ಸುರರ ಬೇಡಿದಡಿಲ್ಲ ನರರ ಬೇಡಿದಡಿಲ್ಲ
ಸುರರ ಬೇಡಿದಡಿಲ್ಲ ನರರ ಬೇಡಿದಡಿಲ್ಲ ಬರಿದೆ ಧೃತಿಗೆಡಬೇಡ ಮನವೆ! ಆರನಾದಡೆಯೂ ಬೇಡಿ ಬೇಡಿ ಬರಿದೆ ದೃತಿಗೆಡಬೇಡ ಮನವೆ ! ಕೂಡಲಸಂಗನಲ್ಲದೆ ಆರ ಬೇಡಿದಡಿಲ್ಲ ಮನವೆ !
-ಬಸವಣ್ಣ
ಯಾವುದೇ ಒಬ್ಬ ವ್ಯಕ್ತಿ ತನ್ನ ಸಾಧನೆಯನ್ನು ಮಾಡಬೇಕಾದರೆ ತನ್ನ ಜೀವನದ ಪರಿವಿಡಿಯನ್ನು ತಾನೆ ಬರೆದು ಕೊಳ್ಳಬೇಕಾಗುತ್ತದೆ. ಹಣೆಬರಹವನ್ನು ನಂಬಿ ಕೂಡುವುದು ಅಲ್ಲ. ಅಲ್ಲಿ ಪ್ರಯತ್ನ,ಶ್ರಮ ,ಶ್ರದ್ಧೆ ಪ್ರಮಾಣಿಕತೆ. ನಂಬಿಕೆ-ವಿಶ್ವಾಸ ಮತ್ತು ಧೈರ್ಯ ಇವೆಲ್ಲವುಗಳು ತನ್ನಲ್ಲೇ ಇರುವುದು ಇತರರನ್ನು ಬೇಡುವ ಅವಶ್ಯಕತೆ ಇಲ್ಲ .ಪ್ರತಿಯೊಬ್ಬರ ದೇಹದಲ್ಲಿ, ಮನಸ್ಸಿನಲ್ಲಿಯೂ ಒಂದು ಆತ್ಮ ಚೈತನ್ಯವಿದೆ ಪ್ರತಿಯೊಬ್ಬರ ದೇಹವೇ ದೇವಾಲಯ ಆ ದೇಹ ವೆಂಬ ದೇವಾಲಯದಲ್ಲಿ ಒಂದು ಶಕ್ತಿ ಇದೆ.ಆ ಶಕ್ತಿಯನ್ನು ಬಡಿದು ಎಬ್ಬಿಸುವ ಕೆಲಸ ಆಗಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಯಾವುದೇ ಕೆಲಸವಿದ್ದರೂ ಕೀಳು ಎಂದು ಭಾವಿಸದೇ ಮನಸ್ಸುಕೊಟ್ಟು ಮಾಡಿದರೆ ಆ ಕೆಲಸ ಖಂಡಿತ ವಾಗಿಯೂ ಇಡೇರುವುದು ಎನ್ನುವ ಅರಿವನ್ನು ಮೂಡಿಸಿದವರು ಅಣ್ಣ ಬಸವಣ್ಣನವರು.
ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳಬೇಕು ನಮ್ಮ ಜೀವನದ ಪರಿವಿಡಿಯನ್ನು ನಾವೇ ಬರೆದುಕೊಳ್ಳಬೇಕು ಅನ್ನುವ ಒಂದು ಮಾರ್ಮಿಕವಾದ ವಚನ ಇದಾಗಿದೆ. ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಬದುಕುವುದು ಅಲ್ಲ .ಪ್ರತಿಯೊಬ್ಬರೂ ಸಾಧನೆಯನ್ನು ಮಾಡುವಂತಹ ಆತ್ಮವಿಶ್ವಾಸವನ್ನು ತಮ್ಮಲ್ಲಿ ಮೂಡಿಸಿಕೊಳ್ಳಬೇಕು ಯಾವುದೇ ಒಂದು ಕೆಲಸಕಾರ್ಯಗಳಲ್ಲಿ ಮನಸ್ಸು ಕೊಟ್ಟು ಪ್ರಾಮಾಣಿಕವಾಗಿ ಮಾಡಿದರೆ ಆ ಕೆಲಸ ಕಾರ್ಯ ಎಂಥದೇ ಇರಲಿ ಈಡೇರುತ್ತದೆ. ವಿಶೇಷವಾಗಿ ಮನಸ್ಸಿದ್ದಲ್ಲಿ ಮಾರ್ಗ ಅನ್ನುವ ಅರಿವನ್ನು ಮೂಡಿಸಿದ ಅಣ್ಣ ಬಸವಣ್ಣನವರು ಯಾವುದೇ ಕೆಲಸ ಇರಲಿ ಪ್ರಮಾಣಿಕವಾಗಿ ದೃಢಮನಸ್ಸಿನಿಂದ ಕೆಲಸವನ್ನು ಮಾಡಿದರೆ ಆ ಕೆಲಸದಲ್ಲಿಯೇ ನಾವು ಕೈಲಾಸವನ್ನು ಕಾಣುತ್ತೇವೆ ಎಂದು ಹೇಳಿದವರು.
ಇಲ್ಲಿ ಸುರರು ಎಂದರೆ ದೇವರು ಎಂದರ್ಥ. ನರರು ಎಂದರೆ ಮಾನವ ರು ಎಂದರ್ಥ.
ಸರ್ವವ್ಯಾಪಿ ಸರ್ವಶಕ್ತ ಮತ್ತು ಸರ್ವಜ್ಞನಾಗಿರುವ ಪರಶಿವನು ಮಾತ್ರ ಮನುಷ್ಯನಿಗೆ ಭೋಗ, ಮೋಕ್ಷಗಳನ್ನು ಕರುಣಿಸಲು ಸಮರ್ಥನು ಅವನ ಹೊರತಾಗಿ ಹರಿ ಹರ ಬ್ರಹ್ಮಾದಿಗಳಾಗಲಿ , ದೇವಾನುದೇವತೆಗಳಾಗಲಿ ಮನುಷ್ಯರಾಗಲಿ ಏನನ್ನೂ ಅನುಗ್ರಹಿಸಲು ಸಮರ್ಥರಲ್ಲ. ಅಂಥವರನ್ನು ಬೇಡವುದೆಂದರೆ ಸಾಧನೆಯಲ್ಲಿ ವಿಚಲಿತರಾದಂತೆ
ಆದ್ದರಿಂದ ಪರಶಿವನ ಹೊರತಾಗಿ ಇತರರನ್ನು ಪ್ರಾರ್ಥಿಸಿ ಧೃತಿಗೆಡಬೇಡ ಎಂದು ಬಸವಣ್ಣನವರು ತಮ್ಮ ಮನಸ್ಸನ್ನು ಎಚ್ಚರಿಸುತ್ತಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ