ್ಮಾರಕ ಭವನ ಆಗಬೇಕು.
4.ರಾಣಿ ಮಲ್ಲಮ್ಮಾಜಿ ಹೆಸರಿನಲ್ಲಿ ಒಂದು ಸೈನಿಕ ಶಾಲೆ ಆಗಬೇಕು.
5.ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿಯ ಹೆಸರಿಡಬೇಕು.
6.ಮಲ್ಲಮ್ಮಾಜೀ ತವರುಮನೆ ಸೋದೆಯ ಅಭಿವೃದ್ಧಿ
7.ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ಮಹಾರಾಜರ

ಸಂಘರ್ಷದ 12ಡಿ ಆಡಿಟೋರಿಯಂ.

ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳುವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಕ್ಷೇತ್ರ ಹರಿಹರ

 

Don`t copy text!